ಸಂಪಾದಕೀಯ

ಬಾಂಗ್ಲಾ: ಹಸೀನಾ ಪದಚ್ಯುತಿಯ ಒಂದು ತಿಂಗಳ ನಂತರ

ವಿದೇಶ ವಿಹಾರ…

ಡಿ.ವಿ ರಾಜಶೇಖರ

ಶೇಖ್ ಹಸೀನಾ ಪದಚ್ಯುತಿಯ ಒಂದು ತಿಂಗಳ ನಂತರ ಬಾಂಗ್ಲಾದೇಶ ಕ್ರಮೇಣ ಸಹಜಸ್ಥಿತಿಗೆ ಮರಳುತ್ತಿದೆ. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ ದಿನವನ್ನು (ಆಗಸ್ಟ್ 5) ಹುತಾತ್ಮರ ದಿನವನ್ನಾಗಿ ವಿದ್ಯಾರ್ಥಿಗಳು ಆಚರಿಸಿದ್ದಾರೆ. ಆ ದಿನದ ನೆನಪಿಗೆ ವಿದ್ಯಾರ್ಥಿಗಳು ಢಾಕಾದಲ್ಲಿ ಬೃಹತ್ ಮೆರವಣಿಗೆ ಮಾಡಿದ್ದಾರೆ (ಸೆ.5). ನೂರಾರು ಜನರ ಸಾವಿಗೆ ಕಾರಣವಾದ ಹಸೀನಾ ಅವರನ್ನು ವಿಚಾರಣೆಗೆ ಒಳಪಡಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ವಿದ್ಯಾರ್ಥಿ ನಾಯಕರು ಒತ್ತಾಯಿಸಿದ್ದಾರೆ. ಹಸೀನಾ ಅವರನ್ನು ಬಾಂಗ್ಲಾಕ್ಕೆ ಒಪ್ಪಿಸಬೇಕೆಂದು ಆಶ್ರಯ ನೀಡಿರುವ ಭಾರತವನ್ನು ಒತ್ತಾಯಿಸಿದ್ದಾರೆ.‌

ವಿದ್ಯಾರ್ಥಿ ಚಳವಳಿ ತೀವ್ರಗೊಂಡ ಹೊಸದರಲ್ಲಿ ಮತ್ತು ಹಸೀನಾ ಪರಾರಿಯಾದ ನಂತರ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಬಹುಸಂಖ್ಯಾತ ಮುಸ್ಲಿಮರು ನಡೆಸಿದ ದೌರ್ಜನ್ಯ ಯಾವುದೇ ನಾಗರಿಕ ಸಮಾಜ ವನ್ನು ನಾಚಿಸುವಂತಿತ್ತು. ಹಿಂಸಾಚಾರದಲ್ಲಿ 600ಕ್ಕೂ ಹೆಚ್ಚು ಮಂದಿ ಸತ್ತರು. ಹಿಂದೂಗಳ ಮನೆಗಳ ಮೇಲೆ, ದೇವಾಲಯಗಳ ಮೇಲೆ, ಸಂಸ್ಥೆಗಳ ಮೇಲೆ ದಾಳಿ ನಡೆಯಿತು. ಸಾವಿರಾರು ಮಂದಿ ಪಲಾಯನ ಮಾಡಿದರು, ತಲೆಮರೆಸಿಕೊಂಡರು. ಮುಸ್ಲಿಮ್ ಮೂಲಭೂತವಾದಿ ಸಂಘಟನೆ ಜಮಾತ್ ಎ ಇಸ್ಲಾಮ್ ಕಾರ್ಯಕರ್ತರು ಈ ದೌರ್ಜನ್ಯಕ್ಕೆ ಕಾರಣರು ಎಂದು ಆರೋಪಿಸಲಾಗಿದೆ. ಹಸೀನಾ ಸರ್ಕಾರದ ಉನ್ನತ ಹುದ್ದೆಗಳಲ್ಲಿದ್ದವರ ಮನೆಗಳ ಮೇಲೆ ದಾಳಿ ನಡೆದಿದೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ಕಚೇರಿಗಳಿಗೆ ಬೆಂಕಿ ಇಡಲಾಯಿತು. ಈ ಘಟನೆಗಳ ಹಿಂದೆ ವಿರೋಧಿ ಬಿಎನ್‌ ಪಿ ಪಕ್ಷದವರು ಇದ್ದರೆಂದು ಆರೋಪಿಸಲಾಗಿದೆ. ಒಂದು ತಿಂಗಳ ಕಾಲ ನಡೆದ ವಿದ್ಯಾರ್ಥಿ ಚಳವಳಿ ಸಂದರ್ಭದಲ್ಲಿ ಹಸೀನಾ ಸರ್ಕಾರ ನಡೆಸಿದ ಗೋಲಿಬಾರ್ ಗಳಲ್ಲಿ 400ಕ್ಕೂ ಹೆಚ್ಚು ಮಂದಿ ಸತ್ತರು. ಈ ಚಳವಳಿಯಲ್ಲಿ ಒಟ್ಟು ಒಂದು ಸಾವಿರಕ್ಕೂ ಹೆಚ್ಚು ಮಂದಿ ಸತ್ತಿರುವರೆಂದು ಅಂದಾಜು ಮಾಡಲಾಗಿದೆ. ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸುವುದರ ವಿರುದ್ಧ ಆರಂಭವಾದ ವಿದ್ಯಾರ್ಥಿ ಚಳವಳಿ ಕ್ರಮೇಣ ರಾಜಕೀಯ ಸ್ವರೂಪ ಪಡೆದು ಪ್ರಧಾನಿ ಶೇಖ್ ಹಸೀನಾ ಪದಚ್ಯುತಿಗೆ ಕಾರಣವಾಯಿತು. ಬಂದೂಕು ಬಲ ಬಳಸಿ ಚಳವಳಿಯನ್ನು ಹತ್ತಿಕ್ಕಲು ಹಸೀನಾ ಅವರು ನೀಡಿದ ಕರೆಯನ್ನು ಮಿಲಿಟರಿ ಅಧಿಕಾರಿಗಳು ತಿರಸ್ಕರಿಸಿದರು. ಹೀಗಾಗಿ ಹಸೀನಾ ರಾಜೀನಾಮೆ ನೀಡುವುದು ಅನಿವಾರ್ಯವಾಯಿತು. ವಿದ್ಯಾರ್ಥಿಗಳ ಪರವಾದ ನಿಲುವನ್ನು ಮಿಲಿಟರಿ ಅಧಿಕಾರಿಗಳು ತೆಗೆದುಕೊಂಡರಾದರೂ ಅವರಿಗೆ ಅಧಿಕಾರದ ಜವಾಬ್ದಾರಿ ಕೊಡಲು ವಿದ್ಯಾರ್ಥಿ ನಾಯಕರು ಒಪ್ಪಲಿಲ್ಲ. ಚಳವಳಿ ನಾಯಕರ ಕೋರಿಕೆ ಮೇರೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತರಾದ ಮಹಮದ್ ಯೂನಸ್ ಅವರು ಈಗ ತಾತ್ಕಾಲಿಕ ಸರ್ಕಾರದ ನೇತೃತ್ವ ವಹಿಸಿದ್ದಾರೆ. ಅವರು ಮುಖ್ಯ ಸಲಹೆಗಾರರು ಮಾತ್ರ ಆಗಿದ್ದು, ದೇಶದಲ್ಲಿ ಶಾಂತಿ ಸ್ಥಾಪಿಸಿ ಮುಂದಿನ ಆರು ತಿಂಗಳ ಒಳಗೆ ಮುಕ್ತ ಚುನಾವಣೆ ನಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಕೆಲವು ವಿದ್ಯಾರ್ಥಿ ನಾಯಕರೂ ಸೇರಿದಂತೆ ಹದಿನಾರು ಮಂದಿ ಸಲಹೆಗಾರರು ಅವರಿಗೆ ನೆರವಾಗಲಿದ್ದಾರೆ.

ವಿದ್ಯಾರ್ಥಿ ಕ್ರಾಂತಿಯ ಒಂದು ತಿಂಗಳ ನಂತರ ಸರ್ಕಾರಿ ಕಚೇರಿಗಳು ಮಾಮೂಲಿಯಾಗಿ ಕೆಲಸ ಮಾಡುತ್ತಿವೆ. ವ್ಯಾಪಾರ ವಹಿವಾಟು ಎಂದಿನಂತೆ ನಡೆಯಲಾರಂಭಿಸಿದೆ. ಒಂದು ತಿಂಗಳ ಕಾಲ ಚಳವಳಿ ನಡೆದ ಕಾರಣ ದೇಶದ ಅಂತಾರಾಷ್ಟ್ರೀಯ ವಹಿವಾಟು ಕೂಡ ನಿಂತಿತ್ತು. ಬಾಂಗ್ಲಾ ದೇಶಕ್ಕೆ ವಿದೇಶಿ ವಿನಿಮಯ ತಂದುಕೊಡುವ ದೊಡ್ಡ ಉದ್ಯಮ ಕ್ಷೇತ್ರ ಸಿದ್ಧ ಉಡುಪಿನದು. ರಫ್ತು ಬಂದ್ ಆಗಿದ್ದರಿಂದ ದೇಶಕ್ಕೆ ಆದ ನಷ್ಟ ಅಷ್ಟಿಷ್ಟಲ್ಲ. ಇದೀಗ ಈ ಕ್ಷೇತ್ರ ಮತ್ತೆ ಜೀವತುಂಬಿಕೊಂಡಿದೆ. ಕರ್ತವ್ಯ ನಿರ್ವಹಿಸಲು ನಿರಾಕರಿಸಿದ್ದ ಪೊಲೀಸರು ವಾಪಸ್‌ ಕೆಲಸಕ್ಕೆ ಮರಳಿದ್ದಾರೆ. ಹಸೀನಾ ಪದಚ್ಯುತಿಯ ನಂತರದ ದಿನಗಳಲ್ಲಿ ಪೊಲೀಸರ ವಿರುದ್ಧ ವಿದ್ಯಾರ್ಥಿಗಳು ವಿದ್ಯಾರ್ಥಿಗಳು ಸಿಡಿದೆದ್ದಿದ್ದರು. ನೂರಾರು ಸಿಡಿದೆದ್ದಿದ್ದರು. ನೂರಾರು ವಿದ್ಯಾರ್ಥಿಗಳನ್ನು ಕೊಂದವರೇ ಪೊಲೀಸರು ಎಂದು ಆರೋಪಿಸಲಾಗಿತ್ತು. ಸರ್ಕಾರ ಹೇಳಿದ ಕೆಲಸ ಅವರು ಮಾಡಿದ್ದಾರೆ, ಆದ್ದರಿಂದ ಅವರನ್ನು ಬಲಿಪಶು ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯಕ್ಕೆ ಕೊನೆಗೂ ಬೆಲೆ ಸಿಕ್ಕಿತು. ಪೊಲೀಸರ ಕೆಲಸವನ್ನು ಮಾಡುತ್ತಿದ್ದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಮರಳಿದರು. ಆದರೆ ಪೊಲೀಸ್ ಮುಖ್ಯಸ್ಥರ ರಾಜೀನಾಮೆ ಪಡೆಯುವಲ್ಲಿ ವಿದ್ಯಾರ್ಥಿಗಳು ಸಫಲರಾದರು. ಅಂತೆಯೇ ಸರ್ಕಾರದ ಬೆಂಬಲವಾಗಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ರಾಜೀನಾಮೆ ಕೊಡುವಂತೆ ಮಾಡಿದರು. ಮುಖ್ಯ ಚುನಾವಣಾ ಕಮಿಷನರ್ ಸೇರಿದಂತೆ ಹಸೀನಾ ಸರ್ಕಾರದ ಮುಖ್ಯಸ್ಥಾನಗಳಲ್ಲಿ ಇದ್ದವರೆಲ್ಲರೂ ಈಗ ತಮ್ಮ ಸ್ಥಾನಗಳನ್ನು ತ್ಯಜಿಸಿದ್ದಾರೆ. ಈ ಪ್ರಕ್ರಿಯೆ ನಡೆಯುತ್ತಿರುವಂತೆಯೇ ಯೂನಸ್ ಸರ್ಕಾರ ಬಂಧನದಲ್ಲಿದ್ದ ವಿರೋಧಿ ಬಿಎನ್‌ಪಿ ಪಕ್ಷದ ನಾಯಕಿ ಖಲೀದಾ ಜಿಯಾ ಅವರನ್ನು ಬಿಡುಗಡೆಮಾಡಿದೆ. ಅವರ ಜೊತೆ ಜೈಲಿನಲ್ಲಿದ್ದ ಇತರ ವಿರೋಧಿ ನಾಯಕರನ್ನೂ ಬಿಡುಗಡೆ ಮಾಡಿದೆ. ಜಮಾತ್ ಎ ಇಸ್ಲಾಮಿಸೇರಿದಂತೆ ಹಸೀನಾ ಕಾಲದಲ್ಲಿ ನಿಷೇಧಕ್ಕೆ ಒಳಗಾಗಿದ್ದ ಸಂಘಟನೆಗಳ ಮೇಲಿನ ನಿಷೇಧವನ್ನು ರದ್ದು ಮಾಡಲಾಗಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಆ ಸಂಘಟನೆಗಳಿಗೆ ಅವಕಾಶ ಒದಗಿಸಲಾಗಿದೆ. ಸರ್ವಾಧಿಕಾರದ ದಿನಗಳು ಮುಗಿದಿವೆ ಎಂದು ವಿದ್ಯಾರ್ಥಿ ನಾಯಕರು ಘೋಷಿಸಿದ್ದಾರೆ.

ದೇಶ ಮಾಮೂಲಿ ಸ್ಥಿತಿಗೆ ಬರುತ್ತಿದ್ದರೂ ದೇಶದ ಅಲ್ಪಸಂಖ್ಯಾತ ಹಿಂದೂಗಳಲ್ಲಿ ಇನ್ನೂ ವಿಶ್ವಾಸ ಮೂಡಿಲ್ಲ. ಭಾರತದ ಹಿಂದೂಗಳಿಗೆ ರಕ್ಷಣೆ ಒದಗಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರು ಮಹಮದ್ ಯೂನಸ್ ಅವರನ್ನು ಒತ್ತಾಯಿಸಿದ್ದಾರೆ. ಫೋನಿನಲ್ಲಿ ಮಾತನಾಡಿದ್ದಾರೆ.‌

ಭಾರತಕ್ಕೆ ಬಾಂಗ್ಲಾ ಆಪ್ತ ಮಿತ್ರ ದೇಶ. ಹಾಗೆ ನೋಡಿದರೆ ಬಾಂಗ್ಲಾ ಸ್ವತಂತ್ರ ದೇಶವಾದುದೇ ಭಾರತದ ನೆರವಿನಿಂದ. ಇದೇ ಕಾರಣಕ್ಕೆ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ತೀರಾ ಹತ್ತಿರವಾಗಿದ್ದರು. ಅಮೆರಿಕ, ಚೀನಾದ ಒತ್ತಡಗಳನ್ನು ಬದಿಗೆ ಸರಿಸಿ ಭಾರತದ ಜೊತೆ ಸ್ನೇಹ ಪಡೆದಿದ್ದರು. ಈ ಸ್ನೇಹ ಹಸೀನಾ ವಿರೋಧಿಗಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಭಾರತದ ಜೊತೆ ಯಾವುದೇ ಒಪ್ಪಂದವಾದರೂ ಬಾಂಗ್ಲಾಕ್ಕೆ ಅನ್ಯಾಯವಾಗಿದೆ ಎಂಬ ಕೂಗನ್ನು ವಿರೋಧಿಗಳು ಮಾಡುತ್ತಾ ಬಂದಿದ್ದಾರೆ. ಅದಕ್ಕೆ ಪಾಕಿಸ್ತಾನದ ಶಕ್ತಿಗಳೂ ಕುಮ್ಮಕ್ಕು ನೀಡುತ್ತಾ ಬಂದಿವೆ. ಬಾಂಗ್ಲಾದಲ್ಲಿ ಖಲೀದಾ ಜಿಯಾ ನೇತೃತ್ವದ ಬಿಎನ್‌ ಪಿಯಷ್ಟೆ ಪ್ರಬಲ ವಿರೋಧ ಶಕ್ತಿಯಾಗಿ ಪಾಕಿಸ್ತಾನ ಬೆಂಬಲಿತ ಜಮಾತ್ ಎ ಇಸ್ಲಾಮ್ ಬೆಳೆದಿದೆ. ಸಹಜವಾಗಿಯೇ ಈ ಸಂಘಟನೆ ಭಾರತದ ಭಾರತದ ನೆರವಿನಿಂದ. ಇದೇ ಕಾರಣಕ್ಕೆ ಹಿಂದಿನ ಪ್ರಧಾನಿ ಶೇಖ್ ಹಸೀನಾ ಅವರು ಭಾರತಕ್ಕೆ ತೀರಾ ಹತ್ತಿರವಾಗಿದ್ದರು. ಅಮೆರಿಕ, ಚೀನಾದ ಒತ್ತಡಗಳನ್ನು ಬದಿಗೆ ಸರಿಸಿ ಭಾರತದ ಜೊತೆ ಸ್ನೇಹ ವಿರುದ್ಧ ಸತತವಾಗಿ ಕತ್ತಿ ಮಸೆಯುತ್ತ ಬಂದಿದೆ. ಭಾರತ ಪರವಾದ ಹಸೀನಾಗೆ ಪಡೆದಿದ್ದರು. ಈ ಸ್ನೇಹ ಹಸೀನಾ ವಿರೋಧಿಗಳಿಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ದೊಡ್ಡ ವಿರೋಧ ಇರುವುದು ಈ ಸಂಘಟನೆಯಿಂದಲೇ.

ರಾಜೀನಾಮೆ ನೀಡಿದ ಹಸೀನಾ ಆಶ್ರಯ ಪಡೆದದ್ದು ಭಾರತದಲ್ಲಿ. ಈ ಬೆಳವಣಿಗೆ ಜಮಾತ್ ಮತ್ತು ಬಿಎನ್‌ಪಿಗೆ ಒಳ್ಳೆಯ ಆಹಾರ ಒದಗಿಸಿದೆ. ಹಸೀನಾ ಅವರನ್ನು ಬಾಂಗ್ಲಾಕ್ಕೆ ಒಪ್ಪಿಸಿ, ಇಲ್ಲವಾದರೆ ಎರಡೂ ದೇಶಗಳ ಬಾಂಧವ್ಯ ಕೆಡುತ್ತದೆ ಎಂಬ ಬೆದರಿಕೆಯನ್ನು ಒಡ್ಡಲಾಗಿದೆ. ಬಾಂಗ್ಲಾಕ್ಕೆ ವಾಪಸ್ ಬಂದು ವಿಚಾರಣೆ ಎದುರಿಸಬೇಕು ಎಂದು ಮಹಮದ್‌ ಯೂನಸ್ ಕೂಡ ಜಮಾತ್ ಮತ್ತು ಚಳವಳಿ ನಾಯಕತ್ವ ವಹಿಸಿದ್ದ ವಿದ್ಯಾರ್ಥಿನಾಯಕರ ಕರೆಗೆ ದನಿಗೂಡಿಸಿದ್ದಾರೆ. ಸದ್ಯಕ್ಕೆ ಈ ಒತ್ತಡಕ್ಕೆ ಭಾರತ ಮಣಿದಿಲ್ಲ. ಬಾಂಗ್ಲಾ ದೇಶದಲ್ಲಿ ಪ್ರಜಾತಂತ್ರ ಮಾರ್ಗದಲ್ಲಿ ಚುನಾವಣೆ ನಡೆದು ಸರ್ಕಾರವೊಂದು ಅಧಿಕಾರಕ್ಕೆ ಬಂದ ನಂತರ ಬಹುಶಃ ಭಾರತ ಆ ಬಗ್ಗೆ ಯೋಚಿಸಬಹುದು. ಅದಕ್ಕೆ ಮೊದಲು ಭಾರತ ಅಂಥ ಒತ್ತಾಯಕ್ಕೆ ಮಣಿಯುವ ಸಾಧ್ಯತೆ ಇಲ್ಲ. ತಮ್ಮ ಬೆಂಬಲ ಹೆಚ್ಚಿಸಿಕೊಳ್ಳಲು ಭಾರತದ ಈ ನಿಲುವು ಬಾಂಗ್ಲಾದ ಮೂಲಭೂತವಾದಿ ಸಂಘಟನೆಗಳಿಗೆ ಮತ್ತಷ್ಟು ಅವಕಾಶ ಕಲ್ಪಿಸಬಹುದು. ಆದರೆ ಅಂಥ ಬೆಳವಣಿಗೆ ಅಲ್ಲಿನ ಸರ್ಕಾರಕ್ಕೂ ಮಾರಕವಾಗುವುದನ್ನು ಮರೆಯುವಂತಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ಮೂಲಭೂತವಾದಿಗಳ ಕೈಬಲವಾಗದಂತೆ ನೋಡಿಕೊಳ್ಳಬೇಕಾದುದು ಸರ್ಕಾರದ ಕರ್ತವ್ಯ. ಸದ್ಯಕ್ಕೆ ಬಹುಸಂಖ್ಯಾತರ ಧ್ವನಿಯಾಗಿರುವುದು ಮಹಮದ್‌ ಯೂನಸ್ ಅವರಿಗೆ ಅನಿವಾರ್ಯವಾಗಿರಬಹುದು. ಆದರೆ ಕ್ರಮೇಣ ಅವರು ಆ ಬಲೆಯನ್ನು ಬಿಡಿಸಿಕೊಂಡು ಹೊರಬಂದು ಎಲ್ಲರ ನಾಯಕರಾಗಿ ರೂಪುಗೊಳ್ಳಬೇಕೆಂಬುದು ಭಾರತದ ನಿರೀಕ್ಷೆ, ಮುಂದಿನ ಆರು ತಿಂಗಳೊಳಗೆ ನಡೆಯಬೇಕಿರುವ ಚುನಾವಣೆಗಳಲ್ಲಿ ಎಲ್ಲ ಪಕ್ಷಗಳಿಗೂ ಅವಕಾಶ ಸಿಗಬೇಕು. ದ್ವೇಷದ ರಾಜ ಕಾರಣ ಅಂತ್ಯವಾಗಬೇಕು. ಆಗ ಮಾತ್ರ ದೇಶ ಅಭಿವೃದ್ಧಿ ದಿಸೆಯಲ್ಲಿ ದಾಪುಕಾಲು ಹಾಕಲು ಸಾಧ್ಯ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಮೈಸೂರು ದಸರಾ | ಯುವ ಸಂಭ್ರಮ ಉದ್ಘಾಟನೆಗೆ ವಿಜಯಪ್ರಕಾಶ್‌

ಮೈಸೂರು : ದಸರಾ ಮಹೋತ್ಸವಕ್ಕೆ ಆರಂಭದ ಮುನ್ನುಡಿಯಂತಿರುವ ಯುವ ಸಂಭ್ರಮಕ್ಕೆ ಈ ಬಾರಿ ಮೈಸೂರಿನ ಮನೆ ಮಗ ಖ್ಯಾತ ಗಾಯಕ…

9 hours ago

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

15 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

18 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

18 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

19 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

22 hours ago