ವನಮಾಲಾ ವಿಶ್ವನಾಥ
ಒಂದು ಕೃತಿಯ ಮರುರೂಪಗಳು, ಅನು ವಾದಗಳು ಆ ಕೃತಿಗೆ ಹೊಸ ಹುಟ್ಟು ನೀಡುತ್ತವೆ. ೧೯೬೭ರಲ್ಲಿ ಪ್ರಕಟವಾದ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಗೆ ೫೦ ವರ್ಷ ತುಂಬಿದಾಗ ಸಿ.ಬಸವಲಿಂಗಯ್ಯ ಅವರು ಆ ಕಾದಂಬರಿಯನ್ನು ರಂಗಭೂಮಿಗೆ ತರುವ ಮೂಲಕ ಅದಕ್ಕೆ ಹೊಸ ಜೀವ ತುಂಬಿದರು. ೨೦೨೦ರಲ್ಲಿ ಪ್ರತಿಷ್ಠಾನ ಪ್ರಕಟಿಸಿದ ಇಂಗ್ಲಿಷ್ ಅನುವಾದವು ಕೃತಿಗೆ ಹೆಚ್ಚಿನ ಮಹತ್ವ ತಂದು ಕೊಟ್ಟಿತು. ಈಗ bride in the hills ಎಂಬ ಶೀರ್ಷಿಕೆಯಲ್ಲಿ ನನ್ನ ಅನುವಾದವನ್ನು Penguin ಸಂಸ್ಥೆ ಪ್ರಕಟಿಸಿ, ಕುವೆಂಪು ಅವರ ಮಹಾ ಕಾದಂಬರಿಗೆ ಜಾಗತಿಕ ಹರಹನ್ನು ತಂದುಕೊಟ್ಟಿದೆ.
‘ಮಲೆಗಳಲ್ಲಿ ಮದುಮಗಳು’ ಕುವೆಂಪು ಅವರ ಎರಡನೆ ಕಾದಂಬರಿ. ಇದು ಕುವೆಂಪು ಅವರ ಸುಮಾರು ಐವತ್ತು ವರ್ಷಗಳ ಅತ್ಯಂತ ಸಮೃದ್ಧ ಮತ್ತು ಬಹುಮುಖ ಸಾಹಿತ್ಯಿಕ ವೃತ್ತಿಜೀವನದ ಪರಾಕಾಷ್ಠೆಯಾಗಿದೆ. ಕುವೆಂಪು ಅವರನ್ನು ಥಾಮಸ್ ಹಾರ್ಡಿ ಮತ್ತು ಲಿಯೋ ಟಾಲ್‌ಸ್ಟಾಯ್ ಅಂತಹ ಮಹಾ ಉಸ್ತಾದ್‌ಗಳ ಕೃತಿಗಳನ್ನು ಓದಿದಾಗ ಕನ್ನಡದಲ್ಲಿ ಅಂತಹ ಕಾದಂಬರಿಗಳಿಲ್ಲದ ಕೊರತೆ ತೀವ್ರವಾಗಿ ಕಾಡಿತು. ಆದ್ದರಿಂದ, ಅವರು ೧೯೩೬ರಲ್ಲಿ ದೊಡ್ಡ ಹರಹಿನ ಮ. ಮ.’ ಕಾದಂಬರಿಯನ್ನು ಬರೆಯಲು ಪ್ರಾರಂಭಿಸಿದರು. ಅದರ ಸುಮಾರು ೮೦ ಪುಟಗಳು ಸ್ಥಳೀಯ ನಿಯತಕಾಲಿಕೆಯಲ್ಲಿ ಪ್ರಕಟವೂ ಆಯಿತು. ಆದರೆ ಕುವೆಂಪು ಆ ಕಾದಂಬರಿಯನ್ನು ಅಷ್ಟಕ್ಕೇ ನಿಲ್ಲಿಸಿ, ‘ಕಾನೂರು ಹೆಗ್ಗಡತಿ’ (೧೯೩೬) ಕಾದಂಬರಿಯನ್ನು ಬರೆದರು. ಅದರ ನಂತರ ಅವರ ಪ್ರಸಿದ್ಧ ‘ಶ್ರೀ ರಾಮಾಯಣ ದರ್ಶನಂ’ (೧೯೪೯) ಮಹಾಕಾವ್ಯವನ್ನು ರಚಿಸಿದರು. ಅವರಿಗೆ ೧೯೫೫ರಲ್ಲಿ ಮೊದಲ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಮತ್ತು ೧೯೬೭ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅವರು ಮಹಾಕಾವ್ಯ, ಕಾವ್ಯ, ಪ್ರಬಂಧಗಳು, ನಾಟಕಗಳು, ಸಾಹಿತ್ಯ ವಿಮರ್ಶೆ, ಮಕ್ಕಳ ಸಾಹಿತ್ಯ, ಸಣ್ಣ ಕಥೆಗಳು, ಅನುವಾದಗಳು ಮತ್ತು ಆತ್ಮಚರಿತ್ರೆ ಇತ್ಯಾದಿಗಳಲ್ಲಿ ತೊಡಗಿಕೊಂಡಿದ್ದು, ಒಂದು ರೀತಿಯಲ್ಲಿ ‘ಮಲೆಗಳಲ್ಲಿ ಮದುಮಗಳು’ ಎನ್ನುವ ಮಹಾನ್ ಕಾದಂಬರಿ ರಚನೆಗೆ ಬೇರೆಲ್ಲ ಕೆಲಸ ತಯಾರಿಯಂತಿದ್ದು, ಅದು ೧೯೬೭ರಲ್ಲಿ ಪ್ರಕಟವಾಯಿತು.
ಅನುವಾದ ಕುರಿತಂತೆ ನಮ್ಮ ಸುಪ್ರಸಿದ್ಧ ಅನುವಾದಕರಾಗಿದ್ದ ರಾಮಚಂದ್ರ ಹೀಗೊಂದು ಒಳನೋಟ ನೀಡುತ್ತಾರೆ: ‘ನೀವು ಪಠ್ಯಕ್ಕೆ ಹತ್ತಿರವಾಗುವುದು ಅದನ್ನು ಓದಿದಾಗ ಅಥವಾ ಅದರ ಬಗ್ಗೆ ಬರೆಯುವಾಗ ಅಲ್ಲ, ಆದರೆ ನೀವು ಪಠ್ಯವನ್ನು ಭಾಷಾಂತರಿಸಿದಾಗ.‘ಕುವೆಂಪು ಅವರ ಮೇರು ಕೃತಿಯನ್ನು ಭಾಷಾಂತರಿಸುವುದು ಎಂದರೆ ಅವರ ಕಲ್ಪನಾಲೋಕದ ಮಾಂತ್ರಿಕತೆಗೆ ಮನಸೋತು ಅಲ್ಲಿ ವಿಹರಿಸುವುದು ಎಂದೇ. ಅದು ಸಂಕೀರ್ಣ ಸಾಮಾಜಿಕ ಜಗತ್ತನ್ನು ಸೃಷ್ಟಿಸುವ ಜೊತೆಗೇ ಆ ಜಗತ್ತಿನ ಆಚೆಗಿನ ಲೋಕಗಳಿಗೆ ನಮ್ಮನ್ನು ಕರೆದೊಯ್ಯುತ್ತದೆ. ಕಾದಂಬರಿಯನ್ನು ಅರ್ಥ ಮಾಡಿಕೊಳ್ಳುವುದು ಎಂದರೆ ಪಾತ್ರಗಳ ಮನೆಮನಗಳಲ್ಲಿ ವಾಸಿಸುವ ಮೂಲಕ ನಮ್ಮ ಮಾನವೀಯತೆಯನ್ನು ಹೊಸದಾಗಿ ಕಂಡುಕೊಳ್ಳುವ ಅನುಭವ. ಕಾದಂಬರಿಯ ವೈವಿಧ್ಯಮಯ ನಿರೂಪಣೆಯನ್ನು ಅರಿಯುವುದೆಂದರೆ ಏಕಕಾಲದಲ್ಲಿ ಅದರ ಅನೇಕ ಲೋಕಗಳ ನಡುವೆ- ಪ್ರಕೃತಿ ಮತ್ತು ಸಂಸ್ಕ ತಿ, ಸಂಪ್ರದಾಯ ಮತ್ತು ಆಧುನಿಕತೆ, ಪುರುಷರು ಮತ್ತು ಮಹಿಳೆಯರು, ತುಳಿಯುವವರು ಮತ್ತು ತುಳಿತಕ್ಕೊಳಗಾದವರು, ಇತ್ಯಾದಿ – ನಾವು ನಡೆಸುವ ಅನುಸಂಧಾನ.
ಸಂಕ್ಷಿಪ್ತವಾಗಿ ಹೇಳುವುದಾದರೆ, ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯ ಓದು ಎಂದರೆ ಒಮ್ಮೆಗೇ ಕುವೆಂಪು ಅವರ ಸಂಕೀರ್ಣ ಸಾಮಾಜಿಕ ಬಹುತ್ವದ ಲೋಕ ಮತ್ತು ಅವರ ವಿಶ್ವಾತ್ಮಕ ಏಕತೆಯ ಭವ್ಯ ಲೋಕದಲ್ಲಿ ವಿಹರಿಸುವ ಅಪರೂಪದ ಅವಕಾಶ. ಪಠ್ಯವನ್ನು ಇಂಗ್ಲಿಷ್‌ಗೆ ಅನುವಾದಿಸುವುದು ಎಂದರೆ ಇಂತಹ ಅನುಭವದಿಂದ ವಂಚಿತರಾಗುವ ಕನ್ನಡೇತರ ಓದುಗರೊಂದಿಗೆ ನನ್ನ ಈ ನಿಕಟ ಓದಿನ ಸವಲತ್ತನ್ನು ಹಂಚಿಕೊಳ್ಳುವುದು ಎಂದರ್ಥ. ಇದು ಕುವೆಂಪು ಅವರಂತಹ ಮಹಾನ್ ಲೇಖಕನ ಮೇರು ಕೃತಿಯ ಅನುವಾದ ಮಾಡುವ ಗುರುತರವಾದ ಸವಾಲನ್ನು ಒಂದು ಆಹ್ಲಾದಕರ ಅನುಭವವಾಗಿಸಿದೆ. ಈ joyous challenge ಅನುವಾದಕರಿಗೆ ಎಷ್ಟು ನಿಜವೋ ಓದುಗರಿಗೂ ಅಷ್ಟೇ ನಿಜ!
ಮಲೆಗಳಲ್ಲಿ ಮದುಮಗಳು ಮಲೆನಾಡಿನ ಬದುಕು, ಸಮಾಜ, ಸಂಸ್ಕ ತಿಗೆ ಕನ್ನಡಿ ಹಿಡಿದು ಆ ಕಾಲದೇಶಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುವ ಪ್ರಾದೇಶಿಕ ಕಾದಂಬರಿ, ನಿಜ. ಈಚಿನ ದಶಕಗಳಲ್ಲಿ ಹೆಸರು ವಾಸಿಯಾದ ಮಾರ್ಕ್ವೆಜ್ ಆಗಲಿ, ಕುಂದೇರಾ ಆಗಲಿ, ಅಚಿಬೆ ಆಗಲಿ, ಎಲ್ಲರದ್ದೂ ಅವರವರ ಕಾಲ ದೇಶಗಳಿಗೆ ಬದ್ಧವಾಗಿರುವ ಕೃತಿಗಳೇ. ಆದರೂ ನಾವು ಕಂಡು ಕೇಳರಿಯದ ಜಗತ್ತಿನ ಕಾದಂಬರಿಗಳನ್ನು ಓದಿ ನಮ್ಮ ಲೋಕವನ್ನು ಹಿಗ್ಗಿಸಿಕೊಳ್ಳುತ್ತೇವಲ್ಲ, ಹಾಗೆ ಕುವೆಂಪು ಕೃತಿ ಕೂಡ ಓದುಗರನ್ನು ತಲುಪುತ್ತದೆ. ಸಾಕಷ್ಟು ಪರಿಶ್ರಮ, ಅನುವಾದದಲ್ಲಿನ ಪರಿಣತಿಯ ಮೂಲಕ ಕನ್ನಡ ಜಗತ್ತಿಗೆ ದೂರವಾದ, ಭಾಷಿಕವಾಗಿಯೂ ಭಿನ್ನವಾದ ಇಂಗ್ಲಿಷ್ ಭಾಷೆಯಲ್ಲಿ ಆ ಲೋಕವನ್ನು ಕಂಡರಿಸುವ ಪ್ರಯತ್ನ ಕಷ್ಟಸಾಧ್ಯವಾದರೂ, ಸಾಧ್ಯ. ಜಗತ್ತಿನ ಎಲ್ಲ ಭಾಷೆಗಳಿಂದ ಸತ್ವ ಹೀರಿಕೊಂಡು ಸುಪುಷ್ಟವಾಗಿ ಬೆಳೆದಿರುವ ಇಂಗ್ಲಿಷ್ ಭಾಷೆಗೆ ಕುವೆಂಪು ಅವರ ಕಾವ್ಯಾತ್ಮಕ ಪ್ರತಿಭೆಯನ್ನು, ಕಾದಂಬರಿಯ ಹರಹನ್ನು ಅಭಿವ್ಯಕ್ತಿಸುವ ಶಕ್ತಿ ಇದೆ.
ಕುವೆಂಪು ಬಳಸಿರುವ ಉಪಭಾಷೆಗಳು, ಗಾದೆ ಮಾತುಗಳು, ನುಡಿಗಟ್ಟುಗಳು, ಪಕ್ಷಿಪ್ರಾಣಿಗಳ, ಮರಗಿಡಗಳ, ನೆಲಜಲಗಳ ವಿವರ ಮಲೆನಾಡಿಗೇ ವಿಶಿಷ್ಟವಾದದ್ದು. ಈ ವಿಶಿಷ್ಟತೆಯ ಸವಾಲನ್ನು ಸ್ವೀಕರಿಸಿ, ಹಲವಂ ಬಲ್ಲವರಿಂದ ಕಲ್ತು’, ಇಂಗ್ಲಿಷನ್ನು ಕನ್ನಡದ ಅಗತ್ಯಗಳಿಗೆ ಮಣಿಸಿ ಇಂಗ್ಲಿಷಿನಲ್ಲಿ ಕಾದಂಬರಿಯನ್ನು ಕಟ್ಟಿ ಕೊಡುವ ಪ್ರಯತ್ನ ಮಾಡಿದ್ದೇನೆ. ಇಂಗ್ಲಿಷ್ ಅನುವಾದ ಓದಿರುವ ವಿಮರ್ಶಕರು ಇದನ್ನು ಗುರುತಿಸಿ, ಇದು ಅನುವಾದಿತ ಕೃತಿ ಎಂಬುದು ಅರಿವಿಗೇ ಬಾರದಷ್ಟು ಸಹಜವಾಗಿ ಇಂಗ್ಲಿಷಿನಲ್ಲಿ ಓದಿಸಿಕೊಂಡು ಹೋಗುತ್ತದೆ ಎಂದು ಅಭಿ ಪ್ರಾಯಪಟ್ಟಿರುವುದು ನನಗೆ ನನ್ನ ಶ್ರಮ ಸಾರ್ಥಕ ಎನಿಸಿದೆ.
“ ಮಲೆಗಳಲ್ಲಿ ಮದುಮಗಳು ಮಲೆನಾಡಿನ ಬದುಕು, ಸಮಾಜ, ಸಂಸ್ಕ ತಿಗೆ ಕನ್ನಡಿ ಹಿಡಿದು ಆ ಕಾಲದೇಶಗಳನ್ನು ವಿಶಿಷ್ಟವಾಗಿ ಕಟ್ಟಿಕೊಡುವ ಪ್ರಾದೇಶಿಕ ಕಾದಂಬರಿ, ನಿಜ. ಈಚಿನ ದಶಕಗಳಲ್ಲಿ ಹೆಸರು ವಾಸಿಯಾದ ಮಾರ್ಕ್ವೆಜ್ ಆಗಲಿ, ಕುಂದೇರಾ ಆಗಲಿ, ಅಚಿಬೆ ಆಗಲಿ, ಎಲ್ಲರದ್ದೂ ಅವರವರ ಕಾಲದೇಶಗಳಿಗೆ ಬದ್ಧವಾಗಿರುವ ಕೃತಿಗಳೇ. ಆದರೂ ನಾವು ಕಂಡು ಕೇಳರಿಯದ ಜಗತ್ತಿನ ಕಾದಂಬರಿಗಳನ್ನು ಓದಿ ನಮ್ಮ ಲೋಕವನ್ನು ಹಿಗ್ಗಿಸಿಕೊಳ್ಳುತ್ತೇವಲ್ಲ, ಹಾಗೆ ಕುವೆಂಪು ಕೃತಿ ಕೂಡ ಓದುಗರನ್ನು ತಲುಪುತ್ತದೆ.”
” ಇಂದು ಕುವೆಂಪು ಅವರ ಜನ್ಮ ದಿನ. ಅವರ ನೆನಪುಗಳನ್ನು ಹಸಿರಾಗಿಸಲು ಅವರ ಕೃತಿಗಳು ನಮ್ಮ ನಡುವೆ ಇದ್ದಾವೆ. ಎಲ್ಲರನ್ನೂ ಒಳಗೊಳ್ಳುವ ‘ವಿಶ್ವಪಥ; ಮನುಜಮತ’ ಸಂದೇಶ ನೀಡಿದ ಕುವೆಂಪು ಅವರ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿಯನ್ನು ವನಮಾಲಾ ವಿಶ್ವನಾಥ ಅವರು ‘ಬ್ರೈಡ್ ಇನ್ ದ ಹಿಲ್ಸ್’ ಹೆಸರಿನಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದಿಸಿದ್ದಾರೆ. ಆ ಮೂಲಕ ವಿಶ್ವದ ಎಲ್ಲ ಓದುಗರಿಗೂ ಕಾದಂಬರಿಯನ್ನು ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಮಲೆಗಳಲ್ಲಿ ಮದುಮಗಳು ಕಾದಂಬರಿಯನ್ನು ಅನುವಾದಿಸುವಾಗಿನ ತಮ್ಮ ಅನುಭವಗಳನ್ನು ಇಲ್ಲಿ ದಾಖಲಿಸಿದ್ದಾರೆ.”
ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…
ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…
ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…
ಬೆಂಗಳೂರು : ಮಾರ್ಕ್ʼ ಸಿನಿಮಾದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಕಿಚ್ಚ ಸುದೀಪ್ ಹೇಳಿದ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…
ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…
ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…