ಸಂಪಾದಕೀಯ

ನಕ್ಸಲ್‌ ಸೀತಕ್ಕ ಲಾಯರ್‌, ಶಾಸಕಿ, ಮಂತ್ರಿಯಾದ ಸಾಹಸಗಾಥೆ

೧೯೯೬ರ ಏಪ್ರಿಲ್ ತಿಂಗಳ ಒಂದು ದಿನ ಆಂಧ್ರಪ್ರದೇಶದ ವಾರಂಗಲ್‌ನ ನಲ್ಲಬೆಳ್ಳಿ ಮಂಡಲ್ ಎಂಬಲ್ಲಿ ೨೫ ವರ್ಷ ಪ್ರಾಯದ ಸೀತಕ್ಕ ತನ್ನ ಪ್ರಾಣ ಉಳಿಸಿಕೊಳ್ಳಲು ಎಷ್ಟು ವೇಗವಾಗಿ ಓಡಲು ಸಾಧ್ಯವೋ ಅಷ್ಟು ವೇಗವಾಗಿ ಓಡುತ್ತಿದ್ದರು. ಅವರ ಹಿಂದೆ ಬಂದೂಕುಗಳನ್ನು ಹಿಡಿದ ಪೊಲೀಸರ ದಂಡು ಅವರನ್ನು ಅಟ್ಟಿಸಿಕೊಂಡು ಬರುತ್ತಿತ್ತು. ಕಾಡು ದಾರಿಯ ಮುಳ್ಳು ಕಲ್ಲುಗಳು ತಗುಲಿ ಸೀತಕ್ಕನ ಪಾದಗಳು ಗುಳ್ಳೆಗಳೆದ್ದು ರಕ್ತಸಿಕ್ತವಾಗಿದ್ದವು. ನಕ್ಸಲೈಟ್ ಕಮಾಂಡರ್ ಆಗಿದ್ದ ಸೀತಕ್ಕ ಹತ್ತು ಜನರ ತನ್ನ ತಂಡವನ್ನು ಸುರಕ್ಷಿತ ಸ್ಥಳಕ್ಕೆ ಸೇರಿಸಬೇಕಾಗಿತ್ತು. ಹೇಗೋ ಮಾಡಿ ಪೊಲೀಸರ ಬಂದೂಕಿನಿಂದ ಅಂದು ಬಚಾವಾದರು.

ಆ ಘಟನೆ ನಡೆದ ಇಪ್ಪತ್ತಾರು ವರ್ಷಗಳ ನಂತರ, ಅಂದರೆ ೨೦೨೨ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ಆವರಣದ ಎದುರು ನಾಲ್ವರು ಪೊಲೀಸರು ೫೧ ವರ್ಷ ಪ್ರಾಯದ ಡಾ. ಧನಸರಿ ಅನಸೂಯ ಎಂಬ ತೆಲಂಗಾಣದ ಶಾಸಕಿಯೊಂದಿಗೆ ನಗುಮುಖದೊಂದಿಗೆ ನಿಂತು ತಮ್ಮ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಶಾಸಕಿ ಡಾ. ಧನಸರಿ ಅನಸೂಯ ಬೇರಾರೂ ಅಲ್ಲ, ಅಂದು ಪೊಲೀಸರು ಗುಂಡು ಹೊಡೆದು ಕೊಲ್ಲುವ ಸಲುವಾಗಿ ಅಟ್ಟಿಸಿಕೊಂಡು ಹೋಗುತ್ತಿದ್ದ ಅದೇ ಸೀತಕ್ಕ! ನಕ್ಸಲೈಟ್ ಕಮಾಂಡರ್ ಸೀತಕ್ಕ ಎರಡು ಬಾರಿ ಶಾಸಕಿಯಾಗಿ, ಪೊಲಿಟಿಕಲ್ ಸೈನ್ಸ್ ವಿಷಯದಲ್ಲಿ ಡಾಕ್ಟರೇಟ್ ಪದವಿ ಪಡೆದು, ಈಗ ತೆಲಂಗಾಣದ ಮಂತ್ರಿಯಾಗಿ ಪರಿವರ್ತನೆಗೊಂಡ ಕತೆ ರೋಚಕವಾದುದು. ಆಗಿನ ಅವಿಭಜಿತ ಆಂಧ್ರಪ್ರದೇಶದ ಮುಳುಗ್ ಜಿಲ್ಲೆಯ ಜಗ್ಗಣ್ಣಪೇಟ್ ಎಂಬ ಕುಗ್ರಾಮದ ಕೋಯಾ ಎಂಬ ಒಂದು ಬುಡಕಟ್ಟು ಸಮುದಾಯದಲ್ಲಿ ಹುಟ್ಟಿದ ಅನಸೂಯ ತಮ್ಮ ಶಾಲಾ ದಿನಗಳಲ್ಲೇ ನಕ್ಸಲೈಟ್ ಸಿದ್ಧಾಂತಕ್ಕೆ ಸೆಳೆಯಲ್ಪಟ್ಟರು. ಅವರು ಹುಟ್ಟಿ ಬೆಳೆದ ಪರಿಸರ ನಕ್ಸಲ್ ಚಟುವಟಿಕೆಗಳ ಪ್ರದೇಶವಾಗಿತ್ತು. ಹಾಗಾಗಿ, ಅಲ್ಲಿನ ಶಾಲೆ ಕಾಲೇಜುಗಳಲ್ಲಿ ಯಾವತ್ತೂ ನಕ್ಸಲ್ ಸಿದ್ಧಾಂತದ ಬಗ್ಗೆ ಚರ್ಚೆಗಳು ಸಾಮಾನ್ಯವಾಗಿದ್ದವು. ಅಂತಹ ವಾತಾವರಣದಲ್ಲಿ ಅನಸೂಯ ನಕ್ಸಲ್ ಸಿದ್ಧಾಂತಕ್ಕೆ ಆಕರ್ಷಿಸಲ್ಪಟ್ಟಿದ್ದು ವಿಶೇಷವಾಗಿರಲಿಲ್ಲ. ಅರವತ್ತರ ದಶಕಗಳಿಂದೀಚೆಗೆ ಆರ್ಥಿಕ ಶೋಷಣೆ, ಬಡತನ, ಸಾಮಾಜಿಕ ದುಃಸ್ಥಿತಿ ಮತ್ತು ಜಮೀನಿನ ಹಕ್ಕಿಗಾಗಿ ನಡೆಯುತ್ತಿದ್ದ ಹೋರಾಟಗಳು ಆಂಧ್ರಪ್ರದೇಶದಲ್ಲಿ ನಕ್ಸಲ್ ಜ್ವಾಲೆ ಹೊತ್ತಿ ಉರಿಯಲು ಕಾರಣವಾಗಿದ್ದವು. ೨೦೧೦-೨೦೧೧ರ ಸುಮಾರಿಗೆ ಈ ಜ್ವಾಲೆ ಗಣನೀಯವಾಗಿ ತಣ್ಣಗಾಯಿತಾದರೂ ಅಷ್ಟರಲ್ಲಿ ಆ ಜ್ವಾಲೆಗೆ ಬಲಿಯಾದ ಜೀವಗಳು ನೂರಾರು.

೧೯೮೮ರಲ್ಲಿ ಅನಸೂಯ ಹತ್ತನೇ ತರಗತಿಯಲ್ಲಿದ್ದಾಗ ನಕ್ಸಲ್ ಗುಂಪನ್ನು ಸೇರಿದರು. ನಕ್ಸಲ್ ಸಮುದಾಯದಲ್ಲಿ ಅನಸೂಯ ತನ್ನ ಚಟುವಟಿಕೆಗಳಿಂದ ಸೀತಕ್ಕನಾಗಿ ಗುರುತಿಸಲ್ಪಟ್ಟರು. ೧೯೮೦ರಲ್ಲಿ ಅನಸೂಯ ಮೊದಲ ಬಾರಿಗೆ ಬಂಧಿಸಲ್ಪಟ್ಟಾಗ ಜೈಲಿನಿಂದಲೇ ಹತ್ತನೇ ತರಗತಿ ಪರೀಕ್ಷೆ ಬರೆದರು. ಅದೇ ಸಮಯದಲ್ಲಿ ಅವರು ಚೊಚ್ಚಲು ಬಸುರಿಯಾಗಿದ್ದರು. ಒಂದು ದಶಕಕ್ಕೂ ಹೆಚ್ಚು ಕಾಲ ನಕ್ಸಲ್ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಅನಸೂಯರಲ್ಲಿ ನಂತರದ ದಿನಗಳಲ್ಲಿ ನಕ್ಸಲ್ ಸಿದ್ಧಾಂತದ ಬಗ್ಗೆ ಭ್ರಮನಿರಸನ ಹುಟ್ಟಲು ಪ್ರಾರಂಭವಾಯಿತು. ೧೯೯೭ರಲ್ಲಿ, ಅನಸೂಯ ಸದಸ್ಯರಾಗಿದ್ದ ‘ಜನಶಕ್ತಿ’ ಎಂಟು ಭಾಗಗಳಾಗಿ ವಿಭಜನೆಗೊಂಡ ನಂತರ ಅವರು ಆಗಿನ ಚಂದ್ರಬಾಬು ನಾಯ್ಡು ಸರ್ಕಾರದ ಕ್ಷಮಾದಾನ ಕಾರ್ಯಕ್ರಮದಡಿ ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗತರಾದರು. ಆ ಹೊತ್ತಿಗೆ ಅನಸೂಯ ಒಂಬತ್ತು ವರ್ಷ ಪ್ರಾಯದ ಮಗನ ತಾಯಿಯಾಗಿದ್ದರು. ಆದರೆ, ನಕ್ಸಲರಾಗೇ ಉಳಿದ ಅವರ ಪತಿ ಕುಂಜ ರಾಮು ನಂತರ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವಿಗೀಡಾದರು. ಹಾಗೆಯೇ, ೧೯೯೮ರಲ್ಲಿ ಅನಸೂಯರ ನಕ್ಸಲ್ ಸಹೋದರ ಸಂಬಯ್ಯನೂ ಪೊಲೀಸ್ ಎನ್ ಕೌಂಟರ್‌ನಲ್ಲಿ ಹತನಾದ. ೧೯೯೫ರಿಂದ ೨೦೦೪ರ ಅವಧಿಯಲ್ಲಿ ತೆಲುಗು ದೇಶಂ ಪಕ್ಷದ ಸರ್ಕಾರದಿಂದ ಅತ್ಯಂತ ಹೆಚ್ಚು ಸಂಖ್ಯೆಯ ಪೊಲೀಸ್ ಎನ್ ಕೌಂಟರ್‌ಗಳು ನಡೆದು ಹಲವಾರು ನಕ್ಸಲ್ ನಾಯಕರು ಹತರಾದರು.

ಸಾಮಾನ್ಯ ಜೀವನಕ್ಕೆ ಮರಳಿದ ಅನಸೂಯ ಪುನಃ ಶಾಲೆಗೆ ಸೇರಿದರು. ಇಂಟರ್‌ಮೀಡಿಯಟ್ ಮುಗಿಸಿ, ಕಾನೂನು ಪದವಿ ಪಡೆದು, ವಾರಂಗಲ್‌ನಲ್ಲಿ ವಕೀಲರಾಗಿ ಪ್ರಾಕ್ಟೀಸ್ ಆರಂಭಿಸಿದರು. ನಂತರ ೨೦೦೪ರಲ್ಲಿ ಅವರು ತೆಲುಗು ದೇಶಂ ಪಕ್ಷ ಸೇರಿದರು. ಆ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅವರು ಮುಳುಗ್ ಕ್ಷೇತ್ರದಲ್ಲಿ ತೆಲುಗು ದೇಶಂ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದಾದರೂ ಸೋತರು. ಸೋಲಿನಿಂದ ಕುಗ್ಗದ ಅನಸೂಯ ಮುಂದಿನ ಐದು ವರ್ಷಗಳ ಕಾಲ ಜನರ ನಡುವೆ ಕೆಲಸ ಮಾಡಿ, ೨೦೦೯ರಲ್ಲಿ ಮುಳುಗ್ ನಿಂದಲೇ ಪುನಃ ಸ್ಪರ್ಧಿಸಿ, ಗೆದ್ದರು. ಆದರೆ, ತೆಲಂಗಾಣ ರಾಜ್ಯ ರಚನೆಯಾದ ನಂತರ ೨೦೧೪ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ಸೋಲು ಅನುಭವಿಸಿದರು. ೨೦೧೮ರಲ್ಲಿ ಅವರು ತೆಲುಗು ದೇಶಂ ಪಕ್ಷ ತ್ಯಜಿಸಿ, ಕಾಂಗ್ರೆಸ್ ಪಕ್ಷ ಸೇರಿದರು. ನಂತರ ನಡೆದ ಚುನಾವಣೆಯಲ್ಲಿ ಅವರು ಮುಳುಗ್ ಕ್ಷೇತ್ರದಿಂದಲೇ ಚುನಾಯಿತರಾದರು. ಈ ಬಾರಿಯ ಅವರ ಗೆಲುವಿನ ವಿಶೇಷತೆಯೇನೆಂದರೆ, ೨೦೧೪ರಲ್ಲಿ ಅವರನ್ನು ಸೋಲಿಸಿ ಶಾಸಕರಾದ ಟಿಆರ್ ಎಸ್ ಅಭ್ಯರ್ಥಿ ಅಝ್ಮೀರಾ ಚಂದೂಲಾಲ್ ಎಂಬವರನ್ನು ಚುನಾವಣೆಯಲ್ಲಿ ಮಣಿಸಿದರು.

೨೦೧೨ರಿಂದ ಅನಸೂಯ ತಮ್ಮ ಡಾಕ್ಟರೇಟ್ ಮಹಾಪ್ರಬಂಧಕ್ಕೆ ತಯಾರಿ ಮಾಡುತ್ತಿದ್ದರಾದರೂ ಜನ ಪ್ರತಿನಿಧಿಯಾಗಿ ಅವರ ಬಿಡುವು ರಹಿತ ಕೆಲಸಗಳಲ್ಲಿ ಅದರ ಅಧ್ಯಯನಕ್ಕೆ ಸಾಕಷ್ಟು ಬಿಡುವು ಸಿಗದ ಕಾರಣ ಮುಂದೂಡುತ್ತಿದ್ದರು. ಅವರ ಪ್ರಬಂಧದ ವಿಷಯ- ‘ಗೊಟ್ಟಿ ಸಮುದಾಯದ ಸಾಮಾಜಿಕ ಪ್ರತ್ಯೇಕತೆ ಮತ್ತು ಅವಕಾಶ ವಂಚನೆ’. ತೀರಾ ಹಿಂದುಳಿದ ಗೊಟ್ಟಿ ಸಮುದಾಯಕ್ಕೆ ಸೇರಿದ ಅನಸೂಯ ತಮ್ಮ ಸಮುದಾಯದ ಜನರಿಗಾಗಿ ದಶಕಗಳಿಂದಲೂ ಶ್ರಮಿಸುತ್ತಿದ್ದಾರೆ. ವಕೀಲೆಯಾಗಿಯೂ ಅವರು ಗೊಟ್ಟಿ ಹಾಗೂ ಇತರ ಅವಕಾಶ ವಂಚಿತ ಸಮುದಾಯಗಳ ಜನರ ಕೇಸುಗಳನ್ನು ಎತ್ತಿಕೊಂಡು ಹೋರಾಡುತ್ತಿದ್ದರು.

ಕೋವಿಡ್ ಮಹಾಮಾರಿಯ ಕಾಲದಲ್ಲಿ ಅನಸೂಯ ಎತ್ತಿನ ಗಾಡಿಗಳಲ್ಲಿ, ಅವರಿವರ ಬೈಕುಗಳಲ್ಲಿ, ಯಾವುದೇ ವಾಹನಗಳಿಲ್ಲದಾಗ ತಲೆ ಮೇಲೆ ಆಹಾರ ಪದಾರ್ಥಗಳನ್ನು ಹೊತ್ತು, ಕಾಲ್ನಡಿಗೆಯಲ್ಲಿ ಗುಡ್ಡಗಳನ್ನು ಹತ್ತಿ ಇಳಿದು, ಹಳ್ಳ ತೊರೆಗಳನ್ನು ದಾಟಿ, ಹತ್ತಾರು ಕಿ. ಮೀ. ದಾರಿ ಸವೆಸಿ ಆದಿವಾಸಿ ಸಮುದಾಯಗಳಿಗೆ ವಿತರಿಸುತ್ತಿದ್ದ ವಿಡಿಯೋ, ಫೋಟೋಗಳು ದೇಶದಾದ್ಯಂತ ಸುದ್ದಿ ಮಾಡಿದ್ದವು. ಒಂದು ಕಾಲದಲ್ಲಿ ತಾನು ಬಂದೂಕು ಹಿಡಿದು ತಿರುಗುತ್ತಿದ್ದ ಕಾಡಿನಲ್ಲಿ ತಲೆ ಮೇಲೆ ಆಹಾರದ ಮೂಟೆಯನ್ನು ಹೊತ್ತು ತಿರುಗಿದರು. ಅನಸೂಯ ನಕ್ಸಲೈಟ್ ಆಗಿದ್ದಾಗ ಅದೇ ಜನ ಅವರಿಗೆ ಆಹಾರ ಕೊಟ್ಟು ಪೊರೆದಿದ್ದರು. ಅನಸೂಯ ಅವರು ಶಾಸಕಿಯಾದ ನಂತರ ಕೋವಿಡ್ ಸಂಕಷ್ಟ ಕಾಲದಲ್ಲಿ ಹೀಗೆ ಆಹಾರ ಹಂಚಿ ಆ ಋಣವನ್ನು ತೀರಿಸಿದರು. ಅವರ ಈ ಕೆಲಸಗಳೇ ಅವರನ್ನು ಗೊಟ್ಟಿ ಸಮುದಾಯದ ನಾಯಕಿಯನ್ನಾಗಿ ರೂಪಿಸಿದವು.

೨೦೨೨ರ ಅಕ್ಟೋಬರಲ್ಲಿ ಅನಸೂಯ ತಮ್ಮ ಪಿಎಚ್. ಡಿ. ಮಹಾಪ್ರಬಂಧವನ್ನು ಸಲ್ಲಿಸಿ, ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದರು. ಡಾಕ್ಟರೇಟ್ ಪಡೆದಾಗ ಅವರು ಹೇಳಿದ ಮಾತುಗಳು ಅವರ ಸಾಹಸಮಯ ಬದುಕಿನ ಚಿತ್ರಣವನ್ನು ಕಟ್ಟಿ ಕೊಡುವಂತಿದ್ದವು-‘ನನ್ನ ಬಾಲ್ಯದಲ್ಲಿ ನಾನೊಬ್ಬಳು ನಕ್ಸಲೈಟ್ ಆಗುತ್ತೇನೆಂದು ಆಲೋಚಿಸಿರಲಿಲ್ಲ. ನಾನು ನಕ್ಸಲೈಟ್ ಆಗಿದ್ದಾಗ ಲಾಯರ್ ಆಗುತ್ತೇನೆಂದು ಯೋಚಿಸಿರಲಿಲ್ಲ. ನಾನು ಲಾಯರಾಗಿದ್ದಾಗ ಶಾಸಕಿಯಾಗುತ್ತೇನೆಂದು ಆಲೋಚಿಸಿರಲಿಲ್ಲ. ಶಾಸಕಿಯಾಗಿದ್ದಾಗ ಪಿಎಚ್. ಡಿ. ಮಾಡುತ್ತೇನೆಂದು ಆಲೋಚಿಸಿರಲಿಲ್ಲ’. ಈಗ ೫೩ ವರ್ಷ ಪ್ರಾಯವಾಗಿರುವ ಡಾ. ಧನಸರಿ ಅನಸೂಯ ಸೀತಕ್ಕ ಪ್ರಸ್ತುತ ತೆಲಂಗಾಣದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದಲ್ಲಿ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಮಹಿಳಾ ಅಭಿವೃದ್ಧಿ ಮಂತ್ರಿಯಾಗಿದ್ದಾರೆ. ಅವರ ಮಗ ಸೂರ್ಯ ಎಂಜಿನಿಯರಿಂಗ್ ಪದವೀಧರನಾಗಿದ್ದಾನೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಬಹೂರೂಪಿ | ಜಾನಪದ ಉತ್ಸವಕ್ಕೆ ಚಾಲನೆ

ಮೈಸೂರು : ಸಂಕ್ರಾಂತಿ ಹೊಸ್ತಿಲಲ್ಲಿ ಮೈಸೂರಿನಲ್ಲಿ ನಡೆಯುವ ಕಲಾ ಹಬ್ಬವಾದ ಬಹುರೂಪಿ ನಾಟಕೋತ್ಸವವಕ್ಕೆ ಮುನ್ನುಡಿ ಬರೆದು ‘ಜಾನಪದ ಉತ್ಸವ’ ರಂಗಾಯಣದಲ್ಲಿ…

56 mins ago

ಸಂಗ್ರಹಾಲಯವಾಗಿ ಕುವೆಂಪು ಅವರ ಉದಯರವಿ ಮನೆ

ರಸಪ್ರಶ್ನೆ ಕಾರ್ಯಕ್ರಮದ ಸಮಾರಂಭದಲ್ಲಿ ಡಾ.ಚಿದಾನಂದ ಗೌಡ ಮಾಹಿತಿ ಕುಶಾಲನಗರ : ಕುವೆಂಪುರವರ ಉದಯರವಿ ಮನೆಯನ್ನು ಸಂಗ್ರಹಾಲಯ ಮಾಡುವ ಬಗ್ಗೆ ಚಿಂತನೆ…

1 hour ago

ಮ.ಬೆಟ್ಟ ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷ : ಎಚ್ಚರಿಕೆಯ ಸಂಚಾರಕ್ಕೆ ಕೋರಿಕೆ

ಹನೂರು : ತಾಲ್ಲೂಕಿನ ಮಹದೇಶ್ವರ ಬೆಟ್ಟದ ಮಾರ್ಗಮಧ್ಯ ರಂಗಸ್ವಾಮಿ ಒಡ್ಡಿನ ಬಳಿ ತಡೆಗೋಡೆಯ ಮೇಲೆ ಚಿರತೆ ಮತ್ತು ಅದರ ಎರಡು…

1 hour ago

ದ್ವೇಷ ಮರೆಯಿರಿ, ಪ್ರೀತಿ ಗಳಿಸಿ : ಡಿ.ಆರ್.ಪಾಟೀಲ್ ಕರೆ

ನಂಜನಗೂಡು : ದ್ವೇಷ ಮರೆತು, ಪ್ರೀತಿ ಗಳಿಸುವಂತೆ ಕೆಲಸ ಮಾಡಿ ಜೀವನ ನಡೆಸಬೇಕು ಎಂದು ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ…

2 hours ago

ಡ್ಯಾಡ್ ಈಸ್‌ ಹೋಂ | ಎಚ್‌ಡಿಕೆ ಎಂಟ್ರಿಗೆ ಡಿಕೆಶಿ, ಸಿದ್ದು ಶಾಕ್‌ ; ಸಂಚಲನ ಮೂಡಿಸುತ್ತಿರುವ AI ವಿಡಿಯೋ

ಬೆಂಗಳೂರು : ನಟ ಯಶ್ ಅವರು ‘ಟ್ಯಾಕ್ಸಿಕ್’ ಸಿನಿಮಾದ ಟೀಸರ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಟೀಸರ್ ನಲ್ಲಿನ ಕಾರು…

2 hours ago

ಸೋಮನಾಥದಲ್ಲಿ ಶೌರ್ಯ ಯಾತ್ರೆ

ಸೋಮನಾಥ : ಗುಜರಾತ್‌ನ ಗಿರ್‌ ಸೋಮನಾಥ ಜಿಲ್ಲೆಯ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಆಯೋಜಿಸಲಾದ ವಿಧ್ಯುಕ್ತ…

2 hours ago