ಎಡಿಟೋರಿಯಲ್

ರಂಗ ಪ್ರಯೋಗಗಳೂ ಸಾಮಾಜಿಕ ಸ್ಪಂದನೆಯೂ

ರಂಗಭೂಮಿಯ ಸಾಂಸ್ಕೃತಿಕ ನೊಗ ಹೊರುವ ಪ್ರಮಾಣಿಕ ಪ್ರಯತ್ನದಲ್ಲಿ ನಿರಂತರ

ನಾ. ದಿವಾಕರ

ಸಾಮಾಜಿಕ ಕ್ಷೋಭೆ, ಸಾಂಸ್ಕೃತಿಕ ಪಲ್ಲಟಗಳು ಮತ್ತು ರಾಜಕೀಯ ವ್ಯತ್ಯಯಗಳ ನಡುವೆ ಸಿಲುಕಿರುವ ಭಾರತೀಯ ಸಮಾಜಕ್ಕೆ ಒಂದು ಹೊಸ ಆಯಾಮ ಬೇಕಿದೆ. ಈಗ ತಾನೇ ಜಗತ್ತಿಗೆ ಕಣ್ತೆರೆಯುತ್ತಿರುವ ಒಂದು ಬೃಹತ್ ಜನಸಮೂಹಕ್ಕೆ ಭಾರತ ನೆಲೆಯಾಗಿದೆ. ಮಿಲೇನಿಯಂ ಮಕ್ಕಳು ಎಂದು ಕರೆಯಲಾಗುವ ಈ ಮಕ್ಕಳ ಅರಿವಿನ ಹಾದಿಗಳಲ್ಲಿ ತಮ್ಮದೇ ಆದ ಮಿಥ್ಯೆ ಗಳನ್ನು ಸೃಷ್ಟಿಸುವ ಮೂಲಕ, ಲೌಕಿಕ ವಾಸ್ತವಗಳನ್ನು ಮರೆಮಾಚಲಾಗುತ್ತಿವೆ. ಇಂತಹ ಸಂದಿಗ್ಧ ಪರಿಸ್ಥಿತಿ ಗಳಲ್ಲಿ ನವ ಉದಾರವಾದ ಮತ್ತು ಸಾಂಸ್ಕ ತಿಕ ರಾಷ್ಟ್ರೀಯತೆಯ ಬಲಪಂಥೀಯ ರಾಜಕಾರಣವು ಕಟ್ಟುತ್ತಿರುವ ಆಳ್ವಿಕೆಯ ಚೌಕಟ್ಟುಗಳಲ್ಲಿ ಸಾಂಪ್ರದಾಯಿಕ ನಿರೂಪಣೆಗಳು ಮತ್ತು ಧಾರ್ಮಿಕ ವ್ಯಾಖ್ಯಾನಗಳು ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಆವರಿಸಿಕೊಂಡು, ಇಡೀ ಸಮಾಜದ ಅಂತರ್ ದೃಷ್ಟಿಯನ್ನು ಭ್ರಷ್ಟಗೊಳಿಸುತ್ತಿವೆ.

ಈ ಕತ್ತಲ ಹಾದಿಯಲ್ಲಿ ದೀವಿಗೆ ಹಿಡಿಯುವವರು ಯಾರು? ಈ ಪ್ರಶ್ನೆಗಳು ಜಟಿಲವೂ ಸಂಕೀರ್ಣವೂ ಆಗಿದೆ. ಶ್ರೇಣೀಕೃತ ಜಾತಿ ವ್ಯವಸ್ಥೆಯು ಪೋಷಿಸುವ ಪಿತೃಪ್ರಧಾನ-ಊಳಿಗಮಾನ್ಯ ಧೋರಣೆಗಳು ದೇಶದ ಮಹಿಳೆಯನ್ನು, ತಳಸಮುದಾಯಗಳನ್ನು, ನಿಕೃಷ್ಟ ಬದುಕು ಸವೆಸುತ್ತಿರುವ ಶ್ರಮಿಕರನ್ನು ಹಾಗೂ ಅವಕಾಶವಂಚಿತರನ್ನು ಮತ್ತಷ್ಟು ಅಂಚಿಗೆ ದೂಡುವ ಅಸ್ತ್ರಗಳಾಗಿ ಪರಿಣಮಿಸುತ್ತಿವೆ. ಈ ಪಲ್ಲಟಗಳನ್ನು ಎದುರಿಸಿ ಸಂವೇದನಾಶೀಲ ಸಮಾಜದ ನಿರ್ಮಾಣದ ಆಲೋಚನೆಗಳನ್ನು ಜನಮಾನಸದ ನಡುವೆ ಕೊಂಡೊಯ್ಯು ವುದು ಸಾಂಸ್ಕ ತಿಕ ಜಗತ್ತಿನ ಮೇಲಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಚಿತ್ರರಂಗ ಮತ್ತು ಸಾಹಿತ್ಯ ಎರಡೂ ವಲಯಗಳು ವರ್ತಮಾನದ ತಲ್ಲಣಗಳಿಗೆ ಸಮರ್ಪಕವಾಗಿ ಸ್ಪಂದಿಸಲು ವಿಫಲವಾಗಿವೆ. ಆದರೆ ಕನ್ನಡದ ರಂಗಭೂಮಿ ಈ ನಿಟ್ಟಿನಲ್ಲಿ ಹೆಚ್ಚು ಚಲನಶೀಲತೆಯಿಂದ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ. ಮೈಸೂರಿನ ರಂಗಭೂಮಿಯ ಬಳಗ ಈ ನಿಟ್ಟಿನಲ್ಲಿ ಮುಂಚೂಣಿಯಲ್ಲಿದೆ ಎಂದರೆ ಉತ್ಪ್ರೇಕ್ಷೆಯಾಗಲಾರದು. ಚರಿತ್ರೆ, ವರ್ತಮಾನ, ಪುರಾಣ ಮತ್ತು ಸಮಕಾಲೀನ ಸಮಾಜದ ತುಡಿತಗಳನ್ನು ಪ್ರೇಕ್ಷಕರ ಮುಂದಿಡುವ ಮೂಲಕ ಮೈಸೂರಿನ ರಂಗತಂಡಗಳು ರಂಗಪ್ರಯೋಗದ ಹೊಸ ಆಯಾಮಗಳನ್ನೂ ಕಂಡುಕೊಳ್ಳುತ್ತಿವೆ.

ನಿರಂತರ ಪಯಣದ ಹಾದಿಯಲ್ಲಿ ರಂಗೋತ್ಸವ: ಈ ಹಾದಿಯಲ್ಲಿ ಗುರುತಿಸಬಹುದಾದ ಒಂದು ರಂಗತಂಡ ಎಂದರೆ ಕಳೆದ ೨೫ ವರ್ಷಗಳಿಂದಲೂ ಸಾಂಸ್ಕ ತಿಕ ನೊಗವನ್ನು ಹೊತ್ತು ಇಂದಿಗೂ ಕ್ರಿಯಾಶೀಲವಾಗಿ ಸಾಗುತ್ತಿರುವ ನಿರಂತರ ಫೌಂಡೇಷನ್. ಇಡೀ ಸಮಾಜವನ್ನು ಆವರಿಸಿರುವ ಸಾಂಸ್ಕ ತಿಕ- ಬೌದ್ಧಿಕ ಜಡತ್ವವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ನಿರಂತರ ಫೌಂಡೇಷನ್ ಹಲವು ಆಯಾಮಗಳ ರಂಗಪ್ರಯೋಗಗಳನ್ನು ಮಾಡುತ್ತಲೇ ಬಂದಿರು ವುದಷ್ಟೇ ಅಲ್ಲದೆ, ಪ್ರತಿ ವರ್ಷ ‘ನಿರಂತರ ರಂಗೋತ್ಸವ’ ಏರ್ಪಡಿಸುವ ಮೂಲಕ ರಂಗಾಸಕ್ತರಿಗೆ ಹೊಸ ಪ್ರಯೋಗಗಳನ್ನು ತೆರೆದಿಡುತ್ತಿದೆ. ರಂಗಭೂಮಿ ಯನ್ನು ಕೇವಲ ಥಿಯೇಟರ್ ಒಳಗೆ ಕಟ್ಟಿಹಾಕದೆ, ಸಾಮಾಜಿಕ ಕಾಳಜಿ ಮತ್ತು ಕಳಕಳಿಯನ್ನು ಬಿಂಬಿಸುವ ಮೂಲಕ, ಸುತ್ತಲಿನ ಸಮಾಜದ ವ್ಯತ್ಯಯಗಳಿಗೆ ಸ್ಪಂದಿಸುತ್ತಾ ಬಂದಿರುವ ನಿರಂತರ ಫೌಂಡೇಷನ್ ಸಮಕಾಲೀನ ಆಧುನಿಕತೆ ಯನ್ನು ಪರಂಪರೆಯೊಂದಿಗೆ ಮುಖಾಮುಖಿಯಾಗಿಸುವ ಮೂಲಕ ತನ್ನ ರಂಗಪ್ರಯೋಗಗಳನ್ನು ಮಾಡುತ್ತಾ ಬಂದಿದೆ. ಇದು ಕಾಲದ ಅನಿ ವಾರ್ಯತೆಯೂ ಹೌದು. ಈ ವರ್ಷ ನಿರಂತರ ಫೌಂಡೇಷನ್ ಮೈಸೂರಿನ ಕಲಾಮಂದಿರ ಆವರಣದಲ್ಲಿರುವ ಕಿರುರಂಗಮಂದಿರದಲ್ಲಿ ಆರು ದಿನಗಳ ರಂಗ ಉತ್ಸವವನ್ನು ಏರ್ಪಡಿಸಿರುವುದು, ಮೈಸೂರಿನ ರಂಗಾಸಕ್ತರಿಗಷ್ಟೇ ಅಲ್ಲದೆ ಸಂಗೀತ-ಕಲಾ ರಸಿಕರಿಗೂ ಆಕರ್ಷಣೀಯವಾಗಿದೆ.

ಡಿಸೆಂಬರ್ ೨೫ರಂದು ಮೈಸೂರಿನ ಸಮತೆಂತೋ ಪ್ರಸ್ತುತ ಪಡಿಸುವ ಏಕವ್ಯಕ್ತಿ ರಂಗಪ್ರಯೋಗ ‘ನೀರ್ಮಾದಳ ಹೂವಿನೊಂದಿಗೆ’ ಪ್ರದರ್ಶನ ಗೊಳ್ಳಲಿದೆ. ಹಿರಿಯ ಕಲಾವಿದೆ ಇಂದಿರಾ ನಾಯರ್ ಅಭಿನಯದ ಈ ಪ್ರಯೋಗದಲ್ಲಿ, ಶ್ರೀಪಾದಭಟ್ ನಿರ್ದೇಶನದಲ್ಲಿ, ತಮ್ಮ ಜೀವನದುದ್ದಕ್ಕೂ ವಿಪ್ಲವಗಳನ್ನೇ ಎದುರಿಸುತ್ತಾ ಸಾಂಪ್ರದಾಯಿಕ ಸಮಾಜಕ್ಕೆ ಸೆಟೆದು ನಿಲ್ಲುವ ಮೂಲಕ ತಮ್ಮ ಸಾಹಿತ್ಯಕ ಅಭಿವ್ಯಕ್ತಿಯನ್ನು ದಾಖಲಿಸಿರುವ ಕಮಲಾ ದಾಸ್ ಅವರ ಜೀವನ ಮತ್ತು ವ್ಯಕ್ತಿತ್ವವನ್ನು ಬಿಂಬಿಸುವ ಪ್ರಯತ್ನವಿದೆ. ಸಮಕಾಲೀನ ಸಂದರ್ಭದಲ್ಲಿ ಕಮಲಾ ದಾಸ್ ಅವರನ್ನು ಹೇಗೆ ನೋಡುವುದು ಎಂಬ ಪರಿಕಲ್ಪನೆಯಲ್ಲಿ ತಯಾರಾಗಿರುವ ಏಕವ್ಯಕ್ತಿ ಪ್ರಯೋಗವಿದು.

ಡಿಸೆಂಬರ್ ೨೬ರಂದು ವೀರಗಾಸೆ ಜನಪದ ನೃತ್ಯದೊಂದಿಗೆ ಉದ್ಘಾಟನೆಯಾಗಲಿರುವ ನಿರಂತರ ರಂಗ ಉತ್ಸವ ಸಂಜೆ ಏಳು ಗಂಟೆಗೆ ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ವಿರಚಿತ ನಾಟಕವೊಂದರ ಕನ್ನಡ ರೂಪಾಂತರವನ್ನು ‘ತಿಂಡಿಗೆ ಬಂದ ತುಂಡೇರಾಯ’ ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಗುತ್ತಿದೆ. ಶಕೀಲ್ ಅಹಮದ್ ನಿರ್ದೇಶನದಲ್ಲಿ ನಿರ್ದಿಗಂತ ತಂಡವು ಪ್ರಸ್ತುತಪಡಿಸುತ್ತಿರುವ ಈ ನಾಟಕವು ಜಗತ್ತನ್ನೇ ಅಂಧಕಾರದತ್ತ ನೂಕಿದ್ದ ಜರ್ಮನಿಯ ನಾಝಿ ಪಕ್ಷದ ಬೆಳವಣಿಗೆ ಮತ್ತು ಹಿಟ್ಲರ್‌ನ ಕ್ರೂರ ಆಳ್ವಿಕೆಯ ಸುತ್ತ ಘಟನೆಗಳನ್ನು ಪ್ರಸ್ತುತಪಡಿಸುತ್ತದೆ.

ಡಿಸೆಂಬರ್ ೨೭ರಂದು ಡಾ. ಹಂಪನಾ ವಿರಚಿತ ದೇಸೀ ಮಹಾಕಾವ್ಯ ‘ಚಾರು ವಸಂತ’ ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಮೂಡುಬಿದಿರೆಯ ಆಶ್ರಯದಲ್ಲಿ ಜೀವನ್‌ರಾಮ್ ಸುಳ್ಯ ಅವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳಲಿದೆ. ಅಮರ ಪ್ರೇಮ ಕಥನವನ್ನು ಸಾಮಾನ್ಯರಿಗೂ ನಿಲುಕುವ ಮಾದರಿಯಲ್ಲಿ ಕಾವ್ಯಾತ್ಮಕವಾಗಿ ಬಿಂಬಿಸುವ ಈ ನಾಟಕದ ಮೂಲಕ, ಮನುಷ್ಯನ ಸಹಜ ಸ್ವಭಾವವು ಹೇಗೆ ವ್ಯತ್ಯಯಗಳನ್ನು ಗೆಲ್ಲುತ್ತಾ ಒಂದು ವ್ಯಕ್ತಿತ್ವವನ್ನು ನಿರ್ಮಿಸುವ ಹಾದಿಯಲ್ಲಿ ಎದುರಾಗುವ ಅಂಕುಡೊಂಕುಗಳನ್ನು ನಿವಾರಿಸಿಕೊಂಡು ಔನ್ನತ್ಯಕ್ಕೇರಲು ಸಹಾಯ ಮಾಡುತ್ತದೆ ಎನ್ನುವುದನ್ನು ಹಂಪನಾ ಅವರ ಚಾರು ವಸಂತ ಕಾವ್ಯಾತ್ಮಕವಾಗಿ ತೆರೆದಿಡುತ್ತದೆ. ಇದೊಂದು ವಿಶಿಷ್ಟ ರಂಗಪ್ರಯೋಗ ಎನ್ನುವುದರಲ್ಲಿ ಎರಡು ಮಾತಿಲ್ಲ.

ನಾಲ್ಕನೇ ದಿನ ಡಿಸೆಂಬರ್ ೨೮ರಂದು ಸಂಜೆ ಏಳು ಗಂಟೆಗೆ ರಂಗಾಸಕ್ತರನ್ನು ಸೆಳೆಯುವ, ಇತ್ತ ಸಂಗೀತ ರಸಿಕರನ್ನೂ ಸೂರೆಗೊಳ್ಳುವ ಶಾಸ್ತ್ರೀಯ ಹಿಂದುಸ್ತಾನಿ ಗಾಯನವನ್ನು ನಮ್ಮ ನಡುವಿನ ಮೇರು ಪ್ರತಿಭೆ ‘ಉಸ್ತಾದ್ ಫಯಾಜ್ ಖಾನ್’ ಪ್ರಸ್ತುತಪಡಿಸಲಿದ್ದಾರೆ. ಖ್ಯಾಲ್ ಸಂಗೀತ ಮತ್ತು ತಬಲಾ ಹಾಗೂ ಸಾರಂಗಿ ವಾದನದಲ್ಲಿ ಪ್ರಾವೀಣ್ಯತೆಯನ್ನೂ, ವಿಶ್ವಖ್ಯಾತಿಯನ್ನೂ ಗಳಿಸಿರುವ ಕಿರಾನಾ ಘರಾನದ ಫಯಾಜ್ ಖಾನ್ ಅವರ ಗಾಯನದಲ್ಲಿ ಶ್ರೋತೃಗಳನ್ನು ಮಂತ್ರಮುಗ್ಧರನ್ನಾಗಿಸುವ ಒಂದು ಮಾಂತ್ರಿಕ ಶಕ್ತಿ ಅಡಗಿದೆ. ರಂಗ ಉತ್ಸವದಲ್ಲಿ ಶಾಸ್ತ್ರೀಯ ಗಾಯನಕ್ಕೆ ಅವಕಾಶ ಕೊಡುವ ಪ್ರಯತ್ನವೇ ರಂಗಭೂಮಿಯ ವೈವಿಧ್ಯತೆಯನ್ನು ಕಾಪಾಡುವ ಒಂದು ಸಪ್ರಯತ್ನ.

ಐದನೇ ದಿನ ಡಿಸೆಂಬರ್ ೨೯ರಂದು ಸಂಜೆ ಏಳುಗಂಟೆಗೆ ರಾಯಚೂರು ಸಮುದಾಯ ಅಭಿನಯಿಸುವ ‘ರಕ್ತವಿಲಾಪ’ ಪ್ರವೀಣ್ ರೆಡ್ಡಿ ಗುಂಜಹಳ್ಳಿ ಅವರ ನಿರ್ದೇಶನದಲ್ಲಿ ಪ್ರದರ್ಶನವಾಗಲಿದೆ. ವಿಕ್ರಂ ವಿಸಾಜಿ ರಚನೆಯ ಈ ನಾಟಕವು ಸತ್ಯ ಮತ್ತು ಸುಳ್ಳಿನ ನಡುವಿನ ತಾತ್ವಿಕ ಸಂಘರ್ಷವನ್ನು ವಿಭಿನ್ನ ಶೈಲಿಯಲ್ಲಿ ಬಿಂಬಿಸುತ್ತದೆ. ದೇಶದಲ್ಲಿ ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ರಾಜಕೀಯವಾಗಿ ಸುಳ್ಳುಗಳೇ ವಿಜೃಂಭಿಸುತ್ತಿರುವ ಕಾಲಘಟ್ಟದಲ್ಲಿ ನಾವಿದ್ದೇವೆ. ಈ ಜಟಿಲ ಸನ್ನಿವೇಶದಲ್ಲಿ ಸತ್ಯಶೋಧನೆ ಎನ್ನುವುದು ಹಿಮಾಲಯ ಚಾರಣದಷ್ಟೇ ಕಠಿಣವೂ, ಸಂಕೀರ್ಣವೂ ಆಗಿದೆ. ‘ರಕ್ತವಿಲಾಪ’ ನಾಟಕದಲ್ಲಿ ಈ ಹಾದಿಯಲ್ಲಿನ ತುಮುಲಗಳನ್ನು, ಸವಾಲುಗಳನ್ನು ಎದುರಿಸುವ ಸತ್ಯಶೋಧನೆಯ ವಿವಿಧ ಆಯಾಮಗಳನ್ನು ಬಿಂಬಿಸಲಾಗಿದೆ. ವರ್ತಮಾನದ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಎನಿಸಬಹುದಾದ ಪ್ರಯೋಗ ಇದು.

ಕೊನೆಯ ದಿನ ಡಿಸೆಂಬರ್ ೩೦ರಂದು, ಸಮಾರೋಪ ಸಮಾರಂಭದಲ್ಲಿ ನಗಾರಿ ಮಂಜು ಮೈಸೂರು ಮತ್ತು ತಂಡದವರಿಂದ ನಗಾರಿ ಮತ್ತು ತಮಟೆ ವಾದನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜಾನಪದ ಮತ್ತು ರಂಗಭೂಮಿಯ ಸಾಂಸ್ಕ ತಿಕ ನಂಟನ್ನು ಬಿಂಬಿಸುವ ಒಂದು ಪ್ರಯೋಗಶೀಲ ಪ್ರಯತ್ನ ಇದಾಗಿದೆ. ಇದೇ ಸಂಜೆ ಏಳು ಗಂಟೆಗೆ ಭಳರೇ ವಿಚಿತ್ರಂ ಹೆಗ್ಗೋಡು ತಂಡದ ಅಭಿನಯದಲ್ಲಿ ಮಂಜು ಕೊಡಗು ನಿರ್ದೇಶಿಸಿರುವ ‘ದಶಾನನ ಸ್ವಪ್ನಸಿದ್ಧಿ’ ನಾಟಕ ಪ್ರದರ್ಶನಗೊಳ್ಳಲಿದೆ. ಕುವೆಂಪು ವಿರಚಿತ ಶ್ರೀರಾಮಾಯಣ ದರ್ಶನಂ ಕೃತಿಯ ಆಯ್ದ ಭಾಗವನ್ನು ಈ ಪ್ರಯೋಗದಲ್ಲಿ ಪ್ರಸ್ತುತಪಡಿಸಲಾಗುತ್ತದೆ. ದೇಸೀ ಶೈಲಿಯಿಂದ ಮಾರ್ಗೀ ಶೈಲಿಯವರೆಗೆ ವಿಸ್ತರಿಸುವ ನಾಟ್ಯಶೈಲಿಯ ಈ ನಾಟಕ ಅಪರೂಪ ಎನಿಸಿಕೊಳ್ಳುವಂತಹ ವಿನ್ಯಾಸ ಮತ್ತು ಅಭಿನಯದಿಂದ ಪ್ರೇಕ್ಷಕರ ಮನಸೂರೆಗೊಳ್ಳಲಿದೆ.

ಸಮಾಜ ಮತ್ತು ಸಂಸ್ಕ ತಿಯ ಬೆಸುಗೆ: ಕನ್ನಡ ರಂಗಭೂಮಿ ಸಾಂಸ್ಕ ತಿಕ ನೊಗ ಹೊರುವ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸುತ್ತಿರುವ ಈ ಹೊತ್ತಿನಲ್ಲಿ, ಸಮಕಾಲೀನ ಸಮಾಜವು ಎದುರಿಸುತ್ತಿರುವ ಸಾಂಸ್ಕ ತಿಕ- ಧಾರ್ಮಿಕ-ರಾಜಕೀಯ ಹಾಗೂ ಆರ್ಥಿಕ ಪಲ್ಲಟಗಳನ್ನು ಶೋಽಸಿ, ಭೇದಿಸುವಂತಹ ನಾಟಕಗಳು ಹೆಚ್ಚು ಹೆಚ್ಚಾಗಿ ಬರಬೇಕಿದೆ. ಈ ಸೂಕ್ಷ್ಮ ಕೊರತೆಯನ್ನು ಮನಗಾಣುತ್ತಲೇ, ನಿರಂತರ ಫೌಂಡೇಷನ್ ಏರ್ಪಡಿಸಿರುವ ‘ನಿರಂತರ ರಂಗ ಉತ್ಸವ’ ತನ್ನ ವೈವಿಧ್ಯತೆ ಮತ್ತು ಪ್ರಯೋಗಶೀಲತೆಗಾಗಿ ತನ್ನ ಸಾಂಸ್ಕ ತಿಕ ಜವಾಬ್ದಾರಿಯನ್ನು ನಿಭಾಯಿಸುವ, ಸಮಾಜ ಮತ್ತು ಸಂಸ್ಕೃತಿ ಯನ್ನು ಬೆಸೆಯುವ ಒಂದು ಸಕಾಲಿಕ ಪ್ರಯತ್ನವಾಗಿ ಕಾಣುತ್ತದೆ. ನಿರಂತರ ಫೌಂಡೇಷನ್ ಸಂಸ್ಥೆಯ ಸಮಸ್ತರಿಗೂ ಅಭಿನಂದನೆಗಳನ್ನು ಸಲ್ಲಿಸುವುದ ರೊಂದಿಗೆ, ರಂಗೋತ್ಸವಕ್ಕೆ ಶುಭ ಕೋರುತ್ತಾ, ರಂಗ ಉತ್ಸವದ ಭಾಗಿಗಳಾಗಿ ರಂಗಾಸಕ್ತರು ಈ ಪ್ರಯತ್ನವನ್ನು ಸಾರ್ಥಕಗೊಳಿಸಬೇಕಿದೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಸರ್ಕಾರಿ ಕಾಮಗಾರಿ ಗುತ್ತಿಗೆಯಲ್ಲಿ ಮುಸ್ಲಿಂರ ಮೀಸಲಾತಿಗೆ ಸಂಪುಟ ಒಪ್ಪಿಗೆ

ಬೆಂಗಳೂರು: ಸುಮಾರು 1ಕೋಟಿ ರೂ. ವರೆಗಿನ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಮೀಸಲಾತಿ ನೀಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.…

40 mins ago

ಆನೆ ದಾಳಿಗೆ ಮಹಿಳೆ ಸಾವು: ಈಶ್ವರ ಖಂಡ್ರೆ ಸಂತಾಪ

ಬೆಂಗಳೂರು: ಬೇಲೂರು ತಾಲೂಕಿನ ಕೋಗೋಡು ಗ್ರಾಮದಲ್ಲಿ 45 ವರ್ಷದ ಮಹಿಳೆಯೊಬ್ಬರು ಕಾಡಾನೆ ದಾಳಿಯಿಂದ ಮೃತಪಟ್ಟಿರುವುದು ಅತ್ಯಂತ ನೋವಿನ ಸಂಗತಿ, ಈ…

51 mins ago

ಒಂದು ತಿಂಗಳು ʼಜಲ ಸಂರಕ್ಷಣಾ ಅಭಿಯಾನʼ: ಡಿಕೆ ಶಿವಕುಮಾರ್‌

ಬೆಂಗಳೂರು: ಜಲ ಸಂರಕ್ಷಣೆ ವಿಚಾರವಾಗಿ ರಾಜ್ಯದಲ್ಲಿ ಒಂದು ತಿಂಗಳುಗಳ ಕಾಲ ʼಜಲ ಸಂರಕ್ಷಣಾ ಅಭಿಯಾನʼ ಹಮ್ಮಿಕೊಳ್ಳಲಾಗಿದೆ ಎಂದು ಡಿಸಿಎಂ ಡಿಕೆ…

2 hours ago

ಸರ್ವಜ್ಞನಗರದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ: ಸಚಿವ ಕೆ.ಜೆ.ಜಾರ್ಜ್

ಬೆಂಗಳೂರು: ಸರ್ವಜ್ಞ ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿಯನ್ನು ಕ್ಷೇತ್ರದ ಶಾಸಕರಾದ ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಪರಿಶೀಲನೆ ನಡೆಸಿದರು.…

2 hours ago

ಹೊಸ 7 ವಿವಿಗಳನ್ನು ಮುಚ್ಚುವುದಿಲ್ಲ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗಿರುವ 7 ವಿಶ್ವವಿದ್ಯಾಲಯಗಳನ್ನು ಮುಚ್ಚುವುದಾಗಿ ನಾವು ಎಲ್ಲಿಯೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾಸಭೆಯಲ್ಲಿ…

3 hours ago

ವೈದ್ಯರ ನಿವೃತ್ತಿ ವಯಸ್ಸು ಏರಿಸಲು ಚಿಂತನೆ: ಸಚಿವ ಶರಣ ಪ್ರಕಾಶ ಪಾಟೀಲ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಮತ್ತು ತರಬೇತಿ ಪಡೆದು ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸಿತ್ತಿರುವ ತಜ್ಞ ವೈದ್ಯರ ನಿವೃತ್ತಿ ವಯಸ್ಸನ್ನು…

3 hours ago