ಎಡಿಟೋರಿಯಲ್

ಶ್ರೀಲಂಕಾ ಅಧ್ಯಕ್ಷ ರಾಜಪಕ್ಸ ಕೊನೆಗೂ ರಾಜೀನಾಮೆ, ಹಿಂಬಾಗಿಲ ಮೂಲಕ ಅಧಿಕಾರ ಹಿಡಿಯುವ ಯತ್ನ

ವಿದೇಶ ವಿಹಾರ – ಡಿ.ವಿ. ರಾಜಶೇಖರ

ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಕಟ್ಟಿಕೊಂಡಿವೆ. ಪ್ರತಿಭಟನಾಕಾರರು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಎಲ್ಲ ಪಕ್ಷಗಳ ಜನರೂ ಈ ಜನಾಂದೋಲನದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರ ಸ್ಪರ್ಧಿ ಯಾರೂ ಇರುವುದಿಲ್ಲ. ಆದರೆ ಇತರ ಪಕ್ಷಗಳು ಕಣಕ್ಕಿಳಿಸುವ ಸ್ಪರ್ಧಾಳುಗಳಲ್ಲಿ ಯಾರು ಯೋಗ್ಯರು ಎನ್ನುವುದನ್ನು ಬಹಿರಂಗವಾಗಿಯೇ ಹೇಳಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರಲ್ಲಿ ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿರುವ ರನಿಲ್ ವಿಕ್ರಮಸಿಂಘೆ ಅವರೂ ಇದ್ದಾರೆ ಎನ್ನುವುದು ಪ್ರತಿಭಟನಾಕಾರರನ್ನು ಕೆರಳಿಸಿದೆ.

ಶ್ರೀಲಂಕಾದ ಅಧ್ಯಕ್ಷ ಗೋಟಬಯ ರಾಜಪಕ್ಸ ಕೊನೆಗೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜನಾಂದೋಲನ ತೀವ್ರಗೊಂಡು ಪ್ರತಿಭಟನಾಕಾರರು ಅವರ ಮನೆಗೂ ಮುತ್ತಿಗೆ ಹಾಕುವ ಸೂಚನೆ ಸಿಕ್ಕುತ್ತಿದ್ದಂತೆಯೇ ರಾಜಪಕ್ಸ ಮಿಲಿಟರಿ ವಿಮಾನದಲ್ಲಿ ಮೊದಲು ಮಾಲ್ಡೀವ್ಸ್‌ಗೆ ನಂತರ ಅಲ್ಲಿಂದ ಸಿಂಗಪುರಕ್ಕೆ ಪಲಾಯನ ಮಾಡಿದ್ದಾರೆ. ಇದರೊಂದಿಗೆ ಶ್ರೀಲಂಕಾದಲ್ಲಿ ರಾಜಪಕ್ಸ ಕುಟುಂಬದ ಎರಡು ದಶಕಗಳ ಕಾಲದ ವಂಶಾಡಳಿತ ಅಂತ್ಯವಾಗಿದೆ. ಈ ಬೆಳವಣಿಗೆಯಿಂದಾಗಿ ಪ್ರತಿಭಟನಾಕಾರರ ಮುಖ್ಯ ಬೇಡಿಕೆ ಈಡೇರಿದಂತಾಗಿದೆ. ಆದರೆ ರಾಜಪಕ್ಸ ಅವರು ಹಿಂಬಾಗಿಲ ಮೂಲಕ ಅಧಿಕಾರ ನಿಯಂತ್ರಿಸುವ ಪ್ರಯತ್ನ ಮಾಡುತ್ತಿರುವುದು ಬಯಲಾಗಿದ್ದು ಪ್ರತಿಭಟನಾಕಾರರು ತಮ್ಮ ಆಂದೋಲನವನ್ನು ಹಿಂತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದೇನು ಎನ್ನುವ ಪ್ರಶ್ನೆ ಉದ್ಭವವಾಗಿದೆ.

ದೇಶದಲ್ಲಿ ಜನಾಂದೋಲನ ತೀವ್ರಗೊಂಡ ಬೆನ್ನಲ್ಲೇ ಪ್ರಧಾನಿಯಾಗಿದ್ದ ಮಹಿಂದಾ ರಾಜಪಕ್ಸ ರಾಜೀನಾಮೆ ಕೊಟ್ಟರು. ಗೋಟಬಯ ರಾಜಪಕ್ಸ ಅವರು ಮಾಜಿ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರನ್ನು ಅವರ ಸ್ಥಾನಕ್ಕೆ ನೇಮಿಸಿದರು. ಇದೀಗ ರಾಜಪಕ್ಸ ಅವರ ರಾಜೀನಾಮೆ ಹಿನ್ನೆಲೆಯಲ್ಲಿ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಾಧ್ಯವಾದಷ್ಟು ಬೇಗ ದೇಶದಲ್ಲಿ ಕಾನೂನು ಸುವ್ಯವಸ್ಥೆ ಸ್ಥಾಪಿತವಾಗಲು ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಅವರು ಘೋಷಿಸಿದ್ದಾರೆ. ಈ ದಿಸೆಯಲ್ಲಿ ದೇಶಾದ್ಯಂತ ತುರ್ತುಪರಿಸ್ಥಿತಿ ಘೋಷಿಸಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹಿಂಸಾಚಾರ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸೇನೆಗೆ ಅವರು ಸೂಚಿಸಿದ್ದಾರೆ. ಮೊದಲ ಹಂತವಾಗಿ ಶನಿವಾರ ಸಂಸತ್ ಸಭೆ ನಡೆದು ಅಧ್ಯಕ್ಷ ಚುನಾವಣೆಗೆ ಘೋಷಣೆ ಹೊರಡಿಸಲಾಗಿದೆ. ಇದೇ ಮಂಗಳವಾರ ಅಥವಾ ಬುಧವಾರ ಅಧ್ಯಕ್ಷ ಚುನಾವಣೆ ನಡೆಯಲಿದೆ.

ಚುಣಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಗರಿಕಟ್ಟಿಕೊಂಡಿವೆ. ಪ್ರತಿಭಟನಾಕಾರರು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ಎಲ್ಲ ಪಕ್ಷಗಳ ಜನರೂ ಈ ಜನಾಂದೋಲನದಲ್ಲಿ ಭಾಗಿಯಾಗಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನಕ್ಕೆ ಅವರ ಸ್ಪರ್ಧಿ ಯಾರೂ ಇರುವುದಿಲ್ಲ. ಆದರೆ ಇತರ ಪಕ್ಷಗಳು ಕಣಕ್ಕಿಳಿಸುವ ಸ್ಪರ್ಧಾಳುಗಳಲ್ಲಿ ಯಾರು ಯೋಗ್ಯರು ಎನ್ನುವುದನ್ನು ಬಹಿರಂಗವಾಗಿಯೇ ಹೇಳಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರಲ್ಲಿ ಪ್ರಸ್ತುತ ಹಂಗಾಮಿ ಅಧ್ಯಕ್ಷರಾಗಿರುವ ರನಿಲ್ ವಿಕ್ರಮಸಿಂಘೆ ಅವರೂ ಇದ್ದಾರೆ ಎನ್ನುವುದು ಪ್ರತಿಭಟನಾಕಾರರನ್ನು ಕೆರಳಿಸಿದೆ. ಕೆಲವೇ ವರ್ಷಗಳ ಹಿಂದೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ರನಿಲ್ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ ಕಳೆದ ಚುನಾವಣೆಗಳಲ್ಲಿ ಭಾರಿ ಸೋಲು ಅನುಭವಿಸಿತು. ಅವರ ಪಕ್ಷದ ಒಬ್ಬ ಸ್ಪರ್ಧಿ ಮಾತ್ರ ಗೆದ್ದರು. ಹೀಗಿರುವಾಗ ವಿಕ್ರಮಸಿಂಘೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಧೈರ್ಯ ಮಾಡಿರುವುದರ ಗುಟ್ಟೇನು? ಗುಟ್ಟು ಇಷ್ಟೇ: ಆಡಳಿತ ರಾಜಪಕ್ಸ ನೇತೃತ್ವದ ಶ್ರೀಲಂಕಾ ಪೊದುಜನ ಪೆರುಮುನಾ ಬೆಂಬಲ ನೀಡಲು ಮುಂದಾಗಿರುವುದು. ಅಂದರೆ ರಾಜಪಕ್ಸ ಹೋದರೂ ಅವರ ಬೆಂಬಲದ ವ್ಯಕ್ತಿ ಅಧ್ಯಕ್ಷರಾಗಿರುತ್ತಾರೆ! ವಿಕ್ರಮಸಿಂಘೆ ಅವರು ರಾಜಪಕ್ಸ ಅವರ ಆಪ್ತರು ಎಂಬ ಬಗೆಗಿನ ಅನುಮಾನ ನಿಜವಾದಂತಾಯಿತು. ವಿಕ್ರಮ ಸಿಂಘೆ ಈ ಹಿಂದೆ ಆರು ಬಾರಿ ಪ್ರಧಾನಿಯಾಗಿದ್ದಾರೆ. ಒಂದು ಬಾರಿಯೂ ಪೂರ್ಣಾವದಿ ಪ್ರಧಾನಿಯಾಗಿರಲಿಲ್ಲ. ಎಂದೂ ಅವರು ಜನಪರ ಆಡಳಿತ ನೀಡುವ ಪ್ರಯತ್ನ ಮಾಡಿಲ್ಲ ಎನ್ನುವುದು ಪ್ರತಿಭಟನಾಕಾರರ ಆರೋಪ.

ಅಧಿಕಾರದ ಮೇಲೆ ಹಿಡಿತ ಸಾಧಿಸಲು ರಾಜಪಕ್ಸ ಹೂಡಿರುವ ಆಟ ಬಯಲಾದ ನಂತರ ಪ್ರತಿಭಟನಾಕಾರರು ಈಗ ವಿಕ್ರಮಸಿಂಘೆ ಅವರ ಪದಚ್ಯತಿಗೂ ಒತ್ತಾಯಿಸುತ್ತಿದ್ದಾರೆ. ಅಷ್ಟೇ ಅಲ್ಲ ಅವರು ಕೂಡಾ ರಾಜಕೀಯದಿಂದ ಹೊರಹೋಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಅಧ್ಯಕ್ಷ ಸ್ಥಾನದ ಕತೆ ಇದಾದರೆ ಇನ್ನು ಅಧಿಕಾರಕ್ಕೆ ಬರಲಿರುವ ಸರ್ಕಾರದ ಕತೆ ಭಿನ್ನವೇನಲ್ಲ. ರಾಜಪಕ್ಸ ನೇತೃತ್ವದ ಪಕ್ಷ ಅಧಿಕ ಸದಸ್ಯರುಳ್ಳ ಪಕ್ಷವಾಗಿದ್ದು (೨೨೫ ಸ್ಥಾನಗಳ ಪೈಕಿ ರಾಜಪಕ್ಸ ಅವರ ಪಕ್ಷದ ಸ್ಥಾನ ಬಲ ೧೧೬) ಸಹಜವಾಗಿಯೇ ಮತ್ತೆ ಅವರದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ವಿರೋಧ ಪಕ್ಷಗಳಿಗೆ ಸರ್ಕಾರ ರಚಿಸುವಷ್ಟು ಸದಸ್ಯಬಲ ಇಲ್ಲ. ಈಗ ಇರುವ ಸಂಸತ್ ಸದಸ್ಯರನ್ನು ಮುಂದುವರಿಸಿದರೆ ಪರಿಸ್ಥಿತಿಯಲ್ಲಿ ಬದಲಾವಣೆ ಸಾಧ್ಯವೇ ಇಲ್ಲ. ಹಾಗೆಂದು ಹೊಸದಾಗಿ ಚುನಾವಣೆ ನಡೆಸಬಹುದೆ? ಅದಕ್ಕೆ ಅಪಾರ ಹಣ ಬೇಕು. ಈಗಲೇ ದೇಶ ಪಾಪರ್ ಆಗಿದೆ. ಇಂಥ ಸ್ಥಿತಿಯಲ್ಲಿ ಹೊಸದಾಗಿ ಚುನಾವಣೆಗೆ ಯಾರೂ ಒಪ್ಪುವುದಿಲ್ಲ. ಈ ಸ್ಥಿತಿಯಲ್ಲಿ ಸರ್ವಪಕ್ಷ ಸರ್ಕಾರ ರಚನೆ ಸಲಹೆಯೊಂದು ಚರ್ಚೆಗೆ ಕಾರಣವಾಗಿದೆ. ಆದರೆ ಸರ್ಕಾರ ವಿರೋಧಿ ಚಳವಳಿಗಾರರು ಈಗಾಗಲೇ ಈ ಸಲಹೆಯನ್ನು ತಿರಸ್ಕರಿಸಿದ್ದಾರೆ. ಹೀಗಾಗಿ ರಾಜಕೀಯ ವಲಯದಲ್ಲಿ ಗೊಂದಲ ಏರ್ಪಟ್ಟಿದೆ. ಬಹುಶಃ ವಿಕ್ರಮಸಿಂಘೆ ಅವರು ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಮಿಲಿಟರಿ ಬಲ ಬಳಸಿ ಈಗ ಕಾಣಿಸುತ್ತಿರುವ ಆಂದೋಲನವನ್ನು ಹತ್ತಿಕ್ಕಬಹುದು ಎಂಬುದು ಒಂದು ಅಂದಾಜು. ಆದರೆ ಜನಾಂದೋಲನವನ್ನು ಹಾಗೆ ತುಳಿಯಲು ಸಾಧ್ಯವೇ ಎಂಬುದನ್ನು ಕಾದು ನೋಡಬೇಕು. ಇದೇನೇ ಇದ್ದರೂ ಜನರು ಮತ್ತು ಜನಪ್ರತಿನಿಧಿಗಳ ನಡುವೆ ನಂಬಿಕೆ ಇಲ್ಲವಾಗಿದೆ. ಅದನ್ನು ಪುನರ್ಸ್ಥಾಪಿಸುವುದು ಅಷ್ಟು ಸುಲಭದ ಕೆಲಸವಲ್ಲ.

ಕೆಲವೇ ವರ್ಷಗಳ ಹಿಂದೆ ಅಭಿವೃದ್ಧಿಯ ಮುಂಚೂಣಿ ದೇಶಗಳ ಸಾಲಿಗೆ ಸೇರಬಹುದಾದ ದೇಶವೆಂದು ಗುರುತಿಸಲಾಗಿದ್ದ ಶ್ರೀಲಂಕಾ ಇಂದು ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಈ ಆರ್ಥಿಕ ಬಿಕ್ಕಟ್ಟು ದೇಶವನ್ನು ಅತಿ ಘೋರ ಮಾನವ ದುರಂತದ ಕಡೆಗೆ ಒಯ್ಯುತ್ತಿದೆ. ದೇಶದಲ್ಲಿ ಅಗತ್ಯ ಆಹಾರ ವಸ್ತು, ಔಷಧ, ಪೆಟ್ರೋಲ್, ಡೀಸೆಲ್ ಅಭಾವ ತಲೆದೋರಿ ಜನರ ಬದುಕು ಸ್ಥಗಿತಗೊಂಡಿದೆ. ಆಹಾರದ ಅಭಾವದಿಂದ ಮಕ್ಕಳು, ಬಡವರು ಸಾಯಬಹುದಾದ ಸನ್ನಿವೇಶ ಸೃಷ್ಟಿಯಾಗಿರುವುದು ಒಂದು ದುರಂತ. ಈ ದುರಂತಕ್ಕೆ ಕಾರಣ ಗೊಟಬಯ ರಾಜಪಕ್ಸ ಅವರ ದುರಾಡಳಿತ. ದೇಶದಲ್ಲಿ ಆದಾಯಕ್ಕಿಂತ ಖರ್ಚೇ ಹೆಚ್ಚು. ರಫ್ತಿಗಿಂತಾ ಆಮದೇ ಹೆಚ್ಚು. ರಾಸಾಯನಿಕ ಗೊಬ್ಬರ ಬಳಕೆಯನ್ನು ನಿಷೇಧಿಸಿದ್ದರಿಂದ ಆಹಾರಧಾನ್ಯ ಉತ್ಪಾದನೆಯಲ್ಲಿ ಕುಸಿತ. ಕೋವಿಡ್ ಪಿಡುಗಿನಿಂದಾಗಿ ಪ್ರವಾಸೋದ್ಯಮದ ಆದಾಯದಲ್ಲಿ ಹಿಂಜರಿತ. ದೇಶದ ಹಣಕಾಸು ಪರಿಸ್ಥಿತಿ ಸುಧಾರಿಸಲು ಅಗತ್ಯವಾದ ಕ್ರಮಗಳನ್ನು ಸರ್ಕಾರ ತೆಗೆದುಕೊಳ್ಳದ್ದರಿಂದ ಮತ್ತು ಸಾಲ ಮಾಡಿ ಸರ್ಕಾರ ನಡೆಸುವ ರಾಜಪಕ್ಸ ಅವರ ಆಡಳಿತ ವಿಧಾನ ಈ ಎಲ್ಲ ಸಮಸ್ಯೆಗಳಿಗೆ ಕಾರಣ. ವಿದೇಶೀ ವಿನಿಮಯ ಹಣದ ಕೊರತೆ ಸರಿದೂಗಿಸಲು ಊರ ತುಂಬ ಸಾಲ ಮಾಡಿಕೊಂಡ ರಾಜಪಕ್ಸ ಕೊನೆಗೆ ಅ ಸಾಲಕ್ಕೆ ಬಡ್ಡಿಯನ್ನೂ ಕಟ್ಟಲಾಗದಂಥ ಹೀನಾಯ ಸ್ಥಿತಿಗೆ ಬಂದರು.
ಸಹಜವಾಗಿಯೇ ಜನರು ರೊಚ್ಚಿಗೇಳುವಂಥ ಸನ್ನಿವೇಶ ನಿರ್ಮಾಣವಾಯಿತು. ಈಗ ಯಾರೇ ಅಧಿಕಾರಕ್ಕೆ ಬಂದರೂ ಮೊದಲು ವಿದೇಶ ಸಂಸ್ಥೆಗಳಿಂದ ತಂದಿರುವ ಹಣದ ಮೊತ್ತ ಸುಮಾರು ೫೧ ಬಿಲಿಯನ್ ಡಾಲರ್. ಈ ವರ್ಷ ಬೀಜಿಂಗ್‌ನಿಂದ ತಂದ ಸಾಲದ ಹಣಕ್ಕೆ ಕಟ್ಟಬೇಕಿರುವ ಬಡ್ಡಿಯೇ ೭ ಬಿಲಿಯನ್ ಡಾಲರ್‌ಗಳು. ಒಂದು ರೀತಿಯಲ್ಲಿ ಲಂಕಾ, ಚೀನಾ ಸಾಲದ ಜಾಲಕ್ಕೆ ಸಿಕ್ಕಿದಂತಾಗಿದೆ.
ಹೊಸದಾಗಿ ಅಧ್ಯಕ್ಷರಾಗಿ ಬಂದವರಿಗೆ ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭವಲ್ಲ. ಕಾನೂನು ಸುವ್ಯವಸ್ಥೆ ಸ್ಥಾಪಿತವಾದರೆ ಐಎಂಎಫ್ ಸುಮಾರು ೩ ಬಿಲಿಯನ್ ಡಾಲರ್ ಸಾಲ ನೀಡುವ ಸಂಬಂಧವಾಗಿ ಮಾತುಕತೆ ಆರಂಭಿಸುವ ಸಾಧ್ಯತೆ ಇದೆ. ಐಎಂಎಫ್ ಕೆಲವು ಷರತ್ತುಗಳನ್ನು ಪೂರೈಸಲು ಕೇಳಬಹುದು. ಈ ವಿಚಾರದಲ್ಲಿ ಲಂಕಾ ಪ್ರತಿನಿಧಿಗಳು ಐಎಂಎಫ್ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ. ಭಾರತ ೧.೯ ಬಿಲಿಯನ್ ಡಾಲರ್ ಸಾಲ ನೀಡಲು ಮುಂದಾಗಿದೆ. ಜಿ.೭ ಗುಂಪಿನ ದೇಶಗಳಾದ ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್, ಯುಕೆ, ಅಮೆರಿಕ ಮತ್ತಿತರ ದೇಶಗಳು ಅತ್ಯಧಿಕ ಪ್ರಮಾಣದಲ್ಲಿ ಸಾಲ ನೀಡಲು ಮುಂದಾಗಿವೆ. ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದಾರಿಗೆ ತರುವ ಜನರ ವಿಶ್ವಾಸಾರ್ಹ ನಾಯಕರು ಹಾಗೂ ಜನಪ್ರತಿನಿಧಿಗಳು ಈಗ ಬೇಕಿದೆ. ಆದರೆ ಈಗಿರುವ ನಾಯಕರಲ್ಲಿ ಪ್ರತಿಭಟನಾಕಾರರಿಗೆ ನಂಬಿಕೆ ಇಲ್ಲ. ಈ ಪರಿಸ್ಥಿತಿಯಲ್ಲಿ ಪರಸ್ಪರ ಮಾತುಕತೆ, ಚರ್ಚೆ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.
ಶ್ರೀಲಂಕಾಕ್ಕೆ ಬಂದಿರುವಂಥ ಆರ್ಥಿಕ ಬಿಕ್ಕಟ್ಟು ಮುಂಬರುವ ದಿನಗಳಲ್ಲಿ ಪಾಕಿಸ್ತಾನ ಮತ್ತು ನೇಪಾಳದಲ್ಲಿ ಕಾಣಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಅರ್ಜೆಂಟೀನಾ, ಈಕ್ವಡಾರ್, ಲೆಬನಾನ್, ಜಾಂಬಿಯಾ ದೇಶಗಳೂ ಬುಪಾಲು ಇಂಥದ್ದೇ ಬಿಕ್ಕಟ್ಟುಗಳನ್ನು ಎದುರಿಸುತ್ತಿವೆ. ಇಂಥ ಬಿಕ್ಕಟ್ಟು ಈ ಹಿಂದೆ ಬಂದಿಲ್ಲ ಎಂದೇನಿಲ್ಲ. ಭಾರತವೂ ಸೇರಿದಂತೆ ಹಲವು ದೇಶಗಳು ಇಂಥ ಬಿಕ್ಕಟ್ಟನ್ನು ಪರಿಹರಿಸಿಕೊಂಡು ಅಭಿವೃದ್ಧಿ ಹೊಂದಿವೆ. ಆದ್ದರಿಂದ ನಿರಾಶರಾಗದೆ ಪ್ರಸ್ತುತ ಬಿಕ್ಕಟ್ಟನ್ನು ನಿಭಾಯಿಸಲು ಬೇಕಾದಂಥ ಪರಿಹಾರವನ್ನು ಕಂಡುಕೊಳ್ಳಬೇಕಿದೆ.

andolanait

Recent Posts

ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಒ

ಮೈಸೂರು: ಇ-ಸ್ವತ್ತು ಮಾಡಿ ಕೊಡಲು ಅರ್ಜಿದಾರರಿಗೆ ಹಣ ನೀಡುವಂತೆ ಒತ್ತಾಯ ಮಾಡಿದ ಗ್ರಾಮ ಪಂಚಾಯಿತಿ ಪಿಡಿಒ ಕುಳ್ಳೇಗೌಡ ನಾಲ್ಕು ಸಾವಿರ…

4 hours ago

ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಡಾ. ಪಿ ಶಿವರಾಜ್

ಮೈಸೂರು: ಕಳೆದ ಬಾರಿಯಂತೆ ಈ ಬಾರಿಯೂ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ…

5 hours ago

ನಗರದ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ: ಜಿ ಟಿ ದೇವೇಗೌಡ

ಮೈಸೂರು: ನಗರವನ್ನು ಸ್ವಚ್ಛಗೊಳಿಸುವ ಮೂಲಕ ಜನರ ಆರೋಗ್ಯ ಕಾಪಾಡುವ ಪೌರಕಾರ್ಮಿಕರ ಆರೋಗ್ಯವೂ ಮುಖ್ಯ ವಾಗಿದ್ದು, ಅವರು ಈ ವಿಷಯದಲ್ಲಿ ನಿರ್ಲಕ್ಷ್ಯ…

6 hours ago

ಹನೂರು: ಗುಂಡಿಮಯವಾದ ರಸ್ತೆ, ಸಾಮಾಜಿಕ ಜಾಲತಾಣ ಮೂಲಕ ಯುವಕ ವ್ಯಂಗ್ಯ

ಹನೂರು: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅತಿ ದೊಡ್ಡ ಗ್ರಾಮ ಪಂಚಾಯಿತಿ ಎಂದು ಪ್ರಸಿದ್ಧಿ ಪಡೆದಿರುವ ಮಾರ್ಟಳ್ಳಿ ಗ್ರಾಮ ಪಂಚಾಯಿತಿ ಮುಖ್ಯ…

6 hours ago

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

7 hours ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

8 hours ago