ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೧೬ನೇ ಆವೃತ್ತಿ ಮಾರ್ಚ್ ೧ರಿಂದ ೮ರವರೆಗೆ ನಡೆಯಲಿದೆ. ಇದಕ್ಕೆ ಎಂದಿನಂತೆ ಕೊನೆಯ ಕ್ಷಣ, ಭರದಿಂದ ಸಿದ್ಧತೆ ನಡೆದಿದೆ. ನಿರ್ಮಾಪಕರ ಸಂಘಟನೆಗಳ ಅಂತಾರಾಷ್ಟ್ರೀಯ ಮಹಾ ಒಕ್ಕೂಟದ ಮಾನ್ಯತೆ ಪಡೆದ ಚಿತ್ರೋತ್ಸವಗಳಲ್ಲಿ ಒಂದು ಈ ಚಿತ್ರೋತ್ಸವ. ಭಾರತದಲ್ಲಿ ಐದು ಚಿತ್ರೋತ್ಸವಗಳಿಗೆ ಈ ಹೆಗ್ಗಳಿಕೆ ಇದೆ. ಏಷ್ಯಾದ ಅತಿ ಪ್ರಮುಖ ಎನ್ನುವ ಹೆಮ್ಮೆಯ ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವ (ಈಗ ಗೋವಾದಲ್ಲಿ ನೆಲೆಕಂಡಿದೆ), ಕೊಲ್ಕತ್ತಾ ಚಿತ್ರೋತ್ಸವ, ಕೇರಳ ಚಿತ್ರೋತ್ಸವ, ಮುಂಬೈ ಚಿತ್ರೋತ್ಸವ ಮತ್ತು ಬೆಂಗಳೂರಿನ ಉತ್ಸವ.
ಮುಂಬೈ ಹೊರತುಪಡಿಸಿ ಉಳಿದ ಚಿತ್ರೋತ್ಸವಗಳನ್ನು ಸರ್ಕಾರಗಳು ನಡೆಸುತ್ತವೆ. ಭಾರತದ ಅಂತಾರಾಷ್ಟ್ರೀಯ ಚಿತ್ರೋತ್ಸವವನ್ನು ಈ ಹಿಂದೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಅಧಿನದಲ್ಲಿದ್ದ ಚಿತ್ರೋತ್ಸವ ನಿರ್ದೇಶನಾಲಯ ನಡೆಸುತ್ತಿತ್ತು. ಈ ಇಲಾಖೆಯ ಅಧಿನದಲ್ಲಿದ್ದ ಎಲ್ಲ ಸಿನಿಮಾ ಸಂಬಂಽತ ವಿಭಾಗಗಳನ್ನು ರಾಷ್ಟ್ರೀಯ ಚಲನಚಿತ್ರ ಅಭಿವೃದ್ಧಿ ನಿಗಮದ ಅಡಿಗೆ ತಂದಿರುವುದರಿಂದ ಅದು ಈ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಕೇರಳದಲ್ಲಿ ಅಲ್ಲಿನ ಚಲನಚಿತ್ರ ಅಕಾಡೆಮಿ ಸರ್ಕಾರದ ಪರವಾಗಿ ಇದನ್ನು ಹಮ್ಮಿಕೊಳ್ಳುತ್ತದೆ.
ಕೇರಳ ಚಲನಚಿತ್ರ ಅಕಾಡೆಮಿ ಸ್ಥಾಪನೆಯಾಗಲು ಕಾರಣವಾದದ್ದು, ಕರ್ನಾಟಕದಲ್ಲಿ ಅಕಾಡೆಮಿ ಸ್ಥಾಪನೆ ಆಗಲಿದೆ ಎನ್ನುವ ಸುದ್ದಿ. ಕನ್ನಡ ಚಿತ್ರರಂಗದ ವಜ್ರಮಹೋತ್ಸವ ವರ್ಷವದು. ೧೯೯೩-೯೪. ಆಗ ಅಸ್ತಿತ್ವದಲ್ಲಿದ್ದ ಚಲನಚಿತ್ರ ಪತ್ರಕರ್ತರ ವೇದಿಕೆ ವರ್ಷಪೂರ್ತಿ ಈ ವಜ್ರಮಹೋತ್ಸವವನ್ನು ಆಚರಿಸಲು ನಿರ್ಧರಿಸಿತು. ಉದ್ಘಾಟನಾ ಸಮಾರಂಭದಲ್ಲಿ ಅಂದಿನ ಮುಖ್ಯಮಂತ್ರಿಗಳಾಗಿದ್ದ ವೀರಪ್ಪ ಮೊಯಿಲಿ ಉದ್ಘಾಟಕರಾಗಿ ಬಂದಿದ್ದರು. ಕನ್ನಡ ಚಿತ್ರರಂಗ ಎದುರಿಸುತ್ತಿದ್ದ ಸಮಸ್ಯೆಗಳ ಕುರಿತಂತೆ ಸುದೀರ್ಘವಾಗಿಯೇ ಮಾತನಾಡಿದ ವೇದಿಕೆಯ ಅಧ್ಯಕ್ಷರಾಗಿದ್ದ ಪತ್ರಕರ್ತ ವಿ. ಎನ್. ಸುಬ್ಬರಾವ್, ಸರ್ಕಾರ ಈ ನಿಟ್ಟಿನಲ್ಲಿ ಕೂಡಲೇ ಗಮನಹರಿಸಬೇಕಾದ ಅಗತ್ಯವನ್ನು ಹೇಳಿದ್ದರು.
ಅದಾಗಿ ಒಂದೆರಡು ತಿಂಗಳಲ್ಲಿ ಸರ್ಕಾರ ಚಿತ್ರೋದ್ಯಮದ ಗಣ್ಯರನ್ನು ಒಳಗೊಂಡ ತಜ್ಞರ ಸಮಿತಿಯೊಂದನ್ನು ರಚಿಸಿತು. ಅದಕ್ಕೆ ಅಧ್ಯಕ್ಷರಾಗಿ ಸುಬ್ಬರಾವ್ ಅವರನ್ನು ನೇಮಿಸಿತು. ಉದ್ಯಮದ ಕೆಲವು ಮಂದಿ ಅದನ್ನು ಟೀಕಿಸಿದ್ದೂ ಇತ್ತು. ಆ ಸಮಿತಿ, ದೇಶದ ಚಿತ್ರ ನಿರ್ಮಾಣ ಕೇಂದ್ರಗಳನ್ನು ಭೇಟಿ ಮಾಡಿ, ಅಲ್ಲಿನ ಸೌಲಭ್ಯಗಳನ್ನು ವೀಕ್ಷಿಸಿ, ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಪೂರಕವಾದ ಹಲವು ಶಿಫಾರಸುಗಳನ್ನು ಮಾಡಿತು. ಆಗಿನ್ನೂ ಸೆಲ್ಯುಲಾಯಿಡ್ ದಿನಗಳು. ಆ ಶಿಫಾರಸುಗಳಲ್ಲಿ ಒಂದು ಚಲನಚಿತ್ರ ಅಕಾಡೆಮಿಯ ಸ್ಥಾಪನೆ. ಇತರ ಕೆಲವು ಶಿಫಾರಸುಗಳ ಜೊತೆಗೆ ಇದನ್ನೂ ಸರ್ಕಾರ ಒಪ್ಪಿಕೊಂಡಿತು. ೧೯೯೪ರ ಮಾರ್ಚ್ ತಿಂಗಳಲ್ಲಿ ಈ ವರದಿ ನೀಡಿದಾಗ ಬಜೆಟ್ ಅಧಿವೇಶನ ಕಳೆದಿತ್ತು. ಮುಂದಿನ ಬಜೆಟ್ ಅಽವೇಶನದ ರಾಜ್ಯಪಾಲರ ಭಾಷಣದಲ್ಲಿ ಅವರು ತಮ್ಮ ಸರ್ಕಾರ ಅಕಾಡೆಮಿಯನ್ನು ಸ್ಥಾಪಿಸುವುದಾಗಿ ಹೇಳಿದರು; ಅರ್ಥ ಸಚಿವರಾಗಿದ್ದ ಸಿದ್ದರಾಮಯ್ಯನವರು, ಅಕಾಡೆಮಿಯ ಸ್ಥಾಪನೆ, ಮತ್ತು ಅದಕ್ಕೆ ಬೇಕಾಗಿ ನೀಡುವ ಮೊತ್ತವನ್ನೂ ಪ್ರಕಟಿಸಿದರು.
ದೇಶಾದ್ಯಂತ ಇದು ಸುದ್ದಿಯಾಯಿತು. ಹಿಂದೆ ೧೯೮೦ರಲ್ಲಿ ಕೇಂದ್ರ ಸರ್ಕಾರಕ್ಕೆ ಕೋಟ ಶಿವರಾಮ ಕಾರಂತರ ಅಧ್ಯಕ್ಷತೆಯ ಸಮಿತಿ ಭಾರತೀಯ ಚಿತ್ರರಂಗಕ್ಕೆ ಸಂಬಂಧಿಸಿದಂತೆ ನೀಡಿದ ವರದಿಯಲ್ಲಿ ರಾಷ್ಟ್ರೀಯ ಚಲನಚಿತ್ರ ಅಕಾಡೆಮಿ ಸ್ಥಾಪಿಸಲು ಸಲಹೆ ನೀಡಿತ್ತು. ಅದು ಕಾರ್ಯಗತವಾಗಿರಲಿಲ್ಲ. ಕರ್ನಾಟಕ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಡಲು ಸಾಧ್ಯವೇನೋ ಆಯಿತು. ಆದರೆ ಅದಕ್ಕೆ ಅಡ್ಡಿಯೂ ಇತ್ತು. ಉದ್ಯಮದಿಂದ ಇಂಥವರೇ ಅಧ್ಯಕ್ಷರಾಗ ಬೇಕು ಎನ್ನುವ ಒತ್ತಾಯ, ಅಕಾಡೆಮಿ ಸ್ಥಾಪನೆಗೆ ಮುಳುವಾಯಿತು.
ಆದರೆ ಇದೇ ವೇಳೆ ಕೇರಳ ಸರ್ಕಾರ ಕಾರ್ಯಪ್ರವೃತ್ತವಾಗಿ ಅಕಾಡೆಮಿ ಸ್ಥಾಪನೆ ಮಾಡಿತು. ಮಾತ್ರವಲ್ಲ, ಮಲಯಾಳ ಚಿತ್ರರಂಗ ಭಾರತದಲ್ಲೇ ಅತ್ಯಂತ ಪ್ರಮುಖವಾಗಿ ನಿಲ್ಲಲು ಬೆಳೆಯಲು ಅದು ಸಹಕಾರಿಯೂ ಆಯಿತು. ಮಲಯಾಳ ಚಿತ್ರರಂಗ ಲೈಂಗಿಕ ಪ್ರಚೋದನೆ ನೀಡುವ ಚಿತ್ರಗಳನ್ನೇ ಹೆಚ್ಚು ನಿರ್ಮಿಸುತ್ತಿದೆ ಎನ್ನುವ ಪ್ರಚಾರ ಪಡೆದಿತ್ತು. ಈಗ ಮಲಯಾಳದಲ್ಲಿ ತಯಾರಾಗುವಷ್ಟು ವೈವಿಧ್ಯಮಯ ಚಿತ್ರಗಳು ಬೇರೆ ಭಾರತೀಯ ಭಾಷೆ ಗಳಲ್ಲಿ ತಯಾರಾಗುತ್ತಿಲ್ಲ ಎನ್ನುವುದು ಎಲ್ಲರಿಗೂ ಗೊತ್ತು.
ಸಿನಿಮಾ ಮತ್ತು ದೂರದರ್ಶನ ಚಟುವಟಿಕೆಗಳಿಗೆ ಸಂಬಂಧಸಿದಂತೆ ನೀತಿ ಗಳನ್ನು ರೂಪಿಸಲು ಸರ್ಕಾರಕ್ಕೆ ಸಹಕರಿಸುವುದು, ಸಿನಿಮಾ ಮತ್ತು ವಿಡಿಯೋ ಪ್ರಾಚ್ಯಾಗಾರ ಸ್ಥಾಪನೆ, ಚಿತ್ರೋತ್ಸವ ನಿರ್ದೇಶನಾಲಯ ಸ್ಥಾಪನೆ, ಸರ್ಕಾರದ ಪರವಾಗಿ ವಾರ್ಷಿಕ ಪ್ರಶಸ್ತಿಗಳ ಆಯ್ಕೆ ಮತ್ತು ಪ್ರದಾನ, ಸಾರ್ವಜನಿಕರಿಗಾಗಿ ಆಡಿಯೋ ವಿಷುವಲ್ ಲೈಬ್ರರಿ ಸ್ಥಾಪನೆ, ಚಿತ್ರೋದ್ಯಮ ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುವುದು, ಸಾಮಾಜಿಕ ಮಹತ್ವದ, ಸೌಂದರ್ಯಾತ್ಮಕ ಚಿತ್ರಗಳಿಗೆ ಆರ್ಥಿಕ ವ್ಯವಸ್ಥೆ, ಉತ್ತಮ, ಸದಭಿರುಚಿಯ ಚಿತ್ರಗಳಿಗೆ ನೆರವು, ಅವು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪಾಲ್ಗೊಳ್ಳಲು ನೆರವು, ಅಲ್ಲಿನ ಮಾರ್ಕೆಟ್ ವಿಭಾಗಗಳಿಗೆ ಹೋಗಲು ಬೆಂಬಲ, ರಾಜ್ಯ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಮತ್ತು ಸಿಡಿಟ್ ನೆರವಿನೊಂದಿಗೆ ಇಂತಹ ಚಿತ್ರಗಳಿಗೆ ನೆರವಾಗುವ ಯೋಜನೆ, ಮಕ್ಕಳ ಚಿತ್ರಗಳನ್ನು ಉತ್ತೇಜಿಸಲು, ಮತ್ತು ಅವುಗಳನ್ನು ಶಾಲೆ ಮತ್ತು ಇತರ ಸಾಂಸ್ಕೃತಿಕ ಕೇಂದ್ರಗಳಲ್ಲಿ ಪ್ರದರ್ಶಿಸಲು ಯೋಜನೆ, ಚಲನಚಿತ್ರ ರಸಗ್ರಹಣ ಶಿಬಿರಗಳನ್ನು ರಾಜ್ಯದ ವಿವಿಧೆಡೆ ನಡೆಸುವುದು, ಚಲನಚಿತ್ರ ಕುರಿತ ಪುಸ್ತಕಗಳ ಪ್ರಕಟಣೆ, ಚಲನಚಿತ್ರ ಸಮಾಜಗಳಿಗೆ ಉತ್ತೇಜನ. . . ಹೀಗೆ ಚಲನಚಿತ್ರ ಸಂಸ್ಕೃತಿಯನ್ನು ಬೆಳೆಸಲು ಪೂರಕವಾದ ಎಲ್ಲ ಕೆಲಸಗಳು ಕೇರಳ ಚಲನಚಿತ್ರ ಅಕಾಡೆಮಿಯ ಕಾರ್ಯವ್ಯಾಪ್ತಿಯೊಳಗೆ ಇದೆ, ಅಂತೆಯೇ ಕೆಲಸಗಳೂ ನಡೆಯುತ್ತಿವೆ.
ಹ್ಞಾಂ, ರಾಜ್ಯದಲ್ಲಿ ಅಕಾಡೆಮಿಯ ಸ್ಥಾಪನೆಯ ಪ್ರಸ್ತಾಪ ೧೯೯೫-೯೬ರಲ್ಲಿ ಆದರೂ, ಅದು ಕಾರ್ಯಗತ ಆದದ್ದು ೨೦೦೯ರಲ್ಲಿ. ಮೊದಲ ಅಧ್ಯಕ್ಷರಾಗಿದ್ದ ಟಿ. ಎಸ್. ನಾಗಾಭರಣ ಅವರು ಅಕಾಡೆಮಿಯ ಮೂಲ ಸ್ವರೂಪಕ್ಕೆ ಪೂರಕ ವಾದ ಕೆಲಸಗಳಿಗೆ ಪೀಠಿಕೆ ಹಾಕಿದ್ದರು. ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ನಾಲ್ಕನೇ ಆವೃತ್ತಿ ಮೊದಲಾಗಿ ಸುಚಿತ್ರಾದಿಂದ ಸರ್ಕಾರದ ವಶಕ್ಕೆ ಬಂತು. ಬೆಳ್ಳಿಹೆಜ್ಜೆ, ಬೆಳ್ಳಿಸಿನಿಮಾ, ಬೆಳ್ಳಿಮಾತು ಮುಂತಾಗಿ ಕಾರ್ಯಕ್ರಮಗಳಿದ್ದವು.
ಮೊದಲೇ ಹೇಳಿದಂತೆ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ೧೬ನೇ ಆವೃತ್ತಿಯ ಸಿದ್ಧತೆ ನಡೆದಿದೆ. ಅದರ ಹೊರತಾಗಿ ಹಲವು ಯೋಜನೆಗಳನ್ನು ಅಕಾಡೆಮಿ ಹಮ್ಮಿಕೊಳ್ಳಬಯಸಿದೆ. ಅದರ ವಿವರ ಅಕಾಡೆಮಿಯ ಜಾಲತಾಣದಲ್ಲಿದೆ. ಚಲನಚಿತ್ರ ಭಂಡಾರ ಸ್ಥಾಪನೆ, ಅಕಾಡೆಮಿ ಗ್ರಂಥಾಲಯ – ಪ್ರಕಟಣೆಗಳು, ಚಲನಚಿತ್ರ ಅಧ್ಯಯನಕ್ಕೆ ಹೊಸ ರೂಪ, ಅಕಾಡೆಮಿಯ ಕಟ್ಟಡದ ಸುರಕ್ಷತೆ, ಜಾಗತಿಕ ಮಟ್ಟದ ಸಾಧನೆಯ ಕನ್ನಡಿಗರ ಸ್ಮರಣೆ, ಜಿಲ್ಲಾ ಉತ್ಸವಗಳು, ಗಡಿನಾಡ ಚಿತ್ರೋತ್ಸವ, ಕಥಾ ಕೋಶ ನಿರ್ಮಾಣ ಇವೇ ಮೊದಲಾದ ಯೋಜನೆಗಳ ಬಗ್ಗೆ ಅಕಾಡೆಮಿಯ ಜಾಲತಾಣದಲ್ಲಿ ನೋಡಬಹುದು. ಇದು ಚಿತ್ರೋತ್ಸವದ ೧೩ನೇ ಆವೃತ್ತಿಯ ಸಿದ್ಧತೆಯ ಮೊದಲು ಅಲ್ಲಿ ಹೇಳಿದ್ದ ‘ಭವಿಷ್ಯದ ಯೋಜನೆಗಳು’.
ಚಲನಚಿತ್ರ ಭಂಡಾರದ ಯೋಜನೆಗೆ ಮೂಲ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ. ಅಕಾಡೆಮಿ ಸ್ಥಾಪನೆ ಆದ ಕೂಡಲೇ ಇಂತಹದೊಂದು ಯೋಜನೆಗೆ ಆರ್ಥಿಕವಾಗಿ ನೆರವಾಗಲು ಪ್ರಾಧಿಕಾರ ಮುಂದಾಯಿತು. ಅಲ್ಲಿ ಆಗ ಸಾರ್ವ ಜನಿಕ ಸಂಪರ್ಕಾಧಿಕಾರಿಯಾಗಿದ್ದ ಪುಟ್ಟಸ್ವಾಮಿ (ತಮ್ಮ ‘ಸಿನಿಮಾಯಾನ’ ಕೃತಿಗಾಗಿ ಸ್ವರ್ಣಕಮಲ ರಾಷ್ಟ್ರಪ್ರಶಸ್ತಿ ಪಡೆದವರು) ಅವರು ಅಕಾಡೆಮಿಗೆ ಮೊದಲ ಕಂತನ್ನು ಕೊಡಿಸುವಲ್ಲಿ ಸಫಲರಾದರು. ಆದರೆ ಅಕಾಡೆಮಿ ವಿಫಲವಾಯಿತು. ಮತ್ತೆ ಇದರ ಕೆಲಸ ಆರಂಭ ಆಯಿತಾದರೂ ಮುಂದುವರಿ ಯಲಿಲ್ಲ. ಈಗಲೂ ಮನಸ್ಸಿದ್ದರೆ ಮಾರ್ಗವಿದೆ. ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದಂತೆ ಭಂಡಾರದಲ್ಲಿ ಚಲನಚಿತ್ರಗಳ ಪ್ರಿಂಟ್ ಇಲ್ಲವೆ ಬೀಟಾ ಪ್ರತಿಗಳು ಮತ್ತು ಅದಕ್ಕೆ ಸಂಬಂಧಿಸಿದ ಗ್ರಾಮಾ-ನ್ ಪ್ಲೇಟ್‌ಗಳು, ಎಲ್. ಸಿ. ಡಿ, ಸೌಂಡ್ ಟ್ರ್ಯಾಕ್, ಕ್ಯಾಸೆಟ್ ಮೊದಲಾದ ಪೂರಕ ಸಂಗತಿಗಳು, ಪ್ರಚಾರದ ಸ್ಥಿರ ಚಿತ್ರಗಳು, ಹಾಡುಗಳ ಪುಸ್ತಕಗಳು, ಕರಪತ್ರಗಳು, ಆ ಕಾಲದ ಸಿನಿಮಾ ಪತ್ರಿಕೆಗಳು, ವರದಿಗಳು ಹೀಗೆ ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯೂ ಒಂದೆಡೆ ಅಚ್ಚುಕಟ್ಟಾಗಿ ಸಿಗಬೇಕು. ನಂತರ ಅದನ್ನು ಡಿಜಿಟೈಸ್ ಮಾಡಿಸಿ ಸಂರಕ್ಷಿಸುವುದರ ಜೊತೆಗೆ ಜನರಿಗೆ ತಲುಪುವಂತೆ ಮಾಡಲು ಪ್ರಯತ್ನಿಸಬಹುದು.
ಚಲನಚಿತ್ರ ಅಧ್ಯಯನ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬೇಡಿಕೆಯದು. ಕನ್ನಡದಲ್ಲಿ ಸಿನಿಮಾ ಸಂಬಂಧಿತ ಕೃತಿಗಳು ಕಡಿಮೆ. ವಿಶೇಷವಾಗಿ ಪಠ್ಯವಾಗಿ ಬಳಸುವವು. ಪ್ರಕಟವಾಗಿರುವ, ಪ್ರಕಟವಾಗುತ್ತಿರುವ ಪುಸ್ತಕಗಳಲ್ಲಿ ಬಹುತೇಕ ಸಿನಿಮಾ ಮಂದಿಯ ವೈಯಕ್ತಿಕ ಬದುಕಿನ ಚಿತ್ರಗಳಿರುತ್ತವೆಯೇ ಹೊರತು. ಅವರ ಸಿನಿಮಾಗಳು, ಅವುಗಳ ವಿಶ್ಲೇಷಣೆ, ಕೊಡುಗೆಗಳ ಕುರಿತು ಕಡಿಮೆ ಇವೆ.
ಸಿನಿಮಾ ಎಂದರೆ ಉದ್ಯಮ, ಇಲ್ಲಿ ವ್ಯಾಪಾರ ಮಾತ್ರ ಮುಖ್ಯ ಎನ್ನುವವರೇ ಹೆಚ್ಚು. ಕೋಟಿಗಟ್ಟಲೆ ಬಂಡವಾಳ ಹೂಡುವ ಇಲ್ಲಿ ಅಂತಹ ಯೋಚನೆ ತಪ್ಪೇನೂ ಅಲ್ಲ. ಆದರೆ ಸಿನಿಮಾದ ಮೂಲಭೂತ ಅಂಶಗಳ ಗಂಧಗಾಳಿಯೂ ಇಲ್ಲದೆ ಇಲ್ಲಿಗೆ ಬರುವ ಮಂದಿಗೆ ಅಂತಹದೊಂದು ಅರಿವು ಮೂಡಿಸುವ ಕೆಲಸವನ್ನು ಅಕಾಡೆಮಿ ಮಾಡಬಹುದು. ಒಳ್ಳೆಯ ಪ್ರೇಕ್ಷಕರು ಇರುವ ಕಡೆ ಒಳ್ಳೆಯ ಸಿನಿಮಾಗಳು ಬರುತ್ತವೆ. ಹಾಗಾಗಿ ಒಳ್ಳೆಯ ಪ್ರೇಕ್ಷಕರನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಶಾಲೆ, ಕಾಲೇಜುಗಳಲ್ಲಿ, ರಜಾ ದಿನಗಳಲ್ಲಿ ಸಿನಿಮಾ ರಸಗ್ರಹಣ ಶಿಬಿರಗಳನ್ನು ಆಯೋಜಿಸುವ ಕೆಲಸಗಳನ್ನು ಅಕಾಡೆಮಿ ಮಾಡಬಹುದು. ಕಳೆದ ವಾರ ಮುಖ್ಯಮಂತ್ರಿಗಳು ಸದಭಿರುಚಿಯ ಚಿತ್ರಗಳಿಗೆ ಉತ್ತೇಜನ ನೀಡಲು ರಾಜ್ಯದಾದ್ಯಂತ ಕಡಿಮೆ ಆಸನಗಳ ಚಿತ್ರಮಂದಿರಗಳನ್ನು ಕಟ್ಟುವ ಮಾತುಗಳನ್ನೂ ಆಡಿದ್ದಾರೆ. ಅದು ಬಹಳ ಆಶಾದಾಯಕ ಆಶ್ವಾಸನೆ.
ಅಕಾಡೆಮಿ, ಚಿತ್ರೋತ್ಸವದ ಬೆನ್ನಲ್ಲಿ, ಇತರ ಕಾರ್ಯಗಳತ್ತಲೂ ಗಮನ ಹರಿಸುವಂತಾಗಲಿ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…