ಎಡಿಟೋರಿಯಲ್

ಭೂಮಿಗೆ ಮೊದಲ ಬಾರಿಗೆ ನೀರನ್ನು ಹೊತ್ತು ತಂದದ್ದೇ ಉಲ್ಕೆಗಳು!

ಕಾರ್ತಿಕ್ ಕೃಷ್ಣ

ಬೇಂದ್ರೆಯವರ ‘ಗಂಗಾವತರಣ’ ಕವನದ ಸಾಲುಗಳು ನನ್ನನ್ನು ಆಗಾಗ ಕಾಡುತ್ತಿರುತ್ತವೆ. ‘ದಿಗ್ದಿಗಂತದಲಿ ಹಣಿಸಿ ಬಾ….ಚರಾಚರಗಳಿಗೆ ಉಣಿಸಿ ಬಾ…ಇಳಿದು ಬಾ ತಾಯಿ ಇಳಿದು ಬಾ..’ ಎಂದು ಅವರು ಗಂಗೆಯನ್ನು ಭುವಿಗೆ ಇಳಿಸುವ ಪರಿ ನಿಜಕ್ಕೂ ರೋಮಾಂಚನಕಾರಿ! ಹಾಗೆಯೇ ಭಗೀರಥ ಪ್ರಯತ್ನದಿಂದ, ಮೇಲಿನಿಂದ ವೇಗವಾಗಿ ಇಳಿದುಬಂದ ಗಂಗೆಯನ್ನು ಮಹಾದೇವ ತನ್ನ ಜಟೆಯಲ್ಲಿ ಹಿಡಿದಿಟ್ಟ ಕಥೆ ನಿಮಗೆ ಗೊತ್ತಿರಬಹುದು. ಅಂತೂ ಗಂಗಾ ನದಿ ಇಳಿದುಬಂದದ್ದು ಮೇಲಿನಿಂದ ಎಂಬುದು ಪ್ರತೀತಿ. ನಾನಿಲ್ಲಿ ಪುರಾಣ ಕಥೆಯನ್ನು ಉಲ್ಲೇಖಿಸಿ, ಗಂಗೆ ಇಳಿದು ಬಂದದ್ದು ಮೇಲಿನಿಂದ ಎಂದು ಹೇಳಲು ಕಾರಣವಿದೆ. ಅದೇನೆಂದರೆ, ಭೂಮಿಯ ಮೇಲೆ ನೀರು ಹೇಗೆ ಸೃಷ್ಟಿಯಾಯಿತು ಎಂಬುದರ ಬಗೆಗೊಂದು ನಿಖರವಾದ ಮಾಹಿತಿ ವಿಜ್ಞಾನಿಗಳಿಗೆ ಸಿಕ್ಕಿ, ವರುಷಗಳಿಂದ ಇದ್ದ ಊಹೆಯನ್ನು ಸಾಬೀತುಪಡಿಸಿದ್ದಾರೆ. ಹಾಗಾದರೆ, ಭೂಮಿಗೆ ನೀರು ಹರಿದು ಬಂದದ್ದು ಎಲ್ಲಿಂದ? ಮೇಲಿನಿಂದ ! ಹೇಗೆ ಗೊತ್ತೇ? ವಿಜ್ಞಾನದ ಒಂದು ಪ್ರಸ್ತಾಪದಲ್ಲಿ ಭುವಿಯ ಮೇಲಿನ ನೀರಿನ ಹುಟ್ಟಿಗೆ ಕಾರಣ ಕೋಟ್ಯಾಂತರ ವರುಷಗಳ ಹಿಂದೆ ಅಪ್ಪಳಿಸಿದ ʼಉಲ್ಕಾಶಿಲೆʼ ಯಾನೆ  Meteorite.

ಭೂಮಿ ಶೇಖಡಾ ೭೧ರಷ್ಟು ನೀರಿನಿಂದ ಆವರಿಸಿದೆ. ಅದರಲ್ಲಿ ಶೇಖಡಾ ೯೧.೬೫ ನೀರು ಇರುವುದು ಸಮುದ್ರದಲ್ಲಿ. ಅಷ್ಟೊಂದು ಅಗಾಧವಾಗಿ ವ್ಯಾಪಿಸಿರುವ ನೀರು ಹುಟ್ಟಿದ್ದಾದರೂ ಎಲ್ಲಿಂದ? ವಿಜ್ಞಾನಿಗಳ ಪ್ರಕಾರ ಭೂಮಿಯ ಹುಟ್ಟಿನ ಸಮಯದಲ್ಲಿ ನೀರಿನ ಅಂಶ ಇಲ್ಲಿರಲಿಲ್ಲ. ಕಾಲ ಕ್ರಮೇಣ ಭೂಮಿಗೆ ಅಪ್ಪಳಿಸಿದ ಉಲ್ಕಾಶಿಲೆಗಳು ನೀರಿನ ಅಂಶವನ್ನು ಬಾಹ್ಯಾಕಾಶದಿಂದ ಹೊತ್ತು ತಂದವು ಎಂಬುದು ವಿಜ್ಞಾನ ವಲಯದಲ್ಲಿ ಇರುವಂತ ಒಂದು ವಾದ. ಅದನ್ನು ನಿರೂಪಿಸಲು ಹಲವಾರು ಪ್ರಯತ್ನಗಳು ಕೂಡ ನಡೆದಿವೆ. ಆ ವಾದವನ್ನು ಸಮರ್ಥವಾಗಿ ನಿರೂಪಿಸುವಂತ ಅಧ್ಯಯನ ಕಳೆದೊಂದು ವರುಷದಿಂದ ನಡೆದು, ಕರಾರುವಾಕ್ ಸಾಕ್ಷಿಗಳು ಸಿಕ್ಕಿ, ಭೂಮಿಗೆ ನೀರನ್ನು ಕರೆತಂದದ್ದು ಉಲ್ಕಾಶಿಲೆಗಳೇ ಎಂದು ಸಾಬೀತಾಗಿದೆ. ಅದರ ಬಗ್ಗೆ ಮುಂಚೆ ಒಂದು ಸೋಜಿಗದ ಸಂಗತಿಯನ್ನು ನಿಮಗೆ ತಿಳಿಸುತ್ತೇನೆ. ಇಡೀ ಬ್ರಹ್ಮಾಂಡದಲ್ಲಿ ಇರುವ ನೀರಿನ ಪರಿಮಾಣವನ್ನು ನೀವು ಈ ಅಂಕಿಅಂಶದಿಂದ ಊಹಿಸಬಹುದು.

ಖಗೋಳ ಶಾಸ್ತ್ರಜ್ಞರು, ಭೂಮಿಯಿಂದ ೧೨೦೦ ಕೋಟಿ ಜ್ಯೋತಿರ್ವರ್ಷಗಳ ದೂರದಲ್ಲಿ ಬೃಹತ್ ಗಾತ್ರದ ನೀರಿನ ಜಲಾಶಯವೊಂದನ್ನು ಕಂಡುಹಿಡಿದ್ದಾರಂತೆ. ಆ ಜಲಾಶಯದಲ್ಲಿ ಭೂಮಿಯ ಮೇಲಿನ ನೀರಿಗಿಂತ ೧೪೦ ಟ್ರಿಲಿಯನ್ ಪಟ್ಟು ಹೆಚ್ಚು ನೀರಿದೆ ಎಂಬುದು ನಾಸಾದ ಅಭಿಪ್ರಾಯ! ಬ್ರಹ್ಮಾಂಡದ ಆಳ ಹಾಗೂ ಅಗಲ ಯಾರಿಗೂ ತಿಳಿದಿಲ್ಲ. ಇಂತಹ ನೀರಿನ ಮೂಲಗಳು ಅದೆಷ್ಟಿದೆಯೋ!

೨೦೨೧ರ ಫೆಬ್ರವರಿ ತಿಂಗಳಿನಲ್ಲಿ ಇಂಗ್ಲೆಂಡ್ ದೇಶದ ವಿಂಚ್ಕೊಂಬ್ ಪಟ್ಟಣಕ್ಕೆ ಅಸಾಧಾರಣವಾದುದೊಂದು ಉಲ್ಕಾಶಿಲೆ ಅಪ್ಪಳಿಸಿತ್ತು. ಸುಮಾರು ೪೬೦ ಕೋಟಿ ವರುಷ ಹಳೆಯ ಉಲ್ಕೆಯದು! ಅದರ ಮೇಲೆ ಅಧ್ಯಯನ ನಡೆಸಿದ ಸಂಶೋಧಕರಿಗೆ ಸಿಕ್ಕಿದ್ದು ಏನು ಗೊತ್ತೇ? ಭೂಮಿಯ ಮೇಲಿನ ನೀರಿನಂತೆ ಸಂಯೋಜನೆಯುಳ್ಳ ನೀರಿನ ಅಂಶ! ನಮ್ಮ ಗ್ರಹವು ‘ಜೀವ ಸೆಲೆ’ಯನ್ನು ಹೇಗೆ ಪಡೆದುಕೊಂಡಿತು ಎಂಬುದಕ್ಕೆ ಈ ಸಂಶೋಧನೆ ಸಂಭವನೀಯ ವಿವರಣೆಯನ್ನು ನೀಡಿ, ನೀರಿನ ಉಗಮದ ವಾದಕ್ಕೆ ತೆರೆಯೆಳೆಯಿತು.

ನಿಮಗೆ ತಿಳಿದಿರಲಿ, ನಮ್ಮ ಸೌರ ವ್ಯೆಹ ಇನ್ನೂ ಸೃಷ್ಟಿಯ ಹಂತದಲ್ಲಿದ್ದಾಗ ಎಲ್ಲಾ ಗ್ರಹಗಳು ಸೂರ್ಯನಿಗೆ ತೀರಾ ಹತ್ತಿರದಲ್ಲಿದ್ದು, ಯಾವ ಬಗೆಯ ಜೀವರಾಶಿಯೂ ಅಸ್ತಿತ್ವದಲ್ಲಿರಲಿಲ್ಲ. ಹಾಗಾದರೆ ಭೂಮಿಯ ಮೇಲೆ ಹಾಗೂ ಬೇರೆಲ್ಲಾ ಜೀವ ರಾಶಿ ಉಗಮಗೊಂಡಿದ್ದು ಹೇಗೆ? ಕಾಲ ಕ್ರಮೇಣ, ಸೂರ್ಯ ಹಾಗು ಭೂಮಿಯ ಅಂತರ ಹೆಚ್ಚಿ, ಭೂಮಿಯು ತಣ್ಣಗಾದಾಗ ಮತ್ತು ಹೊರಗಿನ ಸೌರವ್ಯೆಹದಿಂದ ಮಂಜುಗಡ್ಡೆಯ ಕ್ಷುದ್ರಗ್ರಹಗಳು ಹೆಪ್ಪುಗಟ್ಟಿದ ನೀರನ್ನು ಹೊತ್ತು ಭೂಮಿಗೆ ಅಪ್ಪಳಿಸಿದಾಗ ಜೀವ ವೈವಿಧ್ಯದ ಉಗಮ ಆಯಿತು ಎನ್ನುತ್ತಾರೆ ಖಗೋಳಶಾಸ್ತ್ರಜ್ಞರು. ಈಗ, ವಿಂಚ್ಕಾಂಬ್ ಉಲ್ಕಾಶಿಲೆಯ ಹೊಸ ವಿಶ್ಲೇಷಣೆಯು ಈ ಸಿದ್ಧಾಂತಕ್ಕೆ ಮತ್ತಷ್ಟು ಪುಷ್ಟಿನೀಡುತ್ತದೆ.

ಇದರ ಕುರಿತು ಸೈನ್ಸ್ ಅಡ್ವಾನ್ಸಸ್ ಜರ್ನಲ್ ನಲ್ಲಿ ಪ್ರಕಟಗೊಂಡ ವಿಶ್ಲೇಷಣೆಯ ಸಹ ಲೇಖಕರಾದ ಲ್ಯೂಕ್ ಡಾಲಿ ಅವರ ಪ್ರಕಾರ, ಈ ಅನ್ವೇಷಣೆಯು ಬರೀ ನೀರಿನ ಉಗಮದ ಬಗ್ಗೆ ಮಾಹಿತಿಯನ್ನು ನೀಡುವುದಲ್ಲದೆ, ಭೂಮಿಯ ಮೇಲೆ ಜೀವ ವೈವಿಧ್ಯದ ಹುಟ್ಟಿನ ಬಗ್ಗೆಯೂ ಇಲ್ಲಿಯ ವರೆಗೆ ತಿಳಿಯದ ರಹಸ್ಯಗಳನ್ನು ಬಹಿರಂಗ ಪಡಿಸಲಿದೆಯಂತೆ! ಇಂಗ್ಲೆಂಡ್ ನಲ್ಲಿ ಅಪ್ಪಳಿಸಿದ ಆ ಉಲ್ಕೆಯ ಬಗ್ಗೆ ಹೇಳುವುದಾದರೆ, ಅದೊಂದು ‘ಕಾರ್ಬೊನೇಸಿಯಸ್ ಕಾಂಡ್ರೈಟ್’ ಎಂದು ಕರೆಯಲ್ಪಡುವ ಅಪರೂಪದ ಕಾರ್ಬನ್-ಸಮೃದ್ಧ ಉಲ್ಕೆ.

ಅದು ಅಪ್ಪಳಿಸಿದ ಕೆಲವೇ ಘಂಟೆಗಳಲ್ಲಿ ಅದನ್ನು ಸಂಗ್ರಹಿಸಿದ ಕಾರಣ ಅದೊಂದು ಕಲುಷಿತಗೊಳ್ಳದ ಶುದ್ಧ ಉಲ್ಕೆಯೆಂದು ವಿಶ್ಲೇಷಣೆಯ ಮುಖ್ಯ ಲೇಖಕರಾದ ಆಶ್ಲೇ ಕಿಂಗ್ ಬಣ್ಣಿಸುತ್ತಾರೆ. ಹೀಗೆ ಸಿಕ್ಕಿದ ಉಲ್ಕೆಯು, ಭೂಮಿಯ ವಾತಾವರಣದ ಹೊಡೆತಕ್ಕೆ ಸಿಕ್ಕದೆ ತನ್ನ ಮೂಲ ರೂಪದಲ್ಲಿರುವುದರಿಂದ ಅದನ್ನು  Prestine rock’ ಎನ್ನುವುದುಂಟು. ಮೂಲ ರೂಪದಲ್ಲಿಯೇ ಉಲ್ಕೆಯೊಂದು ಸಿಗುವುದು ತೀರಾ ಅಪರೂಪ. ಉಲ್ಕೆಯೊಂದು ಅಪ್ಪಳಿಸಿದ ಕೂಡಲೇ ಸಂಶೋಧಕರೊಡನೆ ಜನ ಸಾಮಾನ್ಯರೂ ಅದರ ತುಣುಕುಗಳನ್ನು ಸಂಗ್ರಹಿಸಲು ದೌಡಾಯಿಸುತ್ತಾರೆ. ವಿಂಚ್ಕೊಂಬ್ ನಲ್ಲಿ ಹೀಗೆ ಸಿಕ್ಕಿದ ೧.೭ ಗ್ರಾಂ ತೂಕದ ಉಲ್ಕೆಯ ತುಂಡೊಂದು ಸುಮಾರು ೧೦ ಲಕ್ಷ ರೂಪಾಯಿಗೆ ಹರಾಜಾಗಿತ್ತಂತೆ!

ಉಲ್ಕೆಯ ಸಂಯೋಜನೆಯನ್ನು ಪರೀಕ್ಷಿಸಲು ಸಂಶೋಧನಾ ತಂಡವು ಅದನ್ನು ಹಲವಾರು ಪರೀಕ್ಷೆಗೆ ಒಳಪಡಿಸಿದ್ದರು.

ಅತಿಯಾದ ಶಾಖದಲ್ಲಿರಿಸಿ ಕ್ಷ ಕಿರಣಗಳನ್ನು ಹರಿಸಿ, ಲೇಸರ್‌ನಲ್ಲಿ ತೋಯಿಸಿ ನೋಡಿದಾಗ ಅದರಲ್ಲಿ ಶೇಕಡಾ ೧೧ ರಷ್ಟು ನೀರಿನ ಅಂಶವಿರುವುದು ತಿಳಿದುಬಂತು. ಹಾಗೆಯೆ ಅದು ಭೂಮಿಗೆ ಅಪ್ಪಳಿಸುವ ಮೊದಲು ಗುರು ಗ್ರಹದ ಆಸುಪಾಸಿನಲ್ಲಿ ಸುತ್ತುತ್ತಿತ್ತು ಎಂಬುದೂ ಕೂಡ ಮನವರಿಕೆಯಾಯಿತು. ಉಲ್ಕಾಶಿಲೆಯಲ್ಲಿ ನೀರು ಕಂಡುಬಂದದ್ದು, ಸಾಮಾನ್ಯವಾಗಿ ಕಂಡುಬರುವ ಹೈಡ್ರೋಜನ್ ಹಾಗೂ ಡ್ಯೂಟೇರಿಯಮ್ ಎಂದು ಕರೆಯಲ್ಪಡುವ ಹೈಡ್ರೋಜನ್ ಸಮಸ್ಥಾನಿಯ ರೂಪದಲ್ಲಿ. ಹೈಡ್ರೋಜನ್ ಮತ್ತು ಡ್ಯೂಟೇರಿಯಮ್ ನ ಅನುಪಾತವು ನಮ್ಮ ಗ್ರಹದಲ್ಲಿ ಕಂಡುಬರುವ ನೀರಿನಂತೆಯೇ ಇದೆ ಎಂದು ಸಂಶೋಧಕರು ಧೃಡಪಡಿಸಿದ್ದಾರೆ. ಬಾಹ್ಯಾಕಾಶ ಶಿಲೆಯಲ್ಲಿ ಕಂಡುಬಂದ ನೀರು ಮತ್ತು ಭೂಮಿಯ ನೀರು ಒಂದೇ ಮೂಲವನ್ನು ಹೊಂದಿವೆ ಎಂಬುದಕ್ಕೆ ಈ ಅನ್ವೇಷಣೆಯೊಂದು ಬಲವಾದ ಸಾಕ್ಷಿಯಾಗಿದ್ದು, ಮುಂಬರುವ ದಿನಗಳಲ್ಲಿ ಜೀವ ವೈವಿಧ್ಯದ ಉಗಮದ ಬಗ್ಗೆಯೂ ಕುತೂಹಲಕಾರಿ ಮಾಹಿತಿ ಅನಾವರಣಗೊಳ್ಳಲಿದೆಯೇ ಎಂದು ಕಾದು ನೋಡಣ!

 

andolanait

Recent Posts

ಬನ್ನೇರುಘಟ್ಟ ಉದ್ಯಾನಕ್ಕೆ ಹೊಸ ಅತಿಥಿಯ ಆಗಮನ: ಮುದ್ದಾದ ಮರಿಗೆ ಜನ್ಮ ನೀಡಿದ ನೀರಾನೆ

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನೀರಾನೆಯೊಂದು ಮುದ್ದಾದ ಮರಿಗೆ ಜನ್ಮ ನೀಡಿದೆ. ಉದ್ಯಾನದಲ್ಲಿದ್ದ 17 ವರ್ಷ ವಯಸ್ಸಿನ ದಶ್ಯ ಎಂಬ…

11 hours ago

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ…

11 hours ago

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಯನ್ನು ನಿಲ್ಲಿಸಲ್ಲ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ…

12 hours ago

ರಾಜ್ಯದಲ್ಲಿ ಮುಂದಿನ 7 ದಿನಗಳ ಕಾಲ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಮುಂದಿನ ಏಳು ದಿನಗಳ ಕಾಲ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೋಲಾರ, ಹಾಸನ,…

14 hours ago

ಓದುಗರ ಪತ್ರ: ‘ಮನೆಗೊಂದು ಗ್ರಂಥಾಲಯ’ ಯೋಜನೆ ಯಶಸ್ವಿಯಾಗಲಿ

‘ಮನೆಗೊಂದು ಗ್ರಂಥಾಲಯ’ ಹೆಸರಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರವು ವಿಶಿಷ್ಟ ಯೋಜನೆಯೊಂದನ್ನು ಪ್ರಾರಂಭ ಮಾಡಿರುವುದು ಶ್ಲಾಘನೀಯ. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ…

17 hours ago

ಓದುಗರ ಪತ್ರ: ವಿದ್ಯಾರ್ಥಿ ಬಸ್ ಪಾಸ್ ದೂರ ಮಿತಿ ಹೆಚ್ಚಿಸಲಿ

ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಬಳಿಕ ರಾಜ್ಯದ ಶಾಲಾ -ಕಾಲೇಜುಗಳ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವುದಾಗಿ…

17 hours ago