ಎಡಿಟೋರಿಯಲ್

ನೆನ್ನೆ ಮೊನ್ನೆ ನಮ್ಮ ಜನ: ರಸಋಷಿಯೊಡನೆ ರಸನಿಮಿಷಗಳು

ನೆನಪು – ಒಂದು

ಕುವೆಂಪು ಅವರಿಗೆ ಪ್ರಭುಶಂಕರ ಎಂದರೆ ಅಚ್ಚುಮೆಚ್ಚು. ಪರಮ ಶಿಷ್ಯ. ಸಲುಗೆಯೂ ಅಂತಹುದೇ.ಜ್ಞಾನಪೀಠ ಪ್ರಶಸ್ತಿ ಬಂದಿದ್ದ ಸಮಯ. ತಮ್ಮ ಸಂತೋಷವನ್ನಾಗಲೀ, ದುಃಖ ವನ್ನಾಗಲೀ ಯಾರೊಂದಿಗೂ ಹಂಚಿಕೊಳ್ಳದ ಜೀವ ರಸಋಷಿಯದು. ಆದರೆ ಪ್ರಿಯ ಶಿಷ್ಯ ಪ್ರಭುಶಂಕರ್ ಅದಕ್ಕೆ ಅಪವಾದ.

ಮನೆಗೆ ಬಂದ ಪ್ರಭುಶಂಕರರ ಬಳಿ ಕುವೆಂಪು ಹೇಳಿಕೊಂಡರು.

‘ಜ್ಞಾನಪೀಠದ ಪ್ರಶಸ್ತಿ ಪತ್ರ, ಶಾಲು, ಫಲಕ ಎಲ್ಲವನ್ನೂ ದೇವರ ಮುಂದಿಟ್ಟು ಕೈಮುಗಿದೆ ’

‘ಓಹೋ! ಅವನ್ನೇನೋ ದೇವರ ಮುಂದಿಟ್ಟು ಕೈಮುಗಿದಿರಿ, ಅದೇನೋ ಸರಿ.

ಅದೇ ಆ ಚೆಕ್ಕೂ? ಅದು ಮಾತ್ರ ಬ್ಯಾಂಕಿಗಾ? ಅದನ್ನೆಲ್ಲಿಟ್ರೀ ಅದನ್ನು ಮೊದಲು ಹೇಳಿ!’

ಪ್ರಭು ಶಂಕರ ರ ready wit ಅಂದರೆ ಹೀಗೆ.

ಕುವೆಂಪು ಫಕ್ಕನೆ ನಕ್ಕರು.

ಅದಾದನಂತರ ನಡೆಯುತ್ತಿದ್ದ ಸರಸ ಸಂಭಾಷಣೆಗಳಲ್ಲಿ ಕುವೆಂಪುರವರು, ‘ಎಲ್ಲಿ ಪ್ರಭುಶಂಕರ್, ಅದೇ ಅದೆ ಆ ಚೆಕ್ಕಿನ ವಿಷಯ ಹೇಳಿ’ ಎಂದು ಕೇಳುತ್ತಿದ್ದರು. ಮನಸಾರೆ ನಕ್ಕು ಹಗುರಾಗುತ್ತಿದ್ದರು.

ನೆನಪು -ಎರಡು

ಪ್ರಸಾರಾಂಗವನ್ನು ಪ್ರಾರಂಭಿಸಿದ್ದೇ ಕನ್ನಡದ ಸರ್ವತೋಮುಖ ಬೆಳವಣಿಗೆಗಾಗಿ. ನಾನಾ ವಿಷಯಗಳಿಗೆ ಸಂಬಂಽಸಿದ ಪುಸ್ತಕಗಳನ್ನು ಕನ್ನಡದಲ್ಲಿಯೇ ಪ್ರಕಟಿಸುವ ಉದ್ದೇಶ. ಭೌತಶಾಸ್ತ್ರ, ರಸಾಯನ, ಜೈನಸಾಹಿತ್ಯ, ಸಮಾಜಶಾಸ್ತ್ರ ಹೀಗೆ ಎಲ್ಲ ವಿಷಯಗಳಲ್ಲೂ ತಜ್ಞರಿಂದ ಕನ್ನಡದಲ್ಲಿ ಪುಸ್ತಕಗಳನ್ನು ಬರೆಸಿದ್ದರು. ಆ ಬಾರಿ ಪ್ರಕಟಿಸಲು ಆಯ್ಕೆ ಮಾಡಿದ್ದ ಅನೇಕ ಪುಸ್ತಕಗಳಲ್ಲಿ ಎಚ್.ಎಂ.ಈಶ್ವರ್ ಬರೆದಿದ್ದ ಮನಃಶಾಸ್ತ್ರ ಪುಸ್ತಕವೂ ಸೇರಿತ್ತು.

ಆಯ್ಕೆ ಸಮಿತಿ ಸದಸ್ಯರಾಗಿದ್ದ ಡಾ.ಹಾ.ಮಾ.ನಾಯಕರು ಆ ಪುಸ್ತಕದ ಪ್ರಕಟಣೆ ಬಿಲ್ ಕುಲ್ ಬೇಡವೆಂದು ಹಠ ಹಿಡಿದರು.

“ಆ ಪುಸ್ತಕ ಚೆನ್ನಾಗಿದೆ ಎಂಬ ಒಮ್ಮತದ ಅಭಿಪ್ರಾಯವನ್ನು ಎಲ್ಲರೂ ಸೂಚಿಸಿದ್ದಾರೆ. ಯಾವ ಕಾರಣಕ್ಕಾಗಿ ನಿಮ್ಮ ವಿರೋಧ? ಅದರಲ್ಲಿ ಕಳಪೆಯಾದದ್ದು ಏನಿದೆ?” ಕೇಳಿದರು ಕುಲಪತಿಯಾಗಿದ್ದ ಕುವೆಂಪು.

ಸಂಕೋಚದಿಂದಲೇ ಹಾಮಾನಾ ನಿವೇದಿಸಿಕೊಂಡರು. “ಪುಸ್ತಕವೇನೋ ಚೆನ್ನಾಗಿದೆ. ಅದರ ಬಗ್ಗೆ ತಕರಾರಿಲ್ಲ. ಆದರೆ ಬರೆದವನು ನನ್ನ ತಮ್ಮ. ನಾನು ಆಯ್ಕೆ ಸಮಿತಿಯಲ್ಲಿದ್ದುಕೊಂಡು ಅದನ್ನು ಆಯ್ಕೆ ಮಾಡಿದರೆ ಸ್ವಜನ ಪಕ್ಷಪಾತವಾಗುತ್ತದೆ. ಆದ್ದರಿಂದ ಬೇಡ”

“ಓಹೋ! ನಿಮ್ಮ ತಕರಾರು ಲಾಜಿಕಲ್ ಅಲ್ಲ. ಬಯಾಲಾಜಿಕಲ್ ಬಿಡಿ. ಪುಸ್ತಕದಲ್ಲಿ ವಸ್ತು ವಿಷಯದ ನಿರೂಪಣೆ ಉತ್ತಮವಾಗಿರುವುದು ಮುಖ್ಯ. ಇಡೀ ಸಮಿತಿ ಒಪ್ಪಿದೆ. ಪುಸ್ತಕ ಪ್ರಕಟವಾಗಲಿ “ಎಂದರು ಕುವೆಂಪು ನಗುತ್ತಾ.

ನೆನಪು -ಮೂರು

ಪ್ರೊಫೆಸರ್ ಹುದ್ದೆಗಳ ಪದೋನ್ನತಿ ಬಗ್ಗೆ ಮೀಟಿಂಗ್ ನಡೆಯುತ್ತಿತ್ತು. ಕನ್ನಡ ವಿಭಾಗದಿಂದ ತ.ಸು.ಶಾಮರಾಯರ ಹೆಸರಿತ್ತು. ಹೆಸರು ಸೂಚಿಸಬೇಕಿದ್ದ ತೀನಂಶ್ರೀ ಮತ್ತು ಡಿ.ಎಲ್.ಎನ್. ಇಬ್ಬರಿಗೂ ತ.ಸು.ಶಾಮರಾವ್ ಆಪ್ತ ಸ್ನೇಹಿತ. ತಾವೇ ಮುಂದಾಗಿ ಅವರ ಹೆಸರು ಸೂಚಿಸಿದರೆ ಸ್ವಜನ ಪಕ್ಷಪಾತ ಅನ್ನಿಸಿಕೊಳ್ಳುತ್ತದೆ ಎಂಬ ಸಂದಿಗ್ಧತೆ ಇಬ್ಬರಿಗೂ.

ಕುಲಪತಿಗಳಾದ ಕುವೆಂಪು ಅವರಿಗೂ ತಸುಶಾ ಪರಮಾಪ್ತರು. ಅವರ ಪರಮಗುರು ಟಿ.ಎಸ್.ವೆಂಕಣ್ಣಯ್ಯನವರ ತಮ್ಮ. ತಸುಶಾರಿಗೆ ಶಿವಮೊಗ್ಗಾಗೆ ವರ್ಗವಾದಾಗ, ಸ್ವತಃ ಕುವೆಂಪು ಅವರೇ ನಾಲ್ಕಾರು ಕಡೆ ಅಲೆದಾಡಿ ಬಾಡಿಗೆ ಮನೆ ಹುಡುಕಿ ಕೊಡಿಸಿದ್ದರು. ಗುರುವಿನಷ್ಟೇ ಆದರ, ಅಭಿಮಾನ ಕುವೆಂಪುಗೆ ಅವರ ತಮ್ಮನ ಮೇಲೂ.

ಹೇಗೂ ಮೀಟಿಂಗಿನಲ್ಲಿ ಕುವೆಂಪು ಅವರೇ ತಸುಶಾಮರಾಯರ ಹೆಸರು ಹೇಳುತ್ತಾರೆ. ಆಗ ತಾವಿಬ್ಬರೂ ಒಪ್ಪಿ ತಲೆಯಾಡಿಸಿಬಿಡೋಣ ಎಂದು ಮಿತ್ರರಿಬ್ಬರೂ ತಮ್ಮಲ್ಲೇ ತೀರ್ಮಾನಿಸಿಕೊಂಡರು.

ಅನೇಕ ವಿಭಾಗಗಳ ಪದೋನ್ನತಿ ಹುದ್ದೆಗಳ ಚರ್ಚೆ ಮುಗಿಯಿತು. ಕನ್ನಡ ವಿಭಾಗದ ಪ್ರಸ್ತಾಪವೇ ಇಲ್ಲ. ಇವರು ಹೇಳಲಿ ಎಂದು ಕುವೆಂಪು. ಅವರೇ ಸೂಚಿದಾಗ ಯೆಸ್ ಅನ್ನೋಣ ಎಂದು ಇವರು. ಈ ಹೊಂಚುವಿಕೆಯಲ್ಲಿ ತಸುಶಾ ಹೆಸರೇ ಪ್ರಸ್ತಾಪವಾಗದೆ ಅವರ ಪ್ರೊಫೆಸರ್ ಗಿರಿ ಹಾರಿ ಹೋಯಿತು. ಬೇರೆ ಇನ್ನೆರಡು ಸಂದರ್ಭಗಳಲ್ಲೂ ತಸುಶಾರ ಬಾಯಿಗೆ ಬಂದಿದ್ದ ಕೈತುತ್ತು ಜಾರಿಹೋಗಿತ್ತು.

ತ.ಸು.ಶಾಮರಾಯರು ಸಿಕ್ಕಾಗ ಕುವೆಂಪು ವಿಷಾದದಿಂದ ಹೇಳಿದರು, “shama rao unfortunately you are a brahmin ? you missed it”

ತಸುಶಾ ಅಂದರು , no sir ? fortunately i am brahmin ?  ಯಾಕೆಂದ್ರೆ ನನಗದನ್ನು ಸಹಿಸಿಕೊಂಡು ಮೌನವಾಗಿರುವ ಶಕ್ತಿ ಇದೆ” ಎಂದರು ನಗುತ್ತಾ. ಒಬ್ಬರಿಗೆ ನೆರವಾಗುವಂತಹ ಮಾತುಗಳನ್ನು ಆಯಾ ಸಂದರ್ಭದಲ್ಲೇ ವಿಳಂಬಿಸದೆ ಹೇಳಿಬಿಡಬೇಕು. ಮುಂದೂಡಿದೆವೆಂದರೆ ಆ ಅಮೃತಘಳಿಗೆ ಮತ್ತೆಂದೂ ಬಾರದು ಎಂಬುದನ್ನು ಮನಗಂಡೆ – ಕುವೆಂಪು ಕಲಿತ ಮಹೋನ್ನತ ಪಾಠ.

ನೆನಪು- ನಾಲ್ಕು

ಪ್ರಭುಶಂಕರ ಅವರ ಇಬ್ಬರು ಚಿಕ್ಕ ಮಕ್ಕಳು ಕುವೆಂಪು ಮನೆಯಲ್ಲಿ ಆಟವಾಡಿಕೊಳ್ಳಲು ಬರುತ್ತಿದ್ದವು.

ಕುವೆಂಪುರಿಗೆ ಆ ಮಕ್ಕಳೆಂದರೆ ಅಕ್ಕರೆ. ಅವುಗಳಂತೆಯೇ ಮಾತಾಡಿಕೊಂಡು ಆಟವಾಡುತ್ತಿದ್ದರು.

“ತಾತಾ, ನಾಳೆ ನನ್ನ ಹುಟ್ಟಿದ ಹಬ್ಬ. ನೀವು ನಮ್ಮನೆಗೆ ಬರಬೇಕು” ಎಂದಳು ನಿವೇದಿತ. “ಇಲ್ಲಮ್ಮಾ ನಾನೆಲ್ಲೂ ಹೊರಗಡೆ ಹೋಗ್ತಾ ಇಲ್ಲ. ನಿನಗೇ ಗೊತ್ತಲ್ಲಾ? ಬರದೇ ಹೋದ್ರೆ ಏನು ಮಾಡ್ತೀಯಾ?” ಕೇಳಿದರು ಕುವೆಂಪು.

“ಊಂ. ಬರದೆ ಹೋದ್ರೆ ಅಷ್ಟೆ. ನಾಳೆಯಿಂದ ನಿಮ್ಮನೆಗೆ ಆಡೋದಿಕ್ಕೆ ಬರೋದೇ ಇಲ್ಲ” ಎಂದಳಾ ಹುಡುಗಿ. ಆ ದೃಢತೆ ನೋಡಿ ಕುವೆಂಪುಗೆ ಬೆರಗು!

ಮಾರನೇ ಸಂಜೆ ಕುವೆಂಪು ತಮ್ಮ ಪತ್ನಿಯ ಜೊತೆಗೂಡಿ ಹೋಗಿ ಪ್ರಭುಶಂಕರರ ಮನೆ ಬಾಗಿಲು ತಟ್ಟಿದರು. ಪ್ರಭುಶಂಕರ ಅವರಿಗೆ ಪರಮಾಶ್ಚರ್ಯ. ಹೇಳದೆ ಕೇಳದೆ ಬಂದಿದ್ದಾರೆ ಗುರುಗಳು!. ದಿಗ್ಭ್ರಮೆ ಮತ್ತು ಸಡಗರದಿಂದ ಬರಮಾಡಿಕೊಂಡರು.

“ಎಲ್ಲಿ ಎಲ್ಲೀ ನಿಮ್ಮ ಚೋಟು ಹುಡುಗಿ? ನನಗೇ ಬೆದರಿಕೆ ಹಾಕ್ತಾಳಲ್ಲಾ?”

ಪ್ರಭುಶಂಕರರಿಗೆ ಕುವೆಂಪು ತಮ್ಮ ಮನೆಗೆ ಯಾಕೆ ಬಂದಿದ್ದಾರೆಂಬುದೇ ಗೊತ್ತಾಗಲಿಲ್ಲ. ಒಳಗಡೆಯಿದ್ದ ಮಗಳನ್ನು ಕೂಗಿದರು, “ನಿವೇದಿತಾ ಯಾರು ಬಂದಿದ್ದಾರೆ ನೋಡು ಬಾ”

ಮಕ್ಕಳಿಬ್ಬರೂ ಓಡಿ ಬಂದರು. “ನನ್ನನ್ನೇ ಹೆದರುಸ್ತೀಯಾ? ನೋಡು. ನಾವಿಬ್ಬರೂ ಬಂದಿದ್ದೇವೆ ಸರೀನಾ?” ಎಂದರು ಕುವೆಂಪು.

ಮಕ್ಕಳೆರಡೂ ಸುಮ್ಮನೆ ತಲೆಯಾಡಿಸಿದವು.

ಪ್ರಭುಶಂಕರ ದಂಪತಿಗಳಿಗೆ ನಂಬಲಾಗದ ಆಶ್ಚರ್ಯ. ಎಂತೆಂಥಾ ದೊಡ್ಡವರು ಬಂದು ಕರೆದರೂ ಹೋಗಲೊಲ್ಲದ ಕುವೆಂಪು ತಮ್ಮ ಮನೆಗೇ ದಯಮಾಡಿಸಿದ್ದಾರೆ. ಅದೂ ಸಪತ್ನಿ ಸಮೇತ!

ಆ ದಿನಗಳಲ್ಲಿ ಹುಟ್ಟು ಹಬ್ಬಕ್ಕೆ ಕೇಕ್ ಕಟ್, ಮೊಂಬತ್ತಿ ಉಫ್! ರೀತಿಯ ಮೇಜುವಾನಿಗಳೇನೂ ಇರಲಿಲ್ಲ. ಹೆಚ್ಚೆಂದರೆ ಪಾಯಸ! ಅದೂ ಅಪರೂಪ. ಮಕ್ಕಳಿಗೆ ಮಾತ್ರ ಆ ದಿನಾಂಕದ ಸಂಭ್ರಮ ಅಷ್ಟೇ. ನೆರೆಯವರೊಬ್ಬರು ಹೋಗಿ ದೂರದ ಅಂಗಡಿಯಿಂದ ತಂದ ಜಿಲೇಬಿ, ಕಾರಾಸೇವಿನ ಸತ್ಕಾರ ನಡೆಯಿತು.

ತಮ್ಮ ಬಾಲಭಾಷೆಗೆ ಬೆಲೆ ಕೊಟ್ಟು ಮಹಾಕವಿ ಮನೆಗೆ ಬಂದಿದ್ದರೆಂಬುದು ಆ ಮಕ್ಕಳಿಗೆ ಗೊತ್ತೇ ಆಗಲಿಲ್ಲ.

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

6 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

6 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

6 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

7 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

7 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

7 hours ago