ಎಡಿಟೋರಿಯಲ್

ಜೋಡಣೆ – ಸ್ಪಂದನೆ ನಡುವೆ ಒಂದಷ್ಟು ನಿಸ್ಪಹ ಜನ

ಗದ್ದುಗೆ ಏರಿದವರ ನಿರ್ಲಿಪ್ತತೆ, ಬೌದ್ಧಿಕ ನಿಷ್ಕ್ರಿಯತೆಯೇ ನೈಸರ್ಗಿಕ ವಿಕೋಪಗಳ ಸಾವಿರಾರು ಸಂತ್ರಸ್ತರನ್ನೂ ನಿರ್ಲಕ್ಷಿತರ ಪಟ್ಟಿಗೆ ಸೇರಿಸಿದೆ

ನಾ ದಿವಾಕರ
ಈ ಜೋಡಣೆಯ ಹಾದಿಯಲ್ಲಿ ಮಾನವೀಯತೆಯ ಸ್ಪರ್ಶವನ್ನೇ ಕಳೆದುಕೊಳ್ಳುತ್ತಿರುವ ಒಂದು ಬೃಹತ್ ವಲಯ ರಾಜಕೀಯ ಪಕ್ಷಗಳಿಗೆ ಸಹಜವಾಗಿ ಎದುರಾಗುತ್ತದೆ. ಕಾಂಗ್ರೆಸ್ ಪಕ್ಷದ ಯಾತ್ರೆಗೆ ಪ್ರತಿಯಾಗಿ ರಾಜ್ಯ ಬಿಜೆಪಿ ಸರ್ಕಾರ ಜನಸ್ಪಂದನ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದೆ. ‘ಸ್ಪಂದನೆ’ ಎಂಬ ಪದವು ತನ್ನ ಮೂಲಾರ್ಥವನ್ನೇ ಕಳೆದುಕೊಳ್ಳುತ್ತಿರುವ ಸನ್ನಿವೇಶದಲ್ಲಿ ಅಧಿಕಾರ ರಾಜಕಾರಣದ ಶಕ್ತಿಕೇಂದ್ರಗಳು ‘ಜನಸ್ಪಂದನೆ’ಯ ಬಗ್ಗೆ ಆಸಕ್ತಿ ತೋರುತ್ತಿವೆ. ‘ಜೋಡಣೆ’ ಎನ್ನುವುದು ಭೌತಿಕ ಪರಿಕಲ್ಪನೆಯಾದರೆ ‘ಸ್ಪಂದನೆ’ ಎನ್ನುವುದು ಬೌದ್ಧಿಕ ನೆಲೆಯಲ್ಲಿ ವ್ಯಕ್ತವಾಗುತ್ತದೆ. ಅತ್ತ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲೇ, ಆಧ್ಯಾತ್ಮಿಕ ಸಂಸ್ಥೆಯೊಂದರಲ್ಲಿ ದೌರ್ಜನ್ಯಕ್ಕೊಳಗಾದ ಇಬ್ಬರು ಬಾಲಕಿಯರು ನ್ಯಾಯಕ್ಕಾಗಿ ಹಾತೊರೆಯುತ್ತಿದ್ದಾರೆ. ಈ ನೊಂದ ಬಾಲಕಿಯರಿಗೆ ಕೂಡಲೆ ಸ್ಪಂದಿಸಬೇಕಿದ್ದ ರಾಜಕೀಯ ವಲಯ ತನ್ನ ದಿವ್ಯ ಮೌನದ ಮೂಲಕ ತನ್ನ ಬೇಜವಾಬ್ದಾರಿಯನ್ನು ಪ್ರದರ್ಶಿಸಿದೆ. ಮುರುಘಾ ಮಠದ ಪ್ರಕರಣದಲ್ಲಿ ಸಂತ್ರಸ್ತೆಯರಾಗಿರುವ ಇಬ್ಬರು ಬಾಲಕಿಯರು ಪ್ರತಿನಿಧಿಸುವ ಒಂದು ಬೃಹತ್ ಸಮೂಹವೇ ಭಾರತದಲ್ಲಿದೆ. ಕಥುವಾ, ಉನ್ನಾವೋ, ಹಾಥ್ರಸ್, ಬಿಲ್ಕಿಸ್ ಬಾನು, ಊನ, ಖೈರ್ಲಾಂಜಿ, ಕಂಬಾಲಪಲ್ಲಿ  ಹೀಗೆ ಪುರುಷಾಧಿಪತ್ಯ ಮತ್ತು ಜಾತಿ ಶ್ರೇಷ್ಠತೆಯ ಅಹಮಿಕೆಗೆ ಬಲಿಯಾದ ನೂರಾರು ಜೀವಗಳು ‘ಮಾನವೀಯ ಸ್ಪಂದನೆಗಾಗಿ’ ಕೈಚಾಚಿ ನಿಂತಿವೆ. ದುರದೃಷ್ಟವಶಾತ್ ಈ ನೊಂದ ಮನಸ್ಸುಗಳಿಗೆ ಸ್ಪಂದಿಸುವಲ್ಲಿ ಇಡೀ ಸಮಾಜವೇ ಎಡವಿದೆ. ರಾಜಕೀಯ ವಲಯ ತನ್ನದೇ ಆದ ಸಾಪೇಕ್ಷ ನಿಲುವುಗಳಿಂದ ನಿರ್ಲಕ್ಷ್ಯ ವಹಿಸುತ್ತಿವೆ.
ಜೋಡಣೆ ಮತ್ತು ಸ್ಪಂದನೆ ಎರಡೂ ಚುನಾವಣಾ ರಾಜಕಾರಣ ಮತ್ತು ಮತಗಟ್ಟೆಗಳ ಚೌಕಟ್ಟಿನಿಂದ ಹೊರಬಂದಾಗ, ನಮ್ಮ ಅಧಿಕಾರ ಶಕ್ತಿ ಕೆಂದ್ರಗಳಿಗೆ ಈ ಎರಡೂ ಪದಗಳ ಅಂತಃಸತ್ವವೂ ಅರ್ಥವಾಗುತ್ತದೆ. ದಿನನಿತ್ಯ ಅತ್ಯಾಚಾರ ಮತ್ತು ದೌರ್ಜನ್ಯಕ್ಕೊಳಗಾಗುತ್ತಿರುವ ಅಸಂಖ್ಯಾತ ಹೆಣ್ಣುಮಕ್ಕಳು ಪುರುಷ ಸಮಾಜದ ಅನುಕಂಪ ಅಥವಾ ಅನುಭೂತಿಯನ್ನು ನಿರೀಕ್ಷಿಸುವುದಿಲ್ಲ. ಬೆನ್ನು ನೇವರಿಸುವ ಸಾಂತ್ವನವನ್ನೂ ನಿರೀಕ್ಷಿಸುವುದಿಲ್ಲ. ಪುರುಷಾಧಿಪತ್ಯದ ದಬ್ಬಾಳಿಕೆಗೆ ಬಲಿಯಾಗುವ ಈ ಎಳೆ ಮನಸ್ಸುಗಳಿಗೆ ‘ಸಂತ್ರಸ್ತ’ ಪದವಿಯನ್ನು ನೀಡುವ ಮೂಲಕ ಸಹಾನುಭೂತಿ ವ್ಯಕ್ತಪಡಿಸುವ ಸಮಾಜ, ಈ ಪದವಿಗೆ ಕಾರಣರಾದವರನ್ನು ಶಿಕ್ಷೆಗೊಳಪಡಿಸದೆ ಹೋದರೆ ಇವರು ಶಾಶ್ವತ ಸಂತ್ರಸ್ತರಾಗಿಬಿಡುತ್ತಾರೆ. ಅಪರಾಧ ಅಥವಾ ಪಾತಕ ಕೃತ್ಯಗಳನ್ನು ದೌರ್ಜನ್ಯಕ್ಕೊಳಗಾದವರ ನೆಲೆಯಲ್ಲಿ ನಿಂತು ನೋಡದೆ, ಪಾತಕಿಗಳ ನೆಲೆಯಲ್ಲಿ ನಿಂತು ನೋಡುವ ಒಂದು ವಿಕೃತ ಪರಂಪರೆಯನ್ನು ನಾವು ನಮ್ಮದಾಗಿಸಿಕೊಂಡಿದ್ದೇವೆ. ಹಾಗಾಗಿಯೇ ಪ್ರಭಾವಿ ವಲಯದ ‘ಪಾತಕಿಗಳು’ ತಮ್ಮ ಸಾಮಾಜಿಕ-ಸಾಂಸ್ಕೃತಿಕ-ಆರ್ಥಿಕ ಸ್ಥಾನಮಾನಗಳಿಗೆ ಅನುಗುಣವಾಗಿ   ‘ನಿರಪರಾಧಿ’ ಪಟ್ಟವನ್ನು ಗಳಿಸಿಬಿಡುತ್ತಾರೆ. ಆಳುವ ವರ್ಗಗಳ ‘ಜನಸ್ಪಂದನೆ’ಯನ್ನು ಈ ನೆಲೆಯಲ್ಲಿ ನಿಷ್ಕರ್ಷೆಗೊಳಪಡಿಸಬೇಕಿದೆ.
ಅಧಿಕಾರ ಶಕ್ತಿ ಕೇಂದ್ರಗಳ ಈ ನಿರ್ಲಿಪ್ತತೆ ಮತ್ತು ಬೌದ್ಧಿಕ ನಿಷ್ಕ್ರಿಯತೆಯೇ ನೈಸರ್ಗಿಕ ವಿಕೋಪಗಳಿಗೆ ತುತ್ತಾದ ಸಾವಿರಾರ ಸಂತ್ರಸ್ತರನ್ನೂ ನಿರ್ಲಕ್ಷಿತರ ಪಟ್ಟಿಗೆ ಸೇರಿಸಿ ಬಿಡುತ್ತದೆ. ಬೆಂಗಳೂರಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ನಷ್ಟವನ್ನು ಆರ್ಥಿಕ ನೆಲೆಯಲ್ಲಿ ಲೆಕ್ಕ ಹಾಕುವ ಮೂಲಕ ಪರಿಹಾರದ ಮೊತ್ತವನ್ನೇ ಪ್ರಧಾನವಾಗಿ ಪರಿಗಣಿಸುವ ಅಧಿಕಾರಶಾಹಿಗಳಿಗೆ ಮತ್ತು ಸರ್ಕಾರಗಳಿಗೆ, ಹಾನಿಗೊಳಗಾದ ಲಕ್ಷಾಂತರ ಶ್ರಮಜೀವಿಗಳ ಜೀವನೋಪಾಯದ ಬಗ್ಗೆ ಯೋಚಿಸಲೂ ಸಮಯ ಇರುವುದಿಲ್ಲ. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಂಡವಾಳ ಹೂಡಿಕೆದಾರರನ್ನು ಹಿಡಿದಿಟ್ಟುಕೊಳ್ಳುವುದೇ ಸರ್ಕಾರದ ಪಾಲಿಗೆ ಆದ್ಯತೆಯ ವಿಷಯವಾಗಿದ್ದು, ಐಟಿ ವಲಯದಲ್ಲಿ ಆಗಿರುವ ಹಾನಿಯನ್ನು ಸರಿಪಡಿಸಲು ಸಮರೋಪಾದಿಯಲ್ಲಿ ಕಾಮಗಾರಿ ನಡೆಸಲಾಗುತ್ತದೆ. ಆದರೆ ನಗರದ ಮತ್ತೊಂದು ದಿಕ್ಕಿನಲ್ಲಿ ಇದೇ ಐಟಿ ಸಾಮ್ರಾಜ್ಯವನ್ನು ಕಟ್ಟಲು ಶ್ರಮಿಸಿದ, ಇಂದಿಗೂ ರಾಜಧಾನಿಯನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುತ್ತಿರುವ ಲಕ್ಷಾಂತರ ಶ್ರಮಜೀವಿಗಳ ಜೀವನ ಮತ್ತು ಜೀವನೋಪಾಯ ಮುಖ್ಯವಾಗುವುದಿಲ್ಲ. ತಲೆಗಿಂತಿಷ್ಟು ಅಥವಾ ಮನೆಗಿಂತಿಷ್ಟು ಪರಿಹಾರ ನೀಡುವುದಷ್ಟೇ ಅಲ್ಲದೆ, ನಗರಾಭಿವೃದ್ಧಿಯ ಅಡಿಗಲ್ಲುಗಳಲ್ಲಿ ತಮ್ಮ ಬೆವರು ಸುರಿಸಿ, ತಮ್ಮ ಇದ್ದ ನೆಲೆಯನ್ನೂ ಕಳೆದುಕೊಳ್ಳುವ ಪೌರಕಾರ್ಮಿಕರು, ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬಗಳು ಆಳುವವರ ಸಹಾನುಭೂತಿಯ ನಿರೀಕ್ಷೆಯಲ್ಲಿ ರುವುದನ್ನೂ ಸರ್ಕಾರಗಳು ಗಮನಿಸಬೇಕಿದೆ.
ಭಾರತವನ್ನು ಜೋಡಿಸುವ ಮತ್ತು ಜನತೆಗೆ ಸ್ಪಂದಿಸುವ ರಾಜಕೀಯ ಶಕ್ತಿಗಳು ಮನಸ್ಸುಗಳನ್ನೂ ಜೋಡಿಸುತ್ತಲೇ, ಹೃದಯಗಳಿಗೆ ಸ್ಪಂದಿಸಬೇಕಿದೆ. ಈ ಮನಸು ಹೃದಯಗಳ ನಡುವೆ ನಿರ್ಮಿಸಲಾಗುತ್ತಿರುವ ಜಾತಿ, ಧರ್ಮಗಳ ತಡೆಗೋಡೆಗಳು ಮತ್ತು ಇವುಗಳ ನಡುವೆ ಬಿತ್ತಲಾಗುತ್ತಿರುವ ಮತದ್ವೇಷದ ಬೀಜಗಳನ್ನು ತೊಡೆದುಹಾಕಲು ಮುಂದಾಗಬೇಕಿದೆ. ಸೂರ್ಯ, ಚಂದ್ರ, ನೆಲ, ಜಲ ಮತ್ತು ಬ್ರಹ್ಮಾಂಡದ ಚರಾಚರಗಳನ್ನು ಒಂದು ಪ್ರತಿಮೆಯ ರೂಪದಲ್ಲಿ, ರೂಪಕವಾಗಿ ಬಳಸಿಕೊಳ್ಳುವ ಸೃಜನಶೀಲತೆಯ ಮಾರ್ಗಗಳು ಶಿಥಿಲವಾಗುತ್ತಿರುವುದನ್ನೂ ಈ ಸಂದರ್ಭದಲ್ಲಿ ಗಮನಿಸಬೇಕಿದೆ. ಕಲೆ, ಸಾಹಿತ್ಯ, ಚಿತ್ರಕಲೆ, ಸಿನಿಮಾ, ನಾಟಕ ಮತ್ತು ಸಾಹಿತ್ಯೇತರ ಸೃಜನಶೀಲ ಅಭಿವ್ಯಕ್ತಿಗಳ ಮೇಲೆ ನಿರಂತರವಾಗಿ ನಡೆಯುತ್ತಿರುವ ಪ್ರಹಾರ ಭಾರತದಲ್ಲಿ ಹಲವು ಸಲ್ಮಾನ್ ರಷ್ದಿಗಳನ್ನು, ತಸ್ಲೀಮಾ ನಸರೀನ್‌ಗಳನ್ನು ಹುಟ್ಟುಹಾಕುತ್ತದೆ. ತೆಳು ಹಾಸ್ಯವನ್ನೂ ಸಹಿಸಿಕೊಳ್ಳಲಾರದಂತಹ ಒಂದು ಸಮಾಜವನ್ನು ಅಧಿಕಾರದ ಶಕ್ತಿ ಕೇಂದ್ರಗಳು ಸೃಷ್ಟಿಸಿವೆ. ಕುನಾಲ್ ಕಾಮ್ರಾ, ಮುನಾವರ್ ಫರೂಕಿ ಮುಂತಾದ ಕಲಾವಿದರು ತಮ್ಮೊಳಗಿನ ಸೃಜನಶೀಲತೆಯನ್ನು ಸಾಂಸ್ಕೃತಿಕ ರಾಜಕಾರಣದ ಬಲಿಪೀಠಕ್ಕೆ ಅರ್ಪಿಸುವ ಪರಿಸ್ಥಿತಿ ಎದುರಾಗಿದೆ. ಇತ್ತೀಚಿನ ದಿನಗಳ ಮತದ್ವೇಷ, ಜಾತಿ ದ್ವೇಷ ಮತ್ತು ದ್ವೇಷ ರಾಜಕಾರಣದ ವಾತಾವರಣದಲ್ಲಿ ಬೌದ್ಧಿಕ ಅಸ್ಪೃಶ್ಯತೆಯೂ ಹೆಚ್ಚಾಗುತ್ತಿದ್ದು, ಸಾಂಸ್ಕೃತಿಕ ವಲಯದಲ್ಲೂ ಸಂತ್ರಸ್ತರನ್ನು ಸೃಷ್ಟಿಸಲಾಗುತ್ತಿದೆ. ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ನ್ಯಾಯಾಲಯದ ಮೊರೆ ಹೋಗಬೇಕಾದ ವಿಷಮ ಪರಿಸ್ಥಿತಿಯನ್ನು ಸಮಾಜ ಎದುರಿಸುತ್ತಿದೆ. ಈ ಸಾಂಸ್ಕೃತಿಕ ವಿಘಟನೆಯನ್ನು ತಪ್ಪಿಸಬೇಕೆಂದರೆ, ತಳಮಟ್ಟದವರೆಗೂ ಮನಸ್ಸುಗಳನ್ನು ಜೋಡಿಸಬೇಕಿದೆ. ತುಳಿತಕ್ಕೊಳಗಾದ ನಿರ್ಲಕ್ಷಿತ ಸಮುದಾಯಗಳ ಎದೆಬಡಿತಕ್ಕೆ ಸ್ಪಂದಿಸಬೇಕಿದೆ. ಜನತಂತ್ರದಲ್ಲಿ ‘ಜನ’, ಗಣತಂತ್ರದಲ್ಲಿ  ‘ಗಣ’ ಮತ್ತು ಪ್ರಜಾಪ್ರಭುತ್ವದಲ್ಲಿ  ‘ಪ್ರಜೆ’ ಸದಾ ಉತ್ಸುಕತೆಯಿಂದ, ಜೀವಂತಿಕೆಯಿಂದ ಇರಬೇಕೆಂದರೆ ಈ ‘ಮನಸ್ಸುಗಳ ಜೋಡಣೆ’ ಮತ್ತು ‘ಹೃದಯ ಸ್ಪಂದನೆ’  ಮುಖ್ಯವಾದ ಮಾರ್ಗಗಳಾಗುತ್ತವೆ. ಈ ಮೂರನ್ನೂ ನಿರ್ಲಕ್ಷಿಸುವ ಅಧಿಕಾರದ ಶಕ್ತಿ ಕೇಂದ್ರಗಳು ಎಲ್ಲವನ್ನೂ ಕಾರ್ಪೊರೇಟ್ ಮಾರುಕಟ್ಟೆಯ ಕಚ್ಚಾವಸ್ತುಗಳಂತೆ ಪರಿಗಣಿಸುತ್ತಿವೆ. ಮತಗಟ್ಟೆಗಳಿಂದಾಚೆಗೂ ಒಂದು ಸಮಾಜ ಜೀವಂತಿಕೆಯಿಂದಿರಬೇಕು ಎಂಬ ವಾಸ್ತವವನ್ನು ರಾಜಕೀಯ ಪಕ್ಷಗಳು ಗ್ರಹಿಸುವಂತಾದರೆ   ‘ಭಾರತ್ ಜೋಡೋ’  ಮತ್ತು ‘ಜನಸ್ಪಂದನೆ’ಯಂತಹ ಯಾತ್ರೆ-ಸಮಾವೇಶಗಳು ಸಾರ್ಥಕವಾಗುತ್ತವೆ. ಅಸಹಾಯಕತೆಯಿಂದ ನ್ಯಾಯಾಂಗದ ಮುಂದೆ ಕೈಚಾಚಿ ನಿಂತಿರುವ ಅಸಂಖ್ಯಾತ ನಿಸ್ಪೃಹ ಜೀವಿಗಳತ್ತ ಒಮ್ಮೆಯಾದರೂ ಕಣ್ಣೆತ್ತಿ ನೋಡುವ ವಿವೇಕ ಮತ್ತು ವಿವೇಚನೆಯನ್ನು ನಮ್ಮ ರಾಜಕೀಯ ಪಕ್ಷಗಳು ಬೆಳೆಸಿಕೊಳ್ಳಬೇಕಿದೆ. ಆಗ ಮಾತ್ರವೇ ಜನತಂತ್ರ ಮತ್ತು ಗಣತಂತ್ರ ಸಾರ್ಥಕತೆಯನ್ನು ಪಡೆಯುತ್ತದೆ.
andolanait

Recent Posts

ಓದುಗರ ಪತ್ರ: ಶಾಸಕರ ಅಸಂಬದ್ಧ ಹೇಳಿಕೆ

ಕಾಡಾನೆಗಳ ಹಾವಳಿಯಿಂದಾಗಿ ಕಾಡಂಚಿನ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಆನೆಗಳನ್ನು ಕೊಲ್ಲಲು ಅನುಮತಿ ನೀಡಬೇಕು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ…

2 hours ago

ಓದುಗರ ಪತ್ರ: ಅಮಿತ್‌ ಶಾ ಹೇಳಿಕೆ ಖಂಡನೀಯ

ರಾಜ್ಯಸಭೆಯ ಕಲಾಪದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತನಾಡುವ ಭರದಲ್ಲಿ ಕೆಲವರು ಅಂಬೇಡ್ಕರ್ ಎನ್ನುವುದನ್ನು ಈಗ ಫ್ಯಾಷನ್…

2 hours ago

ವಾಹನ ಸಂಚಾರಕ್ಕೆ ಸಂಚಕಾರ ತರುತ್ತಿರುವ ಅವರೆಕಾಯಿ ವ್ಯಾಪಾರ

ದಾ.ರಾ. ಮಹೇಶ್‌ ವೀರನಹೊಸಹಳ್ಳಿ: ತಾಲ್ಲೂಕಿನ ಬನ್ನಿಕುಪ್ಪೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿತ್ಯ ಅವರೆಕಾಯಿ ಮಾರಾಟದಿಂದಾಗಿ ಟ್ರಾಫಿಕ್ ಜಾಮ್ ಆಗುತ್ತಿದ್ದು, ವಾಹನಗಳ ಸಂಚಾರಕ್ಕೆ…

3 hours ago

ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

  ಮಂಡ್ಯ: ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20,21 ಮತ್ತು 22ರಂದು ಮೂರು ದಿನಗಳ ಕಾಲ ಜರುಗಲಿರುವ ಕನ್ನಡ ನುಡಿ ಜಾತ್ರೆ…

4 hours ago

59 ಸಾವಿರ ಶಿಕ್ಷಕರ ಹುದ್ದೆ ಖಾಲಿ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಮಾಹಿತಿ

ಬೆಳಗಾವಿ: ರಾಜ್ಯದಲ್ಲಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 59,772 ಶಿಕ್ಷಕರ ಹುದ್ದೆಗಳು ಖಾಲಿ ಇವೆ ಎಂದು ಶಾಲಾ ಶಿಕ್ಷಣ ಮತ್ತು…

12 hours ago

ಮೈಸೂರಿಗೆ ತೆರಳಲು ಅನುಮತಿ ಕೋರಿ ಕೋರ್ಟ್‌ ಮೋರಿ ಹೋದ ದರ್ಶನ್‌

ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದಿರುವ ನಟ ದರ್ಶನ್‌ ಮೈಸೂರಿಗೆ ನಾಲ್ಕು ವಾರಗಳ ಕಾಲ ತೆರಳಲು ಅನುಮತಿ…

13 hours ago