ರಹಮತ್ ತರೀಕೆರೆ
ಬಹುತ್ವ ತತ್ವದ ಪ್ರಮುಖ ಗುಣವೆಂದರೆ, ಆಸುಪಾಸಿನ ಸಮಾನ ಮತ್ತು ಭಿನ್ನಮನಸ್ಕ ಸಂಗತಿಗಳನ್ನು ಒಳಗೊಳ್ಳಲು ಸದಾ ಮುಕ್ತವಾಗಿರುವುದು. ಈ ಒಳಗೊಳ್ಳುವ ಪರಿಯನ್ನು ದರ್ಶನ, ಭಾಷೆ, ಚಳವಳಿ, ರಾಜಕಾರಣ ಕ್ಷೇತ್ರಗಳಲ್ಲಿ ಅಧಿಕವಾಗಿ ಕಾಣಬಹುದು. ಇದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು, ತಮ್ಮ ಪಟ್ಟಾಭಿಷೇಕದ ಬೆಳ್ಳಿಹಬ್ಬದ ಕಾರ್ಯಕ್ರಮಕ್ಕೆ ಹೊರಡಿಸಿದ ಆಹ್ವಾನ ಪತ್ರವು ಒಳ್ಳೆಯ ನಿದರ್ಶನ.
ಆಡಳಿತಾತ್ಮಕ ಬಹುತ್ವಕ್ಕೆ ಸಾಕ್ಷ ದಂತಿರುವ ಈ ಜಾಹೀರು ಪತ್ರವು, ಮೂರು ಭಾಷೆ ಮತ್ತು ಲಿಪಿಗಳಲ್ಲಿದೆ. ಇದನ್ನು ದೊರೆ ತಮ್ಮ ಸ್ವಹಸ್ತಾಕ್ಷರದಿಂದ ಬರೆದಿದ್ದರು: Mysore: 8th December 1927
On the day when I complete the twenty fifth
year of my reign, I send my loving greetings to
each one of my dear people, with a heartful of
solicitude for their happiness, with unceasing
effort I shall life lasts endeavour to promote
thier welfare and prosperity and pray that God
may give me light and strength to achieve this
the supreme object of my life and ruleKrishnaraja Wodiyar
ನಮ್ಮ ರಾಜ್ಯಭಾರವು ಪ್ರಾರಂಭವಾಗಿ ಇಪ್ಪತ್ತೈದು ವರ್ಷಗಳು ಪೂರ್ಣಗೊಂಡ ಈ ದಿವಸ, ನಾವು ನಮ್ಮ ಪ್ರೀತಿಗೆ ಪಾತ್ರರಾದ ಪ್ರಜೆಗಳಲ್ಲಿ ಪ್ರತಿಯೊಬ್ಬರೂ ಸುಖವಾಗಿರಲೆಂದು ಹೃದಯದಲ್ಲಿ ಹಾರೈಸುತ್ತ ಈ ಶುಭಾಕಾಂಕ್ಷೆಯನ್ನು ಪ್ರೇಮಪುರಸ್ಸರವಾಗಿ ಪ್ರಕಾಶಗೊಳಿಸುವೆವು. ನಮ್ಮ ಪ್ರಜೆಗಳ ಸುಖ ಸಂಪತ್ತನ್ನು ಅಭಿವೃದ್ಧಿಗೊಳಿಸಲು ಯಾವಜ್ಜೀವವೂ ಸಂತತವಾದ ಪ್ರಯತ್ನವನ್ನು ಮಾಡುವೆವು. ನಮ್ಮ ಜೀವಿತಕಾಲದಲ್ಲಿಯೂ ರಾಜ್ಯಭಾರದಲ್ಲಿಯೂ ಪರಮಧ್ಯೇಯವಾದ ಈ ಪ್ರಯತ್ನವನ್ನು ಈಡೇರಿಸಲು ತಕ್ಕ ಬುದ್ಧಿಶಕ್ತಿಯನ್ನೂ ಕಾರ್ಯಶಕ್ತಿಯನ್ನೂ ನಮಗೆ ದಯಪಾಲಿಸಲೆಂದು ಆ ಸರ್ವಶಕ್ತನಾದ ಭಗವಂತನನ್ನು ಪ್ರಾರ್ಥಿಸುವೆವು- ಶ್ರೀಕೃಷ್ಣ
ಆಜ್ ಜೊ ಮೈ ಅಪ್ನೆ ಸಲ್ತನತ್ ಕ ಪಚ್ಚೀಸವ್ಞಾ ಸಾಲ್ ಪೂರಾ ಕರ್ತಾ ಹ್ಞೂ. ಅಪ್ನೆ ತಮಾಂ ಅಜೀಜ್ ರಿಯಾಯ ಕೊ ಅಪ್ನೆ ದಿಲ್ ಸೆ ಜೊ ಉನ್ಕಿ ಖುಶ್‌ಆಲಿ ಕೆ ತಮನ್ನಾಸೆ ಮಿಲಾಫ್ ಹೈ. ಪುರೋಜ್ ಮೊಹಬ್ಬತ್ ಸಲಾಂ ಕಹತಾ ಹ್ಞೂ. ಇನಶಾ ಅಲ್ಲಾಹ್, ಲಗಾತಾರ್ ಇಸ್ಕೆ ಸಾಥ್ ಜಬ್ ತಕ್ ಕೆ ಜಿಂದಗಿ ಬಾಖಿ ಹೈ, ಉನಕಿ ಬಹಬೂದಿ ಔರ್ ಕತಶ್ ಕೆ ಲಿಯೆ ಕೋಶಿಶ್ ಕರೋಂಗಾ. ಮೈ ದುವಾ ಕರ್ತಾ ಹ್ಞೂ ಕೆ, ಖುದಾವಂದೆ ಮುಜಕೊ ರೋಶನಿ ಔರ್ ಖುವ್ವತ್ ಅತಾ ಫರ್ಮಾಯೆ ಕೆ, ಮೈ ಅಪ್ನೆ ಸಲ್ತನತ್ ಔರ್ ಜಿಂದಗಿ ಕೆ ಇಸ್ ಮಕ್ಸೂದೆ ಆಲಾ ಕೊ ಅಂಜಾಂ ದ್ಞೂ-ಕೃಷ್ಣರಾಜ್ ಒಡೆಯರ್
ಈ ಜಾಹೀರು ಪತ್ರದಲ್ಲಿ, ಇಂಗ್ಲಿಷ್-ಉರ್ದುವಿನಲ್ಲಿ ಪೂರ್ಣ ಹೆಸರನ್ನು ಬರೆವ ದೊರೆ, ಕನ್ನಡದಲ್ಲಿ ಮಾತ್ರ ‘ಶ್ರೀಕೃಷ್ಣ’ ಎಂದು ನಮೂದಿಸಿದ್ದಾರೆ. ದೇವರ ಉಲ್ಲೇಖವು ಆಂಗ್ಲ ಪತ್ರದಲ್ಲಿ ‘ಗಾಡ್’ ಆಗಿ, ಕನ್ನಡದಲ್ಲಿ ‘ಭಗವಂತ’ ನಾಗಿ ಉರ್ದುವಿನಲ್ಲಿ ‘ಖುದಾ’ ಆಗಿದೆ. ಭಾಷೆಯು ಮೂರೂ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಿತ್ತಿಯಲ್ಲಿ ಎಚ್ಚರಿಕೆಯಿಂದ ಬಳಕೆಯಾಗಿದೆ. ಈ ಭಾಷಿಕ-ಸಾಂಸ್ಕೃತಿಕ ಬಹುತ್ವಪ್ರಜ್ಞೆಗೆ ನಾಲ್ವಡಿಯವರ ಕಲಿಕಾ ಹಿನ್ನೆಲೆಯೂ ಕಾರಣ. ಅವರು ಇಂಗ್ಲಿಷ್‌ನ್ನು ವೈಟ್ಲಿ ಹಾಗೂ ಫ್ರೇಜರ್ ಅವರಿಂದಲೂ, ಸಂಸ್ಕೃತವನ್ನು ನಾರಾಯಣ ಅಯ್ಯಂಗಾರ್ಯರಿಂದಲೂ, ಕನ್ನಡವನ್ನು ಸೋಸಲೆ ಅಯ್ಯಾಶಾಸ್ತ್ರಿ ಅವರಿಂದಲೂ, ಉರ್ದು- ಪಾರಸಿಯನ್ನು ಹಸನ್ ಅಲಿಯವರಿಂದಲೂ ಕಲಿತಿದ್ದರು. ಆಡಳಿತದಲ್ಲಿ ಜಾತಿ ಮತಗಳ ಆಧಾರದಲ್ಲಿ ತರತಮ ಆಗದಂತೆ ಮತ್ತು ಸರ್ವ ಸಾಮಾಜಿಕ-ಧಾರ್ಮಿಕ ಸಮುದಾಯಗಳ ಪ್ರಾತಿನಿಧ್ಯ ಇರುವಂತೆ ಎಚ್ಚರ ವಹಿಸುತ್ತಿದ್ದರು. ಅವರು ಸಾಮಾಜಿಕ ಮೀಸಲಾತಿಯನ್ನು ಒಪ್ಪದ ದಿವಾನ್ ವಿಶ್ವೇಶ್ವರಯ್ಯನವರ ರಾಜೀನಾಮೆ ಸ್ವೀಕರಿಸಿದ್ದಕ್ಕೂ, ಮಿರ್ಜಾ ಇಸ್ಮಾಯಿಲರನ್ನು ದಿವಾನರನ್ನಾಗಿ ನೇಮಕ ಮಾಡಿದ್ದಕ್ಕೂ ಹಲವರ ವಿರೋಧವಿತ್ತು. ಇದಕ್ಕವರು ಮಣಿಯಲಿಲ್ಲ. ಇದಕ್ಕೆ ಕಾರಣ, ಆಡಳಿತಾತ್ಮಕ ಬಹುತ್ವದ ಬಗ್ಗೆಯಿದ್ದ ಅವರ ಬದ್ಧತೆ. ಅವರ ಆಸ್ಥಾನದಲ್ಲಿ ಕರ್ನಾಟಕ ಸಂಗೀತದ ಬಿಡಾರಂ ಕೃಷ್ಣಪ್ಪನವರಿದ್ದಂತೆ, ಹಿಂದೂಸ್ತಾನಿಯ ಉಸ್ತಾದರಾದ ಅಬ್ದುಲ್ ಕರೀಂಖಾನರೂ, ರಹಿಮತ್‌ಖಾನರೂ ಆಶ್ರಯ ಪಡೆದಿದ್ದರು.
ಪ್ರಜಾಸತ್ತಾತ್ಮಕ ಆಶಯವುಳ್ಳ ಪ್ರಭುತ್ವಗಳು, ತಮ್ಮ ರಾಜ್ಯದಲ್ಲಿರುವ ಎಲ್ಲ ಧಾರ್ಮಿಕ-ಸಾಮಾಜಿಕ ಸಮುದಾಯಗಳನ್ನೂ ಒಳಗೊಳ್ಳುವ ಮತ್ತು ಪ್ರಜೆಗಳನ್ನು ಸಮದೃಷ್ಟಿಯಿಂದ ನೋಡುವ ಉದ್ದೇಶದಿಂದ ಕೆಲವು ಸಾಂಕೇತಿಕ ಆಚರಣೆಗಳನ್ನು ಕೈಗೊಳ್ಳುತ್ತವೆ. ಅದನ್ನು ಅವರು ಬಳಸುವ ಭಾಷೆಯು ಕನ್ನಡಿಸುತ್ತದೆ.
ಪ್ರಶ್ನೆಯೆಂದರೆ, ಭಾಷೆಯಲ್ಲಿರುವ ಈ ಸಾಂಕೇತಿಕ ಒಳಗೊಳ್ಳುವಿಕೆಯು, ರಾಜ್ಯದ ದಮನಿತ ಸಮುದಾಯಗಳ ಏಳಿಗೆಗೆ ವಿಸ್ತರಣೆಗೊಂಡಿತೇ? ಅವರ ಆರ್ಥಿಕ ಸಾಮಾಜಿಕ ಸವಲತ್ತು ಮತ್ತು ರಾಜಕೀಯ ಪ್ರಾತಿನಿಧ್ಯವಾಗಿ ಬದಲಾಯಿತೇ? ಜನನುಡಿಯನ್ನು ಆಡಳಿತ ಭಾಷೆಯಾಗಿಸುವ; ಸಂಸ್ಥಾನದಲ್ಲಿರುವ ವಿಭಿನ್ನ ಮನೆಮಾತುಗಳ ಮಾಧ್ಯಮದಲ್ಲಿ ಶಿಕ್ಷಣ ಕೊಡುವ ಉಪಕ್ರಮವಾಗಿ ಅನುವಾದಗೊಂಡಿತೇ? ನಾಲ್ವಡಿಯವರು ರಾಜಧರ್ಮದ ಭಾಗವಾಗಿ ಆಡಳಿತಾತ್ಮಕ ಬಹುತ್ವವನ್ನು ಸಾಧಿಸಿದಂತೆ, ಸಾಮಾಜಿಕ ನ್ಯಾಯದ ಬಹುತ್ವವನ್ನೂ ಪಾಲಿಸಿದರು. ಈ ಬಹುತ್ವವು ದೇವರಾಜ ಅರಸರ ಕಾಲದಲ್ಲಿ ಹಿಂದುಳಿದ ಸಮುದಾಯಗಳಿಗೆ, ಆರ್ಥಿಕ ಸಂಪನ್ಮೂಲ ಹಂಚಿಕೆ ಮತ್ತು ರಾಜಕೀಯ ಪ್ರಾತಿನಿಧ್ಯ ಕೊಡುವಲ್ಲಿ ಮುಂದುವರಿಯಿತು.
ನಾಲ್ವಡಿಯವರ ಒಳಗೊಳ್ಳುವ ರಾಜಧರ್ಮದಿಂದ ಪ್ರೇರಿತರಾಗಿದ್ದ ಬಿಎಂಶ್ರೀ, ಇದಕ್ಕೆ ಪೂರಕವಾದ ಕೆಲಸವನ್ನು ಲೇಖಕರಾಗಿ ಮಾಡಿದರು. ಧರ್ಮಗಳ ಬಗ್ಗೆ ತಿಳಿವಳಿಕೆಯ ಕೊರತೆಯಿಂದಲೂ ಜನರಲ್ಲಿ ಪೂರ್ವಗ್ರಹ ಬೆಳೆಯುತ್ತದೆ ಎಂದು ಊಹಿಸಿದ ಅವರು, ಅಬ್ಬಾಸ್ ಶೂಸ್ತ್ರಿಯವರಿಂದ ‘ಇಸ್ಲಾಂ ಸಂಸ್ಕೃತಿ’ ಪುಸ್ತಕ ಬರೆಯಿಸಿದರು. ಅದನ್ನು ಸ್ವತಃ ಅನುವಾದಿಸಿ ಪ್ರಕಟಿಸಿದರು. ಅದಕ್ಕೆ ಕುವೆಂಪು ಮುನ್ನುಡಿ ಬರೆಯುತ್ತ, ಭಾರತವು ಧರ್ಮಾತೀತವಾಗಿ ಸಾಽಸಿರುವ ಬಹುತ್ವದ ಸಂಸ್ಕೃತಿಯನ್ನು ವಿಶ್ಲೇಷಿಸಿದರು. ಅವರ ನಾಡಗೀತೆಯಲ್ಲಿರುವ ಸರ್ವಧರ್ಮೀಯರು ಕೂಡಿಬಾಳುವ ಬಹುತ್ವವು, ನಾಲ್ವಡಿಯವರ ಆಳ್ವಿಕೆಯಿಂದಲೂ ಪ್ರೇರಣೆ ಪಡೆದಿತ್ತು. ನಾಡಗೀತೆಯಲ್ಲಿ ಭಾರತ-ಕರ್ನಾಟಕಗಳ ಧಾರ್ಮಿಕ ರಾಜಕೀಯ ನೈಸರ್ಗಿಕ ಆಧ್ಯಾತ್ಮಿಕ ವೈವಿಧ್ಯಗಳನ್ನು ಬೆರೆಸುವ ಚಿತ್ರಗಳಿವೆ; ಅನೇಕ ರಾಜವಂಶಗಳು ಆಳಿದ, ಹಲವು ಸಂತರು ಜನಿಸಿದ, ಬಹು ಹೊಳೆಗಳು ಹರಿವ ನಾಡಿನ ಪ್ರಸ್ತಾವವಿದೆ.
ಬಹುತ್ವವು ಸದಾಶಯವಾಗಿ ಸಾಧಿತವಾಗುವ ಸನ್ನಿವೇಶಗಳು ಆಧುನಿಕ ಕನ್ನಡ ಸಾಹಿತ್ಯದಲ್ಲಿ ಪ್ರವಾಹದಂತೆ ಮೈದೋರಿದವು.
‘ಕಾನೂರು ಹೆಗ್ಗಡಿತಿ’ಯ ಆದರ್ಶವಾದಿ ನಾಯಕನಾದ ಹೂವಯ್ಯನು, ಎಲ್ಲ ಜಾತಿಯ ಹುಡುಗರನ್ನೂ ಬೆಟ್ಟದ ಶಿಖರದಲ್ಲಿ ಒಟ್ಟುಗೂಡಿಸಿ, ಬುದ್ಧ ಜಯಂತಿಯ ದಿನ ಏಕತೆಯ ಹಾಡನ್ನು ಹಾಡಿಸುವ ಸನ್ನಿವೇಶವಿದೆ. ಇದು ಕರ್ನಾಟಕದ ಶಾಲಾಮಕ್ಕಳು, ನಾಡಗೀತೆಯ ‘ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ’ ಸಾಲನ್ನು ಹಾಡುವುದನ್ನು ನೆನಪಿಸುತ್ತದೆ. ಸಮಸ್ಯೆಯೆಂದರೆ, ನಾಡಗೀತೆಯ ಸದಾಶಯ ಅರ್ಥವಾಗಿದ್ದರೂ, ಅದನ್ನು ಯಾಂತ್ರಿಕವಾಗಿ ಹಾಡುವವರು ತಮ್ಮ ಬದುಕಿನಲ್ಲಿ ಪಾಲಿಸದೆ ಹೋಗಬಹುದು. ಬಹುತ್ವದ ಮೌಲ್ಯಾದರ್ಶಗಳ ಅರಿವು, ಅದನ್ನು ಯಾಂತ್ರಿಕ ಘೋಷಣೆ ಹಾಗೂ ನಿಜಜೀವನದ ಅನುಪಾಲನೆ ನಡುವೆ ಬಿರುಕುಗಳಿರುತ್ತವೆ. ಆದರೂ ಬಹುತ್ವದ ಆಶಯವನ್ನು ಕವಿಗಳು ಸಮಾಜವನ್ನು ಬಹುತ್ವದ ಮೌಲ್ಯಗಳನ್ನು ಶಬ್ದಾಡಂಬರದ ಭಾಷೆಯಲ್ಲಾದರೂ ಸರಿ, ಪುನರುಕ್ತಿ ಮಾಡುತ್ತಲೇ ಇರುತ್ತಾರೆ.
ಕನ್ನಡವನ್ನೂ ಒಳಗೊಂಡಂತೆ ಭಾರತೀಯ ಭಾಷೆಗಳು ಒಳಗೊಳ್ಳುವ ತತ್ವದಿಂದಲೇ ಬೆಳೆದು ಬಂದಿವೆ. ದ್ರಾವಿಡ ಭಾಷೆಯ ವ್ಯಾಕರಣ ಬುನಾದಿಯ ಮೇಲೆ ಹುಟ್ಟಿರುವ, ಕನ್ನಡವು ಪಾರಸಿ. ಅರಬ್ಬಿ ಮರಾಠಿ ಇಂಗ್ಲೀಷು, ತುರ್ಕಿ ಸಂಸ್ಕೃತ ಪೋರ್ಚುಗಲ್ ತಮಿಳು ಮಲೆಯಾಳ ಶಬ್ದಗಳನ್ನು ಒಳಗೊಂಡಿದೆ. ಭಾಷೆಗಳದ್ದು ನದಿಗಳಂತೆ ಒಳಗೊಳ್ಳುತ್ತಲೇ ಹೋಗುವ ಚಲನಶೀಲತೆ. ಇಲ್ಲಿಯೇ ಗಾಂಧಿಯವರ ಬಹುಭಾಷಾ ಕಲಿಕೆಯ ಪ್ರಯತ್ನಗಳನ್ನು ಸ್ಮರಿಸಬಹುದು.
ಸಬರಮತಿ ಆಶ್ರಮದಲ್ಲಿ ಅವರು ಹಲವು ಭಾಷೆಗಳಲ್ಲಿ ಸಹಿ ಮಾಡಿರುವ ಫಲಕವಿದೆ. ಅವರಿಗೆ ಜನಭಾಷೆಗಳನ್ನು ಕಲಿವ ಅತೀವ ಆಸ್ಥೆಯಿತ್ತು. ಅವರು ಕರ್ನಾಟಕಕ್ಕೆ ಬಂದಾಗ ಕನ್ನಡ ಕಲಿತರು. ಯರವಾಡಾ ಜೈಲಿನಲ್ಲಿದ್ದಾಗ ಉರ್ದು ಕಲಿತರು. ಉರ್ದು ಕಲಿಕೆಗೆ ವಿಶೇಷವಾದ ಚಾರಿತ್ರಿಕ ಒತ್ತಾಸೆಯಿತ್ತು. ಆ ಹೊತ್ತಿಗೆ ರಾಷ್ಟ್ರೀಯ ವಿಮೋಚನ ಚಳವಳಿಯಲ್ಲಿ ದ್ವಿರಾಷ್ಟ್ರ ಸಿದ್ಧಾಂತವು ತಲೆಹಾಕಿತ್ತು; ಹಿಂದು-ಮುಸ್ಲಿಮರು ಒಗ್ಗೂಡಿ ಮಾಡುತ್ತಿದ್ದ ಚಳವಳಿಯಲ್ಲಿ ಬಿರುಕು ಕಾಣಿಸಿದ್ದವು; ಹಿಂದಿ-ಉರ್ದುಗಳು ಧಾರ್ಮಿಕ ಸಮುದಾಯಗಳ ಭಾಷೆಗಳಾಗಿ ವಿಭಜಿತವಾಗುತ್ತಿದ್ದವು. ಧಾರ್ಮಿಕ ಸಮುದಾಯಗಳನ್ನು ವರ್ತಮಾನದ ಚಳವಳಿಯಲ್ಲೂ ಮತ್ತು ಭವಿಷ್ಯದ ಭಾರತದಲ್ಲೂ ಸಿಡಿದು ಹೋಗದಂತೆ ಹಿಡಿದಿಡುವ ಆವಶ್ಯಕತೆಯಿತ್ತು. ಇದಕ್ಕಾಗಿಯೇ ಅವರು ಹಿಂದಿ-ಉರ್ದುಗಳು ಹದವಾಗಿ ಬೆರೆವ ಹಿಂದೂಸ್ತಾನಿಯನ್ನು ದೇಶದ ಸಂಪರ್ಕ ಭಾಷೆ ಆಗಬೇಕೆಂದು ಬಯಸಿದರು. ‘ಭಾರತದ ಏಕತೆಯು ಭಾಷಿಕ ಧಾರ್ಮಿಕ ಸಾಂಸ್ಕೃತಿಕ ಬಹುತ್ವವನ್ನು ಕಾಪಾಡಿಕೊಳ್ಳುವಲ್ಲಿದೆ. ಪ್ರತಿಯೊಂದು ಪ್ರಾಂತ್ಯ ಧರ್ಮ ಭಾಷೆ ಮತ್ತು ಸಮುದಾಯಗಳನ್ನು ಒಳಗೊಳ್ಳುವುದರಿಂದ ಇದು ಸಾಧ್ಯ’ ಎಂದವರು ನಂಬಿದ್ದರು. ಇದಕ್ಕಾಗಿ ಖಿಲಾಫತ್ ಚಳವಳಿಯನ್ನು ಕಾಂಗ್ರೆಸ್ ಚಳವಳಿಯ ಭಾಗವಾಗಿಸಿದರು.
ಮೌಲಾನಾ ಅಬುಲ್ ಕಲಾಂ ಆಜಾದ್, ಖಾನ್ ಅಬ್ದುಲ್ ಗಫಾರ ಖಾನರು ಅವರ ಪ್ರಿಯ ಸಂಗಾತಿಗಳಾಗಿದ್ದರು. ಸಂಜೆಯ ಸರ್ವಧರ್ಮ ಪ್ರಾರ್ಥನೆಗಳಿಗೆ ಬಳಸುತ್ತಿದ್ದ ‘ರಘುಪತಿ ರಾಘವ ರಾಜಾರಾಂ ಪತಿತಪಾವನ ಸೀತಾರಾಂ’ ಭಜನೆಗೆ, ‘ಈಶ್ವರ ಅಲ್ಲಾ ತೇರೋ ನಾಂ ಸಬಕೊ ಸನ್ಮತಿ ದೇ ಭಗವಾನ್’ ಚರಣವನ್ನು ಅವರು ಮುದ್ದಾಮಾಗಿ ಸೇರಿಸಿದರು. ಇದರ ಮೊದಲ ಚರಣ ಸಂಸ್ಕೃತಮಯ; ಎರಡನೆಯದು ಜನಭಾಷೆಯಲ್ಲಿದೆ. ಚಳವಳಿಗೆ ಬಹುತ್ವ ಕೊಡುವಲ್ಲಿ ಅವರು ಭಾಷೆ ಮತ್ತು ಸಂಗೀತಗಳನ್ನು ಉಪಕರಣಗಳಾಗಿ ಬಳಸಿದರು.
ಈ ಹಿನ್ನೆಲೆಯಲ್ಲಿ ಅವರು, ತಮ್ಮೊಬ್ಬ ಸಂಗಾತಿಗೆ ಯರವಾಡಾ ಜೈಲಿನಿಂದ ಬರೆದ ಪತ್ರ ಕುತೂಹಲ ಹುಟ್ಟಿಸುತ್ತದೆ. ಇಕ್ಬಾಲರ ಮರಣವಾರ್ತೆ ಹೊತ್ತು ತಂದ ಆ ಪತ್ರಕ್ಕೆ ಜವಾಬನ್ನು ಅವರು ಉರ್ದುವಿನಲ್ಲಿ ನಶ್ತಲಿಕ್ ಲಿಪಿಯಲ್ಲಿ ಬರೆದರು:
“೯ ಜೂನ್, ೧೯೩೬, ಭಾಯಿ ಮಹಮದ್ ಹುಸೇನ್, ಆಪ ಕಾ ಖತ್ ಮಿಲಾ. ಡಾ. ಇಕ್ಬಾಲ್ ಮರಹೂಂ ಕೆ ಬಾರೆ ಮೇ ಮೈ ಕ್ಯಾ ಲಿಖೂ? ಲೇಕಿನ್ ಇತನಾ ಮೈ ಕಹ್ ಸಕ್ತಾ ಹೂಂ, ಜಬ್ ಉನಕಿ ಮಶಹೂರ್ ನಝಂ ‘ಹಿಂದೂಸ್ತಾನ್ ಹಮಾರ’ ಪಡೇ ತೊ ಮೇರ ದಿಲ್ ಉಬರ್ ಆಯಾ. ಔರ್ ಯರವಾಡಾ ಜೈಲ್ ಮೇ ತೊ, ಸೈಕಡೊ ಬಾರ್ ಇಸ್ ನಝಂ ಕೊ ಮೈನೆ ಗಾಯಾ ಹೋಗಾ. ಇಸ್ ನಝಂ ಕ ಅಲಫಾಜ್ ಮುಝೆ ಬಹುತ್ ಹೀ ಮೀಠೆ ಲಗೆ. ಔರ್ ಏ ಖತ್ ಲಿಖತಾ ಹೂಂ ತಬ್ ಭೀ, ಓ ನಝಂ ಮೇರೆ ಕಾನೋ ಮೇ ಗೂಂಜ್ ರಹೀ ಹೈ. ಆಪಕಾ ಎಂ. ಕೆ. ಗಾಂಧಿ”.
(ಸೋದರ ಮಹಮದ್ ಹುಸೇನ್, ನಿಮ್ಮ ಪತ್ರ ಸಿಕ್ಕಿತು. ದಿವಂಗತ ಡಾ. ಇಕ್ಬಾಲ್ ಅವರ ಬಗ್ಗೆ ಏನು ಬರೆಯಲಿ? ಇಷ್ಟಂತೂ ಹೇಳುವೆ. ಯಾವಾಗೆಲ್ಲ ಅವರ ಪ್ರಸಿದ್ಧ ಕವಿತೆ ‘ಹಿಂದೂಸ್ತಾನ್ ಹಮಾರ’ ಓದುತ್ತೇನೊ, ಆವಾಗೆಲ್ಲ ಮನಸ್ಸು ತುಂಬಿ ಬರುತ್ತದೆ. ಈ ಯರವಾಡಾ ಜೈಲಲ್ಲಂತೂ, ಸಾವಿರ ಸಲವಾದರೂ ಈ ಕವಿತೆಯನ್ನು ನಾನು ಹಾಡಿರಬಹುದು. ಈ ಕವಿತೆಯ ಶಬ್ದಗಳು ನನಗೆ ಬಹಳ ಮಧುರವೆನಿಸಿವೆ. ಈ ಪತ್ರ ಬರೆಯುತ್ತಿರುವಾಗಲೂ ಆ ಕವಿತೆ ನನ್ನ ಕಿವಿಗಳಲ್ಲಿ ಅನುರಣಿಸುತ್ತಿದೆ. )
ಇಲ್ಲಿ ಹುಸೇನರನ್ನು ಭಾಯಿ ಎಂದು ಸಂಬೋಧಿಸಲಾಗಿದೆ. ಭಾಯಿ – ಬಹೆನ್ ಗುಜರಾತಿನ ಸಾರ್ವಜನಿಕ ಸಂಬಂಧದಲ್ಲಿ ಬಳಕೆಯಾಗುವ ಸಾಮಾನ್ಯ ಶಬ್ದ ಗಳು. ಇಲ್ಲವು ಬಹುಧಾರ್ಮಿಕ ಸೋದರತ್ವವನ್ನು ಪ್ರತಿನಿಽಸುತ್ತಿವೆ. ಜನ ಭಾಷೆ ಬಳಸುವ ಮೂಲಕ ಒಳಗೊಳ್ಳುವ ಕೆಲಸವನ್ನು ಚಳವಳಿಗಾರರಂತೆ ಪ್ರಭು ತ್ವವೂ ಮಾಡುವುದಕ್ಕೆ ನಾಲ್ವಡಿ ಪತ್ರ ಸಾಕ್ಷಿಯಾಗಿದೆ. ದೇಶ ಕಟ್ಟುವ ಯಾವುದೇ ಮಹತ್ವಾಕಾಂಕ್ಷೀ ಯತ್ನಗಳು ಸರ್ವರನ್ನು ಒಳಗೊಳ್ಳುವ ಆಶಯದಿಂದಲೇ ಕೂಡಿರುತ್ತವೆ. ಆದರೆ ಭಾಷೆ ಧರ್ಮ ಅಧಿಕಾರ ಸಂಪತ್ತಿನ ವಿಷಯದಲ್ಲಿ ಅವು ತಾಳುವ ನಿಲುವಿನ ಮೇಲೆ ಅವುಗಳ ಕಟ್ಟುವಿಕೆಯ ಸ್ವರೂಪ ಮತ್ತು ಪರಿಣಾಮ ನಿರ್ಧರಿತವಾಗುತ್ತ.
ಮೈಸೂರು : ನಗರದ ಎನ್‌ಐಇ ಕಾಲೇಜು ಹಿಂಭಾಗದ ಅರಣ್ಯ ಇಲಾಖೆಯ ಶ್ರೀಗಂಧದ ಕೋಠಿ ಆವರಣದಲ್ಲಿ ಕ್ವಾರ್ಟರ್ಸ್ ಕಟ್ಟಡ ನಿರ್ಮಾಣಕ್ಕಾಗಿ ಹತ್ತಾರು…
ಮೈಸೂರು : ಕರ್ನಾಟಕದ ಕಲಾ-ಶಿಲ್ಪ ಪರಂಪರೆಯು ಮತ್ತೊಮ್ಮೆ ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದೆ. ಮೈಸೂರಿನ ಖ್ಯಾತ ಕರಕುಶಲ ಶಿಲ್ಪಿ ಕೈಸರ್…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕೃತವಾಗಿ ಗುರುವಾರದಿಂದ ಬಜೆಟ್ ತಯಾರಿಕೆಯ ಪೂರ್ವಭಾವಿ ಸಭೆಗಳನ್ನು ಆರಂಭಿಸಿದ್ದಾರೆ. ಮಾರ್ಚ್.6ರಂದು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಅವರು ತಮ್ಮ…
ಮೈಸೂರು: ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮೈಸೂರಿನ ಲಕ್ಷ್ಮೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ…
ಬೆಂಗಳೂರು: ಮೆಟ್ರೋ ಪ್ರಯಾಣ ದರ ಹೆಚ್ಚಳ ಮಾಡಿರುವುದನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು,…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕು ವ್ಯಾಪ್ತಿಯಲ್ಲಿ ಹಸುಗಳ ಮರಣ ಮೃದಂಗ ಮುಂದುವರೆದಿದ್ದು ಸಂಬಂಧಪಟ್ಟ ಪಶುಸಂಗೋಪನಾ…