ಎಡಿಟೋರಿಯಲ್

ಉದ್ಯೋಗಿಗಳ ತವರೂರುಗಳಲ್ಲೇ ಉದ್ಯೋಗ ಹುಟ್ಟಿಸುವ ಮಹಾಲಿಂಗಮ್

  ಪ್ರತಿವರ್ಷ ಲಕ್ಷಾಂತರ ಜನ ಉದ್ಯೋಗಾರ್ಥಿಗಳು ಉದ್ಯೋಗ ಅರಸಿಕೊಂಡು ತಮ್ಮ ಹುಟ್ಟೂರನ್ನು ಬಿಟ್ಟು ಇತರೆ ನಗರಗಳಿಗೆ, ಇತರೆ ರಾಜ್ಯಗಳಿಗೆ ವಲಸೆ ಹೋಗುತ್ತಾರೆ. ಸಾವಿರಾರು ಜನ ಉದ್ಯೋಗ ಅರಸಿಕೊಂಡು ಪರದೇಶಗಳಿಗೂ ಹೋಗುತ್ತಾರೆ. ಪ್ರತಿ ವರ್ಷ ವಿಶ್ವದಲ್ಲಿ ಹೀಗೆ ಉದ್ಯೋಗ ಅರಸಿಕೊಂಡು ವಿದೇಶಗಳಿಗೆ ಹೋಗುವವರಲ್ಲಿ ಭಾರತೀಯರು ಇತರೆಲ್ಲ ದೇಶೀಯರಿಗಿಂತ ಅತೀ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರ ಸಂಖ್ಯೆ ಸುಮಾರು 3 ಮಿಲಿಯನ್ ಎಂದು ಅಂದಾಜಿಸಲಾಗುತ್ತದೆ. ದೇಶದೊಳಗೇ ಉದ್ಯೋಗ ಅರಸಿಕೊಂಡು ತಿರುಗಾಡುವ ವಲಸೆ ಕಾರ್ಮಿಕರ ಸಂಖ್ಯೆ 51 ಮಿಲಿಯನ್ ಎಂದು ಅಂದಾಜಿಸಲಾಗುತ್ತದೆ. ಕೋವಿಡ್ ಕಾಲದಲ್ಲಿ ಹೇರಲಾದ ಲಾಕ್‌ಡೌನ್, ದೇಶದೊಳಗಿನ ವಲಸೆ ಕಾರ್ಮಿಕರ ಸಂಖ್ಯೆ ಮತ್ತು ಅವರ ಬವಣೆಗಳನ್ನು ನಿಚ್ಚಳವಾಗಿ ತೆರೆದು ತೋರಿಸಿತ್ತು. ಒಂದು ವೇಳೆ, ಇವರೆಲ್ಲರಿಗೂ ಅವರವರ ತವರೂರುಗಳಲ್ಲೇ ಜೀವನಾರ್ಥ ಉದ್ಯೋಗ ಸಿಗುವ ವ್ಯವಸ್ಥೆಯೊಂದು ಇದ್ದರೆ?

ಬೆಂಗಳೂರು ಮೂಲದ ಟೆಕ್ಕಿ, 50 ವರ್ಷ ಪ್ರಾಯದ ಸಂತೋಷ್ ಮಹಾಲಿಂಗಮ್ (ಎಡದಿಂದ ಎರಡನೆಯವರು) ಇದನ್ನೇ ಸಾಧ್ಯವಾಗಿಸುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದಾರೆ. ಈ ಕಾರಣಕ್ಕಾಗಿಯೇ ಅವರು 2021ರಲ್ಲಿ ‘ಮೈಕ್ರೋ ಗ್ರಾಫಿಯೋ’ ಎಂಬ ಹೆಸರಿನ ಒಂದು ‘ಸ್ಟಾರ್ಟ್ ಅಪ್’ ಸಂಸ್ಥೆಯನ್ನು ಹುಟ್ಟು ಹಾಕಿ, ಅದರ ಮೂಲಕ ಕಾರ್ಪೊರೇಟ್ ಸಂಸ್ಥೆಗಳು, ಉದ್ಯಮಿಗಳು ಮತ್ತು ಉದ್ಯೋಗಾರ್ಥಿಗಳನ್ನು ಒಂದೇ ವೇದಿಕೆಯಡಿ ತಂದು ಉದ್ಯೋಗಾರ್ಥಿಗಳಿಗೆ ಅವರವರದ್ದೇ ತವರೂರುಗಳಲ್ಲಿ ಉದ್ಯೋಗ ಲಭಿಸುವಂತೆ ಮಾಡುತ್ತಿದ್ದಾರೆ.

ಎಂಬಿಎ ಪದವೀಧರರಾಗಿರುವ ಸಂತೋಷ್ ಮಹಾಲಿಂಗಮ್ ಮೂಲತಃ ಕೇರಳದ ಕೋಝಿಕೋಡೆಯವರು. ಮೂವತ್ತು ವರ್ಷಗಳ ಹಿಂದೆ, ಒಬ್ಬ ಎಂಬಿಎ ಪದವೀಧರನಾಗಿದ್ದರೂ ಅವರಿಗೆ ತಮ್ಮ ಊರಲ್ಲಾಗಲೀ, ಅಕ್ಕಪಕ್ಕದ ನಗರಗಳಲ್ಲಾಗಲೀ ಸೂಕ್ತವಾದ ಒಂದು ಉದ್ಯೋಗ ಸಿಗಲಿಲ್ಲ. ತನ್ನ ಎಳವೆಯಲ್ಲಿ ಸಂತೋಷ್ ಮಹಾಲಿಂಗಮ್ ಸೈಕಲ್ ತುಳಿಯುತ್ತ ಕಾಲೇಜಿಗೆ ಹೋಗುವಾಗ ದಾರಿಯಲ್ಲಿ ನೋಡಲು ಸಿಗುತ್ತಿದ್ದ ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕಿನ ಸುಂದರವಾದ ಕಟ್ಟಡವನ್ನು ಕಂಡು, ಅದರಲ್ಲಿ ಮುಂದೆ ಯಾವತ್ತಾದರೂ ತಾನು ಕೆಲಸ ಮಾಡಿಯೇನೇ ಎಂಬ ಕನಸು ಕಾಣುತ್ತಿದ್ದರು. ಅವರು ಕನಸು ಕಂಡಂತೆಯೇ ಅವರಿಗೆ ಅದೇ ಬ್ಯಾಂಕಿನ ಒಂದು ಶಾಖೆಯಲ್ಲಿ ಕೆಲಸ ಸಿಕ್ಕಿತಾದರೂ ಅದಕ್ಕಾಗಿ ಅವರು ತಮ್ಮ ಹುಟ್ಟೂರಿನಿಂದ 350 ಕಿ.ಮೀ. ದೂರದಲ್ಲಿದ್ದ ಬೆಂಗಳೂರಿಗೆ ವಲಸೆ ಹೋಗಬೇಕಾಯಿತು. ಅಲ್ಲಿಂದ ಶುರುವಾದ ಅವರ ಔದ್ಯೋಗಿಕ ಜೀವನ ಅವರನ್ನು ಮುಂದೆ ಮಧ್ಯ ಪೂರ್ವ ದೇಶಗಳಿಗೆ, ಅಲ್ಲಿಂದ ಸಿಂಗಾಪುರಕ್ಕೆ ಕೊಂಡೊಯ್ದು, ಸಿಂಗಾಪುರದಿಂದ ಪುನಾ ಮಧ್ಯಪೂರ್ವ ದೇಶಗಳಲ್ಲಿ ಸುತ್ತಾಡಿಸಿ, ಅಲ್ಲಿಂದ ವಾಪಸ್ ಭಾರತಕ್ಕೆ ಕರೆತಂದಿತು.

ಕೋವಿಡ್-19 ದುರ್ದಿನಗಳಲ್ಲಿ ಸಂತೋಷ್ ಮಹಾಲಿಂಗಮ್ ದುಬೈ ಮೂಲದ ಒಂದು ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿರುವಾಗ ಅವರಿಗೆ ಜನರು ಉದ್ಯೋಗಕ್ಕಾಗಿ ವಲಸೆ ಹೋಗುವುದರ ಸಂಪೂರ್ಣ ಚಿತ್ರಣವನ್ನು ನೋಡಲು ಸಾಧ್ಯವಾಯಿತು. ದೇಶದ ಮೂಲೆ ಮೂಲೆಗಳಿಂದ ಬಂದ ಲಕ್ಷಾಂತರ ಮಂದಿ ವಲಸೆ ಕಾರ್ಮಿಕರು ಕೆಲವೇ ಕೆಲವು ನಗರಗಳಲ್ಲಿ ವಾಸ ಮಾಡುವುದರಿಂದ ಮತ್ತು ಅಲ್ಲಿ ತಮ್ಮ ಉದ್ಯೋಗ ಸ್ಥಳಗಳಿಗೆ ಪ್ರತಿದಿನ ನೂರಾರು ಕಿ.ಮೀ. ದೂರ ಪ್ರಯಾಣಿಸಬೇಕಾಗಿ ಬರುವುದರಿಂದ ಉದ್ಯೋಗಿಗಳು ಮೌಲ್ಯಯುತ ಬದುಕಿನಿಂದ ಹೇಗೆ ವಂಚಿತರಾಗುತ್ತಾರೆ ಎಂಬುದನ್ನೂ ಕಂಡುಕೊಂಡರು. 27 ವರ್ಷಗಳ ಕಾಲ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಮಾಡಿದ ಮೇಲೆ ಸಂತೋಷ್ ಮಹಾಲಿಂಗಮ್ ತಮ್ಮ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಮೋಹನ್ ಮಾಥ್ಯೂ, ಜೈಶಂಕರ್ ಸೀತಾರಾಮನ್, ರಾಂಚು ನಾಯರ್ ಮತ್ತು ಶ್ಯಾಮ್ ಕುಮಾರ್ ಎಂಬ ನಾಲ್ವರು ಸಹೋದ್ಯೋಗಿಗಳನ್ನು ಜೊತೆಗಾರರನ್ನಾಗಿಸಿಕೊಂಡು ‘ಮೈಕ್ರೋ ಗ್ರಾಫಿಯೋ’ ಅನ್ನು ಹುಟ್ಟು ಹಾಕಿದರು. ಮೈಕ್ರೋ ಗ್ರಾಫಿಯೋ ಎಂಬುದು ಒಂದು ಗ್ರೀಕ್ ಪದವಾಗಿದ್ದು, ಇದರರ್ಥ ‘ಒಂದು ಚಿಕ್ಕ ಕಚೇರಿ’.

ದೇಶದ ಬಹುದೊಡ್ಡ ಸಂಖ್ಯೆಯ ಉದ್ಯೋಗಾರ್ಥಿಗಳು ಉದ್ಯೋಗಕ್ಕಾಗಿ ಬೆಂಗಳೂರು, ಮುಂಬೈ, ದೆಹಲಿ ಮೊದಲಾದ ಕೆಲವೇ ಕೆಲವು ಟಯರ್-1 ನಗರಗಳಿಗೆ ವಲಸೆ ಹೋಗುತ್ತಾರೆ. ಸಂತೋಷ್ ಮಹಾಲಿಂಗಮ್ ಮತ್ತು ಅವರ ತಂಡದವರು, ಭಾರತದ ಮತ್ತು ಭಾರತಕ್ಕೆ ಬರಲು ಉತ್ಸುಕರಾಗಿರುವ ವಿದೇಶೀ ಕಂಪೆನಿಗಳ ಮುಖ್ಯಸ್ಥರನ್ನು ಸಂಪರ್ಕಿಸಿ, ತಮ್ಮ ಕಂಪೆನಿಗಳ ವಹಿವಾಟನ್ನು ಟಯರ್-2 ಮತ್ತು ಟಯರ್-3 ನಗರಗಳಲ್ಲಿ ನೆಲೆಗೊಳಿಸುವಂತೆ ಹುರಿದುಂಬಿಸುತ್ತಾರೆ. ಹಾಗೆ ಮಾಡಲು ಅಗತ್ಯವಾದ ಜಾಗ, ಸ್ಥಳೀಯ ಉದ್ಯೋಗಿಗಳು ಮತ್ತು ಇತರ ಇನ್‌ಫ್ರಾಸ್ಟ್ರಕ್ಚರ್ ಮೊದಲಾದವುಗಳನ್ನು ಒದಗಿಸುವ ಮೇಲ್ವಿಚಾರಣೆಯನ್ನು ವಹಿಸಿಕೊಳ್ಳುತ್ತಾರೆ. ಇದು ಕಂಪೆನಿಗಳು ಮತ್ತು ಉದ್ಯೋಗಾರ್ಥಿಗಳು ಇಬ್ಬರಿಗೂ ಪರಸ್ಪರ ಲಾಭದಾಯಕವಾಗಿ ಪರಿಣಮಿಸುತ್ತದೆ. ಇಂತಹ ಟಯರ್-2 ಅಥವಾ ಟಯರ್-3 ನಗರಗಳಲ್ಲಿ ತಮ್ಮ ವಹಿವಾಟನ್ನು ಶುರು ಮಾಡುವುದರಿಂದ ಕಂಪೆನಿಗಳಿಗೆ ರಿಯಲ್ ಎಸ್ಟೇಟ್ ಖರ್ಚು ಕಡಿಮೆಯಾಗುತ್ತದೆ. ಉದ್ಯೋಗಿಗಳಿಗೆ ನೀಡುವ ಸಂಬಳವೂ ಕಡಿಮೆ ಇರುತ್ತದೆ. ಹಲವು ವಿಚಾರಗಳಲ್ಲಿ ಸರ್ಕಾರಗಳ ಸಬ್ಸಿಡಿ ಹಾಗೂ ಇತರ ಸಹಾಯಗಳು ದೊರಕುತ್ತವೆ. ಉದ್ಯೋಗಿಗಳಿಗೆ ತಮ್ಮ ಊರುಗಳಲ್ಲೇ ಅಥವಾ ತಮ್ಮ ಊರುಗಳಿಗೆ ಹತ್ತಿರದಲ್ಲೇ ಉದ್ಯೋಗ ದೊರಕಿದ ಸಂತೋಷ. ಈ ಕಾರಣಕ್ಕಾಗಿ ಅವರು ಕಡಿಮೆ ಸಂಬಳಕ್ಕೂ ಕೆಲಸ ಮಾಡಲು ತಯಾರಿರುತ್ತಾರೆ.

ಆದರೆ, ಇದು ಮೇಲ್ನೋಟಕ್ಕೆ ತೋರುವಷ್ಟು ಸರಳ ಹಾಗೂ

ಸುಲಭವಲ್ಲ. ಕಂಪೆನಿಗಳನ್ನು ಸಣ್ಣ ನಗರಗಳಿಗೆ ಬರುವಂತೆ ಒಪ್ಪಿಸುವ ಕೆಲಸ ಕಷ್ಟಕರವೂ ಹೌದು. ಎಷ್ಟೋ ಬಾರಿ ಫಲಪ್ರದವೂ ಆಗುವುದಿಲ್ಲ. ಕಂಪೆನಿಗಳಿಗೆ ಸಾಕಷ್ಟು ಸಂಖ್ಯೆಯ ಉದ್ಯೋಗಿಗಳು ಲಭಿಸುವರೇ? ಕಂಪೆನಿ ಸೆಟ್‌ಅಪ್ ಮಾಡಲು ಬೇಕಾದ ಸೂಕ್ತ ಇನ್ಛ್ರಾಸ್ಟ್ರಕ್ಚರ್ ಲಭಿಸುವುದೇ ಮೊದಲಾದ ಆತಂಕಗಳಿರುತ್ತವೆ. ಆದರೂ, ಸಂತೋಷ್ ಮಹಾಲಿಂಗಮ್ ಮತ್ತು ಅವರ ತಂಡದವರು ಈವರೆಗೆ ಐಟಿ, ಫೈನಾನ್ಸ್, ಅಕೌಂಟಿಂಗ್, ರಿಟೈಲ್, ಆರ್ಕಿಟೆಕ್ಚರ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮೊದಲಾದ ಕ್ಷೇತ್ರಗಳ ಸುಮಾರು 50ಕ್ಕೂ ಹೆಚ್ಚು ಕಂಪೆನಿಗಳು ತ್ರಿಚಿ, ಕೊಯಂಬತ್ತೂರ್, ಕೊಚ್ಚಿ, ಪಾಂಡಿಚೇರಿ, ಭೂಪಾಲ್, ಲಕ್ನೋ ಮೊದಲಾಗಿ ಸುಮಾರು 21 ಸಣ್ಣ ನಗರಗಳಲ್ಲಿ ತಮ್ಮ ವಹಿವಾಟು ನಡೆಸಲು ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಹಾಲಿಂಗಮ್ ಮತ್ತು ಅವರ ತಂಡದವರು ಈ ವರ್ಷದ ಅಂತ್ಯಕ್ಕೆ ಭಾರತದ 44 ಸಣ್ಣ ನಗರಗಳಿಗೆ ತಮ್ಮ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಗುರಿ ಹೊಂದಿದ್ದಾರೆ. ಇದರೊಂದಿಗೆ, ಮುಂದಿನ ವರ್ಷ ಸಂತೋಷ್ ಮಹಾಲಿಂಗಮ್ ಸ್ವತಃ ತಾವೇ ಬೆಂಗಳೂರಿನಿಂದ ತನ್ನ ತವರೂರಾದ ಕೋಝಿಕೋಡೆಗೆ ಮರಳುವ ತಯಾರಿಯಲ್ಲಿದ್ದಾರೆ.

andolanait

Recent Posts

ಸಿಜೆಪಿ ನಾಯಕ ಅಭಿಜಿತ್ ದೀಪ್ಕೆ ಅಜ್ಜಿ ನಿಧನ

ಮುಂಬೈ: ಸಿಜೆಪಿ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಅವರನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದ ಗಂಟೆಗಳಲ್ಲಿ ಅವರ ಅಜ್ಜಿ ನಿಧನರಾಗಿದ್ದಾರೆ. ದೀರ್ಘಕಾಲದ…

16 hours ago

ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ: ನಾಳೆ ಅಧಿಕೃತ ಚಾಲನೆ

ಮೈಸೂರು: ಮೈಸೂರಿನ ದಸರಾ ಮಹೋತ್ಸವದ ಉದ್ಘಾಟನೆಗೆ ಚಾಮುಂಡಿಬೆಟ್ಟದಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಉದ್ಘಾಟನಾ ಸಮಾರಂಭಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಕಾರ್ಯ…

17 hours ago

ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾಲಯ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಮಹಾಲಯ ಅಮಾವಾಸ್ಯೆ ಪ್ರಯುಕ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಮಲೆ ಮಹದೇಶ್ವರ…

18 hours ago

ಅಭಿಜಿತ್ ದೀಪ್ಕೆ ಪೊಲೀಸ್ ವಶಕ್ಕೆ: ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಅಜಿಂಕ್ಯ ಶಿಂಧೆ ಸಾರಥ್ಯ

ನವದೆಹಲಿ: ಅಭಿಜಿತ್ ದೀಪ್ಕೆ ಪೊಲೀಸ್ ವಶದಲ್ಲಿರುವ ಹಿನ್ನೆಲೆಯಲ್ಲಿ, ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಿಜೆಪಿಯ ಸಂಘಟನಾ ಉಸ್ತುವಾರಿ ಅಜಿಂಕ್ಯ ಶಿಂಧೆ…

19 hours ago

ಓದುಗರ ಪತ್ರ: ಹೋರಾಟಗಳು ರಚನಾತ್ಮಕವಾಗಿರಲಿ, ಗಂಭೀರವಾಗಿರಲಿ

ಚುನಾವಣಾ ಆಯೋಗದ ವಿರುದ್ಧ ವಿಪಕ್ಷಗಳು ಹಾಗೂ ಕೆಲವು ಸಂಘಟನೆಗಳು ಪ್ರತಿಭಟನೆಗಳನ್ನು ಮಾಡುತ್ತಿರುವುದು ಪ್ರಸ್ತುತ ರಾಜಕೀಯ ಮತ್ತು ಸಾಮಾಜಿಕ ವಾತಾವರಣ ದಲ್ಲಿ…

22 hours ago

ಓದುಗರ ಪತ್ರ: ಒಂದು ವರ್ಷ ಅಲೆದಾಡಿಸಿದ ನಂತರ… !

ಮೈಸೂರಿನಲ್ಲಿ ಇ-ಖಾತಾ ಹಾಗೂ ಸಿ ಆರ್ ವಿತರಣೆ ಸಂಬಂಧ ಸಾರ್ವಜನಿಕರಿಂದ ಕುಂದು ಕೊರತೆ ಆಲಿಸಿದ ನಂತರ ಮೈಸೂರು ನಗರ ಪಾಲಿಕೆಯ…

22 hours ago