ಸಂಪಾದಕೀಯ

ಸರ್ಕಾರಿ ಶಾಲೆಗಳ ಪುನಾರಂಭ: ಸುಧಾರಣಾ ಕ್ರಮಗಳೂ ಶುರುವಾಗಲಿ

ಮಳೆಗಾಲದ ಜೊತೆಗೆ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಪುನಾರಂಭವಾಗಿವೆ. ಹಲವೆಡೆ ಮಕ್ಕಳಿಗೆ ಹೂವು, ಸಿಹಿ ನೀಡಿ ಶಾಲೆಗಳಿಗೆ ಸ್ವಾಗತಿಸಲಾಗಿದೆ. ಶಿಕ್ಷಕರು, ಸಿಬ್ಬಂದಿ ಕೂಡ ಹುರುಪಿನಿಂದಲೇ ಕರ್ತವ್ಯಕ್ಕೆ ಮರಳಿದ್ದಾರೆ. ಆದರೆ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳ ದಾಖಲಾತಿಗಾಗಿ ಶಿಕ್ಷಕರು ಹಳ್ಳಿಗಳಲ್ಲಿ ಜಾಥಾ ನಡೆಸುವುದು ರೂಢಿಗತವಾಗಿದೆ. ಇದರಿಂದ ನಿರೀಕ್ಷಿತ ಫಲ ಲಭಿಸಿಲ್ಲ ಎನ್ನಬಹುದು. ರಾಜ್ಯ ಸರ್ಕಾರವು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮೂಲಕ ಶಾಲೆಗಳಿಗೆ, ವಿದ್ಯಾರ್ಥಿಗಳಿಗೆ ಸೌಲಭ್ಯ ಒದಗಿಸಲು ಪ್ರಯತ್ನ ಮಾಡುತ್ತಿದೆ.

ಆದರೆ, ಸಮರ್ಪಕವಾಗಿ ಆ ಕೆಲಸ ನಡೆಯುತ್ತಿಲ್ಲ ಎಂಬುದು ಹಿಂದಿನ ಕೆಲ ವರ್ಷಗಳನ್ನು ಗಮನಿಸಿದರೆ ಅರಿವಾಗುತ್ತದೆ. ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವಂತೆ ಪೋಷಕರ ಮನವೊಲಿಸುವುದೇ ದೊಡ್ಡ ಸವಾಲು. ಖಾಸಗಿ ವಿದ್ಯಾಸಂಸ್ಥೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳ ಧ್ವನಿ ಅಡಗಿಹೋಗುತ್ತಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳಲ್ಲಿ ಈಗಿರುವ ಸೌಲಭ್ಯಗಳನ್ನು ವಿಸ್ತರಿಸುವ ಅಥವಾ ಪೋಷಕರನ್ನು ಆಕರ್ಷಿಸುವ ಯೋಜನೆಗಳನ್ನು ಜಾರಿಗೊಳಿಸುವುದು ಅತ್ಯಗತ್ಯ. ಮುಖ್ಯವಾಗಿ ಶಾಲೆಗಳಲ್ಲಿ ಮೂಲ ಸೌಕರ್ಯಗಳ ಕೊರತೆ ಕಿಂಚಿತ್ತೂ ಇರದಂತೆ ಇಲಾಖೆ ಜಾಗ್ರತೆ ವಹಿಸಬೇಕು. ಕುಡಿಯುವ ನೀರು, ಶೌಚಾಲಯ, ಆಟದ ಮೈದಾನ, ಮಧ್ಯಾಹ್ನದ ಬಿಸಿಯೂಟ, ಸಮವಸ್ತ್ರ , ಪಠ್ಯ ಪುಸ್ತಕ ವಿತರಣೆ ಇತ್ಯಾದಿಗಳನ್ನು ಸಕಾಲದಲ್ಲಿ ಆದ್ಯತೆ ಮೇರೆಗೆ ಒದಗಿಸಬೇಕಾಗಿದೆ.

ಇದಕ್ಕಿಂತ ಮುಖ್ಯವಾಗಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಉಂಟಾಗದಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಬಹುತೇಕ ಶಾಲೆಗಳಲ್ಲಿ ಖಾಯಂ ಶಿಕ್ಷಕರ ಅಭಾವ ಇದೆ. ಗುತ್ತಿಗೆ ಆಧಾರದ ಶಿಕ್ಷಕರ ನೇಮಕಾತಿಗೆ ಆದ್ಯತೆ ನೀಡಲಾಗುತ್ತಿದೆ ಎಂಬ ಆರೋಪ ಇದೆ. ಗುತ್ತಿಗೆ ಶಿಕ್ಷಕರಿಗೇ ವೇತನ ಮತ್ತಿತರ ಸೌಲಭ್ಯ ಒದಗಿಸಿದರೆ ಅವರು ಹೆಚ್ಚು ಉತ್ಸಾಹದಿಂದ ಕರ್ತವ್ಯ ನಿರ್ವಹಿಸಲು ಮುಂದಾಗುತ್ತಾರೆ. ‘ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎಂಬಂತೆ ಗುತ್ತಿಗೆ ಆಧಾರದ ಶಿಕ್ಷಕರಿಗೆ ಗೌರವಧನದ ಹೆಸರಲ್ಲಿ ಕೆಲ ಸಾವಿರ ರೂ.ಗಳನ್ನು ನೀಡುವುದು ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪರೋಕ್ಷವಾಗಿ ಪರಿಣಾಮ ಉಂಟು ಮಾಡುತ್ತದೆ.

ಶಿಕ್ಷಕರ ಕಾರ್ಯ ಒತ್ತಡವಂತೂ ಹೇಳ ತೀರದಷ್ಟಿದೆ. ಶಾಲೆಯ ಬಿಸಿಯೂಟ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಒಬ್ಬರಿಗೆ ವಹಿಸುವುದು ಅಗತ್ಯ ಅನಿಸುತ್ತದೆ. ಇದು ಸವಾಲಿನ ಕೆಲಸವೂ ಹೌದು. ಏಕೆಂದರೆ ಶಾಲೆಯಲ್ಲಿ ಶಿಕ್ಷಕರಿಗಿರುವಷ್ಟು ಜವಾಬ್ದಾರಿ ಹೊರಗಿನವರಿಗೆ ಇರುವುದಿಲ್ಲ. ಹಾಗಾಗಿ ಅವರು ಪರಿಪೂರ್ಣವಾಗಿ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯ. ಆದರೆ, ಸರ್ಕಾರ ಅದಕ್ಕೆ ತಕ್ಕ ಕಠಿಣ ನಿಯಮಾವಳಿಗಳನ್ನು ರೂಪಿಸಬೇಕಾಗುತ್ತದೆ. ಚುನಾವಣೆಗಳಾದರೆ ಬೇಸಿಗೆ ರಜೆ ಸಂದರ್ಭದಲ್ಲಿ ನಿಗದಿಯಾಗುತ್ತವೆ. ಅದರಿಂದ ಮಕ್ಕಳ ಅಭ್ಯಾಸಕ್ಕೆ ತೊಂದರೆಯಾಗುವುದಿಲ್ಲ. ಆದರೆ, ಸಮೀಕ್ಷೆಗಳು, ಜಾಗೃತಿ ಕಾರ್ಯಕ್ರಮಗಳಿಗೆ ಶಿಕ್ಷಕರನ್ನು ಬಳಸುವುದು ಅವರ ಮೇಲಿನ ಒತ್ತಡವನ್ನು ಅಧಿಕಗೊಳಿಸುತ್ತದೆ. ಬಹುಶಃ ಅದು ಮಕ್ಕಳಿಗೆ ಪಾಠ ಮಾಡುವ ಹುರುಪಿಗೆ ತಣ್ಣೀರು ಎರಚುತ್ತದೆ. ಮಕ್ಕಳ ಬದುಕಿಗೆ ಪ್ರಾಥಮಿಕ ಶಿಕ್ಷಣ ತಳಪಾಯ ಆಗಿರುತ್ತದೆ. ಹಾಗಾಗಿ ಶಿಕ್ಷಕರಿಗೆ ಅನ್ಯ ಕಾರ್ಯಗಳ ಹೊರೆ ಕಡಿಮೆಯಾದಷ್ಟೂ ಒಳಿತು.

ಶಾಲೆಗಳ ಕಟ್ಟಡದ ದುಸ್ಥಿತಿ ಬಗ್ಗೆಯೂ ಸಾಕಷ್ಟು ದೂರುಗಳು ಇವೆ. ಅನೇಕ ಶಾಲೆಗಳಲ್ಲಿ ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಮಳೆಗಾಲದಲ್ಲಿ ಸೋರುವ ಚಾವಣಿ ಅಡಿಯಲ್ಲಿ ಮಕ್ಕಳು ಪಾಠ ಕೇಳಬೇಕಾದ ಸ್ಥಿತಿಯೂ ಇದೆ ಎಂಬ ಮಾಹಿತಿ ಇದೆ. ಇಂತಹ ಶಾಲೆಗೆ ಪೋಷಕರು ಮಕ್ಕಳನ್ನು ಸೇರಿಸಲು ಹಿಂದೇಟು ಹಾಕವುದು ಸಹಜ. ಅಲ್ಲದೆ, ಖಾಸಗಿ ಶಾಲೆಗಳು ಇದೇ ವಿಷಯವನ್ನು ಬಂಡವಾಳ ಮಾಡಿಕೊಂಡು ಪೋಷಕ ರನ್ನು ತಮ್ಮತ್ತ ಸೆಳೆಯುವುದಕ್ಕೂ ಅವಕಾಶ ಇದೆ.

ಸರ್ಕಾರಿ ಪ್ರೌಢಶಾಲೆಗಳ ೧೦ನೇ ತರಗತಿಯ ಫಲಿತಾಂಶವನ್ನು ಉತ್ತಮ ಪಡಿಸಲು ಶಿಕ್ಷಣ ತಜ್ಞರೊಡನೆ ಜಿಲ್ಲಾ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಶಾಲೆಗಳ ಮುಖ್ಯ ಶಿಕ್ಷಕರನ್ನು ಮುಖಾಮುಖಿ ಮಾಡಿಸುವಂತಹ ಕಾರ್ಯಕ್ರಮಗಳನ್ನೂ ರೂಪಿಸುವುದು ಅಗತ್ಯ. ಶಾಲೆಗಳು ಪುನಾರಂಭವಾಗಿರುವ ಈ ಹೊತ್ತಿನಲ್ಲೇ ಸರ್ಕಾರ ಈ ಬಗ್ಗೆ ಗಂಭೀರ ಕ್ರಮಕೈಗೊಂಡರೆ ಮಕ್ಕಳ ಶೈಕ್ಷಣಿಕ ಜೀವನ ಉತ್ತಮವಾಗಿ ರೂಪಿತ ವಾಗುತ್ತದೆ.

” ಶಿಕ್ಷಕರ ಕಾರ್ಯ ಒತ್ತಡವಂತೂ ಹೇಳತೀರದಷ್ಟಿದೆ. ಶಾಲೆಯ ಬಿಸಿಯೂಟ ವ್ಯವಸ್ಥೆಯನ್ನು ಪ್ರತ್ಯೇಕವಾಗಿ ಒಬ್ಬರಿಗೆ ವಹಿಸುವುದು ಅಗತ್ಯ ಅನಿಸುತ್ತದೆ. ಇದು ಸವಾಲಿನ ಕೆಲಸವೂ ಹೌದು. ಏಕೆಂದರೆ ಶಾಲೆಯಲ್ಲಿ ಶಿಕ್ಷಕರಿಗಿರುವಷ್ಟು ಜವಾಬ್ದಾರಿ ಹೊರಗಿನವರಿಗೆ ಇರುವುದಿಲ್ಲ. ಹಾಗಾಗಿ ಅವರು ಪರಿಪೂರ್ಣವಾಗಿ ಕೆಲಸ ನಿರ್ವಹಿಸುವುದು ಕಷ್ಟಸಾಧ್ಯ. ಆದರೆ, ಸರ್ಕಾರ ಅದಕ್ಕೆ ತಕ್ಕ ಕಠಿಣ ನಿಯಮಾವಳಿಗಳನ್ನು ರೂಪಿಸಬೇಕಾಗುತ್ತದೆ.”

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಚಾ.ನಗರ | ಬೇಡರಪುರದಲ್ಲಿ ಮತ್ತೊಂದು ಚಿರತೆ ಸೆರೆ

ಚಾಮರಾಜನಗರ : ತಾಲ್ಲೂಕಿನ ಬೇಡರಪುರ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇನ್ನೂ ಒಂದು ಚಿರತೆ ಸೆರೆಯಾಗಿದೆ. ಗ್ರಾಮದ ಮಲ್ಲಣ್ಣ…

8 hours ago

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಹೆಚ್ಚಿಸಿ : ಡಿಸಿ, ಸಿಇಓಗಳಿಗೆ ಮಧು ಬಂಗಾರಪ್ಪ ಸೂಚನೆ

ಬೆಂಗಳೂರು : 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ದಾಖಲಾತಿ ಅಭಿಯಾನ ಯಶಸ್ವಿಯಾಗಿ ನಡೆಸುವಂತೆ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು…

8 hours ago

ಕಾರು-ಬೈಕ್‌ ನಡುರೆ ಭೀಕರ ಅಪಘಾತ : ಇಬ್ಬರು ಸ್ಥಳದಲ್ಲೇ ಸಾವು

ಸಿದ್ದಾಪುರ : ಎರಡು ಬೈಕ್‌ಗಳು ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಮೃತಪಟ್ಟಿರುವ…

9 hours ago

ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆಯಲ್ಲಿ ಶೇ20 ರಷ್ಟು ಹೆಚ್ಚಳ

ಹೊಸದಿಲ್ಲಿ : ಎಲ್‌ಪಿಜಿ ಕೊರತೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಹೋಟೆಲ್, ರೆಸ್ಟೋರೆಂಟ್ ಮತ್ತು ಆಹಾರ ಸಂಸ್ಕರಣಾ ಘಟಕಗಳಿಗೆ ಕೇಂದ್ರ ಪೆಟ್ರೋಲಿಯಂ ಮತ್ತು…

9 hours ago

ಇರಾನ್‌ ಡ್ರೋನ್‌ ಉತ್ಪಾದನಾ ಘಟಕದ ಮೇಲೆ ಅಮೆರಿಕ ದಾಳಿ : ಚಿತ್ರ ಬಿಡುಗಡೆ

ಟೆಹ್ರಾನ್ : ಇರಾನ್‌ನ ಡ್ರೋನ್ ಉತ್ಪಾದನಾ ಘಟಕದ ಮೇಲೆ ಅಮೆರಿಕ ಸೇನೆ ನಡೆಸಿದ ನಿಖರ ದಾಳಿಗೆ ಸಂಬಂಧಿಸಿದಂತೆ ಮಹತ್ವದ ಉಪಗ್ರಹ…

10 hours ago

ಹೊಸ ಜಾಹೀರಾತು ನೀತಿ ಮೂಲಕ ಪತ್ರಿಕೆಗಳ ದಮನಕ್ಕೆ ಮುಂದಾದ ಸರ್ಕಾರ : ಪುನರ್‌ ಪರಿಶೀಲನೆಗೆ ಒತ್ತಾಯ

ಮೈಸೂರು : ರಾಜ್ಯ ಸರ್ಕಾರವು ಜಾರಿಗೆ ತರಲು ಮುಂದಾಗಿರುವ ʻಕರ್ನಾಟಕ ಜಾಹೀರಾತು ನೀತಿ-2026ʼ ವಾರ್ತಾ ಇಲಾಖೆ ಅಧಿಕಾರಿಗಳ ವಕ್ರ ದೃಷ್ಟಿಯ…

10 hours ago