ದೇಶದೆಲ್ಲೆಡೆ ಹುಲಿ ಸಂತತಿ ಹೆಚ್ಚಾಗಿದೆ. ಈಗಾಗಲೇ ನಶಿಸುತ್ತಿರುವ ಹುಲಿಗಳ ರಕ್ಷಣೆಯಲ್ಲಿ ಸಾಧನೆ ಮಾಡಿರುವುದು ವನ್ಯಜೀವಿ ಪ್ರೇಮಿಗಳಿಗೆ ಸಂತಸ ತಂದಿರುವುದಂತೂ ನಿಜ. ಆದರೆ, ಹುಲಿಗಳ ಸಂಖ್ಯೆ ಹೆಚ್ಚಳದಿಂದ ಅರಣ್ಯದಂಚಿನ ಕೊಡಗು ಜಿಲ್ಲೆಯ ಜನತೆ ಜೀವಭಯದಲ್ಲಿ ಬದುಕುವಂತಾಗಿದೆ.
ಹುಲಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾದ ಪರಿಣಾಮ ಕೊಡಗಿನ ಅರಣ್ಯದಂಚಿನ ಗ್ರಾಮಗಳು ಸೇರಿದಂತೆ ಜಲ ಮೂಲಗಳಿರುವ ಕಾಫಿ ತೋಟಗಳಲ್ಲಿ ಹುಲಿಗಳು ಪ್ರತ್ಯಕ್ಷವಾಗುತ್ತಿವೆ. ಭತ್ತದ ಗದ್ದೆಗಳ ಏರಿ, ತೋಟದ ನಡುವೆ ಹುಲಿ ಹೆಜ್ಜೆ ಪತ್ತೆಯಾಗುತ್ತಿದೆ. ಮೇಯಲು ಬಿಟ್ಟ ಜಾನುವಾರುಗಳ ಮೇಲೆ ದಾಳಿ ಮಾಡಿ ಅವುಗಳ ಸಾವಿಗೆ ಕಾರಣವಾಗುತ್ತಿರುವುದು ಆತಂಕ ಮೂಡಿಸಿವೆೆ.
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ ನಾಗರಹೊಳೆಗೆ ಹೊಂದಿಕೊಂಡಂತೆ ಇರುವ ವಿರಾಜಪೇಟೆ ತಾಲ್ಲೂಕಿನ ಬಹುತೇಕ ಗ್ರಾಮಗಳು ಈ ಸಮಸ್ಯೆ ಎದುರಿಸುತ್ತಿದೆ. ನಾಗರಹೊಳೆ ಅಂಚಿನಲ್ಲಿರುವ ಕಾರಣ ವಿರಾಜಪೇಟೆ ತಾಲ್ಲೂಕಿನ ಬಾಳುಗೋಡು, ಕಿರುಮಕ್ಕಿ, ಕಲ್ಲುಬಾಣೆ, ಬಾಳೆಲೆ, ನಿಟ್ಟೂರು, ಶ್ರೀಮಂಗಲ, ಬಿಟ್ಟಂಗಾಲ, ಕೆದಮಯಳ್ಳೂರು, ತೋರ, ಬಿರುನಾಣಿ, ಆರ್ಜಿ ಗ್ರಾಮಗಳಲ್ಲಿ ಹುಲಿಕಾಟ ಹೆಚ್ಚಾಗಿದ್ದು ಜಾನುವಾರುಗಳು ಬಲಿಯಾಗಿವೆ.
ಇದೀಗ ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಹುಲಿಯೊಂದು ಅರಣ್ಯ ಇಲಾಖೆಗೆ ತಲೆನೋವಾಗಿ ಪರಿಣಮಿಸಿದೆ.
ಕಳೆದ ಕೆಲ ತಿಂಗಳ ಹಿಂದೆಯಷ್ಟೇ ಹುಲಿ ದಾಳಿಯಿಂದ ಹಸು ಮೃತಪಟ್ಟಿದ್ದರಿಂದ ಇಲ್ಲಿನ ರೈತರೊಬ್ಬರಿಗೆ ಪರಿಹಾರ ಒದಗಿಸಲಾಗಿತ್ತು. ಆ ಪರಿಹಾರ ಹಣದಲ್ಲಿ ಮತ್ತೊಂದು ಹಸುವನ್ನು ರೈತ ಕೊಂಡುಕೊಂಡಿದ್ದರು. ಇದೀಗ ಆ ಹಸುವನ್ನ್ನೂ ಕೂಡ ಹುಲಿ ಬಲಿ ಪಡೆದಿದೆ. ಹೀಗೆ ಮತ್ತೆ ಮತ್ತೆ ಹುಲಿ ದಾಳಿ ಮಾಡುತ್ತಿದ್ದ್ದರೆ ರೈತರಿಗೆ ಶಾಶ್ವತ ಪರಿಹಾರ ದೊರಕುವುದು ಯಾವಾಗ ಎಂಬುದೇ ಯಕ್ಷಪ್ರಶ್ನೆಯಾಗಿದೆ.
ಒಂದೇ ವಾರದಲ್ಲಿ ೪ ಜಾನುವಾರುಗಳನ್ನು ವ್ಯಾಘ್ರ ಕೊಂದು ಹಾಕಿರುವ ಹಿನ್ನೆಲೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸರ್ಕಾರ ಜನರಿಗೆ ತೊಂದರೆ ಕೊಡುತ್ತಿರುವ ಹುಲಿ ಯನ್ನು ಹಿಡಿಯಲು ಆದೇಶ ನೀಡಿದೆ. ಅರಣ್ಯ ಇಲಾಖೆ ವತಿಯಿಂದ ೪ ಸಾಕಾನೆಗಳ ಸಹಾಯದಿಂದ ಸುಮಾರು ೫೦ ಮಂದಿ ೧ ವಾರದಿಂದ ಕಾರ್ಯಾಚರಣೆ ನಡೆಸುತ್ತಿದ್ದರೂ ಹುಲಿ ಸೆರೆ ಸಾಧ್ಯವಾಗಿಲ್ಲ.
ಕಾರ್ಯಾಚರಣೆ ನಡೆಸುತ್ತಿರುವ ಸಂದರ್ಭದಲ್ಲೇ ಹುಲಿ ರಸ್ತೆ ಬದಿ ಮೇಯುತ್ತಿದ್ದ ಹಸುವೊಂದನ್ನು ಹೊತ್ತೊಯ್ದಿದೆ. ಇದೇ ರಸ್ತೆಯಲ್ಲಿ ಕಾರ್ಮಿಕರು, ಶಾಲಾ ಮಕ್ಕಳು ಸಂಚರಿಸುತ್ತಿರುವುದರಿಂದ ಪ್ರತಿದಿನ ಜೀವಭಯದಲ್ಲಿ ಸ್ಥಳೀಯರು ದಿನ ಕಳೆಯುವಂತಾಗಿದೆ.
ಇತ್ತೀಚೆಗೆ ಕಾರ್ಯಾಚರಣೆ ತಂಡಕ್ಕೆ ಹುಲಿ ಕಾಣಿಸಿಕೊಂಡಿತ್ತು. ಅರವಳಿಕೆ ಪ್ರಯೋಗ ನಡೆಸಿದರೂ ಹುಲಿ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಆದರೆ, ಮತ್ತೆ ಕಾಫಿ ತೋಟಗಳ ನಡುವೆ ಹುಲಿ ಪ್ರತ್ಯಕ್ಷವಾಗುತ್ತಿದ್ದು, ಅರಣ್ಯ ಇಲಾಖೆ ಅಳವಡಿಸಿದ ಸಿಸಿ ಕ್ಯಾಮೆರಾಗಳಲ್ಲಿ ಹುಲಿಯ ಚಹರೆ ಪತ್ತೆಯಾಗುತ್ತಿದೆ. ಅರ್ಧ ತಿಂದಿರುವ ಹಸುವಿನ ಕಳೇಬರ ಬಳಿ ೨ ಬೋನ್ ಇಟ್ಟರೂ ಹುಲಿ ಸೆರೆಯಾಗುತ್ತಿಲ್ಲ.
ಹುಲಿ ದಾಳಿ ಮಾಡುವ ಪ್ರದೇಶದಲ್ಲಿ ಸತ್ತ ಜಾನುವಾರುವಿನ ಕಳೇಬರ ಇಟ್ಟು ಬೋನಲ್ಲಿ ಹಿಡಿಯುವುದು ಕಷ್ಟ ಸಾಧ್ಯವಾಗುತ್ತಿದೆ. ಕಾರಣ ಹೀಗೆ ಮಾಂಸ ಅರಸಿ ಹುಲಿಗಳು ಅದೇ ಸ್ಥಳದಲ್ಲೇ ಅಡ್ಡಾಡುತ್ತವೆ ಅಂದರೆ ಅದು ವಯಸ್ಸಾಗಿರಬೇಕು, ಇಲ್ಲವೇ ಗಾಯವಾಗಿ ಬೇಟೆಯಾಡಲು ಶಕ್ತಿ ಇಲ್ಲದೆಯೂ ಇರಬಹುದು ಅಥವಾ ತಾಯಿಯಿಂದ ಬೇರ್ಪಟ್ಟು ತನ್ನದೇ ಆವಾಸ ತಾಣ ಮಾಡಿಕೊಂಡಿರಬೇಕು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಾಗಲೇ ಹುಲಿಗಳ ಪತ್ತೆಗೆ ಟೈಗರ್ ಟ್ರಾಪ್ ಕ್ಯಾಮೆರಾಗಳನ್ನು ಅಳವಡಿಸುವ ಕೆಲಸ ಆಗಿದ್ದರೂ ಅವುಗಳ ಸ್ಥಳ(ಲೊಕೇಷನ್) ಪತ್ತೆಗೆ ಕಾಲರ್ ಐಡಿ ಅಳವಡಿಸಿ ಬಳಿಕ ಸೆರೆ ಕಾರ್ಯಾಚರಣೆ ಸೂಕ್ತ ಎನ್ನಲಾಗುತ್ತಿದೆ.
ಇನ್ನು ಅರಣ್ಯದಲ್ಲಿ ಹುಲಿಗಳಿಗೂ ಬೇಟೆಯಾಡಲು ಸೂಕ್ತ ಪ್ರಾಣಿಗಳು ಸಿಗದಿರುವುದು ಕೂಡ ಹುಲಿ ದಾಳಿ ಹೆಚ್ಚಳಕ್ಕೆ ಕಾರಣ. ಇದರಿಂದ ಅರಣ್ಯದಂಚಿನಲ್ಲಿ ಸುಲಭವಾಗಿ ಸಿಗುವ ಜಾನುವಾರುಗಳು ಹುಲಿಗಳಿಗೆ ಆಹಾರವಾಗುತ್ತಿವೆ. ಅರಣ್ಯ ಇಲಾಖೆ ಕಾಡಿನಲ್ಲೇ ಹುಲಿಗಳಿಗೆ ಆಹಾರ ದೊರಕುವಂತಹ ಪೂರಕ ವಾತಾವರಣ ನಿರ್ಮಾಣ ಮಾಡಬೇಕಿದೆ. ಇದಕ್ಕಾಗಿಯೆ ಅರಣ್ಯ ಇಲಾಖೆಯಲ್ಲಿರುವ ಸಿಬ್ಬಂದಿಗಳಿಗೆ ಅಗತ್ಯ ಸೌಲಭ್ಯ ಒದಗಿಸುವುದು ಸೂಕ್ತ ಎಂಬುದು ತಜ್ಞರ ಸಲಹೆ.
ಈ ಎಲ್ಲಾ ವಿಚಾರಗಳ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಾದ ಅವಶ್ಯಕತೆ ಇದೆ. ಕೊಡಗಿನ ಹುಲಿ ಹಾವಳಿ ತಡೆಯಲು ತಜ್ಞರ ಸಲಹೆ ಪಡೆದು ಶಾಶ್ವತ ಪರಿಹಾರ ಒದಗಿಸಬೇಕಿದೆ. ಇಲ್ಲದಿದ್ದಲ್ಲಿ ಅರಣ್ಯದಂಚಿನ ಗ್ರಾಮೀಣ ಭಾಗದ ಜನತೆ ಮನೆಯಿಂದ ಹೊರಬರಲೂ ಹಿಂದೇಟು ಹಾಕಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ.
ಬೆಳಗಾವಿ: ಸಿಎಂ ಆಯ್ಕೆ ಮಾಡುವ ವೇಳೆ ಯಾವುದೇ ಗಡುವು ಕೊಟ್ಟಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ. ಸಿಎಂ ಬದಲಾವಣೆ…
ಬೆಂಗಳೂರು: ಸುಪ್ರೀಂಕೋರ್ಟ್ ತೀರ್ಪು ಬೆನ್ನಲ್ಲೇ ಮೇಕೆದಾಟು ಸಮತೋಲಿತ ಜಲಾನಯನ ಯೋಜನೆ ತ್ವರಿತ ಅನುಷ್ಠಾನಕ್ಕೆ ಕರ್ನಾಟಕ ಇಂಜಿನಿಯರಿಂಗ್ ಸಂಶೋಧನಾ ಕೇಂದ್ರ ನಿರ್ದೇಶಕರ…
ನವದೆಹಲಿ: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ದೇಶದಲ್ಲಿರುವ ಪಾರಂಪರಿಕ ನಗರಗಳ ಅಭಿವೃದ್ಧಿಗೆ ಪೂರಕವಾದ ಕಾನೂನು ಚೌಕಟ್ಟು ರೂಪಿಸಲು ನಗರಾಭಿವೃದ್ಧಿ ಸಚಿವಾಲಯ…
ಬೆಳಗಾವಿ: ನನ್ನನ್ನು ಸಿಎಂ ಮಾಡುವುದಾದರೆ ಮಾತ್ರ ನಾನು ಬಿಜೆಪಿಗೆ ವಾಪಸ್ ಹೋಗುತ್ತೇನೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್…
ಬೆಂಗಳೂರು: ಗ್ಯಾರಂಟಿ ಯೋಜನೆ ಅಧ್ಯಕ್ಷ ಹಾಗೂ ಮಾಜಿ ಸಚಿವ ಎಚ್.ಎಂ.ರೇವಣ್ಣ ಪುತ್ರನ ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿರುವ…
ಮೈಸೂರು: ಯೂನಿಟಿ ಮಾಲ್ ನಿರ್ಮಾಣಕ್ಕೆ ತಡೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ಸ್ಪಷ್ಟನೆ…