ಎಡಿಟೋರಿಯಲ್

ಮರೆಯಾಗುತ್ತಿವೆ ಸಂವಿಧಾನ ಆಶಯಗಳು

ಶಿವಪ್ರಸಾದ್ ಜಿ

ಘರ್ ಘರ್ ತಿರಂಗಾ’ ಅಭಿಯಾನಕ್ಕೆ ಒಕ್ಕೂಟ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಂದು ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸಬೇಕು ಎಂದು ಕರೆ ನೀಡಿದ್ದಾರೆ. ಅಂದರೆ ಧ್ವಜ ಹಾರಿಸಿದರೆ ಮಾತ್ರ ದೇಶಪ್ರೇಮಿಗಳು ಎಂಬ ಮುದ್ರೆ ಬೀಳುತ್ತದೆಯೇ? ಸಾಮಾನ್ಯವಾಗಿ ಯಾರಿಗೆ ಯಾವುದರ ಕೊರತೆ ಇರುತ್ತದೆಯೋ ಅದನ್ನು ಪಡೆಯುವುದಕ್ಕಾಗಿಯೇ ಅವರು ಸದಾ ಹಪಾಹಪಿಸುತ್ತಿರುತ್ತಾರಂತೆ. ಈ ದೃಷ್ಟಿಯಲ್ಲಿ ತಿರಂಗಾ ಅಭಿಯಾನವನ್ನು ಗಮನಿಸಬೇಕಾಗುತ್ತದೆ. ಇವರೊಳಗೆ ನಿಜವಾಗಿರದ ದೇಶಪ್ರೇಮದ ಬಗ್ಗೆ ಅಮಾಯಕ ಜನರಲ್ಲಿ ನಂಬಿಕೆ ಹುಟ್ಟಿಸುವ ಪ್ರಯತ್ನವೇ ತಿರಂಗಾ ಅಭಿಯಾನ ಆಗಿರಬಹುದು?
ಅತಿ ಎತ್ತರದ ಪ್ರತಿಮೆಗಳನ್ನು ನಿಲ್ಲಿಸಿದ ಮಾತ್ರಕ್ಕೆ ದೇಶವನ್ನು ವಿಶ್ವದಲ್ಲೇ ಅಗ್ರಮಾನ್ಯ ಮಾಡಿದಂತೆ ಆಗುತ್ತದೆಯೇ?

ಸ್ವಾತಂತ್ರ್ಯ ಗಳಿಕೆಯ ೭೫ನೇ ವರ್ಷದ ಆಚರಣೆಗೆ ಭಾರತ ಸಡಗರದಿಂದ ಸಿದ್ಧವಾಗಿದೆ. ದೇಶ ಹಾಗೂ ಹಲವು ರಾಜ್ಯಗಳು ಮೂಲಭೂತವಾದ, ಜಾತೀಯತೆ, ಕೋಮುವಾದ, ಅತಿವೃಷ್ಟಿ, ಪ್ರವಾಹಗಳಿಂದ ತತ್ತರಿಸಿಹೋಗಿರುವ ಈ ಸಂದರ್ಭದಲ್ಲಿ ಸಂಭ್ರಮ ಆಚರಣೆ ಬೇಕಿತ್ತೆ ಎಂಬ ಪ್ರಶ್ನೆಗಳೂ ಇವೆ. ಆದರೆ, ಸ್ವಾತಂತ್ರ್ಯ ಹೋರಾಟಗಾರರ ಗುಣಗಾನ, ಗೌರವ ಸಲ್ಲಿಕೆ ಈ ನಾಡಿನ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಹೌದು. ಇದರ ನಡುವೆಯೇ ಈ ಸುದೀರ್ಘ ಅವಧಿಯಲ್ಲಿ ಆಳ್ವಿಕೆ ನಡೆಸಿದ ಸರ್ಕಾರಗಳು, ಜನಪ್ರತಿನಿಧಿಗಳು ದೇಶಕ್ಕಾಗಿ ನೀಡಿದ ಕೊಡುಗೆಗಳ ಅವಲೋಕನವೂ ಅಗತ್ಯ.

ಸುಮಾರು ೬೦ ವರ್ಷಗಳಿಗೂ ಅಧಿಕ ವರ್ಷಗಳು ಆಡಳಿತ ನಡೆಸಿದವರೇ ಆಗಲಿ, ಕಳೆದ ೮ ವರ್ಷಗಳಿಂದ ಅಧಿಕಾರದಲ್ಲಿರುವವರೇ ಆಗಲಿ, ತಮ್ಮದೇ ಆದ ಕೊಡಗುಗೆಗಳನ್ನು ನೀಡಿವೆ. ಅದೇ ರೀತಿಯಲ್ಲಿ ಉಭಯತ್ರರೂ ಅಧಿಕಾರಕ್ಕಾಗಿ ಸಂವಿಧಾನ ವಿರೋಧಿಯಾಗಿಯೂ ನಡೆದುಕೊಂಡ ಉದಾಹರಣೆಗಳಿವೆ. ಆದರೂ ನಮ್ಮ ದೇಶ ಸ್ವಾತಂತ್ರ್ಯ ಕಳೆದುಕೊಂಡಿಲ್ಲ. ಮತ್ತೆ ಯಾವುದೇ ದೇಶದ ಆಳ್ವಿಕೆಯ ಕಪಿಮುಷ್ಟಿಗೆ ಸಿಲುಕಿಲ್ಲ. ಇದರರ್ಥ ಪ್ರತಿಯೊಂದು ಪಕ್ಷವೂ ತನ್ನದೇ ಆದ ಇತಿಮಿತಿಯೊಳಗೆ ಪ್ರಜೆಗಳಿಗೆ ರಕ್ಷಣೆ ನೀಡಿದೆ.

ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ೧೯೪೭ರಲ್ಲಿ ಸಿಕ್ಕಿದ ಸ್ವಾತಂತ್ರ್ಯದಲ್ಲಿ ಸಂಪೂರ್ಣತೆ ಇದೆ ಎಂಬುದನ್ನು ಒಪ್ಪಲಿಲ್ಲ. ಇದು ಕೇವಲ ರಾಜಕೀಯ ಸ್ವಾತಂತ್ರ್ಯ. ಈ ದೇಶದಲ್ಲಿ ಜಾತಿ, ಮತ, ವರ್ಗಗಳ ಭೇದವಿಲ್ಲದೆ ಸಾಮಾಜಿಕ ಮತ್ತು ಆರ್ಥಿಕ ಸ್ವಾತಂತ್ರ್ಯಗಳು ಸಮಾನವಾಗಿ ಹಂಚಿಕೆಯಾದಾಗಲೇ ಭಾರತವೂ ನಿಜವಾಗಿ ಸ್ವಾವಲಂಬನೆ, ಸ್ವಾಭಿಮಾನ ರಾಷ್ಟ್ರವಾಗಿ ಜಗತ್ತಿನಲ್ಲಿ ತಲೆ ಎತ್ತಿನಿಲ್ಲಬಹುದು ಎಂದು ವಿಶ್ಲೇಷಣೆ ಮಾಡಿದ್ದರು. ಆದರೆ, ಈ ಮುಕ್ಕಾಲು ಶತಮಾನದಲ್ಲಿ ಸಾಮಾಜಿಕ ಸಮಾನತೆ ಬಸವನ ಹುಳುವಿನಂತೆ ತೆವಳುತ್ತಲೇ ಇದೆ. ಅದಕ್ಕೆ ಮೀಸಲಾತಿ ಎಂಬುದೇ ಜೀವದ್ರವ್ಯ ಎಂಬುದನ್ನೂ ಅಲ್ಲಗಳೆಯುವಂತಿಲ್ಲ. ಆರ್ಥಿಕ ಸಮಾನತೆಯ ವಿಷಯ ಚರ್ಚೆಗಳಿಗೇ ಸೀಮಿತವಾಗಿದೆ. ಇತ್ತೀಚೆಗೆ ಈ ಆರ್ಥಿಕತೆ ‘ಹಳ್ಳದ ಕಡೆಗೆ ನೀರು ಹರಿಯುವುದು’ ಎಂಬಂತೆ ಉಳ್ಳವರ ಪಾದಗಳ ಬುಡಕ್ಕೇ ಹೋಗುತ್ತಿದೆ ಎಂಬುದು ಸಾರ್ವಜನಿಕ ವಲಯದ ಆರೋಪಗಳು.

ಹಿಂದೆ ದೇಶವನ್ನಾಳಿದ ಪ್ರಜಾಪ್ರಭುತ್ವ ಸರ್ಕಾರಗಳು ದಲಿತರು, ಶೋಷಿತರು, ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದಕ್ಕೆ ಒಂದಿಷ್ಟಾದರೂ ಶ್ರಮ ವಹಿಸಿದ್ದವು ಅದಕ್ಕೆ ‘ಉಳುವವನೇ ಭೂಮಿಯ ಒಡೆಯ’ ಕಾನೂನು ಒಂದು ಸಣ್ಣ ಉದಾಹರಣೆಯಾಗಬಹುದು. ಇನ್ನು ಸಂವಿಧಾನದತ್ತ ಹಕ್ಕುಗಳಾದ ಶೈಕ್ಷಣಿಕ, ಔದ್ಯೋಗಿಕ ಮೀಸಲಾತಿಯನ್ನು ಜಾರಿಗೊಳಿಸಿದ್ದು ಕೂಡ ಸ್ಮರಣೀಯ. ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿದ್ದನ್ನು ನಿರ್ಲಕ್ಷಿಸುವಂತಹದ್ದಲ್ಲ.

ಆದರೆ, ಕಾಲಕ್ರಮೇಣ ರಾಜಕೀಯ ರಂಗದ ನೇತಾರರು ಅಧಿಕಾರ ಲಾಲಸೆಗೆ ಒಳಾಗದರು. ಪರಿಣಾಮ ಅನೈತಿಕ ರಾಜಕಾರಣ, ಭ್ರಷ್ಟಾಚಾರ, ಅಸಹಿಷ್ಣುತೆ, ಅಸಮಾನತೆಗಳ ರೌದ್ರನರ್ತನ ಶುರುವಾಯಿತು.
ಧಾರ್ಮಿಕ ಮೂಲಭೂತವಾದ ಆಗಾಗ ಅಟ್ಟಹಾಸ ಮಾಡಿದರೂ ಅದನ್ನು ನಿಯಂತ್ರಿಸುವಲ್ಲಿ ಹಿಂದಿನ ಸರ್ಕಾರಗಳು ಯಶಸ್ವಿಯಾಗಿದ್ದವು. ಆದರೆ, ಪ್ರಸ್ತುತ ಆಡಳಿತ ಪಕ್ಷಗಳು ಧಾರ್ಮಿಕ ಪ್ರಚೋದನೆಯೇ ಅಧಿಕಾರ ಗಳಿಕೆಯ ಅಸ್ತ್ರವಾಗಿರುವುದು ದೇಶದ ದುರಂತ. ಪ್ರಸ್ತುತ ಮಾನವತೆಯ ಅಂತಃಕರಣವನ್ನು ಧಾರ್ಮಿಕ ದ್ವೇಷ, ಅಸೂಯೆ, ಹಿಂದುತ್ವದ ಸರಪಳಿಗಳಲ್ಲಿ ಬಂಧಿಸಿಡುವ ಪ್ರಯತ್ನ ನಡೆದಿದೆ. ಎರಡು ಕೋಮುಗಳ ನಡುವೆ ಘರ್ಷಣೆ ನಡೆದರೆ, ಎರಡೂ ಕಡೆಯ ಅಮಾಯಕರನ್ನು ರಕ್ಷಿಸಬೇಕಾದ ನೇತಾರರೇ ಧರ್ಮ ರಕ್ಷಣೆಯ ಹೆಸರಿನಲ್ಲಿ ಒಂದು ಗುಂಪಿಗೆ ಪ್ರಚೋದನೆ ನೀಡುತ್ತಿರುವುದು ಅಮೃತ ಮಹೋತ್ಸವ ಕಾಲಘಟ್ಟದ ‘ಮಹತ್ವಪೂರ್ಣ ಕಾರ್ಯ’? ಇಡೀ ದೇಶದಲ್ಲಿ ದಲಿತರು, ಶೋಷಿತರು, ರೈತರು, ಕಾರ್ಮಿಕರ ಮೇಲೆ ಪರೋಕ್ಷವಾಗಿ ಅಥವಾ ಪ್ರತ್ಯಕ್ಷವಾಗಿ ಗದಾಪ್ರಹಾರ ನಡೆಯುತ್ತಿದೆ. ಹೋರಾಟಕ್ಕೆ ಇಳಿದವರಿಗೆ ಜೈಲೇಗತಿ ಎಂಬಂತಹ ವಾತಾವರಣವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿ ಮಾಡಲಾಗಿದೆ.

ಆಳುವ ಸರ್ಕಾರಗಳು ಜನರಿಗ ನೀಡಿದ ಭರವಸೆಗಳನ್ನು ಮರೆಯುತ್ತಿವೆ. ಕೇವಲ ಒಂದು ಧರ್ಮವನ್ನೇ ಆಡಳಿತ ಸೂತ್ರವಾಗಿಸುವ ಪ್ರಯತ್ನ ನಡೆಸುತ್ತಿದೆ ಎಂಬ ಆಪಾದನೆಗಳು ಎಲ್ಲೆಡೆಯೂ ಪಟಪಟಿಸುತ್ತಿವೆ.
ವಿದ್ಯಾರ್ಥಿಗಳ ನಡುವೆಯೂ ಧಾರ್ಮಿಕ ವೈಷಮ್ಯ ಬಿತ್ತುವಂತೆ ಹಿಜಾಬ್ ವಿವಾದ ಸೃಷ್ಟಿಯಾಯಿತು. ಇದು ಮುಂದುವರಿದು ಹಲಾಲ್, ಆಜಾನ್ ಇತ್ಯಾದಿ ಕಗ್ಗಂಟುಗಳನ್ನು ಪ್ರಚಾರ ಮಾಡಲಾಯಿತು. ಸಹಬಾಳ್ವೆಯ ಪ್ರತೀಕವಾದ ಸೌಹಾರ್ದ, ಮಾನವೀಯತೆ ತಿರಸ್ಕರಿಸುವಂತೆ ವರ್ತಿಸಿದ ಅನೈತಿಕ ಪೊಲೀಸ್‌ಗಿರಿಯನ್ನು ಪುರಸ್ಕರಿಸಲಾಯಿತು. ಹಿಂದೂಪರ ಸಂಘಟನೆಯವರು ಕೊಲೆಯಾದಾಗ ಪರಿಹಾರ, ಸಾಂತ್ವನಕ್ಕೆ ಮುಂದಾದ ರಾಜ್ಯ ಸರ್ಕಾರ, ಅಲ್ಪಸಂಖ್ಯಾತ ಸಮುದಾಯದ ಜನರ ಕೊಲೆಯಾದಾಗ ಅದಕ್ಕೆ ‘ಬೆಲೆ ಕಟ್ಟಲಾಗದು’ ಎಂದು ಮೌನವಾಯಿತು.

ಮಾನವತೆ, ಜೀವಪರವಾದ ಸಂಸ್ಕೃತಿಗೆ ವಿರುದ್ಧವಾದ ಯಾವುದೋ ಒಂದು ಧರ್ಮ, ಸಂಪ್ರದಾಯಗಳನ್ನು ಬಿತ್ತಿ, ಬೆಳೆಯುವ ಸನ್ನಾಹ ನಡೆದಿದೆಯೇ ಎಂಬ ಅನುಮಾನ ಮೂಡುತ್ತದೆ.
ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ನೆನಪಿಸಲೇಬೇಕಾದ ಪ್ರಸಂಗವೆಂದರೆ, ದೇಶವನ್ನು ಬ್ರಿಟಿಷರ ಆಳ್ವಿಕೆಯಿಂದ ಬಿಡುಗಡೆಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸಿದವರಲ್ಲೊಬ್ಬರಾದ ಅಹಿಂಸಾವಾದಿ ಗಾಂಧೀಜಿ ಅವರನ್ನು ದ್ವೇಷಿಸುವ ಮನಸ್ಸುಗಳು ವಿಜೃಂಭಿಸುತ್ತಿವೆ. ಇದಕ್ಕಿಂತ ಆತಂಕಕಾರಿ ಎಂದರೆ ಗಾಂಧೀಜಿ ಅವರನ್ನು ಗುಂಡಿಕ್ಕಿ ಕೊಂದ ನಾಥುರಾಮ್ ಗೋಡ್ಸೆಯನ್ನು ಹಿಂದೂ ಧರ್ಮ ಪ್ರಣೀತರು ಪೂಜ್ಯನನ್ನಾಗಿಸಲು ಮುಂದಾಗಿರುವುದು. ಹಿಂದೆಯೂ ಇಂತಹ ಕೊಳಕು ಮನಸ್ಸುಗಳು ಇದ್ದವು. ಆದರೆ, ಅವೆಲ್ಲ ಮನಸ್ಸಿನಲ್ಲೇ ಮಂಡಿಗೆ ಮೆಲ್ಲುತ್ತಿದ್ದವು. ಕಳೆದ ೮ ವರ್ಷಗಳಿಂದ ಅಂತಹವರಿಗೆಲ್ಲ ಬಾಯಿಬಂದಿದೆ.
ನಮ್ಮ ದೇಶದ ಮಧ್ಯಮ ವರ್ಗ ಹಾಗೂ ಬಡವರಿಗೆ ಜಾರಿ ನಿರ್ದೇಶನಾಲಯ (ಇ.ಡಿ.), ಆದಾಯ ತೆರಿಗೆ (ಐ.ಟಿ.) ಇಲಾಖೆಗಳ ಪರಿಚಯವೇ ಇರಲಿಲ್ಲ ಎನ್ನಬಹುದು. ಆದರೆ, ಇತ್ತೀಚೆಗೆ ಈ ವರ್ಗಗಳಿಗೇ ಈ ಸಂಸ್ಥೆಗಳ ಬಗ್ಗೆ ದಿನಗಟ್ಟಲೇ ಚರ್ಚೆ ಮಾಡುವ ಮಟ್ಟಿಗೆ ಅರಿವು ಮೂಡಿದೆ. ಅಂದರೆ ಒಕ್ಕೂಟ ಸರ್ಕಾರ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಈ ಇ.ಡಿ. ಮತ್ತು ಐ.ಟಿ.ಕತ್ತಿಯನ್ನು ಝಳಪಿಸುತ್ತಿದೆ ಎಂಬ ಆರೋಪಗಳಲ್ಲಿ ವಾಸ್ತವ ಇದೆ ಅನಿಸುತ್ತಿದೆ.

ಇನ್ನು ‘ಘರ್ ಘರ್ ತಿರಂಗಾ’ ಅಭಿಯಾನಕ್ಕೆ ಒಕ್ಕೂಟ ಸರ್ಕಾರ ಮುಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿಯೊಂದು ಮನೆಯ ಮೇಲೂ ರಾಷ್ಟ್ರಧ್ವಜ ಹಾರಿಸಬೇಕು ಎಂದು ಕರೆ ನೀಡಿದ್ದಾರೆ. ಅಂದರೆ ಧ್ವಜ ಹಾರಿಸಿದರೆ ಮಾತ್ರ ದೇಶಪ್ರೇಮಿಗಳು ಎಂಬ ಮುದ್ರೆ ಬೀಳುತ್ತದೆಯೇ? ಸಾಮಾನ್ಯವಾಗಿ ಯಾರಿಗೆ ಯಾವುದರ ಕೊರತೆ ಇರುತ್ತದೆಯೋ ಅದನ್ನು ಪಡೆಯುವುದಕ್ಕಾಗಿಯೇ ಅವರು ಸದಾ ಹಪಾಹಪಿಸುತ್ತಿರುತ್ತಾರಂತೆ. ಈ ದೃಷ್ಟಿಯಲ್ಲಿ ತಿರಂಗಾ ಅಭಿಯಾನವನ್ನು ಗಮನಿಸಬೇಕಾಗುತ್ತದೆ. ಇವರೊಳಗೆ ನಿಜವಾಗಿರದ ದೇಶಪ್ರೇಮದ ಬಗ್ಗೆ ಅಮಾಯಕ ಜನರಲ್ಲಿ ನಂಬಿಕೆ ಹುಟ್ಟಿಸುವ ಪ್ರಯತ್ನವೇ ತಿರಂಗಾ ಅಭಿಯಾನ ಆಗಿರಬಹುದು?
ಅತಿ ಎತ್ತರದ ಪ್ರತಿಮೆಗಳನ್ನು ನಿಲ್ಲಿಸಿದ ಮಾತ್ರಕ್ಕೆ ದೇಶವನ್ನು ವಿಶ್ವದಲ್ಲೇ ಅಗ್ರಮಾನ್ಯ ಮಾಡಿದಂತೆ ಆಗುತ್ತದೆಯೇ?

ಜನಪರ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರ ಮನಸ್ಸು ಗೆಲ್ಲಬೇಕಾದ ಆಡಳಿತ ಪಕ್ಷಗಳು, ಊರು, ಬಡಾವಣೆಗಳ ಹೆಸರನ್ನು ಬದಲಾಯಿಸುವುದು ಮತಬ್ಯಾಂಕ್ ಸೃಷ್ಟಿಸುವುದಕ್ಕಾಗಿಯೇ ಎಂಬ ಅನುಮಾನ ಜನಮಾನಸದಲ್ಲಿ ಸುಳಿದಿದೆ. ಒಂದು ಸಂಘ ಅಥವಾ ಸಂಘಟನೆಯ ಸೂತ್ರದ ಗೊಂಬೆಯಾಗಿ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ಕೊಡುವುದು ಸಾಧ್ಯವೆ? ಜನರಿಗೆ ಸುಳ್ಳುಗಳನ್ನೇ ಹೇಳುತ್ತಾ ಕೊನೆಗೆ ಅವನ್ನೇ ನಿಜವೆಂಬ ಬಿಂಬಿಸುವ ಗೊಬಲ್ಸ್ ತಂತ್ರದಂತೆ ಸರ್ಕಾರಗಳ ನಡಾವಳಿ ಕಾಣುತ್ತಿದೆ. ಅಂದರೆ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಸುಳ್ಳು ಭಾರತ’ವನ್ನೇ ಸೃಷ್ಟಿಸಿದಂತಿದೆ.
ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಎಂಬ ಸಂವಿಧಾನದ ಆಶಯಗಳಿಗೆ ಪೂರಕವಾಗಿ ಆಡಳಿತ ನಡೆಸಬೇಕಾದ ಸರ್ಕಾರಗಳು, ಧರ್ಮದಿಂದ, ಧರ್ಮಕ್ಕಾಗಿ, ಧರ್ಮಕ್ಕೋಸ್ಕರ ಎಂಬಂತೆ ವರ್ತಿಸುತ್ತಿರುವುದು ವಿಪರ್ಯಾಸ.

ರಾಷ್ಟ್ರಕವಿ ಕುವೆಂಪು ಅವರ ಸರ್ವಜನಾಂಗದ ಶಾಂತಿಯ ತೋಟ’ ಮನುಜಮತ ವಿಶ್ವಪಥ’ ಎಂಬ ಮಾತುಗಳು ಹಿಂದೆಂದಿಗಿಂತಲೂ ಈ ಅಮೃತ ಮಹೋತ್ಸವ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿವೆ. ಬಹುತ್ವವೇ ಭಾರತದ ಜೀವಾಳ. ವೈವಿಧ್ಯತೆಯಲ್ಲಿ ಏಕತೆಯನ್ನು ಸಾಧಿಸುವುದೇ ಸಂವಿಧಾನಕ್ಕೆ ನೀಡುವ ಗೌರವ. ಜಾತಿ, ಧರ್ಮ, ಮತಗಳೆಂಬ ವೇಷಗಳನ್ನು ಕಳಚಿಟ್ಟು ಮನುಷ್ಯರನ್ನು ಸಮಾನತೆ, ಸೋದರ ಭಾವನೆಗಳೊಡನೆ ಮನುಷ್ಯರಾಗಿಯೇ ಸ್ವೀಕರಿಸಬೇಕು. ಅದೇ ನಿಜವಾದ ಭಾರತ.

andolanait

Recent Posts

ರೈತರಿಗೆ, ಜನರಿಗೆ ರಕ್ಷಣೆ ಕೊಡುವುದು ನಮ್ಮ ಕರ್ತವ್ಯ: ಸಚಿವ ಕೆ.ವೆಂಕಟೇಶ್‌

ಚಾಮರಾಜನಗರ: ಒಟ್ಟಿಗೆ ಐದು ಹುಲಿಗಳು ಕಾಣಿಸಿಕೊಂಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಕೆ.ವೆಂಕಟೇಶ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಚಾಮರಾಜನಗರದಲ್ಲಿ ಮಾಧ್ಯಮದವರೊಂದಿಗೆ…

5 mins ago

ಕಣ್ಣೂರು| ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

ಕಣ್ಣೂರು: ಒಂದೇ ಕುಟುಂಬದ ನಾಲ್ವರು ಸದಸ್ಯರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ. ಉತ್ತರ ಕೇರಳ ಜಿಲ್ಲೆಯ ಮನೆಯಲ್ಲಿ ಒಂದೇ…

18 mins ago

ಜನವರಿ.29ರಿಂದ ಫೆಬ್ರವರಿ.06ರವರೆಗೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ

ಬೆಂಗಳೂರು: ಈ ಬಾರಿಯ 17 ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 29ರಿಂದ ಫೆಬ್ರವರಿ 06ರವರೆಗೆ ನಡೆಯಲಿದೆ. ಹಿರಿಯ ಚಲನಚಿತ್ರ…

41 mins ago

ಕಾಂಗ್ರೆಸ್‌ ಹೈಕಮಾಂಡ್‌ ಯಾರು ಅನ್ನೋದೆ ಗೊತ್ತಿಲ್ಲ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಕಲಬುರ್ಗಿ: ಕಾಂಗ್ರೆಸ್‌ ಹೈಕಮಾಂಡ್‌ ಯಾರು ಅನ್ನೋದೆ ಗೊತ್ತಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಟೀಕೆ ಮಾಡಿದ್ದಾರೆ. ರಾಜ್ಯದಲ್ಲಿ ಸಿಎಂ…

1 hour ago

ಚಾಮರಾಜನಗರ: ನಂಜೆದೇವಪುರ ಸುತ್ತಮುತ್ತ ಹುಲಿಗಳಿಗಾಗಿ ಶೋಧ ಕಾರ್ಯ

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರ ತಾಲ್ಲೂಕಿನ ನಂಜೆದೇವಪುರ ಗ್ರಾಮದ ಸುತ್ತಮುತ್ತ ಹುಲಿಗಳನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಮುಂದುವರಿಸಲಾಗಿದೆ. ಚಾಮರಾಜನಗರ ತಾಲ್ಲೂಕಿನ…

2 hours ago

ಕ್ರಿಕೆಟ್‌ ಪ್ರೇಮಿಗಳಿಗೆ ಶಾಕ್:‌ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳಿನ ಪಂದ್ಯಕ್ಕೆ ಅನುಮತಿ ನಿರಾಕರಣೆ

ಬೆಂಗಳೂರು: ಕ್ರಿಕೆಟ್‌ ಪ್ರೇಮಿಗಳಿಗೆ ಶಾಕ್‌ ಎಂಬಂತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳಿನ ಪಂದ್ಯಕ್ಕೆ ಅವಕಾಶ ಇಲ್ಲ ಎಂದು ತಿಳಿದುಬಂದಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ…

2 hours ago