ಅದೊಂದು ವರದಕ್ಷಿಣೆ ಕಿರುಕುಳದ ಕೇಸು. ಮದುವೆಯಾದ ಮೂರೇ ವರ್ಷಕ್ಕೆ ಆ ಹೆಣ್ಣು ಮಗಳು ನೇಣಿಗೆ ಶರಣಾಗಿದ್ದಳು. ಅದು 1996. ನಾನಾಗ ಲಷ್ಕರ್ ಠಾಣೆಯ ಇನ್ಸ್ಪೆಕ್ಟರ್. ಮಹಿಳಾ ಠಾಣೆಯ ಉಸ್ತುವಾರಿ ಹೊಣೆಯೂ ನನ್ನ ಹೆಗಲೇರಿತ್ತು.
ಹೆಣ ಶವಾಗಾರದಲ್ಲಿತ್ತು. ಶವದ ಮೇಲಿನ ತನಿಖಾ ಮಹಜರೇನೋ ಮುಗಿದಿತ್ತು. ಆದರೆ ಮೃತಳ ಬಗ್ಗೆ ರಕ್ತ ಸಂಬಂಧಿಗಳ ಹೇಳಿಕೆ ಇನ್ನೂ ಪಡೆದಿರಲಿಲ್ಲ. ಅದೋ ಶವಾಗಾರದ ಎದುರಿನ ಖಾಲಿಜಾಗ. ಕೂರುವುದಕ್ಕೇ ಆಗದು. ಇನ್ನು ಬರೆಯುವುದಕ್ಕೆ ಸಾಧ್ಯವೇ? ‘ಇಲ್ಲಿ ಟೇಬಲ್ ಕುರ್ಚಿ ಏನೂ ಇಲ್ಲ. ಬರೆಯಲು ಕಷ್ಟ. ಹೇಳಿಕೆ ಕೊಡುವವರೆಲ್ಲಾ ಮಹಿಳಾ ಠಾಣೆಗೆ ಹೋಗಿ, ಉಳಿದವರು ಇಲ್ಲಿರಲಿ. ಅಷ್ಟರಲ್ಲಿ ಪೋಸ್ಟ್‌ಮಾರ್ಟಂ ಮುಗಿದಿರುತ್ತೆ. ನೀವು ಬೆಂಗಳೂರಿಗೆ ಬೇಗ ಹೋಗಬಹುದು‘ ಎಂದು ಹೇಳಿ ರಕ್ತಸಂಬಂಧಿಗಳನ್ನು ಮಹಿಳಾ ಠಾಣೆಗೆ ಕಳಿಸಿಕೊಟ್ಟೆ.
ಮೃತಳ ಕಡೆಯವರು ಬೆಂಗಳೂರಿನ ಶ್ರೀಮಂತ ಪ್ರಭಾವಿಗಳು. ಪೋಸ್ಟ್ ಮಾರ್ಟಂ ಆದಮೇಲೆ ಬೆಂಗಳೂರಿನಲ್ಲೇ ಶವಸಂಸ್ಕಾರ ಮಾಡಿಸಬೇಕೆಂದು ತೀರ್ಮಾನಿಸಿದ್ದರು. ಮೃತಳ ಗಂಡನ ಕಡೆಯವರೊಬ್ಬರೂ ಅಲ್ಲಿರಲಿಲ್ಲ.
ಬೆಂಗಳೂರಿನಿಂದ ಒಂದೇ ಸಮನೆ ಮಂತ್ರಿ ಮಹೋದಯರ, ನಾನಾ ಅಧಿಕಾರಿಗಳ ಕರೆಗಳು ಶುರುವಾದವು.
“ಪೋಸ್ಟ್‌ಮಾರ್ಟಂ ಅರ್ಜೆಂಟ್ ಮಾಡಿಸಿ ಕಳಿಸಿಕೊಡಿ. ಬೆಂಗಳೂರಲ್ಲೇ ದಫನ್ ಮಾಡಿಸುತ್ತಾರಂತೆ. ನೆಂಟರಿಷ್ಟರೆಲ್ಲಾ ಇಲ್ಲೇ ಕಾದಿದ್ದಾರೆ“
ಶವಾಗಾರದ ಒಳಗೆ ಹೋದರೆ 14-15 ಹೆಣಗಳು ಸಾಲಾಗಿ ಪೋಸ್ ಮಾರ್ಟಂಗಾಗಿ ಕಾದಿವೆ. ಹಿಂದಿನ ದಿನವೇ ಮಾಡಬೇಕಿದ್ದ ಶವಗಳೂ ಹಾಗೇ ಮಲಗಿವೆ. ಇರುವವರೋ ಇಬ್ಬರೇ ಡಾಕ್ಟರು. ಹೆಣ ಕೊಯ್ಯುವ ಸಿಬ್ಬಂದಿಯ ಕೊರತೆ. ನಮಗೇನೋ ಅರ್ಜೆಂಟ್ ಅಂದರೆ ವೈದ್ಯರು ಅಡ್ಡಾದಿಡ್ಡಿಯಾಗಿ ಪೋಸ್ಟ್‌ಮಾರ್ಟಂ ಮಾಡಲಾದೀತೇ? ಅಡಿಯಿಂದ ಮುಡಿಯವರೆಗೂ ಕತ್ತರಿಸಿ ಕೂಲಂಕಷವಾಗಿ ಪರೀಕ್ಷಿಸಿ, ಸಾವಿಗೆ ನಿಜವಾದ ಕಾರಣವೇನೆಂಬ ವರದಿಯನ್ನು ಅಧಿಕೃತವಾಗಿ ನೀಡಬೇಕು. ಅದರಲ್ಲಿ ಕೊಂಚ ಎಡವಟ್ಟಾದರೂ ಕುತ್ತಿಗೆಗೆ ಬರುತ್ತದೆ. ಹೂತ ಹೆಣವನ್ನು ಹೊರತೆಗೆಸಿ ಮರುಪರೀಕ್ಷೆ ಮಾಡಿಸುತ್ತೇವೆಂದು ಗಲಾಟೆ ಮಾಡುವವರಿಗೂ ಕೊರತೆ ಇಲ್ಲ.
ಶವಾಗಾರದ ಎದುರಿಗೆ ಗೊಳೋ ಎನ್ನುತ್ತಿದ್ದ ಹತ್ತಾರು ಆಕ್ರಂದನದ ಗುಂಪುಗಳು. ಸಂಕಟದ ಅಳು, ಚೀರಾಟ ಕಣ್ಣೀರ ಕೋಡಿ ಹರಿಸಿತ್ತು. ಸುದ್ದಿ ಕೇಳಿ ಬಂದಿದ್ದ ಜನರೂ ನೂರಾರು. ಎಲ್ಲರಿಗೂ ಪೋಸ್ಟ್ ಮಾರ್ಟಂನ ಅರ್ಜೆಂಟು. ನಮ್ಮ ಕೇಸಿನ ಬೆಂಗಳೂರು ಯುವತಿಯ ಶವ ಈಗಿನ್ನೂ ಹನ್ನೊಂದು ಗಂಟೆಗೆ ಬಂದಿದೆ. ಸರದಿ ಬಿಟ್ಟು ನಮ್ಮದನ್ನು ಮೊದಲು ಮಾಡಿಸಲು ಹೋದರೆ, ಬೇರೆ ಹೆಣಗಳ ಸಂಬಂಧಿಕರ ಆಕ್ರೋಶ ಎದುರಿಸುವುದು ಕಷ್ಟ.
ಶವಾಗಾರದ ಒಳಗಡೆ ಹೋಗಿ ವೈದ್ಯರನ್ನು ಕಂಡು ಪರಿಸ್ಥಿತಿ ವಿವರಿಸಿ ವಿನಂತಿಸಿದೆ.
“ನೀವೇ ನೋಡ್ತಿದ್ದೀರಿ. ಇನ್ನೂ ಹದಿಮೂರು ಹೆಣಗಳಿವೆ. ನಾನಿರೋದು ಒಬ್ಬ. ಇನ್ನೊಬ್ಬ ಡಾಕ್ಟರ್ ಈವತ್ತೇ ರಜಾ ಹಾಕಿದ್ದಾರೆ. ಇವುಗಳ ಸಂಬಂಧಿಕರು ಒಬ್ಬೊಬ್ಬರೂ ನಾನಾ ಒತ್ತಡ ತರುತ್ತಿದ್ದಾರೆ. ಬೇಗ ಮುಗಿಸಿಕೊಡಿ ಅಂತ. ನಿಮ್ಮದಾದರೆ ಮಿನಿಸ್ಟ್ರು ಇನ್ ಫ್ಲುಯೆನ್ಸು. ಬೆಂಗಳೂರಿನಿಂದ ಬರ್ತಿದೆ. ಇವರುಗಳದ್ದು ನೋಡಿ ಎಲ್ಲ ಇಲ್ಲಿಯ ಕಾರ್ಪೊರೇಟರ್ಗಳು, ಜಿಲ್ಲಾ ಪಂಚಾಯಿತಿಯವರು, ಲೋಕಲ್ ಲೀಡರ್ಗಳದ್ದು. ಇವರೆಲ್ಲಾ, ನಮ್ಮದು ಆಯ್ತಾ ಆಯ್ತಾ ಅಂತ ಎಲ್ಲ ಇಲ್ಲೇ ತಲೇ ಮೇಲೆ ಕೂತಿದ್ದಾರೆ. ಶವಾಗಾರದ ಒಳಕ್ಕೆ ಬರಬೇಡಿ ಅಂದರೂ ಕೇಳೋದಿಲ್ಲ. ಒಳಗೆ ಬಂದು ಬಂದು ಇಣುಕಿ ಇಣುಕಿ ಹೋಗ್ತಿದ್ದಾರೆ.”
“ನಮ್ಮ ಪೊಲೀಸ್ನೋರನ್ನೆ ಯಾರನ್ನಾದ್ರೂ ಬಾಗಿಲಲ್ಲಿ ನಿಲ್ಲಿಸ ಬೇಕಿತ್ತು ನೀವು” ಎಂದೆ.
“ಅವರೂ ಹೇಳಿ ಹೇಳಿ ಸಾಕಾಗಿ ಹೋದರು ಕಣ್ರೀ. ಒಂದು ಪೋಸ್ಟ್ ಮಾರ್ಟಂ ಮುಗಿದ ಮೇಲೆ ಮುಂದಿನ ಹೆಣ ಯಾವುದು ಅನ್ನೋದು ನನಗಿಂತ ಈ ಲೀಡರ್‌ಗಳಿಗೇ ಚೆನ್ನಾಗಿ ಗೊತ್ತಿದೆ. ಈ ಕ್ಯೂ ಕೊಂಚ ಮಿಸ್ ಆದರೂ ವರಾತ ಶುರು ಮಾಡ್ತಾರೆ” ವೈದ್ಯರು ಅಸಹಾಯಕತೆ ತೋಡಿಕೊಂಡರು.
ಯಾವುದಾದರೂ ಒಂದು ಛಾನ್ಸ್ ನೋಡಿ ಪೋಸ್ಟ್‌ಮಾರ್ಟಂ ಮಾಡಿಸಿ ಬಿಡೋಣ ಎಂದು ಶವಾಗಾರದೊಳಗೇ ನಾನೂ ಕುಳಿತೆ. ಹೆಣಗಳ ದುರ್ನಾತ ಹೊಸದಲ್ಲವಾದರೂ, ಹತ್ತಾರು ಹೆಣಗಳ ಕೊಳೆಯುವಿಕೆಯ ದುರ್ನಾತ ಮಿಳಿತವಾಗಿ ಮೂಗಿಗೇ ಅಡರುತ್ತಿತ್ತು. ಇನ್ನೇನು ವಾಂತಿಯಾಗಿಬಿಡುತ್ತದೆ ಎಂಬಷ್ಟು ಹೇವರಿಕೆ ಬಂತು.
ಆಗೆಲ್ಲ ಮೊಬೈಲ್ ಇರಲಿಲ್ಲ. ಮೇಲಧಿಕಾರಿಗಳದ್ದು ವೈರ್‌ಲೆಸ್‌ನಲ್ಲಿ ಒಂದೇ ವರಾತ. ಶವಾಗಾರದಿಂದ ಹೊರ ಹೋಗಿ ಯಾರದೋ ಅಂಗಡಿ ಫೋನಿನಿಂದ ಮಾತಾಡಿದರೆ, “ಯಾಕಿಷ್ಟು ತಡ? ಏನು ಮಾಡ್ತಿದ್ದೀರಿ? ಬೇಗ ಮಾಡುಸ್ರೀ. ಒಂದೇ ಸಮ ಫೋನ್ ಬರ್ತಿವೆ ಗೊತ್ತಾಯ್ತಾ?”
ಅವರಿಗೆ ಪರಿಸ್ಥಿತಿ ವಿವರಿಸಿದರೆ, “ಏನ್ರೀ ಒಬ್ಬ ಇನ್‌ಸ್ಪೆಕ್ಟರಾಗಿದ್ದುಕೊಂಡು ಇಲ್ಲದ ಕತೆ ಹೊಡಿತೀರಲ್ರೀ? ಅರ್ಧ ಗಂಟೇಲಿ ಮುಗಿದು ಹೋಗೋ ಕೆಲ್ಸಕ್ಕೆ ಇಷ್ಟು ಹೊತ್ತೇ? ಯಾಕೆ ಡಾಕ್ಟರೇನಾದ್ರೂ ಎಕ್ಸ್‌ಪೆಕ್ಟ್ ಮಾಡ್ತಿದ್ದಾರಾ?”
“ನೋ ನೊ ಸರ್. ನಿನ್ನೆ ಮೊನ್ನೆಯ ಹೆಣಗಳೂ ಸೇರಿದಂತೆ 13 ಹೆಣಗಳು ಬಿದ್ದಿವೆ. ಅದರಲ್ಲಿ ಐದು unknown dead bodies. ಅವು ಹಾಗೇ ಬಿದ್ದಿವೆ. ಉಳಿದ ಹೆಣಗಳ ಕಡೆಯವರೆಲ್ಲಾ ತುಂಬಿ ಹೋಗಿದ್ದಾರೆ. ಎಲ್ಲರಿಗೂ ಅರ್ಜೆಂಟು.
ನಮ್ಮ ಹೆಣವನ್ನೀಗ ಪ್ರತ್ಯೇಕವಾಗಿ ಮೊದಲು ತಗೊಂಡರೆ ದೊಡ್ಡ ಗಲಾಟೆ ಶುರುವಾಗುತ್ತೆ. ಏನೋ interal ವ್ಯವಸ್ಥೆ ಮಾಡಿದ್ದೇನೆ. ಇನ್ನೊಂದು ಮೂರು ಗಂಟೆಯೊಳಗೆ ಆಗುತ್ತೆ ಸಾರ್” ಎಂದೆ.
“ಏನೂ ಇನ್ನೂ ಮೂರು ಗಂಟೆಯಾಗುತ್ತಾ? ಅವರೆಲ್ಲಾ ಬೆಂಗಳೂರು ತಲುಪೋದು ಯಾವಾಗ್ರೀ? ದಫನ್ ಮಾಡೋದು ಯಾವಾಗ? ಮಧ್ಯಾಹ್ನ at any cost ಮೂರುಗಂಟೆ ಒಳಗೆ ಅವರು ಅಲ್ಲಿರಬೇಕು ಗೊತ್ತಾ?”
“ಅಷ್ಟು ಬೇಗ ಕಷ್ಟ ಸಾರ್“
ಅವರಿಗಂತೂ ಏನೇನೂ ಸಮಾಧಾನವಾಗಲಿಲ್ಲ. ನಿಮ್ಮಂಥ ಯೂಸ್‌ಲೆಸ್ ಫೆಲೋಗಳೆಲ್ಲಾ ಯಾಕ್ರೀ ಕೆಲಸಕ್ಕೆ ಬರ್ತೀರಿ ಎಂಬ ದನಿ ಅಲ್ಲಿತ್ತು. ಅವರ ಕೊಸರಾಟದ ದನಿಯಲ್ಲಿ ಅದು ಸ್ಪಷ್ಟವಾಗಿ ಸ್ಛುರಿಸುತ್ತಿತ್ತು.
ಹತಾಶರಾದವರಂತೆ, “ಹೋಗ್ಲಿ. inquest (ಶವದ ಮೇಲಿನ ತನಿಖೆ) ಆದ್ರೂ ಆಯಿತಾ?”
“ಆಗ್ತಾ ಇದೆ ಸಾರ್. ಇಲ್ಲಿ ಬರೆಯೋದಿಕ್ಕೆ ಅನುಕೂಲ ಇಲ್ಲ ಅಂತ ಮಹಿಳಾ ಠಾಣೆಗೆ, ಹುಡುಗಿ ಕಡೆಯವರನ್ನು ಕಳಿಸಿದ್ದೇನೆ. ಅವರೆಲ್ಲರ ಹೇಳಿಕೆಗಳನ್ನು ಮಹಿಳಾ ಪೊಲೀಸರು ಬರೆದುಕೊಳ್ತಿದ್ದಾರೆ. ಇಲ್ಲಿ ಪೋಸ್ಟ್‌ಮಾರ್ಟಂ ಕೆಲಸ ಆಗೋದ್ರೊಳಗೆ ಅಲ್ಲಿ ಆ ಕೆಲಸವೂ ಮುಗಿದಿರುತ್ತೆ. ಅವರೆಲ್ಲಾ ಸೀದಾ ಹೊರಟು ಬಿಡಬಹುದು” ಎಂದೆ.
ಅಸಮಾಧಾನದಿಂದ ಕುದಿಯುತ್ತ ಮೇಲಧಿಕಾರಿ ಥಟ್ಟನೆ ಫೋನಿಟ್ಟರು.
ಆ ಅಂಗಡಿಯಿಂದ ಬರುತ್ತಿರುವಾಗಲೇ ಕಂಟ್ರೋಲ್ ರೂಮಿನಿಂದ ಪುನಃ ಕರೆ ಬಂತು.
“ಸಾಹೇಬರಿಗೆ ಅರ್ಜೆಂಟು ಫೋನ್ ಮಾಡಬೇಕಂತೆ“
(ಮುಂದುವರಿಯುವುದು)
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…