ಎಡಿಟೋರಿಯಲ್

ಹೆಣ್ಣು ಒಡಲು- ಕೋಮು ಗಲಭೆಗಳ ಕದನ ಮೈದಾನ ಕಡಲು

ಮಣಿಪುರದ ಮೈತೇಯಿ-ಕುಕಿ ಜನಾಂಗಗಳ ನಡುವಣ ಹಿಂಸಾತ್ಮಕ ಪೈಶಾಚಿಕ ಭೀಭತ್ಸಗಳು ಹೊರಕ್ಕೆ ಉರುಳುತ್ತಲಿವೆ. ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಹತ್ಯೆಗಳು ವರದಿಯಾಗುತ್ತಲಿವೆ. ಅದುಮಿಟ್ಟಿರುವ ಪ್ರಕರಣಗಳು ಆ ಹೆಣ್ಣುಮಕ್ಕಳ ಮೈಮನಗಳಲ್ಲೇ ಸಮಾಧಿಯಾಗಿ ಸಾವಿನ ತನಕ ಹುಣ್ಣಾಗಿ ಕಾಡಲಿವೆ.

ಗಂಡಸರ ಮೇಲಿನ ಹಗೆ ತೀರಿಸಿಕೊಳ್ಳಲು, ಅವಮಾನಪಡಿಸಲು, ಆತ್ಮಸ್ಥೆ ರ್ಯವನ್ನು ಉಡುಗಿಸಲು ಅವರ ತಾಯಂದಿರು, ಪುತ್ರಿಯರು, ಪತ್ನಿಯರು, ಸೋದರಿಯರು, ಸೊಸೆಯಂದಿರ ದೇಹಗಳನ್ನು ಅಮಾನುಷವಾಗಿ ಅತಿಕ್ರಮಿಸಿ ಉಲ್ಲಂಘಿಸುವ ಗಂಡಾಳಿಕೆಯ ವಿಕೃತಿ ಇಂದು ನೆನ್ನೆಯದಲ್ಲ. ಹೆಣ್ಣು ದೇಹವನ್ನು ತನ್ನ ಖಾಸಗಿ ಆಸ್ತಿಪಾಸ್ತಿ ಎಂದು ಬಗೆಯುತ್ತ ಬಂದಿರುವ ಗಂಡು ನೋಟದ ಆಳಗಳಲ್ಲಿ ಬೇರು ಬಿಟ್ಟಿರುವ ವಿಕೃತಿಯಿದು.

ಅಮೆರಿಕನ್ ಮಹಿಳೆಯೊಬ್ಬಳು ಹೇಳುತ್ತಾಳೆ- ಆಸ್ತಿಪಾಸ್ತಿ ಬಾಯಿಲ್ಲದ್ದು. ಅದಕ್ಕೆ ಆಯ್ಕೆಗಳು ಇರುವುದಿಲ್ಲ. ಅದನ್ನು ಸಾಗಿಸಬಹುದು, ಮೂಲೆಗೆ ಸರಿಸಬಹುದು, ನೆಲಸಮ ಮಾಡಲೂಬಹುದು. ಭಾರಿ ಒಜ್ಜೆ ಒತ್ತಡದಲ್ಲಿ ಮುರಿದು ಬಿದ್ದರೆ, ಒಡೆದು ಹೋದರೆ ಮತ್ತೊಂದನ್ನು ಖರೀದಿಸಿ ತರಬಹುದು. ತನ್ನನ್ನು ಎಲ್ಲಿ ಖರೀದಿಸಬೇಕು ಹೇಗೆ ಇರಿಸಬೇಕು ಎಲ್ಲಿಗೆ ಸಾಗಿಸಬೇಕು ಎಂದು ಆಸ್ತಿಪಾಸ್ತಿಯನ್ನು ಯಾರಾದರೂ ಕೇಳುತ್ತಾರೆಯೇ? ಹೆಣ್ಣು ಕೂಡ ಪಿತೃಪ್ರಧಾನ ವ್ಯವಸ್ಥೆಯ ಪಾಲಿಗೆ ಅಂತಹುದೇ ಒಂದು ಆಸ್ತಿಪಾಸ್ತಿ.

ಶತ್ರುವಿಗೆ, ಪರಧರ್ಮಕ್ಕೆ ಈ ಆಸ್ತಿ ಒಲಿಯುವಂತಿಲ್ಲ. ಒಲಿದರೆ ಅದನ್ನು ಹಾಳುಗೆಡುವುದು ಸಮಾಜಸಮ್ಮತ ಮತ್ತು ಮಗುಮ್ಮಾಗಿ ಧರ್ಮಸಮ್ಮತ ಕೂಡ ಎಂಬುದನ್ನು ಅಘೋಷಿತ ಸಂಹಿತೆಯನ್ನಾಗಿ ರೂಪಿಸಲಾಗಿದೆ. ಗುಜರಾತಿನ ಗೋಧ್ರೋತ್ತರ ದಂಗೆಗಳಲ್ಲಿ ಮುಸಲ್ಮಾನನನ್ನು ಮದುವೆಯಾದ ಗೌರಿಯನ್ನು ಮೂವತ್ತು- ನಲವತ್ತು ಮಂದಿಯ ಗುಂಪಿನ ಎದುರು ಬಹಿರಂಗವಾಗಿ ಸಾಮೂಹಿಕ ಅತ್ಯಾಚಾರದ ಶಿಕ್ಷೆಗೆ ಗುರಿಪಡಿಸಲಾಯಿತು. ಗುಂಪಿನಿಂದ ಒಬ್ಬೇ ಒಬ್ಬ ವ್ಯಕ್ತಿಯೂ ತಡೆಯಲು ಮುಂದೆ ಬರಲಿಲ್ಲ. ಗೌರಿಯ ಅಪ್ರಾಪ್ತ ವಯಸ್ಸಿನ ಮಗಳು ಈ ಅತ್ಯಾಚಾರಕ್ಕೆ ಸಾಕ್ಷಿಯಾದಳು. ಮುಂದೆ ಗೌರಿ ಎರಡೆರಡು ಕೇಸುಗಳನ್ನು ಸೆಣೆಸಬೇಕಾಯಿತು. ಒಂದು ತನ್ನ ಮೇಲಿನ ಅತ್ಯಾಚಾರಕ್ಕೆ ಸಂಬಂಧಿಸಿದ್ದರೆ, ಮತ್ತೊಂದು ತನ್ನ ಮಗಳ ಅಪಹರಣ ಕುರಿತದ್ದು.

ಗಂಡಾಳಿಕೆಯ ವಿಕೃತಿಗಳಲ್ಲಿ ಹೆಣ್ಣುಮಕ್ಕಳೂ ಭಾಗಿಗಳಾಗುವಂತೆ ಅವರ ಮೆದುಳು ತೊಳೆಯಲಾಗಿದೆ. ನರೋಡ ಪಾಟ್ಯ ದಂಗೆಗಳ ರೂವಾರಿ ಬಾಬು ಭಜರಂಗಿ ತಾನು ತನ್ನ ಪತ್ನಿಯ ಕಣ್ಮುಂದೆಯೇ ಮತ್ತೊಂದು ಕೋಮಿನ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದ್ದಾಗಿ ಜಂಭ ಕೊಚ್ಚಿಕೊಂಡದ್ದು ಕುಟುಕು ಕಾರ್ಯಾಚರಣೆಯ ಕ್ಯಾಮೆರಾದಲ್ಲಿ ದಾಖಲಾಗಿದೆ. ಮಣಿಪುರದ ಕುಕಿ ಹೆಣ್ಣುಮಕ್ಕಳ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರಕ್ಕೆ ಮೈತೇಯಿ ಹೆಣ್ಣುಮಕ್ಕಳು ಗಂಡಸರನ್ನು ಹುರಿದುಂಬಿಸಿದ ವರದಿಗಳಿವೆ.

ಕೋಮು ದಂಗೆಗಳೂ ಸೇರಿದಂತೆ ಚರಿತ್ರೆ ಮತ್ತು ವರ್ತಮಾನ ಕಾಲದ ಧಾರ್ಮಿಕ, ಜನಾಂಗೀಯ, ರಾಜಕೀಯ, ಆರ್ಥಿಕ ಹಿತಾಸಕ್ತಿಯ ಕದನಗಳು, ಯುದ್ಧಗಳಿಗೆ ಲಕ್ಷ ಲಕ್ಷ ಹೆಣ್ಣು ದೇಹಗಳು ಕದನ ಭೂಮಿಗಳಾಗಿ ಪರಿಣಮಿಸಿದ್ದು ನಾಚಿಕೆಗೇಡಿನ ನಿಜ. ದೇಶ ದೇಶಗಳ ನಡುವೆ, ರಾಜ್ಯ ರಾಜ್ಯಗಳ ನಡುವೆ, ಪರಸ್ಪರ ಕೆಕ್ಕರಿಸಿ ನಿಂತ ಎರಡು ಧರ್ಮಗಳ ನಡುವೆ, ಎರಡು ಜಾತಿಗಳ ನಡುವೆ, ಅದೇ ಜಾತಿಯ ಎರಡು ಗುಂಪುಗಳ ಕುರುಡು ದ್ವೇಷಕ್ಕೂ ಹೆಣ್ಣು ದೇಹಗಳೇ ಆಹುತಿಯ ಸರಕುಗಳು. ಆಕೆಯನ್ನು ಎಷ್ಟು ತೀವ್ರವಾಗಿ ಎಷ್ಟು ಅಮಾನುಷವಾಗಿ ಉಲ್ಲಂಘಿಸಲಾದರೆ ಅಷ್ಟು ತೀವ್ರವಾಗಿ ಅಮಾನುಷವಾಗಿ ‘ಆಕೆ’ಯನ್ನು ಹೊಂದಿದ ‘ಅವನ’ ಮರ್ಮಸ್ಥಾನಕ್ಕೆ ಇರಿದು ಅವಮಾನಪಡಿಸಿದಂತೆ.

‘ಕುಟುಂಬ ಮರ್ಯಾದೆ’ಯ ಹೊಣೆಗಾರಿಕೆಯನ್ನು ಹೆಣ್ಣು ದೇಹಗಳ ಮೇಲೆಯೇ ಹೊರಿಸಲಾಗಿದೆ. ವಿಶೇಷವಾಗಿ ಆಕೆ ಮತ್ತೊಂದು ಜಾತಿ, ಧರ್ಮ ಅಥವಾ ವರ್ಗಕ್ಕೆ ಸೇರಿದ ಗಂಡನ್ನು ವರಿಸಿದಾಗ ನಡೆಯುವ ‘ಅವಮರ್ಯಾದೆ ಹತ್ಯೆ’ಗಳು ಇಲ್ಲವೇ ಯುದ್ಧಗಳು- ಘರ್ಷಣೆಗಳಲ್ಲಿ ಲೈಂಗಿಕ ಅತ್ಯಾಚಾರಗಳನ್ನು ಶತ್ರುವಿಗೆ ವಿಽಸುವ ಶಿಕ್ಷೆಯೆಂದು ಜರುಗಿಸಿದಾಗ ಈ ಮಾತು ಹೆಚ್ಚು ನಿಜವೆನಿಸುತ್ತದೆ.

ಗುಜರಾತಿನ ಕೋಮು ಗಲಭೆಗಳಲ್ಲಿ ಹೆಣ್ಣುಮಕ್ಕಳು ನವೆದು ನಶಿಸಿದರು. ದೆಹಲಿಯ ಇಂದಿರಾ ಹತ್ಯೆಯ ನಂತರ ಜರುಗಿದ್ದ ಮತ್ತೊಂದು ಮಹಾ ಮಾರಣಹೋಮದಲ್ಲಿ ಸಿಖ್ ರುಂಡಗಳ ತರಿದವರ ರಕ್ತದಾಹ ಅಲ್ಲಿಗೇ ತಣಿಯಲಿಲ್ಲ. ಸಾವಿರಾರು ಸಿಖ್ ಹೆಣ್ಣುಮಕ್ಕಳ ದೇಹಗಳನ್ನು ಉಲ್ಲಂಘಿಸಲಾ ಯಿತು. ಗುಜರಾತ್ ಮತ್ತು ದೆಹಲಿಯ ಈ ಎರಡೂ ನರಮೇಧಗಳು ಮತ್ತು ಹೆಣ್ತನದ ಉಲ್ಲಂಘನೆಗಳು ನಡೆದದ್ದು ಆಯಾ ಪ್ರಭುತ್ವಗಳ ಮೂಗಿನ ಕೆಳಗೇ.

ಕದನಗಳಲ್ಲಿ ಹೆಣ್ಣುಮಕ್ಕಳ ಮೇಲೆ ಜರುಗುವ ಲೈಂಗಿಕ ಹಿಂಸೆಯು ಇತಿಹಾಸದ ಮಹಾಮೌನಗಳಲ್ಲಿ ಒಂದು ಎನ್ನುತ್ತದೆ ವಿಶ್ವಸಂಸ್ಥೆ. ಕದನ ನಿರತ ದೇಶಗಳ ನಡುವಣ ಕದನವಿರಾಮ ಒಪ್ಪಂದಗಳು, ನಿಶ್ಯಸ್ತ್ರೀಕರಣ ಕಾರ್ಯಕ್ರಮಗಳು ಹಾಗೂ ಶಾಂತಿ ಸ್ಥಾಪನೆಯ ಮಾತುಕತೆಗಳ ಮೇಜಿನಲ್ಲಿ ಲೈಂಗಿಕ ಹಿಂಸೆಯ ವಿಷಯ ಪ್ರಸ್ತಾಪಕ್ಕೇ ಬರುವುದು ಬಲು ವಿರಳ ಎನ್ನುತ್ತದೆ.

ಉತ್ತರಪ್ರದೇಶದ ಮುಝಫ್ಛರ್ ನಗರ ಕೋಮು ದಂಗೆಗಳ ಸಂದರ್ಭದಲ್ಲಿ ಮೂರು ಹೆಣ್ಣುಮಕ್ಕಳ ತಾಯಿಯೊಬ್ಬಳ ಈ ಮಾತುಗಳು- ನನ್ನ ಮೂವರು ಹೆಣ್ಣುಮಕ್ಕಳು (ವಯಸ್ಸು 17, 18, 21) ಮತ್ತು ನನ್ನ ಕುಟುಂಬದ ಮತ್ತೊಬ್ಬ ಹೆಣ್ಣುಮಗಳ ಮೇಲೆ 13 ಮಂದಿ ದಂಗೆಕೋರರು ಸಾಮೂಹಿಕ ಅತ್ಯಾಚಾರ ನಡೆಸಿದರು. ಈ ನಿರ್ಲಜ್ಯ ಮತ್ತು ಪಾಶವೀ ಕೃತ್ಯವನ್ನು ಕಣ್ಣು ತೆರೆದು ನೋಡುವಂತೆ ನನ್ನನ್ನು ಬಲವಂತಪಡಿಸಲಾಯಿತು.

ಇಂತಹುದೇ ಅತ್ಯಾಚಾರಗಳಿಗೆ ಗುರಿಯಾದ ನೂರಾರು ಹೆಣ್ಣುಮಕ್ಕಳು ಪೊಲೀಸರಿಗೆ ದೂರು ನೀಡಲು ಮುಂದೆ ಬರಲಿಲ್ಲ. ತನ್ನ ಮೇಲೆ ಅತ್ಯಾಚಾರ ಆಗಲಿಲ್ಲ, ಮತ್ತೊಬ್ಬಾಕೆಯ ಮೇಲೆ ಆಗಿದ್ದನ್ನು ನೋಡಿದೆ ಎಂದು ಹೇಳಿ ಅಪಮಾನ ನುಂಗಿಕೊಂಡ ಇವರಿಗೆ ಅತ್ಯಾಚಾರದ ಕಳಂಕ ಬದುಕಿನದ್ದಕ್ಕೂ ಅಂಟಿಕೊಳ್ಳುವ ಭಯ. ಗಂಡನಿಗೆ ಗೊತ್ತಾದರೆ ಕೈ ಬಿಟ್ಟಾನೆಂಬ ಅಳುಕು.

ಚರಿತ್ರೆ ಮತ್ತು ವರ್ತಮಾನಗಳೆರಡೂ ಇಂತಹ ಲಜ್ಜಾಸ್ಪದ ದಾರುಣಗಳಿಂದ ಕಿಕ್ಕಿರಿದಿದೆ. ಜಪಾನಿ ಸೈನಿಕರು ಕೊರಿಯಾದ ಹೆಣ್ಣುಮಕ್ಕಳನ್ನು ಲೈಂಗಿಕ ದಾಸಿಯರೆಂದು ನಡೆಸಿಕೊಂಡದ್ದರ ಕುರಿತು ಜಪಾನ್ ದೇಶಕ್ಕೆ ಇಂದಿಗೂ ವಿಷಾದವಿಲ್ಲ. ಭಾಷೆ ಮತ್ತು ಸಂಸ್ಕೃತಿಯ ದಬ್ಬಾಳಿಕೆ ವಿರುದ್ಧ ಸಿಡಿದೆದ್ದು ಪಾಕಿಸ್ತಾನದ ವಿರುದ್ಧ ಸೆಣೆಸಿ ಸ್ವತಂತ್ರ ದೇಶವಾಗಿ ಉದಯಿಸಿದ ಪೂರ್ವ ಬಂಗಾಳವನ್ನು ಮಣಿಸುವ ಪ್ರಯತ್ನಕ್ಕೆ ಪಾಕ್ ಸೇನೆ ಬಳಸಿದ್ದು ಬಂಗಾಳಿ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿದ ಅಸ್ತ್ರವನ್ನು. ಬಂಗಾಳಿ ಹೆಣ್ಣುಗಳ ಬಸಿರುಗಳಿಗೆ ಪಂಜಾಬಿ ಸಂತಾನ ತುರುಕುತ್ತೇವೆ ನೋಡಿ ಎಂಬ ಹೇಷಾರವ.

ಉತ್ತರ ಇರಾಕ್‌ನ ಸಾವಿರ ಸಾವಿರ ಯಜೀದಿ ಯುವತಿಯರನ್ನು ಇಸ್ಲಾಮಿಕ್ ಉಗ್ರವಾದಿಗಳು ವಶಕ್ಕೆ ತೆಗೆದುಕೊಂಡು ಲೈಂಗಿಕ ಗುಲಾಮಗಿರಿಗೆ ಇರಿಸಿಕೊಂಡದ್ದು, ತಮ್ಮ ತೆವಲು ತೀರಿದ ಮೇಲೆ ಇತರರಿಗೆ ಹರಾಜು ಕೂಗಿ ಮಾರಾಟ ಮಾಡಿದ್ದು ಇತ್ತೀಚಿನ ನಾಚಿಕೆಗೇಡು. ಇಸ್ಲಾಮ್ ಧರ್ಮವನ್ನು ಒಪ್ಪದೆ ’ಸೈತಾನನನ್ನು ಪೂಜಿಸುವ ಧರ್ಮವನ್ನು ನೆಚ್ಚಿದ’ ಅಲ್ಪಸಂಖ್ಯಾತ ಯಜೀದಿ ಕುಲಕ್ಕೆ ಸೇರಿದ್ದು ಈ ಹೆಣ್ಣುಮಕ್ಕಳ ‘ಅಪರಾಧ’. ಯಜೀದಿಗಳಿಗೆ ಪಾಠ ಕಲಿಸಲು ಇಸ್ಲಾಮಿಕ್ ಉಗ್ರವಾದಿಗಳು ಬಳಸಿದ್ದು ಯಜೀದಿ ಹೆಣ್ಣುಮಕ್ಕಳ ದೇಹಗಳನ್ನು.

ಕಾಶ್ಮೀರದಲ್ಲಿ, ಮಣಿಪುರದಲ್ಲಿ, ಬಸ್ತರಿನಲ್ಲಿ, ಬಂಡುಕೋರರಿಗೆ ‘ಶಿಕ್ಷೆ’ ವಿಧಿಸಲು ಸ್ವತಂತ್ರ ಭಾರತದ ಸೇನೆ ಬಳಸಿದ್ದು ಅದೇ ಹೆಣ್ಣು ದೇಹಗಳನ್ನು.

ಮಾವೋವಾದಿ ನಿಗ್ರಹ ಕಾರ್ಯಾಚರಣೆ ನಡೆಸಲೆಂದು ವರ್ಷದ ಹಿಂದೆ ಬಸ್ತರಿನ ಐದು ಹಳ್ಳಿಗಳ ಮೇಲೆ ಎರಗಿದ ಪೊಲೀಸರು ಮತ್ತು ಅರೆಸೇನಾ ಪಡೆಗಳು ಅಸಹಾಯಕ ಆದಿವಾಸಿ ಹೆಣ್ಣುಮಕ್ಕಳ ಮೇಲೆ ನಡೆಸಿರುವ ದುಷ್ಕ ತ್ಯಗಳು ಮೈ ನಡುಗಿಸಿ ಹೇವರಿಕೆ ಹುಟ್ಟಿಸುವಂತಹವು.. ಹೆಣ್ಣುಮಕ್ಕಳ ತೊಡೆ ನಿತಂಬಗಳನ್ನು ಥಳಿಸಲಾಯಿತು. ಅಪ್ರಾಪ್ತ ವಯಸ್ಸಿನ ಬಾಲೆ-ಗರ್ಭಿಣಿಯನ್ನೂ ಬಿಡದೆ ಅತ್ಯಾಚಾರ ನಡೆಸಲಾಯಿತು. ಬಾಣಂತಿಯರೆಂದು ಬೇಡಿಕೊಂಡರೂ ಬಿಡದೆ ರವಿಕೆ ಬಿಚ್ಚಿ ಹಾಲು ಒಸರುತ್ತಿದೆಯೇ ಎಂದು ಹಿಸುಕಿ ನೋಡಲಾ ಯಿತು. ಬಸುರಿಯ ಬಟ್ಟೆ ಹರಿದು ನೀರಿಗೆ ನೂಕಿ ಉಸಿರಿ ಕಟ್ಟಿಸಿ ಅತ್ಯಾಚಾರ ಮಾಡಲಾಯಿತು. ಜನನಾಂಗಗಳಿಗೆ ಖಾರದ ಪುಡಿ ತುರುಕುವ ಬೆದರಿಕೆ. ಆ ಗ್ರಾಮದ ಗಂಡಸರು ಮಾವೋವಾದಿಗಳಿಗೆ ನೆರವಾಗಿದ್ದರೆಂದು ಅವರ ಕುಟುಂಬಗಳ ಹೆಣ್ಣುಮಕ್ಕಳಿಗೆ ನೀಡಿದ ಲೈಂಗಿಕ ಶಿಕ್ಷೆಯಿದು.

ಚರಿತ್ರೆಯಲ್ಲಿ ಹಿಂದೂ ಹೆಣ್ಣುಮಕ್ಕಳನ್ನು ವಶಪಡಿಸಿಕೊಂಡು ಮುಸಲ್ಮಾನ ಸಂತತಿಯನ್ನು ಹುಟ್ಟಿಸಿದ ದಾಳಿಕೋರ ಮುಸ್ಲಿಂ ದೊರೆಗಳ ಮುಸ್ಲಿಂ ಪತ್ನಿಯರು ಹಿಂದೂ ರಾಜರ ಕೈವಶ ಆದಾಗ ಅವರನ್ನು ಹೆಣ್ಣೆಂದು ಗೌರವಿಸಿ ಬಿಟ್ಟು ಕೊಟ್ಟ ಸದ್ಗುಣವನ್ನು “ಬುದ್ಧಿ ಕೆಟ್ಟ ನಡೆ” ಮುಂತಾದ ಕಟುನುಡಿಗಳಲ್ಲಿ ಖಂಡಿಸುತ್ತಾರೆ ವಿನಾಯಕ ದಾಮೋದರ ಸಾವರ್ಕರ್.

ಕಲ್ಯಾಣದ ಮುಸ್ಲಿಂ ರಾಜ್ಯಪಾಲನ ಸೊಸೆಯನ್ನು ಗೌರವದಿಂದ ನಡೆಸಿಕೊಂಡು ವಾಪಸು ಕಳಿಸುವ ಛತ್ರಪತಿ ಶಿವಾಜಿ ಮತ್ತು ಪೋರ್ಚುಗೀಸ್ ರಾಜ್ಯಪಾಲನ ಪತ್ನಿಯನ್ನು ಸಮ್ಮಾನದಿಂದ ವಾಪಸು ಮಾಡುವ ಚೀಮಾಜಿ ಅಪ್ಪ ಅವರ ನಡೆಯನ್ನು ಓತಪ್ರೋತವಾಗಿ ಟೀಕಿಸುತ್ತಾರೆ. ದಾಳಿಕೋರ ಮುಸ್ಲಿಮರು ಮಾಡಿದ್ದನ್ನು ಆರಂಭದಲ್ಲಿಯೇ ಹಿಂದೂ ರಾಜರು ಅವರ ಹೆಣ್ಣುಮಕ್ಕಳಿಗೆ ಮಾಡಿದ್ದರೆ, ಹಿಂದು ಹೆಣ್ಣುಮಕ್ಕಳತ್ತ ಕಣ್ಣೆತ್ತಿ ನೋಡುವ ಧೈರ್ಯ ಕೂಡ ಅವರಿಗೆ ಇರುತ್ತಿರಲಿಲ್ಲ ಎಂದು ವಾದಿಸುತ್ತಾರೆ.

lokesh

Share
Published by
lokesh

Recent Posts

ವಿಶೇಷ ಚೇತನ ಮಕ್ಕಳು ಸಮಾಜಕ್ಕೆ ಶಾಪವಲ್ಲ, ವರ; ದೀಪಕ್‌ ಅಭಿಮತ

' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…

1 hour ago

ಸಕ್ಕರೆ ನಗರಿ ಅಂದ ಹೆಚ್ಚಿಸಿದ ದೀಪಾಲಂಕಾರ

ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್‌ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…

1 hour ago

ಮಂಡ್ಯ ಸಮ್ಮೇಳನ | ನಗರ ದೀಪಾಲಂಕಾರಕ್ಕೆ ಸಚಿವ ಚಲುವರಾಯಸ್ವಾಮಿ ಚಾಲನೆ

ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…

2 hours ago

ನಕಲಿ ಚಿನ್ನಾಭರಣ ಅಡವಿಟ್ಟು ಬರೋಬ್ಬರಿ 34 ಲಕ್ಷ ರೂ. ವಂಚನೆ..!

ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…

2 hours ago

ಮುಡಾ ಪ್ರಕರಣ | ಸಿಬಿಐ ತನಿಖೆ ಕೋರಿ ಸಲ್ಲಿಸಿದ್ದ ಅರ್ಜಿ ಜ.15ಕ್ಕೆ ಮುಂದೂಡಿಕೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್‌ ಜನವರಿ…

2 hours ago

ಸಮ್ಮೇಳನಕ್ಕೆ ಕ್ಷಣಗಣನೆ | ಸಮ್ಮೇಳನ ಸರ್ವಾಧ್ಯಕ್ಷ ಗೊ.ರು ಚನ್ನಬಸಪ್ಪಗೆ ಆತ್ಮೀಯ ಸ್ವಾಗತ

ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…

3 hours ago