ಎಡಿಟೋರಿಯಲ್

ಹಿರೇನಂದಿಯ ಹಿರಿಯ ಗಾಯಕಿ ಚಾಮಮ್ಮ

ಮನುಷ್ಯ ಬದುಕಿನ ನೋವು ನಲಿವುಗಳು ಸಾಹಿತ್ಯದ ಬೇರೆ ಬೇರೆ ರೂಪಗಳಲ್ಲಿ ಅಭಿವ್ಯಕ್ತಗೊಳ್ಳುತ್ತವೆ. ಅದರಲ್ಲೂ ಜನಪದ ತ್ರಿಪದಿ ಮತ್ತು ಕಥನಕಾವ್ಯಗಳಲ್ಲಿ ಗ್ರಾಮೀಣ ಮಹಿಳೆಯರ ನೋವಿನ ಸಂಕಥನಗಳೇ ಹೆಚ್ಚು. ಜನಪದ ಗಾಯಕ ಗಾಯಕಿಯರ ಮನೋಧರ್ಮಕ್ಕನು  ಗುಣವಾಗಿ, ಜಾನಪದ ಆಯಾಯ ಸಾಂಸ್ಕೃತಿಕ ಕಾಲಘಟ್ಟದ ಸ್ಥಿತ್ಯಂತರಗಳನ್ನೆಲ್ಲಾ ತನ್ನೊಳಗು ಮಾಡಿಕೊಂಡು ವಿಸ್ತಾರಗೊಳ್ಳುತ್ತಾ ಬರುತ್ತಿದೆ.

ಹಾಡುವ ಗಾಯಕ ಗಾಯಕಿಯರ ಬದುಕಿನ ಎಲ್ಲಾ ಬಗೆಯ ಅನುಭವಗಳು ಮೂಲ ಕಥೆಯೊಳಗೆ  ಮಿಳಿತಗೊಂಡು ಬಿಡುತ್ತವೆ. ಅನುಭವಿಸಿ ಹಾಡುವಾಗ ಇಹವನ್ನು ಮರೆಯಬಹುದು ಅಥವಾ ಬದುಕುತ್ತಿರುವ ತನ್ನೆಲ್ಲಾ ಸಂಕಷ್ಟಗಳನ್ನು ಶಪಿಸಬಹುದು. ‘ಜೋಗಿ ನೋಡ್ ಜೋಗಿ ನೋಡೆ ಜೋಗಯ್ನ ಜೋತುರದ ಬೆಡಗ ನೋಡೆ’ ಅರ್ಜುನ ಜೋಗಿ ಕಥಾನಕವನ್ನು ಮಾಧುರ್ಯಪೂರ್ಣವಾಗಿ ಹಾಡುತ್ತಿದ್ದ ಇನಿದನಿಯ ಗಾಯಕಿ ಹಿರೇನಂದಿ ಚಾಮಮ್ಮ ಅವರ ಕಂಠ ಬಿಗಿಯುತ್ತಿತ್ತು. ಕಣ್ಣಾಲಿಗಳು ಒದ್ದೆಯಾಗಿದ್ದವು. ಕೊಂತಿಯ ವನವಾಸದ ಘಟನೆಗಳೆಲ್ಲವು ನನ್ನದೇ ಎಂದು ಭಾವಿಸಿ ಹಾಡುತ್ತಿದ್ದರು.

ಚಾಮಮ್ಮ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲ್ಲೂಕು ಹಿರೇನಂದಿ ಗ್ರಾಮದವರು. ಈಗಲೂ ಕಡುಬಡತನದ ಬದುಕನ್ನು ನಡೆಸುತ್ತಿದ್ದಾರೆ. ಎಳೆತನದಿಂದಲೂ ಕೂಲಿನಾಲಿ ಮಾಡಿಕೊಂಡು ಜೀವಿಸುತ್ತಿರುವ ಈ ಹಾಡು ಜೀವ ಈಗ ದೈಹಿಕವಾಗಿ ಬಡಕಲಾಗಿದೆ. ಆದರೆ, ಹಾಡುವುದಕ್ಕೆ ಕೂತರೆ ಹತ್ತಾರು ಗಾವುದದಲ್ಲಿದ್ದವರಿಗೂ ಕೇಳಿಸುವ ಹಾಗೆ ಎತ್ತರದ ಧ್ವನಿಯಲ್ಲಿ ಹಾಡುತ್ತಾರೆ.

ಇವರ ಜೀವನಪ್ರೀತಿ ಹಾಡುವ ಉತ್ಸಾಹ ಎಂಥವರನ್ನೂ ಬೆರಗುಗೊಳಿಸುತ್ತದೆ. ಕಂಠತೆರೆದು ಕೋಗಿಲೆಯ ಹಾಗೆ ಹಾಡುವ ಇವರು ಮನಬಿಚ್ಚಿ ಮಾತನಾಡದ ಸಂಕೋಚ ಸ್ವಭಾವದವರು. ಒತ್ತಾಯಪೂರ್ವಕವಾಗಿ ಇವರನ್ನು ಮಾತಿಗಿಳಿಸಿದಾಗ ಆರೂವರೆ ದಶಕದ ಜೀವನಾನುಭವವನ್ನು ಒತ್ತರಿಸಿ ಬರುತ್ತಿದ್ದ ದುಃಖಪೂರಿತ ಗದ್ಗದಿತ ಅಸ್ಪಷ್ಟ ದನಿಯಲ್ಲಿ ಹೇಳತೊಡಗಿದರು. ‘ನಮ್ಮೂರಲ್ಲಿ ನನ್ನ ಕೊಂತಿ ಅಂತ ಕರೀತಿದ್ರು. ಈಗ ಚಾಮಿ ಅಂತ ಕರೀತಾರೆ. ನನ್ನ ಕೊಂತಿ ಅಂತ ಯಾಕ್ ಕರೀತಿದ್ರು ಅಂದ್ರೆ ನಂದು ಸೋಲ್ಗೈ ಅದಕ್ಕೆ.

ನಾನು ಹುಟ್ದಾಗಿಂದ ಕಸ್ಟನೇ ಬದುಕಿವ್ನಿ. ಗಂಡುಸ್ರು ಅಂದ್ರೆ ನಂಗೆ ಭಯ. ಈಗ್ಲೂವಿ ನಾನು ಗಂಡುಸ್ರು ಎದುರ್ಗೆ ನಿಂತ್ಕಳಾಕಿಲ್ಲ. ನಮ್ಮಪ್ಪಂಗೆ ಏಡ್ ಜನ ಹೆಂಡ್ತೀರು. ಇವ್ರ್ತ್ರ್ನ ಒಂದೇ ಮನೇಲಿರಿಸ್ಕಂಡಿದ್ರು. ನಾನೂ ಸೇರಿ ನಮ್ಮಪ್ಪಂಗೆ ಹದ್ನಾಕ್ ಜನ ಮಕ್ಳು.ಅದ್ರಲ್ಲಿ ಆರ್ ಜನ ಗಂಡ್ಸಗಳು ನಾಕ್ ಜನ ಹೆಂಗ್ಸಗಳು ಇದ್ಮು. ಅಕ್ಕ ತಂಗೇರು ಅಕ್ಕಪಕ್ಕ ಹಳ್ಳೀಗೆ ಮದ್ವೆ ಆಗವ್ರೆ. ನಮ್ ಅಣ್ದೀರೆಲ್ಲಾ ತೀರ್ಕಂಡ್ರು, ಈಗ ತಮ್ಮಯ್ಯ ಒಬ್ಬವ್ನೆ. ನಾನುಹಾಡದ್ನ ನಮ್ ಸೋದರತ್ತೆಯಿಂದ ಕಲ್ತಿ. ಅಬಾ ಒತ್ತಾರಿಯೇ ಎದ್ದು ರಾಗಿ ಬೀಸ್ತಾ ಹಾಡಳು.

ಮನೆತುಂಬಾ ಜನ ಅಲ್ವಾ? ಹೊತ್ತು ಮುಂಚೆ ಏಳ್ಬೇಕು. ಇಬಾ ಹಾಡ್ತಿದ್ಲಲ್ಲಾ ನಾನೂವೆ ಹೋಗಿ ರಾಗಿ ಬೀಸನಿ. ಅವು ಹಾಡ್ತಿದ್ದ ಹಾಡ್ನೆಲ್ಲಾ ಕಲ್ತಂಡಿ. ನಮ್ಮತ್ತೆ ಸೋಬಾನೆ ಹಾಡದ್ರಲ್ಲಿ ಸುತ್ತಮುತ್ತ ಹಳ್ಳಿಗೆಲ್ಲಾ ಪೇಮಸ್. ನಮ್ ಕೋಟೆಲೀ ಅಬಾ ಹಾಡ್ತಾಳೆ ಅಂದ್ರೆ ಜನ ತುಂಬಾ ಸೇರರು. ಸತ್ತೋದವ್ರಟ್ಟಿಗೂ ಕತೆ ಮಾಡಾಕೆ ಹೋಗರು.

ಮೈಸೂರ್ ದಸರದಲ್ಲೂ ರಾಗಿಬೀಸ್ಕಂಡು ಹಾಡಿ ಸೈ ಅನ್ಸಕಂಡವಳು. ಮದುವೆ ಸಾಸ್ತ್ರದ ಪದವ ಚೆಂದಾಗಾಡವಳು. ಹೊಲದಲ್ಲಿ ನಾಟಿ ಹಾಕಾಗ ಐದ್ ಜನ ಸೊಲ್ಲಾಡುದ್ರೂವೆ ಇವ್ಳೊಬ್ಳೆ ಹಾಡಳು. ಅಂಥಾ ಸ್ವರ ಅವಳ್ದು. ಎಚ್.ಡಿ.ಕ್ವಾಟೆ ಸ್ಟೇಜ್ನಲ್ಲಿ ಹಾಡ್ತಾಯಿದ್ರೆ ನೂರಾರ್ ಜನ ಖುಷಿಪಟ್ಕಂಡು ಚಪ್ಪಾಳೆ ತಟ್ಟರು. ಅಂತಾ ಕಲ್ಗಾತಿ ಅಬಾ. ಈಗ ನಮ್ ಸೋದ್ರತ್ತೆ ಇಲ್ಲ, ತೀರ್ಕಂಡ್ಬುಟ್ಳು. ಇವಳು ಸತ್ಮ್ಯಾಲೆ ಇಬಾಹಾಡ್ತಾ ಇದ್ದದ್ದನ್ನೆಲ್ಲಾ ಪೂರ್ತಿ ಕಲ್ತಳ್ಳಿಲ್ವಲ್ಲಾ ಅಂತ. ನನ್ ಜೊತೆ ಸೊಲ್ಕೊಡೊ ನನ್ ವಾರ್ಗಿತ್ತಿ ಲಕ್ಷಮ್ಮನೂವೆ ಒಸಿ ಕಲ್ತಂಡ. ಇವ್ಳ ತಾತ ಅಪ್ಪಾನೂ ದೊಡ್ಡ ಕಲ್ಗಾರ್ರು.

ಇವರಪ್ಪ ವಾದ್ಯ ನುಡುಸ್ತಾಯಿದ್ರು. ಅಲ್ದೀಯೆ ಪಿಟೀಲು ಕೊಳ್ಳುಬಾರುಸ್ತಾಯಿದ್ರು. ಕಲಾವಿದರ್ ಕುಟುಂಬ್ದವಳಾಗಿದ್ರಿಂದ ನಮ್ ಸೋದರತ್ತೆ ಮತ್ತೆ ನಾನು ಹಾಡದ್ನೆಲ್ಲಾ ಬ್ಯಾಗ್ ಬ್ಯಾಗ ಕಲ್ತಂಡ್ಳು. ನಾಮು ಭೇದಭಾವ ಮಾಡಕ್ಕಿಲ್ಲ. ಯಾರೆ ಕರೆದ್ರೂವೆ ಇಬ್ರು ಜೊತೆಗೋಗಿ ಹಾಡ್ತೀಮಿ. ಮೈಸೂರ್ ಪ್ಯಾಟೆಯಲ್ದೆ ಜಾನ್ಪದ ಲೋಕ, ಚುಂಚನ್ಗಿರಿ, ಬೆಂಗ್ಳೂರು, ಆಕಾಸ್ವೇಣಿ ಇಲ್ಲೆಲ್ಲಾ ಹಾಡಿಮಿ.

ಏನೋ ನಮ್ ಜೀಮ ಇರೋವರ್ಗೂ ನಾಲ್ಗೆ ನುಡಿಯೋವರ್ಗೂ ಹಾಡ್ತಿಮಿ. ಈಗಿನ್ ಹೆಣ್ ಹೈಕ ಸೋಬಾನ್ಯಾ ಹಾಡ್ತಿದ್ರೆ ಮೊಕ ತಿರ್ಗಿಸ್ಕಂಡು ಹೊಯ್ತರೆ. ಈಗ ಹಳ್ಳಿಗಳಲ್ಲೂ ಹಾಡೋರು ಕಡ್ಮೆ ಆಯ್ತಾವ್ರೆ. ನಾಮು ಚಿಕ್ಕಂದ್ನಲ್ಲಿ ಇಂಥ ಹಾಡ್ಗಳ ಕಲಿಯಾಕೆ ಚಳಿಗಾಳಿ ಅನ್ದೀಯೆ ಹೊತ್ತಾರೆ ಎದ್ದು ಕಲೀತಿದ್ದೋ. ಈಗ ಅಂಥವರು ಯಾರಿದ್ದರು? ಸಂದ್ ಆಯ್ತು ಬೆಳ್ಗಾಯ್ತು ಅಂದ್ರೆ ಟೀಮಿ ಮುಂದೆನೇ ಕುಂತಿರ್ತರೆ.

ಹೀಗೆ ಕಳೆದ ದಿನಗಳನ್ನು ಮೆಲುಕು ಹಾಕುತ್ತಾ, ಜನಪದ ಗೀತೆಗಳ ಬಗೆಗಿನ ಕಕ್ಕುಲತೆಯನ್ನು ವ್ಯಕ್ತಪಡಿಸುತ್ತಾ ಇದ್ದ ಚಾಮಮ್ಮ ಮೂಲ ಮಟ್ಟಿನ ಜನಪದಗೀತೆಗಳನ್ನು ಹಾಡುವ ಮಧುರ ಕಂಠದ ಅಪರೂಪದ ಗಾಯಕಿ. ಸಿದ್ದಪ್ಪಾಜಿ, ಭೈರುವ, ಅಣ್ಣತಂಗಿ, ಅರ್ಜುನಜೋಗಿ, ಸೋಬಾನೆ, ಮಾದೇಶ್ವರ, ಮಾರಮ್ಮ, ದೇವರಪದ, ಸೋಲಿಗರ ಹಾಡು-ಹೀಗೆ ಹತ್ತಾರು ಗೀತೆಗಳನ್ನು ಹೊತ್ತು ಹರಿಯುವವರೆಗೂ ಹಾಡುವ ಈ ಹಿರೇನಂದಿಯ ಹಿರಿಯ ಹಾಡುಗಾರ್ತಿಯಲ್ಲಿ ಕಲಿಯುವವರಿಗೆ ಕಲಿಸುವ ಔದಾರ್ಯತೆಯಿದೆ.

ಕಲಿಯುವ ಹಂಬಲ ಇದ್ದವರು ಇವರಿಂದ ಕಲಿತು ಜನಪದಗೀತ ಪರಂಪರೆಯನ್ನು ಮುನ್ನಡೆಸಬೇಕಿದೆ.

-ಡಾ.ಮೈಸೂರು ಉಮೇಶ್

ಆಂದೋಲನ ಡೆಸ್ಕ್

Recent Posts

ಕೊಡಗಿನ ಹಲವೆಡೆ ವರ್ಷದ ಮೊದಲ ಮಳೆ

ಕೊಡಗು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರುವ ಪರಿಣಾಮ ಕೊಡಗು ಜಿಲ್ಲೆಯಾದ್ಯಂತ ಜಿಟಿ ಜಿಟಿ ಮಳೆಯಾಗುತ್ತಿದ್ದು, ಜನರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿದೆ.…

27 mins ago

ದ್ವೇಷ ಭಾಷಣ ಮಸೂದೆ: ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮಂಗಳೂರು: ದ್ವೇಷ ಭಾಷಣ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ಸು ಕಳಿಸಿಲ್ಲ, ತಿರಸ್ಕರಿಸಿಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು…

33 mins ago

ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ: ಮುಂದಿನ 24 ಗಂಟೆ ಶೀತಗಾಳಿ

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತವಾಗಿದ್ದು, ರಾಜ್ಯದಲ್ಲಿ ಮುಂದಿನ 24 ಗಂಟೆಯಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ…

1 hour ago

ಕನ್ನಡದ ಪ್ರಮುಖ ಕಾದಂಬರಿಕಾರ್ತಿ, ಪ್ರಕಾಶಕಿ ಆಶಾ ರಘು ಆತ್ಮಹತ್ಯೆ

ಬೆಂಗಳೂರು: ಪ್ರಸಿದ್ಧ ಕಾದಂಬರಿಕಾರ್ತಿ ಹಾಗೂ ಪ್ರಕಾಶಕಿಯಾಗಿದ್ದ ಆಶಾ ರಘು ಅವರು ಬೆಂಗಳೂರಿನ ಮಲ್ಲೇಶ್ವರಂನ ತಮ್ಮ ನಿವಾಸದಲ್ಲಿ ಶುಕ್ರವಾರ ರಾತ್ರಿ ನೇಣುಬಿಗಿದುಕೊಂಡು…

2 hours ago

ಫಿಟ್ ಮೈಸೂರು ಸಾಮೂಹಿಕ ನಡಿಗೆಯಲ್ಲಿ ಪಾಲ್ಗೊಂಡ ಸಹಸ್ರಾರು ಮೈಸೂರಿಗರು

ಮೈಸೂರು: ಇಂದು ಮುಂಜಾನೆ ಚಳಿ, ಮಳೆಯನ್ನು ಲೆಕ್ಕಿಸದೇ ಮೈಸೂರಿನ‌ ಸ್ವಚ್ಚತೆಗಾಗಿ ಫಿಟ್ ಮೈಸೂರು ಸಾಮೂಹಿಕ ಆರೋಗ್ಯ ಮತ್ತು ಜಾಗೃತಿ ನಡಿಗೆ…

3 hours ago

ಓದುಗರ ಪತ್ರ: ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆ ಕಡ್ಡಾಯ ವಿಷಾದಕರ

ಕೇರಳದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಭಾಷೆಯನ್ನು ಕಡ್ಡಾಯವಾಗಿ ಕಲಿಯಬೇಕು ಎಂಬ ಹಿನ್ನೆಲೆಯಲ್ಲಿ, ಮಲಯಾಳಂ ಭಾಷಾ ಮಸೂದೆ ೨೦೨೫ ಅನ್ನು…

5 hours ago