ರಾಜಸ್ಥಾನದ ಜಾಲೋರ್ ಜಿಲ್ಲೆಯ ಸುರಾನ ಎಂಬ ಹಳ್ಳಿಯ ಖಾಸಗೀ ಶಾಲೆಯಲ್ಲಿ ನೀರಿನ ಮಡಕೆ ಮುಟ್ಟಿದ ಕಾರಣಕ್ಕೆ ಇಂದರ್ ಮೇಘವಾಲ್ ಎಂಬ ೯ ವರ್ಷದ ಬಾಲಕನ ಮೇಲೆ ಶಾಲೆಯ ಶಿಕ್ಷಕನೊರ್ವ ಬರ್ಬರವಾಗಿ ಹಲ್ಲೆ ನಡೆಸಿದ ಕಾರಣ ಬಾಲಕ ಅಸು ನೀಗಿದ್ದ. ಆ ಘಟನೆ ಮರೆಯುವ ಮುನ್ನವೇ ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಉಲ್ಮೇರಹಳ್ಳಿಯಲ್ಲಿ ಗ್ರಾಮ ದೇವತೆ ಮೆರವಣಿಗೆ ವೇಳೆ ದೇವರ ವಿಗ್ರಹಕ್ಕೆ ಅಡಿಪಾಯವಾಗಿರುವ ಗುಜ್ಜುಕೋಲು ಕೆಳಗೆ ಬಿದ್ದಿದ್ದು, ದಲಿತ ಬಾಲಕನೊಬ್ಬ ಅದನ್ನು ಎತ್ತಿ ಕೊಟ್ಟಿದ್ದಕ್ಕೆ ದೇವರಿಗೆ ಮೈಲಿಗೆ ಆಯಿತು ಎಂದು ಅನಾಗರಿಕ ರೀತಿಯಲ್ಲಿ ಆ ಹುಡುಗನಿಗೆ ಹಿಗ್ಗ ಮುಗ್ಗ ಥಳಿಸಿ, ೬೦ ಸಾವಿರ ರೂ. ದಂಡ ಹಾಕಲಾಗಿದೆ. ಇವೆರಡು ಅಮಾನವೀಯ ಘಟನೆಗಳು ಮೇಲ್ನೋಟಕ್ಕೆ ಕಂಡ ಇತ್ತೀಚಿನ ಘಟನೆಗಳಷ್ಟೇ. ಇಂತಹ ಸಾವಿರಾರು ಘಟನೆಗಳು ನಡೆಯುತ್ತಲೇ ಇವೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇವೆ.
ನಾವಿಂದು ಸ್ವಾತಂತ್ರ್ಯದ ಅಮೃತ ಮಹೋತ್ಸವದ ವರ್ಷದಲ್ಲಿ ಇದ್ದೇವೆ. ಈ ಸಂಭ್ರಮದಲ್ಲಿರುವಾಗ ಅಸಹಾಯಕರ ಗೋಳು ಯಾವ ಕಿವಿಗಳಿಗೂ ತಟ್ಟುವುದಿಲ್ಲ. ಯಾರ ಲಕ್ಷ್ಯವು ಇಂತಹ ಕೃತ್ಯಗಳ ಕಡೆಗೆ ಬೀಳುವುದಿಲ್ಲ. ಯಾರೋ ಅನಾಗರಿಕ, ಅನಕ್ಷರಸ್ಥರು ಎಸಗುವ ಪರಿಯಲ್ಲಿಯೇ ಒಬ್ಬ ಶಿಕ್ಷಿತ ವ್ಯಕ್ತಿ ಅಥವಾ ಶಿಕ್ಷಿತ ಗುಂಪು ದೌರ್ಜನ್ಯವೆಸಗುತ್ತದೆಂದರೆ ದೇಶದ ಸ್ವಾತಂತ್ರ್ಯ ಯಾರಿಗೆ ದಕ್ಕಿದೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.
ನಾಡೋಜ ಕವಿ ಸಿದ್ಧಲಿಂಗಯ್ಯರವರ ‘ಯಾರಿಗೆ ಬಂತು, ಎಲ್ಲಿಗೆ ಬಂತು ೪೭ರ ಸ್ವಾತಂತ್ರ್ಯ’ ಎಂಬ ಕ್ರಾಂತಿಗೀತೆಯು ಪ್ರತಿ ಸ್ವತಂತ್ರ್ಯೋತ್ಸವ ದಿನಕ್ಕೆ ಪ್ರಸ್ತುತವಾಗುಳಿದಿದೆ. ಅವರು ನುಡಿದಂತೆ ದೇಶ ಪಡೆದ ಸ್ವಾತಂತ್ರ್ಯವು ‘ಜನರ ಗೊಳಿನ ಕಡಲನು ಬತ್ತಿಸಲಿಲ್ಲ, ಸಮತೆಯ ಹೂವನು ಅರಳಿಸಲಿಲ್ಲ’.
ಇಂದಿಗೂ ಉಳ್ಳವರು ಮತ್ತು ಇಲ್ಲದವರ ನಡುವೆ ಕಂದಕವಿದೆ. ಸಮತೆಯ ಆಶಯಗಳೊಂದಿಗೆ ಜಾರಿಯಾದ ಸಂವಿಧಾನದ ಆಶಯಗಳನ್ನು ಆಳುವ ವರ್ಗವು ಗಾಳಿಗೆ ತೂರಿ ಸಮಾಜವನ್ನು ಕಲುಷಿತವಾಗಿಸಿವೆ. ಇದಕ್ಕಾಗಿಯೆ ಅಂದು ಬಾಬಾಸಾಹೇಬ್ ಅಂಬೇಡ್ಕರರು ‘ನನ್ನ ಸಂವಿಧಾನವು ಥಾವತ್ತಾಗಿ ಜಾರಿಯಾಗುತ್ತದೆ ಎಂಬ ನಂಬಿಕೆ ಇಲ್ಲ’ ಎಂಬ ನೋವನ್ನು ತೋಡಿಕೊಂಡಿದ್ದರು. ಪ್ರತಿ ಬಾರಿ ಸ್ವಾತಂತ್ರ್ಯೋತ್ಸವ ಹಾಗೂ ಗಣರಾಜ್ಯೋತ್ಸವ ಬಂದಾಗಲೂ ನಮಗೆ ಸ್ವಾತಂತ್ರ್ಯವಾಗಲಿ, ಸವಲತ್ತಾಗಲಿ ತಲುಪಿದೆಯೇ ಎಂಬ ಪ್ರಶ್ನೆ ಮೂಡದಿರದು. ದೀನ-ದುರ್ಬಲರು ಜೀವಿಸಲು ಇಂದಿಗೂ ಕಷ್ಟ ಪಡುತ್ತಿರುವ ಪರಿಸ್ಥಿತಿಗಳು ನಮ್ಮ ಸುತ್ತಲು ಕಾಣಸಿಗುತ್ತವೆ.
ದೇಶ, ಧರ್ಮ, ವಸ್ತ್ರ ಹಾಗೂ ಗೋವು ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ಜನರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಎಲ್ಲಾ ದೌರ್ಜನ್ಯ- ದಬ್ಬಾಳಿಕೆಗಳಿಗೆ ಅಲ್ಪಸಂಖ್ಯಾತ ಹಾಗೂ ದುರ್ಬಲ ಸಮುದಾಯಗಳು ಬಲಿಯಾಗುತ್ತಿರುವುದು ನೋವಿನ ಸಂಗತಿ.
ಇಂದರ್ ಮೇಘವಾಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಸಭೆಯ ಮಾಜಿ ಸ್ಪೀಕರ್ ಮೀರಾ ಕುಮಾರ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ‘೧೦೦ ವರ್ಷಗಳ ಹಿಂದೆ ತಮ್ಮ ತಂದೆಯಾದ ಜಗಜೀವನ್ ರಾಮ್ ಅವರಿಗೂ ಶಾಲೆಯಲ್ಲಿ ಸವರ್ಣಿಯರಿಗೆ ಮೀಸಲಿರಿಸಿದ್ದ ಮಡಕೆಯಿಂದ ಕುಡಿಯಲು ನೀರು ಕೊಟ್ಟಿರಲಿಲ್ಲ, ಸ್ವತಂತ್ರ್ಯ ಬಂದು ೭೫ ವರ್ಷವಾದರೂ ಜಾತಿ ವ್ಯವಸ್ಥೆ ನಮ್ಮ ವಿರೋಧಿಯಾಗಿಯೇ ಉಳಿದಿದೆ’ಎಂದು ಅವಲತ್ತಿಕೊಂಡಿದ್ದರು. ತಮ್ಮ ತಂದೆಯನ್ನು ನೀನು ದೇಶದ ಸ್ವತಂತ್ರಕ್ಕಾಗಿ ಏಕೆ ಹೋರಾಡಿದೆ? ಈ ದೇಶ ನಮಗೇನು ನೀಡಿದೆ? ಎಂದು ಪ್ರಶ್ನಿಸಿದ್ದೆ ಎಂಬುದನ್ನು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೆ, ನನ್ನ ಪ್ರಶ್ನೆಗೆ ಸ್ವತಂತ್ರ ನಂತರದ ಭಾರತವು ಜಾತಿರಹಿತ ಸಮಾಜವಾಗಲಿದೆ ಎಂಬ ಆಶಾಭಾವನೆಯನ್ನು ನನ್ನ ತಂದೆ ವ್ಯಕ್ತಪಡಿಸಿದ್ದರು ಎಂದು ತಿಳಿಸಿದ್ದಾರೆ. ಇವೆಲ್ಲವನ್ನು ಗಮನಿಸಿದಾಗ ಸಮಾಜವು ದುರ್ಬಲ ಸಮುದಾಯಗಳನ್ನು ಜಾತಿಯ ಪೆಡಂಭೂತದಿಂದಾಗಿ ಸಮಾನ ಮನಸ್ಸಿನಿಂದ ಒಪ್ಪಿಕೊಳ್ಳುವುದಿಲ್ಲವೆಂಬುದು ಅರ್ಥವಾಗುತ್ತದೆ.
ಇತ್ತೀಚೆಗೆ ರಾಷ್ಟ್ರಪತಿಯಾಗಿ ಆಯ್ಕೆಯಾದ ದ್ರೌಪದಿ ಮುರ್ಮುರವರ ಕಛೇರಿಯಲ್ಲಿ ಪೂಜಾ ಕೈಂಕರ್ಯಗಳು ಜರುಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ. ಅಲ್ಲದೆ, ಅನೇಕರು ಆ ವಿಡಿಯೋವನ್ನು ಹಂಚಿಕೊಳ್ಳುವಾಗ ತಲೆಬರಹದಲ್ಲಿ ‘ಶುದ್ಧೀಕರಣ’ ಎಂಬ ಪದ ಬಳಕೆಯನ್ನು ಮಾಡಿರುವುದಿದೆ. ದೇಶದ ಮೊದಲ ಪ್ರಜೆಯಾದರೂ ಜಾತಿಗ್ರಸ್ಥ ಮನಸ್ಥಿತಿಯಿಂದಲೇ ಅವರನ್ನು ಕಾಣವುದು ಬಾಧಿಸುವಂತಹ ವಿಚಾರ. ಈ ರೀತಿಯ ಅಸಮಾನತೆ ಹಾಗೂ ಅನಿಷ್ಟಗಳ ಅರಿವು ರಾಷ್ಟ್ರಪತಿಗಳಿಗೆ ಇರಲಿಲ್ಲವೆಂದಲ್ಲ.
ಬಾಬಾಸಾಹೇಬ್ ಅಂಬೇಡ್ಕರರು ವಿದ್ಯಾರ್ಥಿಯಾಗಿದ್ದಾಗ ಕುಡಿಯುವ ನೀರಿಗಾಗಿ ಎದುರಿಸಿದ್ದ ಪರಿಸ್ಥಿತಿಯನ್ನು ಇಂದಿಗೂ ದುರ್ಬಲ ಸಮುದಾಯಗಳು ಎದುರಿಸುತ್ತಿವೆ. ಹಾಗೆಯೆ, ಅಂಬೇಡ್ಕರರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ತಮ್ಮ ಸಹೋದ್ಯೋಗಿ ಗಳಿಂದಲೂ ಕುಡಿವ ನೀರಿನ ನಿರಾಕರಣೆಯನ್ನು ಎದುರಿಸಿದ್ದರು. ಎಲ್ಲಾ ಅಸಮಾನತೆಗಳನ್ನು ಮೆಟ್ಟಿ ನಿಲ್ಲುವ ಮುನ್ನುಡಿಯಂತೆ ಮಾರ್ಚ್ ೨೦ ೧೯೨೭ರಲ್ಲಿ ಮಹಡ್ ಅಥವಾ ಚಾವ್ದಾರ್‌ಕೆರೆ ಹೋರಾಟವನ್ನು ಬಾಬಾಸಾಹೇಬರು ನಡೆಸಿದ್ದು ಎಲ್ಲರಿಗೂ ತಿಳಿದಿದೆ.
ಕೇವಲ ಕುಡಿಯುವ ನೀರಿಗೆ ಒಂದು ಜೀವವನ್ನು ಹರಣ ಮಾಡುವಷ್ಟು ಹೀನ ಮನಸ್ಸುಗಳು, ದೇವರನ್ನು ಮುಟ್ಟಿದ್ದಕ್ಕೆ ಹೀನಾಯವಾಗಿ ಥಳಿಸಿ ದಂಡ ವಿಧಿಸುವ ಅಮಾನವೀಯ ಮನಸ್ಸುಗಳು ನಮ್ಮ ನಡುವೆ ಬದುಕಿವೆ ಎಂದರೆ ನಾವೆಂತಹ ಸಮಾಜದಲ್ಲಿದ್ದೇವೆ ಎಂದು ಪ್ರಶ್ನಿಸಿಕೊಳ್ಳಬೇಕಿದೆ.
ದೇಶದಲ್ಲಿ ಜರುಗುತ್ತಿರುವ ದೌರ್ಜನ್ಯಗಳ ಅಂಕಿ ಅಂಶಗಳ ಕಡೆ ಲಕ್ಷ್ಯವಿತ್ತರೆ ವರ್ಷದಿಂದ ದೌರ್ಜನ್ಯ ಪ್ರಕರಣಗಳು ಏರುತ್ತಿವೆಯಾದರೂ ನೋಂದಾಯಿ ಸಿಕೊಳ್ಳುವ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿವೆ. ಅಂದರೆ, ದುಷ್ಕೃತ್ಯಗಳು ಕಡಿಮೆಯಾಗಿವೆ ಎಂದಲ್ಲ ಬದಲಿಗೆ ಪ್ರಕರಣಗಳನ್ನು ವ್ಯವಸ್ಥಿತವಾಗಿ ದಮನ ಮಾಡುತ್ತಿರುವ ವ್ಯವಸ್ಥೆ ನಮ್ಮದು.
ಎಷ್ಟೋ ಪ್ರಕರಣಗಳಲ್ಲಿ ದೌರ್ಜನ್ಯಕ್ಕೊಳಗಾದವರೆ ಅಪರಾಧಿಗಳಾಗಿ ಮಾರ್ಪಟ್ಟಿರುವುದು ಕಾಣಸಿಗುತ್ತವೆ. ಭಾರತೀಯ ಬಂಧಿಖಾನೆ ಅಂಕಿ-ಅಂಶಗಳ ೨೦೨೦ರ ವರದಿಯನ್ವಯ ೧,೧೨,೫೮೯ ಅಪರಾಧಿಗಳಿದ್ದು ಶೇ. ೩೫ರಷ್ಟು ಎಸ್.ಸಿ/ಎಸ್.ಟಿ ಸಮುದಾಯದವರು, ಶೇ. ೧೭ರಷ್ಟು ಅಪರಾಧಿಗಳು ಮುಸ್ಲಿಂ ಸಮುದಾಯದವರಿದ್ದಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆಯ ೨೦೨೦ರ ವರದಿಯನ್ವಯ ದೇಶದಲ್ಲಿ ಜರುಗುವ ದೌರ್ಜನ್ಯಗಳಲ್ಲಿ ಶೇ.೨೫%ರಷ್ಟು (೫೦೨೯೧) ದಲಿತ ಸಮುದಾಯಗಳ ಮೇಲೆಯೆ ಜರುಗಿವೆ. ಸುಮಾರು ೧.೨೮ ಲಕ್ಷ ದೌರ್ಜನ್ಯ ಪ್ರಕರಣಗಳು ಮಕ್ಕಳ ಮೇಲೆ ಜರುಗಿವೆ. ಒಟ್ಟಾರೆ, ಆರ್ಥಿಕವಾಗಿ ದುರ್ಬಲವಾದ ಸಮುದಾಯ ಗಳೇ ಅಪರಾಧಿಗಳಾಗಲು ಆರ್ಥಿಕ ದುರ್ಬಲತೆ ಹಾಗೂ ಕಾನೂನಿನ ಅರಿವಿನ ಕೊರತೆ ಕಾರಣ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಭಾರತದಲ್ಲಿ ಹಣಬಲ ಹಾಗೂ ರಾಜಕೀಯ ಬಲವಿದ್ದವರಿಗೆ ದೊರಕುವ ನ್ಯಾಯವು ಇವೆರಡು ಇಲ್ಲದ ಸಾಮಾನ್ಯರಿಗೆ ದೊರಕುವುದಿಲ್ಲ. ಉನ್ನಾವೋ ಸಂತ್ರಸ್ತೆ, ಬಿಲ್ಕಿಸ್ ಬಾನು, ದಾನಮ್ಮ ಮೊದಲಾದ ಪ್ರಕರಣಗಳಲ್ಲಿ ದೊರೆತ ನ್ಯಾಯ ನಿರ್ಭಯ, ಹೈದರಾಬಾದ್ ದಿಶಾ ಪ್ರಕರಣಗಳಲ್ಲಿ ದೊರೆತ ನ್ಯಾಯಕ್ಕೆ ವಿರುದ್ಧವಾಗಿರುವುದು ದಮನಿತ ಸಮುದಾಯಗಳ ಮೇಲೆ ಜರುಗುತ್ತಿರುವ ಅನ್ಯಾಯಗಳಿಗೆ ಸ್ಪಷ್ಟ ನಿದರ್ಶನವಾಗಿದೆ.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್ಹೌಸ್ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…