ಎಡಿಟೋರಿಯಲ್

ಸೆಪ್ಟೆಂಬರ್ 26 ರಂದುಕ್ಷುದ್ರ ಗ್ರಹದೊಂದಿಗೆ ನಾಸಾ ಸೇನಾನಿಯ ಮೊದಲ ಮುಖಾಮುಖಿ ನಡೆಯಲಿದೆ

ಕ್ಷುದ್ರಗ್ರಹಗಳಿಂದ ಭೂಮಿಯನ್ನು ರಕ್ಷಿಸುವ ಡಾರ್ಟ್
ಕಾರ್ತಿಕ್ ಕೃಷ್ಣ

ಸುಮಾರು ೧೬.೫ ಕೋಟಿ ವರುಷಗಳ ಕಾಲ ಭೂಮಿಯ ಮೇಲೆ ರಾರಾಜಿಸಿದ್ದ ಡೈನೋಸಾರ್‌ಗಳು ಕಣ್ಮರೆಯಾಗಿದ್ದು ೬.೬ ಕೋಟಿ ವರ್ಷಗಳ ಹಿಂದೆ ಭುವಿಗೆ ಅಪ್ಪಳಿಸಿದ ಕ್ಷುದ್ರಗ್ರಹ ಅಥವಾ Asteroidನಿಂದ ಎಂಬುದು ಹಲವು ನಿದರ್ಶನಗಳಿಂದ ಸಾಬೀತಾಗಿದೆ. ಅತಿಯಾದ ಜ್ವಾಲಾಮುಖಿಗಳ ಆಸ್ಫೋಟನೆಯಿಂದ ಕೂಡ ಡೈನೋಸಾರ್‌ಗಳು ಅವನತಿ ಹೊಂದಿರಬಹುದು ಎಂಬ ವಾದವೂ ವೈಜ್ಞಾನಿಕ ವಲಯದಲ್ಲಿದೆ. ಅದಿರಲಿ, ಸದ್ಯಕ್ಕೆ ಈ ಕ್ಷುದ್ರಗ್ರಹಗಳತ್ತ ಕೊಂಚ ಗಮನ ಹರಿಸೋಣ. ಯಾಕೆಂದರೆ, ನಾಸಾ ಸಂಸ್ಥೆ ಅವುಗಳು ಭೂಮಿಗೆ ಅಪ್ಪಳಿಸದಂತೆ ತಡೆಯಲು ಸೇನಾನಿಯೊಂದನ್ನು ಸಿದ್ದಪಡಿಸಿ, ಮುಂದಿನ ವಾರ ಅಂದರೆ ಸೆಪ್ಟೆಂಬರ್ ೨೬ ಕ್ಕೆ ಕ್ಷುದ್ರಗ್ರಹದೊಂದಿಗಿನ ಅದರ ಮೊದಲ ಮುಖಾಮುಖಿಗೆ ಸಜ್ಜಾಗಿದೆ. ಅದರ ಬಗ್ಗೆ ತಿಳಿದುಕೊಳ್ಳುವ ಮೊದಲು ಕ್ಷುದ್ರಗ್ರಹಗಳ ಕುರಿತು ಒಂದಷ್ಟು ತಿಳಿದುಕೊಳ್ಳುವುದು ಉತ್ತಮ. ಉಲ್ಕೆಗಳೂ ಅಲ್ಲದ ಗ್ರಹಗಳೂ ಅಲ್ಲದ ಪುಟ್ಟ ಖಗೋಳ ವಸ್ತುಗಳನ್ನು ಕ್ಷುದ್ರಗ್ರಹ ಎನ್ನುತ್ತಾರೆ. ಕೆಲವೊಮ್ಮೆ ಇವುಗಳನ್ನು ಕುಬ್ಜ ಗ್ರಹ ಎನ್ನುವುದುಂಟು. ಸೂರ್ಯನನ್ನು ಪರಿಭ್ರಮಿಸುವ ಇವುಗಳು ಹೆಚ್ಚಾಗಿ ಕಂಡುಬರುವುದು ಮಂಗಳ ಹಾಗೂ ಗುರು ಗ್ರಹಗಳ ನಡುವಿನ ಕ್ಷುದ್ರಗ್ರಹ ಪಟ್ಟಿ’(Asteroid Belt) ಯಲ್ಲಿ. ಕೆಲವೊಂದು ಗುರುಗ್ರಹದ ಆಚೆಯೂ ಕಾಣಸಿಗುತ್ತವೆ. ಅವುಗಳನ್ನು ಟ್ರೋಜನ್ ಕ್ಷುದ್ರಗ್ರಹಗಳು (Trojan Asteroids) ಎಂದು ವರ್ಗೀಕರಿಸುತ್ತಾರೆ. ಕ್ಷುದ್ರಗ್ರಹಗಳು ಸೂರ್ಯನ ಸುತ್ತ ಪ್ರದಕ್ಷಿಣೆ ಬರಲು ಬೇಕಾದ ಸಮಯ ೬೫೩ ರಿಂದ ೫,೦೦೦ ದಿನಗಳು!
ಕೆಲವೊಂದು ಕ್ಷುದ್ರಗ್ರಹ ಅಥವಾ ಧೂಮಕೇತುಗಳು ಸೂರ್ಯನನ್ನು ಸುತ್ತುತ್ತಾ ಭೂಮಿಯ ಕಕ್ಷೆಯ ಒಳಗೆ ಬರಬಹುದು. ಅವುಗಳನ್ನು Near Earth Objects ಎಂದು ವರ್ಗೀಕರಿಸಬಹುದು.

ಇಂತಹ ಕ್ಷುದ್ರಗ್ರಹಗಳು ಕೆಲವೊಮ್ಮೆ ತಮ್ಮ ಕಕ್ಷೆಯಿಂದ ಕಳಚಿಬಿದ್ದು ಭೂಮಿಗೆ ಅಪ್ಪಳಿಸುವುದುಂಟು. ಬಹಳಷ್ಟು ಇಂತಹ ವಿದ್ಯಮಾನಗಳಲ್ಲಿ ಇವುಗಳು ಭೂಮಿಯನ್ನು ಸ್ಪರ್ಶಿಸುವ ಮೊದಲೇ, ಭುವಿಯ ವಾತಾವರಣದ ಘರ್ಷಣೆಗೆ ಸಿಕ್ಕಿ ಚದುರಿಹೋಗುವುದೇ ಹೆಚ್ಚು. ಗಾತ್ರದಲ್ಲಿ ಹಿರಿದಾಗಿರುವ ಕ್ಷುದ್ರಗ್ರಹಗಳು ಮಾತ್ರ ಭೂಮಿಗೆ ಆಗಂತುಕನಂತೆ ಅಪ್ಪಳಿಸಿ ಹಲವು ಅವಾಂತರಗಳನ್ನು ಸೃಷ್ಟಿಸುತ್ತವೆ. ಉದಾಹರಣೆಗೆ ೧೯೦೫ ಜೂನ್ ೩೦ರಂದು ಸೈಬೀರಿಯಾ ದೇಶದ ತುಂಗುಸುಕ ಪ್ರಾಂತ್ಯಕ್ಕೆ ಅಪ್ಪಳಿಸಿದ ೪೦ಮೀಟರ್ ವ್ಯಾಸದ ಕ್ಷುದ್ರಗ್ರಹ. ಇದು ಅಪ್ಪಳಿಸಿದ ವೇಗಕ್ಕೆ ನಶಿಸಿದ್ದು ಲಂಡನ್ ಪಟ್ಟಣದಷ್ಟು ವಿಸ್ತೀರ್ಣವಿದ್ದ ಕಾಡು ಪ್ರದೇಶ! ಇತ್ತೀಚಿನ ವಿಶ್ವ ಇತಿಹಾಸದಲ್ಲಿ ಇದೊಂದು ಅತ್ಯಂತ ಪ್ರಭಾವಶಾಲಿ ಮತ್ತು ಪ್ರಮುಖ ಕ್ಷುದ್ರಗ್ರಹದ ಹೊಡೆತವೆಂದೇ ಹೇಳಬಹುದು.
ಬಾಹ್ಯಾಕಾಶದಲ್ಲಿ ತೇಲುತ್ತಿರುವ ಅಸಂಖ್ಯಾತ ಆಕಾಶಕಾಯಗಳಿಂದ ಭೂಮಿಗಿರುವ ಆಪತ್ತಿನ ಬಗ್ಗೆ ಜಾಗೃತಿ ಮೂಡಿಸುವ ಗುರಿಯೊಂದಿಗೆ ವಿಶ್ವ ಸಂಸ್ಥೆಯು ಜೂನ್ ೩೦ಅನ್ನು ಅಂತರರಾಷ್ಟ್ರೀಯ ಕ್ಷುದ್ರಗ್ರಹ ದಿನ ಎಂದು ಘೋಷಿಸಿದೆ.

ಕ್ಷುದ್ರಗ್ರಹದ ಬಗೆಗಿನ ಈ ಮಾಹಿತಿಯನ್ನು ಹಿನ್ನೆಲೆಯಾಗಿಸಿಕೊಂಡು ನಾಸಾದ ಹೊಸ ಸೇನಾನಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ. ನಾನಿಲ್ಲಿ ಸೇನಾನಿ ಎಂದು ಸಂಭೋದಿಸಿದ್ದು DART (Double Asteroid Redirection Test) ಎಂಬ ಯೋಜನೆಯನ್ನು. SpaceX ಸಂಸ್ಥೆಯ ಫಾಲ್ಕನ್-೯ ಏರುಬಂಡಿಯ ಸಹಾಯದಿಂದ ನವೆಂಬರ್ ೨೩, ೨೦೨೧ರಂದು ನಭಕ್ಕೆ ಹಾರಿದ ಡಾರ್ಟ್, ಕ್ಷುದ್ರಗಳಿಂದ ಆಗುವ ಸಂಭಾವ್ಯ ವಿಪತ್ತುಗಳಿಂದ ಭೂಮಿಯನ್ನು ರಕ್ಷಿಸುವ ಜಗತ್ತಿನ ಮೊತ್ತ ಮೊದಲ ಪೂರ್ಣಪ್ರಮಾಣದ ಯೋಜನೆ. ಇದು ಕಳೆದ ವರ್ಷವೇ ಗಗನಕ್ಕೇರಿದ್ದರೂ ಅದರ ಪರೀಕ್ಷೆ ನಡೆಯುವುದು ಈ ಸೆಪ್ಟೆಂಬರ್ ೨೬ರಂದು.

ಡಾರ್ಟ್ ಎದುರಿಸುವ ಕ್ಷುದ್ರಗ್ರಹದ ಹೆಸರು ‘ಡಿಡಿಮೋಸ್’ ಎಂದು. ಇದೊಂದು ಅವಳಿ ಕ್ಷುದ್ರಗ್ರಹವಾಗಿದೆ. ಅಂದಹಾಗೆ, ಗ್ರೀಕ್ ಭಾಷೆಯಲ್ಲಿ ‘ಡಿಡಿಮೋಸ್’ ಎಂದರೆ ಅವಳಿ ಎಂದರ್ಥ. ಡಾರ್ಟ್ ಯೋಜನೆಯ ಹೆಸರಿನಲ್ಲಿ ಡಬಲ್ ಎಂದಿರುವುದನ್ನು ನೀವು ಗಮನಿಸಿರಬಹುದು. ಅದು ಎದುರಿಸುವ ಕ್ಷುದ್ರಗ್ರಹ ಜೋಡಿಯಾಗಿರುವುದರಿಂದ ಈ ಹೆಸರು. ಹಾಗಂತ ಈ ಜೋಡಿ ಕ್ಷುದ್ರಗ್ರಹಗಳು ಭೂಮಿಗೆ ಯಾವ ತೊಂದರೆಯನ್ನೂ ಮಾಡಲಾರವು. ಮೊದಲೇ ತಿಳಿಸಿದ ಹಾಗೆ ಡಾರ್ಟ್ ಒಂದು ಪರೀಕ್ಷಾರ್ಥ ಯೋಜನೆ. ಒಂದು ಲೆಕ್ಕದಲ್ಲಿ ಮುಂದೆಂದೋ ಕ್ಷುದ್ರಗ್ರಹಗಳಿಂದ ಎದುರಾಗಬಹುದಾದ ಆಪತ್ತುಗಳಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಅಳೆಯಲು ಇರುವ ಮಾನದಂಡ ಎಂದೇ ವಿಶ್ಲೇಷಿಸಬಹುದು.

ಜೋಡಿ ಕ್ಷುದ್ರಗ್ರಹಗಳೆಂದರೆ ಒಂದು ಗ್ರಹ ಹಾಗೂ ಅದನ್ನು ಸುತ್ತುವ ಉಪಗ್ರಹದಂತಿರುವ ಪುಟ್ಟ ವ್ಯವಸ್ಥೆ. ಭೂಮಿ ಹಾಗೂ ಚಂದ್ರನ ಹಾಗೆ ಎಂದು ಊಹಿಸಿಕೊಳ್ಳಿ. ದೊಡ್ಡ ಕ್ಷುದ್ರಗ್ರಹವಾದ ಡಿಡಿಮೋಸನ್ನು (ವ್ಯಾಸ: ೭೮೦ ಮೀಟರ್) ಚಿಕ್ಕ ಕ್ಷುದ್ರಗ್ರಹವಾದ ಡಿಮೊರ್ಫಾಸ್ (ವ್ಯಾಸ: ೧೬೦ ಮೀಟರ್) ಸುತ್ತುತ್ತದೆ. ಪ್ರಸ್ತುತ, ಡಿಡಿಮೋಸ್‌ನ  ಸುತ್ತಲಿನ ಡಿಮೊರ್ಫೋಸ್‌ನ ಕಕ್ಷೆಯ ಅವಧಿಯು ೧೧ ಗಂಟೆಗಳು ಮತ್ತು ೫೫ ನಿಮಿಷಗಳು ಮತ್ತು ಎರಡು ಕ್ಷುದ್ರಗ್ರಹಗಳ ಕೇಂದ್ರಗಳ ನಡುವಿನ ಬೇರ್ಪಡಿಕೆ ಸುಮಾರು ೧.೧೮ ಕಿಲೋಮೀಟರ್. ಇಂತಿಪ್ಪ ಡೈಮೊರ್ಫಾಸ್ ಅನ್ನು ಡಾರ್ಟ್ ನೌಕೆ, ಸೆಕೆಂಡಿಗೆ ೬.೬ ಕಿ.ಮೀ.ಗಳಷ್ಟು ವೇಗದಲ್ಲಿ ಮುಖಾಮುಖಿ ಘರ್ಷಿಸುತ್ತದೆ.

ಸುಮಾರು ೬೦೦ಕೆ.ಜಿ. ತೂಕವಿರುವ ಡಾರ್ಟ್ ಹಾಗೂ ಅಂದಾಜು ಐನೂರು ಕೋಟಿ ಕೆಜಿ ತೂಕವಿರುವ ಡಿಮೊರ್ಫಾಸಿನ ಮುಖಾಮುಖಿಯ ಪ್ರಚಂಡತೆಯನ್ನು ಸೆರೆಹಿಡಿಯಲು ನಭದಲ್ಲಿರುವ ದೂರದರ್ಶಕದಿಂದ ಹಿಡಿದು ಭುವಿಯ ಮೇಲೆ ಅಲ್ಲಲ್ಲಿ ಸ್ಥಾಪಿಸಲ್ಪಟ್ಟಿರುವ ದೂರದರ್ಶಕಗಳು ಕಾದು ಕೂತಿವೆ. ಇವುಗಳ ಜೊತೆಗೆ ಸಮೀಪದಿಂದ ಚಿತ್ರಗಳನ್ನು ತೆಗೆಯುವ ಸಲುವಾಗಿ ಡಾರ್ಟ್ ನೌಕೆಯ ಜೊತೆಗೊಂದು ಸಣ್ಣ ಉಪಗ್ರಹವನ್ನೂ ನಾಸಾ ಉಡಾಯಿಸಿದೆ. ಅದರ ಹೆಸರು LICIACube (Light Italian CubeSat for Imaging of Asteroids) ಎಂದು. ಇಟಲಿಯ ಬಾಹ್ಯಾಕಾಶ ಸಂಸ್ಥೆಯು ಇದನ್ನು ತಯಾರಿಸಿದ್ದು, ಇದು ಡಾರ್ಟ್ ನೌಕೆಯ ಹಿಂದಿದ್ದು, ನೇರವಾಗಿ ಭೂಮಿಯೊಂದಿಗೆ ಸಂವಹನ ನಡೆಸಿ, ಡಿಮೊರ್ಫಾಸ್ ಹಾಗೂ ಡಾರ್ಟ್‌ನ ಮುಖಾಮುಖಿಯ ನಂತರದ ಚಿತ್ರಗಳನ್ನು ಹಿಂತಿರುಗಿಸುತ್ತದೆ. ಇದು LUKE ಮತ್ತು LEIA  ಎಂಬ ಎರಡು ಆಪ್ಟಿಕಲ್ ಕ್ಯಾಮೆರಾಗಳನ್ನು ಹೊಂದಿದೆ.

ಇನ್ನು ಡಾರ್ಟ್ ನೌಕೆಯ ಕುರಿತು ಮಾತಾಡುವುದಾದರೆ ಅದೊಂದು ಸರಳ ಬಾಹ್ಯಾಕಾಶ ನೌಕೆ. ಜಾನ್ ಹೋಪ್ಕಿನ್ ವಿಶ್ವವಿದ್ಯಾಲಯದ ಪ್ರಕಾರ, ಡಾರ್ಟ್‌ನ ಮುಖ್ಯ ವಾಹನವು  ಪೆಟ್ಟಿಗೆ ಆಕಾರದಲ್ಲಿದ್ದು, ಸರಿಸುಮಾರು 3.9 x 4.3 x 4.3 ಅಡಿಯಿದೆ. ಅಂದಾಜು ಒಂದು ದೊಡ್ಡ ರೆಫ್ರಿಜರೇಟರ್‌ನ ಗಾತ್ರದಷ್ಟು. ಇದರ ಎರಡು ಸೌರ ಫಲಕಗಳು ಸಂಪೂರ್ಣವಾಗಿ ತೆರೆದುಕೊಂಡಾಗ ೨೭.೯ ಅಡಿ ಉದ್ದವಿರುತ್ತದೆ. DART ಬಾಹ್ಯಾಕಾಶ ನೌಕೆಯಲ್ಲಿರುವುದು Didymos Reconnaissance and Asteroid Camera for Optical Navigation (DRACO) ಎಂಬ ಹೆಸರಿನ ಒಂದು ಉಪಕರಣವಷ್ಟೇ!

ಡಾರ್ಟ್ ಯೋಜನೆಯೊಂದಿಗೆ ಗ್ರಹಗಳ ರಕ್ಷಣಾ ವ್ಯವಸ್ಥೆ ಎಂಬ ಅತ್ಯದ್ಭುತ ಪರಿಕಲ್ಪನೆ ಜನ್ಮ ಪಡೆದುಕೊಂಡಿದೆ.
ನಾನು ಡಾರ್ಟ್‌ನ ಬಗ್ಗೆ ಮೊದಲು ಓದಿದಾಗ, ಇಸ್ರೇಲ್‌ನ Iron Dome ನೆನಪಿಗೆ ಬಂತು. ವೈರಿಗಳು ಹಾರಿಸಿದ ರಾಕೆಟ್‌ಗಳನ್ನು ಮಿಂಚಿನ ವೇಗದಲ್ಲಿ ಗುರುತಿಸಿ ಕೆಡವುತ್ತಿದ್ದ ಆ ರಕ್ಷಣಾ ವ್ಯವಸ್ಥೆ ಒಂದು ಅದ್ಭುತವೇ ಸರಿ! ನಾಸಾ ಒಂದು ಹೆಜ್ಜೆ ಮುಂದೆ ಹೋಗಿ ಬರೀ ದೇಶಗಳ ಗಡಿಯನ್ನಷ್ಟೇ ರಕ್ಷಿಸದೇ, ಪೂರ್ತಿ ಭೂಮಿಯನ್ನು ಅಪಾಯಕಾರಿ ಕ್ಷುದ್ರಗ್ರಹಗಳಿಂದ ಸುರಕ್ಷಿತವಾಗಿರಿಸುವತ್ತ ದೃಢವಾದ ಹೆಜ್ಜೆಯಿಟ್ಟಿದೆ. ಅವರ ಪ್ರಯತ್ನ ಫಲಕಾರಿಯಾಗಲಿ ಎಂದು ಆಶಿಸೋಣ.
andolana

Recent Posts

ಕನ್ನಡಿಗರಿಗೆ ಉದ್ಯೋಗ ನೀಡದ ಸಾಹಿತ್ಯ ಸಮ್ಮೇಳನ: ವಾಟಲ್‌ ನಾಗರಾಜ್‌ ಆಕ್ರೋಶ

ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…

9 hours ago

ಹಾಸ್ಯ ಸಾಹಿತ್ಯ ಆಧುನಿಕ ಬದುಕಿಗೆ ಔಷಧಿ: ಪ್ರೊ.ಕರಿಯಪ್ಪ

ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…

9 hours ago

ಸಿ & ಡಿ ಲ್ಯಾಂಡ್ ಸಮಸ್ಯೆ ಪರಿಹಾರಕ್ಕೆ ಉನ್ನತ ಮಟ್ಟದ ಸಮಿತಿ: ಯು.ಟಿ. ಖಾದರ್

ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…

9 hours ago

ಸಿ.ಟಿ ರವಿ ಕೊಲೆಗೆ ಪೊಲೀಸರ ಸಂಚು: ಅಶೋಕ್‌ ಆರೋಪ

ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…

10 hours ago

ವಿರಾಜಪೇಟೆ | ಬಿಟ್ಟಂಗಾಲದಲ್ಲಿ ಚಿರತೆ ಬೆಕ್ಕು ಸಾವು

ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…

10 hours ago

ಮೈಸೂರಿನ ಫಾರ್ಮ್‌ಹೌಸ್‌ನಲ್ಲಿ ನಟ ದರ್ಶನ್‌ ವಾಸ್ತವ್ಯ

ಮೈಸೂರು: ನಟ ದರ್ಶನ್‌ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…

10 hours ago