ಎಡಿಟೋರಿಯಲ್

ಗಣ್ಯರು ಆಗಮಿಸಿದರೆ ಮಾತ್ರ ದುರಸ್ತಿ, ಶುಚಿ ಕಾರ್ಯವೇ?

ಡಿಸೆಂಬರ್ ಮೊದಲ ಇಲ್ಲವೇ ಎರಡನೇ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಮರಾಜನಗರಕ್ಕೆ ಆಗಮಿಸಿ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸವಲತ್ತು ವಿತರಣೆ ಹಾಗೂ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಅದಕ್ಕಾಗಿ ಹಲವು ತಯಾರಿ ನಡೆದಿದೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಸಮಾರಂಭ ನಡೆಸಲು ಸಿದ್ದತೆ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಅವರು ಆಗಮಿಸುವ ರಸ್ತೆ ಮಾರ್ಗ ಮತ್ತು ಸಮಾರಂಭ ನಡೆಯುವ ಕ್ರೀಡಾಂಗಣವನ್ನು ಶುಚಿಗೊಳಿಸುವ ಕಾರ್ಯವನ್ನು ಸ್ಥಳೀಯ ನಗರಸಭೆ ಮತ್ತು ಲೋಕೋಪಯೋಗಿ ಇಲಾಖೆ ಕೈಗೆತ್ತಿಕೊಂಡಿದೆ. ನಗರಕ್ಕೆ ಸಂಪರ್ಕ ಕಲ್ಪಿಸುವ ಗುಂಡ್ಲುಪೇಟೆ ರಸ್ತೆ, ನಂಜನಗೂಡು ರಸ್ತೆ, ಸತ್ಯಮಂಗಲ ರಸ್ತೆ, ಸಂತೇಮರಹಳ್ಳಿ ರಸ್ತೆಗಳ ಪ್ರವೇಶ ದ್ವಾರಗಳಲ್ಲಿ ಸ್ವಾಗತ ಕಮಾನುಗಳಿಗೆ ಹೊಸ ರೂಪ ನೀಡಲಾಗುತ್ತಿದೆ.

ಸ್ವಾಗತ ಕಮಾನುಗಳ ಹಸಿರು ಬಣ್ಣ ಹಾಗೂ ಚಾಮರಾಜನಗರಕ್ಕೆ ಸ್ವಾಗತ ಎಂಬ ಅಕ್ಷರಗಳನ್ನು ಅಳಿಸಿ ನೀಲಿ ಬಣ್ಣ ಬಳಿದು ‘ಜಾನಪದ ಕಲೆಗಳ ತವರೂರು ಚಾಮರಾಜನಗರಕ್ಕೆ ಸ್ವಾಗತ’ ಎಂದು ಬರೆಸಲಾಗುತ್ತಿದೆ.

ಸತತ ಮಳೆಯಾದಾಗ ಕ್ರೀಡಾಂಗಣದಲ್ಲಿ ನೀರು ಹೊರ ಹೋಗದೆ ಸಂಗ್ರಹವಾಗಿ ಕೆಸರು ಗದ್ದೆಯಾಗುತ್ತದೆ. ಮುಖ್ಯಮಂತ್ರಿಗಳು ಪಾಲ್ಗೊಳ್ಳುವ ಕಾರ್ಯಕ್ರಮ ಆಯೋಜಿಸಿರುವುದರಿಂದ ಕ್ರೀಡಾಂಗಣದಲ್ಲಿ ನಿಂತಿದ್ದ ನೀರನ್ನು ಮತ್ತು ಕಳೆ ಗಿಡಗಳನ್ನು ತೆರವು ಮಾಡಲಾಗುತ್ತಿದೆ. ಜೆಸಿಬಿ ಮೂಲಕ ಕಂದಕ ನಿರ್ಮಿಸಿ ನೀರೆಲ್ಲ ಕ್ರೀಡಾಂಗಣದ ಪ್ರವೇಶ ದ್ವಾರದಲ್ಲಿರುವ ಒಳಚರಂಡಿಗೆ ಸಾಗುವಂತೆ ಕೆಲಸ ಮಾಡಲಾಗುತ್ತಿದೆ. ಈ ಕಂದಕದ ಉದ್ದಕ್ಕೂ ಸಿಮೆಂಟ್ ಪೈಪ್ ಅಳವಡಿಸಿ ಮಳೆ ನೀರು ಶಾಶ್ವತವಾಗಿ ಹೊರ ಹೋಗಲು ಕ್ರಮ ವಹಿಸಲಾಗುತ್ತಿದೆ.

ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರ ನಿರ್ದೇಶನದಂತೆ ವಿಶೇಷ ಅನುದಾನ ಬಳಸಿ ಕ್ರೀಡಾಂಗಣ ಶುಚಿಗೊಳಿಸುವ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದೊಂದು ಒಳ್ಳೆಯ ಕೆಲಸ ಎಂಬ ಸಮಾಧಾನವಿದೆ. ಮುಖ್ಯಮಂತ್ರಿ ಆಗಮಿಸುವ ನೆಪದಲ್ಲಿಯಾದರೂ ಕ್ರೀಡಾಂಗಣ ಶುಚಿ ಕಾರ್ಯ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಎರಡು ದಶಕಗಳ ಹಿಂದೆ ಕ್ರೀಡಾಂಗಣ ಕಾಮಗಾರಿ ಆರಂಭವಾಯಿತು. ಇನ್ನು ಪರಿಪೂರ್ಣ ಕ್ರೀಡಾಂಗಣವಾಗಿ ರೂಪುಗೊಂಡಿಲ್ಲ. ಇದಕ್ಕೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯೇ ಕಾರಣ.

ರಾಷ್ಟ್ರಪತಿ, ಪ್ರಧಾನ ಮಂತ್ರಿ, ಮುಖ್ಯಮಂತ್ರಿ ಮತ್ತು ಸಚಿವರು ಭೇಟಿ ನೀಡುತ್ತಾರೆ ಎಂದರೆ ಮಾತ್ರ ರಸ್ತೆಗಳು ದುರಸ್ತಿ ಆಗುತ್ತವೆ. ಅವರು ಪಾಲ್ಗೊಳ್ಳುವ ಸ್ಥಳ ಶುಚಿಗೊಳ್ಳುತ್ತವೆ. ಹಿಂದೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಕ್ಟೋರ್ಬ ನಲ್ಲಿ ನಗರದ ಹೊರವಲಯದ ಯಡಬೆಟ್ಟದಲ್ಲಿ ನಿರ್ಮಿಸಿದ್ದ ಚಾ.ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ (ಸಿಮ್ಸ್) ಬೋಧನಾ ಆಸ್ಪತ್ರೆಯ ಉದ್ಘಾಟನೆಗೆ ಆಗಮಿಸಿದ್ದರು. ಆಗ ನಗರದಿಂದ ಯಡಪುರ ಕ್ರಾಸ್ ತನಕ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿತ್ತು. ರಾಷ್ಟ್ರಪತಿ ಅವರು ಬಿಳಿಗಿರಿರಂಗನಬೆಟ್ಟದಿಂದ ಹೊಂಡರಬಾಳು, ನಾಗವಳ್ಳಿ, ಚಂದಕವಾಡಿ, ಚಾಮರಾಜನಗರ, ಉತ್ತವಳ್ಳಿ, ಯಡಪುರ ಕ್ರಾಸ್ ಮಾರ್ಗವಾಗಿ ಬೋಧನಾ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿದ್ದ ಎಲ್ಲ ರಸ್ತೆ ಡುಬ್ಬಗಳನ್ನು ತೆರವು ಮಾಡಲಾಗಿತ್ತು. ಆ ಮಾರ್ಗದಲ್ಲಿ ಓಡಾಡುವ ಪ್ರಯಾಣಿಕರು ರಾಷ್ಟ್ರಪತಿ ಆಗಮಿಸಿದ್ದಕ್ಕಾಗಿ ಅವೈಜ್ಞಾನಿಕ ರಸ್ತೆ ಡುಬ್ಬಗಳು ತೆರವಾದವು ಎಂದು ಸಮಾಧಾನಪಟ್ಟಿದ್ದರು.

ಎರಡು ದಶಕಗಳಿಂದಲೂ ಕ್ರೀಡಾಂಗಣವನ್ನು ಅಭಿವೃದ್ದಿ ಮಾಡಲಾಗುತ್ತಿದೆ. ಆದರೆ, ಸುಸಜ್ಜಿತ ಕ್ರೀಡಾಂಗಣವಾಗಲೇ ಇಲ್ಲ. ಅಳವಡಿಸಿರುವ ಸಿಂಥೆಟಿಕ್ ಟ್ರ್ಯಾಕ್ ಸದ್ಬಳಕೆ ಆಗುತ್ತಿಲ್ಲ. ಮಳೆಯಾದರೆ ಕ್ರೀಡಾಂಗಣವೆಲ್ಲ ನೀರು ನಿಂತು ತುಂಬಿಕೊಂಡು ಕಾಲಿಡಲು ಜಾಗವಿರುವುದಿಲ್ಲ. ಸಮೀಪವೇ ಇರುವ ಕ್ರೀಡಾ ಹಾಸ್ಟೆಲ್ಗೆ ಮಕ್ಕಳು ಹೋಗಿ ಬರಲು ಪರದಾಡುತ್ತಾರೆ. ಇದೆಲ್ಲ ಸ್ಥಳೀಯ ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಗೊತ್ತಿದೆ. ಆದರೆ, ಸಂಪೂರ್ಣವಾಗಿ ಅಭಿವೃದ್ದಿಪಡಿಸುವ ಕೆಲಸ ಮಾತ್ರ ನಡೆಯುತ್ತಿಲ್ಲ.

ಕ್ರೀಡಾಂಗಣವನ್ನು ಅಭಿವೃದ್ದಿ ಪಡಿಸಿ ಎಂದು ಕ್ರೀಡಾಪಟುಗಳು, ಸಾರ್ವಜನಿಕರು, ಸಮೂಹ ಮಾಧ್ಯಮಗಳು ಆಗ್ರಹ ಮಾಡುತ್ತಲೇ ಇವೆ. ಆದರೆ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಕೇಳಿಸಿಕೊಳ್ಳುತ್ತಲೇ ಇಲ್ಲ. ಅಧಿಕಾರಿಗಳನ್ನು ಕೇಳಿದರೆ ಅನುದಾನದ ಕೊರತೆ ಎನ್ನುತ್ತಾರೆ. ಜನಪ್ರತಿನಿಧಿಗಳನ್ನು ವಿಚಾರಿಸಿದರೆ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ ಎಂದು ಸರ್ಕಾರದತ್ತ ಬೊಟ್ಟು ಮಾಡಿ ಸುಮ್ಮನಾಗುತ್ತಾರೆ. ಬೇಗ ಅಭಿವೃದ್ದಿ ಮಾಡೋಣ ಎಂಬ ಕಾಳಜಿ ತೋರುತ್ತಿಲ್ಲ.

ಕಳೆದ ೨-೩ ತಿಂಗಳ ಅವಧಿಯಲ್ಲಿ ಜಿಲ್ಲಾದ್ಯಂತ ಧಾರಾಕಾರ ಮಳೆಯಾಗಿ ರಸ್ತೆ ಬದಿಗಳಲ್ಲಿ ಗಿಡಗಂಟಿಗಳು ಬೆಳೆದುನಿಂತಿವೆ. ಮುಖ್ಯಮಂತ್ರಿಗಳು ಆಗಮಿಸುವ ನಂಜನಗೂಡು- ಕವಲಂದೆ- ಚಾಮರಾಜನಗರ ರಸ್ತೆಯ ಬದಿಯಲ್ಲೂ ಬೆಳೆದು ನಿಂತಿವೆ. ಇವುಗಳನ್ನು ತೆರವು ಮಾಡಿಸಿ ಎಂದು ಸಾರ್ವಜನಿಕರು, ಪ್ರಯಾಣಿಕರು, ವಾಹನ ಸವಾರರು ಒತ್ತಾಯಿಸಿದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಕೇಳಿಸಲೇ ಇಲ್ಲ. ಮುಖ್ಯಮಂತ್ರಿ ಈ ಮಾರ್ಗದಲ್ಲಿ ಬರುತ್ತಾರೆ ಎನ್ನುತ್ತಿದ್ದಂತೆ ದುರಸ್ತಿ ಕಾರ್ಯ ನಡೆಯುತ್ತಿದೆ.

ಆಗಾಗ್ಗೆ ಚಾ.ನಗರಕ್ಕೆ ಮುಖ್ಯಮಂತ್ರಿ, ರಾಷ್ಟ್ರಪತಿ, ಪ್ರಧಾನಿ ಮಂತ್ರಿ ಬರಲಿ ರಸ್ತೆಗಳು ಸೇರಿದಂತೆ ಇತರೆ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂಬ ಮಾತು ಒಂದು ಕಡೆಯಾದರೆ, ಗಣ್ಯರು ಆಗಮಿಸಿದರೆ ಮಾತ್ರ ಕೆಲಸಗಳು ನಡೆಯುವುದಾದರೆ ಹೋರಾಟಕ್ಕೆ, ಜನರ ಒತ್ತಾಯಕ್ಕೆ ಬೆಲೆ ಇಲ್ಲವೇ ಎಂಬ ಪ್ರಶ್ನೆ ಕೇಳಿಬರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಎಂಬ ಘೋಷ ವಾಕ್ಯ ಅರ್ಥ ಕಳೆದುಕೊಂಡಿದೆಯೇ ?

 

andolana

Recent Posts

ಹುಣಸೂರಿನಲ್ಲಿ ಡ್ರಗ್ಸ್ ಪತ್ತೆಯಾಗಿದ್ದ ಪ್ರಕರಣ: ಮೂವರ ಬಂಧನ

ಮೈಸೂರು: ಹುಣಸೂರು ಬಳಿಯ ತೋಟದ ಮನೆಯೊಂದ ರಲ್ಲಿ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತಗಳನ್ನು ವಶಕ್ಕೆ ಪಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ…

28 seconds ago

ಮೈಸೂರು | ಗುಂಡೇಟಿನಿಂದ ಚಿರತೆ ಸಾವು ; ತನಿಖೆಗೆ ಈಶ್ವರ ಖಂಡ್ರೆ ಆದೇಶ

ಮೈಸೂರು : ಹುಣಸೂರು ವಿಭಾಗದ ಪಿರಿಯಾಪಟ್ಟಣ ವ್ಯಾಪ್ತಿಯ ಗುಳ್ಳೆದಹಳ್ಳ ರಾಜ್ಯ ಅರಣ್ಯದಿಂದ 2 ಕಿ.ಮೀ ದೂರದಲ್ಲಿರುವ ಕೊಪ್ಪ ವಿಭಾಗದಲ್ಲಿ ಗುಂಡೇಟಿನಿಂದ…

9 hours ago

ಶೀಘ್ರದಲ್ಲೇ ದ್ವಿತೀಯ ಪಿಯುಸಿ ಫಲಿತಾಂಶ : ಡಿಜಿಲಾಕರ್‌ನಲ್ಲೂ ಲಭ್ಯ

ಬೆಂಗಳೂರು : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ನಡೆಸಿದ 2025-2026ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ…

10 hours ago

ಏ.7ರಿಂದ ಮೂರು ದಿನ ಮಳೆ, ಮೈಸೂರಿಗೆ ಯೆಲ್ಲೋ ಅಲರ್ಟ್‌

ಬೆಂಗಳೂರು : ಕರ್ನಾಟಕದಲ್ಲಿ ಪೂರ್ವ ಮುಂಗಾರು ಏಪ್ರಿಲ್ 2 ನೇ ವಾರದಿಂದ ಚುರುಕಾಗುತ್ತಿದ್ದು, ಏಪ್ರಿಲ್ 7ರಿಂದ ಮೂರು ದಿನಗಳು ರಾಜ್ಯದಲ್ಲಿ…

10 hours ago

ಟ್ರಂಪ್ ಅಂತಿಮ ಗಡುವು ; ಪ್ರತಿದಾಳಿ ಎಚ್ಚರಿಕೆ ನೀಡಿದ ಇರಾನ್‌

ವಾಷಿಂಗ್ಟನ್ : ಒಪ್ಪಂದಕ್ಕೆ ಬನ್ನಿ, ಇಲ್ಲವೇ ಶರಣಾಗಿ, ಇಲ್ಲದಿದ್ದರೆ ಮಂಗಳವಾರ ರಾತ್ರಿ 8 ಗಂಟೆಯ ನಂತರ ಮತ್ತಷ್ಟು ಮಾರಕ ದಾಳಿ…

10 hours ago

ಕಸ್ಟಡಿ ಸಾವು | 9 ಮಂದಿ ಪೊಲೀಸರಿಗೆ ಮರಣದಂಡನೆ ; ಮಧುರೈ ಕೋರ್ಟ್‌ ಮಹತ್ವದ ತೀರ್ಪು

ಮದುರೈ : ತಮಿಳುನಾಡಿನ ತೂತುಕುಡಿ ಜಿಲ್ಲೆಯ ಶಾಂತನ್‌ಕುಲಂ ಪೊಲೀಸ್ ಠಾಣೆ ಕಸ್ಟಡಿಯಿಂದಲೇ ತಂದೆ,ಮಗ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸೋಮವಾರ…

11 hours ago