ಎಡಿಟೋರಿಯಲ್

ಚಾ.ನಗರ ಜಿಲ್ಲಾಧಿಕಾರಿಯವರ ದಕ್ಷ ಆಡಳಿತದ ನಿರೀಕ್ಷೆಯಲ್ಲಿರುವ ಸಾರ್ವಜನಿಕರು

ಚಾಮರಾಜನಗರ ಜಿಲ್ಲೆಯ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ದಾರೆ. ಪ್ರತಿ ಮಂಗಳವಾರ ತಾಲ್ಲೂಕು ಕೇಂದ್ರಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮಾಡುತ್ತಿದ್ದಾರೆ. ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈಗಾಗಲೇ ಹನೂರು, ಕೊಳ್ಳೇಗಾಲ, ಚಾಮರಾಜನಗರ, ಗುಂಡ್ಲುಪೇಟೆ ತಾಲ್ಲೂಕು ಕಚೇರಿಗಳಿಗೂ ಭೇಟಿ ನೀಡಿ ಸಾರ್ವಜನಿಕರಿಂದ ಕುಂದುಕೊರತೆ ಆಲಿಸಿದ್ದಾರೆ. ಜಿಲ್ಲಾಧಿಕಾರಿ ಅವರ ಜನಮುಖಿ ನಡೆಗೆ ಮತ್ತು ಅಧಿಕಾರದ ದರ್ಪವಿಲ್ಲದೆ ಸರಳತೆಯಿಂದ ಕೆಲಸ ಮಾಡುವ ಅವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸಗಳು ಮತ್ತು ದಾಖಲಾತಿಗಳ ನೀಡಿಕೆ ತೀವ್ರ ವಿಳಂಬವಾಗುತ್ತಿದೆ, ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಜಿಲ್ಲೆಯ ಜನರು ಜನಪ್ರತಿನಿಧಿಗಳಿಗೆ ದೂರು ನೀಡುತ್ತಿದ್ದರು.

ಮಾಧ್ಯಮಗಳ ಮೂಲಕವೂ ಆಪಾದನೆ ಮಾಡುತ್ತಿದ್ದರು. ಇದನ್ನು ಗಮನಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಜಿಲ್ಲೆಗೆ ಭೇಟಿ ನೀಡಿದಾಗಲೆಲ್ಲಾ ಇಂತಹ ದೂರುಗಳನ್ನು ಕಡಿಮೆ ಮಾಡಲು ಏನಾದರೂ ಕ್ರಮ ಕೈಗೊಳ್ಳಿ ಎಂದು ಪದೇ ಪದೆ ಸೂಚಿಸುತ್ತಿದ್ದರು.

ಚಾಮರಾಜನಗರದ ನಗರಸಭೆಯಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಯಾವ ಕೆಲಸವು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಶಿಸ್ತು ಕ್ರಮ ಕೈಗೊಂಡಿದ್ದಾರೆ.

ಈಗ ಜಿಲ್ಲೆಯ ೫ ತಾಲ್ಲೂಕು ಕೇಂದ್ರಗಳ ಪೈಕಿ ನಾಲ್ಕು ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಾರ್ವಜನಿಕರು, ಮುಖಂಡರ ಕೋರಿಕೆಗೆ ಸ್ಪಂದಿಸಿ ಅಲ್ಲಿನ ಪ್ರಮುಖ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿಯನ್ನು ಖುದ್ದು ವೀಕ್ಷಣೆ ಮಾಡಿದ್ದಾರೆ. ಇನ್ನು ಯಳಂದೂರು ತಾಲ್ಲೂಕು ಕಚೇರಿಗೆ ಭೇಟಿ ನೀಡುವುದು ಬಾಕಿಯಿದೆ.

ಜಿಲ್ಲಾಧಿಕಾರಿ ಅವರು ಯಾವುದೇ ಗಂಭೀರ ಸಮಸ್ಯೆ ಎದುರಾದಾಗ ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಾರೆ. ಆಗಸ್ಟ್ ಮೊದಲ ವಾರ ಕೊಳ್ಳೇಗಾಲ ತಾಲ್ಲೂಕಿನ ಕಾವೇರಿ ನದಿ ಪ್ರವಾಹಪೀಡಿತ ೯ ಗ್ರಾಮಗಳಿಗೆ, ಸುವರ್ಣಾವತಿ ಹೊಳೆ ನೀರಿನಿಂದ ಜಲಾವೃತಗೊಂಡಿದ್ದ ಯಳಂದೂರು ತಾಲ್ಲೂಕಿನ ಗಣಿಗನೂರು, ಹುಲಿ ದಾಳಿ ನಡೆಸಿದ ಗೋಪಾಲಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಜಿಲ್ಲಾಧಿಕಾರಿಗಳು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡುವ ಜೊತೆಗೆ ನಗರದ ಹೊರವಲಯದಲ್ಲಿರುವ ಚಾಮರಾಜನಗರ ಜಿಲ್ಲಾ ಸರ್ಕಾರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಸಿಮ್ಸ್) ಬೋಧನಾ ಆಸ್ಪತ್ರೆಗೆ, ನಗರದಲ್ಲಿರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ, ಯಳಂದೂರು, ಗುಂಡ್ಲುಪೇಟೆ, ಹನೂರು, ಕೊಳ್ಳೇಗಾಲದ ತಾಲ್ಲೂಕು ಮಟ್ಟದ ಸರ್ಕಾರಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ, ಅಲ್ಪ ಸಂಖ್ಯಾತರ ಮಕ್ಕಳು ವಾಸವಿರುವ ಹಾಸ್ಟೆಲ್‌ಗಳಿಗೆೆ, ಪ್ರವಾಸಿ ತಾಣಗಳು, ಪವಿತ್ರ ಯಾತ್ರಾಸ್ಥಳಗಳಿಗೆ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲಿಸಬೇಕು.

ಈಗ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿ ಆಗಿರುವ ಬಿ.ಬಿ.ಕಾವೇರಿ ಅವರು ಇದೇ ಜಿಲ್ಲೆಯ ಜಿಲ್ಲಾಧಿಕಾರಿ ಆಗಿದ್ದಾಗ ೨೦೧೮ ಡಿಸೆಂಬರ್‌ನಲ್ಲಿ ಹನೂರು ತಾಲ್ಲೂಕಿನ ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಾಲಯದಲ್ಲಿ ವಿಷಮಿಶ್ರಿತ ಪ್ರಸಾದ ಸೇವಿಸಿ ೭ ಜನರು ಮೃತಪಟ್ಟು, ಹಲವರು ಅಸ್ವಸ್ಥರಾದರು.

ಜಿಲ್ಲಾ ಕೇಂದ್ರವಾದ ಚಾಮರಾಜನಗರದಲ್ಲಿದ್ದ ಜಿಲ್ಲಾಸ್ಪತ್ರೆಯಲ್ಲಿ ವೆಂಟಿಲೇಟರ್ ವ್ಯವಸ್ಥೆ ಇಲ್ಲದ ಕಾರಣ ಅಸ್ವಸ್ಥರನ್ನು ಮೈಸೂರಿನ ಆಸ್ಪತ್ರೆಗಳಿಗೆ ದಾಖಲಿಸಿ ಜೀವ ಉಳಿಸಿದ್ದರು. ಇಂತಹ ದಿಟ್ಟ ಕಾರ್ಯ ವೈಖರಿಯನ್ನು ಜಿಲ್ಲೆಯ ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಕಾವೇರಿ ಅವರಂತೆಯೇ ಚಾರುಲತಾ ದಿಟ್ಟ ನಿಲುವು ತೆಗೆದುಕೊಂಡು ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಕೆಲಸಗಳು ತ್ವರಿತವಾಗಿ ಸಾಗುವಂತೆ ಚಾಟಿ ಬೀಸಬೇಕು. ಜಿಲ್ಲೆಯಲ್ಲಿ ಇರುವಷ್ಟು ದಿನಗಳು ಸ್ಮರಣೀಯ ಕೆಲಸಗಳನ್ನು ಮಾಡಬೇಕು.

ಹಿಂದೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದ ಹರ್ಷಗುಪ್ತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾಗಿದ್ದ ಮಧುಕರಶೆಟ್ಟಿ, ಅವರು ದಕ್ಷ ಆಡಳಿತಕ್ಕೆ ಹೆಸರುವಾಸಿಯಾಗಿದ್ದರು. ಸರಳತೆ, ಸಜ್ಜನಿಕೆಯಿಂದ ಕೂಡಿರುವ ಚಾರುಲತಾ ಸೋಮಲ್ ಅವರಿಂದ ಜಿಲ್ಲೆಯ ಜನರು ಸ್ವಚ್ಛ, ದಕ್ಷ ಆಡಳಿತವನ್ನು ನಿರೀಕ್ಷೆ ಮಾಡಿದ್ದಾರೆ. ಇದನ್ನು ಅವರು ಹುಸಿ ಮಾಡದಿರಲಿ.

andolana

Recent Posts

ವಿಶ್ವದ 2ನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜ ಅನಾವರಣಗೊಳಿಸಿದ ಸಿಎಂ

ಬೆಳಗಾವಿ: ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಸಿಎಂ ಸಿದ್ದರಾಮಯ್ಯ ಅವರಿಂದು ವಿಶ್ವದಲ್ಲೇ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದರು.…

11 mins ago

ನಟ ರಿಷಬ್‌ ಶೆಟ್ಟಿ ತೊಡೆ ಮೇಲೆ ಮಲಗಿದ್ದು ಪಂಜುರ್ಲಿಯಲ್ಲ ನರ್ತಕ: ಸೋಷಿಯಲ್‌ ಮೀಡಿಯಾದಲ್ಲಿ ಆಕ್ರೋಶ

ಬೆಂಗಳೂರು: ಇತ್ತೀಚೆಗೆ ಮಂಗಳೂರಿನಲ್ಲಿ ಹರಕೆ ಕೋಲಾ ಮಾಡಿಸಿದ್ದ ರಿಷಬ್‌ ಶೆಟ್ಟಿ ತೊಡೆ ಮೇಲೆ ದೈವಾರಾಧಕ ಮಲಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.…

14 mins ago

ಇಂಡಿಗೋ ಏರ್‌ಲೈನ್ಸ್‌ಗೆ ಕೇಂದ್ರ ಸರ್ಕಾರದಿಂದ ಮೂಗುದಾರ: ಚಳಿಗಾಲ ವೇಳಾಪಟ್ಟಿ ಕಡಿತ

ನವದೆಹಲಿ: ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆ ಇಂಡಿಗೋದ ಕಾರ್ಯಾಚರಣೆಯಲ್ಲಿ ಅಸ್ತವ್ಯಸ್ತ ಉಂಟಾಗಿದ್ದು, ಪ್ರಯಾಣಿಕರು ಹಿಡಿಶಾಪ ಹಾಕುತ್ತಿದ್ದಾರೆ. ಕಳೆದ ಒಂದು ವಾರದಿಂದ…

25 mins ago

ಬಿಜೆಪಿ ಹೋರಾಟ ನಡೆಸಬೇಕಾಗಿದ್ದು ಕೇಂದ್ರ ಸರ್ಕಾರದ ವಿರುದ್ಧ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನ ಎರಡನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯ ಸರ್ಕಾರದ ವಿರುದ್ಧ ಇಂದು 9ಕ್ಕೂ ಹೆಚ್ಚು…

1 hour ago

ಶಾಲಾ ಬಸ್ ತಡೆದು ಬಾಲಕಿಯನ್ನು ವಶಕ್ಕೆ ನೀಡುವಂತೆ ಕಿರಿಕ್: ಪುಂಡರಿಬ್ಬರ ಬಂಧನ

ಕೆ.ಆರ್.ಪೇಟೆ: ಗಾಂಜಾ ಮತ್ತು ಮಧ್ಯ ಸೇವಿಸಿದ ಅಮಲಿನಲ್ಲಿ ಶಾಲಾ ಬಸ್ ತಡೆದು, ಅಪ್ರಾಪ್ತ ಬಾಲಕಿಯನ್ನು ತಮ್ಮ ವಶಕ್ಕೆ ನೀಡುವಂತೆ ಕಿರಿಕ್…

1 hour ago

ಓದುಗರ ಪತ್ರ: ಸರ್ಕಾರಿ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿ

ಇತ್ತೀಚೆಗೆ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ರಾಜ್ಯದ ಅನೇಕ ಸರ್ಕಾರಿ ಶಾಲೆಗಳು ಹಳೆಯ ಮತ್ತು ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಂಡು…

1 hour ago