ಕಾನೂನು ಪಠ್ಯಕ್ರಮದಲ್ಲಿ ಸ್ತ್ರೀವಾದಿ ನ್ಯಾಯಶಾಸ್ತ್ರವನ್ನು ತುರ್ತಾಗಿ ಅಳವಡಿಸಬೇಕಿದೆ
ಸಿ.ಕೆ.ಫೈಸಲ್
ಲೈಂಗಿಕ ದೌರ್ಜನ್ಯದ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಸಾಮಾಜಿಕ ಕಾರ್ಯಕರ್ತರೊಬ್ಬರಿಗೆ ನಿರೀಕ್ಷಣಾ ಜಾಮೀನು ನೀಡುವ ಸಂದರ್ಭದಲ್ಲಿ ಕೇರಳದ ಸೆಷನ್ಸ್ ನ್ಯಾಯಾಲಯವು, ಅರ್ಜಿದಾರ ವ್ಯಕ್ತಿಯು ಲೈಂಗಿಕವಾಗಿ ಪ್ರಚೋದನಕಾರಿ ಉಡುಪು ಧರಿಸಿದ್ದುದರಿಂದ, ಮೊದಲ ನೋಟಕ್ಕೆ , ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೫೪ಎ ಅಡಿಯಲ್ಲಿ ( ಮಹಿಳೆಯ ಶೀಲ ಹರಣ ಮಾಡಲು ಆಕೆಯ ಮೇಲೆ ಬಲಾತ್ಕಾರ ಅಥವಾ ಹಲ್ಲೆ ನಡೆಸುವುದು) ಅಪರಾಧಕ್ಕೆ ಅನ್ವಯಿಸಲಾಗುವುದಿಲ್ಲ ಎಂದು ಹೇಳಿತ್ತು (ಆನಂತರ ಕೇರಳ ಹೈಕೋರ್ಟ್ ಸೆಷನ್ಸ್ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿದೆ). ಸೆಷನ್ಸ್ ನ್ಯಾಯಾಲಯವು ತನ್ನ ತೀರ್ಪು ನೀಡುವ ಮುನ್ನ, ಜಾಮೀನು ಅರ್ಜಿ ಸಲ್ಲಿಸಿದ್ದ ಆರೋಪಿಯು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಕೆಲವು ಫೋಟೋಗಳನ್ನು ಆಧಾರವಾಗಿ ಪರಿಗಣಿಸಿತ್ತು. ದೂರುದಾರ ವ್ಯಕ್ತಿಯು ಫೋಟೋಗಳಲ್ಲಿರುವಂತೆ ಲೈಂಗಿಕವಾಗಿ ಪ್ರಚೋದನಕಾರಿಯಾದ ಉಡುಪು ಧರಿಸಿದ್ದುದರಿಂದ ಆರೋಪಿಯ ವಿರುದ್ಧ ಸೆಕ್ಷನ್ ೩೫೪ಎ ಬಳಸಲಾಗುವುದಿಲ್ಲ ಎಂದು ವಾದ ಮಂಡಿಸಲಾಗಿತ್ತು. ಈ ಪ್ರತಿಪಾದನೆಯು ಮಹಿಳೆಯ ಘನತೆ, ಜೀವನ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಖಾಸಗಿತನದ ಸಾಂವಿಧಾನಿಕ ಹಕ್ಕನ್ನು ಉಲ್ಲಂಘಿಸುವಂತಿದೆ.
ನ್ಯಾಯಾಂಗದ ಪರಿಭಾಷೆಯಲ್ಲಿ ಸೆಷನ್ಸ್ ನ್ಯಾಯಾಲಯದ ಪ್ರತಿಪಾದನೆ ಯನ್ನು ಫ್ರಾಯ್ಡಿಯನ್ ಸ್ಲಿಪ್ ಎಂದು ಕರೆಯಲಾಗುತ್ತದೆ. ಫ್ರಾಯ್ಡಿಯನ್ ಸ್ಲಿಪ್ ಎಂದರೆ ಮನಶ್ಶಾಸ್ತ್ರ ವಿಶ್ಲೇಷಣೆಯ ಪರಿಭಾಷೆಯಲ್ಲಿ, ಅಪ್ರಜ್ಞಾಪೂರ್ವಕವಾದ, ಅಡಗಿಸಲ್ಪಟ್ಟ ಅಪೇಕ್ಷೆ ಅಥವಾ ಆಂತರಿಕ ಚಿಂತನಾಲಹರಿಯ ಅಂತರ್‌ಕ್ರಿಯೆಯ ಪರಿಣಾಮವಾಗಿ ಮೂಡುವ ಮಾತು ಅಥವಾ ಸ್ಮರಣೆ ಅಥವಾ ಚಟುವಟಿಕೆಗಳಲ್ಲಿ ಉಂಟಾಗುವ ಪ್ರಮಾದ ಎಂದು ವ್ಯಾಖ್ಯಾನಿಸಲಾಗುತ್ತದೆ. ಮಹಿಳೆಯೊಬ್ಬರ ಉಡುಪನ್ನು ಲೈಂಗಿಕವಾಗಿ ಪ್ರಚೋದನಕಾರಿ ಎಂದು ಗುರುತಿಸುವುದು, ಮಹಿಳೆಯನ್ನು ಕಾಮಪ್ರಚೋದಕ ಸ್ವಲಕ್ಷಣವುಳ್ಳ ಭೋಗದ ವಸ್ತುವನ್ನಾಗಿ ನೋಡುವ ವಿಧಾನವೇ ಆಗಿದೆ. ಈ ಪ್ರಕರಣದಲ್ಲಿ ವ್ಯಕ್ತಿಗತ ನ್ಯಾಯಿಕ ಅಧಿಕಾರಿ ಮಾತ್ರವೇ ಅಲ್ಲದೆ ಇಡೀ ಸಾಮಾಜಿಕ- ಕಾನೂನು ವ್ಯವಸ್ಥೆಯಲ್ಲಿರುವ ಪಿತೃಪ್ರಧಾನ ಧೋರಣೆಯನ್ನು ಗಮನಿಸಬಹುದಾಗಿದೆ.
ಅಪರ್ಣ ಭಟ್ ವರ್ಸಸ್ ಮಧ್ಯಪ್ರದೇಶ ರಾಜ್ಯ ಸರ್ಕಾರ (೨೦೨೧) ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಅಪರಾಧವನ್ನು ಕ್ಷೀಣಗೊಳಿಸುವಂತಹ ಮತ್ತು ಸಂತ್ರಸ್ತರನ್ನು (ಲಿಂಗತ್ವ ಹಿಂಸೆಯ ಪ್ರಕರಣಗಳಲ್ಲಿ) ಕ್ಷುಲ್ಲಕವಾಗಿಸುವಂತಹ ತರ್ಕ ಅಥವಾ ಭಾಷೆಯನ್ನು ಯಾವುದೇ ಸಂದರ್ಭ ದಲ್ಲೂ ಬಳಸಕೂಡದು. ಹೀಗಾಗಿ ಈ ರೀತಿಯ ವರ್ತನೆಗಳು, ಚಟುವಟಿಕೆಗಳು ಮತ್ತು ಸನ್ನಿವೇಶಗಳು ಅಪ್ರಸ್ತುತ ಎಂದು ಪರಿಭಾವಿಸಲಾಗುತ್ತದೆ; ಉದಾಹರಣೆಗೆ, ಸಂತ್ರಸ್ತೆಯು ಈ ಹಿಂದೆ ಇದೇ ರೀತಿಯ ಚಟುವಟಿಕೆಗೆ ಸಮ್ಮತಿಸಿದ್ದರು ಅಥವಾ ಆಕೆಯು ಸ್ವಚ್ಚಂದತೆಯಿಂದ ವರ್ತಿಸಿದ್ದಳು ಅಥವಾ ಆಕೆಯ ವರ್ತನೆಯ ಮೂಲಕ, ಉಡುಪುಗಳ ಮೂಲಕ ಆರೋಪಿಯ ಕೃತ್ಯವನ್ನು ಪ್ರಚೋದಿಸಿದ್ದಳು, ಆಕೆ ಭಾರತೀಯ ಮಹಿಳೆಯ ಶುದ್ಧತೆಗೆ ವ್ಯತಿರಿಕ್ತವಾಗಿ ವರ್ತಿಸಿದ್ದಳು ಅಥವಾ ಆಕೆ ತನ್ನ ವರ್ತನೆಯ ಮೂಲಕವೇ ಈ ಸನ್ನಿವೇಶಕ್ಕೆ ಎಡೆಮಾಡಿಕೊಟ್ಟಿದ್ದಳು ಇತ್ಯಾದಿ. ಈ ಸನ್ನಿವೇಶಗಳು ನ್ಯಾಯಾಂಗದ ಆದೇಶಗಳಲ್ಲಿ ಪ್ರವೇಶವೇ ಪಡೆಯಬಾರದಂತಹ ಕೆಲವು ವರ್ತನೆಗಳ, ನಡತೆಗಳ ನಿದರ್ಶನವಾಗಿವೆ.
ನ್ಯಾಯಾಂಗದ ತೀರ್ಪು ನೀಡುವ ಸಂದರ್ಭದಲ್ಲಿ ಇವುಗಳನ್ನು ಪ್ರಸ್ತುತ ಎಂದೂ ಪರಿಗಣಿಸಬಾರದು. ಜಾಮೀನು ಅಥವಾ ಮತ್ತಾವುದೇ ರೀತಿಯ ಪರಿಹಾರ ನೀಡಲು ಇವುಗಳನ್ನು ಕಾರಣವಾಗಿ ಪರಿಗಣಿಸಕೂಡದು ಎಂದು ಹೇಳಿತ್ತು. ಸೆಷನ್ಸ್ ನ್ಯಾಯಾಧೀಶರ ವಿವಾದಾತ್ಮಕ ಅಭಿಪ್ರಾಯಗಳು ಸರ್ವೋಚ್ಚ ನ್ಯಾಯಾಲಯದ ತೀರ್ಪಿನಲ್ಲಿ ನೀಡಿರುವ ಮಾರ್ಗದರ್ಶಿ ಸೂತ್ರಗಳ ಸ್ಪಷ್ಟ ಉಲ್ಲಂಘನೆಯಾಗಿದೆ.
ಮಹಿಳೆಯರ ಹೋರಾಟ
ನಿವೃತ್ತ ನ್ಯಾಯಮೂರ್ತಿ ಕೆ.ಚಂದ್ರು ಅವರ ‘ಲಿಸನ್ ಟು ಮೈ ಕೇಸ್- ವೆನ್ ವುಮೆನ್ ಅಪ್ರೋಚ್ ದ ಕೋರ್ಟ್ಸ್ ಆಫ್ ತಮಿಳುನಾಡು’ (ಇದು ೨೦ ಮಹಿಳೆಯರ ನ್ಯಾಯಕ್ಕಾಗಿ ಹೋರಾಡುವ ಕತೆಗಳನ್ನು ಒಳಗೊಂಡಿದೆ) ಕೃತಿಯ ಪ್ರವೇಶಿಕೆಯಲ್ಲಿ ಪ್ರಶಸ್ತಿ ವಿಜೇತ ಲೇಖಕಿ ಗೀತಾ ಹರಿಹರನ್, ಮಹಿಳೆಯರು ನ್ಯಾಯಾಲಯಗಳ ಕದ ತಟ್ಟುವ ಪ್ರಕ್ರಿಯೆಯೇ ಕಷ್ಟಕರವಾಗಿದೆ ಎಂದು ಹೇಳುತ್ತಾ, ಮಹಿಳೆಗೆ ಕುಟುಂಬದವರಿಂದ ಹಣಕಾಸಿನ ಅಥವಾ ಭಾವನಾತ್ಮಕ ಬೆಂಬಲ ಇಲ್ಲದೆ ಹೋದರೆ, ಸಂಪ್ರದಾಯ ಅಥವಾ ಪ್ರಸಕ್ತ ಕಾನೂನುಗಳ ಅರಿವು ಇಲ್ಲದೆ ಹೋದರೆ ಇನ್ನೂ ಕಷ್ಟಕರವಾಗುತ್ತದೆ ಎಂದು ಹೇಳುತ್ತಾರೆ.
ಭಾರತದ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ದುರ್ಬಲವಾಗಿದೆ. ಉದಾಹರಣೆಗೆ, ಈ ವರ್ಷದ ಮಾರ್ಚ್ ತಿಂಗಳಲ್ಲಿ, ಭಾರತದ ಸರ್ವೋಚ್ಚ ನ್ಯಾಯಾಲಯದ ವರಿಷ್ಠ ನ್ಯಾಯಮೂರ್ತಿಯಾದ ಇಂದಿರಾ ಬ್ಯಾನರ್ಜಿ, ಹೇಗೆ ಭಾರತದಲ್ಲಿ ೧೯೫೦ ರಿಂದ ಈವರೆಗೆ ದೇಶದ ಉನ್ನತ ನ್ಯಾಯಾಲಯವು ಕೇವಲ ೧೧ ಮಹಿಳಾ ನ್ಯಾಯಮೂರ್ತಿಗಳನ್ನು ಹೊಂದಿದೆ ಎಂದು ಹೇಳಿದ್ದರು. ನ್ಯಾಯಾಂಗದಲ್ಲಿ ಮಹಿಳೆಯರನ್ನು ಒಳಗೊಳ್ಳುವುದರಿಂದ ತೀರ್ಪು ನೀಡುವ ಪ್ರಕ್ರಿಯೆಯು ಹೆಚ್ಚು ಸಂವೇದನಾಶೀಲವಾಗುತ್ತದೆ ಮತ್ತು ಎಲ್ಲ ಹಂತಗಳಲ್ಲೂ ಒಳಗೊಳ್ಳುವಿಕೆಯ ಮೂಲಕ ಸಹಭಾಗಿತ್ವವನ್ನು ಹೊಂದಿರುತ್ತದೆ ಎಂದು ಹೇಳಿದ್ದರು. ಆದರೆ ಇದು ಕನಸು ಮಾತ್ರ. ಅಷ್ಟೇನೂ ಸಮಾಧಾನಕರವಾಗಿಲ್ಲದ ಪ್ರಸ್ತುತ ನ್ಯಾಯಿಕ ವಾತಾವರಣದಲ್ಲಿ , ನ್ಯಾಯಾಂಗದ ಚೌಕಟ್ಟಿನಿಂದ ಆಗಿಂದಾಗ್ಗೆ ಪಿತೃಪ್ರಧಾನ ಲಕ್ಷಣಗಳು ಹೊರಬೀಳುವುದು ನಿರೀಕ್ಷಿತವೇ ಆಗಿದೆ. (ಮುಂದುವರಿಯುವುದು)
(ಲೇಖಕರು ಕೇರಳ ಸರ್ಕಾರದ ಕಾನೂನು ಇಲಾಖೆ ಅಧೀನ ಕಾರ್ಯದರ್ಶಿ)
ಮೂಲ- ದ ಹಿಂದೂ (Curing the patriarchal mindset of the legal system)
ಅನುವಾದ : ನಾ ದಿವಾಕರ
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…