ಎಡಿಟೋರಿಯಲ್

ಗ್ಯಾರಂಟಿ ಯೋಜನೆ ಗಟ್ಟಿ; ಶಾಸಕರಿಗಿಲ್ಲ ಅನುದಾನ ಗ್ಯಾರಂಟಿ

ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಕೊಂಬೆಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕಿದೆ

ಕಳೆದ ವಾರ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ತಮ್ಮ ರಾಜ್ಯದ ಜನರಿಗೆ ಒಂದು ಕರೆ ನೀಡಿದರು. ಉಚಿತ ವಿದ್ಯುತ್ ಯೋಜನೆಯಡಿ ನೋಂದಾವಣೆ ಯಾಗಿರುವ ನನ್ನ ಹೆಸರನ್ನು ನಾನು ತೆಗೆಸುತ್ತಿದ್ದೇನೆ. ವಿದ್ಯುತ್ ಶುಲ್ಕ ಪಾವತಿಸುವ ಶಕ್ತಿ ಇದ್ದವರೂ ನಿಮಗೆ ಕೊಟ್ಟ ಸಬ್ಸಿಡಿಯನ್ನು ವಾಪಸ್ ಮಾಡಿ ಎಂದವರು ಕರೆ ನೀಡಿದಾಗ ಹಿಮಾಚಲಪ್ರದೇಶ ಮಾತ್ರವಲ್ಲ, ಇಡೀ ದೇಶವೇ ನಿಬ್ಬೆರಗಾಯಿತು.

ಅಂದ ಹಾಗೆ ವಿಧಾನಸಭಾ ಚುನಾವಣೆಗಳ ಮುನ್ನ ಜನರಿಗೆ ನೀಡಿದ ಗ್ಯಾರಂಟಿ ಯೋಜನೆಗಳ ಆಶ್ವಾಸನೆಯನ್ನು ಜಾರಿಗೆ ತಂದ ರಾಜ್ಯಗಳಲ್ಲಿ ಹಿಮಾಚಲ ಪ್ರದೇಶವೂ ಒಂದು. ಇವತ್ತು ಉಚಿತ ವಿದ್ಯುತ್ ಬಾಬತ್ತೊಂದರಲ್ಲಿಯೇ ಅದು ಎರಡು ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸುತ್ತಿದೆ. ಅಂದ ಹಾಗೆ ಹಿಮಾಚಲ ಪ್ರದೇಶ ತುಂಬ ದೊಡ್ಡ ರಾಜ್ಯವೇನಲ್ಲ. ಪ್ರವಾಸೋದ್ಯಮದಂತಹ ವಿಷಯಗಳೇ ಅದರ ಆರ್ಥಿಕ ಮೂಲ. ಇಂತಹ ಮೂಲಕ್ಕೆ ಕೇಂದ್ರ ಸರ್ಕಾರ ಕೈ ಜೋಡಿಸಿದರೆ ಹಿಮಾಚಲಪ್ರದೇಶದ ಅರ್ಥ ವ್ಯವಸ್ಥೆ ತೂಗುತ್ತದೆ. ಆದರೆ ಇವತ್ತು ಪರಿಸ್ಥಿತಿ ಹೇಗಾಗಿದೆಯೆಂದರೆ ಕೇಂದ್ರ ಸರ್ಕಾರದಿಂದ ಬರುತ್ತಿದ್ದ ಅನುದಾನದ ಪ್ರಮಾಣ ಹಿಮಾಚಲ ಪ್ರದೇಶದ ನಿರೀಕ್ಷೆಗೆ ತಕ್ಕಷ್ಟಿಲ್ಲ. ಹೀಗಾಗಿ ಅದು ಪರಿಸ್ಥಿತಿಯನ್ನು ತೂಗಿಸಲು ಸರ್ಕಾರಿ ಕಟ್ಟಡಗಳು ಸೇರಿದಂತೆ ತನ್ನ ಹಲವು ಆಸ್ತಿಪಾಸ್ತಿಗಳನ್ನು ಅದಾಗಲೇ ಮಾರಾಟ ಮಾಡಿದೆ. ಆದರೆ ಸರ್ಕಾರಿ ಆಸ್ತಿಯನ್ನು ಮಾರಾಟ ಮಾಡಿ ಎಷ್ಟು ದಿನ ಪರಿಸ್ಥಿತಿಯನ್ನು ತೂಗಿಸಲು ಸಾಧ್ಯ? ಹೀಗಾಗಿ ಹಿಮಾಚಲ ಪ್ರದೇಶದಲ್ಲಿ ಹಲವು ಯೋಜನೆಗಳನ್ನು ಒಂದರ ಹಿಂದೊಂದರಂತೆ ಕಡಿತ ಮಾಡುತ್ತಾ ಬರಲಾಗುತ್ತಿದೆ.

ಮೂಲಗಳ ಪ್ರಕಾರ, ಈಗಿನ ಗ್ಯಾರಂಟಿ ಯೋಜನೆಗಳು ಇದೇ ರೀತಿ ಮುಂದುವರಿದರೆ ಹಿಮಾಚಲ ಪ್ರದೇಶದ ಆಡಳಿತ ನಡೆಸುವುದು ದುಸ್ಸಾಧ್ಯದ ಕೆಲಸವಾಗಲಿದೆ. ಹಾಗಂತ ದೇಶದ ಆರ್ಥಿಕ ತಜ್ಞರು ಒಂದರ ಹಿಂದೊಂದರಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಹಿಮಾಚಲ ಪ್ರದೇಶದ ಸದ್ಯದ ಪರಿಸ್ಥಿತಿಯನ್ನು ಈಗೇಕೆ ಗಮನಿಸಬೇಕು ಎಂದರೆ ಕರ್ನಾಟಕದಲ್ಲಿ ಕೂಡ ಜನರಿಗೆ ಐದು ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನೀಡಿದೆ. ಈ ಬಾಬತ್ತೊಂದರಲ್ಲಿಯೇ ಅದು ವಾರ್ಷಿಕ ಐವತ್ತೆರಡು ಸಾವಿರ ಕೋಟಿ ರೂಪಾಯಿಗಳನ್ನು ನೀಡಬೇಕು ಎಂಬುದು ರಹಸ್ಯವೇನಲ್ಲ. ಅಂದ ಹಾಗೆ ದಿನ ಕಳೆದಂತೆ ಪರಿಸ್ಥಿತಿ ಹೇಗಾಗುತ್ತಿದೆ ಎಂದರೆ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವ ಸಲುವಾಗಿ ಅಭಿವೃದ್ಧಿ ಯೋಜನೆಗಳಿಗೆ ಕಡಿವಾಣ ಹಾಕುವ ಪರಿಸ್ಥಿತಿ ಇದೆ.

ಅಂದ ಹಾಗೆ ಸಾಮಾಜಿಕ ನ್ಯಾಯದ ಪರಿಕಲ್ಪನೆ ಇರುವ ಸರ್ಕಾರ ಬಡ, ಮಧ್ಯಮ ವರ್ಗದ ಜನರಿಗೆ ಒಂದು ಮಟ್ಟದ ನೆರವು ನೀಡುವುದು ಸರಿಯೇ. ಹೀಗಾಗಿ ಇವತ್ತು ಕರ್ನಾಟಕದಲ್ಲಿ ಜಾರಿಗೆ ತಂದ ಯೋಜನೆಗಳ ಪೈಕಿ ಹಲವು ಯೋಜನೆಗಳು ಬಡ, ಮಧ್ಯಮ ವರ್ಗದವರಿಗೆ ಅನುಕೂಲವಾಗಿರುವುದೂ ನಿಜವೆ. ಆದರೆ ಐದೂ ಗ್ಯಾರಂಟಿ ಯೋಜನೆಗಳಿಗೆ ಹಣ ಒದಗಿಸುತ್ತಿರುವ ಕಾರಣಕ್ಕಾಗಿ ಮೊದಲ ಹೊಡೆತ ತಿಂದವರು ಶಾಸಕರು. ಈ ಬಾರಿ ಆಯ್ಕೆಯಾಗಿ ಬಂದ ಬಹುತೇಕ ಶಾಸಕರಿಗೆ ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗಾಗಿ ನಿರೀಕ್ಷಿತ ಅನುದಾನ ಸಿಗುತ್ತಿಲ್ಲ. ಇವತ್ತು ಸರ್ಕಾರ ಬಲಿಷ್ಠವಾಗಿದ್ದರೂ ಪದೇ ಪದೇ ಇದು ಅಲುಗಾಡುತ್ತಿದೆ ಎಂಬಂತಹ ಮಾತುಗಳು ಏಕೆ ಕೇಳಿ ಬರುತ್ತಿವೆಯೆಂದರೆ ಶಾಸಕರಿಗಾಗಿರುವ ಈ ಕೊರತೆಯ ಕಾರಣಕ್ಕಾಗಿ. ಕಳೆದ ಎರಡು ಬಜೆಟ್ ಗಳಲ್ಲೂ ತಮಗೆ ಬೇಕಾದಷ್ಟು ನೆರವು ಸಿಕ್ಕಿಲ್ಲ ಎಂಬ ಅಸಮಾಧಾನ ಶಾಸಕರಿಗಿದ್ದೇ ಇದೆ.

ಹೀಗಾಗಿ ಇಂತಹ ಅಸಮಾಧಾನಿತ ಶಾಸಕರ ಪೈಕಿ ಹಲವರು ಗೋವಾದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಮತ್ತು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಸತತ ಸಂಪರ್ಕದಲ್ಲಿದ್ದಾರೆ ಎಂಬ ಮಾತು ತೇಲಿ ಬರುತ್ತಲೇ ಇದೆ. ಇಂತಹ ಮಾತುಗಳ ಶಕ್ತಿ ಕ್ಷೀಣಿಸಬೇಕು ಎಂದರೆ ಈ ಬಾರಿ ೨೦೨೫-೨೬ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸುತ್ತಿರುವ ಸಿದ್ದರಾಮಯ್ಯ ಸ್ವಪಕ್ಷದ ಶಾಸಕರಿಗೆ ದೊಡ್ಡ ಮಟ್ಟದ ಅನುದಾನ ನೀಡಲೇಬೇಕು.

ಒಂದು ವೇಳೆ ಈ ರೀತಿ ಅನುದಾನ ನೀಡದೇ ಇದ್ದರೆ ಯಥಾ ಪ್ರಕಾರ, ರಾಜ್ಯ ಕಾಂಗ್ರೆಸ್‌ನ ಹಲವು ಶಾಸಕರು ಬೇರೆ ಕಡೆ ವಲಸೆ ಹೋಗಲು ಸಿದ್ಧರಿದ್ದಾರೆ ಎಂಬ ಮಾತುಗಳು ತೇಲಿ ಬರುತ್ತವೆ. ಮೂಲಗಳ ಪ್ರಕಾರ, ಈ ಬಾರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ ಬಜೆಟ್‌ನ ಗಾತ್ರ ನಾಲ್ಕು ಲಕ್ಷ ಕೋಟಿ ರೂಪಾಯಿಗಳನ್ನು ಮೀರಲಿದೆ. ಹೀಗೆ ನಾಲ್ಕು ಲಕ್ಷ ಕೋಟಿ ರೂ. ಗಳನ್ನು ಮೀರಲಿರುವ ಬಜೆಟ್‌ನಿಂದ ಶಾಸಕರು ಒಂದು ಮಟ್ಟದ ಶಕ್ತಿ ಬಯಸುತ್ತಿರುವುದು ನಿಜ. ಆದರೆ ಆತಂಕದ ಸಂಗತಿ ಎಂದರೆ ಬಜೆಟ್ ನಾಲ್ಕು ಲಕ್ಷ ಕೋಟಿ ರೂಪಾಯಿಗಳದಾದರೂ ಸರ್ಕಾರದ ಬದ್ಧತಾ ವೆಚ್ಚದ ಪ್ರಮಾಣ ಹೆಚ್ಚಾಗುವುದರಿಂದ ಅಭಿವೃದ್ಧಿಗೆ ಹಣ ಸಿಗುವುದು ಕಡಿಮೆ.

ಹೀಗೆ ಕಡಿಮೆ ಹಣ ನೀಡಿದರೂ ಶಾಸಕರ ನಿಽಯ ವಿಷಯದಲ್ಲಿ ಸಿದ್ದರಾಮಯ್ಯ ಅವರು ಮೈ ಮರೆಯುವಂತಿಲ್ಲ. ಹೀಗಾಗಿ ಸರ್ಕಾರಕ್ಕಿರುವ ವಸ್ತುಸ್ಥಿತಿ ಮತ್ತು ಸಿದ್ದರಾಮಯ್ಯ ಅವರ ಮುಂದಿರುವ ಅನಿವಾರ್ಯತೆಗಳ ಮಧ್ಯೆ ಸಂಘರ್ಷ ಏರ್ಪಟ್ಟರೂ ಆಶ್ಚರ್ಯವಿಲ್ಲ. ಇದೇ ಕಾರಣಕ್ಕಾಗಿ ಸಿದ್ದರಾಮಯ್ಯ ಸಂಪುಟದ ಹಲವು ಸಚಿವರು: ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಿಸುವುದರ ಪರವಾಗಿದ್ದಾರೆ.

ಇವತ್ತು ಗೃಹ ಸಚಿವರಾಗಿರುವ ಡಾ. ಜಿ. ಪರಮೇಶ್ವರ್ ಅವರು ಕೆಲ ಕಾಲದ ಹಿಂದೆ ಸಚಿವ ಸಂಪುಟದಲ್ಲಿ ಒಂದು ಸಲಹೆಯನ್ನು ಇಟ್ಟಿದ್ದರು. ಅವರ ಪ್ರಕಾರ, ಈಗ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳು ಸಾರ್ವತ್ರಿಕವಾಗಿ ಎಲ್ಲರಿಗೂ ಸಿಗದಂತಿರಲಿ. ಮತ್ತದರ ಪರಿಣಾಮವಾಗಿ ಇವತ್ತು ಗ್ಯಾರಂಟಿ ಯೋಜನೆಗಳಿಗೆ ನಾವು ಖರ್ಚು ಮಾಡುತ್ತಿರುವ ಹಣದ ಪೈಕಿ ಅರ್ಧದಷ್ಟು ಹಣ ಉಳಿಯುತ್ತದೆ. ಅರ್ಥಾತ್, ಸುಮಾರು ೨೫ ಸಾವಿರ ಕೋಟಿ ರೂಪಾಯಿ ಉಳಿಯುತ್ತದೆ. ಹೀಗೆ ಗ್ಯಾರಂಟಿ ಯೋಜನೆಗಳಿಗೆ ವೆಚ್ಚ ಮಾಡುತ್ತಿರುವ ಹಣದ ಪೈಕಿ ಅರ್ಧದಷ್ಟನ್ನು ಉಳಿಸಿದರೆ ಶಾಸಕರಿಗೆ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ನಿಧಿ ನೀಡಬಹುದು. ನಿಧಿ ಸಿಕ್ಕರೆ ಕಾಂಗ್ರೆಸ್ ಪಕ್ಷದ ಶಾಸಕರೂ ಬಿಜೆಪಿ ಕಡೆ ವಲಸೆ ಹೋಗುವ ಸಾಧ್ಯತೆ ಕಡಿಮೆ ಎಂಬುದು ಇದರರ್ಥ. ಆದರೆ ವಿಷಾದದ ಸಂಗತಿ ಎಂದರೆ ಒಂದು ಸಲ ಗ್ಯಾರಂಟಿ ಯೋಜನೆಗಳ ಲಾಭ ಪಡೆದವರು ಅದರ ಮರುಪರಿಷ್ಕರಣೆಯನ್ನು ಒಪ್ಪುವುದಿಲ್ಲ. ಇದರ ಲಾಭ ಅರ್ಹರಿಗೆ ಮಾತ್ರ ದಕ್ಕಲಿ, ಶಕ್ತಿ ಇದ್ದವರು ಗ್ಯಾರಂಟಿ ಯೋಜನೆಗಳಿಂದ ವಿಮುಖರಾಗಲಿ ಎಂದರೆ ಅದಕ್ಕೆ ಧ್ವನಿಗೂಡಿಸುವವರಿಗಿಂತ ಅಪಸ್ವರ ಎತ್ತುವವರೇ ಹೆಚ್ಚು. ಪರಿಣಾಮ ರಾಜ್ಯ ಸರ್ಕಾರವೂ ಹಲವು ಅಡ್ಡಿ-ಆತಂಕಗಳನ್ನು ಎದುರಿಸುತ್ತಲೇ ಇದೆ. ಆದರೆ ಇಂತಹ ಅಡ್ಡಿ-ಆತಂಕಗಳನ್ನು ಅದು ಎಲ್ಲಿ ಯವರೆಗೆ ಭರಿಸಬಹುದು? ಹೀಗಾಗಿ ಮೊನ್ನೆ ಬಸ್ ಪ್ರಯಾಣ ದರವನ್ನು ಶೇಕಡಾ ಹದಿನೈದರಷ್ಟು ಹೆಚ್ಚಿಸಿದೆ. ಇಷ್ಟೇ ಅಲ್ಲ, ಸದ್ಯದಲ್ಲೇ ನೀರು, ಹಾಲು ಸೇರಿದಂತೆ ವಿವಿಧ ಜೀವನಾವಶ್ಯಕ ವಸ್ತುಗಳ ಬೆಲೆಗಳೂ ಹೆಚ್ಚಲಿವೆ.

ಗ್ಯಾರಂಟಿ ಯೋಜನೆಗಳು ಅರ್ಹರಿಗೆ ಮಾತ್ರ ಎಂದಾಗಿದ್ದರೆ ಪರಿಸ್ಥಿತಿ ಈ ಮಟ್ಟಕ್ಕೆ ಬರುತ್ತಿರಲಿಲ್ಲ. ಹೀಗಾಗಿ ಈ ವಿಷಯವನ್ನು ಸರ್ಕಾರ ಮಾತ್ರವಲ್ಲ, ಬದಲಿಗೆ ಒಂದು ವ್ಯವಸ್ಥೆಯೇ ತನ್ನ ಮುಂದಿಟ್ಟುಕೊಂಡು ಚರ್ಚಿಸುವ ಕೆಲಸವಾಗಬೇಕು. ಆ ಮೂಲಕ ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿಯ ಕೊಂಬೆಗಳಿಗೆ ಶಕ್ತಿ ತುಂಬುವ ಕೆಲಸವಾಗಬೇಕು. ಇಲ್ಲದಿದ್ದರೆ ಇವತ್ತು ದೇಶದ ಪ್ರಬಲ ಅರ್ಥವ್ಯವಸ್ಥೆಗಳಲ್ಲಿ ಒಂದಾಗಿರುವ ಕರ್ನಾಟಕ ಮುಂದಿನ ವರ್ಷಗಳಲ್ಲಿ ಆತಂಕದ ಕಂದರಕ್ಕೆ ಬೀಳುವುದು ನಿಶ್ಚಿತ.

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಜನವರಿ.17ರಂದು ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಜನವರಿ.17ರಂದು ಬಳ್ಳಾರಿಯಲ್ಲಿ ಬೃಹತ್‌ ಸಮಾವೇಶ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಈ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ…

2 mins ago

ಅರಣ್ಯ ವಾಸಿಗಳ ಕಿರು ಉತ್ಪನ್ನ ಉದ್ಯಮಕ್ಕೆ ಉತ್ತೇಜನ: ಜಿಲ್ಲಾಧಿಕಾರಿ ಡಾ.ಕುಮಾರ

ಮಂಡ್ಯ: ಅರಣ್ಯ ವಾಸಿಗಳ ಕಿರು ಉತ್ಪನ್ನ ಉದ್ಯಮಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು. ಮಂಡ್ಯ ಜಿಲ್ಲಾಧಿಕಾರಿ ಕಚೇರಿ…

12 mins ago

ಲಾಲ್‌ಬಾಗ್‌ನಲ್ಲಿ ನಾಳೆಯಿಂದ ಫ್ಲವರ್‌ ಶೋ: ಇದು ಈ ಬಾರಿಯ ವೈಶಿಷ್ಟ್ಯತೆ

ಬೆಂಗಳೂರು: ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಬದುಕು-ಬರಹ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಫುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ನಾಳೆಯಿಂದ ಜನವರಿ.26ರವರೆಗೆ ನಡೆಯಲಿದೆ. ತೋಟಗಾರಿಕೆ ಇಲಾಖೆ…

24 mins ago

ಮಂಡ್ಯ| ಗಾಂಜಾ ಮಾರಾಟ ಮಾಡಿ ಸಿಕ್ಕಿಬಿದ್ದವನಿಗೆ 6 ತಿಂಗಳು ಜೈಲು

ಮಂಡ್ಯ: ಗಾಂಜಾ ಮಾರಾಟ ಮಾಡುವ ವೇಳೆ ಸಿಕ್ಕಿಬಿದ್ದ ಆರೋಪಿಗೆ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಮಹಮ್ಮದ್‌ ಅಕೀಲ್‌…

29 mins ago

ಬಾಂಗ್ಲಾದಲ್ಲಿ ಮುಂದುವರಿದ ಹಿಂದೂಗಳ ನರಮೇಧ: ಆಟೋ ಚಾಲಕನ ಹತ್ಯೆ

ಬಾಂಗ್ಲಾದೇಶ: ಇಲ್ಲಿನ ಚಿತ್ತಗಾಂಗ್‌ನ ದಗನ್‌ಭುಯಾನ್‌ನಲ್ಲಿ ದಾಳಿಕೋರರ ಗುಂಪೊಂದು ಮತ್ತೊಬ್ಬ ಹಿಂದೂ ವ್ಯಕ್ತಿಯನ್ನು ಥಳಿಸಿ ಕೊಂದು ಹಾಕಿದೆ. ಮೃತನನ್ನು 28 ವರ್ಷದ…

31 mins ago

ಮಳವಳ್ಳಿ| ಕಲ್ಕುಣಿ ಗ್ರಾಮದಲ್ಲಿ 9 ದಿನಗಳ ಕಾಲ ಜಾತ್ರಾ ಮಹೋತ್ಸವ

ಮಳವಳ್ಳಿ: ತಾಲ್ಲೂಕಿನ ಕಲ್ಕುಣಿ ಗ್ರಾಮದಲ್ಲಿ ಜನವರಿ.15ರಿಂದ 23ರವರೆಗೆ 9 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯಲಿದೆ. ಗ್ರಾಮದ ಪ್ರಸಿದ್ಧ ಶ್ರೀ…

58 mins ago