ಸಂಪಾದಕೀಯ

ಕಲುಷಿತ ಆಹಾರ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ.ಕಾಗೇಪುರ ಗ್ರಾಮದ ಗೋಕುಲ ವಿದ್ಯಾಸಂಸ್ಥೆಯ ವಸತಿ ಶಾಲೆಯಲ್ಲಿ ಹೋಳಿ ಹಬ್ಬದ ದಿನ ಕಲುಷಿತ ಆಹಾರ ಸೇವಿಸಿ ಮೇಘಾಲಯ ಮೂಲದ ಇಬ್ಬರು ಮಕ್ಕಳು ಸಾವಿಗೀಡಾದ ಪ್ರಕರಣ ಆಘಾತ ತಂದ ದುರಂತ ಘಟನೆ. ಈ ಘಟನೆಯ ಬಗ್ಗೆ ಸಮಗ್ರ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ಇಲ್ಲದಿದ್ದರೆ ಇದು ಮತ್ತೊಂದು ಪ್ರಕರಣ ಎಂಬಂತೆ ಮರೆಗೆ ಸರಿಯುತ್ತದೆ. ಹಾಗಾಗಲು ಬಿಡಬಾರದು. ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಒಯ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ.

ಗೋಕುಲ ವಿದ್ಯಾಸಂಸ್ಥೆಯ ವಸತಿ ಶಾಲೆಯಲ್ಲಿ ಸಂಭವಿಸಿದ ಈ ಪ್ರಕರಣದಲ್ಲಿ ವಸತಿ ಶಾಲೆಯ ಆಡಳಿತ ಮಂಡಳಿಯ ನಿರ್ಲಕ್ಷ್ಯ ಎದ್ದು ಕಾಣುತ್ತದೆ. ಮೊದಲನೆಯದಾಗಿ ಶಿಕ್ಷಣ ನೀಡುವ ಹೆಸರಿನಲ್ಲಿ ಶಾಲೆಯವರು ಮಕ್ಕಳನ್ನು ಕರೆ ತಂದು ಇರಿಸಿಕೊಂಡಿರುವುದೇ ಕಾನೂನು ಬಾಹಿರ. ಸಂಬಂಧಪಟ್ಟ ಇಲಾಖೆಯವರಿಂದ ಅನುಮತಿಯನ್ನೂ ಪಡೆದಿಲ್ಲ. ಹೀಗಿದ್ದರೂ ಅಧಿಕಾರಿಗಳ ಗಮನಕ್ಕೆ ಇದು ಬರಲಿಲ್ಲವೇ?ಗೋಕುಲ ವಿದ್ಯಾಸಂಸ್ಥೆಯ ವಸತಿ ಶಾಲೆಯ ಮಕ್ಕಳಿಗೆ ದಾನಿಗಳಿಂದ ಪ್ರತಿದಿನ ಊಟದ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಆಹಾರದ ಗುಣಮಟ್ಟವನ್ನು ಪರೀಕ್ಷಿಸುವ ಗೋಜಿಗೆ ಸಿಬ್ಬಂದಿ ಹೋಗಿಲ್ಲ. ಈ ಇಡೀ ಪ್ರಕರಣದಲ್ಲಿ ಶಾಲೆಯ ಬೇಜವಾಬ್ದಾರಿತನ ಎದ್ದು ಕಾಣುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ.

ಮಕ್ಕಳಿಗೆ ನೀಡಿದ ಆಹಾರವನ್ನು ತಯಾರಿಸಿದವರು ಯಾರು? ಅದನ್ನು ಶಾಲೆಗೆ ಯಾರು ಪೂರೈಸಿದರು? ಆಗ ಕಲುಷಿತ ಆಹಾರ ಎಂಬುದು ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ಬರಲಿಲ್ಲವೇ? ಶಾಲೆಗೆ ಆಹಾರ ತಂದಾಗ ಇದನ್ನು ಪರೀಕ್ಷಿಸದೇ ಮಕ್ಕಳಿಗೆ ಕೊಟ್ಟಿದ್ದಾದರೂ ಹೇಗೆ? ಯಾರು ಏನೇ ಕೊಟ್ಟರೂ ಶಾಲೆಯವರು ಪರೀಕ್ಷಿಸದೇ ಮಕ್ಕಳಿಗೆ ನೀಡುವುದು ಎಷ್ಟರಮಟ್ಟಿಗೆ ಸರಿ? ಇದು ಬೇಜವಾಬ್ದಾರಿಯಲ್ಲವೇ? ಈ ಪ್ರಶ್ನೆಗಳಿಗೆ ಸಂಬಂಧಪಟ್ಟವರು ಉತ್ತರಿಸಬೇಕಾಗುತ್ತದೆ.

ಶಿಕ್ಷಣ ಇಲಾಖೆಯವರ ಹೊಣೆಗಾರಿಕೆಯೂ ಇಲ್ಲಿ ಅಡಗಿದೆ. ಒಂದು ವಸತಿ ಶಾಲೆಯಲ್ಲಿ ಕಾನೂನು ಬಾಹಿರವಾಗಿ ಮಕ್ಕಳನ್ನು ಇರಿಸಲಾಗಿದೆ ಎಂಬುದು ಇಷ್ಟು ದಿನವಾದರೂ ಅಧಿಕಾರಿಗಳ ಗಮನಕ್ಕೆ ಬರಲಿಲ್ಲವೇ? ಒಂದು ವೇಳೆ ಬಂದಿದ್ದರೆ ಕ್ರಮ ಏಕಿಲ್ಲ? ಶಾಲೆಯ ಆಡಳಿತ ಮಂಡಳಿ ಜೊತೆ ಶಿಕ್ಷಣ ಇಲಾಖೆಯ ಕೆಲವರು ಕೈಜೋಡಿಸಿದ್ದರೆ? ಇವು ತನಿಖೆಯಿಂದ ಗೊತ್ತಾಗಬೇಕು. ಆಹಾರ ಮತ್ತು ನಾಗರಿಕ ಪೊರೈಕೆ ಇಲಾಖೆ ಸಾರ್ವಜನಿಕ ಸ್ಥಳಗಳಲ್ಲಿ, ಅನಾಥಾಶ್ರಮಗಳಲ್ಲಿ, ವಸತಿ ಶಾಲೆಗಳಲ್ಲಿ ದಾನಿಗಳು ನೀಡುವ ಆಹಾರದ ಗುಣಮಟ್ಟವನ್ನು ಪರೀಕ್ಷಿಸುವ ಕಡೆ ಹೆಚ್ಚು ಗಮನ ಹರಿಸಿಲ್ಲ. ಯಾರು ಯಾವುದೇ ಸ್ಥಳದಲ್ಲಿ ಆಹಾರ ನೀಡಿದರೆ ಈ ಆಹಾರದ ಗುಣಮಟ್ಟದ ಖಾತರಿಯಾದರೂ ಏನು? ಕೆಲವು ವೇಳೆ ಉದ್ದೇಶಪೂರ್ವಕವಾಗಿ ಕಲುಷಿತ ಆಹಾರ ಪೂರೈಸುವ ಸಂಚನ್ನು ಕಿಡಿಗೇಡಿಗಳು ಮಾಡುವುದನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಇಂತಹ ಸಾಕಷ್ಟು ಪ್ರಕರಣಗಳು ಈ ಹಿಂದೆ ವರದಿಯಾಗಿರುವುದು ಎಚ್ಚರಿಕೆ ಪಾಠವಲ್ಲವೇ? ಬೇರೆಡೆ ತಯಾರಿಸಿದ ಆಹಾರವನ್ನು ಸೇವಿಸುವ ಮುನ್ನ ಅದರಲ್ಲಿಯೂ ಚಿಕ್ಕ ಮಕ್ಕಳಿಗೆ ನೀಡುವ ಮುನ್ನ ಹೆಚ್ಚು ಜಾಗ್ರತೆ ವಹಿಸಬೇಕು. ಅಜಾಗರೂಕತೆಗೆ ಅಮೂಲ್ಯ ಜೀವಗಳು ಬಲಿಯಾಗದಿರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳ ಸೂಚನೆ ಸರಿ ಇದೆ. ಆದರೆ, ಇಂಥದ್ದನ್ನು ಅಧಿಕಾರಿಗಳು ತಾವೇ ಅರಿತು ಜವಾಬ್ದಾರಿ ನಿರ್ವಹಿಸಬೇಕಲ್ಲವೇ?ಇದು ಅವರ ಕರ್ತವ್ಯವಲ್ಲವೇ? ಜಡ್ಡುಗಟ್ಟಿದ ವ್ಯವಸ್ಥೆಗೆ ಮದ್ದು ಅರೆಯಬೇಕಿದೆ.

ಈಶಾನ್ಯ ರಾಜ್ಯಗಳಿಂದ ಕರೆತರುವ ಬಹುತೇಕ ಮಕ್ಕಳು ದಾಸೋಹಕ್ಕೆ ಹೆಸರಾದ ಮಠ, ವಸತಿ ಶಾಲೆಗಳಲ್ಲದೆ, ವಸತಿ ವ್ಯವಸ್ಥೆಯೇ ಇಲ್ಲದ ಶಾಲೆಗಳಲ್ಲಿ ಕಲಿಯುತ್ತಿದ್ದು, ಈ ಮಕ್ಕಳಿಗೆ ದೊಣ್ಣೆ ಹಾಗೂ ಕತ್ತಿ ವರಸೆಯಂತಹ ಶಸ್ತ್ರಾಭ್ಯಾಸ ತರಬೇತಿ ನೀಡಲಾಗುತ್ತಿದೆ ಎಂದು ಸಿಪಿಐ(ಎಂ) ಜಿಲ್ಲಾ ಸಂಘಟನೆ ಆರೋಪಿಸಿತ್ತು.

ಪ್ರಕರಣದಲ್ಲಿ ಸಾವಿಗೀಡಾದ ಮಕ್ಕಳು ಕಿರುಗಾವಲು ಶಾಲೆಯಲ್ಲಿ ದಾಖಲಾತಿ ಹೊಂದಿ ಕಾಗೇಪುರದ ಗೋಕುಲ ವಿದ್ಯಾಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದರು. ಗ್ರಾಮಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಉಳಿದ ಊಟ ಇವರಿಗೆ ನೀಡಲಾಗುತ್ತಿತ್ತು. ಇವರನ್ನು ತೋರಿಸಿ ದಾನಿಗಳು ಮತ್ತು ಕಾರ್ಪೊರೇಟ್ ಸಂಸ್ಥೆಗಳಿಂದ ಹಣ ಸಂಗ್ರಹಿಸುವ ಹುನ್ನಾರದ ಬಗ್ಗೆಯೂ ದೂರುಗಳಿವೆ. ತನಿಖಾಧಿಕಾರಿಗಳು ಇತ್ತಲೂ ಗಮನಹರಿಸಬೇಕಿದೆ. ಮಕ್ಕಳ ಸಾವಿನ ಪ್ರಕರಣಕ್ಕೆ ಸಂಬಂಽಸಿದಂತೆ ಗೋಕುಲ ವಿದ್ಯಾ ಸಂಸ್ಥೆಯ ಮುಖ್ಯಸ್ಥ ಲಂಕೇಶ್ ಅವರನ್ನು ಮೊದಲ ಆರೋಪಿಯಾಗಿ ಮಾಡಿ, ಮಕ್ಕಳ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷರು ಎನ್ ಸಿಪಿಸಿಆರ್ ಪ್ರಕಾರ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು. ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರ ತಲಾ ೨೫ ಲಕ್ಷ ರೂ. ಪರಿಹಾರ ನೀಡಬೇಕು. ಈ ಪರಿಹಾರವನ್ನು ವಸತಿ ಶಾಲೆಯ ಮುಖ್ಯಸ್ಥ ಲಂಕೇಶ್ ಅವರಿಂದಲೇ ವಸೂಲಿ ಮಾಡಬೇಕು ಎಂಬುದು  ಕೇಳಿ ಬಂದಿರುವ ಆಗ್ರಹ.

ಗೋಕುಲ ವಿದ್ಯಾಸಂಸ್ಥೆಯ ಇಬ್ಬರು ಮಕ್ಕಳು ಮೃತಪಟ್ಟು, ೨೭ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದ ಪ್ರಕರಣ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಪೊಲೀಸ್ ತನಿಖೆಯಿಂದ ಮಾತ್ರ ಸತ್ಯಾಸತ್ಯತೆ ಹೊರಬರಬೇಕಿದೆ. ಗೋಕುಲ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ೮ನೇ ತರಗತಿವರೆಗೆ ಸರ್ಕಾರದಿಂದ ಅನುಮತಿ ಪಡೆದಿದ್ದು, ೯ ಮತ್ತು ೧೦ನೇ ತರಗತಿಗೆ ಅನುಮತಿ ಪಡೆದಿಲ್ಲ ಎಂಬುದು ಶಾಲಾ ಶಿಕ್ಷಣ ಇಲಾಖೆಯ ವರದಿಯಲ್ಲಿಯೇ ಇದೆ. ಅಲ್ಲದೆ, ವಸತಿ ಶಾಲೆಗೆ ಅನುಮತಿ ಪಡೆಯದೆ ಅನಧಿಕೃತವಾಗಿ ಶಾಲೆಯ ಕಟ್ಟಡದಲ್ಲೇ ವಸತಿ ಪ್ರಾರಂಭಿಸಿ, ಮೇಘಾಲಯದ ೨೬ ಮಕ್ಕಳಿಗೆ ವಸತಿ ಕಲ್ಪಿಸಿರುವುದನ್ನು ಕೂಡ ತಾಲ್ಲೂಕು ಶಿಕ್ಷಣಾಧಿಕಾರಿಗಳು ಪರಾಮರ್ಶಿಸದಿರುವುದು ಕರ್ತವ್ಯಲೋಪವಲ್ಲವೇ? ಕಳೆದ ಮಾ.೧೪ರ ಶುಕ್ರವಾರ ಹೋಳಿ ಹಬ್ಬದ ಹಿನ್ನೆಲೆಯಲ್ಲಿ ಜೈನ ಸಮುದಾಯದ ಉದ್ಯಮಿ ಮದನ್ ಎಂಬವರು ಗೋಕುಲ ವಿದ್ಯಾಸಂಸ್ಥೆಯ ವಸತಿ ಶಾಲೆಯ ಮಕ್ಕಳಿಗೆ ಆಹಾರ ನೀಡಿದ್ದರು. ಅದರಲ್ಲಿ ವಿಷಕಾರಕ ಅಂಶ ಸೇರಿದ್ದರಿಂದ ದುರಂತ ನಡೆದಿದೆ ಎನ್ನಲಾಗಿದೆ. ಈ ಪ್ರಕರಣದ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ತನಿಖೆ ಮುಂದುವರಿಸಿದ್ದಾರೆ.

ಮಳವಳ್ಳಿಯ ಪ್ರಕರಣದಲ್ಲಿ ಎಫ್‌ಎಸ್‌ಎಲ್ ವರದಿ ಬರಬೇಕು ಎನ್ನುವ ಅಧಿಕಾರಿಗಳ ಬಳಿ ಇದಕ್ಕಿಂತ ಬೇರೆ ಉತ್ತರ ಇಲ್ಲ. ಇದರ ಪರಿಣಾಮ ಘಟನೆಯು ತೀವ್ರತೆ ಕಳೆದುಕೊಂಡು ತಪ್ಪಿತಸ್ಥರು ಜಾರಿಕೊಳ್ಳುವ ಸಂಭವವೇ ಹೆಚ್ಚು. ಇಡೀ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂಬ ನಾಗರಿಕರು, ಸಂಘ ಸಂಸ್ಥೆಗಳ ಆಗ್ರಹವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದೆ. ಕಲುಷಿತ ಆಹಾರ ಪೂರೈಕೆ ಹಿಂದೆ ಸಂಚು ಇರಬಹುದು ಎಂಬ ಗುಮಾನಿಯನ್ನೂ ಕೆಲವು ಸಂಘಟನೆಗಳು ವ್ಯಕ್ತಪಡಿಸಿವೆ. ಪೊಲೀಸ್ ಹಾಗೂ ಎಫ್‌ಎಸ್‌ಎಲ್ ತಂಡ ತನಿಖೆ ನಡೆಸಿ ಕೊಡುವ ವರದಿಯತ್ತಲೇ ಎಲ್ಲರ ಚಿತ್ತ ನೆಟ್ಟಿದೆ. ತಪ್ಪಿತಸ್ಥರು ಕಾನೂನಿನ ಕುಣಿಕೆಯಿಂದ ಪಾರಾಗಲು ಯಾವ ಕಾರಣಕ್ಕೂ ಬಿಡಬಾರದು

” ಗೋಕುಲಂ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯವರು ೮ನೇ ತರಗತಿವರೆಗೆ ಸರ್ಕಾರದಿಂದ ಅನುಮತಿ ಪಡೆದಿದ್ದು, ೯ ಮತ್ತು ೧೦ನೇ ತರಗತಿಗೆ ಅನುಮತಿ ಪಡೆದಿಲ್ಲ ಎಂಬುದು ಶಾಲಾಶಿಕ್ಷಣ ಇಲಾಖೆಯ ವರದಿಯಲ್ಲಿಯೇ ಇದೆ. ಅಲ್ಲದೆ, ವಸತಿ ಶಾಲೆಗೆ ಅನುಮತಿ ಪಡೆಯದೆ ಅನಧಿಕೃತವಾಗಿ ಶಾಲೆಯ ಕಟ್ಟಡದಲ್ಲೇ ವಸತಿ ಪ್ರಾರಂಭಿಸಿ, ಮೇಘಾಲಯದ ೨೬ ಮಕ್ಕಳಿಗೆ ವಸತಿ ಕಲ್ಪಿಸಿರುವುದನ್ನು ಕೂಡ ತಾಲ್ಲೂಕು ಶಿಕ್ಷಣಾಧಿಕಾರಿಗಳು ಪರಾಮರ್ಶಿಸದಿರುವುದು ಕರ್ತವ್ಯಲೋಪವಲ್ಲವೇ?

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮಳವಳ್ಳಿ| ಆಸ್ತಿಗಾಗಿ ತಂದೆಯನ್ನೇ ಕೊಂದ ಪಾಪಿ ಮಗ

ಮಂಡ್ಯ: ಆಸ್ತಿಗಾಗಿ ತಂದೆಯನ್ನೇ ಪಾಪಿ ಮಗನೋರ್ವ ಕೊಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ದಳವಾಯಿಕೋಡಿಯಲ್ಲಿ ನಡೆದಿದೆ. ಗ್ರಾಮದ…

4 hours ago

ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ನಿವೃತ್ತ ಯೋಧ ಆತ್ಮಹತ್ಯೆ

ಹಾಸನ: ನಿವೃತ್ತ ಯೋಧರೊಬ್ಬರು ಪಿಸ್ತೂಲ್‌ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ. ಹಾಸನ ಜಿಲ್ಲೆ ಬೇಲೂರು…

4 hours ago

ರೈತ ದಿನಾಚರಣೆಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸಬೇಕು: ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಆಗ್ರಹ

ಮೈಸೂರು: ಈ ದೇಶದಲ್ಲಿ ಬಂಡವಾಳಶಾಹಿಗಳಾಗಲೀ, ಸಕ್ಕರೆ ಕಾರ್ಖಾನೆ ಮಾಲೀಕರಾಗಲೀ ಅಥವಾ ಉದ್ಯಮಿಗಳು ಸೇರಿ ಯಾರೂ ಸಹ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆದರೇ,…

5 hours ago

ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜ್‌ಗೆ ಬಿಗ್‌ ಶಾಕ್‌

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್‌ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಈ…

5 hours ago

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಎಚ್.ಡಿ.ಕುಮಾರಸ್ವಾಮಿ: ಕಾರಣ ಇಷ್ಟೇ

ನವದೆಹಲಿ: ರಾಜಧಾನಿ ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಪ್ರದೇಶಗಳ ನಡುವೆ ಪ್ರಯಾಣವನ್ನು ಮತ್ತಷ್ಟು ಸುಲಭಗೊಳಿಸುವ ನಿಟ್ಟಿನಲ್ಲಿ ವಂದೇ ಭಾರತ್‌ ಎಕ್ಸ್…

5 hours ago

ಹಾಸನ| ಮಗುವಿಗೆ ಜನ್ಮ ನೀಡಿದ ಬಾಲಕಿ: ಆರೋಪಿ ಬಂಧನ

ಹಾಸನ: ಅಪ್ರಾಪ್ತ ಬಾಲಕಿಯೊಬ್ಬಳಿಗೆ ಚಾಕೋಲೇಟ್‌ ನೀಡಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಹಿನ್ನೆಲೆಯಲ್ಲಿ ಆಕೆ ಮಗುವಿಗೆ ಜನ್ಮ ನೀಡಿದ ಘಟನೆ…

5 hours ago