ಎಡಿಟೋರಿಯಲ್

ದಸರಾ ಸಂಗೀತೋತ್ಸವದ ಸವಿ ಸವಿ ನೆನಪುಗಳು

ಜೆ.ಬಿ.ರಂಗಸ್ವಾಮಿ

ಗುಂಡೂರಾಯರು ಕುಳಿತಿದ್ದ ಜಾಗದಲ್ಲೇ ಹಾಡಿಗೆ ತಲೆದೂಗುತ್ತಾ ಮೈಕೈ ಕುಣಿಸುತ್ತಾ ನವಿರಾಗಿ ಒಂದು ಚಿಕ್ಕ ನೃತ್ಯ ಮಾಡೇಬಿಟ್ಟರು!

1982. ಅರಮನೆ ಸಂಗೀತೋತ್ಸವದ ಉದ್ಘಾಟನೆ ದರ್ಬಾರ್ ಹಾಲ್‌ನಲ್ಲಿ ನಡೆಯಲಿತ್ತು. ಮಹಾರಾಜರ ಕಾಲದಲ್ಲಿ ನಡೆಯುತ್ತಿದ್ದಂತೆಯೇ ದರ್ಬಾರ್ ಹಾಲ್ ಸಜ್ಜಾಗಿತ್ತು. ಮುಖ್ಯಮಂತ್ರಿ ಆರ್. ಗುಂಡೂರಾಯರೇ ಉದ್ಘಾಟಕರು. ಅವರ ಮಂತ್ರಿಮಂಡಲವೇ ಅಲ್ಲಿ ಕುಳಿತಿತ್ತು. ದರ್ಬಾರ್ ಹಾಲ್ ಗೆ ಪ್ರವೇಶವಿದ್ದದ್ದು ಪಾಸ್ ಪಡೆದ ಆಹ್ವಾನಿತ ಗಣ್ಯರಿಗೆ ಮಾತ್ರ. ಈಗಿನಂತೆ ಅರಮನೆ ಮುಂಭಾಗದ ನೆಲ ವೇದಿಕೆಯಲ್ಲಿ ಸಂಗೀತೋತ್ಸವ ನಡೆಯುತ್ತಿರಲಿಲ್ಲ. ಜನ ಸಾಮಾನ್ಯರು ಹೊರ ಆವರಣದಲ್ಲಿ ಕುಳಿತು ಸಂಗೀತೋತ್ಸವ ಆನಂದಿಸಬಹುದಿತ್ತು.

ಉದ್ಘಾಟಿಸಿದ ಮುಖ್ಯಮಂತ್ರಿಗಳು ತಮ್ಮ ಸ್ಥಳದಲ್ಲಿ ಕುಳಿತರು. ಉತ್ಸವದ ಮೊತ್ತ ಮೊದಲ ಕಾರ್ಯಕ್ರಮವೇ ಪಂಡಿತ ಭೀಮಸೇನ ಜೋಷಿ ಅವರದ್ದು. ಜೋಷಿಯವರು ಎಂದರೆ ಧಾರವಾಡದ ಕನ್ನಡಿಗರು. ಸಂಧ್ಯಾರಾಗ ಚಿತ್ರದ ‘ನಂಬಿದೆ ನಿನ್ನ ನಾದ ದೇವತೆಯೇ…’ ಎಂಬ ಗೀತೆಯನ್ನು ಹಾಡಿದ್ದವರು ಎಂಬುದಷ್ಟೇ ನನಗಿದ್ದ ತಿಳಿವಳಿಕೆ. ‘ಭಾಗ್ಯದ ಲಕ್ಷ್ಮೀ ಬಾರಮ್ಮ.’ ಮುಂತಾದ ಕೀರ್ತನೆಗಳನ್ನು ಹಾಡಿದ್ದ ಗಾಯಕರು ಎಂದು ಗೊತ್ತಿತ್ತು . ಭಾರತ ರತ್ನ ಪುರಸ್ಕಾರ ಬಂದ ಮೇಲೆಯೇ ಅವರ ಸಂಗೀತದ ಮಹತ್ತು ಮತ್ತು ಬೃಹತ್ತು ಎರಡೂ ಗೊತ್ತಾದದ್ದು. ಅವರೊಂದಿಗೆ ರತ್ನ ಪ್ರಶಸ್ತಿ ಪಡೆದ ಪಂಡಿತ ರವಿಶಂಕರ್ ಬಗ್ಗೆ ಪಂ.ಜಸ್ ರಾಜ್ ಮುಂತಾದವರು ಟೀಕಿಸಿದ್ದರು. ಆದರೆ ಜೋಷಿಯವರು ಭಾರತರತ್ನ ಪ್ರಶಸ್ತಿಗೆ ಭಾಜನರಾದಾಗ, ಅವರ ಗಾಯನ ಪ್ರತಿಭೆ ಕುರಿತಂತೆ ಒಂದೇ ಒಂದೂ ಅಪಸ್ವರ ಬರಲಿಲ್ಲ. ಆ ಪುರಸ್ಕಾರಕ್ಕೆ ಅವರಲ್ಲದೆ ಮತ್ತಾರು ಅರ್ಹರು ಎಂಬ ಸರ್ವ ಸಮ್ಮತ ಭಾವವೇ ಎಲ್ಲೆಡೆ ಇತ್ತು.

ಆ ದಿನ ಉದ್ಘಾಟನೆಯಾಗಿ ಸಭೆ ಸಜ್ಜಾಗಿತ್ತು. ಆಗೆಲ್ಲಾ ಆಕಾಶವಾಣಿಯಲ್ಲಿ ಕಾರ್ಯಕ್ರಮ ನೇರವಾಗಿ ಪ್ರಸಾರವಾಗುತ್ತಿದ್ದುದರಿಂದ ಸಂಗೀತ ಕಛೇರಿ ಕರಾರುವಾಕ್ಕಾಗಿ ಏಳು ಗಂಟೆಗೆ ಶುರುವಾಗಬೇಕಿತ್ತು .

ಅರಮನೆಯ ದರ್ಬಾರ್ ಅಂಗಳವೆಂದರೆ ಸುಮ್ಮನೆ ಯಾವುದೋ ಸಾಮಾನ್ಯ ವೇದಿಕೆಯಲ್ಲ. ಅದಕ್ಕೆ ವೈಭವದ ಐತಿಹಾಸಿಕ ಪರಂಪರೆ ಇತ್ತು. ಅಲ್ಲಿ ಹಾಡುವುದಕ್ಕೆ ಅವಕಾಶ ಸಿಕ್ಕರೆ ಅದೇ ಪುಣ್ಯವೆಂದು ಬಹುತೇಕ ಎಲ್ಲ ಕಲಾವಿದರೂ ನಂಬಿದ್ದರು.

ಗಣ್ಯರು ಆಸೀನರಾಗಿದ್ದ ಸಭಾಂಗಣದ ಎಡ ಪಾರ್ಶ್ವದಲ್ಲಿ ನನಗೆ ಡ್ಯೂಟಿ. ಅಲ್ಲಿದ್ದವರು ಜೋಷಿಯವರ ಪ್ರೌಢಿಮೆ ಕುರಿತು ಮಾತಾಡಿಕೊಳ್ಳುತ್ತಿದ್ದರು. ಅವರಿಗಾಗಿ ಅಭಿಮಾನಿಯೊಬ್ಬರು ಪೂನಾದಲ್ಲಿ ಸುಸಜ್ಜಿತ ಬಂಗಲೆಯನ್ನೇ ಕಟ್ಟಿಸಿಕೊಟ್ಟಿದ್ದಾರಂತೆ . ಸಂಗೀತಗಾರರಲ್ಲೇ ಅತ್ಯಂತ ಪ್ರಭಾವಿ ಇತ್ಯಾದಿ.

ಆಕಾಶವಾಣಿಯ ಏಳು ಗಂಟೆಗೆ ಇನ್ನೂ ಸಮಯವಿತ್ತು. ಹೊಳೆಯುವ ಸಿಲ್ಕ್ ಜುಬ್ಬಾ ಪಂಚೆ ಧರಿಸಿ ಪಕ್ಕವಾದ್ಯದವರೊಂದಿಗೆ ಜೋಷಿಯವರು ಆಸೀನರಾಗಿದ್ದರು. ತಬಲಾ ತಂಬೂರಿಗಳೆಲ್ಲ ಶೃತಿಗೊಳ್ಳುತ್ತಿದ್ದವು. ಪಂಡಿತ ಭೀಮಸೇನ ಜೋಷಿಯವರೇಕೋ ಅನ್ಯಮನಸ್ಕರಾದಂತಿತ್ತು. ಏಳು ಗಂಟೆಗಾಗಿಯೇ ಕಾಯುತ್ತಿದ್ದ ಅವರು ಮುಖ್ಯಮಂತ್ರಿಗಳತ್ತ ದಿಟ್ಟಿಸಿ ನೋಡುತ್ತಿದ್ದರು.

ಅವರ ಮುಖ ಇವರತ್ತ ತಿರುಗಿದಾಗ ಕೈ ಮುಗಿದರು. ಅದೇ ವೇಳೆಗೆ ಗುಂಡೂರಾಯರನ್ನು ಬೇರಾರೋ ಮಾತಾಡಿಸುತ್ತಿದ್ದರು. ಅವರು ಇತ್ತ ನೋಡಲಿಲ್ಲ. ಮಾತು ಮುಗಿದ ಮೇಲೆ ಜೋಷಿಯವರು ಮತ್ತೆ ಕೈ ಮುಗಿದರು. ಅವರು ಅಗಲೂ ಗಮನಿಸಲಿಲ್ಲ. ಆಮೇಲೆ ನೋಡಿದ ಗುಂಡೂರಾಯರು ಕೈ ಬೀಸಿದರು.

ಏಳು ಗಂಟೆಯ ನಂತರ ಜೋಷಿಯವರ ಅನನ್ಯ ಕಂಠಸಿರಿ ವಿಜೃಂಭಿಸಿತು. ಅದೇನು ರಾಗ, ಅದೇನು ಆಲಾಪ? ಅದ್ಭುತದಲ್ಲಿ ಪರಮಾದ್ಭುತ ಸಂಭವಿಸಿತು. ಎಂದೂ ಮರೆಯಲಾಗದ ಸಂಗೀತ ಕಛೇರಿ ಅದಾಯಿತು.

* * *

ಅದೇ ವರ್ಷದ ಮತ್ತೊಂದು ಘಟನೆ :

1982ರ ಪೊಲೀಸ್ ಸಮೂಹ ವಾದ್ಯಮೇಳಕ್ಕೆ ಮುಖ್ಯಮಂತ್ರಿ ಗುಂಡೂರಾಯರೇ ಮುಖ್ಯ ಅತಿಥಿಗಳು. ರಾಜ್ಯದ ಎಲ್ಲೆಡೆಯಿಂದ ಬಂದಿದ್ದ 560 ಕ್ಕೂ ಮಂದಿ ಪೊಲೀಸ್ ವಾದಕರು ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿದ್ದ ಅರಮನೆ ಮುಂಭಾಗದಲ್ಲಿ ಕಾರ್ಯಕ್ರಮ ನಡೆಸಿ ಕೊಟ್ಟರು.

ಪೊಲೀಸ್ ವಾದ್ಯ ಮೇಳವೆಂದರೆ ನಿಂತ ಜಾಗದಲ್ಲಿ ಕುಳಿತೋ ನಿಂತೋ ನಡೆಸುವ ಸಂಗೀತ ಮೇಳವಲ್ಲ. ಶಿಸ್ತುಬದ್ಧ ಹೆಜ್ಜೆಗಳನ್ನು ಹಾಕುತ್ತಾ, ಅರಮನೆ ಅಂಗಳವಿಡೀ ಸಂಚರಿಸುತ್ತಾ ವಾದ್ಯಗಳನ್ನು ಒಗ್ಗೂಡಿ ನುಡಿಸುವುದು. ಮಾರ್ಚ್ ಫಾಸ್ಟ್ ಚಲನೆಯಲ್ಲಿ ಸಂಗೀತ ಅನಾವರಣಗೊಳಿಸುವುದು. ಪ್ರತಿ ನಿಮಿಷಕ್ಕೆ ಕರಾರುವಾಕ್ಕಾದ ನೂರ ಇಪ್ಪತ್ತು ಹೆಜ್ಜೆಗಳನ್ನು ಹಾಕುತ್ತಾ, 560 ಮಂದಿ ವಾದಕರು ವಿವಿಧ ವಾದ್ಯಗಳನ್ನು ನುಡಿಸುತ್ತಾ ಅಡ್ಡಾಡಿದರೆ, ಉಂಟಾಗುವ ನಾದ ತರಂಗ ಎಂತಹ stereo effect ಪರಿಣಾಮ ನೀಡಬಲ್ಲದು? ನೀವೇ ಊಹಿಸಿ.

ಈಗ ನೀವು ಟೀವಿ ಅಥವಾ ರೇಡಿಯೋದಲ್ಲಿ ಕೇಳುವ ಗೀತೆಗಳು ಕೇಂದ್ರೀಕೃತ ನಾದಗಳು. ನೂರಾರು ವಾದ್ಯತರಂಗಗಳನ್ನು ಸಿಡಿ ಅಥವಾ ಧ್ವನಿಮುದ್ರಿಕೆಗಳಲ್ಲಿ ಅಳವಡಿಸಿರುತ್ತಾರೆ. ಅಂದರೆ ನೂರಾರು ನಾದತರಂಗಗಳು ಒಂದು ಧ್ವನಿತಟ್ಟೆಗೆ ಬಂದು ಸೇರಿರುತ್ತವೆ. ಆದರೆ ಅರಮನೆಯಲ್ಲಿ ಸಂಚರಿಸುತ್ತಿರುವ ಬೇರೆ ಬೇರೆ ವಾದ್ಯಗಳಿಂದ ಚಿಮ್ಮುವ ನಾದ ನೂರಾರು ದಿಕ್ಕನ್ನು ಸೀಳುತ್ತಾ ನುಗ್ಗುತ್ತದೆ. ಒಂದೊಂದು ವಾದ್ಯವೂ ನಾನಾ ನೆಲೆಗಳಲ್ಲಿ ಸಂಚರಿಸುತ್ತದೆ.

ಗುಂಡೂರಾಯರಂತೂ ಸಂಭ್ರಮಿತರಾದರು. ನಮ್ಮ ರಾಜ್ಯದ ಪೊಲೀಸರು ಇಷ್ಟು ಸೊಗಸಾಗಿ ಸಂಗೀತ ನುಡಿಸಬಲ್ಲರೇ? ಎಂದು ಬೆರಗಿನಿಂದ ಮೂರ್ನಾಲ್ಕು ಬಾರಿ ಉದ್ಗರಿಸಿದರು. ಅವರಿದ್ದ ಹತ್ತಾರು ಅಡಿಗಳ ದೂರದಲ್ಲಿ , ನಾನು ಕಾರ್ಯಕ್ರಮದ ವೀಕ್ಷಕ ವಿವರಣೆ ನೀಡುತ್ತಿದ್ದೆ.

ವಾದ್ಯಮೇಳದ ನಡುವೆ ವಿಶ್ವಮಾನ್ಯ ಸಂಗೀತಗಾರ ಪೌಲ್ ಮಾರಿಯಟ್‌ನ ಗೀತೆಯೊಂದನ್ನೀಗ ನುಡಿಸುತ್ತಾರೆ ಎಂದು ಅನೌನ್ಸ್ ಮಾಡಿದೆ. ವಾದಕರು ಆ ಗೀತೆಗಾಗಿ ವಾದ್ಯಗಳ ಜೋಡಣೆ ಮಾಡಿಕೊಳ್ಳತೊಡಗಿದರು. ಸುತ್ತಲಿದ್ದ ಸಾವಿರಾರು ಶ್ರೋತೃಗಳು ಮುಂದಿನ ಗೀತೆಗೆ ಕಿವಿ ತೆರೆದು ಮೌನವಾಗಿ ಕಾಯುತ್ತಿದ್ದರು.

ಗೀತೆಯ ಹಿನ್ನೆಲೆ ವಿವರ ಆಗ ನೀಡಿದೆ.

ಇಂಗ್ಲೀಷ್ ಬ್ಯಾಂಡ್‌ನವರೀಗ, ಫ್ರೆಂಚ್ ಸಂಗೀತಗಾರ ಪೌಲ್ ಮಾರಿಯಟ್‌ನ ಆ್ಯ ಲ ಫಿಗಾರೊ ಗೀತೆಯನ್ನು ಸಾದರ ಪಡಿಸಲಿದ್ದಾರೆ. ಚಿರನೂತನವಾಗಿರುವ ಈ ಗೀತೆಯ ಹಿನ್ನೆಲೆ ಹೀಗೆ:

ಸೊಗಸಿನ ನೃತ್ಯಗಾರ ಫಿಗಾರೋ, ಸಿಂಗರಿಸಿಕೊಂಡು ball room ನೃತ್ಯಶಾಲೆಗೆ ಬರುತ್ತಾನೆ. ಅವನ ಅಂದದ ದಿರಿಸು, ಚೆಂದದ ಹ್ಯಾಟು, ಉದ್ದನೆ ಕೋಟು ಧರಿಸಿ ಸಿಗಾರ್ ಸೇದುತ್ತಾ ಬರುವ ವೈಖರಿಯನ್ನು ನೋಡಿ ಸ್ಫೂರ್ತಿಗೊಂಡ ವಾದ್ಯವೃಂದದವರು ಪೌಲ್ ಮಾರಿಯಟ್‌ನ ಹೊಚ್ಚ ಹೊಸ ಕೃತಿಯನ್ನು ನುಡಿಸುತ್ತಾರೆ.

ಅದಕ್ಕೆ ಫಿಗಾರೋ, ಹೆಜ್ಜೆ ಹಾಕಿ ತಕತಕ ಕುಣಿದ ರೀತಿ ಅದ್ಭುತ.

ಎಂದೂ ಕೇಳಿಲ್ಲದ ಹಾಡಿಗೆ, ಫಿಗಾರೋ ಕುಣಿದ ರೀತಿ ಚಂದವೋ? ಅಥವಾ ಪೌಲ್ ಮಾರಿಯಟ್‌ನ ಸಂಗೀತ ಸುಂದರವೋ? ಚರ್ಚೆ ನಡೆದು, ಹೊಸ ಸಂಗೀತಕ್ಕೆ ಜೀವ ತುಂಬಿಸಿ ಕುಣಿದ ಫಿಗಾರೋನ ಹೆಸರೇ ಈ ಗೀತೆಗೆ ಖಾಯಂ ಆಯಿತು.

ಅದೇ ಗೀತೆಯನ್ನೀಗ ನಿಮ್ಮ ಮುಂದೆ ಜೀವಂತವಾಗಿಡಲಿದ್ದಾರೆ ಎಂದೆ.

ಸುತ್ತಲೂ ಕಿಕ್ಕಿರಿದು ನಿಂತಿದ್ದ ಜನಸಮೂಹ ನಿಶ್ಯಬ್ದವಾಗಿತ್ತು.

ಆ ನೀರವತೆಯ pause ಕೂಡ ಪೂರ್ವ ನಿಯೋಜಿತ. ಬ್ಯಾಂಡ್ ಮಾಸ್ಟರ್ ಜೆ.ಎಂ.ಪೆರೇರಾ ಸೂಚನೆ ನೀಡಿದರು.

A la Figaro ಗೀತೆ ಶುರುವಾಯಿತು.

ಕಡು ಮೌನದ ಒಡಲಿನಿಂದ ಬ್ಯಾಂಡ್ ವಿಜೃಂಭಿಸಿತು. ಇಡೀ ಜನಸಮೂಹದಲ್ಲಿ ಸ್ಫೂರ್ತಿಯ ಮಿಂಚು ಹರಿಯಿತು. ಆ ಗೀತೆಯ ನಾದಕ್ಕೆ ತಲೆದೂಗದವರೇ ಇಲ್ಲ.

ಇಂಗ್ಲೀಷ್ ಬ್ಯಾಂಡ್‌ನವರು ಅದೆಷ್ಟು ಸ್ಫೂರ್ತಿಯುತರಾಗಿ ನುಡಿಸಿದರು ಎಂದರೆ , ಗುಂಡೂರಾಯರು ಕುಳಿತಿದ್ದ ಜಾಗದಲ್ಲೇ ಹಾಡಿಗೆ ತಲೆದೂಗುತ್ತಾ , ಮೈ ಕೈ ಕುಣಿಸುತ್ತಾ ನವಿರಾಗಿ ಒಂದು ಚಿಕ್ಕ ನೃತ್ಯವನ್ನು ಮಾಡೇಬಿಟ್ಟರು!

ಅದೇ A la Figaro ಗೀತೆಯ ಶಕ್ತಿ!

ಅಲ್ಲಿ ನೆರೆದವರಿಗೆ, ಈ ಹಿಂದೆ ಅವರು ಬಟ್ಟೆ ಬಿಚ್ಚಿ ಈಜು ಹೊಡೆದು ಈಜುಗೊಳ ಉದ್ಘಾಟಿಸಿದ್ದು ನೆನಪಾಯ್ತು!

andolana

Recent Posts

IPL 2025 | ಆರ್‌ಸಿಬಿ ವಿರುದ್ಧ ಗೆದ್ದು ಬೀಗಿದ ಡೆಲ್ಲಿ

ಬೆಂಗಳೂರು: ಕನ್ನಡಿಗ ಕೆ.ಎಲ್‌ ರಾಹುಲ್‌ ಅವರ ಅಜೇಯ ಅರ್ಧಶತಕದಾಟದ ಬಲದಿಂದ ಅತಿಥೇಯ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡವನ್ನು 6 ವಿಕೆಟ್‌ಗಳ…

4 hours ago

ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ : ಡಿಸಿಎಂ ಡಿಕೆಶಿ

ಬೆಂಗಳೂರು : ಅಡುಗೆ ಅನಿಲ, ಪೆಟ್ರೋಲ್‌, ಡೀಸೆಲ್ ಬೆಲೆ  ಏರಿಕೆ ಖಂಡಿಸಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಏಪ್ರಿಲ್‌ 17ರಂದು ರಾಜ್ಯ…

5 hours ago

Padma awards | ಪದ್ಮ ಪುರಸ್ಕಾರಕ್ಕೆ ನಾಮನಿರ್ದೇಶನ ಆರಂಭ

ಹೊಸದಿಲ್ಲಿ: ಮುಂದಿನ ವರ್ಷದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುವ ಪದ್ಮ ಪುರಸ್ಕಾರಕ್ಕೆ ಆನ್‌ಲೈನ್‌ನಲ್ಲಿ ನಾಮನಿರ್ದೇಶನ ಪ್ರಕ್ರಿಯೆ ಪ್ರಾರಂಭವಾಗಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ…

5 hours ago

ಮಹಾವೀರರ ತತ್ವದಿಂದ ವಿಶ್ವಶಾಂತಿ ಸಾಧ್ಯ

ಮೈಸೂರು : ಭಗವಾನ್‌ ಮಹಾವೀರ ಆದರ್ಶ ಹಾಗೂ ತತ್ವಗಳು ಅಮೂಲ್ಯವಾದವು. ಅವರ ತತ್ವ ಪಾಲಿಸದರೆ ವಿಶ್ವದಲ್ಲಿ ಶಾಂತಿ, ನೆಮ್ಮದಿ ಉಂಟಾಗಲಿದೆ…

6 hours ago

ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿ ; ಪ್ರೊ.ಅರವಿಂದ ಮಾಲಗತ್ತಿ

ಮೈಸೂರು :  ಸಾಂಸ್ಕೃತಿಕ ನಾಯಕರನ್ನು ಜಾತಿಯಿಂದ ಬಿಡುಗಡೆಗೊಳಿಸಿದರೆ ಅವರ ಶಕ್ತಿ ವೃದ್ಧಿಸುತ್ತದೆ ಎಂದು ಖ್ಯಾತ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ ಹೇಳಿದರು.…

6 hours ago

ಮೈಸೂರು | ಅತ್ಯಾಚಾರ ಖಂಡಿಸಿ ಏಕಾಂಗಿ ಪ್ರತಿಭಟನೆ

ಮೈಸೂರು: ಉತ್ತರ ಪ್ರದೇಶದ ವಾರಣಾಸಿಯಲ್ಲಿ 19 ವರ್ಷದ ಯುವತಿ ಮೇಲೆ ಅತ್ಯಾಚಾರ ನಡೆಸಿರುವುದನ್ನು ಖಂಡಿಸಿ ಗಂಧದಗುಡಿ ಫೌಂಡೇಶನ್‌ನ ಅಧ್ಯಕ್ಷ ಆರ್ಯನ್…

7 hours ago