ಎಡಿಟೋರಿಯಲ್

ತಾಯಿ ಹೃದಯದ ಡಾ.ಜೆ.ಕಮಲ ರಾಮನ್

ಡಾ.ಕೆ. ಸೌಭಾಗ್ಯವತಿ

ಮೈಸೂರು ನಗರದ ಖ್ಯಾತ ಸ್ತ್ರೀರೋಗ ತಜ್ಞರಾದ ಡಾ.ಜೆ.ಕಮಲ ರಾಮನ್ ನಿಧನರಾದರು ಎಂಬ ಸುದ್ದಿಯನ್ನು ಕೇಳಿ ಮನಸ್ಸಿಗೆ ಬಹಳ ಬೇಸರವಾಯಿತು. ಅವರು ಬಹೂಪಯೋಗಿ ಕಲ್ಪವೃಕ್ಷದ ಹಾಗೆ. ತಾವು ಇರುವಷ್ಟು ದಿನ ತಮ್ಮ ಕೈಲಾದ ಸಮಾಜ ಸೇವೆಯನ್ನು ನಿರಂತರವಾಗಿ, ಸುದೀರ್ಘವಾಗಿ ಮಾಡುತ್ತಾ ಬಂದವರು. ಸುಮಾರು ೧೯೬೫ -೬೬ ಆಸುಪಾಸಿನಲ್ಲಿ ಕೃಷ್ಣಮೂರ್ತಿಪುರಂನಲ್ಲಿ ಕಮಲ ರಾಮನ್ ಕ್ಲಿನಿಕ್ ಎಂಬ ಆಸ್ಪತ್ರೆಯನ್ನು ಶುರು ಮಾಡಿದರು. ಇವರು ಬಹಳ ಚಿಕ್ಕವಯಸ್ಸಿನಲ್ಲಿ ವೈದ್ಯ ವೃತ್ತಿಗೆ ಬಂದವರು. ಕೃಷ್ಣಮೂರ್ತಿಪುರಂ ಅಶೋಕಪುರಂಗೆ ಬಹಳ ಹತ್ತಿರವಿತ್ತು. ಹಾಗಾಗಿ ಅಲ್ಲಿಯ ಜನರೆಲ್ಲ ಕಮಲ ರಾಮನ್ ಅವರ ಕ್ಲಿನಿಕ್‌ಗೆ ಬರುತ್ತಿದ್ದರು. ಆ ಕ್ಲಿನಿಕ್ ಬೆಳೆಯಲು ಅಶೋಕಪುರಂ ಜನರ ಕೊಡುಗೆ ಅಪಾರವಾಗಿದೆ. ಕಮಲ ರಾಮನ್ ಬಡಜನರ ಸೇವೆಗಾಗಿ ತಮ್ಮ ಇಡೀ ಬದುಕನ್ನೇ ಮುಡುಪಾಗಿಟ್ಟರು.
ಅಶೋಕಪುರಂ ಕಮಲ ರಾಮನ್ ಅವರ ಪ್ರಾಯೋಗಿಕ ವೇದಿಕೆಯಾಗಿತ್ತು. ಅವರ ಪತಿ ಡಾ.ಜೆ.ಎಸ್.ರಾಮನ್ ಕೂಡ ವೈದ್ಯರು. ಅಶೋಕಪುರಂನಲ್ಲಿದ್ದ ಬಡ ಜನತೆ ಕಮಲ ರಾಮನ್ ಅವರನ್ನು ದೇವರಂತೆ ಕಾಣುತ್ತಿದ್ದರು. ಅದಕ್ಕೆ ಕಾರಣವೂ ಇಲ್ಲದಿಲ್ಲ. ಬಡವರ ಬಳಿ ಅವರೆಂದೂ ದುಡ್ಡು ಪಡೆದು ಚಿಕಿತ್ಸೆಯನ್ನು ಕೊಡುತ್ತಿರಲಿಲ್ಲ. ಇತರರಿಗೂ ಅತಿ ಕಡಿಮೆ ದರದಲ್ಲಿ ಚಿಕಿತ್ಸೆ ಕೊಡುತ್ತಿದ್ದರು.
ಕಮಲ ರಾಮನ್ ಅವರ ಆಸ್ಪತ್ರೆಯಲ್ಲಿ ನನ್ನ ತಾಯಿ ಹೆರಿಗೆಗಾಗಿ ದಾಖಲಾಗಿದ್ದರಂತೆ. ಹೆರಿಗೆ ತುಂಬಾ ಕಷ್ಟವಾಗಿ ಅತಿಯಾದ ನೋವು ಅನುಭವಿಸುವಂತಾಗಿತ್ತು. ಆಗ ನನ್ನ ತಾಯಿಗೆ ಕಮಲ ರಾಮನ್ ಅವರು ಪ್ರೀತಿಯಿಂದ ಆತ್ಮಸ್ಥೈರ್ಯ ತುಂಬಿ, ಸರಾಗವಾಗಿ ಹೆರಿಗೆ ಮಾಡಿಸಿದರಂತೆ. ಆಗ ಹುಟ್ಟಿದ್ದೇ ನಾನು. ಆದರೆ, ನನ್ನ ತೂಕ ಕಡಿಮೆಯಾಗಿದ್ದು, ಆ ಬಗ್ಗೆ ನಮ್ಮ ತಾಯಿ ಆತಂಕಪಟ್ಟಾಗ, ಏನು ಯೋಚಿಸಬೇಡಿ ಮಗು ಚೆನ್ನಾಗಿ ಬೆಳವಣಿಗೆ ಆಗುತ್ತದೆ. ಅವಳಿಗೆ ಒಳ್ಳೆಯ ಸಂಸ್ಕಾರ ಕಲಿಸಿ, ಸದ್ಗುಣಿಯನ್ನಾಗಿ ಮಾಡಿ ಎಂದು ಹೇಳಿ ಕಳುಹಿಸಿದರಂತೆ.
ನನ್ನ ಅಕ್ಕನ ಇಬ್ಬರು ಮಕ್ಕಳು ಅದೇ ಆಸ್ಪತ್ರೆಯಲ್ಲಿ ಹುಟ್ಟಿದ್ದರು. ಆ ಸಂದರ್ಭದಲ್ಲಿ ನನಗೆ ಬಹುಶಃ ೧೦ ವರ್ಷ ವಯಸ್ಸಿದ್ದಿರಬಹುದು. ನನ್ನ ತಾಯಿ ವೈದ್ಯರನ್ನು ಕಂಡೊಡನೆ, ನನಗೆ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆಯಲು ಸೂಚಿಸಿದರು. ಆದರೆ ಕಮಲ ರಾಮನ್ ಅವರು ನಾನು ಕಾಲಿಗೆ ಬೀಳುವುದನ್ನು ಒಪ್ಪಲಿಲ್ಲ. ಬದಲಿಗೆ ಕೆನ್ನೆ ಹಿಂಡಿ, ತಲೆನೇವರಿಸಿ ಚೆನ್ನಾಗಿ ಓದು ಎಂದು ಹರಸಿದರು.
ಕಮಲ ರಾಮನ್ ಸಹಜ ಹೆರಿಗೆಗೆ ಪ್ರಸಿದ್ಧರಾಗಿದ್ದರು. ಸಿಸೇರಿಯನ್ ಎಂಬ ಪದದ ಪರಿಚಯವೇ ನಮಗಿರಲಿಲ್ಲ. ಅವರ ಆಸ್ಪತ್ರೆಗೆ ಕಾಲಿಟ್ಟು ಹೆರಿಗೆ ನೋವು ಬಂದ ಹೆಂಗಸಿನ ಬಳಿ ಅವರೇ ಖುದ್ದಾಗಿ ಬಂದು ತಲೆನೇವರಿಸಿ, ಧೈರ್ಯ ಹೇಳಿ, ಸಾಂತ್ವನ ಹೇಳಿ ಹೆರಿಗೆ ವಾರ್ಡಿಗೆ ಕರೆದುಕೊಂಡು ಹೋಗಿ ಹೆರಿಗೆ ಮಾಡಿಸುತ್ತಿದ್ದರು. ಅವರ ಆತ್ಮೀಯತೆ ಅವಿಸ್ಮರಣೀಯವಾಗಿತ್ತು. ಜಾತಿ, ಧರ್ಮ, ಮತ ಭೇದವಿಲ್ಲದೆ ಎಲ್ಲ ಧರ್ಮಗಳ ಜನರನ್ನೂ ತುಂಬು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆ ಸಂದರ್ಭದಲ್ಲಿ ನಮಗೆ ಬಸವಣ್ಣನವರ
‘ದಯವೇ ಧರ್ಮದ ಮೂಲವಯ್ಯ
ದಯವೆ ಬೇಕು ಸಕಲ ಜೀವಿಗಳಲ್ಲಿ ..’ ಎಂಬ ವಚನ ನೆನಪಾಗುತ್ತಿತ್ತು.
ಒಬ್ಬ ವೈದ್ಯೆ ಕಾಯಾ, ವಾಚಾ, ಮನಸಾ ತಮ್ಮ ವೃತ್ತಿಯಲ್ಲಿ ಪ್ರಾಮಾಣಿಕವಾಗಿ ತಮ್ಮನ್ನು ತೊಡಗಿಸಿಕೊಂಡರೆ, ಇಡೀ ಪರಿಸರ ಎಷ್ಟು ಆರೋಗ್ಯದಿಂದ ಇರುತ್ತದೆ ಎಂಬುದಕ್ಕೆ ಕಮಲ ರಾಮನ್ ಅವರು ಅತ್ಯುತ್ತಮ ಉದಾಹರಣೆಯಾಗಿದ್ದಾರೆ. ನಗುಮುಖದಿಂದ ಅವರು ಜನರನ್ನು ಮಾತನಾಡಿಸುತ್ತಿದ್ದ ರೀತಿ ಅನನ್ಯವಾದದ್ದು. ಅಶೋಕಪುರಂ ಜನರಿಗೆ ಅವರೆಂದರೆ ಅಚ್ಚುಮೆಚ್ಚು.
ಕಮಲ ರಾಮನ್ ಅವರು ನಾನು ಓದಿದ ಶಾಲೆ ವನಿತಾ ಸದನದ ಅಧ್ಯಕ್ಷರಾಗಿದ್ದರು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದು ಮಕ್ಕಳನ್ನು ಕಂಡು ಪ್ರೀತಿಯಿಂದ ಮಾತನಾಡಿಸಿ ಸಂತೋಷಪಡುತ್ತಿದ್ದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾಗಿದ್ದಾಗಲೂ, ಹಲವಾರು ಜನೋಪಯೋಗಿ ಕಾರ್ಯಗಳನ್ನು ಮಾಡಿದ್ದರು. ಹಣ ಸಂಪಾದನೆ, ಪ್ರಚಾರಕ್ಕಾಗಿ ಅವರು ಎಂದೂ ಆಸೆ ಪಟ್ಟವರಲ್ಲ. ತಮ್ಮ ಕಾಯಕವನ್ನು ಬಹಳ ನಿಷ್ಠೆಯಿಂದ ಮಾಡುತ್ತಾ ಕ್ರಿಯಾಶೀಲರಾಗಿದ್ದು, ಹೃದಯವಂತರಾಗಿದ್ದರು. ಪ್ರಸ್ತುತ ಕಾಲಘಟ್ಟದಲ್ಲಿ ಅವರಂತಹ ವೈದ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ.
ಆ ಕಾಲದಲ್ಲಿ ಇಡೀ ಮೈಸೂರಿನಲ್ಲಿ ಉತ್ತಮ ಸ್ತ್ರೀ ರೋಗ ತಜ್ಞೆ ಎಂಬ ಹೆಸರು ಅವರಿಗಿತ್ತು. ಬೇರೆ ಊರುಗಳಿಂದ ಜನರು ಬಂದು ಅವರ ಸೇವೆಯನ್ನು ಪಡೆಯುತ್ತಿದ್ದರು. ಪುಟ್ಟಮನೆಯಲ್ಲಿ ಶುರು ಮಾಡಿದ ಆಸ್ಪತ್ರೆಯು ಈಗ ವಿಸ್ತಾರವಾಗಿ ಬೆಳೆದಿದೆ. ಅದಕ್ಕೆ ಕಾರಣ ಅವರೊಂದಿಗೆ ಕೆಲಸ ಮಾಡಿದ ವೈದ್ಯರು, ಸಿಬ್ಬಂದಿ ವರ್ಗ. ಅವರಷ್ಟೇ ಪ್ರಾಮಾಣಿಕವಾಗಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ವೈದ್ಯರೆಂದರೆ ಹೀಗಿರಬೇಕು ಎಂಬ ಭೂಮಿಕೆಗೆ ಅವರು ಜ್ವಲಂತ ಸಾಕ್ಷಿಯಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ವೈದ್ಯರ ಜನ ವಿರೋಧಿ ವರ್ತನೆ ಗಮನಿಸಿದರೆ, ನಮಗೆ ಕಮಲ ರಾಮನ್ ಅವರು ವಿಭಿನ್ನವಾಗಿ ಮಾನವತೆಯ ಶಿಖರವಾಗಿ ಕಾಣುತ್ತಿದ್ದರು. ಅವರೀಗ ನಮ್ಮೊಡನಿಲ್ಲ. ಆದರೆ ಅವರ ಬದುಕು ಯುವ ವೈದ್ಯರಿಗೆ ಆದರ್ಶಪ್ರಾಯವಾಗಿದೆ.

andolanait

Recent Posts

ಕೊಡಗು: ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ

ಕೊಡಗು: ಜಿಲ್ಲೆಯ ನೆಲ್ಯಹುದಿಕೇರಿ ಸಮೀಪದ ಅತ್ತಿಮಂಗಲದಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಕಾರ್ಮಿಕರ ಮೇಲೆ ಕಾಡಾನೆ ದಾಳಿ ನಡೆಸಿದೆ. ಸ್ಕೂಟರ್‌ನಲ್ಲಿ ತೆರಳುತ್ತಿದ್ದ 60…

3 hours ago

ಓದುಗರ ಪತ್ರ: ಗ್ರಹಣ..!

ಗ್ರಹಣ..! ಸೂರ್ಯ-ಚಂದ್ರರ ನಡುವೆ ಭೂಮಿ ಬಂದರೆ ಚಂದ್ರ ಗ್ರಹಣ ! ಭಾರತ-ರಷ್ಯಾ ನಡುವೆ ಅಮೆರಿಕ ಬಂದರೆ ‘ಸುಂಕ ’ ಗ್ರಹಣ…

7 hours ago

ಓದುಗರ ಪತ್ರ: ಪೆಟ್ರೋಲ್ ಬಂಕ್‌ಗಳಲ್ಲಿ ಮೋಸ: ಗರಿಷ್ಟ ಕ್ರಮ ಕೈಗೊಳ್ಳಲಿ

ರಾಜ್ಯದ ೮೦೫ ಪೆಟ್ರೋಲ್ ಬಂಕ್‌ಗಳ ತಪಾಸಣೆಯಲ್ಲಿ ಬರೋಬ್ಬರಿ ೭೬೮ ಬಂಕ್‌ಗಳಲ್ಲಿ (ಶೇ. ೮೫ ರಷ್ಟು) ಅಳತೆಯಲ್ಲಿ ಮೋಸ ಕಂಡುಬಂದಿರುವುದು ಸಾರ್ವಜನಿಕರಿಗೆ…

7 hours ago

ಓದುಗರ ಪತ್ರ: ಉದ್ಯೋಗ ಸೃಷ್ಟಿ : ಫ್ಲಿಪ್‌ಕಾರ್ಟ್ ನಡೆ ಸ್ವಾಗತಾರ್ಹ

ಒಂದು ಕಡೆ ಒರಾಕಲನಂತಹ ಕಂಪೆನಿಗಳು ತಮ್ಮ ನೌಕರರನ್ನು ಯಾವುದೇ ಮುನ್ಸೂಚನೆ ನೀಡದೇ ಕೇವಲ ಒಂದೇ ಒಂದು ಇ ಮೇಲ್ ಸಂದೇಶದ…

7 hours ago

ಸುಗಮ ಸಂಗೀತದ ಅದ್ಬುತ ಗಾಯಕ ಮಡಿಕೇರಿ ನಾಗೇಂದ್ರ

ಡಾ.ಕೆ.ವಿ.ಲಕ್ಷ್ಮೀದೇವಿ, ಗುರುಕೃಪಾ ಸಂಗೀತ ಕೇಂದ್ರ, ಮೈಸೂರು ಇಂದು ಗುರು ನಮನ ಮಡಿಕೇರಿ ನಾಗೇಂದ್ರರೆಂದೇ ಪ್ರಖ್ಯಾತರಾದ ‘ಗುರು ಕೃಪಾ ಸಂಗೀತ ಕೇಂದ್ರ’ದ…

10 hours ago

ಸುಮ್ಮನಿದ್ದರೂ ಪರಿಣಮಿಸುವ ರಂಗಭೂಮಿಯ ಝೆನ್ ಗುರು – ಜಂಬೆ ಮೇಷ್ಟ್ರು

ಸತೀಶ್ ತಿಪಟೂರು ಕರ್ನಾಟಕದ ಯಾವುದೇ ಭಾಗದಲ್ಲಿ ಜಂಬೆ ಮೇಷ್ಟ್ರ ಹಿರಿ - ಕಿರಿಯ ವಿದ್ಯಾರ್ಥಿಗಳು ಮೂರ್ನಾಲ್ಕು ಜನ ಒಂದೆಡೆ ಸೇರಿದರೆಂದರೆ…

10 hours ago