ನಿರೀಕ್ಷೆಯಂತೆಯೇ ಅಮೆರಿಕದ ಅಧ್ಯಕ್ಷರಾಗಿ ಮತ್ತೆ ಅಧಿಕಾರಕ್ಕೆ ಬಂದಿರುವ ಡೊನಾಲ್ಡ್ ಟ್ರಂಪ್ ಆಘಾತಕಾರಿಯಾದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಪೌರತ್ವ ಕುರಿತ ಅವರ ಆದೇಶದಿಂದಾಗಿ ಅಮೆರಿಕದಲ್ಲಿರುವ ಭಾರತೀಯರು ಕಂಗಾಲಾಗಿದ್ದಾರೆ. ಬಹುಪಾಲು ಭಾರತೀಯರು ಚುನಾವಣೆಯಲ್ಲಿ ಟ್ರಂಪ್‌ಗೆ ಮತ ನೀಡಿದ್ದರು ಎಂಬುದೇ ವಿಪರ್ಯಾಸ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಟ್ರಂಪ್ ನಡುವೆ ಅಪಾರವಾದ ಸ್ನೇಹವಿದೆ ಅದರಿಂದ ಭಾರತಕ್ಕೆ, ಕನಿಷ್ಠ ಅಮೆರಿಕದಲ್ಲಿರುವ ಭಾರತೀಯರಿಗೆ ಅನುಕೂಲವಾಗಬಹುದು ಎಂಬ ನಂಬಿಕೆ ಈಗ ಸುಳ್ಳಾಗಿದೆ.
ಅಮೆರಿಕದಲ್ಲಿ ಜನಿಸಿದ ಎಲ್ಲರಿಗೆ ಸಹಜವಾಗಿ ಪೌರತ್ವ ಹಕ್ಕು (ಸಿಟಿಜನ್ ಷಿಪ್ ರೈಟ್ಸ್) ನೀಡುವ ಕಾನೂನನ್ನು ರದ್ದು ಮಾಡುವ ಟ್ರಂಪ್ ಆದೇಶ ವಲಸಿಗರಲ್ಲಿ ಕಳವಳಕ್ಕೆ ಕಾರಣವಾಗಿದೆ. (ಈ ಆದೇಶಕ್ಕೆ ಅಮೆರಿಕದ ಸೀಟೆಲ್‌ನ ಫೆಡರಲ್ ಜಡ್ಜ್ ಈಗಾಗಲೇ ತಾತ್ಕಾಲಿಕ ತಡೆ ನೀಡಿದ್ದಾರೆ. ) ಅಮೆರಿಕದಲ್ಲಿ ಹುಟ್ಟುವ ಯಾವುದೇ ಮಗುವಿಗೆ ಪೌರತ್ವ ನೀಡುವ ಹಕ್ಕನ್ನು ಸಂವಿಧಾನದಲ್ಲಿಯೇ ಕೊಡಲಾಗಿದೆ. ನೂರಾರು ವರ್ಷಗಳಿಂದ ಯಾವುದೇ ಅಡೆತಡೆಯಿಲ್ಲದೆ ಜಾರಿಯಾಗುತ್ತ ಬಂದಿರುವ ಈ ನಿಯಮದ ವ್ಯಾಖ್ಯಾನವನ್ನು ಟ್ರಂಪ್ ಬದಲಿಸಿ ಆದೇಶ ಹೊರಡಿಸಿದ್ದಾರೆ. ಅಮೆರಿಕದಲ್ಲಿರುವ ವಲಸಿಗರಲ್ಲಿ ಗಂಡ ಅಥವಾ ಹೆಂಡತಿಯರಲ್ಲಿ ಒಬ್ಬರಾದರೂ ಶಾಶ್ವತ ಪೌರರಾಗಿರಬೇಕು ಅಥವಾ ಅವರಲ್ಲಿ ಒಬ್ಬರಾದರೂ ಗ್ರೀನ್‌ಕಾರ್ಡ್ ಪಡೆದವರಾಗಿರಬೇಕು. ಅಂಥವರಿಗೆ ಜನಿಸಿದ ಮಕ್ಕಳು ಮಾತ್ರ ಅಮೆರಿಕದ ಪೌರತ್ವಕ್ಕೆ ಅರ್ಹರು ಎಂದು ಹೇಳುವ ಹೊಸ ಕಾನೂನು ಜಾರಿಗೊಳಿಸಲು ಟ್ರಂಪ್ ಮುಂದಾಗಿದ್ದಾರೆ.
ಅಮೆರಿಕದಲ್ಲಿ ಹುಟ್ಟಿದ ಮಕ್ಕಳಿಗೆಲ್ಲಾ ಯಾಂತ್ರಿಕವಾಗಿ ಪೌರತ್ವ ಕೊಡುವ ಕಾನೂನು ದುರುಪಯೋಗವಾಗುತ್ತಿದ್ದು, ಅದರಿಂದ ಹೆರಿಗೆ ಪ್ರವಾಸ ಎಂಬ ಹೊಸ ಮೋಸದ ಮಾರ್ಗವೇ ಸೃಷ್ಟಿಯಾಗಿದೆ ಎಂಬುದು ಟ್ರಂಪ್ ಅವರ ವಾದ. ಅಮೆರಿಕದಲ್ಲಿ ಮಕ್ಕಳನ್ನು ಹೆತ್ತರೆ ಅಂಥ ಮಕ್ಕಳಿಗೆ ಅಮೆರಿಕದ ಪೌರತ್ವ ಸಿಗುತ್ತದೆ ಎಂಬ ಕಾರಣಕ್ಕೇ ಅನೇಕ ದಂಪತಿಗಳು ಹೆರಿಗೆಗಾಗಿ ಅಮೆರಿಕಕ್ಕೆ ಬರುತ್ತಿದ್ದಾರೆ ಎಂಬುದು ಆರೋಪ. ಒಂದೆರಡು ಪ್ರಕರಣ ಇಂಥದ್ದೂ ಇರಬಹುದು. ಹಾಗೆಂದು ಸಂವಿಧಾನದ ಹಕ್ಕನ್ನೇ ಕಿತ್ತುಕೊಳ್ಳುವುದು ತಪ್ಪು ಎಂಬುದು ಕಾನೂನು ತಜ್ಞರ ವಾದ. ಸಂವಿಧಾನದಲ್ಲಿರುವ ಹಕ್ಕಿನ ಅರ್ಥವನ್ನು ಬದಲಾಯಿಸುವ ಹಕ್ಕು ಯಾರಿಗೂ ಇಲ್ಲ, ಆ ಹಕ್ಕು ಸುಪ್ರೀಂ ಕೋರ್ಟ್‌ಗೆ ಮಾತ್ರ ಇದೆ ಎಂದು ಅವರು ವಾದಿಸುತ್ತಾರೆ. ಇದೇನೇ ಇದ್ದರೂ ಅಮೆರಿಕದಲ್ಲಿರುವ ಭಾರತೀಯರಲ್ಲಿ ಈ ಬದಲಾವಣೆ ಗಾಬರಿ ಹುಟ್ಟಿಸಿದೆ. ಹೊಸ ಕಾನೂನು ಫೆಬ್ರುವರಿ ೨೦ರಂದು ಜಾರಿಗೆ ಬರಲಿದೆ. ಈ ದಿನಾಂಕಕ್ಕೆ ಮೊದಲು ಅಮೆರಿಕದಲ್ಲಿ ಮಗು ಹುಟ್ಟಿದರೆ ಆ ಮಗುವಿಗೆ ಸಮಸ್ಯೆ ಇರುವುದಿಲ್ಲ. ಆ ನಂತರ ಹುಟ್ಟಿದ ಮಕ್ಕಳಿಗೆ ಅಮೆರಿಕದ ಪೌರತ್ವ ಸಿಗುವುದಿಲ್ಲ ಎಂದು ಕಾನೂನು ಹೇಳುತ್ತದೆ. ಇದೇ ಕಾರಣದಿಂದ ಏಳು ಮತ್ತು ಎಂಟು ತಿಂಗಳೂ ತುಂಬದ ಗರ್ಭಿಣಿಯರು ತುರ್ತಾಗಿ ಹೆರಿಗೆ ಮಾಡಿಸಿಕೊಳ್ಳಲು ಹೆರಿಗೆ ಆಸ್ಪತ್ರೆಗಳ ಜೊತೆ ಮಾತುಕತೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಅವಧಿಗೆ ಮೊದಲೇ ಹೆರಿಗೆ ಮಾಡಿಸಿಕೊಂಡರೆ ಹುಟ್ಟುವ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ತಾಯಿ ಹೊಟ್ಟೆಯಲ್ಲಿ ಮಗು ಪೂರ್ಣವಾಗಿ ಬೆಳೆದಿರುವುದಿಲ್ಲ. ಹೀಗಾಗಿ ವೈದ್ಯರು ಅಂಥ ಗರ್ಭಿಣಿಯರಿಗೆ ಸಿಸೇರಿಯನ್ ಹೆರಿಗೆ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಮೆರಿಕದ ಪತ್ರಿಕೆಗಳು ವರದಿ ಮಾಡಿವೆ. ಆದರೂ ಹೆರಿಗೆ ಆಸ್ಪತ್ರೆಗಳ ವೈದ್ಯರ ಮೇಲೆ ಒತ್ತಡ ಹೆಚ್ಚುತ್ತಲೇ ಇದೆ. ಪೌರತ್ವ ಕುರಿತ ಟ್ರಂಪ್ ಆದೇಶದಿಂದ ಭಾರತದ ವಲಸಿಗರ ಮೇಲೆ ಆಗಿರುವ ಕೆಟ್ಟ ಪರಿಣಾಮದ ಒಂದು ಮುಖ ಅಷ್ಟೆ.
ಟ್ರಂಪ್ ಅವರ ಈ ಆದೇಶ ಸಂವಿಧಾನದ ಉಲ್ಲಂಘನೆ ಎಂದು ಅನೇಕ ನಾಗರಿಕ ಹಕ್ಕು ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿವೆ. ಡೆಮಾಕ್ರಟಿಕ್ ನಿಯಂತ್ರಣದಲ್ಲಿರುವ ೨೨ ರಾಜ್ಯಗಳು ಕೂಡ ಕೋರ್ಟ್‌ಗಳಲ್ಲಿ ದಾವೆ ಹೂಡಿವೆ. ಅಂತಿಮವಾಗಿ ಈ ವಿಚಾರ ಸುಪ್ರೀಂ ಕೋರ್ಟ್‌ನಲ್ಲಿ ಇತ್ಯರ್ಥವಾಗಬೇಕಿದೆ. ಸುಪ್ರೀಂ ಕೋರ್ಟ್‌ನಲ್ಲಿ ಈಗ ಹೆಚ್ಚು ಮಂದಿ ನ್ಯಾಯಾಽಶರು ಟ್ರಂಪ್ ಅವರ ಹಿಂದಿನ ಅಧಿಕಾರದ ಅವಧಿಯಲ್ಲಿ ನೇಮಕಗೊಂಡವರು. ಹೀಗಾಗಿ ಈ ಪ್ರಕರಣ ಇತ್ಯರ್ಥವಾಗಲು ಹಲವು ವರ್ಷಗಳೇ ಹಿಡಿದರೂ ತೀರ್ಪು ಸರ್ಕಾರದ ಪರ ಇರಬಹುದೆಂಬ ಭೀತಿಯೂ ವಲಸಿಗರಲ್ಲಿ ಇದೆ. ಅಂತಿಮ ತೀರ್ಪು ಬರುವವರೆಗೆ ಟ್ರಂಪ್ ಆದೇಶ ಜಾರಿಯಲ್ಲಿರುತ್ತದೆಯೋ ಇಲ್ಲವೋ ಎಂಬುದನ್ನು ಸರ್ಕಾರ ಒಂದೆರಡು ದಿನಗಳಲ್ಲಿ ಸ್ಪಷ್ಟಪಡಿಸಲಿದೆ.
ಅಮೆರಿಕದಲ್ಲಿ ಕನಿಷ್ಠ ೫೦ ಲಕ್ಷ ಭಾರತೀಯರಿದ್ದಾರೆ. ಈ ಪೈಕಿ ಸುಮಾರು ಏಳೂವರೆ ಲಕ್ಷ ಜನರು ಯಾವುದೇ ಕಾನೂನು ಬದ್ಧ ದಾಖಲೆಗಳಿಲ್ಲದೆ ಕೇವಲ ತಾತ್ಕಾಲಿಕ ವೀಸಾ ಆಧಾರದ ಮೇಲೆ ಇದ್ದಾರೆ. ಸುಮಾರು ಹತ್ತು ಲಕ್ಷ ಭಾರತೀಯ ಉದ್ಯೋಗಿಗಳು ಗ್ರೀನ್‌ಕಾರ್ಡ್‌ಗಾಗಿ ಕಾಯುತ್ತ ಇದ್ದಾರೆ. ಗ್ರೀನ್ ಕಾರ್ಡ್ ಕೊಡುವ ಪ್ರಕ್ರಿಯೆ ನಿಧಾನ ಗತಿಯಲ್ಲಿ ಸಾಗುತ್ತಿದೆ. ಈಗಿನ ಅಂದಾಜಿನ ಪ್ರಕಾರ ಗ್ರೀನ್‌ಕಾರ್ಡ್ ಪಡೆಯಲು ಪ್ರಸ್ತುತ ವೇಗದ ಗತಿ ನೋಡಿ ಹೇಳುವುದಾದರೆ ಕನಿಷ್ಠ ೪೦ ವರ್ಷಗಳೇ ಬೇಕಾಗಬಹುದು ಎಂದು ಅಂದಾಜು ಮಾಡಲಾಗಿದೆ. ಕೆಲವರು ತಮಾಷೆಗಾಗಿ ನೂರು ವರ್ಷ ಆಗಬಹುದು ಎಂದೂ ಹೇಳುವುದುಂಟು. ಗ್ರೀನ್ ಕಾರ್ಡ್ ಇಲ್ಲದೆ ಅಲ್ಲಿ ಶಾಶ್ವತವಾಗಿ ನೆಲೆಸಲು ಸಾಧ್ಯವಿಲ್ಲ ತಾತ್ಕಾಲಿಕ ವೀಸಾ ಅವಧಿ ಮುಗಿದ ತತ್‌ಕ್ಷಣ ಮತ್ತೊಂದು ಕೆಲಸ ಹುಡುಕಬೇಕಾಗುತ್ತದೆ. ಹೀಗಾಗಿ ಉದ್ಯೋಗ ಅರಸಿ ಹೋದ ಯುವಜನರ ಸ್ಥಿತಿ ಅತಂತ್ರವಾಗಲಿದೆ. ವಲಸೆಗೆ ಸಂಬಂಧಿಸಿದ ನೀತಿಯನ್ನೂ ಟ್ರಂಪ್ ಬದಲಾಯಿಸುವ ಸಾಧ್ಯತೆಗಳಿವೆ. ಪ್ರತಿಭಾವಂತರಿಗೆ ಅವಕಾಶ ನೀಡುವುದು ಟ್ರಂಪ್ ಅವರ ಲೆಕ್ಕಾಚಾರ. ಅದು ಯಾವ ಸ್ವರೂಪ ಪಡೆಯುತ್ತದೆಯೋ ಕಾದು ನೋಡಬೇಕು. ಭಾರತದ ಟೆಕ್ಕಿಗಳಿಗೆ ಉತ್ತಮ ಅವಕಾಶ ದೊರಕಬಹುದು ಎಂಬುದು ನಿರೀಕ್ಷೆ. ಆದರೆ ಅಲ್ಲಿ ಶಾಶ್ವತವಾಗಿ ನೆಲೆಸುವುದು ಬಹುಶಃ ಕನಸಾಗಿಯೇ ಉಳಿಯಲಿದೆ. ಭಾರತದ ಟೆಕ್ಕಿಗಳು ಬಹುಶಃ ಬೇರೆ ದೇಶಗಳಲ್ಲಿರುವ ಅವಕಾಶಗಳತ್ತ ಗಮನಕೊಡಬೇಕಾಗಬಹುದು.
ಈ ಮಧ್ಯೆ ಅಕ್ರಮ ವಲಸೆ ಕುರಿತಂತೆ ಟ್ರಂಪ್ ಅಧಿಕಾರ ವಹಿಸಿಕೊಂಡ ದಿನವೇ ತಮ್ಮ ಹೊಸ ನೀತಿ ಪ್ರಕಟಿಸಿದ್ದಾರೆ. ಅಕ್ರಮ ವಲಸೆಗೆ ಇನ್ನು ಆಸ್ಪದವಿಲ್ಲ ಎಂದು ಅವರು ಘೋಷಿಸಿ ಆದೇಶ ಹೊರಡಿಸಿದ್ದಾರೆ. ಅಕ್ರಮ ವಲಸೆಗೆ ಅವಕಾಶ ಇರುವ ಮೆಕ್ಸಿಕೋ ಗಡಿಯನ್ನು ಮುಚ್ಚಲು ಆದೇಶ ಹೊರಡಿಸಲಾಗಿದೆ. ಗಡಿಯಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಈಗ ಇರುವ ಗಡಿ ಭದ್ರತಾ ಸಿಬ್ಬಂದಿ ಜೊತೆಗೆ ಇನ್ನೂ ೧,೫೦೦ ಮಂದಿ ಸೈನಿಕರನ್ನು ಅಲ್ಲಿಗೆ ನಿಯೋಜಿಸಲಾಗಿದೆ. ಈಗಾಗಲೇ ಅಕ್ರಮವಾಗಿ ಬಂದು ನೆಲೆಸಿರುವವರನ್ನು ಗಡಿಪಾರು ಮಾಡಲಾಗುವುದೆಂದು ಪ್ರಕಟಿಸಲಾಗಿದೆ. ಅಕ್ರಮ ವಲಸಿಗರನ್ನು ಗುರುತಿಸುವ ಕೆಲಸ ಆರಂಭವಾಗಿದೆ. ಕನಿಷ್ಠ ಹತ್ತು ಲಕ್ಷ ಮಂದಿ ಅಕ್ರಮ ವಲಸಿಗರು ಗಡಿ ಜಿಲ್ಲೆಗಳಲ್ಲಿ ಇದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇಷ್ಟೊಂದು ಜನರನ್ನು ವಿಮಾನಗಳಲ್ಲಿ ತುಂಬಿ ಅವರವರ ದೇಶಕ್ಕೆ ಕಳುಹಿಸುವುದು ಕಷ್ಟದ ಕೆಲಸವೇ ಸರಿ. ಆದರೆ ಅದನ್ನು ಮಾಡಿಯೇ ತೀರುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಚುನಾವಣೆಗಳಲ್ಲಿ ಅವರಿಗೆ ಗೆಲುವು ತಂದುಕೊಟ್ಟ ವಿಷಯಗಳಲ್ಲಿ ಬಹಳ ಮುಖ್ಯವಾದ ಪ್ರಕ್ರಿಯೆ ಘೋಷಣೆ ಇದಾಗಿದೆ.
ಉತ್ತಮ ಬದುಕನ್ನು ಅರಸಿ ಬಡ ದೇಶಗಳಿಂದ ಅಮೆರಿಕಕ್ಕೆ ಜನರು ವಲಸೆ ಬರುತ್ತಿದ್ದಾರೆ. ಅಸ್ಥಿರ ಆಫ್ರಿಕಾ ದೇಶಗಳಿಂದ ಹೆಚ್ಚು ಜನರು ಬರುತ್ತಿದ್ದಾರೆ. ಮೆಕ್ಸಿಕೊ, ಚೀನಾ ಮತ್ತು ಭಾರತದಿಂದಲೂ ಅಕ್ರಮವಾಗಿ ಜನರು ವಲಸೆ ಬರುತ್ತಿದ್ದಾರೆ. ಭಾರತದಿಂದ ಅದರಲ್ಲಿಯೂ ಗುಜರಾತ್‌ನಿಂದ ಹೆಚ್ಚು ಜನರು ಅಕ್ರಮವಾಗಿ ಅಮೆರಿಕ ಪ್ರವೇಶಿಸುತ್ತಿದ್ದಾರೆ. ಸದ್ಯಕ್ಕೆ ಅಮೆರಿಕ ಗಡಿ ಭದ್ರತಾ ಪಡೆಗಳು ೧೮ ಸಾವಿರ ಅಕ್ರಮ ಭಾರತೀಯರನ್ನು ಗುರುತಿಸಿವೆ. (ಭಾರತದ ಅಕ್ರಮ ವಲಸಿಗರು ಇನ್ನೂ ಲಕ್ಷಾಂತರ ಇದ್ದಾರೆ) ಅಕ್ರಮ ವಲಸಿಗರನ್ನು ಹೊರಹಾಕುವ ಟ್ರಂಪ್ ನೀತಿಯ ಪ್ರಕಾರ ಇವರನ್ನು ಭಾರತಕ್ಕೆ ಕಳುಹಿಸಲಾಗುವುದು. ಈ ವಿಚಾರವಾಗಿ ಈಗಾಗಲೇ ವಿದೇಶಾಂಗ ಸಚಿವ ಜೈಶಂಕರ್ ಅವರು ಅಮೆರಿಕ ಹೊಸ ವಿದೇಶಾಂಗ ಸಚಿವ ಮಾರ್ಕೋ ರೂಬಿಯೋ ಜೊತೆ ಮಾತನಾಡಿದ್ದಾರೆ. ಅಕ್ರಮ ವಲಸಿಗರನ್ನು ವಾಪಸ್ ಕರೆಸಿಕೊಳ್ಳಲು ಒಪ್ಪಿರುವುದಾಗಿ ಜೈಶಂಕರ್ ಪ್ರಕಟಿಸಿದ್ದಾರೆ. ಎರಡೂ ದೇಶಗಳ ನಡುವಣ ಬಾಂಧವ್ಯ ಸುಧಾರಿಸುವ ದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.
ಭಾರತ ಮತ್ತು ಅಮೆರಿಕದ ಬಾಂಧವ್ಯ ಈವರೆಗೆ ಚೆನ್ನಾಗಿತ್ತು. ಆದರೆ ಟ್ರಂಪ್ ಅಧಿಕಾರದ ಅವಧಿಯಲಿ ಬಾಂಧವ್ಯ ಕೆಡಬಹುದಾದ ಸಾಧ್ಯತೆಗಳು ಕಾಣಿಸುತ್ತಿವೆ. ಭಾರತ ಮತ್ತು ರಷ್ಯಾ ಬಾಂಧವ್ಯ ಅಮೆರಿಕಕ್ಕೆ ಹಿಡಿಸಿಲ್ಲ. ಅಮೆರಿಕದ ಹಿಂದಿನ ಅಧ್ಯಕ್ಷ ಜೋ ಬೈಡನ್ ಅಽಕಾರದ ಕೊನೆಯಲ್ಲಿ ರಷ್ಯಾದ ವಿರುದ್ಧವಾಗಿ ಅನೇಕ ನಿರ್ಬಂಧಗಳನ್ನು ವಿಽಸಿದರು. ಅದರಲ್ಲಿ ತೈಲ ವಹಿವಾಟು ನಿರ್ಬಂಧವೂ ಇದೆ. ರಷ್ಯಾ ಅಗ್ಗದ ದರಗಳಲ್ಲಿ ಭಾರತಕ್ಕೆ ತೈಲ ಸರಬರಾಜು ಮಾಡುತ್ತಿದೆ. ಅದನ್ನು ಭಾರದಲ್ಲಿ ಸಂಸ್ಕರಿಸಿ ಇತರ ದೇಶಗಳಿಗೆ ಮಾರಿ ಲಾಭ ಗಳಿಸುತ್ತಿದೆ. ಇದರಿಂದಾಗಿ ಭಾರತದ ಆರ್ಥಿಕ ಸ್ಥಿತಿ ಉತ್ತಮವಾಗಿದೆ. ಬೈಡನ್ ಅವರ ಹೊಸ ನಿರ್ಬಂಧಗಳು ರಷ್ಯಾ ಜೊತೆಗಿನ ತೈಲ ಬಾಂಧವ್ಯವನ್ನು ಹಾಳು ಮಾಡಲಿದೆ. ಸಹಜವಾಗಿಯೇ ಈ ಕ್ರಮ ಭಾರತದ ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟಪರಿಣಾಮ ಬೀರಲಿದೆ. ಟ್ರಂಪ್ ಈ ನಿರ್ಬಂಧಗಳನ್ನು ಮುಂದುವರಿಸಿ ಮತ್ತಷ್ಟು ನಿರ್ಬಂಧಗಳನ್ನು ಹೇರುವ ಸಾಧ್ಯತೆ ಇದೆ. ಉಕ್ರೇನ್ ವಿರುದ್ಧದ ರಷ್ಯಾ ಯುದ್ಧ ಅಂತ್ಯವಾದರೆ ಪರಿಸ್ಥಿತಿ ಸುಧಾರಿಸಬಹುದು. ಇಲ್ಲವಾದರೆ ಭಾರತ ಆರ್ಥಿಕ ಸಮಸ್ಯೆಯನ್ನು ಎದುರಿಸಬೇಕಾಗಬಹುದು.
ಟ್ರಂಪ್ ಅಧಿಕಾರ ವಹಿಸಿಕೊಂಡ ದಿನವೇ ಘೋಷಿಸಿದ ಹಲವಾರು ನಿರ್ಧಾರಗಳು ಅಂತಾರಾಷ್ಟ್ರೀಯವಾಗಿ ಕೋಲಾಹಲವನ್ನು ಎಬ್ಬಿಸಿವೆ. ಕೆನಡಾ ಮತ್ತು ಮೆಕ್ಸಿಕೋದಿಂದ ಬರುವ ಎಲ್ಲ ವಸ್ತುಗಳ ಮೇಲೆ ಶೇ. ೨೦ರಷ್ಟು ತೆರಿಗೆ ವಿಽಸಲಾಗುವುದು. (ಚೀನಾದ ಮೇಲೆ ಅವರಿನ್ನೂ ತೆರಿಗೆ ಹೇರಿಲ್ಲ. ಬಹುಶಃ ಶೇ. ೬೦ರಷ್ಟು ತೆರಿಗೆ ವಿಽಸುವ ಸಾಧ್ಯತೆ ಇದೆ. ಆದರೆ ಅದನ್ನು ೧೦ಕ್ಕೆ ಇಳಿಸುವ ಸಾಧ್ಯತೆಯೂ ಇದೆ) ಗಲ್ಛ್ ಆಫ್ ಮೆಕ್ಸಿಕೋವನ್ನು ಗಲ್ಛ್ ಆಪ್ ಅಮೆರಿಕ ಎಂದು ಪುನರ್‌ನಾಮಕರಣ ಮಾಡಲಾಗುವುದು. ಅಮೆರಿಕದ ನೆಲದಲ್ಲಿರುವ ತೈಲನಿಕ್ಷೇಪವನ್ನು ತೆಗೆಯಲು ಕ್ರಮ ತೆಗೆದುಕೊಳ್ಳಲಾಗುವುದು. ಗ್ರೀನ್ ಎನರ್ಜಿಗೆ ಹಿಂದೆ ನೀಡಿದಷ್ಟು ಮಹತ್ವ ಇನ್ನು ಮುಂದೆ ಇರುವುದಿಲ್ಲ. ಪ್ಯಾರಿಸ್ ಕ್ಲೈಮೇಟ್ ಒಪ್ಪಂದದಿಂದ ಮತ್ತೆ ಹಿಂದೆ ಸರಿಯಲಾಗುವುದು. ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಅಮೆರಿಕ ವಾಪಸಾಗಲಿದೆ. ಈ ಒಪ್ಪಂದಗಳು ಅಮೆರಿಕದ ಪರವಾಗಿಲ್ಲ ಮತ್ತು ಅನಗತ್ಯ ಆರ್ಥಿಕ ಹೊರೆ ಎನ್ನುವುದು ಟ್ರಂಪ್ ವಾದ. ವಾಕ್‌ಸ್ವಾತಂತ್ರ್ಯದ ಮೇಲಿದ್ದ ನಿರ್ಬಂಧಗಳನ್ನು ತೆಗೆಯಲಾಗುವುದು. ಆರ್ಥಿಕ ಸಂಪನ್ಮೂಲ ಹೆಚ್ಚಿಸಿ ಅಗತ್ಯ ವಸ್ತುಗಳ ಬೆಲೆ ಇಳಿಸಲು ಕ್ರಮ ತೆಗೆದು ಕೊಳ್ಳಲಾಗುವುದು. ಈ ದಿಸೆಯಲ್ಲಿ ತೈಲ ಬೆಲೆಗಳನ್ನು ಇಳಿಸಬೇಕೆಂದು ಟ್ರಂಪ್ ತೈಲ ದೇಶಗಳಿಗೆ ವಿಶ್ವ ಆರ್ಥಿಕ ವೇದಿಕೆಯಲ್ಲಿ ಕರೆ ನೀಡಿದ್ದಾರೆ. ನ್ಯಾಟೋ ನಿರ್ವಹಣೆಗೆ ಎಲ್ಲ ಸದಸ್ಯ ದೇಶಗಳೂ ಸಮಾನ ಹಣ ನೀಡಬೇಕು. ಅಮೆರಿಕ ಇನ್ನು ಮುಂದೆ ಹೆಚ್ಚು ಹಣ ನೀಡುವುದಿಲ್ಲ ಎಂದು ಟ್ರಂಪ್ ಈ ಮೊದಲೇ ಹೇಳಿದ್ದು ಆ ಸಂಬಂಧವಾಗಿ ಅಧಿಕೃತ ಘೋಷಣೆ ಇನ್ನೂ ಬರಬೇಕಿದೆ.
ತಾವು ಅಧಿಕಾರಕ್ಕೆ ಬರುವ ಮೊದಲೇ ಇಸ್ರೇಲ್ ಜೊತೆ ಒಂದು ಒಪ್ಪಂದಕ್ಕೆ ಬರದಿದ್ದರೆ ದೊಡ್ಡ ಗಂಡಾಂತರವನ್ನೇ ಎದುರಿಸಬೇಕಾಗಿ ಬರಬಹುದು ಎಂದು ಡೊನಾಲ್ಡ್ ಟ್ರಂಪ್ ಹಮಾಸ್ ಉಗ್ರಗಾಮಿ ಸಂಘಟನೆಗೆ ಬೆದರಿಕೆ ಹಾಕಿದ್ದರು. ಅವರ ಬೆದರಿಕೆಯಿಂದಾಗಿಯೋ ಅಥವಾ ಹಿಂದಿನ ಸರ್ಕಾರದ ಪ್ರಯತ್ನದಿಂದಾಗಿಯೇ ಗಾಜಾದಲ್ಲಿ ಕದನ ವಿರಾಮ ಘೋಷಣೆಯಾಯಿತು. ಇದಕ್ಕೆ ತಾವೇ ಕಾರಣ ಎಂದು ಟ್ರಂಪ್ ಹೇಳಿಕೊಳ್ಳುತ್ತಿದ್ದಾರೆ.
ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ ಮೈಸೂರು : ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ತಂಬಾಕು ಬೆಳೆಗಾರರ ಸಮಸ್ಯೆಗಳು ಹಾಗೂ ಮಾರಾಟ…
ಮೈಸೂರು : ಮೈಸೂರು ಅರಮನೆ ಮಂಡಳಿ ವತಿಯಿಂದ ಕ್ರಿಸ್‌ಮಸ್ ಹಾಗೂ ಹೊಸವರ್ಷದ ಪ್ರಯುಕ್ತ 10 ದಿನಗಳ ‘ಅರಮನೆ ಫಲಪುಷ್ಪ ಪ್ರದರ್ಶನ’…
ಹಲಗೂರು : ಎತ್ತಿನ ಗಾಡಿ ತೆರಳುತ್ತಿದ್ದ ವೇಳೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಎತ್ತು ಸ್ಥಳದಲ್ಲೇ ಮೃತಪಟ್ಟ ಘಟನೆ…
ಹಲಗೂರು : ಇಲ್ಲಿಗೆ ಸಮೀಪದ ಮುತ್ತತ್ತಿ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತಪಟ್ಟಿರುವ ಘಟನೆ…
ಭಾರತೀನಗರ : ಇಲ್ಲಿಗೆ ಸಮೀಪದ ಕೆ.ಶೆಟ್ಟಹಳ್ಳಿ ಗ್ರಾಮದಲ್ಲಿ ಪೊಲೀಸರ ಭದ್ರತೆಯೊಂದಿಗೆ ಗ್ರಾಮದ ಪರಿಶಿಷ್ಟ ಜಾನಾಂಗದ ಮಹಿಳೆಯರು, ಪುರುಷರು ದೇವಾಲಯಗಳಿಗೆ ಪ್ರವೇಶಿಸಿದರು.…
ಮೈಸೂರು : ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿರುವ ಸಂಬಂಧ ಯಶಸ್ವಿ ಕಾರ್ಯಾಚರಣೆ ನಡೆಸಿದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಚಾವಿಸನಿನಿ)…