ಎಡಿಟೋರಿಯಲ್

ಕನ್ನಡ ಚಿತ್ರೋದ್ಯಮ : ಪ್ರತಿಭಟನೆ, ಅಸಹಕಾರಗಳ ನಡುವೆ

ಇದು ಕನ್ನಡ ಚಿತ್ರೋದ್ಯಮದ ಒಳಗಿನ ಪ್ರತಿಭಟನೆಯೋ, ಅಸಹಕಾರಗಳೋ ಅಲ್ಲ. ವೈಯಕ್ತಿಕ ಮಟ್ಟದವು. ಆದರೆ ಚೋದ್ಯ ಎಂದರೆ ಒಂದಲ್ಲ ಒಂದು ವಿವಾದ ಉದ್ಯಮದ ಸುತ್ತ ಗಿರಕಿ ಹೊಡೆಯುತ್ತಿರುವುದು. ಮೊನ್ನೆ ಚಲನಚಿತ್ರ ವಾಣಿಜ್ಯ ಮಂಡಳಿ ಪತ್ರಿಕಾಗೋಷ್ಠಿಯೊಂದನ್ನು ಕರೆದಿತ್ತು. ಮಧ್ಯಾಹ್ನ ಮೂರು ಗಂಟೆಗೆ ಪತ್ರಿಕಾಗೋಷ್ಠಿ ಎನ್ನುವುದಾಗಿತ್ತು ಮೊದಲಿನ ನಿರ್ಧಾರ. ಆದರೆ ಕೊನೆಯ ಕ್ಷಣದಲ್ಲಿ ಅದನ್ನು ಹಿಂದೂಡಲಾಯಿತು. ಅದಕ್ಕೆ ಕಾರಣ, ತಮಿಳು ಚಿತ್ರವೊಂದರ ಪತ್ರಿಕಾಗೋಷ್ಠಿ ಅದೇ ಸಮಯದಲ್ಲಿ ನಿಗದಿಯಾಗಿತ್ತು.

ವಾಣಿಜ್ಯ ಮಂಡಳಿ ಆ ಚಿತ್ರದ ನಿರ್ಮಾಪಕರನ್ನೋ, ಪ್ರಚಾರಕರ್ತರನ್ನೋ ಕರೆದು ವಿಷಯ ತಿಳಿಸಿ ನಿಗದಿತ ವೇಳೆಯಲ್ಲಿ ಪತ್ರಿಕಾಗೋಷ್ಠಿ ನಡೆಸಬಹುದಿತ್ತು. ಆದರೆ ಅದನ್ನು ಮಾಡದೆ, ತಾನೇ ಪತ್ರಿಕಾಗೋಷ್ಠಿಯನ್ನು ಹಿಂದೂಡಿ ನಡೆಸಿತು. ಇನ್ನು ಅಂತಹದೊಂದು ಪತ್ರಿಕಾಗೋಷ್ಠಿಯ ಅಗತ್ಯ ಇತ್ತೇ ಎನ್ನುವ ಪ್ರಶ್ನೆಯೂ ಎದ್ದಿತ್ತು. ವಾಣಿಜ್ಯ ಮಂಡಳಿಗೆ ಚಿತ್ರೋದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಯಾವುದೇ ರೀತಿಯ ಕಾಳಜಿ ಇಲ್ಲ ಎನ್ನುವ ಉದ್ಯಮದ ಮಂದಿಯ ಆರೋಪದಲ್ಲಿ ಹುರುಳಿಲ್ಲದೆ ಇಲ್ಲ.

ಕಮಲ್‌ಹಾಸನ್ ಅಭಿನಯದ ತಮಿಳು ಚಿತ್ರದ ಪತ್ರಿಕಾಗೋಷ್ಠಿ ವಾಣಿಜ್ಯ ಮಂಡಳಿ ನಿಗದಿಪಡಿಸಿದ ವೇಳೆ ನಡೆಯಿತು. ಚೆನ್ನೈಯಲ್ಲಿ ಆ ಚಿತ್ರದ ಬಿಡುಗಡೆ ಪೂರ್ವ ಟೀಸರ್ ಲೋಕಾರ್ಪಣೆಯ ವೇಳೆ ಕಮಲ್‌ಹಾಸನ್ ಆಡಿರುವ ಮಾತೊಂದು ಇದೀಗ ವಿವಾದದ ಕೇಂದ್ರವಾಗಿದೆ. ‘ತಮಿಳಿನಿಂದ ಕನ್ನಡ ಹುಟ್ಟಿತು’ ಎಂದ ಅವರ ಮಾತು ಇದೀಗ ಕರ್ನಾಟಕದಲ್ಲಿ ದಳ್ಳುರಿಯಂತೆ ಹರಡತೊಡಗಿದೆ. ಅದು ಚಿತ್ರದ ಬಿಡುಗಡೆಗೆ ಕುತ್ತಾದರೂ ಆಶ್ಚರ್ಯವಿಲ್ಲ.

ಕಮಲ್‌ಹಾಸನ್ ಆಡಿದ ಈ ಮಾತಿಗಾಗಿ ಕನ್ನಡಿಗರ ಬಳಿ ಕ್ಷಮೆ ಕೇಳಬೇಕು ಎನ್ನುವ ದನಿ ಗಟ್ಟಿಯಾಗುತ್ತಿದೆ. ಒಂದು ವೇಳೆ ಕೇಳದೆ ಹೋದರೆ, ಅದು ಬಿಡುಗಡೆಯಾಗದಂತೆ ತಡೆಯಲು ವಾಣಿಜ್ಯ ಮಂಡಳಿಗೆ ಪತ್ರ ಬರೆಯುವುದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರು ಹೇಳಿದ್ದಾಗಿ ವರದಿಯಾಗಿದೆ. ಆ ಚಿತ್ರದ ಪತ್ರಿಕಾಗೋಷ್ಠಿಗಾಗಿ ತನ್ನದರ ವೇಳೆ ಬದಲಾಯಿಸಿದ ಮಂಡಳಿ ಇಂತಹದೊಂದು ನಿಲುವು ತೆಗೆದುಕೊಳ್ಳಲು ಸಾಧ್ಯವೇ ಎನ್ನುವ ಪ್ರಶ್ನೆ ಕೇಳುವವರೂ ಇದ್ದಾರೆ.

ಈ ಮಧ್ಯೆ ತಾನು ಪ್ರೀತಿಯಿಂದ ಆಡಿದ ಮಾತುಗಳಿಗೆ ಯಾವುದೇ ಕಾರಣಕ್ಕೂ ಕ್ಷಮೆ ಕೇಳುವ ಪ್ರಮೇಯವೇ ಇಲ್ಲ ಎಂದು ಕಮಲ್‌ಹಾಸನ್ ಹೇಳಿದ್ದಾರೆ. ಇದು ಬೆಂಕಿಗೆ ತುಪ್ಪ ಸುರಿದಂತಾಗಿದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಆರಂಭದಲ್ಲಿ ಇದಕ್ಕೆ ಪ್ರತಿಕ್ರಿಯಿಸುತ್ತಾ, ಎಲ್ಲ ದ್ರಾವಿಡ ಭಾಷೆಗಳ ಮೂಲವಾದ ಪೂರ್ವ ದ್ರಾವಿಡ ಭಾಷೆಯನ್ನು ಅವರು ಗಮನಿಸಿದಂತಿಲ್ಲ ಎಂದಿದ್ದರು. ಅದರಿಂದಲೇ ದಕ್ಷಿಣ, ಉತ್ತರ, ಪಶ್ಚಿಮ, ಪೂರ್ವ ದ್ರಾವಿಡ ಭಾಷೆಗಳ ವಿಸ್ತರಣೆಯಾಗಿರುವುದಾಗಿ ಭಾಷಾ ಶಾಸ್ತ್ರಜ್ಞರು ಹೇಳುತ್ತಾರೆ. ಮೂಲ ದ್ರಾವಿಡ ಎಂದರೆ ಮೂಲ ತಮಿಳು ಎಂದು ಕಮಲ್ ಹಾಸನ್ ಅವರಿಗೆ ಯಾರು ಹೇಳಿದರೋ! ಏಕೆಂದರೆ ಅದರಿಂದಲೇ ತಮಿಳು, ಕನ್ನಡ, ತುಳು, ಮಲಯಾಳ ಮತ್ತು ತೆಲುಗು ಈ ಪಂಚ ದ್ರಾವಿಡ ಭಾಷೆಗಳಲ್ಲದೆ, ನೂರಕ್ಕೂ ಹೆಚ್ಚು ಇತರ ಭಾಷೆಗಳು ಹುಟ್ಟಿಕೊಂಡವು.

ಭಾಷೆಗಳ ಐತಿಹ್ಯ, ಹಿನ್ನೆಲೆಗಳು ಈಗ ಅವರವರು ತಿಳಿದಂತೆ, ಅವರವರ ಭಾವಕ್ಕೆ, ಅವರವರ ಭಕುತಿಗೆ. ಹಾಗಾಗಿಯೇ ವಿವಾದ, ಪ್ರತಿಭಟನೆಗಳು ಸಹಜವಾಗಿಯೇ ನಡೆಯುತ್ತಿವೆ. ಕನ್ನಡದ ಕುರಿತಂತೆ ಯಾರು ಯಾವುದೇ ರೀತಿಯಲ್ಲಿ ಅವಮಾನವಾಗುವಂತೆ ನಡೆದರೂ ಪ್ರತಿಭಟನೆ ಸಹಜ. ಕಮಲ್ ಹಾಸನ್ ಮಾತುಗಳನ್ನು ಕೂಡ ಈ ಪರಿಯಲ್ಲೇ ನೋಡಲಾಗುತ್ತಿದೆ.

ಮುಂದಿನ ವಾರ ಅವರ ಚಿತ್ರ ಬಿಡುಗಡೆಗೆ ಮೊದಲು ಯಾವ ಬೆಳವಣಿಗೆಗಳು ಆಗುತ್ತವೆ ಎನ್ನುವುದನ್ನು ಕಾದು ನೋಡಬೇಕು. ತಾವು ಕ್ಷಮೆ ಕೇಳುವ ಪ್ರಮೇಯ ಇಲ್ಲ ಎಂದಿರುವ ಅವರು ಚಿತ್ರದ ಕುರಿತಂತೆ, ಅದನ್ನು ಪ್ರೇಕ್ಷಕರು ನೋಡಿಕೊಳ್ಳುತ್ತಾರೆ ಎಂದದ್ದಾಗಿ ವರದಿಯಾಗಿದೆ.

ಬೆಂಗಳೂರಿನ ಬಗೆಗೆ ತಮ್ಮ ಒಲವನ್ನು ಕಮಲ್‌ಹಾಸನ್ ಹೇಳುತ್ತಿದ್ದಿದ್ದಿದೆ. ಬೆಂಗಳೂರಿನಲ್ಲಿ ಒಂದು ಚಿತ್ರ ಯಶಸ್ವಿಯಾಯಿತು ಎಂದರೆ ಅದು ಇಡೀ ದೇಶದಲ್ಲೇ ಗೆಲ್ಲುತ್ತದೆ ಎನ್ನುವುದು ಅವರ ಅಭಿಪ್ರಾಯ. ರಾಜಕುಮಾರ್ ಅವರೇ ನನಗೆ ಸ್ಛೂರ್ತಿ ಎನ್ನುವ ಅವರು, ಕಾರ್ನಾಡ್, ಕಾರಂತರ ಚಿತ್ರಗಳು ತೆರೆಕಂಡಾಗ ಅವುಗಳನ್ನು ವೀಕ್ಷಿಸುವುದಕ್ಕಾಗಿಯೇ ಬೆಂಗಳೂರಿಗೆ ಬರುತ್ತಿದ್ದರಂತೆ. ಕನ್ನಡ ಚಿತ್ರಗಳಲ್ಲೂ ಅವರು ಅಭಿನಯಿಸಿದ್ದಾರೆ. ಈಗ ಎದ್ದಿರುವ ವಿವಾದ ಅವರ ಮೇಲೆ, ಅವರು ಅಭಿನಯಿಸಿರುವ, ವ್ಯವಹಾರಕ್ಕಾಗಿ ಕೊಂಡುಕೊಂಡಿರುವ ಹೊಸ ಚಿತ್ರದ ಮೇಲೆ ಯಾವ ಪರಿಣಾಮ ಬೀರುತ್ತದೆ ಎನ್ನುವುದನ್ನು ಮುಂದಿನ ದಿನಗಳು ಹೇಳಲಿವೆ.

ವಾಣಿಜ್ಯ ಮಂಡಳಿ ಪತ್ರಿಕಾಗೋಷ್ಠಿಯ ವಿಷಯ ನಟ, ಈಗ ನ್ಯಾಯಾಂಗ ಬಂಧನದಲ್ಲಿರುವ ಮಡೆನೂರು ಮನು ಸಾಮಾಜಿಕ ತಾಣಗಳಲ್ಲಿ ಶಿವರಾಜಕುಮಾರ್, ದರ್ಶನ್ ಮತ್ತು ಧ್ರುವ ಸರ್ಜಾ ಕುರಿತಂತೆ ಹೇಳಿದ್ದಾರೆನ್ನಲಾದ ಹಗುರವಾದ ಮಾತುಗಳಿಗೆ ಸಂಬಂಧಪಟ್ಟಂತೆ. ಸಾಮಾಜಿಕ ತಾಣಗಳಲ್ಲಿನ ವಿವಾದಕ್ಕೀಡಾಗಬಹುದಾದ ವಿವರಗಳು ಸದಾ ರೋಚಕ ಸುದ್ದಿಗಳ ಬೆನ್ನು ಬೀಳುವ ದೃಶ್ಯಮಾಧ್ಯಮಗಳ ಪಾಲಿಗೆ ರಸಗವಳ. ಅಲ್ಲಿ ಇಲ್ಲಿ ಅವು ಸುದ್ದಿಯೂ ಆಗುತ್ತಿರುತ್ತವೆ. ವಾರಗಳ ಹಿಂದೆ ಹಿನ್ನೆಲೆ ಗಾಯಕ ಸೋನು ನಿಗಮ್ ಆಡಿದ ಮಾತುಗಳಿಗಾಗಿ ಅಸಹಕಾರದ ನಿರ್ಧಾರ ಮಾಡಿದ್ದ ಮಂಡಳಿ, ಈ ಪ್ರಸಂಗದಲ್ಲೂ ಅದನ್ನು ಪುನರಾವರ್ತಿಸಿದೆ.

ವಾಣಿಜ್ಯ ಮಂಡಳಿ ಇಂತಹ ವಿಷಯಗಳತ್ತ ಗಮನ ಹರಿಸುವುದಕ್ಕಿಂತ ಮೊದಲು ಕನ್ನಡ ಚಿತ್ರೋದ್ಯಮದ ಇಂದಿನ ಸ್ಥಿತಿಗತಿಯ ಕುರಿತಂತೆ, ಸಮಸ್ಯೆಗಳ ಕುರಿತಂತೆ ಗಮನ ಹರಿಸುತ್ತಿಲ್ಲ. ಬಿಡುಗಡೆಯಾಗುತ್ತಿರುವ ಚಿತ್ರಗಳ ಸಂಖ್ಯೆಗೆ ನಿಯಂತ್ರಣವಿಲ್ಲ. ಈ ಕುರಿತಂತೆ ವಾಣಿಜ್ಯ ಮಂಡಳಿ ಕೂಡಲೇ ಕಾರ್ಯೋನ್ಮುಖವಾಗಬೇಕು ಎನ್ನುವುದು ನೊಂದ ನಿರ್ಮಾಪಕರ ಕೋರಿಕೆ.

ಪರಭಾಷಾ ಚಿತ್ರಗಳು, ಅದರಲ್ಲೂ ಜನಪ್ರಿಯ ನಟರ, ಅದ್ಧೂರಿ ವೆಚ್ಚದ ಚಿತ್ರಗಳು ತೆರೆಗೆ ಬರುವ ವೇಳೆ, ಬೆಂಗಳೂರು ನಗರ ಒಂದರಲ್ಲೇ ಪ್ರತಿದಿನ ೮೦೦ರಿಂದ ೧೦೦೦ ಪ್ರದರ್ಶನಗಳಿಗೆ ಅವಕಾಶ ಕೊಟ್ಟ ಉದಾಹರಣೆಗಳಿವೆ. ಆದರ ಕುರಿತಂತೆ ಯಾರೂ ತುಟಿ ಪಿಟಕ್ ಅನ್ನುತ್ತಿಲ್ಲ. ಹೊಸ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ ಬರುತ್ತಿವೆ. ನಿರ್ಮಾಪಕರು ಬರುತ್ತಿದ್ದಾರೆ. ಆದರೆ ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವವರಿಲ್ಲ; ಆ ವ್ಯವಸ್ಥೆ ಇಲ್ಲ. ಎಲ್ಲವೂ ಅವ್ಯವಸ್ಥೆಯೇ.

ಹಿರಿಯ ನಿರ್ಮಾಪಕರು, ನಿರ್ಮಾಣ ಕ್ಷೇತ್ರದಿಂದ ಹಿಂದಡಿ ಇಡುತ್ತಿದ್ದಾರೆ. ಡಿಜಿಟಲ್ ನಂತರದ ದಿನಗಳ ಚಿತ್ರೋದ್ಯಮದ ಆಗುಹೋಗುಗಳು, ವ್ಯವಹಾರ ರೀತಿ ಎಲ್ಲವೂ ಬಹುಶಃ ಅವರ ಪಾಲಿಗೆ ದೂರದ ಬೆಟ್ಟ ಆದಂತಿದೆ. ಹೊಸ ನಿರ್ಮಾಣ ಸಂಸ್ಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವುಗಳ ಸುದ್ದಿ ಕಡಿಮೆ. ಈ ನಡುವೆ, ಪರಭಾಷಾ ಚಿತ್ರಗಳನ್ನು ವೀಕ್ಷಿಸಲು ಬರುವ ಪ್ರೇಕ್ಷಕ ಕನ್ನಡ ಚಿತ್ರಗಳಿಗೇಕೆ ಬೆನ್ನು ಹಾಕುತ್ತಿದ್ದಾನೆ ಎನ್ನುವುದು ಯಕ್ಷಪ್ರಶ್ನೆ. ಇದಕ್ಕೆ ಉತ್ತರ ನೀಡಲು, ಕನ್ನಡ ಚಿತ್ರರಂಗಕ್ಕೆ ಕಾಯಕಲ್ಪವಾಗಲು, ಸಿನಿಮಾ ಸಂಘಟನೆಗಳ ಜೊತೆಗೆ ಕನ್ನಡಪರ ಸಂಘಟನೆಗಳು ಒತ್ತಾಸೆಯಾಗುವವೇ ಎನ್ನುವ ಪ್ರಶ್ನೆ ಈಗ ಏಳತೊಡಗಿದೆ.

ಕನ್ನಡದಲ್ಲಿ ಮಾತ್ರವಲ್ಲ, ಇತರ ಭಾಷಾ ಚಿತ್ರರಂಗಗಳೂ ಸೋಲಿನ ದವಡೆಯಲ್ಲಿವೆ. ಇಲ್ಲಿ ತೆರೆಕಾಣುವ ಚಿತ್ರಗಳನ್ನು ಮಾತ್ರ ನಾವು ಗಮನಿಸುತ್ತೇವೆ. ಅಲ್ಲೂ ಸಾಕಷ್ಟು ಸಂಖ್ಯೆಯ ಚಿತ್ರಗಳು ಮಕಾಡೆ ಮಲಗುತ್ತಿವೆ ಎನ್ನುವ ಲೆಕ್ಕಾಚಾರ ಹೇಳುತ್ತಾರೆ ಅಲ್ಲಿನ ಮಂದಿ. ನಿಜ, ಸಿನಿಮಾ ಇತಿಹಾಸದಲ್ಲಿ ಎಲ್ಲೂ ವರ್ಷದಲ್ಲಿ ತಯಾರಾಗಿ ತೆರೆಕಾಣುವ ಚಿತ್ರಗಳಲ್ಲಿ ನೂರಕ್ಕೆ ನೂರು ಗೆದ್ದ ಉದಾಹರಣೆಗಳಿಲ್ಲ. ಅದೇನಿದ್ದರೂ ಪ್ರತಿಶತ ಹದಿನೈದರ ಒಳಗೆ. ಅವುಗಳಲ್ಲಿ ಮೂರೋ ನಾಲ್ಕೋ ಸೂಪರ್ ಹಿಟ್ ಅನಿಸಿಕೊಂಡರೆ, ಇನ್ನು ಕೆಲವು ಹಿಟ್ ಅನಿಸಿಕೊಳ್ಳುತ್ತವೆ. ಉಳಿದವು ಹಾಕಿದ ಬಂಡವಾಳದ ಮೇಲೆ ಸ್ವಲ್ಪ ಲಾಭ ತರುತ್ತವೆ. ಉಳಿದವೆಲ್ಲ ನಷ್ಟದ ಬಾಬತ್ತೇ. ಇದು ಭಾರತದ ಮಾತ್ರವಲ್ಲ, ವಿಶ್ವ ಸಿನಿಮಾ ರಂಗದ ಬಾಕ್ಸಾಫೀಸ್ ಕಥೆ.

ಈ ದಿನಗಳಲ್ಲಿ, ಮಾತೆತ್ತಿದರೆ ‘ಪಾನ್ ಇಂಡಿಯಾ’ ಎನ್ನುತ್ತಾ ಯಾವುದೋ ಭಾಷೆಯಲ್ಲಿ ತಯಾರಾಗಿ ಉಳಿದ ಭಾಷೆಗಳಿಗೆ ಡಬ್ ಮಾಡುವ ಚಿತ್ರಗಳದೇ ಕಾರುಬಾರು. ಚಿತ್ರಮಂದಿರಗಳಲ್ಲಿ ತೆರೆಕಂಡು ಯಶಸ್ಸನ್ನು ಕಾಣುತ್ತವೋ, ಇಲ್ಲವೋ, ಆದರೆ ಒಟಿಟಿ ತಾಣಗಳಲ್ಲಿ ಪರಭಾಷೆಯಿಂದ ಕನ್ನಡಕ್ಕೆ ಡಬ್ ಆದ ಸಾಕಷ್ಟು ಚಿತ್ರಗಳು ಇವೆ. ಮೂಲ ಕನ್ನಡ ಚಿತ್ರಗಳಿಗೆ ಒಟಿಟಿಯಲ್ಲಿ ಅವಕಾಶ ಕಡಿಮೆ ಆಗುವುದಕ್ಕೆ ಇದು ಕೂಡ ಒಂದು ಕಾರಣ. ಇದೊಂದೇ ಅಲ್ಲ, ಎಲ್ಲ ಸಮಸ್ಯೆ, ಸವಾಲುಗಳತ್ತ ಸಿನಿಮಾ ಸಂಬಂಧಪಟ್ಟ ಸಂಸ್ಥೆಗಳು ಗಮನ ಹರಿಸಬೇಕಾಗಿದೆ.

ಆಂದೋಲನ ಡೆಸ್ಕ್

Recent Posts

ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ: ಕಾರಣ ಇಷ್ಟೇ.!

ತಮಿಳುನಾಡು: ತಮಿಳುನಾಡು ಸರ್ಕಾರಕ್ಕೆ ತೀವ್ರ ಮುಖಭಂಗ ಆಗಿದ್ದು, ತಿರುಪ್ಪರಕುಂದ್ರಂ ಬೆಟ್ಟದಲ್ಲಿ ಕಾರ್ತಿಕ ದೀಪೋತ್ಸವಕ್ಕೆ ಹೈಕೋರ್ಟ್‌ ಗ್ರೀನ್‌ ಸಿಗ್ನಲ್‌ ನೀಡಿದೆ. ಡಿಎಂಕೆ…

35 mins ago

ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತೆ ಆಸ್ಪತ್ರೆಗೆ ದಾಖಲು

ನವದೆಹಲಿ: ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಮತ್ತೆ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಸೋನಿಯಾ…

1 hour ago

ನಾನು ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ: ಸಿಎಂ ಸಿದ್ದರಾಮಯ್ಯ

ಮೈಸೂರು: ನಾನು ಪೂರ್ಣಾವಧಿ ಸಿಎಂ ಆಗುವ ವಿಶ್ವಾಸವಿದೆ. ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು…

1 hour ago

ಬಾಂಗ್ಲಾದೇಶದಲ್ಲಿ ಮುಂದುವರಿದ ಕಿಡಿಗೇಡಿಗಳ ಅಟ್ಟಹಾಸ: ಇಬ್ಬರು ಹಿಂದುಗಳ ಹತ್ಯೆ

ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿ ನಡೆಯುತ್ತಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಇಬ್ಬರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ.…

2 hours ago

ರಾಜ್ಯದ ದೀರ್ಘಾವದಿ ಸಿಎಂ ಆಗಿ ದಾಖಲೆ ಬರೆದ ಸಿದ್ದರಾಮಯ್ಯ: ಅಭಿಮಾನಿಗಳಿಂದ ನಾಟಿಕೋಳಿ ಬಿರಿಯಾನಿ ವಿತರಣೆ

ಮೈಸೂರು: ರಾಜ್ಯ ರಾಜಕಾರಣದಲ್ಲಿ ಮಹತ್ವದ ದಾಖಲೆ ಸಾಧಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ದಿವಂಗತ ದೇವರಾಜ ಅರಸು ಅವರ ದಾಖಲೆಗೂ ಸಮಾನವಾಗಿ ಸುದೀರ್ಘ…

2 hours ago

ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಕರೆ: ಕೋರ್ಟ್ ಕಲಾಪ ಸ್ಥಗಿತ

ಮೈಸೂರು: ಮೈಸೂರು ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಇಟ್ಟಿರುವುದಾಗಿ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕರೆ ಬಂದಿದ್ದು, ಎಲ್ಲೆಡೆ ಆತಂಕ ಮೂಡಿಸಿದೆ. ಬಾಂಬ್…

2 hours ago