ಎಡಿಟೋರಿಯಲ್

ಅನಾಥ ಮಕ್ಕಳಿಗೆ ತಾಯಿ ತಂದೆಯಾದ ರಾಜಲಕ್ಷ್ಮಿ-ಖಾಸೀಂ

 ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ ಎಂದು ನಂಬಿ ಅನಾಥ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವ ದಂಪತಿಗಳು 

ಪಂಜುಗಂಗೊಳ್ಳಿ- ಈ ಜೀವ ಈ ಜೀವನ

ನಲ್ವತ್ತು ವರ್ಷಗಳ ಹಿಂದೆ ಆಂಧ್ರಪ್ರದೇಶದ ಓಂಗೋಲೆಯ ಪಿ ರಾಜಲಕ್ಷ್ಮಿ ಮತ್ತು ಯೆರಾಗೊಂಡಾಪಾಲಂನ ಎಸ್‌ಎಂಡಿ ಖಾಸೀಂ, ಸಿಎಸ್‌ಆರ್ ಕಾಲೇಜಿನಲ್ಲಿ ಕಲಿಯುತ್ತಿರುವಾಗ ಪರಸ್ಪರ ಪ್ರೇಮಿಸಿ ಮದುವೆಯಾದರು. ಆದರೆ, ಅವರದ್ದು ಅಂತರ ಧರ್ಮೀಯ ಮದುವೆಯಾದುದರಿಂದ ಇಬ್ಬರ ಕುಟುಂಬಗಳೂ ಅದಕ್ಕೆ ಸಮ್ಮತಿಸಲಿಲ್ಲ. ಧರ್ಮ ಅಥವಾ ತಮ್ಮ ಕುಟುಂಬಕ್ಕಾಗಿ ತಮ್ಮ ಪ್ರೀತಿಯನ್ನು ಬಿಡಲು ತಯಾರಿಲ್ಲದ ರಾಜಲಕ್ಷ್ಮಿ ಮತ್ತು ಖಾಸೀಂ, ಸಂಬಂಧಿಕರಿಂದ ಪ್ರತ್ಯೇಕಗೊಂಡು ಸಂಸಾರ ಹೂಡಿದರು.

ಏಕಾಏಕೀ ತಮ್ಮ ಆಪ್ತರು, ಬಂಧುಬಳಗದಿಂದ ದೂರವಾಗಿ ಬದುಕುವುದು ಇಬ್ಬರಿಗೂ ಮಾನಸಿಕವಾಗಿ ಕಷ್ಟವಾದರೂ, ಇಬ್ಬರೂ ಸರ್ಕಾರೀ ಉದ್ಯೋಗಸ್ಥರಾದುದರಿಂದ ಬದುಕು ನಡೆಸಲು ಏನೂ ತೊಂದರೆ ಆಗಲಿಲ್ಲ.

ಪ್ರಾರಂಭದಲ್ಲಿ ಬಾಡಿಗೆ ಮನೆಯಲ್ಲಿರಬೇಕಾಗಿ ಬಂದ ಅವರಿಗೆ ಗಂಡ ಮುಸ್ಲಿಂ ಎಂಬ ಕಾರಣಕ್ಕೆ ಮನೆಗಳು ಸುಲಭದಲ್ಲಿ ಸಿಗುತ್ತಿರಲಿಲ್ಲ. ಆಗ ಒಬ್ಬರು ಕಮ್ಯುನಿಸ್ಟ್ ನಾಯಕರು ಅವರಿಗೆ ಬಾಡಿಗೆ ಮನೆ ಕೊಡಿಸಲು ಸಹಾಯ ಮಾಡಿದರು. ಬಂಧುಬಳಗದ ಜೊತೆ ಸ್ನೇಹಿತರೂ ತಮ್ಮಿಂದ ದೂರವಾದ ಕಾರಣಕ್ಕೆ ಮುಂದೆ ಮಕ್ಕಳಾದರೆ ಅವರಿಗೆ ಬದುಕು ದುಸ್ತರವಾಗಬಹುದೆಂದು ಆಲೋಚಿಸಿ ಅವರು ಪ್ರಾರಂಭದಲ್ಲಿ ಮಕ್ಕಳು ಬೇಡವೆಂದು ನಿರ್ಧರಿಸಿದ್ದರು.

ಆದರೆ, ಮುಂದೆ ಅವರಿಗೊಬ್ಬ ಮಗ ಹುಟ್ಟಿದನು. ಆತ ಈಗ ಇಂಗ್ಲೆಂಡಿನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದಾನೆ. ಮಗ ಚಿಕ್ಕವನಾಗಿದ್ದಾಗ ಅವನು ತನ್ನ ಅಜ್ಜ ಅಜ್ಜಿಯರನ್ನು ಕಾಣದೆ ಬೆಳೆಯಬೇಕಾಯಿತೆಂಬ ಬಗ್ಗೆ ದಂಪತಿಗಳಿಗೆ ತುಂಬಾ ವ್ಯಥೆಯಾಗಿತ್ತು. ಹೀಗೇ ವರ್ಷಗಳು ಕಳೆದವು. ತಮ್ಮ ನಿವೃತ್ತಿಗೆ ಇನ್ನು ಹತ್ತುಗಳಷ್ಟೆ ಬಾಕಿ ಇವೆ ಎಂಬುದು ಅವರ ಗಮನಕ್ಕೆ ಬಂದಾಗ ತಮ್ಮ ನಿವೃತ್ತಿ ಬದುಕು ಕೂಡಾ ಬಂಧುಬಳಗದಿಂದ ಹೀಗೆಯೇ ದೂರವಾಗಿ ಕಳೆಯುತ್ತದಲ್ಲ ಎಂಬ ಆಲೋಚನೆ ಅವರ ಮನಸ್ಸನ್ನು ಕೊರೆಯತೊಡಗಿತು. ತಮ್ಮ ನಿವೃತ್ತಿ ಜೀವನವನ್ನು ಹೀಗೆ ಏಕಾಂಗಿಯಾಗಿ ಕಳೆಯಲಿಚ್ಚಿಸದ ಅವರು ಅದರಿಂದ ಪಾರಾಗಲು ದಾರಿ ಹುಡುಕತೊಡಗಿದರು. ಆಗ ಅವರಿಗೆ ಹೊಳೆದದ್ದು ನಿರ್ಗತಿಕ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು.

ಆ ಆಲೋಚನೆ ಬಂದದ್ದೇ ರಾಜಲಕ್ಷ್ಮಿ ಮತ್ತು ಖಾಸೀಂ ತಕ್ಷಣವೇ ಆ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.

೨೦೧೧ರಲ್ಲಿ ಅವರು ತಮ್ಮ ಐದು ಎಕರೆ ಜಾಗದಲ್ಲಿ ‘ಮಾನಲೋ ಮಾನಂ’ ಎಂಬ ಹೆಸರಿನ ಒಂದು ಎನ್‌ಜಿಒವನ್ನು ಪ್ರಾರಂಭಿಸಿದರು. ಮಾನಲೋ ಮಾನಂನಲ್ಲಿ ಮೂರು ಮನೆಗಳಿವೆ-‘ಬೊಮ್ಮರಿಲ್ಲು’ ಎಂಬ ಬಾಲಕರ ಮನೆ, ‘ಜಬಿಲ್ಲಿ’ ಎಂಬ ಬಾಲಕಿಯರ ಮನೆ ಮತ್ತು ‘ಪೊಡರಿಲ್ಲು’ ಎಂಬ ಹಿರಿಯರ ಮನೆ. ದಂಪತಿಗಳು ತಮ್ಮ ಉಳಿತಾಯದ ಸಂಪೂರ್ಣ ಹಣ ಮತ್ತು ರಾಜಲಕ್ಷ್ಮಿಯವರಿಗೆ ಬರುತ್ತಿದ್ದ ನಿವೃತ್ತಿ ವೇತನದ ಹಣ ಎಲ್ಲವನ್ನೂ ಅದಕ್ಕೆ ಸುರಿದರು.

೨೦೧೪ರಲ್ಲಿ ಅವರು ಪುಟ್ ಪಾತ್ ಪಾಲಾಗಿದ್ದ ಐದು ವರ್ಷದ ಒಬ್ಬ ಹುಡುಗನನ್ನು ಕರೆತರುವ ಮೂಲಕ ಮಾನಲೋ ಮಾನಂಗೆ ಕಾರ್ಯ ನಿರ್ವಹಿಸಲು ಪ್ರಾರಂಭಿಸುತ್ತದೆ. ಈಗ ಮಾನಲೋ ಮಾನಂನಲ್ಲಿ ೮-೧೯ ವರ್ಷದ ಅಂತಹ ೮೧ ಅನಾಥ ಮಕ್ಕಳಿದ್ದಾರೆ. ಅವರಲ್ಲಿ ೫೩ ಹೆಣ್ಣು ಮಕ್ಕಳು ಮತ್ತು ೨೮ ಗಂಡುಮಕ್ಕಳು. ೨೦೨೧ರಲ್ಲಿ ಪ್ರಾರಂಭಗೊಂಡ ‘ಪೊಡರಿಲ್ಲು’ ಹಿರಿಯರ ಮನೆಯಲ್ಲಿ ಆರೆಳು ಜನ ನಿರಾಶ್ರಿತ ಹಿರಿಯ ನಾಗರಿಕರಿದ್ದಾರೆ. ಮಾನಲೋ ಮಾನಂನಲ್ಲಿ ‘ಹರಿವಿಲ್ಲು’ ಎಂಬ ಇನ್ನೊಂದು ಮನೆಯಿದ್ದು, ಅದರಲ್ಲಿ ೧೫ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸ್ವಉದ್ಯೋಗದ ತರಬೇತಿ ನೀಡಲಾಗುತ್ತದೆ.

ಮಾನಲೋ ಮಾನಂನ ಮಕ್ಕಳಲ್ಲಿ ೯೦% ಮಕ್ಕಳು ಪರಿಶಿಷ್ಟ ವರ್ಗಕ್ಕೆ ಸೇರಿದವರು.

ಇವರಲ್ಲಿ ಬಹುತೇಕರು ತಂದೆ ತಾಯಿಯಿಲ್ಲದ ಅನಾಥರಾದರೆ, ಉಳಿದವರು ಅಂತರ್ಧರ್ಮೀಯ ಮದುವೆಯಲ್ಲಿ ಹುಟ್ಟಿದ ಬೇಡದ ಮಕ್ಕಳು, ಎಚ್‌ಐವಿ ಪೀಡಿತರಿಗೆ ಹುಟ್ಟಿದ ಮಕ್ಕಳು ಸೇರಿದ್ದಾರೆ. ೮೦ ಮಕ್ಕಳಲ್ಲಿ ೩೦ ಮಕ್ಕಳು ಕೇಂದ್ರೀಯ ವಿದ್ಯಾಲಯಗಳಲ್ಲಿ ಸೆಕೆಂಡರಿ ಹಂತದಲ್ಲಿ ಕಲಿಯುತ್ತಿದ್ದಾರೆ. ಒಬ್ಬ ಹುಡುಗ ಕಾನೂನು ಅಭ್ಯಾಸ ಮಾಡುತ್ತಿದ್ದಾನೆ. ಇನ್ನೊಬ್ಬ ಬಿಟೆಕ್ ಮುಗಿಸುವ ಹಂತದಲ್ಲಿದ್ದಾನೆ. ಮತ್ತೊಬ್ಬ ಕ್ಯಾರಂ ಚಾಂಪಿಯನ್ ಇದ್ದಾನೆ. ಈ ಕ್ಯಾರಂ ಚಾಂಪಿಯನ್‌ನ ಹೆಸರು ಜೀನ್ ವಲ್ಜಿಯಾನ್. ಇವನು ಐದು ವರ್ಷದವನಿದ್ದಾಗ ತಂದೆತಾಯಿ ಏಡ್ಸ್ ಕಾಯಿಲೆಗೆ ಬಲಿಯಾಗಿ, ಇವನು ಮತ್ತು ಇವನ ತಂಗಿಯರು ತಬ್ಬಲಿಯಾದರು. ತನ್ನನ್ನು ಮತ್ತು ತಂಗಿಯರನ್ನು ಸಾಕಲು ಹಣವಿಲ್ಲದ ಕಾರಣ ಯಾರದ್ದೋ ಸೈಕಲ್ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿ ಜೈಲು ಪಾಲಾದನು. ಆಗ ಇವನು ರಾಜಲಕ್ಷ್ಮಿಯವರ ದೃಷ್ಟಿಗೆ ಬಿದ್ದು ಮಾನಲೋ ಮಾನಂ ಸೇರಿದನು. ಈಗ ಜೀನ್ ವಲ್ಜಿಯಾನ್‌ಗೆ ೧೬ ವರ್ಷ ಪ್ರಾಯ.

ಆನಂದ, ಬುದ್ಧಿ ತಿಳಿಯುವ ಮೊದಲೇ ತಂದೆ ತಾಯಿಯನ್ನು ಕಳೆದುಕೊಂಡು ಯಾರೋ ನೆರೆಹೊರೆಯವರೊಂದಿಗೆ ವಾಸಿಸುತ್ತಿದ್ದನು. ೨೦೧೮ರಲ್ಲಿ ರಾಜಲಕ್ಷ್ಮಿಯವರು ಒಂದು ಉಚಿತ ವೈದ್ಯಕೀಯ ಕ್ಯಾಂಪ್ ನಡೆಸುತ್ತಿದ್ದಾಗ ಆನಂದನ ಬಗ್ಗೆ ತಿಳಿದು ಅವನನ್ನು ಬೊಮ್ಮರಿಲ್ಲು ಮನೆಗೆ ತಂದರು. ಅವನೀಗ ಕೇಂದ್ರೀಯ ವಿದ್ಯಾಲಯದಲ್ಲಿ ಒಂಭತ್ತನೇ ತರಗತಿಯಲ್ಲಿ ಕಲಿಯುತ್ತಿದ್ದಾನೆ.

ಮಾನಲೋ ಮಾನಂ ನಡೆಸಲು ಪ್ರತಿ ತಿಂಗಳು ಎರಡೂವರೆ ಲಕ್ಷ ರುಪಾಯಿ ಖರ್ಚಾಗುತ್ತದೆ. ಕೆಲವು ದಾನಿಗಳು ನೀಡುವ ದವಸಧಾನ್ಯಗಳ ಹೊರತಾಗಿ ಅಷ್ಟೂ ಖರ್ಚನ್ನು ದಂಪತಿಗಳು ತಮ್ಮ ನಿವೃತ್ತಿ ವೇತನ ಮತ್ತು ಉಳಿತಾಯ ಹಣದಿಂದಲೇ ನಿಭಾಯಿಸುತ್ತಾರೆ. ಯಾವುದೇ ರೀತಿಯ ಸರ್ಕಾರೀ ಸಹಾಯವನ್ನೂ ಪಡೆಯುವುದಿಲ್ಲ. ಮಾನಲೋ ಮಾನಂನ ಎಲ್ಲಾ ಮಕ್ಕಳಿಗೆ ರಾಜಲಕ್ಷ್ಮಿ ಮತ್ತು ಖಾಸೀಂ ತಾಯಿತಂದೆಯಂತಿದ್ದರೆ, ದೊಡ್ಡ ಮಕ್ಕಳು ಚಿಕ್ಕ ಮಕ್ಕಳ ಅಣ್ಣ ಅಕ್ಕಂದಿರಾಗಿ ಅವರನ್ನು ನೋಡಿಕೊಳ್ಳುತ್ತಾರೆ.

ಧರ್ಮ ಜನರನ್ನು ಒಡೆಯುತ್ತದೆಯೇ ವಿನಃ ಬೆಸೆಯುವುದಿಲ್ಲ. ಈ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡುವ ಮೂಲಕ ಅವರು ಮುಂದೆ ಜಾತಿಧರ್ಮಗಳನ್ನು ಮೀರಿ ಬದುಕಿ ಸಮಾಜದಲ್ಲಿ ಪರಿವರ್ತನೆಗೆ ಕಾರಣರಾಗಲಿ ಎಂಬುದು ನಮ್ಮ ಆಶಯ ಎನ್ನುವ, ಕೆಲವು ವರ್ಷಗಳ ಹಿಂದೆ ತಾನು ಒಬ್ಬಂಟಿ ಎಂದು ಕೊರಗುತ್ತಿದ್ದ ರಾಜಲಕ್ಷ್ಮಿ ಈಗ ೮೮ ಸದಸ್ಯರಿರುವ ತುಂಬ ಸಂಸಾರದ ಯಜಮಾನಿ.

andolana

Recent Posts

ಮೈಸೂರು ಕೇಂದ್ರೀಯ ಸಂಪರ್ಕ ಬ್ಯೂರೋ-CBC ಕಚೇರಿ ಸ್ಥಗಿತ ಬೇಡ : ಕೇಂದ್ರ ವಾರ್ತಾ ಸಚಿವ ಅಶ್ವಿನಿ ವೈಷ್ಣವ್‌ಗೆ ಪತ್ರ ಬರೆದ ಸಚಿವ ಎಚ್‌ಡಿಕೆ

ಹೊಸದಿಲ್ಲಿ : ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಧೀನದಲ್ಲಿ ಮೈಸೂರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೇಂದ್ರೀಯ ಸಂಪರ್ಕ ಬ್ಯೂರೋ…

8 hours ago

ಉನ್ನಾವೋ ಅತ್ಯಾಚಾರ ಪ್ರಕರಣ : ರಾಹುಲ್‌ಗಾಂಧಿ ಭೇಟಿಯಾದ ಸಂತ್ರಸ್ತೆ ಕುಟುಂಬ

ಹೊಸದಿಲ್ಲಿ : ಉನ್ನಾವೋ ಅತ್ಯಾಚಾರ ಪ್ರಕರಣದ ಸಂತ್ರಸ್ತೆ ಮತ್ತು ಆಕೆಯ ತಾಯಿ ಬುಧವಾರ ಸಂಜೆ ಕಾಂಗ್ರೆಸ್‌ನ ರಾಹುಲ್ ಗಾಂಧಿ ಅವರನ್ನು…

8 hours ago

ಉನ್ನಾವೊ ಪ್ರಕರಣ : ಸೆಂಗರ್‌ ಶಿಕ್ಷೆ ಅಮಾನತು ; ಸಂತ್ರಸ್ತೆ ತಾಯಿ ಹೇಳಿದಿಷ್ಟು?

ಹೊಸದಿಲ್ಲಿ : 2017ರ ಉನ್ನಾವೋ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ ಕುಲದೀಪ್ ಸಿಂಗ್ ಸೆಂಗಾರ್‌ಗೆ ಜಾಮೀನು ದೊರೆತಿರುವುದನ್ನು ವಿರೋಧಿಸಿ ಸಂತ್ರಸ್ತೆ…

9 hours ago

ಚಂದನವನದಲ್ಲಿ ಸ್ಟಾರ್‌ ವಾರ್‌ : ನಟಿ ರಕ್ಷಿತಾ ಪ್ರೇಮ್‌ ಹೇಳಿದಿಷ್ಟು?

ಬೆಂಗಳೂರು : ಮಾರ್ಕ್‌ʼ ಸಿನಿಮಾದ ಪ್ರೀ-ರಿಲೀಸ್‌ ಈವೆಂಟ್‌ನಲ್ಲಿ ಕಿಚ್ಚ ಸುದೀಪ್‌ ಹೇಳಿದ ಮಾತೊಂದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದ್ದು, ಈ…

9 hours ago

ರೈತರಿಗೆ ಅಗತ್ಯವಿರುವ ಸೌಲಭ್ಯ ಒದಗಿಸಲು ಸರ್ಕಾರ ಬದ್ದ : ಸಚಿವ ಕೆ.ವೆಂಕಟೇಶ್

ಚಾಮರಾಜನಗರ : ಅನ್ನದಾತರಾಗಿರುವ ರೈತರ ಬಗ್ಗೆ ಆತ್ಮೀಯ ಕಾಳಜಿಯಿದ್ದು, ಅವರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರಾಮಾಣಿಕ ಕೆಲಸವನ್ನು ಮಾಡುತ್ತಿದೆ…

9 hours ago

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜಿನಲ್ಲಿ ನೇಮಕಾತಿ ; ಆಸಕ್ತರು ಇಂದೇ ಅರ್ಜಿ ಸಲ್ಲಿಸಿ

ಬೆಂಗಳೂರು : ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಅಧಿಕೃತ ಅಧಿಸೂಚನೆಯ ಮೂಲಕ ಪ್ರಾಧ್ಯಾಪಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು…

9 hours ago