ಎಡಿಟೋರಿಯಲ್

ಬಲಕ್ಕೆ ಹೊರಳಿದ ಇಟಲಿ, ಸ್ವೀಡನ್; ಯುರೋಪಿಗೆ ಅಪ್ಪಳಿಸಿದ ಹೊಸ ಅಲೆ

ಯೂರೋಪಿನ ಪ್ರಮುಖ ದೇಶಗಳಾದ ಇಟಲಿ ಮತ್ತು ಸ್ವೀಡನ್‌ನಲ್ಲಿ ಬಲಪಂಥೀಯರು ಅಧಿಕಾರಕ್ಕೆ ಬರಲಿದ್ದಾರೆ. ಈ ಬೆಳವಣಿಗೆ ಸಹಜವಾಗಿ ಯೂರೋಪಿನಲ್ಲಿ ಆತಂಕದ ಅಲೆಯನ್ನು ಎಬ್ಬಿಸಿದೆ. ಇಟಲಿಯಲ್ಲಿ ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಕಟ್ಟಾ ಬಲಪಂಥೀಯ ಜಾರ್ಜಿಯಾ ಮೇಲೋನಿ ಅವರ ನಾಯಕತ್ವದ ಬ್ರದರ್ಸ್ ಆಫ್ ಇಟಲಿ ಪಕ್ಷದ ನೇತೃತ್ವದ ಮೈತ್ರಿಕೂಟ ಬಹುಮತಗಳಿಸುವಲ್ಲಿ ಸಫಲವಾಗಿದ್ದರೆ ಸ್ವೀಡನ್‌ನಲ್ಲಿ ಮಾಡರೇಟ್ ಪಾರ್ಟಿಯ ಉಲ್ಫ್ ಕ್ರಿಸ್ಟರ್ಸನ್‌ಸನ್ ನೇತೃತ್ವದ ಮೈತ್ರಿ ಕೂಟ ಹೆಚ್ಚು ಸ್ಥಾನ ಗಳಿಸುವಲ್ಲಿ ಯಶಸ್ವಿಯಾಗಿದೆ.

ಈ ಬದಲಾವಣೆ ಭಿನ್ನ ರಾಜಕೀಯ ಪರಿಸ್ಥಿತಿ ಇರುವ ಮತ್ತು ಯೂರೋಪಿನ ಎರಡು ದಿಕ್ಕಿನಲ್ಲಿರುವ ದೇಶಗಳಲ್ಲಿ ಆಗಿರುವುದಾದರೂ ಕಾರಣಗಳು ಮಾತ್ರ ಬಹುಪಾಲು ಸಮಾನವಾಗಿ ಕಾಣುವುದರಿಂದ ಮತ್ತು ಇಂಥದೇ ಪರಿಸ್ಥಿತಿ ಯೂರೋಪಿನ ಇತರ ದೇಶಗಳಲ್ಲಿ ಕಂಡುಬಂದಿರುವುದರಿಂದ ಈ ಬೆಳವಣಿಗೆ ಮುಂದೆ ಬರಬಹುದಾದ ಪರಿಸ್ಥಿತಿಯ ಸೂಚನೆಯೇ ಎಂಬ ಪ್ರಶ್ನೆ ಈಗ ಬಹು ಮುಖ್ಯ ಚರ್ಚೆಯ ವಿಷಯವಾಗಿದೆ. ದೇಶೀಯ ಭಾವನೆಯುಳ್ಳ ರಾಷ್ಟ್ರೀಯವಾದ, ಸಂಪ್ರದಾಯವಾದ, ವಲಸೆ ವಿರೋಧಿ ನಿಲುವು, ಜಾಗತೀಕರಣ ವಿರೋಧೀ ವಾದ, ಇಟಲಿಯಲ್ಲಿ ಇಟಲಿ ಜನರಿಗೆ, ಅಂತೆಯೇ ಸ್ವೀಡನ್‌ನಲ್ಲಿ ಸ್ವೀಡನ್ ಜನರಿಗೆ ಮೊದಲ ಪ್ರಾಶಸ್ತ್ಯ ಮುಂತಾದ ಪೂರ್ಣ ಬಲಪಂಥೀಯ ಘೋಷಣೆಗಳನ್ನು ಜನರ ಮುಂದಿಟ್ಟು ಚುನಾವಣೆಗಳಲ್ಲಿ ಗೆಲುವು ಸಾಧಿಸಲಾಗಿದೆ.
ಇದೊಂದು ರೀತಿಯಲ್ಲಿ ನವಫ್ಯಾಸಿಸಂ (ನವ ಸರ್ವಾಧಿಕಾರ) ಹುಟ್ಟು ಎಂದು ಅನೇಕ ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ಹಾಗೆ ನೋಡಿದರೆ ಇಟಲಿಯ ಮೆಲೋನಿ ಅವರು ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿದ್ದ ಕ್ರೂರ ಸರ್ವಾಧಿಕಾರಿ ಮುಸಲೋನಿಯ ವಂಶಜರೆಂದು ಹೇಳಲಾಗಿದೆ. ಅಷ್ಟೇ ಅಲ್ಲ ಅವರ ಪಕ್ಷದ ಮೂಲ ಬೇರುಗಳು ಮುಸಲೋನಿ ಅವರ ಪಕ್ಷದಿಂದಲೇ ಬಂದಂಥವು ಎಂದೂ ಹೇಳಲಾಗಿದೆ. ಆದರೆ ಫ್ಯಾಸಿಸಂನ ಕ್ರೂರ ಮುಖಗಳನ್ನು ಮುಂದುವರಿಸುವುದಿಲ್ಲ, ತಮ್ಮ ನಿಲುವುಗಳಿಗೆ ಫ್ಯಾಸಿಸಂ ಮೂಲವಲ್ಲ, ದೇಶದ ಆಂತರಿಕ ಪರಿಸ್ಥಿತಿಯಿಂದ ಉದ್ಭವವಾದ ನಿಲುವುಗಳು ಎಂದು ಮೆಲೋನಿ ಅವರು ಸ್ಪಷ್ಟನೆ ನೀಡಿರುವರಾದರೂ ಅದನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ.
ವಲಸೆ ಜನರಿಗೆ ಸಂಬಂಧಿಸಿದಂತೆ ಯೂರೋಪ್ ಮೊದಲಿನಿಂದಲೂ ಸಡಿಲ ನಿಲುವು ತೆಗೆದುಕೊಂಡಿದೆ. ಅದೇ ರೀತಿ ಎಲ್‌ಜಿಬಿಟಿ ಸಮುದಾಯದ ಬಗ್ಗೆಯೂ ಯೂರೋಪಿನ ಎಲ್ಲ ದೇಶಗಳಲ್ಲಿ ಉದಾರ ನೀತಿಗಳಿವೆ. ಆದರೆ ಮೆಲೋನಿ ಈ ಎರಡೂ ವಿಷಯಗಳಿಗೆ ಸಂಬಂಧಿಸಿದಂತೆ ವಿರೋಧದ ನಿಲುವು ತಾಳಿದ್ದಾರೆ. ನಮ್ಮ ದೇಶ ಇರುವುದು ನಮಗಾಗಿಯೋ ಅಥವಾ ವಲಸೆ ಬಂದವರಿಗಾಗಿಯೋ ಎನ್ನುವಂಥ ಪ್ರಶ್ನೆಯನ್ನು ಮೆಲೋನಿ ಚುನಾವಣಾ ಪ್ರಚಾರ ಭಾಷಣಗಳಲ್ಲಿ ಕೇಳಿದ್ದಾರೆ. ಜಾಗತೀಕರಣದ ಹೆಸರಿನಲ್ಲಿ ನಾವು ಮಾರುಕಟ್ಟೆ ಸರಕಾಗಿ ಬಿಟ್ಟಿದ್ದೇವೆ, ನಮಗೆ ಅಸ್ತಿತ್ವವೇ ಇಲ್ಲ, ನಾವು ಮಾರುಕಟ್ಟೆಯಲ್ಲಿ ನಂಬರುಗಳಾಗಲು ಸಿದ್ಧರಿಲ್ಲ ಎಂದು ಕಟುವಾಗಿಯೇ ಜಾಗತೀಕರಣವನ್ನು ಅವರು ಟೀಕಿಸಿದ್ದಾರೆ. ಜಾಗತೀಕರಣದ ಬಗ್ಗೆ ಈಗ ಹಲವು ದೇಶಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.
ಅಭಿವೃದ್ಧಿಗೆ ಆದರ್ಶಮಯವಾದ ಮಾರ್ಗ ಎಂದು ಬಿಂಬಿಸಲಾಗಿದ್ದ ಜಾಗತೀಕರಣದಿಂದ ಹಲವು ದೇಶಗಳು ತೊಂದರೆಯೊಳಗಾಗಿವೆ. ಮುಕ್ತ ಹಣಕಾಸು ಮತ್ತು ಮಾರುಕಟ್ಟೆ ವ್ಯವಸ್ಥೆ ಕೆಲವೇ ಕೆಲವು ದೇಶಗಳಿಗೆ ನೆರವಾಗಿದೆಯೇ ಹೊರತು ಬಡ ಮತ್ತು ಅಭಿವೃದ್ಧಿಶೀಲ ದೇಶಗಳಿಗಲ್ಲ ಎನ್ನುವ ಟೀಕೆಗಳ ಹಿನ್ನೆಲೆಯಲ್ಲಿ ಜಾರ್ಜಿಯಾ ಮೆಲೋನಿ ಅವರ ಮಾತುಗಳು ಆ ದೇಶದಲ್ಲಿ ಮಾನ್ಯತೆ ಗಳಿಸಿಕೊಂಡಿವೆ.
ಇಟಲಿ ಅಭಿವೃದ್ಧಿ ಹೊಂದಿದ ದೇಶ. ಆದರೆ ರಾಜಕೀಯ ಸ್ಥಿರತೆ ಇಲ್ಲ. ಕಳೆದ ಎರಡು ದಶಕಗಳಲ್ಲಿ ೧೧ ಸರ್ಕಾರಗಳು ಅಧಿಕಾರಕ್ಕೆ ಬಂದಿವೆ. ಹತ್ತಾರು ಪಕ್ಷಗಳು ಅಸ್ತಿತ್ವದಲ್ಲಿರುವುದರಿಂದ ಯಾವ ಪಕ್ಷಕ್ಕೂ ಬಹುಮತ ಬರುವುದಿಲ್ಲ. ವಿವಿಧ ಪಕ್ಷಗಳ ನಡುವಣ ಅವಕಾಶವಾದಿ ಮೈತ್ರಿ ರಾಜಕೀಯ ವ್ಯವಸ್ಥೆಯನ್ನು ಎಷ್ಟು ಹಾಳುಗೆಡವಿದೆಯೆಂದರೆ ಅಲ್ಲಿ ಯಾರೂ ಒಂದೆರಡು ವರ್ಷಗಳಿಗಿಂತ ಹೆಚ್ಚು ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲದಂತಾಗಿದೆ. ಆದರೂ ಅಭಿವೃದ್ಧಿ ವಿಚಾರದಲ್ಲಿ ಹಿಂದೆಬಿದ್ದಿದ್ದಲ್ಲ. ಕೊರೊನಾ ಪಿಡುಗಿನಿಂದಾಗಿ
ಇಟಲಿ ತತ್ತರಿಸಿ ಹೋಗಿದೆ. ಅಪಾರವಾಗಿ ಸಾಲ ಮಾಡಿಕೊಂಡಿದೆ.
ಈಗ ಯುಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಇಂಧನ ಬಿಕ್ಕಟ್ಟು ತಲೆದೋರಿದೆ. ಬೇಡಿಕೆಯನ್ನು ತಲೆದೂಗಿಸಲು ಅಪಾರ ಹಣ ವೆಚ್ಚವಾಗಿದೆ. ಹಿಂದಿನ ಪ್ರಧಾನಿ ಮಾರಿಯೋ ಡ್ರಾಗಿ ಇನ್ನು ಮುಂದೆ ಸಾಲ ಮಾಡಲಾರೆ ಎಂದು ಪಟ್ಟು ಹಿಡಿದಿದ್ದರು. ಹೊಸ ಸರ್ಕಾರ ಮತ್ತಷ್ಟು ಸಾಲ ಮಾಡದೆ ದೇಶದ ಹಣಕಾಸು ಪರಿಸ್ಥಿತಿಯನ್ನು ಸುಧಾರಿಸಬೇಕಿದೆ.
ಇಟಲಿಯಲ್ಲಿ ವಲಸೆ ಬರುವವರದ್ದೇ ದೊಡ್ಡ ಸಮಸ್ಯೆ. ದೇಶ ಮೊದಲಿನಿಂದಲೂ ವಲಸೆ ವಿಚಾರದಲ್ಲಿ ಸ್ವಲ್ಪ ಸಡಿಲ ನೀತಿ ಅನುಸಿದ್ದರಿಂದಾಗಿ ರೊಮೇನಿಯಾ, ಆಲ್ಬೇನಿಯಾ, ಮೊರಕ್ಕೋ, ಪಾಕಿಸ್ತಾನ, ಬಾಂಗ್ಲಾದೇಶ , ಟ್ಯುನೀಶಿಯಾ, ಈಜಿಪ್ಟ್ ಮತ್ತು ಆಫ್ರಿಕಾ ದೇಶಗಳಿಂದ ಅದರಲ್ಲಿಯೂ ಯುದ್ಧಗಳ ಪ್ರದೇಶಗಳಿಂದ ಸಾಕಷ್ಟು ಜನರು ವಲಸೆ ಬರುತ್ತಿದ್ದಾರೆ. ಈಗಂತೂ ಆಫ್ರಿಕಾ ಮತ್ತು ಮುಸ್ಲಿಮ್ ದೇಶಗಳಿಂದ ವಲಸೆ ಹೆಚ್ಚಾಗಿದೆ. ಇದನ್ನು ನಿಯಂತ್ರಿಸಬೇಕೆಂಬುದು ಮೆಲೋನಿ ಅವರ ಆಗ್ರಹ. ಕಾನೂನು ಬದ್ಧವಲ್ಲದ ವಲಸೆಗೆ ಅವಕಾಶ ಕೊಡಕೂಡದೆಂಬ ಕಠಿಣ ನಿಲುವು ಅವರದು.
ಭಾರತದಿಂದಲೂ ಅದರಲ್ಲಿಯೂ ಪಂಜಾಬ್‌ನಿಂದ ಸಾಕಷ್ಟು ಮಂದಿ ವಲಸೆ ಹೋಗಿ ಅಲ್ಲಿ ನೆಲೆಸಿದ್ದಾರೆ. ಎಲ್ಲರಿಗೂ ಉದ್ಯೋಗ ಗ್ಯಾರಂಟಿ ಇಲ್ಲ. ಹೊಲ, ತೋಟಗಳಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದಾರೆ. ಮೆಲೋನಿ ಅವರ ಸರ್ಕಾರ ತಮ್ಮನ್ನು ದೇಶದಿಂದ ಹೊರಹಾಕಬಹುದೆಂಬ ಭೀತಿ ಭಾರತೀಯರಲ್ಲೇ ಇದೆ. ಇನ್ನು ಬೇರೆ ದೇಶಗಳಿಂದ ಬಂದವರ ಕಥೆ ಭಿನ್ನವಾಗಿರಲಾರದು. ವಲಸಿಗರನ್ನು ಹೊರಹಾಕುವ ಪ್ರಕ್ರಿಯೆ ಒಂದು ದೇಶದಲ್ಲಿ ಆರಂಭಿಸಿದರೆ ಬೇರೆ ದೇಶಗಳೂ ಅದನ್ನೇ ಮಾಡುತ್ತವೆ. ಆಗ ಅದೊಂದು ಅಂತಾರಾಷ್ಟ್ರೀಯ ಸಮಸ್ಯೆಯಾಗಬಹುದು.
ಸ್ವೀಡನ್ ಅಭಿವೃದ್ಧಿಹೊಂದಿದ ಸುಖೀ ದೇಶ. ನಿರುದ್ಯೋಗ ಕಡಿಮೆ. ಜನಕಲ್ಯಾಣ ಕಾರ್ಯಕ್ರಮಗಳು ಹೆಚ್ಚು. ವಲಸೆ ವಿಚಾರದಲ್ಲಿ ಹಿಂದಿನ ಸರ್ಕಾರಗಳು ಉದಾರ ನೀತಿ ಅನುಸರಿಸುತ್ತ ಬಂದದ್ದರಿಂದ ವಿಶ್ವದ ವಿವಿಧ ಭಾಗಗಗಳಿಂದ ಜನರು ವಲಸೆ ಬಂದು ನೆಲೆಸಿದ್ದಾರೆ. ಕಳೆದ ಎರಡು ದಶಕಗಳಲ್ಲಿ ಆಫ್ಘಾನಿಸ್ತಾನ, ಸಿರಿಯಾ, ಇರಾಕ್, ಲಿಬಿಯಾ ಮುಂತಾದ ಮುಸ್ಲಿಮ್ ದೇಶಗಳಲ್ಲಿ ಆಂತರಿಕ ಸಂಘರ್ಷ ಮತ್ತು ಮಿಲಿಟರಿ ಮತ್ತು ಉಗ್ರಗಾಮಿಗಳ ದಾಳಿಗಳಿಂದಾಗಿ ಜನರು ವಿಶ್ವದ ಹಲವು ಕಡೆ ವಲಸೆ ಹೋದರು. ಅದರಲ್ಲಿ ಮುಖ್ಯವಾಗಿ ನಾರ್ಡಿಕ್ ಪ್ರದೇಶಗಳಿಗೆ ಹೆಚ್ಚಿಗೆ ವಲಸೆ ಹೋದರು. ಸ್ವೀಡನ್‌ಗೆ ಹೆಚ್ಚಿನ ಪ್ರಮಾಣದಲ್ಲಿ ವಲಸೆಹೋಗಿ ನೆಲೆಸಿದರು.
ವಿವಿಧ ದೇಶಗಳಿಗೆ ಸೇರಿದ ಜನರು ಇಲ್ಲಿ ವಾಸಿಸಿರುವುದರಿಂದ ಸಮಸ್ಯೆಗಳು ಹೆಚ್ಚು. ಇತ್ತೀಚಿನ ವರ್ಷಗಳಲ್ಲಿ ಹಿಂಸಾಚಾರವೂ ಹೆಚ್ಚು. ಪ್ರತಿ ನಿತ್ಯ ಬಾಂಬ್ ಸ್ಫೋಟ ಪ್ರಕರಣಗಳು ನಡೆಯುತ್ತಲೇ ಇವೆ. ಸ್ಥಳೀಯ ಜನರು ಈಗ ಈ ಬಗ್ಗೆ ಅಸಹನೆ ತೋರಿಸುತ್ತಿದ್ದಾರೆ. ಚುನಾವಣೆಗಳಲ್ಲಿ ಹಳ್ಳಿಯ ಜನರು ಮತ್ತು ಹೊಸದಾಗಿ ಮತದಾನ ಹಕ್ಕು ಪಡೆದವರು ಬಲಪಂಥೀಯರಿಗೆ ಮತ ನೀಡಿರಬಹುದೆಂದು ಊಹಿಸಲಾಗಿದೆ. ಸಾಮಾನ್ಯವಾಗಿ ಎಡ, ಬಲ ಗದ್ದಲವಿಲ್ಲದ ರಾಜಕೀಯ ದೇಶದಲ್ಲಿ ಚಾಲ್ತಿಯಲ್ಲಿತ್ತು. ಆದರೆ ಈ ಬಾರಿ ಮಾಡರೇಟ್ ಪಾರ್ಟಿ ನೇತೃತ್ವದ ಮೈತ್ರಿ ಕೂಟ ವಲಸೆ ಮತ್ತು ಹಿಂಸಾಚಾರವನ್ನೇ ಮುಂದಿಟ್ಟುಕೊಂಡು ಎರಡನ್ನೂ ತಡೆಯುವುದಾಗಿ ಭರವಸೆ ನೀಡಿದ ಪರಿಣಾಮ ಕ್ರಿಸ್ಟರ್ಸನ್ ಪಕ್ಷ ಉತ್ತಮ ಮುನ್ನಡೆ ಸಾಧಿಸಿದೆ. ಸ್ವೀಡನ್ ಮೊದಲ ಮಹಿಳಾ ಪ್ರಧಾನಿಯಾಗಿದ್ದ ಮೆಗ್ದಲೀನಾ ಆಂಡರ್ಸನ್ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊಸದಾಗಿ ಪ್ರಧಾನಿಯಾಗುವ ಕ್ರಿಸ್ಟರ್ಸನ್‌ಗೆ ಮೊದಲು ಉತ್ತರ ಕಂಡುಕೊಳ್ಳಬೇಕಾದ ಹಲವು ಸವಾಲುಗಳಿವೆ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದರ ಮೇಲೇ ಅವರ ಭವಿಷ್ಯ ಅಡಗಿದೆ.
ಇದೇನೇ ಇದ್ದರೂ ಇಡೀ ಯೂರೋಪ್ ಅವರ ಆಡಳಿತವನ್ನು ಗಮನಿಸಲಿದೆ. ಭಾರತದಲ್ಲಿಯೂ ಇದೇ ರೀತಿಯ ಬಲಪಂಥ ಮೇಲುಗೈ ಸಾಧಿಸಿರುವುದನ್ನು ಗಮನಿಸಬಹುದು. ಇದು ಹಿಂದೂಗಳ ದೇಶ ಎಂದು ಹಿಂದೂ ಧಾರ್ಮಿಕ ಸನಾತನ ಮೌಲ್ಯಗಳನ್ನು ಪುನರ್ ಸ್ಥಾಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇಟಲಿ, ಸ್ವೀಡನ್‌ನಲ್ಲಿ ಕಂಡುಬಂದಂಥ ಮುಸ್ಲಿಮ್ ದ್ವೇಷವೂ ಭಾರತದಲ್ಲಿ ಬಲವಾಗಿ ನೆಲೆಯೂರಿಸುವ ಪ್ರಯತ್ನಗಳು ನಡೆಯುತ್ತಿವೆ. ಉದಾರವಾದಿ ಆಡಳಿತ ವ್ಯವಸ್ಥೆ ನಿಧಾನವಾಗಿ ಸರ್ವಾಧಿಕಾರಿ ವ್ಯವಸ್ಥೆಯಾಗಿ ಪರಿವರ್ತನೆಯಾಗುತ್ತಿದೆ. ಜಾಗತೀಕರಣ ಕ್ರಮೇಣ ದುರ್ಬಲಗೊಳ್ಳುತ್ತಿದ್ದು ಅರೆ ಸರ್ವಾಧಿಕಾರ ಸ್ಥಾಪನೆಯ ಸೂಚನೆಗಳು ಕಾಣಿಸುತ್ತಿವೆ. ಈ ಬದಲಾವಣೆ ಯೂರೋಪಿನಲ್ಲಿ ಅಷ್ಟೇ ಅಲ್ಲ ಏಷ್ಯಾದಲ್ಲಿಯೂ ಕಾಣಿಸಿಕೊಳ್ಳುತ್ತಿರುವುದು ಗಮನಿಸಬೇಕಾದ ಬೆಳವಣಿಗೆಯಾಗಿದೆ.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

3 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago