ಷಿಯಾ ಮುಸ್ಲಿಂ ಪ್ರಾಬಲ್ಯದ ಇರಾನ್ ಮತ್ತು ಸುನ್ನಿ ಮುಸ್ಲಿಂ ಪ್ರಾಬಲ್ಯದ ಸೌದಿ ಅರೇಬಿಯಾ ನಡುವೆ ಕಳೆದ ಮಾರ್ಚ್ ತಿಂಗಳಲ್ಲಿ ಚೀನಾ ಮಧ್ಯಸ್ಥಿಕೆಯಲ್ಲಿ ಆರಂಭವಾದ ಮೈತ್ರಿ ಮಾತುಕತೆ ಕೊನೆಗೂ ಫಲಕೊಟ್ಟಂತೆ ಕಾಣುತ್ತಿದೆ. ಇದರಿಂದಾಗಿ ಮಧ್ಯಪ್ರಾಚ್ಯ ವಲಯದಲ್ಲಿ ಶೀತಲ ಸಮರಕ್ಕೆ ಕಾರಣವಾಗಿದ್ದ ಎರಡೂ ದೇಶಗಳ ನಡುವಣ ದ್ವೇಷ ಕೊನೆಗೊಳ್ಳುವ ಸೂಚನೆಗಳು ಕಾಣುತ್ತಿವೆ.
ಇರಾನ್ ಮತ್ತು ಸೌದಿ ಅರೇಬಿಯಾ ನಡುವಣ ದ್ವೇಷಕ್ಕೆ ದೊಡ್ಡ ಇತಿಹಾಸವೇ ಇದೆ. ಅದು ಎರಡು ಮುಸ್ಲಿಂ ಜನಾಂಗಗಳ ನಡುವಣ ವೈಮನಸ್ಯ. ಮಧ್ಯಪ್ರಾಚ್ಯ ವಲಯದಲ್ಲಿ ಅದರಲ್ಲಿಯೂ ಅರಬ್ ವಲಯದಲ್ಲಿ ಪ್ರಾಬಲ್ಯಕ್ಕಾಗಿ ನಡೆಯುತ್ತ ಬಂದ ಹೋರಾಟ. ಕೊನೆ ಮೊದಲಿಲ್ಲದೆ ನಡೆಯುತ್ತ ಬಂದ ಈ ವೈಷಮ್ಯಕ್ಕೆ ಕೊನೆಗೂ ಅಂತ್ಯ ಬರುವಂತೆ ಕಾಣುತ್ತಿದೆ.
ಹಳೆಯ ವೈಷಮ್ಯ ಒಂದು ಕಡೆಯಾದರೆ ಮತ್ತೊಂದು ಕಡೆ ಕನಿಷ್ಠ ರಾಜತಾಂತ್ರಿಕ ಬಾಂಧವ್ಯವೂ ಕಳೆದ ಏಳು ವರ್ಷಗಳಿಂದ ಕಡಿದು ಹೋಗಿತ್ತು. ಉಗ್ರವಾದಿ ಚಟುವಟಿಕೆ ಆರೋಪದ ಮೇಲೆ ಷಿಯಾ ಧಾರ್ಮಿಕ ಗುರುವೊಬ್ಬರು ಸೇರಿದಂತೆ ೪೭ ಮಂದಿ ಷಿಯಾ ಜನಾಂಗದವರನ್ನು ಸೌದಿ ಆಡಳಿತಗಾರರು ಒಂದೇ ದಿನ ಗಲ್ಲಿಗೇರಿಸಿದ ಪ್ರಕರಣ ಸಾಕಷ್ಟು ವಿವಾದ ಎಬ್ಬಿಸಿತ್ತು.
ಗಲ್ಲಿಗೇರಿಸಿದ್ದನ್ನು ಪ್ರತಿಭಟಿಸಿ ಜನರು ಇರಾನ್ ರಾಜಧಾನಿ ಟೆಹರಾನ್‌ನಲ್ಲಿದ್ದ ಸೌದಿ ಅರೇಬಿಯಾ ರಾಜತಾಂತ್ರಿಕ ಕಚೇರಿಗೆ ಮುತ್ತಿಗೆ ಹಾಕಿದ್ದರು. ಲೆಬನಾನ್, ಇರಾಕ್, ಸಿರಿಯಾ, ಯೆಮನ್ ದೇಶಗಳಲ್ಲಿಯೂ ಷಿಯಾ ಮುಸ್ಲಿಮರು ಪ್ರತಿಭಟನೆ ನಡೆಸಿದರು. ಈ ಘಟನೆಗಳ ಹಿನ್ನೆಲೆಯಲ್ಲಿ ಎರಡೂ ದೇಶಗಳ ಬಾಂಧವ್ಯ ಕೆಟ್ಟಿತ್ತು. ಎರಡೂ ದೇಶಗಳ ನಾಯಕರು ಪರಸ್ಪರ ಮುಖಗಳನ್ನೂ ನೋಡದಂತೆ ಬದುಕಿದ್ದರು.
ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ನಗರದಲ್ಲಿ ಇದೇ ಗುರುವಾರ ಇರಾನ್ ವಿದೇಶಾಂಗ ಸಚಿವ ಹುಸೇನ್ ಅಮಿರ್ ಅಬ್ದುಲ್ಲಾಹೈನ್ ಮತ್ತು ಸೌದಿ ಅರೇಬಿಯಾದ ವಿದೇಶಾಂಗ ಖಾತೆ ಸಚಿವ ರಾಜಕುಮಾರ ಫೈಸಲ್ ಬಿನ್ ಪರ್ಹಾನ್ ಅಲ್ ಸೌದ್ ಅವರ ನಡುವೆ ಯಶಸ್ವಿಯಾಗಿ ಮಾತುಕತೆ ನಡೆದಿದು, ಎರಡೂ ದೇಶಗಳ ನಡುವಣ ಬಾಂಧವ್ಯಕ್ಕೆ ಮತ್ತಷ್ಟು ಚಾಲನೆ ಸಿಕ್ಕಿದೆ.
ಬದ್ಧವೈರಿಗಳಾಗಿದ್ದ ಈ ಎರಡೂ ದೇಶಗಳು ಮಧ್ಯಪ್ರಾಚ್ಯ ವಲಯದಲ್ಲಿ (ಇರಾನ್, ಸೌದಿ ಅರೇಬಿಯಾ, ಇರಾಕ್, ಇಸ್ರೇಲ್ ಮತ್ತಿತರ 17 ದೇಶಗಳ ವಲಯ) ಪ್ರಾಬಲ್ಯಕ್ಕಾಗಿ ನಡೆಸುತ್ತಿರುವ ಪೈಪೋಟಿಯಿಂದಾಗಿ ಯೆಮನ್, ಸಿರಿಯಾ, ಇರಾಕ್, ಲೆಬನಾನ್ ದೇಶಗಳಲ್ಲಿ ಶೀತಲ ಸಮರ ನಡೆಯುತ್ತಿದೆ.
ಯೆಮನ್‌ನಲ್ಲಿರುವ ಹೌತಿ ಜನಾಂಗದ ಬಂಡಾಯಗಾರರಿಗೆ ಇರಾನ್ ಬೆಂಬಲ ನೀಡಿದರೆ ಸರ್ಕಾರಿ ಪಡೆಗಳಿಗೆ ಸೌದಿ ಅರೇಬಿಯಾ ಬೆಂಬಲ ನೀಡುತ್ತ ಬಂದಿದೆ. ಈ ಆಂತರಿಕ ಯುದ್ಧದಲ್ಲಿ ಸಾವಿರಾರು ಜನರು ಸತ್ತಿದ್ದಾರೆ. ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ. ಅನ್ನ ನೀರಿಲ್ಲದೆ ಮಕ್ಕಳು ಸಾಯುತ್ತಿವೆ. ಈ ಶತಮಾನ ಕಂಡ ಅತ್ಯಂತ ಘೋರ ದುರಂತ ಇದು ಎಂಬ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂತೋನಿಯಾ ಗುಟೆರಸ್ ಮಾತಿನಲ್ಲಿ ಉತ್ಪ್ರೇಕ್ಷೆಯೇನೂ ಇರಲಾರದು.
ಇರಾನ್ ಮತ್ತು ಸೌದಿ ಅರೇಬಿಯಾ ನಡುವೆ ಬಾಂಧವ್ಯ ಪುನರ್ ಸ್ಥಾಪನೆಗೆ ಚೀನಾ ಮಧ್ಯಸ್ಥಿಕೆಯಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ನಡೆದ ಸಂಧಾನ ಯಶಸ್ವಿ ಯಾಗಿದ್ದು, ಈಗಾಗಲೇ ರಾಜತಾಂತ್ರಿಕ ಸಂಬಂಧಗಳು ಸುಧಾರಿಸಿವೆ. ಯಾವುದನ್ನು ಸಾಧ್ಯವೇ ಇಲ್ಲವೆಂದು ತಿಳಿಯಲಾಗಿತ್ತೋ ಅದು ಸಾಧ್ಯ ವಾದದ್ದು ಈ ಸಂಧಾನ ಸಾಽಸಿದ ಒಂದು ದೊಡ್ಡ ಅಚ್ಚರಿ. ಸಾಮಾನ್ಯವಾಗಿ ಅರಬ್ ದೇಶಗಳ ಮಧ್ಯೆ ವಿವಾದಗಳು ಉದ್ಭವವಾದಾಗಲೆಲ್ಲಾ ಅಮೆರಿಕ ಮಧ್ಯಸ್ಥಿಕೆ ವಹಿಸುತ್ತಿತ್ತು.
ಅಮೆರಿಕ ಮತ್ತು ಇರಾನ್ ನಡುವೆ ಉತ್ತಮ ಬಾಂಧವ್ಯ ಇಲ್ಲದ್ದರಿಂದ ಸೌದಿ ಮತ್ತು ಇರಾನ್ ನಡುವಣ ಬಾಂಧವ್ಯ ಪುನರ್‌ಸ್ಥಾಪಿಸುವ ಪ್ರಯತ್ನಗಳು ನಡೆದಿರಲಿಲ್ಲ. ಅವೆರಡೂ ದೇಶಗಳು ಒಂದಾಗುವುದು ಅಮೆರಿಕಕ್ಕೆ ಬೇಕೂ ಆಗಿರಲಿಲ್ಲ. ಇಂಥ ಸ್ಥಿತಿಯಲ್ಲಿ ಮೊದಲ ಬಾರಿ ಚೀನಾ ಮಧ್ಯಸ್ಥಿಕೆ ವಹಿಸಿ ಅದರಲ್ಲಿ ಯಶಸ್ವಿಯಾಗಿರುವುದು ಬದಲಾಗುತ್ತಿರುವ ಜಾಗತಿಕ ಸಂಬಂಧಗಳಿಗೆ ನಿದರ್ಶನವಾಗಿದೆ.
ಈ ಬೆಳವಣಿಗೆಯಿಂದಾಗಿ ಅಂತಾರಾಷ್ಟ್ರೀಯವಾಗಿ ಚೀನಾದ ವರ್ಚಸ್ಸು ಕೂಡ ಹೆಚ್ಚಿದಂತಾಗಿದೆ. ಅಷ್ಟೇ ಅಲ್ಲ ಇತ್ತೀಚಿನ ವರ್ಷಗಳಲ್ಲಿ ಅಮೆರಿಕ ಮತ್ತು ಸೌದಿಯ ಬಾಂಧವ್ಯ ಉತ್ತಮವಾಗಿಯೇನೂ ಇಲ್ಲ. ಸದಾ ಅಮೆರಿಕದ ಮೇಲೆ ಅವಲಂಬಿಸುತ್ತಿದ್ದ ಸೌದಿ ರಾಜರು ಈಗ ಬೇರೆಯವರನ್ನು ಅವಲಂಬಿಸುವುದಕ್ಕೆ ಆರಂಭಿಸಿರುವುದು ಕುತೂಹಲಕಾರಿ.
ಇರಾನ್ ಮತ್ತು ಸೌದಿ ಅರೇಬಿಯಾ ನಡುವಣ ಮೈತ್ರಿ ಬೆಳವಣಿಗೆಯ ಮುಂದಿನ ಭಾಗವಾಗಿ ಯೆಮನ್ ಸೇರಿದಂತೆ ಹಲವು ಕಡೆ ನಡೆಯುತ್ತಿರುವ ಯುದ್ಧಗಳು ಅಂತ್ಯಗೊಂಡರೆ ಅದಕ್ಕಿಂತ ದೊಡ್ಡ ಸಾಧನೆ ಮತ್ತೊಂದಿರ ಲಾರದು. ಈಗಾಗಲೇ ರಾಜಕುಮಾರ ಫೈಸಲ್ ಕಳೆದ ಜೂನ್ ತಿಂಗಳಲ್ಲಿ ಇರಾನ್‌ಗೆ ಭೇಟಿ ನೀಡಿ ಹಲವು ಸುತ್ತು ಮಾತುಕತೆ ನಡೆಸಿದ್ದಾರೆ. ಅದರ ಮುಂದಿನ ಭಾಗವಾಗಿ ಈಗ ಮಾತುಕತೆಗಳು ಯಶಸ್ವಿಯಾಗಿ ನಡೆದಿವೆ. ಇರಾನ್ ಅಧ್ಯಕ್ಷ ಇಬ್ರಾಹಿಂ ರಾಸಿ ಅವರಿಗೆ ಸೌದಿ ದೊರೆ ಆಹ್ವಾನ ನೀಡಿದ್ದು ಅವರು ಶೀಘ್ರದಲ್ಲಿಯೇ ಭೇಟಿ ನೀಡಲಿದ್ದಾರೆ.
ಮಧ್ಯಪ್ರಾಚ್ಯ ವಲಯದಲ್ಲಿ ಇರಾನ್ ಮತ್ತು ಸೌದಿ ಅರೇಬಿಯಾ ತೈಲ ಶ್ರೀಮಂತ ದೇಶಗಳು. ಹೀಗಾಗಿ ಶ್ರೀಮಂತ ದೇಶಗಳ ಕಣ್ಣು ಈ ದೇಶಗಳ ಮೇಲೆ ಇದೆ. ಅಮೆರಿಕ ಸೇರಿದಂತೆ ಜಗತ್ತಿನ ಶ್ರೀಮಂತ ದೇಶಗಳು ಈ ದೇಶಗಳ ಜೊತೆ ಉತ್ತಮ ಬಾಂಧವ್ಯ ಹೊಂದಲು ಬಯಸುವುದು ಸಹಜ. ಸೌದಿ ಅರೇಬಿಯಾ ಮೊದಲಿನಿಂದಲೂ ಅಮೆರಿಕ ಮತ್ತಿತರ ದೇಶಗಳ ಮೈತ್ರಿ ದೇಶವಾಗಿದೆ.
ಆದರೆ ಇರಾನ್ ಮತ್ತು ಅಮೆರಿಕ ನಡುವೆ ಉತ್ತಮ ಬಾಂಧವ್ಯ ಇಲ್ಲ. ಪರಮಾಣು ತಂತ್ರಜ್ಞಾನವನ್ನು ಇರಾನ್ ಅಭಿವೃದ್ಧಿ ಮಾಡುತ್ತಿರುವುದನ್ನು ಅಮೆರಿಕ ವಿರೋಽಸಿ ನಾನಾ ರೀತಿಯ ಆರ್ಥಿಕ ದಿಗ್ಬಂಧನಗಳನ್ನು ಹೇರಿದೆ. ವಿದ್ಯುತ್ ಮತ್ತು ವೈದ್ಯಕೀಯ ಉದ್ದೇಶಕ್ಕಾಗಿ ಮಾತ್ರ ಪರಮಾಣು ತಂತ್ರಜ್ಞಾನ ಅಭಿವೃದ್ಧಿ ಮಾಡುತ್ತಿರುವುದಾಗಿ ಇರಾನ್ ಹೇಳುತ್ತಾ ಬಂದಿದೆ.
ಆದರೆ ಅದನ್ನು ಅಂತಾರಾಷ್ಟ್ರೀಯ ಪರಮಾಣು ಸಂಸ್ಥೆಯೂ ಸೇರಿದಂತೆ ಯಾವ ದೇಶವೂ ನಂಬುತ್ತಿಲ್ಲ. ಇದರಿಂದಾಗಿ ಇರಾನ್ ಆರ್ಥಿಕ ಪ್ರಗತಿಗೆ ಪರದಾಡುವಂತಾಗಿದೆ. ಹೀಗಾಗಿ ಮುಸ್ಲಿಂ ದೇಶಗಳ ಜೊತೆ ಬಾಂಧವ್ಯ ಅಭಿವೃದ್ಧಿ ಇರಾನ್‌ಗೆ ಅನಿವಾರ್ಯವಾಗಿದೆ. ತನ್ನಲ್ಲಿರುವ ಸಂಪತ್ತನ್ನು ಬಳಸಿಕೊಂಡು ಮುಸ್ಲಿಂ ದೇಶಗಳ ಪೈಕಿ ಮುಂಚೂಣಿ ದೇಶವಾಗಬೇಕೆಂದು ಇರಾನ್ ಪರಮಾಣು ಬಾಂಬ್ ತಯಾರಿಸಿಬಿಟ್ಟರೆ ಅದು ಇತರ ದೇಶಗಳನ್ನು ಕಾಲ ಕಸವಾಗಿ ಮಾಡಿಕೊಳ್ಳುತ್ತದೆ ಎಂದು ಭಾವಿಸಿ ಅರಬ್ ದೇಶಗಳೂ ಅದರ ವಿರುದ್ಧ ಇವೆ. ಈ ನಡುವೆಯೂ ಇರಾನ್ ಅರಬ್ ದೇಶಗಳ ಜೊತೆ ಬಾಂಧವ್ಯ ವೃದ್ಧಿಗೆ ಯತ್ನಿಸುತ್ತಾ ಬಂದಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಅತಿ ವೇಗವಾಗಿ ಬೆಳೆಯುತ್ತಿದೆ. ಅದಕ್ಕೆ ಅಪಾರ ಪ್ರಮಾಣದಲ್ಲಿ ಇಂಧನ ಬೇಕು. ಆ ಕಾರಣಕ್ಕಾಗಿ ಚೀನಾ ಆಡಳಿತಗಾರರು ಇರಾನ್ ಸ್ನೇಹ ಬೆಳೆಸಿದ್ದಾರೆ. ಈ ವಿಚಾರದಲ್ಲಿ ಅಮೆರಿಕವನ್ನು ಹಿಂದಿಕ್ಕಿದ್ದಾರೆ. ಚೀನಾ ಕೆಲವೇ ವರ್ಷಗಳಲ್ಲಿ ತನ್ನನ್ನು ಹಿಂದಿಕ್ಕಬಹುದೆಂದು ಭಾವಿಸಿ ಅದನ್ನು ಮುರುಟಿಹಾಕಲು ಹೆಣಗುತ್ತಿದೆ. ಈ ಹಿನ್ನೆಲೆಯನ್ನು ಮನಗಂಡು ಇರಾನ್ ಪರಮಾಣು ತಂತ್ರಜ್ಞಾನ ಇರುವ ಚೀನಾದ ಜೊತೆ ಇದೆ. ಮತ್ತೊಂದು ಕಡೆ ಪರಮಾಣು ಅಸ್ತ್ರಗಳಿರುವ ಪಾಕಿಸ್ತಾನದ ಜೊತೆಗೂ ಚೀನಾ ಉತ್ತಮ ಸ್ನೇಹ ಹೊಂದಿದೆ.
ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಚೀನಾ ದೇಶ ಮತ್ತೊಂದು ಪರಮಾಣು ತಂತ್ರಜ್ಞಾನ ದೇಶ ರಷ್ಯಾದ ಜೊತೆ ಗುರುತಿಸಿಕೊಂಡಿರುವುದು ಮತ್ತು ಇರಾನ್ ಜೊತೆ ಮೈತ್ರಿ ಸಾಽಸಿರುವುದು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಕಂಡುಬಂದಿರುವ ಮಹತ್ವದ ಬೆಳವಣಿಗೆ. ಚೀನಾ, ರಷ್ಯಾ ಮತ್ತು ಇರಾನ್ (ಮೂರೂ ಪರಮಾಣು ತಂತ್ರಜ್ಞಾನ ದೇಶಗಳು) ನಡುವಣ ಮೈತ್ರಿ ಜಾಗತಿಕ ಮಟ್ಟದಲ್ಲಿ ಅಮೆರಿಕದ ಪ್ರಾಬಲ್ಯವನ್ನು ದುರ್ಬಲಗೊಳಿಸುವಲ್ಲಿ ಯಶಸ್ವಿಯಾಗಿದೆ. ಈಗ ತೈಲ ಸಂಪನ್ಮೂಲ ಸೌದಿ ಅರೇಬಿಯಾ ಈ ಮೈತ್ರಿ ಕೂಟದ ಜೊತೆ ಗುರುತಿಸಿಕೊಂಡಿರುವುದು ಹೊಸ ರೀತಿಯ ಜಾಗತಿಕ ಸಮೀಕರಣಕ್ಕೆ ದಾರಿ ಮಾಡಿಕೊಟ್ಟಿದೆ.
ಈ ಹೊಸ ರೀತಿಯ ಮೈತ್ರಿ ಯೆಮನ್ ಯುದ್ಧ ಕೊನೆಗೊಳ್ಳಲು, ಪ್ಯಾಲೆಸ್ಟೇನ್ ಸಮಸ್ಯೆ ಇತ್ಯರ್ಥವಾಗಲು, ಲೆಬನಾನ್ ಸಂಘರ್ಷ ಮತ್ತು ಇರಾಕ್‌ನಲ್ಲಿ ನಡೆಯುತ್ತಿರುವ ಆಂತರಿಕ ಕದನ ನಿಲ್ಲಲು ಕಾರಣವಾಗಬಹುದು. ಈ ಮೈತ್ರಿ ಯಶಸ್ವಿಯಾದರೆ ಇಡೀ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಲು ದಾರಿಯಾಗಬಹುದು. ಇದರಿಂದ ಮುಖ್ಯವಾಗಿ ತೈಲ ಬೆಲೆಗಳು ಇಳಿಯುತ್ತವೆ. ಅಮಾಯಕರ ಮಾರಣ ಹೋಮ ನಿಲ್ಲುತ್ತದೆ. ಆದರೆ ಇದೊಂದು ರೀತಿಯಲ್ಲಿ ಬಲಿಷ್ಠ ದೇಶಗಳ ನಡುವಣ ಆಟ ಇದ್ದಂತೆ. ಈ ಆಟದಲ್ಲಿ ಯಾರು ಗೆಲ್ಲುತ್ತಾರೆ ಎನ್ನುವುದು ಕುತೂಹಲಕಾರಿ.
ಕೆ.ಆರ್.ಪೇಟೆ : ತಾಲ್ಲೂಕಿನ ಬೂಕನಕೆರೆ ಹೋಬಳಿಯ ಮುದುಗೆರೆ ಗ್ರಾಮದ ಬಳಿ ರೈತರ ಸಾಕು ಪ್ರಾಣಿಗಳನ್ನು ತಿಂದು ಹಾಕುತ್ತಾ ರೈತರಿಗೆ ನಿತ್ಯ…
ಮೈಸೂರು : ವಿಶ್ವವಿಖ್ಯಾತ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಚುರುಕಿನ ಚಟುವಟಿಕೆಯಿಂದ ಸದಾ ಸಂದರ್ಶಕರ ಗಮನ ಸೆಳೆಯುತ್ತಿದ್ದ ಸುಮಾರು ಸುಮಾರು…
ಮೈಸೂರು : ಗುರುವಾರ ಸಂಜೆ ಮೈಸೂರಿನ ಅಂಬಾವಿಲಾಸ ಅರಮನೆ ಮುಂಭಾಗ ಸಂಭವಿಸಿದ ಹಿಲೀಯಂ ಸಿಲಿಂಡರ್ ಸ್ಪೋಟ ಪ್ರಕರಣ ಸಂಬಂಧ ನಗರದ…
ಎಚ್.ಡಿ.ಕೋಟೆ : ತಾಲ್ಲೂಕಿನಲ್ಲಿ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ ಮಾದರಿ ಕಾರ್ಯಕ್ರಮಗಳನ್ನು ಹಗಲಿರುಳು ಎನ್ನದೆ ಶಿಕ್ಷಣ ಇಲಾಖೆಯವರು ನಡೆಸುತ್ತಿದ್ದಾರೆ ಎಂದು ಶಾಸಕ…
ಹನೂರು : ಕರ್ನಾಟಕದ ನಯಾಗಾರ ಎಂದೇ ಪ್ರಖ್ಯಾತಿ ಪಡೆದಿರುವ ಹೊಗೇನಕಲ್ ಜಲಪಾತ ನೋಡಲು ತಮಿಳುನಾಡಿನ ಭಾಗದಿಂದ ಪ್ರವಾಸಿಗರ ದಂಡೇ ಹರಿದುಬರುತ್ತಿದ್ದು,…
ಹೈದರಾಬಾದ್ : ಪುಷ್ಪ-2 ಸಿನಿಮಾ ವಿಶೇಷ ಪ್ರದರ್ಶನದ ವೇಳೆ ಉಂಟಾದ ಕಾಲ್ತುಳಿತ ಪ್ರಕರಣದಲ್ಲಿ ವರ್ಷದ ಬಳಿಕ ಇದೀಗ ಪೊಲೀಸರು ಕೋರ್ಟ್ಗೆ…