ಎಡಿಟೋರಿಯಲ್

ತರೀಕೆರೆ ಏರಿಮೇಲೆ – ಪೊರೆವ ಗುರುಗಳು ನನಗೆ ಸಿಕ್ಕರು

– ರಹಮತ್ ತರೀಕೆರೆ

ಹಳ್ಳಿಗಾಡಿನಿಂದ ಬರುತ್ತಿದ್ದ ವಿದ್ಯಾರ್ಥಿಗಳನ್ನು ದಡ್ಡರೆಂದು ಘೋಷಿಸಲು ಸದಾ ಹೊಂಚಿಕೊಂಡು ಕಾಯುತ್ತಿದ್ದ ಇಂಗ್ಲೀಶಿನ ಭಯೋತ್ಪಾದನೆಯಿಂದ ನಮ್ಮನ್ನು ಪಾರುಮಾಡಿದವರು ಈಶ್ವರಮೂರ್ತಿ! 

ನನ್ನಲ್ಲಿ ಸಾಹಿತ್ಯಾಸಕ್ತಿಯನ್ನು ಮೊದಲು ಮೊಳೆಸಿದವರು ಹೈಸ್ಕೂಲಿನಲ್ಲಿ ಕನ್ನಡ ಪಂಡಿತರಾಗಿದ್ದ ಧ್ರುವಕುರ್ಮಾ. ಅವರು ಚೆನ್ನಾಗಿ ಪಾಠ ಹೇಳುತ್ತಿದ್ದರು. ಕನ್ನಡ ವಿಷಯದಲ್ಲಿ ನನಗೆ ಹೆಚ್ಚು ಅಂಕಗಳೂ ಬರುತ್ತಿದ್ದವು. ಪಿಯುಗೆ ಬಂದಾಗ ಸಿಕ್ಕ ಕನ್ನಡ ಅಧ್ಯಾಪಕರು ಮಹಾಶುಷ್ಕರಾಗಿದ್ದರು. ಅದರೆ ಗೋವಿಂದರಾಜು ಎಂಬ ಚರಿತ್ರೆಯ ಅಧ್ಯಾಪಕರು ನನ್ನ ಆಸಕ್ತಿಗಳನ್ನು ಗುರುತಿಸಿದರು. ಪ್ರತಿಭಾವಂತರಾಗಿದ್ದ ಅವರು ಬಣ್ಣ ಬಡತನ ಜಾತಿ ಕಾರಣಕ್ಕೆ ಬಾಳಲ್ಲಿ ಕಷ್ಟ-ಅಪಮಾನ ಅನುಭವಿಸಿದವರು. ಸ್ವಾಭಿಮಾನಿಯಾದ ಅವರಿಗೆ ಅತಿಯೆನಿಸುವಷ್ಟು ಸೂಕ್ಷ್ಮತೆಯಿತ್ತು. ಸಾಮಾಜಿಕ ತಾರತಮ್ಯದ ವಿಷಯ ಬಂದಾಗ ವೇದನೆ-ಆಕ್ರೋಶದಿಂದ ಮಾತಾಡುತ್ತಿದ್ದರು. ವಿದ್ಯಾರ್ಥಿಗಳು ಕೊಂಚ ಅಶಿಸ್ತು ತೋರಿದರೂ ತುಂಬ ಬೇಸರ ಮಾಡಿಕೊಳ್ಳುತ್ತಿದ್ದರು. ಕೆಲವು ವಿದ್ಯಾರ್ಥಿಗಳು ಅವರ ಬಣ್ಣ, ರೂಪ ಮತ್ತು ಕ್ಷೌರಿಕ ಸಮುದಾಯದ ಬಗ್ಗೆ ವ್ಯಂಗ್ಯವಾಗಿ ಮಾತಾಡುತ್ತಿದ್ದರು. ಒಮ್ಮೆ ಗೋವಿಂದರಾಜು ಸರ್ ತರಗತಿಗೆ ಪ್ರವೇಶಿಸಿದರು. ಅವರಿಂದ ಬೈಸಿಕೊಂಡಿದ್ದ ಒಬ್ಬ ಪುಂಡ, ಬೋರ್ಡಿನ ಮೇಲೆ ಅವಹೇಳನಕರವಾಗಿ ಬರೆದಿದ್ದನು. ಅದನ್ನು ಕಂಡವರೇ ತರಗತಿಯತ್ತ ಸುಡುವ ಕಂಗಳಿಂದ ದಿಟ್ಟಿ ಹಾಯಿಸಿದರು. ‘ಯಾರಪ್ಪ ಇದನ್ನು ಬರೆದವರು?’ ಎಂದು ಕೇಳಿದರು. ಯಾರೂ ಉತ್ತರಿಸಲಿಲ್ಲ. ಅವರ ಕಣ್ಣು ಹನಿಯಿತು. ತಟ್ಟನೆ ಮರಳಿ ಸ್ಟಾಫ್‌ರೂಮಿಗೆ ಹೋಗಿಬಿಟ್ಟರು.

ನಾನು ಗೋವಿಂದರಾಜು ಅವರ ಕ್ಲಾಸುಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಅವರು ಬಿಳಿಯ ತುಂಬುದೋಳಿನ ಶರಟು ತೊಟ್ಟು, ಪಾಲಿಶ್ ಮಾಡಿದ ಶೂಧರಿಸಿ, ನೀಟಾಗಿ ಬರುತ್ತಿದ್ದರು. ವಿಷಯವನ್ನು ಮನ ಮುಟ್ಟುವಂತೆ ವಿವರಿಸುತ್ತಿದ್ದರು. ಪುಸ್ತಕ-ಚೀಟಿಗಳ ನೆರವಿಲ್ಲದೆ ನಿರರ್ಗಳವಾಗಿ ಉಪನ್ಯಾಸ ಕೊಡುತ್ತಿದ್ದರು. ತರಗತಿಯಲ್ಲಿ ಅತ್ತಿಂದಿತ್ತ ತಿರುಗುತ್ತ ಚಿಂತನೆ ಮಾಡುತ್ತ ನೋಟ್ಸ್ ಬರೆಸುತ್ತಿದ್ದರು. ಅವರು ಬಳಸುತ್ತಿದ್ದ ಕನ್ನಡದಲ್ಲಿ ಜೀವಂತಿಕೆ ಮಿಸುಕಾಡುತ್ತಿತ್ತು. ಅವರ ನೋಟ್ಸನ್ನು ಕಾದಂಬರಿಯ ಹಾಗೆ ಓದಬಹುದಿತ್ತು. ಏನಾದರೂ ನೆಪಮಾಡಿ ನನ್ನನ್ನೆಬ್ಬಿಸಿ ಪ್ರಶ್ನೆ ಕೇಳುತ್ತಿದ್ದರು. ನಾನು ಅವರ ತರಗತಿಗಳಲ್ಲಿ ಆತ್ಮವಿಶ್ವಾಸದಿಂದ ಮಾತಾಡುತ್ತಿದ್ದೆ. ಅವರನ್ನು ಕಂಡಾಗಲೆಲ್ಲ ‘ನಾನೂ ಅಧ್ಯಾಪಕನಾಗಬೇಕು, ನೀಟಾಗಿ ಡ್ರೆಸ್ ಮಾಡಬೇಕು, ತರಗತಿಯಲ್ಲಿ ಶತಪಥ ತಿರುಗುತ್ತ ವಿಚಾರಗಳನ್ನು ಆಹ್ವಾನಿಸಿಕೊಂಡು ಸರಾಗವಾಗಿ ಮಾತಾಡಬೇಕು’ ಎಂದು ಕನಸು ಕಾಣುತ್ತಿದ್ದೆ. ನನಗೆ ಚರಿತ್ರೆಯಲ್ಲಿ ಹೆಚ್ಚು ಅಂಕ ಬಂದಿದ್ದವು. ಅಂಕಪಟ್ಟಿ ಟಿಸಿ ತೆಗೆದುಕೊಳ್ಳಲು ಕಾಲೇಜಿಗೆ ಹೋದಾಗ, ಗೋವಿಂದರಾಜು ನನ್ನನ್ನು ಸ್ಟಾಫ್‌ರೂಮಿಗೆ ಕರೆಸಿಕೊಂಡರು. ‘ಬಿ.ಎ.ನಲ್ಲಿ ಚರಿತ್ರೆ ಮತ್ತು ಕನ್ನಡ ಸಾಹಿತ್ಯ ತಗೊ’ ಎಂದರು. ಅದರಂತೆ ನಾನು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿಗೆ ಸೇರಿಕೊಂಡು ಕನ್ನಡ ಸಾಹಿತ್ಯ ತೆಗೆದುಕೊಂಡೆ. ಸಾಹಿತ್ಯದ ಕಾಂಬಿನೇಶನ್ನಿನಲ್ಲಿ ಚರಿತ್ರೆ ಇರಲಿಲ್ಲ. ಇಷ್ಟವಿಲ್ಲದ ಅರ್ಥಶಾಸ್ತ್ರ ರಾಜ್ಯಶಾಸ್ತ್ರಗಳಿದ್ದವು. ಹೀಗೆ ಚರಿತ್ರೆ ತಪ್ಪಿದರೂ ಅದರಲ್ಲಿ ನನ್ನ ಆಸಕ್ತಿ ತಪ್ಪಲಿಲ್ಲ. ಸೂಫಿಗಳು, ನಾಥರು, ಶಾಕ್ತರು, ಆರೂಢರು ಹಾಗೂ ಅಮೀರ್ಬಾಯಿ ಕರ್ನಾಟಕಿ ಕುರಿತ ನನ್ನ ಪುಸ್ತಕಗಳು ಪರೋಕ್ಷವಾಗಿ ಚರಿತ್ರೆಯ ಕ್ಷೇತ್ರದವೇ ಆದವು.

ನಾವು ಪದವಿ ತರಗತಿಗಳಲ್ಲಿ ಕಲಿಯುತ್ತಿದ್ದ ಅರ್ಥಶಾಸ್ತ್ರಕ್ಕೂ ನಮ್ಮ ಸುತ್ತಮುತ್ತಲಿನ ಬದುಕಿಗೂ ಜೀವಂತ ಸಂಬಂಧ ಗೋಚರಿಸುತ್ತಿರಲಿಲ್ಲ. ಇಂಗ್ಲೆಂಡಿನ ಮಾಲ್ಥಸ್ ಎಂಬುವವನ ‘ಇಳಿಮುಖ ತುಷ್ಟಿಗುಣ’ ಸಿದ್ಧಾಂತವನ್ನು ಅಧ್ಯಾಪಕರು, ಒಂದು ಸೇಬುಹಣ್ಣು ತಿಂದಾಗ ಸಿಗುವ ತುಷ್ಟಿಯು ಎರಡನೆಯದನ್ನು ತಿಂದಾಗ ಸಿಗುವುದಿಲ್ಲ ಎಂದು ವಿವರಿಸುತ್ತಿದ್ದರು. ಸೇಬನ್ನೇ ಸರಿಯಾಗಿ ನೋಡದ ನಮಗದು ಎರಡನೆಯದಕ್ಕೆ ತುಷ್ಟಿಯು ಇಳಿಮುಖವಾಗಲು ಸಾಧ್ಯವೇ ಇರಲಿಲ್ಲ. ಇದೇ ಮಾಲ್ಥಸ್ ಬರಗಾಲದಲ್ಲಿ ಜನ ಸಾಯುತ್ತಿದ್ದರೆ ಪ್ರಭುತ್ವ ಅವರನ್ನು ರಕ್ಷಿಸಬಾರದೆಂದೂ, ದುರ್ಬಲರಾದವರನ್ನು ಕಳೆಯಲು ಪ್ರಕೃತಿಯೇ ಹೂಡಿದ ಆಟವಿದೆಂದೂ ಹೇಳಿದ್ದವನು. ಅವನ ಮಾತಿನ ಪ್ರಕಾರ, ಬ್ರಿಟಿಶರು ಭಾರತದಲ್ಲಿ ಬರಗಾಲ ಬಂದಾಗ ಜನರಿಗೆ ಸಾಯಲು ಬಿಡುತ್ತಿದ್ದರಂತೆ. ಎಂಥಾ ಜೀವವಿರೋಧಿ ಅರ್ಥಶಾಸ್ತ್ರಜ್ಞರನ್ನೆಲ್ಲ ಓದಿದೆವಲ್ಲ ಎಂದು ಖೇದವಾಯಿತು.

ಆದರೆ ಜಡವಾದ ಅರ್ಥಶಾಸ್ತ್ರವನ್ನು ನಮಗೆ ಸ್ವಾರಸ್ಯಕರವಾಗಿ ಪಾಠಮಾಡುತ್ತಿದ್ದ ಒಬ್ಬ ಅಧ್ಯಾಪಕರಿದ್ದರು. ಅವರ ಹೆಸರು ವಿಜಯಸಿಂಗ್. ರಜಪೂತ ಸಮುದಾಯದವರು. ಸದಾ ಫುಲ್‌ಸೂಟಿನಲ್ಲಿರುತ್ತಿದ್ದರು. ಬಹಳ ಸಿಗರೇಟು ಸೇದುತ್ತಿದ್ದರು. ತರಗತಿಯೊಳಗೆ ಬಂದೊಡನೆ ಇಡೀ ಬೋರ್ಡನ್ನು ಒರೆಸಿ, ಸೀಮೆಸುಣ್ಣದಿಂದ ದುಂಡಗೆ ಸಣ್ಣಗೆ ಅರ್ಥಶಾಸ್ತ್ರದ ಪರಿಕಲ್ಪನೆಗಳನ್ನು ಬರೆದು, ಅರ್ಥವಾಗುವಂತೆ ವಿವರಿಸುತ್ತಿದ್ದರು. ಅಚ್ಚುಕಟ್ಟುತನ ಅವರ ಪ್ರತಿಯೊಂದು ಕ್ರಿಯೆಯಲ್ಲೂ ಅಳವಟ್ಟಿತ್ತು. ಒಣಗಿದ ಅರ್ಥಶಾಸ್ತ್ರವನ್ನು ಅವರು ತಮ್ಮ ಹಾಸ್ಯಪ್ರಜ್ಞೆಯಿಂದ ರಸವತ್ತಾಗಿ ಮಾಡುತ್ತಿದ್ದರು. ಮೊದಲ ತರಗತಿಯಲ್ಲಿ ಅವರು ಹೇಳಿದ ಜೋಕೊಂದು ಹೀಗಿದೆ: ಒಬ್ಬ ಗಿರಾಕಿ ಚಪ್ಪಲಿ ಅಂಗಡಿಯಲ್ಲಿ ಬೂಟು ಖರೀದಿಸಿ ‘ಹತ್ತುರೂಪಾಯಿ ಕಡಿಮೆಯಿದೆ, ನಾಳೆ ಕೊಡುತ್ತೇನೆ’ ಎನ್ನುತ್ತಾನೆ. ಸರಿಯೆಂದು ಸೇಲ್ಸ್‌ಬಾಯ್ ಅವನ್ನು ಪ್ಯಾಕು ಮಾಡಿಕೊಡುತ್ತಾನೆ. ಬಾಯನ್ನು ಮಾಲಕ ಕರೆದು ‘ಅಲ್ಲೊ, ಗೊತ್ತಿಲ್ಲ ಪರಿಚಯವಿಲ್ಲ. ಆತ ಮತ್ತೆ ಬರ್ತಾನೆಂದು ಏನು ಗ್ಯಾರಂಟಿ? ಅವನು ತಂದುಕೊಡದಿದ್ದರೆ ನಿನ್ನ ಸಂಬಳದಲ್ಲಿ ಕಟ್ ಮಾಡ್ತೇನೆ’ ಎಂದು ಗದರಿಸುತ್ತಾನೆ. ಸೇಲ್ಸ್‌ಬಾಯ್ ಹೇಳುತ್ತಾನೆ: ‘ಚಿಂತೆ ಬೇಡ ಸರ್. ಆತ ಖಂಡಿತ ಬರುತ್ತಾನೆ. ಒಂದೇ ಕಾಲಿನ ಎರಡು ಶೂ ಪ್ಯಾಕ್ ಮಾಡಿದ್ದೇನೆ’. ನಮಗೆ ಸಿಂಗರ ಅರ್ಥಶಾಸ್ತ್ರ ಮರೆತುಹೋಗುತ್ತಿತ್ತು. ಜೋಕುಗಳು ನೆನಪಿರುತ್ತಿದ್ದವು. ಎರಡೂ ಕಾಲುಗಳ ಶೂಗಳ ವಿನ್ಯಾಸ ವಿಭಿನ್ನವಾಗಿದ್ದರೂ, ನಡಿಗೆಯಲ್ಲಿ ಅವು ಭೇದವನ್ನು ಕಳೆದುಕೊಂಡು ಸಮರಸಗೊಳ್ಳುತ್ತವೆ. ಸಿಂಗರ ವೈವಾಹಿಕ ಬದುಕು ಅಷ್ಟೊಂದು ಹಿತಕರವಾಗಿರಲಿಲ್ಲವೆಂದೂ, ಕೌಟುಂಬಿಕ ಸಮಸ್ಯೆಗಳಿಂದ ಜರ್ಝರಿತರಾಗಿ ಬೇಗನೆ ತೀರಿಕೊಂಡರೆಂದೂ ಬಹಳ ದಿನಗಳ ನಂತರ ತಿಳಿಯಿತು.

ನಮಗೆ ಇಂಗ್ಲೀಶಿನಲ್ಲಿ ಅನೇಕ ಅಧ್ಯಾಪಕರಿದ್ದರು. ಶೇಕ್ಸ್‌ಪಿಯರ್ ನಾಟಕಗಳ ವೃದ್ಧರಾಜನಂತಿದ್ದ ಪ್ರೊ. ತೇಲ್ಕರ್ ಕ್ಲಾಸುಗಳು ಬೋರ್ ಹೊಡೆಸುತ್ತಿದ್ದವು. ಇಂಗ್ಲೀಶು ಮೊದಲೇ ನಮಗೆ ಕಲ್ಲಿನ ಕಡಲೆ. ಅದನ್ನು ನೀರಸವಾಗಿ ಪಾಠಮಾಡಿದರೆ ಪಾಠದ್ದೂ ನಮ್ಮದೂ ಒಟ್ಟಿಗೆ ಜೀವ ಹೋಗುತ್ತದೆ. ಕುಳ್ಳಗೆ ಸುಂದರವಾಗಿದ್ದ ಮಾಲವಿಕಾ, ಮುಲ್ಕರಾಜ ಆನಂದರ ‘ದಿ ಅನಚಟಬಲ್’ ಕಾದಂಬರಿಯನ್ನು ತೆಗೆದುಕೊಳ್ಳುತ್ತಿದ್ದರು. ನಿಜವಾಗಿ ನಮ್ಮನ್ನು ಆವರಿಸಿಕೊಂಡವರೆಂದರೆ ಈಶ್ವರಮೂರ್ತಿ ಹಾಗೂ ನಾಗಭೂಷಣಸ್ವಾಮಿ. ಸದಾ ಸಿಗರೇಟು ಸೇದುತ್ತಿದ್ದ ನಗುಮುಖಿಯಾದ, ಮುಖದಮೇಲೆ ಮೈಲಿಕಲೆಗಳಿಂದ ನಟ ಓಂಪುರಿಯಂತೆ ಕಾಣುತ್ತಿದ್ದ ಈಶ್ವರಮೂರ್ತಿ, ಹಳ್ಳಿಗಾಡಿನಿಂದ ಬರುತ್ತಿದ್ದ ವಿದ್ಯಾರ್ಥಿಗಳನ್ನು ದಡ್ಡರೆಂದು ಘೋಷಿಸಲು ಸದಾ ಹೊಂಚಿಕೊಂಡು ಕಾಯುತ್ತಿದ್ದ ಇಂಗ್ಲೀಶಿನ ಭಯೋತ್ಪಾದನೆಯಿಂದ ನಮ್ಮನ್ನು ಪಾರುಮಾಡಿದವರು. ಸರಳವಾದ ವಾಕ್ಯಗಳಲ್ಲಿ ಅರಿವಾಗುವುಂತೆ ಮತ್ತು ಬರೆಯುವಂತೆ ಅವರು ಪಾಠ ಹೇಳುತ್ತಿದ್ದರು. ಅವರು ತಮ್ಮ ತರಗತಿಯಲ್ಲಿ ಕೇಳಿದರು:
‘‘ನಿನ್ನೆ ಮಳೆಬಂತು. ಇವತ್ತು ಬರಲಿಲ್ಲ. ಇದನ್ನು ಇಂಗ್ಲೀಶಿನಲ್ಲಿ ಹೇಳಿ’’

ನಾವೆಲ್ಲ ಮನಸ್ಸಿಗೆ ಬಂದಂತೆ ಒದರಿದೆವು. ಬಳಿಕ ಅವರು ಕೇಳಿದರು.

‘‘ಎಷ್ಟು ವರ್ಷದಿಂದ ಇಂಗ್ಲೀಶ್ ಕಲಿಯುತ್ತಿದ್ದೀರಿ?’’

‘‘ಎಂಟು ವರ್ಷದಿಂದ ಸಾ’’

‘‘ಒಂದು ಭಾಷೆಯನ್ನು ಎಂಟು ವರ್ಷ ಕಲಿತರೂ ಸರಳವಾದ ಒಂದು ವಾಕ್ಯ ರಚನೆಮಾಡಲು ಆಗುತ್ತಿಲ್ಲ. ಯಾಕೆ?’’

‘‘………’’

‘‘ದೋಷ ನಿಮ್ಮಲ್ಲಿಲ್ಲ. ಕಲಿಸುವ ವ್ಯವಸ್ಥೆಯಲ್ಲಿದೆ. ಯಾವುದೇ ಭಾಷೆ ನಮ್ಮ ಪರಿಸರದಲ್ಲಿ ಇಲ್ಲದಿದ್ದಾಗ ನಮ್ಮದಾಗಿಸುವುದು ಕಷ್ಟ. ಇಂಗ್ಲೀಶ್ ವಿದೇಶಿಭಾಷೆ. ತಪ್ಪಾಗುವುದು ಸಹಜ. ಅದಕ್ಕಾಗಿ ಕೀಳರಿಮೆ ಪಟ್ಟುಕೋಬೇಡಿ. ಅದನ್ನು ನಿಮಗೆ ಸರಳವಾಗಿ ಹೇಳಿಕೊಡುವೆ’’
ಈಶ್ವರಮೂರ್ತಿಯವರ ವ್ಯಾಕರಣ ಪ್ರಜ್ಞೆಯಿಂದ ನಾವು ಹೇಗೊ ಇಂಗ್ಲೀಶಿನಲ್ಲಿ ಢುಮುಕಿ ಹೊಡೆಯದೆ ದಾಟಿದೆವು. ಇಂಗ್ಲೀಶ್ ಸಾಹಿತ್ಯದ ಬಗ್ಗೆ ಪ್ರೀತಿ ಹುಟ್ಟಿಸಿದವರು ನಾಗಭೂಷಣಸ್ವಾಮಿಯವರು. ಅವರು ಭಯಂಕರ ಸದ್ದು ಮಾಡುತ್ತಿದ್ದ ಗಿಡ್ಡನೆಯ ಬೈಕಿನಲ್ಲಿ ಕಾಲೇಜಿಗೆ ಬರುತ್ತಿದ್ದರು. ತಾವೂ ತನ್ಮಯರಾಗಿ ನಮ್ಮನ್ನೂ ತನ್ಮಯಗೊಳಿಸುವಂತೆ ಪಾಠ ಹೇಳುತ್ತಿದ್ದರು. ಭಾವವು ಎದೆಗೆ ನಾಟುವಂತೆ ಉಚ್ಚಕಂಠದಿಂದ ನಾಟಕೀಯವಾಗಿ ಕವನ ನಾಟಕಗಳನ್ನು ಓದುತ್ತಿದ್ದರು. ಅವರು ಶೇಕ್ಸ್‌ಪಿಯರನ ‘ಮ್ಯಾಕ್‌ಬೆತ್’ ಮಾಡುವಾಗ ಮಾನವ ಸ್ವಭಾವದ ರಾಗಭಾವಗಳು ಕಣ್ಮುಂದೆ ಜೀವತಳೆಯುತ್ತಿದ್ದವು.

ನಮ್ಮ ಬದುಕಿನ ಕಷ್ಟಸುಖಗಳಿಗೆ ಲಗತ್ತಾಗುವಂತೆ ಪಾಠ ಮಾಡುತ್ತಿದ್ದವರು ಕನ್ನಡದ ಹಾಲೇಶ್ ಹಾಗೂ ನೊಸಂತಿಯವರು. ಇವರು ಬದುಕನ್ನು ಕುರಿತ ನಮ್ಮ ದೃಷ್ಟಿಕೋನವನ್ನೇ ಬದಲಿಸಿದರು. ಕನ್ನಡ ಐಚ್ಛಿಕದ ನಾವು ಐದಾರು ಜನ ಇರುತ್ತಿದ್ದೆವು. ನಮಗೆ ನಾಲ್ಕು ಬೆಂಚಿರುವ ಸಣ್ಣದೊಂದು ಕೋಣೆಯಲ್ಲಿ ತರಗತಿ ಇರುತ್ತಿತ್ತು. ಅದು ಕಾಲೇಜಿನ ಭವ್ಯ ಕಟ್ಟಡದಾಚೆ ಮೈದಾನದಲ್ಲಿ ಸಸ್ಯೋದ್ಯಾನದ ಪಕ್ಕವಿದ್ದು ಗದ್ದಲದಿಂದ ದೂರವಾಗಿತ್ತು. ಸಣ್ಣ ತರಗತಿಗಳು ಮೇಷ್ಟರ ಜತೆ ನಿಕಟ ಸಂಬಂಧ ಏರ್ಪಡಿಸುತ್ತಿದ್ದವು. ಹಾಲೇಶ್ ಅವರ ಎತ್ತರ, ಗಡಸು ದನಿ, ನಾಟಕೀಯ ಅಭಿನಯದ ಪಾಠ, ತರಗತಿಯ ಮೇಲೆ ಹಿಡಿತ, ಧೀರೋದಾತ್ತ ಗಂಭೀರ ನಿಲುವು ಆಕರ್ಷಣೀಯವಾಗಿತ್ತು. ಸಾಹಿತ್ಯದ ಅಭಿರುಚಿಗೆ ವಿದ್ವತ್ತಿನ ಸ್ಪರ್ಶ ಕೊಡುತ್ತಿದ್ದರು. ಪಠ್ಯದ ದೃಶ್ಯಗಳು ಕಣ್ಣಮುಂದೆ ನಡೆಯುತ್ತಿವೆ ಎಂಬಂತೆ ಬಿಚ್ಚಿಕೊಳ್ಳುತ್ತಿದ್ದವು. ಪಾತ್ರಗಳ ಮಾತುಕತೆಯನ್ನು ಷಟ್ಪದಿಯಲ್ಲಿ ಹಿಡಿದಿಟ್ಟಿರುವ ರಾಘವಾಂಕನ ಹರಿಶ್ಚಂದ್ರಕಾವ್ಯವನ್ನು ನಟರಾದ ಅವರು ಅಕ್ಷರಶಃ ಅಭಿನಯಿಸುತ್ತಿದ್ದರು.

ನೊಸಂತಿ (ನೊಣವಿನಕೆರೆ ಸಂಗೇಗೌಡ ತಿಮ್ಮೇಗೌಡ) ನೋಡಲು ನಟ ಅನಂತನಾಗ್ ತರಹ ಕಾಣುತ್ತಿದ್ದರು. ಟೈಕೋಟು ಧರಿಸುತ್ತಿದ್ದರು. ಹಣೆಯ ಮೇಲೆ ಬರುವ ತಲೆಗೂದಲನ್ನು ಕುತ್ತಿಗೆ ಚಿಮ್ಮಿಸಿ ಸರಿಪಡಿಸಿಕೊಳ್ಳುತ್ತಿದ್ದರು. ಸದಾ ಹಸನ್ಮುಖಿಯಾಗಿದ್ದ ಅವರು ಹುಡುಗಿಯರ ಕ್ರಶ್ ಆಗಿದ್ದರು. ಹಾಲೇಶರ ಗಾಂಭೀರ್ಯ ತುಸು ಗೌರವಾನ್ವಿತ ಭೀತಿ ಹುಟ್ಟಿಸಿದರೆ, ನೊಸಂತಿಯವರ ಸಲಿಗೆ ಸರಳತೆ ಆಪ್ತತೆ ತರುತ್ತಿತ್ತು. ಅವರು ತಮ್ಮ ಮೊದಲ ತರಗತಿಯಲ್ಲಿ ರನ್ನನ ಗದಾಯುದ್ಧದ ಭಾಗವನ್ನು ಬೀದಿಯಲ್ಲಿ ನಡೆಯುತ್ತಿರುವ ಹೊಡೆದಾಟದಂತೆ ವಿಶ್ಲೇಷಿಸಿದ್ದು ನೆನಪಿದೆ. ಚರಿತ್ರೆ ಪುರಾಣ ವಸ್ತುವುಳ್ಳ ಪಠ್ಯವನ್ನು, ನಮ್ಮ ಆಸುಪಾಸಿನ ಅನುಭವದ ನಿದರ್ಶನಗಳನ್ನು ಜೋಡಿಸಿ ವರ್ತಮಾನಕ್ಕೆ ಚಕ್ಕನೆ ತರುತ್ತಿದ್ದರು. ವಿದ್ಯಾರ್ಥಿಗಳಿಗೆ ಜನಪ್ರಿಯ ಗುರುಗಳಾಗಿದ್ದ ಅವರು ಪ್ರಿನ್ಸಿಪಾಲರಾಗಿ ಕಾರ್ಯ ನಿರ್ವಹಿಸುವಾಗ ಚೇಂಬರಿನಲ್ಲೇ ಹೃದಯಾಘಾತದಿಂದ ಜೀವಬಿಟ್ಟರು. ಅವರ ನಿಧನದ ಬಳಿಕ ನಡೆದ ಸಂತಾಪಸಭೆಗಳೆಲ್ಲ ಕಣ್ಣೀರ ಕಡಲಾದವು.

ಈ ಗುರುಗಳ ರಕ್ಷೆ ನನಗೆ ಕಾಲೇಜುಬಿಟ್ಟ ಬಳಿಕವೂ ಹಿಂಬಾಲಿಸಿತು. ನಾನು ಎಂಎ ಓದಲು ಮೈಸೂರು ಸೇರಿದಾಗ, ಬರೆಯುತ್ತಿದ್ದ ಪತ್ರಗಳಲ್ಲಿ ‘ಸಂಕೋಚದ ಸ್ವಭಾವ ಬಿಡು. ಡ್ಯಾಶಿಂಗ್ ನೇಚರ್ ಬೆಳೆಸಿಕೊ, ಚನ್ನಯ್ಯನವರನ್ನು ಹೋಗಿ ಇನ್ನೂ ಕಂಡಿಲ್ಲವಂತಲ್ಲ’ ಎಂದೆಲ್ಲ ಸೂಚಿಸಿರುತ್ತಿದ್ದರು. ನಾನು ಹಂಪಿ ಸೇರಿದ ಬಳಿಕ, ‘ಸಂಕ್ರಮಣ’ದಲ್ಲಿ ಬರುತ್ತಿದ್ದ ನನ್ನ ಲೇಖನಗಳನ್ನು ಓದಿ ನೊಸಂತಿಯವರು ‘ಲೇಖನ ಚೆನ್ನಾಗಿ ಬರೀತಾ ಇರು’ ಎಂದು ಪತ್ರ ಬರೆಯುತ್ತಿದ್ದರು. ಈಗ ‘ಆಂದೋಲನ’ ದಲ್ಲಿ ಬರುತ್ತಿರುವ ನನ್ನ ಆತ್ಮಕಥೆಯ ಅಂಕಣ ಓದಿ ನಾಗಭೂಷಣಸ್ವಾಮಿಯವರು ‘ಬಹಳ ಚೆನ್ನಾಗಿದೆಯಪ್ಪ’ ಎಂದು ಫೋನು ಮಾಡುತ್ತಾರೆ. ಶಿವಮೊಗ್ಗೆಗೆ ಹೋಗುವ ಸಂದರ್ಭ ಬಂದಾಗ, ಹಾಲೇಶ್ ಅವರಿಗೆ ಕರೆ ಮಾಡಿ, ಮನೆಗೆ ಬರುತ್ತೇನೆ’ ಎನ್ನುತ್ತೇನೆ. ‘ಬಾ ಬಾ, ಜತ್ಯಾಗೆ ಕುಂತು ರೊಟ್ಟಿ ತಿನ್ನಣ. ಬರ್ತಾ ಅಮೀರಬಾಯಿ ಕರ್ನಾಟಕಿ ಬಗ್ಗೆ ಅದೇನೊ ಪುಸ್ತಕ ಬರದಿದೀಯಂತಲ್ಲ. ಅದನ್ನ ಹಿಡಕಂಡ ಬಾ. ವಿಮರ್ಶೆ ಪುಸ್ತಕ ತರಬ್ಯಾಡ’ ಎನ್ನುತ್ತಾರೆ-ಶಿಕಾರಿಪುರದ ಕನ್ನಡದಲ್ಲಿ. ಮೈಸೂರಿಗೆ ಹೋಗುವ ಹಾದಿಯಲ್ಲಿದ್ದರೆ ನೊಣವಿನಕೆರೆಯಲ್ಲಿರುವ ನೊಸಂತಿಯವರ ತೋಟಕ್ಕೆ ಹೋಗುತ್ತೇನೆ. ಅವರ ಸಮಾಧಿಯ ಮುಂದೆ ಕೂತು, ಅವರಿತ್ತ ತಾಯಪ್ರೀತಿ ನೆನೆಯುತ್ತೇನೆ. ವಿದ್ಯೆಯನ್ನು ಕಲಿಸುವ ಗುರುಗಳು ಸಾಕಷ್ಟು ಸಿಕ್ಕಾರು. ಪ್ರೀತಿಯಿಂದ ಪೊರೆವವರು ಎಷ್ಟು ಸಿಕ್ಕುವರು?

 

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago