ಮಂಡ್ಯ ಜಿಲ್ಲೆಯ ಯುವಜನರು ಉನ್ನತ ಶಿಕ್ಷಣದಲ್ಲಿ ಸ್ನಾತಕೋತ್ತರ ಅಧ್ಯಯನ, ಡಾಕ್ಟರೇಟ್ ಅಧ್ಯಯನ ಇತ್ಯಾದಿಗಳಿಗೆ ಮೈಸೂರಿಗೆ ಹೋಗುವುದು ಅನಿವಾರ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲೆಗೊಂದು ವಿಶ್ವವಿದ್ಯಾನಿಲಯ ಬೇಕೆಂಬ ಬೇಡಿಕೆಗೆ ದಶಕಗಳ ಇತಿಹಾಸವಿದೆ. ಇದು ಜಿಲ್ಲೆಯ ಬಹುವರ್ಷಗಳ ಕನಸೂ ಕೂಡ. ಆ ಕನಸೀಗ ಸಾಕಾರಗೊಳ್ಳುತ್ತಿದೆ. ಬೇರೆಡೆಗೆ ಅಲೆಯುವುದು ತಪ್ಪಲಿದೆ. ಉನ್ನತ ಶಿಕ್ಷಣವನ್ನು ಜಿಲ್ಲೆಯ ಎಲ್ಲ ತಾಲ್ಲೂಕು ಮತ್ತು ಗ್ರಾಮೀಣ ಪ್ರದೇಶಗಳ ಯುವಜನರೂ ಪಡೆದು ಕೊಳ್ಳುವುದು ಸುಗಮವಾಗಲಿದೆ.
ಇದುವರೆಗೂ ಮೈಸೂರು ವಿಶ್ವವಿದ್ಯಾನಿಲಯದ ಅಧೀನದಲ್ಲಿದ್ದ ಮಂಡ್ಯ ಜಿಲ್ಲೆಗೆ ಪೂರ್ಣ ಪ್ರಮಾಣದ ನೂತನ ವಿಶ್ವವಿದ್ಯಾಲನಿಲಯವನ್ನು ಘೋಷಣೆ ಮಾಡುವ ಮೂಲಕ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ನುಡಿದಂತೆ ನಡೆದಿದ್ದಾರೆ. ಅದರಲ್ಲೂ ಕೇವಲ ಒಂದು ತಿಂಗಳ ಅವಧಿಯಲ್ಲಿ ಅವರು ತಾವು ನೀಡಿದ್ದ ಭರವಸೆಯನ್ನು ಈಡೇರಿಸಿದ್ದಾರೆ.
ಮಂಡ್ಯದ ಸರ್ಕಾರಿ ಕಾಲೇಜಿಗೆ ಏಕೀಕೃತ ವಿವಿ ಸ್ಥಾನಮಾನವನ್ನೇನೋ ಘೋಷಿಸಲಾಗಿತ್ತು. ಇದನ್ನು ಬಿಟ್ಟರೆ ಜಿಲ್ಲೆಯ ಪ್ರಥಮ ದರ್ಜೆ ಕಾಲೇಜುಗಳೆಲ್ಲವೂ ಬಹಳ ಹಿಂದಿನಿಂದಲೂ ಮೈಸೂರು ವಿ.ವಿ. ಅಧೀನದಲ್ಲೇ ಇವೆ. ಮಂಡ್ಯದಲ್ಲಿ ಕೆಲವು ಆಯ್ದ ವಿಷಯಗಳನ್ನೊಳಗೊಂಡ ಸ್ನಾತಕೋತ್ತರ ಕೇಂದ್ರವನ್ನು ಬಿಟ್ಟರೆ ಹೆಚ್ಚಿನ ಶೈಕ್ಷಣಿಕ ಪ್ರಗತಿಯೇನೂ ಆಗಿಲ್ಲ.
ಮಂಡ್ಯ ಜಿಲ್ಲೆಯು ಹೇಳಿಕೇಳಿ ಕೃಷಿ ಪ್ರಧಾನವಾದ ಜಿಲ್ಲೆ. ಇಂತಹ ಕಡೆಗಳಲ್ಲಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಆದರವಿರುವುದಿಲ್ಲ. ಇದನ್ನು ಇನ್ನೊಂದು ರೀತಿಯಿಂದ ನೋಡಿದರೆ, ರಾಜಕೀಯವೇ ಆಗಿರುತ್ತದೆ. ಕೃಷಿಯ ಹೆಸರು ಹೇಳಿಕೊಂಡು, ಉಳಿದ ವಲಯಗಳಲ್ಲಿ ಜಿಲ್ಲೆಯು ಹಿಂದುಳಿದಿರುವಂತೆ ಮಾಡುವ ತಂತ್ರದ ಒಂದು ವರಸೆ ಇದರಲ್ಲಿದೆ. ಸಾಮಾನ್ಯವಾಗಿ ನೀರಾವರಿ ವ್ಯವಸ್ಥೆ ಎಲ್ಲಿ
ಚೆನ್ನಾಗಿರುತ್ತದೋ ಅಂತಹ ಕಡೆಗಳಲ್ಲೆಲ್ಲ ಶೈಕ್ಷಣಿಕ ಪ್ರಗತಿ ಅಷ್ಟಾಗಿ ಆಗಿಲ್ಲದೆ ಇರುವ ವಾಸ್ತವವೇ ಇದನ್ನು ಹೇಳುತ್ತದೆ.
ಆದರೆ, ಕೃಷಿ ಜಿಲ್ಲೆ ಎಂದ ಮಾತ್ರಕ್ಕೆ ಸಮಕಾಲೀನ ಜಗತ್ತಿನಿಂದ ದೂರವಾಗುವುದು ಪ್ರತಿಗಾಮಿ ಬೆಳವಣಿಗೆಯಾಗಿ ಪರಿಣಮಿಸುತ್ತದೆ. ಏಕೆಂದರೆ, ಎಷ್ಟೇ ಕೃಷಿ ಪ್ರಧಾನ ಜಿಲ್ಲೆಯಾದರೂ ನೂರಕ್ಕೆ ನೂರರಷ್ಟು ಜನರು ಕೃಷಿಯನ್ನೇ ಅವಲಂಬಿಸುವುದು ಸಾಧ್ಯವಿಲ್ಲ. ಒಂದು ಅಪೇಕ್ಷಿತ ಪ್ರಮಾಣದ ಜನರು ಬೇರೆ ಬೇರೆ ಚಟುವಟಿಕೆಗಳಲ್ಲಿ ನಿರತರಾಗುವಂತೆ ಶಿಕ್ಷಣ, ಕೌಶಲ, ತರಬೇತಿ ಇತ್ಯಾದಿ ಸೌಲಭ್ಯಗಳನ್ನು ಕಲ್ಪಿಸಿದರೆ ಮಾತ್ರವೇ ಕೃಷಿ ಕೂಡ ಉಳಿದುಕೊಳ್ಳುತ್ತದೆ. ಇಲ್ಲದೆ ಹೋದರೆ, ಕೃಷಿ ಕೂಡ ತನ್ನ ಧಾರಣಾ ಶಕ್ತಿಯನ್ನು ಕಳೆದುಕೊಂಡು, ಎಲ್ಲೆಲ್ಲೂ ತೀರಾ ತುಂಡು ಹಿಡುವಳಿಗಳೇ ಆಗಿ, ಮಿಕ್ಕವರೂ ಕೃಷಿಯಿಂದ ದೂರವಾಗುತ್ತಾರಷ್ಟೆ.
ಮಂಡ್ಯ ಜಿಲ್ಲೆಯಲ್ಲಿ ನಾಗಮಂಗಲ ತಾಲ್ಲೂಕಿಗೆ ಪೂರ್ಣ ನೀರಾವರಿ ಸೌಲಭ್ಯವಿಲ್ಲ. ಇಂತಹ ಕಡೆ ನೆಲೆ ನಿಂತ ಆದಿಚುಂಚನಗಿರಿಯ ಶ್ರೀಗಳು, ಬೆಳ್ಳೂರಿನ ಬಳಿಯ ಜವರನಹಳ್ಳಿಯನ್ನು ಕೇಂದ್ರವಾಗಿಟ್ಟುಕೊಂಡು ಶೈಕ್ಷಣಿಕ ಕ್ರಾಂತಿಯನ್ನೇ ಮಾಡಿದ್ದಾರೆ. ಹಾಗೆಯೇ, ಇನ್ನೊಂದೆಡೆಯಲ್ಲಿ ಜಿ.ಮಾದೇಗೌಡರು ಕೆ.ಎಂ.ದೊಡ್ಡಿಯಲ್ಲಿ ಶೈಕ್ಷಣಿಕ ಸಂಸ್ಕೃತಿಯನ್ನು ರೂಪಿಸುವ ನಿಟ್ಟಿನಲ್ಲಿ ಅಹರ್ನಿಶಿ ದುಡಿದಿದ್ದಾರೆ ಎನ್ನುವುದು ನಿಜ. ಆದರೆ, ಜಿಲ್ಲಾ ಕೇಂದ್ರದಿಂದ ನಾಲ್ಕು ದಿಕ್ಕುಗಳಲ್ಲೂ ೭೦-೮೦ ಕಿಲೋಮೀಟರ್ ಸುತ್ತಳತೆ ಹೊಂದಿರುವ ಜಿಲ್ಲೆಗೆ ಪೂರ್ಣಪ್ರಮಾಣದ ಒಂದು ಸ್ವತಂತ್ರ ವಿಶ್ವವಿದ್ಯಾನಿಲ ಯದ ಅಗತ್ಯ ಇದ್ದೇ ಇತ್ತು. ಹಲವು ದಶಕಗಳ ಈ ಕನಸು ಈಗ ಈಡೇರಿದೆ.
ಮಂಡ್ಯ ಜಿಲ್ಲೆಯು ನಾಗಮಂಗಲ, ಕೆ.ಆರ್.ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ, ಮದ್ದೂರು, ಮಳವಳ್ಳಿ ತಾಲ್ಲೂಕು ಕೇಂದ್ರಗಳನ್ನು ಹೊಂದಿದೆ. ಇಷ್ಟೂ ತಾಲ್ಲೂಕುಗಳನ್ನು ಲೆಕ್ಕಕ್ಕೆ ತೆಗೆದುಕೊಂಡರೆ ಸರಿಸುಮಾರು ಒಂದು ಲಕ್ಷದಷ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣದಲ್ಲಿ ತೊಡಗಿಕೊಂಡಿರುವ ಅಂದಾಜು ಇದೆ.
ಮಂಡ್ಯ ಜಿಲ್ಲೆಯು ಈ ನಾಡು ಕಂಡ ಅಪರೂಪದ ಶಿಕ್ಷಣ ಸಚಿವ ಕೆ.ವಿ. ಶಂಕರಗೌಡರ ತವರು. ಆದರೆ, ಶೈಕ್ಷಣಿಕವಾಗಿ ನಾವು ಸಾಧಿಸಿದ್ದು ಏನೂ ಸಾಲದು ಎನ್ನುವುದು ವಾಸ್ತವ. ನಮ್ಮ ಯುವಜನರು ಹಳ್ಳಿಯಲ್ಲೇ ಇರಬಹುದು. ಆದರೆ, ಅವರು ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯನ್ನು ಎದುರಿಸುತ್ತಿರುತ್ತಾರೆ. ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಭೆಯ ವಿಚಾರಕ್ಕೆ ಬಂದರೆ, ಅದು ತುಂಬಾ ಸಂಕೀರ್ಣವಾದ ಸಂಗತಿಯಾಗಿದೆ. ಇವೆಲ್ಲವನ್ನೂ ಸಮರ್ಥವಾಗಿ ಎದುರಿಸಬೇಕೆಂದರೆ, ಜಿಲ್ಲೆಯ ಯುವಜನರಿಗೆ ಕೂಡ ಅತ್ಯುತ್ತಮ ಗುಣಮಟ್ಟದ ಶಿಕ್ಷಣವೇ ಬೇಕಾಗುತ್ತದೆ. ಇದನ್ನು ಬಿಟ್ಟು ಬೇರೆ ಯಾವ ಅಡ್ಡಹಾದಿಯೂ ಇದಕ್ಕಿಲ್ಲ.
ಮೊದಲೇ ಹೇಳಿದಂತೆ, ನಮ್ಮದು ಕೃಷಿಯೇ ಪ್ರಧಾನವಾಗಿರುವ ಭೌಗೋಳಿಕ ಪ್ರದೇಶ. ಇಲ್ಲಿ ಕೃಷಿಯನ್ನೇ ಆಧಾರವಾಗಿಟ್ಟುಕೊಂಡು ವಿನೂತನ ಮಾದರಿಯ ಕೋರ್ಸುಗಳ ಅಧ್ಯಯನಕ್ಕೆ ಅವಕಾಶವಿದೆ. ಈ ಮೂಲಕ ಜಿಲ್ಲೆಯ ಸುಸ್ಥಿರ ಅಭಿವೃದ್ಧಿ, ಕೃಷಿ ಮಾರುಕಟ್ಟೆ ವಿಸ್ತರಣೆ, ಕೃಷಿ ಆಧಾರಿತ ಉದ್ಯಮಶೀಲತೆ, ಉದ್ಯೋಗಾವಕಾಶಗಳ ಸೃಷ್ಟಿ ಇವೆಲ್ಲವನ್ನೂ ಸಾಧಿಸಬಹುದು. ಈ ಮೂಲಕ, ಗ್ರಾಮೀಣ ಪ್ರದೇಶದ ಮಕ್ಕಳು ಜೀವನೋಪಾಯಕ್ಕಾಗಿ ಅನಗತ್ಯವಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸಾಧ್ಯ. ಮಂಡ್ಯ ಜಿಲ್ಲೆಯ ಜನರು ಉನ್ನತ ಶಿಕ್ಷಣದ ಸೌಲಭ್ಯವನ್ನು ಸದುಪಯೋಗಪಡಿಸಿಕೊಂಡು, ಆ ನಿರೀಕ್ಷೆಗಳಿಗೆ ಸ್ಪಂದಿಸಬೇಕಾಗಿದೆ.
ಹನೂರು : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಮಹಿಳೆಯೋರ್ವಳನ್ನು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ. ಹನೂರು…
ಹೊಸದಿಲ್ಲಿ : ದೇಶದ 140 ಕೋಟಿ ಜನರ ಮತದಾನದ ಹಕ್ಕು ಉಳಿಸಲು ನಾವು ಮತಕಳ್ಳತನದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಇದರಲ್ಲಿ…
ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ…
ಬಂಡೀಪುರ, ನಾಗರಹೊಳೆಯಲ್ಲಿ ಹೊಸ ವರ್ಷ ಆಚರಿಸಲು ಬಯಸಿದವರಿಗೆ ನಿರಾಸೆ ರೆಸಾರ್ಟ್, ಹೋಟೆಲ್ ಮಾಲೀಕರಿಂದ ಸಫಾರಿ ಪುನಾರಂಭಕ್ಕೆ ಒತ್ತಡ? ಮೈಸೂರು :…
ಎಚ್.ಡಿ.ಕೋಟೆ : ತಾಲ್ಲೂಕಿನ ಕ್ಯಾತನಹಳ್ಳಿ, ಆಲನಹಳ್ಳಿ, ಜಿ. ಬಿ. ಸರಗೂರು ವ್ಯಾಪ್ತಿಯ ಐದು ಕೆರೆಗಳಿಗೆ ನೀರು ತುಂಬಿಸಲು ಅಧಿಕಾರಿಗಳು ನಿರ್ಲಕ್ಷಿ…
ಮೈಸೂರಿನ ರಾಮಕೃಷ್ಣನಗರದಲ್ಲಿರುವ ಸುಯೋಗ್ ಆಸ್ಪತ್ರೆ ಎದುರಿನ ರಸ್ತೆಯು ಸಂಪೂರ್ಣ ಹದಗೆಟ್ಟಿದೆ. ಈ ರಸ್ತೆಯಲ್ಲಿ ಎಲ್ಲೆಡೆ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು,…