ನಾಡಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಉದ್ಘಾಟನೆಗಾಗಿ ರಾಜ್ಯ ಸರ್ಕಾರ ಬುಕರ್ ಪ್ರಶಸ್ತಿ ಪುರಸ್ಕೃತರಾದ ಲೇಖಕಿ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ರಾಜ್ಯಾದ್ಯಂತ ವಿವಾದ ಕಿಚ್ಚೆಬ್ಬಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಭಾಷೆ, ನಾಡಿನ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಏರಿಸಿರುವ ಬಾನು ಅವರ ಸಾಹಿತ್ಯಕ ಶ್ರೇಷ್ಠತೆಗಿಂತ, ಅವರ ಧರ್ಮದ ಬಗ್ಗೆ ಕೆಲಜನರಿಗೆ ಇರುವ ಪೂರ್ವ ಗ್ರಹವೇ ಮುಖ್ಯವಾಗಿ ಶಬ್ದ ಮಾಡುತ್ತಿದೆ.
೨೦೧೭ರಲ್ಲಿ ನಿತ್ಯೋತ್ಸವ ಕವಿ ಕೆ.ಎಸ್.ನಿಸಾರ್ ಅಹಮ್ಮದ್ ಅವರು ದಸರಾ ಮಹೋತ್ಸವವನ್ನು ಇದೇ ಚಾಮುಂಡಿ ಬೆಟ್ಟದಲ್ಲಿ ಉದ್ಘಾಟಿಸಿದ್ದಾರೆ. ಆಗ ಒಂದೇ ಒಂದು ಭಿನ್ನಧ್ವನಿಯೂ ಕೇಳಿಬರಲಿಲ್ಲ. ಬಾನು ಅವರನ್ನು ಉದ್ಘಾಟನೆಗೆ ಆಹ್ವಾನಿಸುತ್ತಿದ್ದಂತೆ ಇದ್ದಕ್ಕಿದ್ದಂತೆ ಅಪಸ್ವರಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡು ತ್ತಿವೆ. ಬಾನು ಅವರು ಹೋರಾಟಗಾರರು, ಮಹಿಳೆಯರ ಶೋಷಣೆ ವಿರುದ್ಧ ಧ್ವನಿ ಎತ್ತಿದವರು. ಅಲ್ಪಸಂಖ್ಯಾತ ಕುಟುಂಬ ದಲ್ಲಿ ಜನಿಸಿ ಒಬ್ಬ ಬರಹಗಾರ್ತಿಯಾಗಿ ರೂಪುಗೊಳ್ಳಲು ಅವರು ಅನುಭವಿಸಿದ ಸಂಕಟಗಳು, ಎದುರಿಸಿದ ಧಾರ್ಮಿಕ ವೈರುಧ್ಯಗಳೇ ಬಹುಶಃ ಈಗ ಅವರು ಎದುರಿಸುತ್ತಿರುವ ವಿರೋಧಗಳಿಗೆ ತಕ್ಕ ಉತ್ತರ ನೀಡುವಂತಹ ಮನೋಸ್ಥೆರ್ಯವನ್ನು ಒದಗಿಸಿವೆ ಎಂದರೆ ಉತ್ಪ್ರೇಕ್ಷೆಯಲ್ಲ. ‘ಚಾಮುಂಡೇಶ್ವರಿಯೇ ನನ್ನನ್ನು ಕರೆಸಿ ಕೊಳ್ಳುತ್ತಿದ್ದಾಳೆ’ ಎಂದಿರುವ ಬಾನು ಅವರ ಹೇಳಿಕೆಯು, ಆಕೆಗೆ ಎಲ್ಲ ಧರ್ಮಗಳ ಬಗ್ಗೆ ಗೌರವ ಇದೆ ಎಂಬುದನ್ನು ಸಾರಿ ಹೇಳುತ್ತದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿರುವ ಬಾನು ಅವರಿಗೆ ದಸರಾ ಉದ್ಘಾಟನೆ ವಿಚಾರದಲ್ಲಿ ಸ್ವಧರ್ಮ ಹಾಗೂ ಅನ್ಯಧರ್ಮ ಎಲ್ಲಿಯೂ ಬೆಂಬಲ ಸಿಗುತ್ತಿಲ್ಲ. ಕಳೆದ ವರ್ಷ ಅಂದರೆ ೨೦೨೪ರಲ್ಲಿ ಅಲ್ಪಸಂಖ್ಯಾತ ಧರ್ಮದ ಡಾ.ಹಂ.ಪ.ನಾಗರಾಜಯ್ಯ ಅವರು ದಸರಾ ಉದ್ಘಾಟಿಸಿದ್ದಾರೆ. ಆಗ ಕೂಡ ಯಾರೂ ವಿರೋಧಿಸಲಿಲ್ಲ. ನಾಡಹಬ್ಬ ಅಥವಾ ಸಾಂಸ್ಕೃತಿಕ ಉತ್ಸವದಲ್ಲಿ ಧರ್ಮಕ್ಕಿಂತ ಪರಸ್ಪರ ಮಾನವ ಪ್ರೀತಿ, ಸಹಕಾರಗಳಿಗೇ ಆದ್ಯತೆ. ಜಂಬೂ ಸವಾರಿಯ ದಿನ ದಸರಾ ಗಜಪಡೆಯೊಂದಿಗೆ ಸಾಗುವ ಜಾನಪದ ಕಲಾತಂಡಗಳಲ್ಲಿ ಇರುವ ಹಾಗೂ ಸ್ತಬ್ಧಚಿತ್ರಗಳನ್ನು ರೂಪಿಸುವ ಕಲಾವಿದರನ್ನು ಜಾತಿ, ಧರ್ಮದ ಮಾನದಂಡಗಳಲ್ಲಿ ತೂಗುವುದು ಎಷ್ಟು ಸರಿ? ಇಂತಹ ವಿರೋಧಗಳಿಂದ ಸಾಮಾನ್ಯ ಜನರು ದಸರಾ ಹಬ್ಬದಿಂದ ದೂರ ಉಳಿಯುವ ಸಾಧ್ಯತೆಗಳು ಇವೆ.
ದಸರಾ ಆಚರಣೆಯನ್ನು ನಿಜವಾದ ಸಂಭ್ರಮ, ಸಂತೋಷಗಳನ್ನು ಕಾಣುವವರೇ ಈ ಸಾಮಾನ್ಯಜನರು. ಯಾವುದೇ ಧರ್ಮ ಅಥವಾ ಯಾವುದನ್ನು ನಾವು ಧರ್ಮ ಎಂದು ಪರಿಭಾವಿಸುತ್ತೇವೆಯೋ ಅದು ನಿಜವಾಗಿ, ದೇಶದಲ್ಲಿ ‘ಸರ್ವ ಜನಾಂಗದ ಶಾಂತಿ ತೋಟ’ದ ನಿರ್ಮಾಣವನ್ನು ಬಯಸುತ್ತದೆ. ಹಾಗಿಲ್ಲದಿದ್ದರೆ ಅದನ್ನು ಧರ್ಮ ಎನ್ನುವುದು ಹೇಗೆ? ಈಗಿನ ಮಾತಿರಲಿ. ಮೈಸೂರು ಸಂಸ್ಥಾನದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯು ಎಲ್ಲ ವರ್ಗಗಳ ಜನರ ಅಭಿವೃದ್ಧಿಯನ್ನೇ ಕೇಂದ್ರವಾಗಿಟ್ಟುಕೊಂಡಿತ್ತು. ಜಾತಿ, ಧರ್ಮಗಳ ಹಂಗಿಲ್ಲದೆ ಆಡಳಿತ ನಡೆಸಿದ್ದು ನಾಲ್ವಡಿ ಅವರ ಹೆಗ್ಗಳಿಕೆ. ಆದರೆ, ಅವರಿಗೂ ಪೂರ್ವಗ್ರಹ ಮನಸ್ಸುಗಳ ವಿರೋಧ ಸಾಕಷ್ಟು ಪ್ರಬಲವಾಗಿಯೇ ಇತ್ತು ಎಂಬುದಾಗಿ ಇತಿಹಾಸ ಹೇಳುತ್ತದೆ. ಬಾನು ಮಷ್ತಾಕ್ ಅವರು ದಸರಾ ಉದ್ಘಾಟಿಸಬಾರದು ಎನ್ನುವವರಿಗೆ ನಾಲ್ವಡಿ ಅವರು ಜಂಬೂ ಸವಾರಿಯಲ್ಲಿ ಮೆರೆದ ಸೌಹಾರ್ದತೆಯ ಸಂದೇಶವನ್ನು ನೆನಪು ಮಾಡಬೇಕಾಗಿದೆ.
೧೯೨೭ರಲ್ಲಿ ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ನಾಲ್ವಡಿ ಅವರು ಸಂಸ್ಥಾನದ ದಿವಾನರಾಗಿದ್ದ ಸರ್ ಮಿರ್ಜಾ ಮುಹಮ್ಮದ್ ಇಸ್ಮಾಯಿಲ್ ಅವರನ್ನು ಅಂಬಾರಿಯೊಳಗೆ ಕೂರಿಸಿ ತಮ್ಮ ಜೊತೆಯಲ್ಲೇ ಮೆರವಣಿಗೆಯಲ್ಲಿ ಕರೆದೊಯ್ದರು ಎಂಬ ದಾಖಲೆ ಇದೆ. ಆಗಲೂ ಕೆಲವರು ಮೆರವಣಿಗೆ ಹೊರಟಿದ್ದವರತ್ತಲೇ ಪಾದರಕ್ಷೆಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರಂತೆ. ಆದರೆ, ಈ ಪ್ರಜಾತಂತ್ರ ವ್ಯವಸ್ಥೆಯಲ್ಲಿ, ವಿಜ್ಞಾನ, ತಂತ್ರಜ್ಞಾನ ಅಚ್ಚರಿ ಎಂಬಂತೆ ಬೆಳೆದಿದೆ. ಮನುಷ್ಯ ಚಂದ್ರಲೋಕದಲ್ಲಿ ಮನೆ ಕಟ್ಟುವ ಚಿಂತೆಯಲ್ಲಿದ್ದಾನೆ. ಈಗಲೂ ಧಾರ್ಮಿಕತೆಯ ಮುಸುಕಿ ನೊಳಗೆ ಮಾನವತೆಯ ಬೆಳಕನ್ನು ಮುಚ್ಚಿಡುವ ವ್ಯರ್ಥ ಪ್ರಯತ್ನ ನಡೆಯುತ್ತಿರುವುದು ಸಾಂವಿಧಾನಿಕವಾಗಿ ಒಪ್ಪುವುವಂತಹದ್ದಲ್ಲ.
ಬಾನು ಮುಷ್ತಾಕ್ ಈ ಮಣ್ಣಿನ, ಭಾಷೆಯ ಲೇಖಕರು. ಅವರು ದಸರಾ ಉದ್ಘಾಟಿಸುವುದು ಸರಿಯಲ್ಲ ಎನ್ನುವುದಕ್ಕೆ ಆಧಾರವೇ ಇಲ್ಲ. ಈ ಬಗ್ಗೆ ಮಾನವೀಯ ನೆಲೆಯಲ್ಲಿ ಚಿಂತನೆ ಮಾಡುವುದು ಎಲ್ಲರ ಕರ್ತವ್ಯ.
” ನಾಡಹಬ್ಬ ಅಥವಾ ಸಾಂಸ್ಕೃತಿಕ ಉತ್ಸವದಲ್ಲಿ ಧರ್ಮಕ್ಕಿಂತ ಪರಸ್ಪರ ಮಾನವ ಪ್ರೀತಿ, ಸಹಕಾರಗಳಿಗೇ ಆದ್ಯತೆ. ಜಂಬೂ ಸವಾರಿಯ ದಿನ ದಸರಾ ಗಜ ಪಡೆಯೊಂದಿಗೆ ಸಾಗುವ ಜಾನಪದ ಕಲಾತಂಡಗಳಲ್ಲಿ ಇರುವ ಹಾಗೂ ಸ್ತಬ್ಧಚಿತ್ರಗಳನ್ನು ರೂಪಿಸುವ ಕಲಾವಿದರನ್ನು ಜಾತಿ, ಧರ್ಮದ ಮಾನದಂಡಗಳಲ್ಲಿ ತೂಗುವುದು ಎಷ್ಟು ಸರಿ? ಇಂತಹ ವಿರೋಧಗಳಿಂದ ಸಾಮಾನ್ಯ ಜನರು ದಸರಾ ಹಬ್ಬದಿಂದ ದೂರ ಉಳಿಯುವ ಸಾಧ್ಯತೆಗಳೂ ಇವೆ”
ಮೈಸೂರಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪೌರಕಾರ್ಮಿಕರು ಸಮವಸ್ತ್ರ, ಗುಣಮಟ್ಟದ ಬೆಳಗಿನ ಉಪಾಹಾರ ಮೊದಲಾದ ಸೌಲಭ್ಯಗಳಿಲ್ಲದೇ ಬವಣೆ ಪಡುತ್ತಿರುವುದು, ನಗರ ಪಾಲಿಕೆಯಲ್ಲಿ ೮೪…
ದೇಶದ ಪ್ರಗತಿಗೆ ಶಿಕ್ಷಣ ಪ್ರಮುಖವಾಗಿದೆ. ಶಾಲಾ, ಕಾಲೇಜು ಹಂತದ ಪರೀಕ್ಷೆಗಳು ಮತ್ತು ಸರ್ಕಾರಿ ಹುದ್ದೆಗಳ ನೇಮಕಾತಿಗೆ ನಡೆಯುವ ಪರೀಕ್ಷಾ ಕೊಠಡಿಯಲ್ಲಿ…
ಅಂಚೆ ಕಚೇರಿಗಳಲ್ಲಿ ಗ್ರಾಹಕರು ಹಣ ಕಟ್ಟುವ ಉಳಿತಾಯ ಖಾತೆ, ಆರ್‌ಡಿ , ಪಿಪಿಎಫ್, ಎಂಐಎಸ್ ಹಾಗೂ ಅಂಚೆ ಕಚೇರಿಯ ವಿವಿಧ…
ರಾಜ್ಯಗಳ ಆಡಳಿತ ಸಂವಿಧಾನಬದ್ಧವಾಗಿ ನಡೆಯುವಂತೆ ಮೇಲುಸ್ತುವಾರಿಯಾಗಿ ಕೇಂದ್ರ ಸರ್ಕಾರದ ಶಿಫಾರಸಿನಂತೆ ರಾಷ್ಟ್ರಪತಿ ಅವರು ರಾಜ್ಯಪಾಲರನ್ನು ನೇಮಕ ಮಾಡುವುದು ೧೯೫೦ರಿಂದ ನಡೆದುಕೊಂಡು…
‘ಕುಸೂ ಕುಸೂ ಹೇಳಪ್ಪ ಹೇಳು ನನ್ನ ಕಂದಾ. ಅವ್ವಾ... ನಾಳಕ ಬಾವುಟದ ಹಬ್ಬ. ಬಾವುಟ ಏರಿಸೋ ಹಬ್ಬ. ಇಸ್ಕೂಲಿಗೆ ಹೊತ್ತಿಗೆ…
ಸಂವಿಧಾನ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ವಾಸ್ತವದಲ್ಲಿ ನಾವು ಎಷ್ಟು ಮುಕ್ತರಾಗಿದ್ದೇವೆ? ಭ್ರಷ್ಟಾಚಾರ, ಪರಿಸರ ನಾಶ, ಮಾಲಿನ್ಯ ಹಾಗೂ…