ಎಡಿಟೋರಿಯಲ್

ಮಂಗಳಗ್ರಹದ ಅಂಗಲದಲ್ಲೊಂದು ಮನೆಯ ಮಾಡಿ…

ಗ್ರಹಗಳ ವಾತಾವರಣ, ತಾಪಮಾನ, ಮೇಲ್ಮೈ ಭೂಗೋಳ ಮಾರ್ಪಡಿಸಿ, ಮಾನವರಿಗೆ ವಾಸಯೋಗ್ಯವಾಗಿಸುವ ಪರಿಕಲ್ಪನೆಯೇ ಟೆರಾಫಾರ್ಮಿಂಗ್!

ಕಾರ್ತಿಕ್ ಕೃಷ್ಣ

ಮಂಗಳ ಗ್ರಹದಲ್ಲಿ ಕೋಟ್ಯಂತರ ವರುಷಗಳ ಹಿಂದೆ ದೊಡ್ಡ ಸಾಗರವೊಂದಿತ್ತು ಎಂಬ ಸುದ್ದಿಯನ್ನು ನೀವು ಓದಿರಬಹುದು. ಇದರಿಂದ ನಮ್ಮ ನೆರೆಯ ಗ್ರಹದಲ್ಲಿ ಹಿಂದೊಮ್ಮೆ ಜೀವಿಗಳು ಅಸ್ತಿತ್ವದಲ್ಲಿತ್ತೇ ಎಂಬ ಪ್ರಶ್ನೆಯೂ ಮುನ್ನೆಲೆಗೆ ಬಂದಿದೆ. ಮಂಗಳನಲ್ಲಿ ಜೀವ ರಾಶಿಯ ಹುಡುಕಾಟ ಹೊಸದೇನಲ್ಲ. 1965ರಲ್ಲಿ ಮ್ಯಾರಿನರ್ 4ರ ಮೊಟ್ಟಮೊದಲ ಮಂಗಳಯಾನಕ್ಕೆ ಮುನ್ನವೇ ವೈಜ್ಞಾನಿಕ ಸಮುದಾಯದಲ್ಲಿ ಅಂಗಾರಕನಲ್ಲಿ ಸಾಕಷ್ಟು ನೀರು ದ್ರವರೂಪದಲ್ಲಿರಬಹುದೆಂಬ ಆಶಾವಾದವಿತ್ತು. ಇದಲ್ಲದೇ ಮಂಗಳನ ಧ್ರುವಗಳ ಬಳಿ ಕಂಡುಬಂದ ತಿಳಿ ಮತ್ತು ಗಾಢವಾದ ಕಲೆಗಳು ಪದೇ ಪದೇ ಆಕಾರದಲ್ಲಿ ಬದಲಾಗುತ್ತಿದ್ದವು. ಇದರ ಜೊತೆಗೆ, ನೀರಿನ ಕಾಲುವೆಗಳಂತಿರುವ ಉದ್ದವಾದ ಗಾಢ ಪಟ್ಟಿಗಳೂ ಕಂಡುಬಂದವು. ಈ ಎಲ್ಲಾ ವೀಕ್ಷಣೆಗಳೇ ಮಂಗಳನ ಮೇಲೆ ನೀರಿನ ಅನ್ವೇಷಣೆಗೆ ಬುನಾದಿ ಹಾಕಿತ್ತು.

ಮುಂದಿನ ದಿನಗಳಲ್ಲಿ, ಈ ಪಟ್ಟಿಗಳು ಅಸ್ತಿತ್ವದಲ್ಲೇ ಇಲ್ಲವೆಂದೂ, ಇವು ಕೇವಲ ದೃಷ್ಟಿ ಭ್ರಾಂತಿಯೆಂದೂ ವಿಶ್ಲೇಷಣೆಗಳಿಂದ ತಿಳಿದುಬಂದಿತು. ಹೀಗಿದ್ದರೂ, ಭೂಮಿಯನ್ನುಳಿದು ಬೇರಾವುದೇ ಗ್ರಹಕ್ಕಿಂತಲೂ ಮಂಗಳನ ಮೇಲೆ ನೀರಿನ (ಮತ್ತು ಜೀವದ) ಅಸ್ತಿತ್ವವು ಅತಿ ಹೆಚ್ಚು ಸಂಭವನೀಯವೆಂದು ವಿಜ್ಞಾನ ಸಮೂಹ ಬಲವಾಗಿ ನಂಬಿದೆ. ಆದ್ದರಿಂದ ಈಗಲೂ ಅನ್ವೇಷಕಗಳು ಮಂಗಳದ ಮೇಲೆ ಸೂಕ್ಷ್ಮಜೀವಿಗಳನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿವೆ. ಈ ನಂಬಿಕೆಗೆ ಇನ್ನೊಂದು ಕಾರಣವೇನೆಂದರೆ, ಮಂಗಳನ ದೈನಂದಿಕ ಚಲನೆ (roational period) ಮತ್ತು ಋತುಮಾನಗಳು ಭೂಮಿಯ ಚಲನೆ ಮತ್ತು ಋತುಮಾನಗಳನ್ನು ಹೋಲುತ್ತವೆ. ಸೌರಮಂಡಲದಲ್ಲೇ ಅತಿ ಎತ್ತರ ಪರ್ವತವಾದ ‘ಒಲಂಪಸ್ ಮಾನ್ಸ್’, ಅತಿ ದೊಡ್ಡ ಕಂದರವಾದ ‘ಮ್ಯಾರಿನೆರಿಸ್’ ಕಣಿವೆ ಮತ್ತು ಧ್ರುವದಲ್ಲಿ ಹಿಮವಲಯಗಳು ಮಂಗಳ ಗ್ರಹದ ಮೇಲೆ ಕಂಡುಬರುತ್ತವೆ. ಇತ್ತೀಚೆಗಿನ ಆಧಾರಗಳ ಪ್ರಕಾರ, ಕೆಲವೇ ವರ್ಷಗಳ ಹಿಂದೆಯೂ ಮಂಗಳದ ಮೇಲೆ ನೀರು ದ್ರವರೂಪದಲ್ಲಿ ಪ್ರವಹಿಸಿರಬಹುದಾದ ಸಾಧ್ಯತೆಯಿದೆ. ಈಗ ಕಂಡುಬಂದಿರುವ ಮಹಾ ಸಾಗರದ ಕುರುಹು ಅಲ್ಲಿ ಜೀವಿಗಳ ಅಸ್ತಿತ್ವಕ್ಕೆ ಮತ್ತಷ್ಟುಇಂಬು ನೀಡುತ್ತದೆ.

ಪ್ರಸ್ತುತದಲ್ಲಿ ಮಂಗಳನ ಸುತ್ತ 4 ಗಗನನೌಕೆಗಳು (spacecraft) ಪರಿಭ್ರಮಿಸುತ್ತಿವೆ: ಮಂಗಳ ಗ್ಲೋಬಲ್ ಸಮೀಕ್ಷಕ, ಮಂಗಳ ಒಡಿಸ್ಸಿ, ಮಂಗಳ ಎಕ್ಸ್‌ಪ್ರೆಸ್ ಮತ್ತು ಮಂಗಳ ಬೇಹುಗಾರಿಕಾ ಪರಿಭ್ರಮಕ. ಭೂಮಿಯನ್ನು ಬಿಟ್ಟರೆ ಇನ್ನಾವ ಗ್ರಹದ ಮೇಲೂ ಇಷ್ಟೊಂದು ಪರಿಭ್ರಮಕಗಳು ಸುತ್ತುತ್ತಿಲ್ಲ. ಇದಲ್ಲದೆ ಪ್ರಸ್ತುತದಲ್ಲಿ ಮಂಗಳದ ಮೇಲ್ಮೈ ಮೇಲೆ ಸ್ಪಿರಿಟ್ ಮತ್ತು ಆಪರ್ಚುನಿಟಿ ಪರ್ಯಟಕಗಳೂ ಕಾರ್ಯ ನಿರ್ವಹಿಸುತ್ತಿವೆ. ಈ ಗ್ರಹದಲ್ಲಿ ಕೂಡ ಭೂಮಿಯ ಹಾಗೆ ಋತುಗಳು ಬದಲಾಗುತ್ತಿರುತ್ತದೆ. ಈ ಗ್ರಹ ಸಾಕಷ್ಟು ಪ್ರಮಾಣದಲ್ಲಿ ಭೂಮಿಗೆ ಸರಿಸಮನಾಗಿದ್ದರೂ, ಅಲ್ಲಿ ಮನುಷ್ಯರಾರು ಆಕ್ಸಿಜನ್ ಮಾಸ್ಕ್ ಇಲ್ಲದೆ ಬದುಕಿರಲಾರರು. ಇಲ್ಲಿ ಆಕ್ಸಿಜನ್ ಇಲ್ಲವೆಂದಲ್ಲ. ಮಂಗಳ ಗ್ರಹದಲ್ಲಿ ಆಕ್ಸಿಜನ್ ಪ್ರಮಾಣ ಕೇವಲ ಶೇ.2 ಕ್ಕಿಂತ ಕಡಿಮೆ ಇದೆ.

ಮಂಗಳನ ಮೇಲ್ಮೈ ಸ್ಥಿತಿಯ ಬಗ್ಗೆ ಇನ್ನೂ ಕರಾರುವಾಕ್ ಆಗಿ ಗೊತ್ತಿರದ ಸಮಯದಲ್ಲಿ ಮಂಗಳ ಗ್ರಹವನ್ನು ಭೂಮಿಯಂತೆ ಮಾರ್ಪಾಡು ಮಾಡುವ ಒಂದು ಪರಿಕಲ್ಪನೆ ವೈಜ್ಞಾನಿಕ ಸಾಹಿತ್ಯಗಳಿಂದ ಹಿಡಿದು ವಿಜ್ಞಾನಿಗಳ ವಲಯದಲ್ಲೂ ಆಗಾಗ ಕೇಳಿ ಬರುತ್ತಿದೆ. ಮಂಗಳನಲ್ಲಿ ಅತಿಯಾದ ಆಸಕ್ತಿಯಿರುವ ಎಲಾನ್ ಮಸ್ಕ್ ಕೂಡ ಈ ಕುರಿತು ಆಸಕ್ತಿ ತೋರಿದ್ದರು. ಸದ್ಯಕ್ಕೆ ಮಾನವರ ಬಳಿ ಇರುವ ತಂತ್ರಜ್ಞಾನದಿಂದ ಇದು ಅಸಾಧ್ಯ ಎಂದು ನಾಸಾ ಹೇಳುತ್ತದಾದರೂ, ಪ್ರಯತ್ನಿಸುವುದರಲ್ಲಿ ತಪ್ಪೇನಿದೆ ಎಂಬುದು ಮಸ್ಕ್ ಅವರ ವಾದ.
ಇತರ ಗ್ರಹಗಳನ್ನು ಭೂಮಿಯಂತೆ ಮಾರ್ಪಾಡು ಮಾಡುವ ಈ ಪರಿಕಲ್ಪನೆಯ ಬಗ್ಗೆ ಒಂದಷ್ಟು ತಿಳಿದುಕೊಳ್ಳಣ ಬನ್ನಿ. ಅದರ ಹೆಸರು ಟೆರಾಫಾರ್ಮಿಂಗ್ (Terraforming) ಎಂದು. ಸರಳವಾಗಿ ಮಾತುಗಳಲ್ಲಿ, ಚಂದ್ರ ಅಥವಾ ಇತರ ಗ್ರಹಗಳ ವಾತಾವರಣ, ತಾಪಮಾನ, ಮೇಲ್ಮೈ ಭೂಗೋಳ ಅಥವಾ ಪರಿಸರವನ್ನು ಉದ್ದೇಶಪೂರ್ವಕವಾಗಿ ಮಾರ್ಪಡಿಸಿ, ಅವುಗಳನ್ನು ಮಾನವರಿಗೆ ವಾಸಯೋಗ್ಯ ರೀತಿ ಬದಲಾಯಿಸುವ ಒಂದು ಪರಿಕಲ್ಪನೆ.

ಮೊದಲೇ ತಿಳಿಸಿದ ಹಾಗೆ, ಟೆರಾಫಾರ್ಮಿಂಗ್ ಪರಿಕಲ್ಪನೆ ಅಭಿವೃದ್ಧಿಗೊಂಡದ್ದು ವೈಜ್ಞಾನಿಕ ಸಾಹಿತ್ಯ ಹಾಗು ವಾಸ್ತವಿಕ ವಿಜ್ಞಾನ ವಲಯಗಳಿಂದ. ಕಾರ್ಲ್ ಸಗಾನ್ ಎಂಬ ಖಗೋಳಶಾಸ್ತ್ರಜ್ಞರು 1961ರಲ್ಲಿ ಶುಕ್ರಗ್ರಹದ ವಾತಾವರಣವನ್ನು ಬದಲಾಯಿಸುವ ‘ಪ್ಲಾನೆಟರಿ ಎಂಜಿನಿಯರಿಂಗ್’ ಯೋಜನೆಯನ್ನು ಪ್ರಸ್ತಾಪಿಸಿದರು. ವಿಜ್ಞಾನ ವಲಯದಲ್ಲಿ ಟೆರಾಫಾರ್ಮಿಂಗ್ ಬಗ್ಗೆ ಕೇಳಿ ಬಂದ ಮೊದಲ ಪ್ರಸ್ತಾವನೆಯಿದು. ಇದಕ್ಕೂ ಮೊದಲು ‘ಟೆರಾಫಾರ್ಮಿಂಗ್’ ಪದವನ್ನು ಜ್ಯಾಕ್ ವಿಲಿಯಮ್ಸನ್ ಅವರು 1942ರಲ್ಲಿ ‘ಅಸ್ಸ್ಟೌಂಡಿಂಗ್ ಸೈನ್ಸ್ ಫಿಕ್ಷನ್‌’ ಎಂಬ ಮ್ಯಾಗಜಿನ್ನಲ್ಲಿ ಪ್ರಕಟಿಸಿದ ‘ಕೊಲಿಷನ್ ಆರ್ಬಿಟ್’ ಎಂಬ ವೈಜ್ಞಾನಿಕ-ಕಾಲ್ಪನಿಕ ಸಣ್ಣಕಥೆಯಲ್ಲಿ ಬಳಸಿದ್ದರು.

ಈ ಪರಿಕಲ್ಪನೆ ಊಹಿಸಿಕೊಂಡಷ್ಟು ಸರಳವಾಗಿಲ್ಲ. ಒಂದು ಗ್ರಹದ ಪರಿಸರವನ್ನು ಉದ್ದೇಶಪೂರ್ವಕವಾಗಿ ಬದಲಾಯಿಸಬಹುದಾದರೂ, ಆ ಗ್ರಹದಲ್ಲಿ ಭೂಮಿಯಂತದ್ದೇ ಪರಿಸರವನ್ನು ರಚಿಸುವ ಕಾರ್ಯಸಾಧ್ಯತೆಯನ್ನು ಇನ್ನೂ ಪರಿಶೀಲಿಸಬೇಕಾಗಿದೆ. ಶುಕ್ರ, ಭೂಮಿ, ಮಂಗಳ, ಮತ್ತು ಚಂದ್ರನನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಅಧ್ಯಯನ ಮಾಡಲಾಗಿದ್ದರೂ, ಮಂಗಳವನ್ನು ಸಾಮಾನ್ಯವಾಗಿ ಟೆರಾಫಾರ್ಮಿಂಗ್‌ಗೆ ಹೆಚ್ಚು ಸಂಭಾವ್ಯ ಅಭ್ಯರ್ಥಿ ಎಂದು ಪರಿಗಣಿಸಲಾಗುತ್ತದೆ. ಯಾಕಂದರೆ, ಭೂಮಿ ಹಾಗು ಮಂಗಳ ಗ್ರಹಕ್ಕಿರುವ ಸಮಾನರೂಪತೆ. ಭೂಮಿಯ ಹಾಗೆ ಮಂಗಳನ ಧ್ರುವಗಳಲ್ಲೂ ಹಿಮವಿದೆ, ಮಹಾ ಸಾಗರಗಳಿದ್ದ ಕುರುಹುಗಳು ಸಾಬೀತಾಗಿವೆ, ಅಲ್ಲೂ ಋತುಗಳು ಬದಲಾಗುತ್ತವೆ, ಅಷ್ಟೇ ಏಕೆ ಮಂಗಳನ ಸುತ್ತುವಿಕೆಯ ಸಮಯ ಕೂಡ ಸರಿಸುಮಾರು ೨೪ ಘಂಟೆಗಳು. ಇಷ್ಟೆಲ್ಲ ಹೋಲಿಕೆ ಇದ್ದರೂ ಮಂಗಳ ಯಾಕೆ ಭೂಮಿಯಂತಿಲ್ಲ? ನಿಖರವಾದ ಕಾರಣ ತಿಳಿಯದಿದ್ದರೂ ಮಂಗಳನಲ್ಲಿ ಕಾಂತಗೋಳ ಇಲ್ಲದಿರುವುದರಿಂದ ಹಾಗು ವಾತಾವರಣದಲ್ಲಿ ಶೇಕಡಾ 95ರಷ್ಟು ಇಂಗಾಲದ ಡೈಆಕ್ಸೈಡ್ ಇರುವುದರಿಂದ ಕಾಲಕ್ರಮೇಣ ಮಂಗಳ ಗ್ರಹ ಬಂಜರು ನೆಲವಾಯ್ತು ಎಂದು ವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ಮಂಗಳ ಗ್ರಹದ ಟೆರಾಫಾರ್ಮಿಂಗ್‌ ಮಾಡಲು ಮೂರು ಸಂಭಾವ್ಯ ತಂತ್ರಗಳಿವೆ. ಮೊದಲನೆಯದಾಗಿ ಮಂಗಳನಲ್ಲಿ ಕಾಂತಗೋಳವನ್ನು ಮತ್ತೆ ಸೃಷ್ಟಿಸಬೇಕು, ಎರಡನೆಯ ಹಂತದಲ್ಲಿ ಭೂಮಿಯನ್ನು ಹೋಲುವಂತಹ ವಾತಾವರಣವನ್ನು ಅಲ್ಲಿ ನಿರ್ಮಿಸಬೇಕು, ಮೂರನೆಯ ಹಂತದಲ್ಲಿ ಅಲ್ಲಿನ ಶಾಖವನ್ನು ಹೆಚ್ಚಿಸಿ ಹೆಪ್ಪುಗಟ್ಟಿರುವ ಹಿಮಗಡ್ಡೆಯನ್ನು ಕರಗಿಸಬೇಕು. ನಿಮಗೆ ತಿಳಿದಿರಲಿ, ಮಂಗಳನ ಸರಾಸರಿ ಉಷ್ಣಾಂಶ -65 ಡಿಗ್ರಿ ಸೆಲ್ಷಿಯಸ್.

ಇದೆಲ್ಲ ಸಾಧ್ಯವೋ ಇಲ್ಲವೋ ಯಾರಿಗೂ ಗೊತ್ತಿಲ್ಲ. ಆದರೂ ಇನ್ನೊಂದು ಸೂರಿನ ಹುಡುಕಾಟದ ಪ್ರಯತ್ನ ಸಾಗುತ್ತಲೇ ಇದೆ. ಅದೆಕ್ಕೆಷ್ಟು ಕೋಟಿ ಸುರಿಯುತ್ತಾನೋ! ವಿಷಾದದ ಸಂಗತಿ ಏನೆಂದರೆ, ನಮ್ಮ ಭೂಮಿ ಎದುರಿಸುತ್ತಿರುವ ಹವಾಮಾನ ವೈಪರೀತ್ಯದ ಬಗ್ಗೆ ಯಾರೂ ಅಷ್ಟೊಂದು ತಲೆಕೆಡಿಸಿಕೊಳ್ಳುತ್ತಿಲ್ಲ. ಈ ಮನೆ ಸೋರಿದರೆ ಏನು, ಬೇರೆಲ್ಲೋ ಇನ್ನೊಂದು ಮನೆ ಕಟ್ಟಿದರೆ ಆಯ್ತು ಅನ್ನುವ ಮನಸ್ಥಿತಿ. ಅದು ಬದಲಾಗಬೇಕು. ‘ಇರುವುದೊಂದೇ ಭೂಮಿ’ ಎಂಬ ಎಚ್ಚರಿಕೆ ಪ್ರತಿಯೊಬ್ಬನ ಮನಸಲ್ಲೂ ಜಾಗ್ರತವಾಗಿದ್ದು, ಭೂಮಿಯನ್ನು ರಕ್ಷಿಸುವ ಕೆಲಸವಾಗಬೇಕು. ಇದನ್ನು ಅರಿತೇ ಏನೋ, ನಮ್ಮ ಹಿರಿಯರು ಆಚರಣೆಗಳಲ್ಲಿ ಪ್ರಕೃತಿಗೂ ಮಹತ್ವ ನೀಡಿದ್ದು.

andolanait

Recent Posts

ಹುಣಸೂರು: ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಬಿಗ್‌ ಟ್ವಿಸ್ಟ್‌

ಹುಣಸೂರು: ಮೈಸೂರು ಜಿಲ್ಲೆ ಹುಣಸೂರು ಪಟ್ಟಣದಲ್ಲಿ ನಡೆದ ಚಿನ್ನಾಭರಣ ದರೋಡೆ ಪ್ರಕರಣಕ್ಕೆ ಇದೀಗ ಬಿಗ್‌ ಟ್ವಿಸ್ಟ್‌ ಸಿಕ್ಕಿದೆ. ಮಾಹಿತಿ ಪ್ರಕಾರ…

2 mins ago

ಟಿ.ನರಸೀಪುರ: ಗುಂಜಾನರಸಿಂಹಸ್ವಾಮಿ ದರ್ಶನಕ್ಕೆ ಹರಿದುಬಂದ ಜನಸಾಗರ

ಟಿ.ನರಸೀಪುರ: ಇಂದು ವೈಕುಂಠ ಏಕಾದಶಿಯ ಸಂಭ್ರಮ ಮನೆಮಾಡಿದ್ದು, ಟಿ.ನರಸೀಪುರದ ಪ್ರಸಿದ್ಧ ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದಲ್ಲಿ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ…

17 mins ago

ಕೋಗಿಲು ಲೇಔಟ್‌ನಲ್ಲಿ ಮನೆ ಕಳೆದುಕೊಂಡವರಿಗೆ ಪರಿಹಾರ: ಸಚಿವ ಪರಮೇಶ್ವರ್‌

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅಕ್ರಮ ಶೆಡ್‌ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಮನೆ ಕೊಡುವ ಕುರಿತು ಗೃಹ ಸಚಿವ…

1 hour ago

ಬಾಂಗ್ಲಾದೇಶದ ಮೊದಲ ಮಹಿಳಾ ಪ್ರಧಾನಿ ಬೇಗಂ ಖಲೀದಾ ಜಿಯಾ ನಿಧನ

ಡಾಕಾ: ಮಾಜಿ ಪ್ರಧಾನಿ ಮತ್ತು ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ ಅಧ್ಯಕ್ಷೆ ಬೇಗಂ ಖಲೀದಾ ಜಿಯಾ ಇಂದು ಬೆಳಿಗ್ಗೆ ಡಾಕಾದ ಎವರ್‌ಕೇರ್‌…

2 hours ago

ಮೈಸೂರಿನಲ್ಲಿ ವೈಕುಂಠ ಏಕಾದಶಿ ಸಂಭ್ರಮ: ದೇಗುಲಗಳಲ್ಲಿ ಭಕ್ತಸಾಗರ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಮೈಸೂರಿನ ಒಂಟಿಕೊಪ್ಪಲಿನಲ್ಲಿರುವ ಶ್ರೀ ಲಕ್ಷ್ಮೀವೆಂಟಕರಮಣಸ್ವಾಮಿ ದೇವಾಲಯವು ಇಂದು…

2 hours ago

ಹೊಸ ವರ್ಷಾಚರಣೆ: ರಾಜ್ಯದೆಲ್ಲೆಡೆ ತುರ್ತು ಚಿಕಿತ್ಸಾ ಸೇವೆಗೆ ಸಿದ್ಧತೆ

ಬೆಂಗಳೂರು: ಹೊಸ ವರ್ಷಾಚರಣೆಯ ವೇಳೆ ರಾಜ್ಯದ ವಿವಿಧೆಡೆ ಸಾರ್ವಜನಿಕರು ಅಸ್ವಸ್ಥರಾಗುವ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಇತರೆ ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ…

2 hours ago