ಸಂಪಾದಕೀಯ

ಅಭಿವೃದ್ಧಿಗಾಗಿ ಹಸಿರು ಮರಗಳ ಹನನ ಸಮರ್ಥನೀಯವಲ್ಲ

ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ ಎಂಬುದನ್ನು ಪರಿಸರ ಸಂಬಂಧಿತ ಬಹುತೇಕ ಎಲ್ಲ ಸಂಶೋಧನೆಗಳು ಹೇಳುತ್ತಲೇ ಇವೆ. ಇದರಿಂದ ನಾಡು, ಜನತೆ ಪಾರಾಗಲು ಮರಗಳನ್ನು ಬೆಳೆಸುವುದು, ಆ ಮೂಲಕ ಹಸಿರನ್ನು ಉಳಿಸುವುದು ಅನಿವಾರ್ಯ.

ಇದಕ್ಕಾಗಿ ಸರ್ಕಾರ, ಅನೇಕ ಸಂಘ ಸಂಸ್ಥೆಗಳು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಲೇ ಇವೆ. ಪ್ರತಿ ವರ್ಷ ಜೂ. ೫ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತಿದೆ. ಇದರ ಮೂಲ ಉದ್ದೇಶ ಮರಗಳನ್ನು ಸಂರಕ್ಷಿಸಿ, ಪಾಲನೆ ಮಾಡಬೇಕು ಎಂಬುದು. ಅದರಲ್ಲಿಯೂ ಹಳೆಯ ಬೃಹತ್ ಮರಗಳು ಅಂದರೆ, ಆಲ, ಅರಳಿ, ಹೊಂಗೆ ಇತ್ಯಾದಿ ಮರಗಳನ್ನು ಉಳಿಸಿಕೊಳ್ಳುವುದು ಅತ್ಯಗತ್ಯ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಮೈಸೂರು ಮಹಾನಗರಪಾಲಿಕೆಯು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿಯವರ ಕಚೇರಿ ಸಮೀಪದಲ್ಲಿನ ಹೈದರ್ ಅಲಿ ರಸ್ತೆಯ ಇಕ್ಕೆಲದಲ್ಲಿದ್ದ ೪೦ ಬೃಹತ್ ಮರಗಳನ್ನು ಕಡಿದುರುಳಿಸಿದೆ.

ಅಭಿವೃದ್ಧಿ ವಿಚಾರದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕು ನಿಜ. ಆದರೆ, ಈ ವೃಕ್ಷಗಳನ್ನು ಕತ್ತರಿಸಿ ಹಾಕಿರುವುದನ್ನು ಒಪ್ಪಿಕೊಳ್ಳುವುದು ಸಮಂಜಸವಲ್ಲ. ರಸ್ತೆಯನ್ನು ಅಗಲೀಕರಣ ಮಾಡುವುದಕ್ಕೆ ಅನುದಾನ ಬಿಡುಗಡೆ ಮಾಡಲಾಗಿದೆ ಎಂಬ ಕಾರಣಕ್ಕೆ ಪರ್ಯಾಯ ಮಾರ್ಗಗಳನ್ನು ಪರಿಶೋಽಸದೆ, ದಿಢೀರ್ ಮರಗಳ ಬುಡಕ್ಕೆ ಕೊಡಲಿ ಹಾಕಿರುವುದನ್ನು ಸಮರ್ಥನೆ ಮಾಡಿಕೊಳ್ಳುವುದು ಸರಿ ಅನಿಸುತ್ತಿಲ್ಲ. ಇದರಲ್ಲಿ ಅರಣ್ಯ ಇಲಾಖೆಯ ಹೊಣೆಗಾರಿಕೆಯೂ ಇದೆ. ಮರಗಳನ್ನು ಕಡಿಯುವುದಕ್ಕೆ ಅನುಮತಿ ನೀಡುವ ಮುಂಚೆಯೇ ಮರಗಳ ಹನನ ಅನಿವಾರ್ಯವೇ ಎಂಬುದನ್ನು ಖಾತರಿ ಪಡಿಸಿಕೊಳ್ಳಬೇಕು. ೫೦ಕ್ಕೂ ಹೆಚ್ಚು ಮರಗಳನ್ನು ತೆರವುಗೊಳಿಸಬೇಕಾದರೆ ಸಾರ್ವ ಜನಿಕರ ಅಭಿಪ್ರಾಯ ಸಂಗ್ರಹ ಮಾಡುವುದು ಕಡ್ಡಾಯ ಎಂಬ ಕಾರಣಕ್ಕೆ ‘ಮರಮೇಧ’ ವನ್ನು ೪೦ ಮರಗಳಿಗೆ ಸೀಮಿತಗೊಳಿಸಲಾಗಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಹತ್ತನ್ನೆರಡು ವರ್ಷಗಳ ಹಿಂದೆ ಮೈಸೂ ರಿನ ಮಹಾತ್ಮ ಗಾಂಽ (ಎಂ. ಜಿ. ) ರಸ್ತೆಯಲ್ಲಿ ರುವ ಸುಮಾರು ೫೦ ಬೃಹತ್ ಮರಗಳನ್ನು ಅಭಿವೃದ್ಧಿ ಕಾರಣಕ್ಕಾಗಿ ತೆರವುಗೊಳಿಸುವು ದಕ್ಕೆ ನಗರಪಾಲಿಕೆ ಮತ್ತು ಅರಣ್ಯ ಇಲಾಖೆ ಮುಂದಾಗಿದ್ದವು. ಆಗ ಪರಿಸರವಾದಿಗಳು, ಹೋರಾಟಗಾರರು ದೊಡ್ಡ ಮಟ್ಟ ದಲ್ಲಿ ನಡೆಸಿದ ಪ್ರತಿಭಟನೆಗೆ ಮಣಿದು ಆ ನಿರ್ಧಾರದಿಂದ ಹಿಂದೆ ಸರಿಯಲಾಯಿತು. ಅಂದರೆ ಆ ಮರಗಳನ್ನು ಉಳಿಸಿಕೊಂಡೇ ರಸ್ತೆಯನ್ನು ಅಗಲೀಕರಣ ಮಾಡಲಾಯಿತು.

ಹಸಿರಾಗಿರುವ ಮರಗಳ ಉಸಿರು ಉಳಿಸಿದಂತಹ ಪ್ರಕರಣ ನಮ್ಮ ಮುಂದೆ ಇದ್ದರೂ, ೪೦ ಮರಗಳನ್ನು ಕಡಿದುರುಳಿ ಸಿದ ಪ್ರಕರಣ ಸಾರ್ವಜನಿಕರಲ್ಲಿ ಅನುಮಾನ ಗಳಿಗೆ ಕಾರಣವಾಗಿದೆ. ಮರಗಳನ್ನು ಅಭಿ ವೃದ್ಧಿಯ ಹೆಸರಿನಲ್ಲಿ ಕಡಿದು ಹಾಕುತ್ತಾ ಸಾಗಿದರೆ ಮುಂದೊಮ್ಮೆ ಹಸಿರು ಇಲ್ಲದೆ, ಉಸಿರಾಟಕ್ಕಾಗಿ ಆಮ್ಲಜನಕದ ಸಿಲಿಂಡರ್ ಗಳನ್ನು ಬಳಸಬೇಕಾಗುತ್ತದೆ. ಇಂತಹ ಆತಂಕ ಜಾಗತಿಕ ಮಟ್ಟದಲ್ಲೇ ಪರಿಸರ ವಿಜ್ಞಾನಿಗಳು, ಹೋರಾಟಗಾರರನ್ನು ಕಾಡುತ್ತಿದೆ. ಮರಗಳ ಹನನದ ವಿರುದ್ಧ ಪರಿಸರಪ್ರಿಯರು ಹಲವು ಬಗೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆಯೂ ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಸುಮಾರು ೧೨೫ ವೃಕ್ಷಗಳ ‘ಹತ್ಯಾಕಾಂಡ’ಕ್ಕೆ ಸಿದ್ಧತೆ ನಡೆದಿದೆ ಎಂಬ ಮಾಹಿತಿ ಇದೆ. ಅಲ್ಲದೆ, ದಟ್ಟಗಳ್ಳಿಯಲ್ಲಿ ಕೂಡ ಸುಮಾರು ೧೧೯ ಮರಗಳಿಗೆ ಸಂಖ್ಯೆಯನ್ನು ನಮೂದಿಸಿದ್ದು, ಅವುಗಳನ್ನು ತೆರವುಗೊಳಿಸುವುದಕ್ಕೂ ತಯಾರಿ ನಡೆದಿದೆ ಎನ್ನಲಾಗಿದೆ.

ಮೈಸೂರು ತಾಲ್ಲೂಕಿನ ಉತ್ತನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯು ತ್ತಿದ್ದು, ಅಲ್ಲಿಯೂ ರಸ್ತೆಬದಿಯಲ್ಲಿರುವ ೯ ಮರಗಳಿಗೆ ಯಾವ ಕ್ಷಣದಲ್ಲಿ ಬೇಕಾದರೂ ಕೊಡಲಿ ಪೆಟ್ಟು ಬೀಳಬಹುದು. ಮರಗಳನ್ನು ಕಡಿಯಲು ಕಾನೂನುಬದ್ಧವಾಗಿಯೇ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಸಂಬಂಧಪಟ್ಟ ಅಽಕಾರಿಗಳು ವಾದ ಮಾಡುತ್ತಿದ್ದಾರೆ. ಆದರೆ, ಮುಂದಿನ ಪೀಳಿಗೆಗೆ ಹಸಿರು ಮರಗಳನ್ನು ಉಳಿಸದೆ ಹೋದರೆ, ಸಂಭವಿಸ ಬಹುದಾದ ಜಾಗತಿಕ ತಾಪಮಾನ ಸ್ಛೋಟದ ಅಪಾಯವನ್ನು ಊಹಿಸುವುದು ಅಸಾಧ್ಯ.

ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆ ಅವರು ೪೦ ಮರಗಳ ಹನನ ಪ್ರಕರಣ ಕುರಿತು ತನಿಖೆಗೆ ಆದೇಶಿಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದು ಸ್ವಾಗತಾರ್ಹ. ತಪ್ಪಿತಸ್ಥರಿಗೆ ಶಿಕ್ಷೆಯಾದರೆ, ಮುಂದೆ ಯಾವುದೇ ಅಧಿಕಾರಿ ಹಸಿರಾಗಿರುವ ಬೃಹತ್ ಮರಗಳ ತಂಟೆಗೆ ಹೋಗುವುದಕ್ಕೆ ಹತ್ತಾರು ಬಾರಿ ಚಿಂತಿಸುವುದು ಖಚಿತ.

೫೦- ೬೦ ವರ್ಷಗಳಿಗೂ ಅಧಿಕ ವಯಸ್ಸಿನ ವೃಕ್ಷಗಳನ್ನು ಉಳಿಸಿಕೊಡುವ ಮೂಲಕ ಮುಂದಿನ ತಲೆಮಾರುಗಳಿಗೂ ಉಸಿರಾಡಲು ಉಚಿತವಾಗಿ ಆಮ್ಲಜನಕ ಲಭಿಸುವಂತೆ ಸರ್ಕಾರ ಕ್ರಮಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ಆಮ್ಲಜನಕವನ್ನು ಖರೀದಿಸುವಂತಹ ಸ್ಥಿತಿ ಮೈಸೂರು ಸೇರಿದಂತೆ ಇಡೀ ರಾಜ್ಯದ ಜನರಿಗೆ ಬಾರದಂತೆ ಎಚ್ಚರಿಕೆ ವಹಿಸಬೇಕು.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ: ರಾಜ್ಯದಲ್ಲಿ ನಾಲ್ಕು ದಿನ ಭಾರೀ ಮಳೆಯಾಗುವ ಸಾಧ್ಯತೆ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ರಾಜ್ಯದಲ್ಲಿ ಮುಂದಿನ ಮೂರ್ನಾಲ್ಕು ದಿನಗಳ ಕಾಲ ಜೋರು ಮಳೆಯಾಗುವ ಮುನ್ಸೂಚನೆ ಇದೆ. ಈ ವಾಯುಭಾರ…

5 hours ago

ಕಾಡಾನೆ ದಾಳಿಗೆ ಎರಡು ಎಕರೆ ಬೀಟ್ರೋಟ್ ಬೆಳೆ ನಾಶ: ಸಂಕಷ್ಟದಲ್ಲಿ ಆಲತ್ತೂರು ರೈತ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ತಾಲ್ಲೂಕಿನ ಆಲತ್ತೂರು ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಎರಡು ಎಕರೆಯಲ್ಲಿ ಬೆಳೆದಿದ್ದ ಬೀಟ್ರೋಟ್…

5 hours ago

ಸಿದ್ದರಾಮಯ್ಯ ವಿರುದ್ಧ ಸ್ಟಿಂಗ್‌ ಆಪರೇಷನ್‌ ಪ್ರಕರಣ: ದೆಹಲಿ ಮೂಲದ ರಿತೇಶ್‌ ಪಾಂಡೆ ಅರೆಸ್ಟ್‌

ಬೆಂಗಳೂರು: ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ…

7 hours ago

ಓದುಗರ ಪತ್ರ: ಮಲ್ಲಿಗೆಯ ಮೈಸೂರಲಿ…

ಮಲ್ಲಿಗೆಯ ಮೈಸೂರಲಿ... ತಾಯಿ ಚಾಮುಂಡಿ ಮಡಿಲಲಿ ಮಲ್ಲಿಗೆಯ ಮೈಸೂರಲಿ ಅದ್ಧೂರಿ ಜಂಬೂ ಸವಾರಿ ಈ ಬಾರಿ, ಅಂಬಾರಿ ಹೊತ್ತ ಮೊದಲ…

10 hours ago

ಓದುಗರ ಪತ್ರ: ಬಯೋಮೆಟ್ರಿಕ್ ಪರಿಶೀಲನೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ

ಇ -ಸಿಮ್ ತಂತ್ರeನದ ದುರ್ಬಳಕೆಯಿಂದ ಎಟಿಎಂ ಹಾಗೂ ಯುಪಿಐ ನಿಷ್ಕ್ರಿಯಗೊಂಡಿದ್ದರೂ ರೂ. ೪ ಲಕ್ಷದವರೆಗೆ ಸೈಬರ್ ವಂಚನೆ ನಡೆಯು ತ್ತಿರುವುದು…

10 hours ago

ಓದುಗರ ಪತ್ರ: ಅಂಗ್ ಸಾನ್ ಸೂಕಿಗೆ ಬೇಕು ವಿಶ್ವ ಸಮುದಾಯದ ಬೆಂಬಲ

ಮ್ಯಾನ್ಮಾರ್ ಸೇನೆಯು ಅಂಗ್ ಸಾನ್ ಸೂಕಿ ಅವರ ಚುನಾಯಿತ ಸರ್ಕಾರವನ್ನು ೨೦೨೧ ರ -ಬ್ರವರಿಯಲ್ಲಿ ಕೆಳಗಿಳಿಸಿ ಅಧಿಕಾರ ಕಸಿದುಕೊಂಡು ಬಂಧಿಸಿ,…

10 hours ago