ಎಡಿಟೋರಿಯಲ್

ನಿಯೊಮ್‌ನಲ್ಲಿ ‘ದಿ ಲೈನ್’ ಎಂಬ ಮಾಯಾನಗರಿ

-ಕಾರ್ತಿಕ್ ಕೃಷ್ಣ

ನೀವು ಸಿನಿ ಪ್ರಿಯರಾಗಿದ್ದರೆ ಇಂತಹದ್ದೊಂದು ನಗರವನ್ನು ಯಾವುದಾದರೂ ಸಿನಿಮಾದಲ್ಲಿ ಖಂಡಿತಾ ನೋಡಿರುತ್ತೀರಿ. ಅಲ್ಲಿ ಹಾರುವ ಕಾರುಗಳಿರುತ್ತವೆ, ರಸ್ತೆಗಳಿರುವುದಿಲ್ಲ, ವಿಧವಿಧದ ಆಕಾರದ ಕಟ್ಟಡಗಳಿರುತ್ತವೆ, ಮಾಲಿನ್ಯದ ಅಸ್ತಿತ್ವವೇ ಅಲ್ಲಿರುವುದಿಲ್ಲ ಹಾಗು ನಿಸರ್ಗ ಕಣ್ಣು ಕೋರೈಸುವಂತಿರುತ್ತದೆ. ಬ್ಲಾಕ್ ಪ್ಯಾಂಥರ್ ಸಿನಿಮಾದ ‘ವಕಾಂಡ’ ಪಟ್ಟಣ ಭಾಗಶಃ ಇದೇ ರೀತಿ ಇರುವುದನ್ನು ನೀವು ಗಮನಿಸಿರಬಹುದು. ಅಲ್ಲಿನ ತಂತ್ರಜ್ಞಾನ ಕೂಡ ಸಾಕಷ್ಟು ಮುಂದುವರೆದಿರುತ್ತದೆ. ಭೂಸ್ವರ್ಗವೆಂದರೂ ತಪ್ಪಾಗಲಾರದು! ಕೇಳಲು ಯಾವುದೋ ಮಾಯಾಲೋಕದ ವರ್ಣನೆಯಂತಿದೆಯಲ್ಲವೇ? ಹಾಗೆಯೆ ‘ದಿ ಇಂಟರ್‌ಸ್ಟೆಲ್ಲರ್’ ಸಿನಿಮಾದ ಕೊನೆಯಲ್ಲಿ ತೋರಿಸಲಾದ ಒಂದು ಗೋಲಾಕಾರದ ಪಟ್ಟಣವಂತೂ ಮನುಷ್ಯನ ಅಸಾಧಾರಣ ಕಲ್ಪನಾ ಶಕ್ತಿಯನ್ನು ಸಾರಿ ಹೇಳುತ್ತದೆ. ನಿಮಗೊಂದು ವಿಷಯ ಗೊತ್ತೇ ? ಇನ್ಮುಂದೆ ಇಂತಹ ಪಟ್ಟಣಗಳು ಬರೀ ಸಿನೆಮಾಗಳಲ್ಲೋ ಅಥವಾ ಕಲ್ಪನೆಗಳಲ್ಲಿ ಮಾತ್ರ ಕಂಡುಬರುವುದಿಲ್ಲ. ಅಂತಹ ಅಸಾಧಾರಣ ನಗರವೊಂದು ಈಗಾಗಲೇ ನಿರ್ಮಾಣ ಹಂತದಲ್ಲಿದೆ. ಸೌದಿ ಅರೇಬಿಯಾ ಅಂತಹದ್ದೊಂದು ಸಾಹಸಕ್ಕೆ ಕೈ ಹಾಕಿದ್ದು, ಕಳೆದ ತಿಂಗಳು ಬಿಡುಗಡೆಗೊಂಡ ಕೆಲವು ಡ್ರೋನ್ ಚಿತ್ರಣಗಳು ನಗರ ನಿರ್ಮಾಣದ ಕೆಲಸ ಆರಂಭಗೊಂಡಿದ್ದನ್ನು ಸಾಬೀತು ಪಡಿಸಿವೆ.

ಈ ಮಾಯಾನಗರಿ ತಲೆಯೆತ್ತುತ್ತಿರುವುದು ಸೌದಿ ಅರೇಬಿಯಾದ ‘ನಿಯೋಮ್’ ಎಂಬಲ್ಲಿ. ‘ದಿ ಲೈನ್’ (The Line) ಎಂದು ಕರೆಯಲ್ಪಡುವ ಈ ನಗರ ಹೆಸರಿಗೆ ತಕ್ಕಂತೆ ರೇಖೆಯ ಮಾದರಿಯಲ್ಲೇ ಇರಲಿದೆ! ರೇಖೆ ಅಂದರೆ ಸಾಮಾನ್ಯ ರೇಖೆಯಲ್ಲ. ೧೭೦ ಕಿಮಿ ಉದ್ದದ ಬೃಹತ್ ರೇಖಾ ಪಟ್ಟಣವಿದು! ಗಣಿತದಲ್ಲಿ ವಕ್ರ ರೇಖೆ, ಸರಳ ರೇಖೆ ಜೊತೆಗೆ The Line ನಗರವನ್ನೂ ಸೇರಿಸಿಕೊಳ್ಳಬಹುದು. ಈ ನಗರದ ವೈಶಿಷ್ಟ್ಯಗಳು ಹೇಗಿವೆಯೆಂದರೆ, ನಿರ್ಮಾಣ ಪೂರ್ಣಗೊಂಡ ಮೇಲೆ ಇಡೀ ಜಗತ್ತು ಇದನ್ನು ಬೆರಗುಗಣ್ಣಿನಿಂದ ನೋಡುವುದರಲ್ಲಿ ಸಂಶಯವಿಲ್ಲ. ಇದನ್ನು ಒಂದು ನಗರ ಅನ್ನುವುದಕ್ಕಿಂತ, ಹೊಸ ನಾಗರೀಕತೆ ಎಂದರೆ ಹೆಚ್ಚು ಸಮಂಜಸ. ಯಾಕಂದರೆ ಅಲ್ಲಿನ ಜೀವನಶೈಲಿ, ಸೌಕರ್ಯ, ಮಾಲಿನ್ಯ ರಹಿತ ಪರಿಸರ, ನಿಸರ್ಗದೊಂದಿಗೆ ಪುನರ್‌ಸಂಪರ್ಕ ಹಾಗೂ ಮುಂದುವರೆದ ತಂತ್ರಜ್ಞಾನ ಈ ನಗರವನ್ನು ಮುಂಚೂಣಿಯಲ್ಲಿರಿಸಿ, ಹೊಸ ನಾಗರೀಕತೆಯನ್ನೇ ಹುಟ್ಟುಹಾಕಬಹುದಾದ ಸಾಧ್ಯತೆಯಿದೆ.

‘ದಿ ಲೈನ್’ ನಗರವನ್ನು ಮಾತಿನಲ್ಲೇ ಉತ್ತುಂಗಕ್ಕೆ ಏರಿಸಿದ್ದು ಸಾಕು, ಅದರ ಬಗ್ಗೆ ಕೊಂಚ ತಿಳಿದುಕೊಳ್ಳೋಣ ಬನ್ನಿ!

ಒಂದು ನಗರವನ್ನು ಕ್ರೋಢೀಕರಿಸಿ, ಬಾಕ್ಸ್ ಒಳಗೆ ತುಂಬಿದರೆ ಹೇಗಿರುತ್ತದೆ? ಮುಖ್ಯವಾಗಿ ನಗರದ ವಿಸ್ತೀರ್ಣ ಕುಗ್ಗಿ, ಅಲ್ಲಿಂದಿಲ್ಲಿಗೆ ಓಡಾಡುವ ಸಮಯ ಕಡಿಮೆಯಾಗುತ್ತದೆ. ಇದೇ ಪರಿಕಲ್ಪನೆಯಲ್ಲಿ ನಿರ್ಮಿಸಲ್ಪಡುತ್ತಿರುವ ನಗರವಿದು. ಇಲ್ಲಿ ಆಸ್ಪತ್ರೆ, ದಿನಸಿ ಅಂಗಡಿ, ಥಿಯೇಟರ್, ಪುಸ್ತಕದ ಅಂಗಡಿ, ಅಪಾರ್ಟ್‌ಮೆಂಟ್ ಇತ್ಯಾದಿ ಎಲ್ಲವೂ ಇರಲಿದೆ. ಮೂರು ಆಯಾಮದ ವಿನ್ಯಾಸದಿಂದ ಇದು ಸಾಧ್ಯವಾಗಲಿದೆಯಂತೆ! ೫೦೦ ಮೀಟರ್ ಎತ್ತರ, ೨೦೦ ಮೀಟರ್ ಅಗಲ, ೧೭೦ ಕಿಮಿ ಉದ್ದದ ಬೃಹತ್ ಕಂಟೈನರ್ ನಂತಿರುವ ಈ ನಗರದ ಒಟ್ಟು ವಿಸ್ತೀರ್ಣ ೩೪ ಚದರ ಕಿಲೋಮೀಟರ್! ಅಲ್ಲಿ ವಾಸಿಸಬಹುದಾದ ಜನಸಂಖ್ಯೆ ಸುಮಾರು ೯೦ ಲಕ್ಷ. ನ್ಯೂಯೋರ್ಕ್ ನಗರದ ವಿಸ್ತೀರ್ಣ ಸುಮಾರು ೭೮೩.೮ ಚದರ ಕಿಲೋಮೀಟರ್ ಆಗಿದ್ದು, ಅಲ್ಲಿನ ಜನಸಂಖ್ಯೆ ಸುಮಾರು ೮೩ ಲಕ್ಷ. ಅಂದರೆ ಸರಿಸುಮಾರು ಒಂದೇ ಪ್ರಮಾಣದ ಜನಸಂಖ್ಯೆಯನ್ನು ಹೊಂದಿರುವ ನ್ಯೂಯೋರ್ಕ್ ನಗರ ವಿಸ್ತೀರ್ಣದಲ್ಲಿ ‘ದಿ ಲೈನ್’ಗಿಂತ ೨೩ ಪಟ್ಟು ದೊಡ್ಡದು! ಭೂಮಿಯ ಮೇಲ್ಮೈಯನ್ನು ಸಮರ್ಥಕವಾಗಿ ಬಳಸಿಕೊಂಡು, ಪ್ರಕೃತಿಯನ್ನು ಕಾಪಾಡುವುದು ಕೂಡ ಈ ನಗರ ನಿರ್ಮಾಣದ ಉದ್ದೇಶ ಎಂದು ಸೌದಿ ಹೇಳಿಕೊಂಡಿದೆ.

ಇಲ್ಲಿನ ಇನ್ನೊಂದು ವಿಶೇಷತೆಯೆಂದರೆ ಪ್ರತಿಯೊಂದೂ ಕೈಯಳತೆಯಲ್ಲಿಯೇ ದೊರೆಯಲಿದೆ. ಉದಾಹರಣೆಗೆ ಆಸ್ಪತ್ರೆ ಅಥವಾ ದಿನಸಿ ಅಂಗಡಿಗಳನ್ನು ಕೇವಲ ೫ ನಿಮಿಷದ ನಡಿಗೆಯಲ್ಲಿ ತಲುಪಬಹುದಂತೆ! ಇನ್ನೊಂದು ಸೋಜಿಗದ ಸಂಗತಿ ಎಂದರೆ, ೧೭೦ ಕಿಮಿ ನಗರದ ಒಂದು ಕೊನೆಯಿಂದ ಇನ್ನೊಂದು ಕೊನೆ ಮುಟ್ಟಲು ತಗಲುವ ಸಮಯ ಕೇವಲ ೨೦ ನಿಮಿಷ. ಬೇರೆ ನಗರಗಳಂತೆ ಇಲ್ಲಿ ಕಾರಿನ ಕಾರುಬಾರು ಇರುವುದಿಲ್ಲ. ಹಾಗಾಗಿ ಇಂಗಾಲದ ಹೊರಸೂಸುವಿಕೆಯೂ ಇರುವುದಿಲ್ಲ! ಅಕ್ಷರಃ ಘಛ್ಟಿಟ Zero Carbon Emission. ಗಮನಿಸಬೇಕಾದ ಅಂಶವೆಂದರೆ, ಇಡೀ ಪಟ್ಟಣವನ್ನು ನವಿಕರಿಸಬಹುದಾದ ಸಂಪನ್ಮೂಲಗಳಿಂದ ಉತ್ಪಾದಿಸಲ್ಪಟ್ಟ ಶಕ್ತಿಗಳಿಂದ ನಡೆಸಲಾಗುತ್ತದೆಯಂತೆ. ವಿಶ್ವಕ್ಕೆ ಕಚ್ಚಾ ತೈಲವನ್ನು ಮಾರುವ ದೇಶ, ತನ್ನ ನೂತನ ನಗರವನ್ನು ಮರುಪೂರಣಗೊಳಿಸಬಹುದಾದ ಶಕ್ತಿಯಿಂದ ನಡೆಸುತ್ತದೆಯೆಂದರೆ ಆಶ್ಚರ್ಯವಾಗುತ್ತದೆ!

ಈ ನಗರದಲ್ಲಿ ಕೃತಕ ಬುದ್ದಿಮತ್ತೆ (Artificial Intelligence) ಬಳಕೆಯಾಗುತ್ತಿದ್ದು, ಎಲ್ಲಾ ಸೇವೆಗಳೂ ಕಡಿಮೆ ಅವಧಿ ಹಾಗು ಶ್ರಮದಲ್ಲಿ ಜನರಿಗೆ ಸಿಗುತ್ತದೆಯಂತೆ. ತಂತ್ರಜ್ಞಾನದ ಬಳಕೆಯಿಂದ Micro Climate ಅನ್ನು ಸೃಷ್ಟಿಸಲಾಗುತ್ತಿದ್ದು, ವರ್ಷ ಪೂರ್ತಿ ಸಮಶೀತೋಷ್ಣ ವಲಯದಂತೆ ಈ ನಗರ ರಾರಾಜಿಸಲಿದೆ. ಇನ್ನು ಈ ಪಟ್ಟಣದ ವಿನ್ಯಾಸದ ಹೇಳುವುದಾದರೆ, ಇಡೀ ನಗರವು ಮೂರು ಪದರಗಳಿಂದ ಕೂಡಿರುತ್ತದೆ. ಮೊದಲ ಪದರ ಪಾದಚಾರಿಗಳಿಗೆ, ಮೂಲಸೌಕರ್ಯಕ್ಕಾಗಿ ಒಂದು ನೆಲದಡಿಯ ಪದರ, ಭೂಗರ್ಭ ರೈಲ್ವೆಗೆ ಕೊನೆಯ ಪದರ. ಜನರು ೨೦ ನಿಮಿಷಗಳಲ್ಲಿ ನಗರದ ಒಂದು ಬದಿಯಿಂದ ಇನ್ನೊಂದು ಕಡೆಗೆ ಹೋಗಲು ಹೈ-ಸ್ಪೀಡ್ ರೈಲು ಬೇಕಲ್ಲವೇ! ಇದನ್ನು ಸಾಧಿಸಲು ಸರಾಸರಿ ೫೧೨ ಕಿಮೀ/ಗಂ ವೇಗದ ಅಗತ್ಯವಿರುತ್ತದೆ!

ಒಟ್ಟಿನಲ್ಲಿ ‘ಇರುವುದೆಲ್ಲವ ಬಿಟ್ಟು, ಇರದುದರೆಡೆಗೆ ತುಡಿವುದೇ ಜೀವನ’ ಎಂಬ ಅಡಿಗರ ಸಾಲಿನಂತೆ, ಸೌದಿ ಅರೇಬಿಯಾ ೫೦೦೦೦ ಕೋಟಿ ಡಾಲರನ್ನು ವ್ಯಯಿಸಿ The Line ಎಂಬ ಮಾಯಾನಗರಿಯನ್ನು ನಿರ್ಮಿಸುತ್ತಿದೆ. ಈ ನಗರದಿಂದ ತನ್ನ ಜಿಡಿಪಿ ೪೮೦೦ ಕೋಟಿ ಡಾಲರ್‌ನಷ್ಟು ಹೆಚ್ಚಲಿದೆ ಎಂದು ಸೌದಿ ಹೇಳಿಕೊಂಡಿದೆ. ಹಾಗೆಯೆ ಸುಮಾರು ೩,೮೦,೦೦೦ ನೌಕರಿಗಳು ‘ದಿ ಲೈನ್’ನಿಂದ ಹುಟ್ಟಲಿದೆ ಎಂಬುದು ತಜ್ಞರ ಲೆಕ್ಕಾಚಾರ.

ಈ ಯೋಜನೆ ಘೋಷಣೆ ಆದಾಗಲೇ ಹಲವಾರು ಟೀಕಾಸ್ತ್ರಗಳು ಸೌದಿಯ ಮೇಲೆರಗಿದ್ದವು. ಮುಖ್ಯವಾಗಿ ಪರಿಸರ ಮತ್ತು ಅಲ್ಲಿ ಪ್ರಸ್ತುತವಾಗಿ ನೆಲೆಸಿರುವ ಜನರ ಮೇಲೆ ಈ ಯೋಜನೆ ಋಣಾತ್ಮಕ ಪ್ರಭಾವ ಬೀರಬಹುದು ಎಂಬುದು ಹಲವರ ವಾದ. ಅದರ ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆಯ ಬಗ್ಗೆಯೂ ಕೂಡ ಕೆಲವರು ಅನುಮಾನಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೌದಿ ಅರೇಬಿಯಾ, ಕಳೆದ ಅಕ್ಟೋಬರ್‌ನಲ್ಲಿ ನಗರದ ನಿರ್ಮಾಣವನ್ನು ಆರಂಭಿಸಿದೆ. ಸೌದಿ ಈ ನಗರವನ್ನು ‘ಜಗತ್ತಿಗೆ ಅದ್ಭುತಗಳನ್ನು ನೀಡುವ ನಗರ’ ಎಂದು ಬಣ್ಣಿಸುತ್ತದೆ. ನಿರ್ಮಾಣ ಪೂರ್ಣಗೊಂಡಾಗ ‘ದಿ ಲೈನ್’ ಜಗತ್ತಿನ ಒಂದು ಅದ್ಭುತವಾಗುವುದರಲ್ಲಿ ಸಂಶಯವೇ ಇಲ್ಲ!

andolana

Recent Posts

ತಾ.ಪಂ.–ಜಿ.ಪಂ. ಮೀಸಲು ಅಧಿಸೂಚನೆ ಪ್ರಕಟ: ಜನವರಿಯಲ್ಲಿ ಚುನಾವಣೆ ಸಾಧ್ಯತೆ ಎಂದ ಖಂಡ್ರೆ!

ಬೆಂಗಳೂರು: ರಾಜ್ಯದ ತಾಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳಿಗೆ ಸಂಬಂಧಿಸಿದಂತೆ ಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆ ಪ್ರಕಟವಾಗಿದೆ ಎಂದು ಸಚಿವ…

53 mins ago

ಚೀರನಹಳ್ಳಿಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ: ಸಾ.ರಾ.ಮಹೇಶ್ ಸಮ್ಮುಖದಲ್ಲಿ 10 ಕುಟುಂಬಗಳು ಜೆಡಿಎಸ್‌ಗೆ ಸೇರ್ಪಡೆ

ಕೆ.ಆರ್.ನಗರ : ಚೀರನಹಳ್ಳಿ ಗ್ರಾಮದ ಅಭಿವೃದ್ಧಿಗೆ ಬದಲು ಇಲ್ಲಿನ ಕಾಂಗ್ರೆಸ್ ಮುಖಂಡರ ಮನೆ ಅಭಿವೃದ್ಧಿ ಆಗಿದೆ ಗ್ರಾಮದಲ್ಲಿ ಚರಂಡಿ ಕೂಡ…

1 hour ago

ಆನೆ–ಮಾನವ ಸಂಘರ್ಷಕ್ಕೆ ಆನೆಧಾಮ ಪರಿಹಾರ: ಈಶ್ವರ್‌ ಖಂಡ್ರೆ ಅಭಿಪ್ರಾಯ!

ಬೆಂಗಳೂರು: ಕಾಡಿನಂಚಿನ ಗ್ರಾಮಗಳಲ್ಲಿ ಹೆಚ್ಚುತ್ತಿರುವ ಆನೆ–ಮಾನವ ಸಂಘರ್ಷಕ್ಕೆ ಆನೆಧಾಮ ಸ್ಥಾಪನೆಯಿಂದ ಪರಿಹಾರ ಕಂಡುಕೊಳ್ಳಬಹುದು ಎಂದು ಸಚಿವ ಈಶ್ವರ್‌ ಖಂಡ್ರೆ ಅಭಿಪ್ರಾಯಪಟ್ಟಿದ್ದಾರೆ.…

2 hours ago

ಕೆಆರ್‌ಎಸ್‌ನಿಂದ ಹೆಚ್ಚಿದ ನೀರು ಬಿಡುಗಡೆ: ಕುಡಿಯುವ ನೀರಿನ ಕೊರತೆ ಆತಂಕದಲ್ಲಿ ರೈತರು!

ಬೆಂಗಳೂರು: ಕೆಆರ್‌ಎಸ್‌ ಜಲಾಶಯದ ಒಳಹರಿವು ಕ್ಷೀಣಿಸಿರುವ ನಡುವೆಯೇ ಹೊರಹರಿವು ಹೆಚ್ಚಳವಾಗಿದ್ದು, ರೈತರಲ್ಲಿ ಆತಂಕ ಮೂಡಿಸಿದೆ. ತಮಿಳುನಾಡಿಗೆ ನೀರು ಬಿಡುಗಡೆ ಹಿನ್ನೆಲೆಯಲ್ಲಿ…

4 hours ago

ದೇವರ ದರ್ಶನಕ್ಕೆ ಹೊರಟವರ ಬಾಳಲ್ಲಿ ದುರಂತ: ದಶಪಥ ಹೆದ್ದಾರಿ ಅಪಘಾತದಲ್ಲಿ ಬಾಲಕಿ ಸೇರಿ ಇಬ್ಬರು ಬಲಿ!

ಶ್ರೀರಂಗಪಟ್ಟಣ: ನಂಜನಗೂಡಿನ ದೇವಸ್ಥಾನಕ್ಕೆ ಹೊರಟಿದ್ದ ಎರಡು ಕುಟುಂಬಗಳ ಪ್ರಯಾಣ ದುರಂತದಲ್ಲಿ ಅಂತ್ಯಗೊಂಡಿದೆ. ಮೈಸೂರು–ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದ ಸರಕು…

5 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಎರಡನೇ ಬಾರಿ ಜಾಮೀನಿಗಾಗಿ ಹೈಕೋರ್ಟ್‌ ಮೊರೆಹೋದ ಪವಿತ್ರಾ ಗೌಡ!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ಪವಿತ್ರಾ ಗೌಡ ಮತ್ತೆ ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಸುಪ್ರೀಂ ಕೋರ್ಟ್‌ ಈ…

5 hours ago