ಸಂಪಾದಕೀಯ

೫ ಹುಲಿಗಳ ಸಾವು; ಎಚ್ಚೆತ್ತುಕೊಳ್ಳಬೇಕಿದೆ ಅರಣ್ಯ ಇಲಾಖೆ

ಚಾಮರಾಜನಗರ ಜಿಲ್ಲೆ ಮಲೈ ಮಹದೇಶ್ವರ ವನ್ಯಧಾಮ ವ್ಯಾಪ್ತಿಯ ಮೀಣ್ಯಂ ಅರಣ್ಯ ವಲಯದಲ್ಲಿ ವಿಷಪ್ರಾಶನದಿಂದ ತಾಯಿ ಹುಲಿ ಹಾಗೂ ನಾಲ್ಕು ಮರಿಗಳು ದಾರುಣವಾಗಿ ಸಾವಿಗೀಡಾಗಿರುವ ಪ್ರಕರಣ ಜನರಲ್ಲಿ ದಿಗ್ಭ್ರಮೆ ಮೂಡಿಸಿದೆ. ಸತ್ತ ಹಸುವಿನ ಕಳೇಬರಕ್ಕೆ ವಿಷ ಸಿಂಪಡಿಸಿದ್ದು, ಅದನ್ನು ಸೇವಿಸಿದ ಹುಲಿ ಸಂಸಾರ ನಿರ್ನಾಮವಾಗಿದೆ ಎನ್ನಲಾಗಿದೆ. ಮೃತಪಟ್ಟ ಹಸುವಿನ ಮಾಲೀಕ ಸೇರಿ ಮೂವರು ಆರೋಪಿಗಳನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಹುಲಿ ಹಸುವನ್ನು ಹತ್ಯೆಗೈದು ಕಬಳಿಸಿ, ಸುಮಾರು ಅರ್ಧದಷ್ಟು ಭಾಗವನ್ನು ಉಳಿಸಿತ್ತು. ಅದನ್ನು ಮರಿಗಳ ಸಹಿತ ಬಂದು ಇನ್ನೊಮ್ಮೆ ತಿಂದಿದೆ. ಆದರೆ ಹಸುವಿನ ಕಳೇಬರಕ್ಕೆ ವಿಷ ಬೆರೆತಿದ್ದರಿಂದ ಐದೂ ಹುಲಿಗಳು ಮೃತಪಟ್ಟಿವೆ ಎಂದು ಹೇಳಲಾಗಿದೆ. ಪ್ರೀತಿಯ ಹಸುವನ್ನು ಹುಲಿ ಕೊಂದು ಹಾಕಿದ್ದರಿಂದ ಕೋಪಗೊಂಡಿದ್ದ ಮಾಲೀಕ, ಹುಲಿಯು ಹಸುವಿನ ಕಳೇಬರವನ್ನು ತಿನ್ನುವುದಕ್ಕೆ ಬರುತ್ತದೆ ಎಂದು ಊಹಿಸಿದ್ದು, ತನ್ನ ಸಹಚರರ ಸಹಕಾರದಿಂದ ಹಸುವಿನ ಕಳೇಬರಕ್ಕೆ ಕೀಟನಾಶಕ ಸಿಂಪಡಿಸಿದ್ದ ಎಂದು ಹೇಳಲಾಗಿದೆ. ಈ ಪ್ರಕರಣವನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅನ್ವಯ ಹಾಗೂ ಕರ್ನಾಟಕ ಅರಣ್ಯ ಕಾಯ್ದೆ ೧೯೬೯ರ ಪ್ರಕಾರ ಗಂಭೀರವಾದ ವನ್ಯಜೀವಿ ಅಪರಾಧ ಪ್ರಕರಣವೆಂದು ಪರಿಗಣಿಸಲಾಗಿದೆ.

ಅತ್ತ ರಾಜ್ಯ ಸರ್ಕಾರ ಕೂಡ ಹುಲಿಗಳ ಸಾವಿನ ಪ್ರಕರಣದ ತನಿಖೆಗೆ ತಂಡವನ್ನು ರಚಿಸಿದೆ. ವನ್ಯಜೀವಿಗಳ ಸಂರಕ್ಷಣೆ ಅರಣ್ಯ ಇಲಾಖೆಯ ಕರ್ತವ್ಯ ನಿಜ. ಆದರೆ ಸಾರ್ವಜನಿಕರ ಸಹಕಾರವೂ ಅಗತ್ಯ. ಮಾನವ – ವನ್ಯಜೀವಿ ಸಂಘರ್ಷ ತಪ್ಪಿಸಲು ಸರ್ಕಾರ ಅರಣ್ಯ ಇಲಾಖೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅವುಗಳ ಬಗ್ಗೆ ಸಾರ್ವಜನಿಕರಿಗೆ ಎಷ್ಟರ ಮಟ್ಟಿಗೆ ಅರಿವು ಇದೆ ಎಂಬುದು ಮುಖ್ಯ. ಅದರಲ್ಲಿಯೂ ಕಾಡಂಚಿನ ಗ್ರಾಮಗಳ ಜನರು, ಆದಿವಾಸಿ, ಬುಡಕಟ್ಟು ಸಮುದಾಯಗಳಿಗೆ ವನ್ಯಜೀವಿಗಳ ಹತ್ಯೆ ಸಂಬಂಧ ಅತ್ಯಂತ ಪ್ರಬಲವಾದ ಕಾನೂನುಗಳು ಇವೆ ಎಂಬುದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿವೆಯೇ ಎಂಬ ಅನುಮಾನವನ್ನು ಇಂತಹ ಪ್ರಕರಣಗಳು ಹುಟ್ಟುಹಾಕುತ್ತವೆ.

ಅರಣ್ಯಪಾಲಕ ನೌಕರರಿಗೆ ಕೆಲವು ತಿಂಗಳುಗಳಿಂದ ವೇತನ ಬಿಡುಗಡೆ ಆಗಿಲ್ಲ. ಹಕ್ಕೊತ್ತಾಯ ಮಂಡಿಸಲು ಅವರು ಪ್ರತಿಭಟನೆ ಹಮ್ಮಿಕೊಂಡಿದ್ದ ದಿನವೇ ಇತ್ತ ಹುಲಿಗಳಿಗೆ ವಿಷಪ್ರಾಶನವಾಗಿದೆ ಎಂಬುದು ಕಾಕತಾಳೀಯ ಇರಬಹುದು. ಆದರೆ, ಅರಣ್ಯ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿರುವವರ ಕೈವಾಡ ಇದೆ ಎಂಬುದಾಗಿ ಕೆಲ ಮಾಧ್ಯಮಗಳಲ್ಲಿ ಬಿತ್ತರವಾಗಿದೆ. ಇದನ್ನು ಅರಣ್ಯಾಧಿಕಾರಿಗಳು, ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸುವ ಅಗತ್ಯ ಇದೆ.

ಮಲೈ ಮಹದೇಶ್ವರ ವನ್ಯಧಾಮ, ಬಿಳಿಗಿರಿರಂಗನಾಥಸ್ವಾಮಿ ದೇವಸ್ಥಾನ ಹುಲಿ ಸಂರಕ್ಷಿತಾರಣ್ಯ, ಬಂಡೀಪುರ, ನಾಗರಹೊಳೆ ಅಭಯಾರಣ್ಯ ಪ್ರದೇಶಗಳಲ್ಲಿ ಆನೆ, ಹುಲಿಯಂತಹ ಪ್ರಮುಖ ಕಾಡುಪ್ರಾಣಿಗಳು ದೊಡ್ಡ ಸಂಖ್ಯೆಯಲ್ಲಿವೆ. ಅವುಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಹೆಚ್ಚು ಒತ್ತು ನೀಡಬೇಕಿದೆ. ಪರಿಸರವಾದಿಗಳು, ವನ್ಯಜೀವಿ ಪ್ರಿಯರು ಈ ಬಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ.

ಅರಣ್ಯ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಕಾಡುಪ್ರಾಣಿಗಳಿಗೆ ನೀರು, ಆಹಾರ ಲಭಿಸುವಂತೆ ಕ್ರಮಗಳನ್ನು ಕೈಗೊಳ್ಳುವುದು ಎಷ್ಟು ಮುಖ್ಯವೋ, ಕಾಡುಪ್ರಾಣಿಗಳನ್ನು ಬೇಟೆಯಾಡುವುದು, ಹತ್ಯೆ ಮಾಡುವುದು ಕಾನೂನು ಕಣ್ಣಿನಲ್ಲಿ ಅಪರಾಧ ಎಂಬುದರ ಬಗ್ಗೆ ಸಾರ್ವಜನಿಕರು, ಅದರಲ್ಲಿಯೂ ವಿಶೇಷವಾಗಿ ಆದಿವಾಸಿ ಜನರಲ್ಲಿ ಅರಿವು ಮೂಡಿಸವುದೂ ಅಷ್ಟೇ ಮುಖ್ಯವಾಗಿದೆ. ಬಹುಶಃ ಈಗ ನಡೆದಿರುವ ೫ ಹುಲಿಗಳ ಹತ್ಯೆ ಪ್ರಕರಣದ ಆರೋಪಿಗಳಿಗೆ, ಕಾಡು ಪ್ರಾಣಿಗಳ ಸಂರಕ್ಷಣೆಯ ನಿಯಮಗಳ ಬಗ್ಗೆ ಅರಿವು ಇದ್ದಿದ್ದರೆ ಈ ಪ್ರಮಾದ ಜರುಗುತ್ತಿರಲಿಲ್ಲ ಅನಿಸುತ್ತದೆ.

ಹುಲಿಗಳಿಗೆ ವಿಷ ಹಾಕಿದ ಪ್ರಮುಖ ಆರೋಪಿಯ ತಂದೆ, ತಾನೇ ಅಪರಾಧಿ ಎಂದು ಹೇಳಿಕೊಂಡಿದ್ದರು. ಆದರೆ ಅವರ ಪುತ್ರ ನಿಜವಾದ ಆರೋಪಿ ಎಂಬುದು ಬಹಿರಂಗವಾಗಿದೆ. ಹುಲಿಗಳ ಸಾವಿಗೆ ಕಾರಣವಾದ ಆರೋಪಿ, ಕಷ್ಟಕ್ಕೆ ಸಿಲುಕುವುದನ್ನು ಸಹಿಸಿಕೊಳ್ಳಲು ಆತನ ತಂದೆಗೆ ಆಗಲಿಲ್ಲ. ಅಂತಹದೇ ಭಾವನೆ ಇತರ ಜನರು ಹಾಗೂ ಕಾಡುಪ್ರಾಣಿಗಳ ಮೇಲೆಯೂ ಇರಬೇಕು. ಇಂತಹ ಅರಿವನ್ನು ಮೂಡಿಸಬೇಕಿರುವುದು ಅರಣ್ಯ ಇಲಾಖೆ ಅಧಿಕಾರಿಗಳ ಜವಾಬ್ದಾರಿ. ಹಾಗೆಯೇ ಕಾಡುಪ್ರಾಣಿಗಳು ಜನವಸತಿ ಪ್ರದೇಶಗಳು, ಫಸಲು ಇರುವ ಜಮೀನುಗಳ ಮೇಲೆ ದಾಳಿ ಮಾಡುವಂತಹ ಪ್ರಕರಣಗಳನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಿದೆ. ೫ ಹುಲಿಗಳ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೆಯೇ ಅರಣ್ಯ ಇಲಾಖೆ ಕೂಡ ಎಚ್ಚೆತ್ತುಕೊಳ್ಳುವುದು ಅಗತ್ಯ.

” ಪರಿಸರವಾದಿಗಳು, ವನ್ಯಜೀವಿ ಪ್ರಿಯರು ಈ ಬಗ್ಗೆ ಧ್ವನಿ ಎತ್ತುತ್ತಲೇ ಇರುತ್ತಾರೆ. ಅರಣ್ಯ ಪ್ರದೇಶದಲ್ಲಿ ಪರಿಸರ ಸಂರಕ್ಷಣೆ ಜೊತೆಗೆ ಕಾಡುಪ್ರಾಣಿಗಳಿಗೆ ನೀರು, ಆಹಾರ ಲಭಿಸುವಂತೆಕ್ರಮಗಳನ್ನು ಕೈಗೊಳ್ಳುವುದುಎಷ್ಟು ಮುಖ್ಯವೋ, ಕಾಡುಪ್ರಾಣಿಗಳನ್ನು ಬೇಟೆಯಾಡುವುದು, ಹತ್ಯೆ ಮಾಡುವುದು ಕಾನೂನು ಕಣ್ಣಿನಲ್ಲಿ ಅಪರಾಧ ಎಂಬುದರ ಬಗ್ಗೆ ಸಾರ್ವಜನಿಕರು, ಅದರಲ್ಲಿಯೂ ವಿಶೇಷವಾಗಿ ಆದಿವಾಸಿ ಜನರಲ್ಲಿ ಅರಿವು ಮೂಡಿಸುವುದೂ ಅಷ್ಟೇ ಮುಖ್ಯವಾಗಿದೆ.”

ಆಂದೋಲನ ಡೆಸ್ಕ್

Recent Posts

ಹಣ ದ್ವಿಗುಣಗೊಳಿಸುವುದಾಗಿ ೨೮ ಲಕ್ಷ ರೂ. ವಂಚನೆ; ದೂರು ದಾಖಲು

ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…

7 hours ago

ಅಂಬಳೆ: ಚಾಮುಂಡೇಶ್ವರಿ ದೇಗುಲದಲ್ಲಿ ಕಳ್ಳತನ

ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…

7 hours ago

ಇಂಡಿಗೋ ವಿಮಾನ ಹಾರಾಟದಲ್ಲಿ ವ್ಯತ್ಯಯ ಬೆನ್ನಲ್ಲೇ ಪೈಲಟ್‌ಗಳ ರಜಾ ನಿಯಮ ಸಡಿಲಿಸಿದ ಡಿಜಿಸಿಎ

ನವದೆಹಲಿ: ದೇಶಾದ್ಯಂತ ಇಂಡಿಗೋ ವಿಮಾನದ ಹಾರಾಟದಲ್ಲಿ ಭಾರೀ ವ್ಯತ್ಯಯ ಉಂಟಾದ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಪೈಲಟ್‌ಗಳ ರಜಾ…

9 hours ago

ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ: ಸತೀಶ್‌ ಜಾರಕಿಹೊಳಿ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆಯಾಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ…

10 hours ago

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಬೋಧನೆ: ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ಎಚ್‌ಡಿಕೆ ಪತ್ರ

ನವದೆಹಲಿ: ಕಾಲಾತೀತ, ಮೌಲ್ಯಾಧರಿತ ಆದರ್ಶಗಳನ್ನು ಒಳಗೊಂಡಿರುವ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಬೋಧಿಸಲು ಪಠ್ಯದಲ್ಲಿ ಸೇರಿಸಬೇಕು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು…

11 hours ago

ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ: ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು

ನಂಜನಗೂಡು: ಸೋಲು, ಗೆಲುವಿಗಿಂತ ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯ ಎಂದು ತಹಶೀಲ್ದಾರ್‌ ಶಿವಕುಮಾರ್‌ ಕಾಸ್ನೂರು ಹೇಳಿದರು. ನಂಜನಗೂಡು ನಗರದ ಕಾಲೇಜೊಂದರಲ್ಲಿ ಆಯೋಜಿಸಿದ್ದ…

11 hours ago