ಆಂದೋಲನ 50

ಕೆ.ಆರ್‌.ನಗರ ಸಾಧಕರಿಗೆ ಆಂದೋಲನ ಸನ್ಮಾನ

ಆಂದೋಲನ ದಿನಪತ್ರಿಕೆಯ 50 ವರ್ಷಗಳ ಸಾರ್ಥಕ ಪಯಣದ ಅಂಗವಾಗಿ ಕೆ.ಆರ್. ನಗರ ಮತ್ತು ಸಾಲಿಗ್ರಾಮ ತಾಲ್ಲೂಕುಗಳ ಅಭಿವೃದ್ಧಿ ಮುನ್ನೋಟದ ಸಂವಾದ ಕಾರ್ಯಕ್ರಮದಲ್ಲಿ ಇಂದು ತಾಲ್ಲೂಕಿನ ಇಬ್ಬರು ಸಾಧಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಇಬ್ಬರೂ ಸವಾಲುಗಳನ್ನು ಮೆಟ್ಟಿ ನಿಂತು ಬದುಕನ್ನು ರೂಪಿಸಿಕೊಂಡವರು. ಸಾಮಾನ್ಯರಾಗಿದ್ದುಕೊಂಡೇ ಅಸಾಮಾನ್ಯರಾದವರು.

ಗಾಣದ ಎಣ್ಣೆಯಲ್ಲಿ ಸ್ವಾವಲಂಬನೆ ಕಂಡ ನವೀನ್

ಮೈಸೂರು: ಕೆ.ಆರ್. ನಗರದ ಹೆಬ್ಬಾಳು ಹೋಬಳಿಯ ಅಡಗನಹಳ್ಳಿ ಗ್ರಾಮದಲ್ಲಿ ಐದು ವರ್ಷಗಳ ಹಿಂದೆ ( 2017) ಎತ್ತಿನ ಗಾಣದ ಮೂಲಕ ಅಡುಗೆ ಎಣ್ಣೆ ತಯಾರಿಸುವ ಘಟಕ ಸ್ಥಾಪಿಸಿದ ಎಚ್. ಆರ್. ನವೀನ್ ಕುಮಾರ್ ಅಂದು ಹುಚ್ಚು ಸಾಹಸಿ ಎನಿಸಿಕೊಂಡಿದ್ದರು. ಇಂದು ಸ್ಥಳೀಯ 100ಕ್ಕೂ ಹೆಚ್ಚು ಜನರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಲ್ಲದೆ ದೇಶಾದ್ಯಂತ ರಾಸಾಯನಿಕ ಮುಕ್ತ ಎಣ್ಣೆ ಪೂರೈಸುತ್ತಾ ತಮ್ಮ ಸಾಹಸಕ್ಕೆ ಶಹಬ್ಬಾಸ್ ಗಿರಿ ಪಡೆಯುತ್ತಿದ್ದಾರೆ.
ನವೀನ್ ಕುಮಾರ್ ಇಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಪಡೆದು ಸುಮಾರು 14 ವರ್ಷಗಳ ಕಾಲ ಐಟಿ ಕಂಪನಿಗಳಲ್ಲಿ ಉದ್ಯೋಗಿಯಾಗಿದ್ದವರು. ಗಾಂಧೀಜಿಯವರ ಸ್ವಾವಲಂಬನೆ ಮತ್ತು ಸ್ವದೇಶಿ ಚಿಂತನೆಗಳಿಂದ ಪ್ರಭಾವಿತರಾದ ಇವರು ಹಳ್ಳಿಗೆ ಮರಳಿ ಜನರಿಗೆ ಅನುಕೂಲವಾಗುವ ಕಿರು ಉದ್ಯಮ ಸ್ಥಾಪಿಸುವ ತುಡಿತದಲ್ಲಿದ್ದರು. ಸಹೋದ್ಯೋಗಿ ಸ್ನೇಹಿತರಾದ ಚಾಮರಾಜನಗರ ಮಹೇಶ್ ಮತ್ತು ಬೆಂಗಳೂರಿನ ಯೋಗೇಶ್ ಈ ಕಾರ್ಯದಲ್ಲಿ ಜತೆಗೂಡಿದರು. ಕೆ.ಆರ್. ನಗರದ ಅಡಗನಹಳ್ಳಿ ಗ್ರಾಮದಲ್ಲಿ ಎರಡು ಎಕರೆ ಜಮೀನು ಖರೀದಿಸಿ ಎತ್ತಿನ ಗಾಣದ ಮೂಲಕ ಅಡುಗೆ ಎಣ್ಣೆ ತೆಗೆಯುವ ಕೆಲಸ ಆರಂಭಿಸಿದರು.
ಆರಂಭದ ಎಲ್ಲ ಸವಾಲುಗಳನ್ನು ಮೀರಿ ಈಗ ಇವರ ಸಾಹಸ ಯಶಸ್ಸಿನತ್ತ ಹೆಜ್ಜೆ ಹಾಕಿದೆ. ಮೂರು ಲಕ್ಷ ರೂ. ಬಂಡವಾಳದೊಂದಿಗೆ ಆರಂಭಿಸಿದ ಒಂದು ಗಾಣ ಈಗ ಏಳು ಗಾಣಗಳಿಗೆ ವಿಸ್ತರಿಸಿದೆ. ಜತೆಗಿದ್ದ ಸ್ನೇಹಿತರೂ ತಮ್ಮ ತಮ್ಮ ಊರುಗಳಲ್ಲಿ ಎಣ್ಣೆ ಗಾಣಗಳನ್ನು ತೆರೆದಿದ್ದಾರೆ. ಕಡ್ಲೆ ಎಣ್ಣೆ, ಕೊಬ್ಬರಿ, ಎಳ್ಳೆಣ್ಣೆ, ಹುಚ್ಚೆಳ್ಳು ಎಣ್ಣೆಯಿಂದ ಆರಂಭವಾದ ಗಾಣದಲ್ಲಿ ಈಗ ಸುಮಾರು 9 ಬಗೆಯ ಎಣ್ಣೆಗಳನ್ನು ತೆಗೆಯಲಾಗುತ್ತಿದೆ. ಎಣ್ಣೆಯ ಜತೆಗೆ ಶುದ್ಧ ಅರಿಶಿನ ಪೌಡರ್, ಶುಂಠಿ ಪೌಡರ್ , ಇತ್ಯಾದಿ 60ಕ್ಕೂ ಹೆಚ್ಚು ದಿನಸಿ ಪದಾರ್ಥಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ.
ಈಗ ಇವರ ‘ದೇಸಿರಿ’ ಉತ್ಪನ್ನಗಳು ಹೊರ ರಾಜ್ಯಗಳಲ್ಲೂ ಜನಪ್ರಿಯವಾಗಿವೆ. ಆ್ಯಪ್ ಮೂಲಕವೂ ಬುಕ್ಕಿಂಗ್ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಗಾಜಿನ ಬಾಟಲಿಗಳಲ್ಲಿ ಎಣ್ಣೆ ಪೂರೈಸುತ್ತಿರುವುದರಿಂದ ಪ್ಲಾಸ್ಟಿಕ್ ಬಳಕೆಯನ್ನು ತಡೆಯಲಾಗಿದೆ. ʼದೇಸಿರಿʼ ಉತ್ನನ್ನಗಳ ಮಾರಾಟದಲ್ಲಿ ಮಧ್ಯವರ್ತಿಗಳಿಗೆ ಅವಕಾಶವಿಲ್ಲ. ಸ್ಥಳೀಯರು ಇವರಿಂದ ನೇರವಾಗಿ ಖರೀದಿ ಮಾಡುತ್ತಿದ್ದಾರೆ. ಮೈಸೂರು ಮತ್ತು ಬೆಂಗಳೂರಿನ ಗ್ರಾಹಕರ ಮನೆ ಬಾಗಿಲಿಗೆ ಎಣ್ಣೆ ಮತ್ತು ಕಲಬೆರಕೆರಹಿತ ದಿನಸಿ ಪದಾರ್ಥಗಳನ್ನು ಪೂರೈಸಲಾಗುತ್ತಿದೆ. ಹೊರರಾಜ್ಯದವರಿಗೆ ಸ್ಟೀಲ್ ಟಿನ್ ಮೂಲಕ ಎಣ್ಣೆ ಕೊರಿಯರ್ ಮಾಡಲಾಗುತ್ತಿದೆ.
ದೇಶದ ಖಾದ್ಯ ಎಣ್ಣೆ ಉದ್ಯಮ ವಾರ್ಷಿಕ ಮೂರು ಲಕ್ಷ ಕೋಟಿ ರೂ. ವಹಿವಾಟು ನಡೆಸುತ್ತಿದೆ. ಆದರೆ ಕಂಪನಿಗಳ ಹಿಡಿತದಲ್ಲಿರುವ ಎಣ್ಣೆ ಉದ್ಯಮದಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಜನರ ಆರೋಗ್ಯವೂ ಹಾಳಾಗುತ್ತಿದೆ. ಇಡೀ ದೇಶದ ಜನತೆ ಗಾಣದ ಎಣ್ಣೆ ಬಳಸಿದರೆ ದೇಹದ ಸ್ವಾಸ್ಥದ ಜತೆಗೆ ಹಳ್ಳಿಗಳ ಮತ್ತು ದೇಶದ ಆರ್ಥಿಕತೆಯ ಸ್ವಾಸ್ಥ್ಯ ಉಳಿಸಬಹುದು ಎನ್ನುವುದು ಇವರ ಆಶಯ. ಈ ನಿಟ್ಟಿನಲ್ಲಿ ನಾನಾ ಕಡೆಗಳಲ್ಲಿ ಗಾಣದ ಎಣ್ಣೆಯ ಪ್ರಚಾರವನ್ನೂ ನಡೆಸುತ್ತಿದ್ದಾರೆ. ನವೀನ್ ತಮ್ಮ ಸಾಧನೆಗಾಗಿ ರಾಜ್ಯ ಮಟ್ಟದ ಕೃಷಿ ಪಂಡಿತ (ಕೃಷಿ ಸಂಸ್ಕರಣೆ) ಪ್ರಶಸ್ತಿಗೆ ಪಾತ್ರರಾಗಿದ್ದಾರೆ.


ಅಶಕ್ತರ ಸೇವೆಯಲ್ಲಿ ಸಾರ್ಥಕತೆ ಕಾಣುವ ಹೇಮಂತಕುಮಾರ್

ಮೈಸೂರು: ಕೃಷ್ಣರಾಜನಗರ ಪಟ್ಟಣದ ಕಾಟ್ನಾಳು ಲಕ್ಕೇಗೌಡ ಹೇಮಂತಕುಮಾರ್ ಹುಟ್ಟಿನಿಂದಲೇ ವಿಕಲಚೇತನರು. ಕಾಲಿನ ಸಮಸ್ಯೆಗೆ ಒಳಗಾದವರು. ಮನೆಯಲ್ಲಿ ಮಗನಿಗೆ ಹೀಗೆ ಆಯಿತಲ್ಲ ಎಂದುಕೊಂಡು ಪೋಷಕರು ಎಂದೂ ಕೊರಗಲಿಲ್ಲ. ಮಗನಿಗೆ ಶಿಕ್ಷಣ ಕೊಡಿಸಿದರು. ಬಿಎಸ್ಸಿ ಪದವಿ ಮುಗಿಸಿದ ಹೇಮಂತ್ಕುಮಾರ್ ತಮ್ಮನ್ನು ತಾವು ಸಮಾಜ ಸೇವೆಗೆ ಅರ್ಪಿಸಿಕೊಂಡರು. ಇವರ ತಂದೆ ಕೆ.ಆರ್.ಲಕ್ಕೇಗೌಡರು ಕನ್ನಡ ಅಧ್ಯಾಪಕರಾಗಿ, ಪುರಸಭೆ ಸದಸ್ಯರಾಗಿ ಸಮಾಜದ ಪರವಾಗಿ ಕೆಲಸ ಮಾಡಿದವರು. ತಂದೆಯ ಹಾದಿಯನ್ನೇ ತುಳಿದ ಹೇಮಂತ್ ಅವರು ತಮ್ಮ ಸುತ್ತಮುತ್ತಲ ಅಶಕ್ತರ ಪಾಲಿನ ಆಪದ್ಬಾಂಧವರಾದರು.
ಕೆ.ಆರ್.ನಗರ, ಸಾಲಿಗ್ರಾಮ ತಾಲ್ಲೂಕಿನ ಯಾವುದೇ ವಿಕಲಚೇತನರು, ಅಬಲೆಯರು, ವೃದ್ದರು, ವಿಧವೆಯರು ತಮಗೆ ಸಿಗುವ ಮಾಸಾಶನ, ಪಾಸ್ ಸೇರಿ ಇತರೆ ಸವಲತ್ತುಗಳಿಗಾಗಿ ಕಚೇರಿಗೆ ಅಲೆಯುವ ಅಗತ್ಯವೇ ಇಲ್ಲ. ಅವರ ಮನೆ ಮಗನಂತೆ ಹೇಮಂತ್ಕುಮಾರ್ ಸದಾ ನಿಲ್ಲುತ್ತಾರೆ. ಬೆಳಗ್ಗೆ ಸೈಕಲ್ ಏರಿ ಹೊರಡುವ ಹೇಮಂತ್, ಅವರ ದಾಖಲೆಗಳನ್ನು ತೆಗೆದುಕೊಂಡು ಮೈಸೂರಿಗೆ ಬಂದು ಕಚೇರಿಗಳಲ್ಲಿ ಖುದ್ದು ತಾವೇ ನಿಂತು ಕೆಲಸ ಮಾಡಿಸಿಕೊಂಡು ಹೋಗಿ ಫಲಾನುಭವಿಗಳಿಗೆ ತಲುಪಿಸುತ್ತಾರೆ. ಇದು ೨೦ ವರ್ಷಕ್ಕೂ ಹೆಚ್ಚು ಕಾಲದಿಂದ ನಡೆದುಕೊಂಡು ಬಂದಿದೆ. ಈವರೆಗೆ ಸಹಸ್ರಾರು ಮಂದಿಗೆ ನೆರವಾಗಿದ್ದಾರೆ. ಯಾರಿಂದಲೂ ಹಣ ಪಡೆಯುವುದಿಲ್ಲ, ಮೋಸ ಮಾಡುವುದಿಲ್ಲ ಎನ್ನುವ ವಿಶ್ವಾಸದಿಂದ ಅಧಿಕಾರಿಗಳು ಹೇಮಂತ್ ಅವರು ತಂದ ದಾಖಲೆಗಳನ್ನು ಬೇಗನೇ ಮುಗಿಸಿಕೊಡುತ್ತಾರೆ. ಹಲವು ವರ್ಷಗಳಿಂದ ಹೇಮಂತ್ಕುಮಾರ್ ವಿಕಲಚೇತನರ ಜನತಾದರ್ಶನ ರೂಪಿಸುತ್ತಾ ಸೇವೆ ನೀಡುತ್ತಿದ್ದಾರೆ. ಕೆ.ಆರ್. ನಗರ ತಾಲ್ಲೂಕು ಅಂಗವಿಲಕರು, ವಿಧವೆಯರು, ವೃದ್ದರ ಸಂಘದ ಅಧ್ಯಕ್ಷರಾಗಿಯೂ ಹೇಮಂತ್ ಕುಮಾರ್ ಕಾರ್ಯನಿರ್ವಹಿಸುತ್ತಿದ್ದಾರೆ. ದೀನದಲಿತರಲ್ಲಿ ದೇವರನ್ನು ಕಾಣುವ ಹೇಮಂತ್ ಅಶಕ್ತರ ಪಾಲಿನ ಆಶಾಕಿರಣವಾಗಿದ್ದಾರೆ.

andolanait

Recent Posts

ಬರ ನಿರ್ವಹಣೆಗೆ ಕೇಂದ್ರದ ನೆರವು: ಪ್ರಧಾನಿ ಮೋದಿ ಭೇಟಿಗೆ ಸಿಎಂ ಡಿಕೆಶಿ ಸಿದ್ಧತೆ

ಬೆಂಗಳೂರು: ಕಾವೇರಿ ಹಾಗೂ ತುಂಗಭದ್ರಾ ನದಿಗಳಲ್ಲಿ ನೀರಿನ ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ, ಬರ ನಿರ್ವಹಣೆಗೆ ಕೇಂದ್ರದ ನೆರವು ಕೋರಿ ಪ್ರಧಾನಿ…

43 seconds ago

ರಾಜ್ಯದಲ್ಲಿ ಮುಂದಿನ ಐದು ದಿನ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಐದು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಾಮರಾಜನಗರ,…

27 mins ago

ನಾಡಿನಿಂದ ಕಾಡಿನತ್ತ ದಸರಾ ಗಜಪಡೆ: ಪೂಜೆ ಸಲ್ಲಿಸಿ ಬೀಳ್ಕೊಡುಗೆ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ ಬೆನ್ನಲ್ಲೇ, ದಸರಾ ಗಜಪಡೆ ನಾಡಿನಿಂದ ಕಾಡಿನತ್ತ ಹೊರಟಿವೆ. ಮೈಸೂರು ಅರಮನೆಯ…

2 hours ago

ಮಾಂಬಳ್ಳಿಯಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆ: ಜಮೀನಿಗೆ ತೆರಳಲು ರೈತರ ಆತಂಕ

ಯಳಂದೂರು: ತಾಲ್ಲೂಕಿನ ಮಾಂಬಳ್ಳಿ ಗ್ರಾಮದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ರೈತರು ಹಾಗೂ ಕೃಷಿ ಕೂಲಿ ಕಾರ್ಮಿಕರಲ್ಲಿ ಆತಂಕ ಮೂಡಿಸಿದೆ.…

3 hours ago

ಜಂಬೂಸವಾರಿ ಯಶಸ್ವಿ: ಗಜಪಡೆಗೆ ತೂಕ ಪರೀಕ್ಷೆ: 6,105 ಕೆಜಿಯ ಸುಗ್ರೀವನೇ ನಂ.1!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಯಶಸ್ವಿಯಾಗಿ ನೆರವೇರಿದ್ದು, ಇಂದು ಬೀಳ್ಕೊಡುಗೆ ಕಾರ್ಯಕ್ರಮಕ್ಕೂ ಮುನ್ನ ದಸರಾ ಗಜಪಡೆಗೆ…

4 hours ago

ಓದುಗರ ಪತ್ರ: ಇಲ್ಲಿ ಪಾದಚಾರಿ ಮಾರ್ಗವೇ ಇಲ್ಲ!

ಮಂಡ್ಯ ನಗರದ ಬನ್ನೂರು ರಸ್ತೆಯಲ್ಲಿ ಎಂವಿಜಿ ಬೇಕರಿಯಿಂದ ಗೌರಿಶಂಕರ ಕಲ್ಯಾಣ ಮಂಟಪದವರೆಗೆ ಇರುವ ರಸ್ತೆಗೆ ಫುಟ್‌ಪಾತ್ ಅನ್ನೇ ನಿರ್ಮಿಸಿಲ್ಲ. ಈ…

6 hours ago