ಡಾ.ಮೈಸೂರು ಉಮೇಶ್
‘ನಮ್ಮೂರಲ್ಲಿ ನನಗಿಂತ ಚೆನ್ನಾಗಿ ಹಾಡೋರು ಅವ್ರೆ’ ಅಂಥ ಮಾತು ಪ್ರಾರಂಭಿಸಿದ ಗಿರಿಜಮ್ಮ ಅವರ ಹುಟ್ಟೂರು ತಲಕಾಡಿನ ಹೆಮ್ಮಿಗೆ ಗ್ರಾಮ. ಮದುವೆಯಾಗಿದ್ದು ಬನ್ನೂರಿನ ಬೆನಕನಹಳ್ಳಿಗೆ. ನನ್ನಂಥ ಗಾಯಕಿ ಅಥವಾ ಗಾಯಕ ಯಾರೂ ಇಲ್ಲವೆಂದು ಹೇಳಿಕೊಂಡು ವೇದಿಕೆಗಳನ್ನು ಕಬಳಿಸಿಕೊಳ್ಳುತ್ತಿರುವ ಕಾಲಮಾನದಲ್ಲಿ ಗಿರಿಜಮ್ಮ ನನಗಿಂತಲೂ ಚೆನ್ನಾಗಿ ಹಾಡೋರು ಇದ್ದಾರೆ ಎಂದು ಔದಾರ್ಯಭಾವ ಮೆರೆಯುವ ಹಾಡುಗಾರ್ತಿ. ‘ಬುದ್ಧಿ, ನಂಗೇನೂ ಗೊತ್ತಿಲ್ಲ’ ಎನ್ನುತ್ತಲೇ ಬಾಲ್ಯದ ದಿನಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಸೋಬಾನೆ ಪದಗಳನ್ನು ಸುಶ್ರಾವ್ಯವಾಗಿ ಹಾಡುವ ಇವರು, ಹೊಟ್ಟೆ ಬಟ್ಟೆಗೆ ನೇರ್ಪಿದ್ದ ಕುಟುಂಬದಲ್ಲಿ ಬೆಳೆದವರು. ಎಳೆಯತನದಲ್ಲೇ ಹಳ್ಳಿ ಮದುವೆಗಳಲ್ಲಿ ಹಾಡುತ್ತಿದ್ದ ಸೋಬಾನೆಪದಗಳಲ್ಲದೆ ದೇವರಪದ, ಜೋಗುಳಪದ, ನಾಟಿಪದ, ಬೀಸೋಪದಗಳಿಗೆ ಕಿವಿಗೊಟ್ಟು ತಮ್ಮ ಮನದಾಳಕ್ಕೆ ಇಳಿಸಿಕೊಂಡರು. ಹೊತ್ತಾರೆ ಎದ್ದು ಭೂಮ್ತಾಯಿಗೆ ಸಣ್ಣು ಮಾಡಿ ರಾಗಿ ಕಲ್ಲು ಹಿಡಿದು ರಾಗಿ ಬೀಸುತ್ತಾ ಹಾಡುತ್ತಿದ್ದ ಇವರ ತಾಯಿಯೇ ಇವರ ಮೊದಲ ಗುರು. ಎಪ್ಪತ್ತರ ಸಮೀಪದಲ್ಲಿರುವ ಈ ಗಾಯಕಿಯ ಮುಗ್ಧತೆ, ನಿಷ್ಕಪಟ ಭಾವ, ನಿಷ್ಕಲ್ಮಷ ನಗು ಎಂಥವರನ್ನೂ ಆಕರ್ಷಿಸುತ್ತದೆ. ಸಂಕೋಚ ಸ್ವಭಾವದ ಗಿರಿಜಮ್ಮ ತಮ್ಮ ಬದುಕಿನ ಅನುಭವದ ಜೊತೆಗೆ ಗಾಯನಾನುಭವವನ್ನು ಹಿಂಜರಿಕೆಯಿಂದಲೇ ಹಂಚಿಕೊಂಡರು.
‘ನಮ್ಮಪ್ಪನ ಮನೆಯವ್ರು ಸ್ವಲ್ಪ ಅನುಕೂಲಸ್ಥರು. ಗದ್ದೆ ಹೊಲ ಎಲ್ಲಾ ಇತ್ತು. ಅಣ್ಣ ತಮ್ಮಂದಿರು ಇದ್ರು. ಅವ್ವ ಸುಲಭದವಳು. ಮನೆ ಕೆಲ್ಸ ಮಾಡಾಕೆ ಆಯ್ತಿರ್ನಿಲ್ಲ. ಮನೇಲಿ ರೇಷ್ಮೆ ಹುಳ ಸಾಕಿದ್ರು. ಅದಕ್ಕೆ ಒಸಿ ಸೊಪ್ಪಾಕಿ. ಅವ್ವ ರಾಗಿ ಬೀಸ್ತಿದ್ರೆ ಅವುಳ್ಗೂ ಕೈಜೋಡ್ಸಿ ಆಮ್ಯಾಕೆ ಇಸ್ಕೂಲ್ಗೆ ಹೊಯ್ತಿದ್ದಿ. ನನ್ ಜೊತೆ ಓದ್ತಾ ಇದ್ದೋಳೊಬ್ಳಿಗೆ ಟಿ.ನರಸೀಪುರಕ್ಕೆ ಮದುವೆ ಆಗೋಯ್ತು. ಒಬ್ಳು ಪೇಲ್ ಆಗೋದ್ಲು. ನನ್ಗೂವೆ ಇಸ್ಕೂಲ್ಗೆ ಓಗಾಕೆ ಮನ್ಸಾಗ್ನಿಲ್ಲ.
ನಾನೂವೆ ಎಂಟ್ನೇ ಕ್ಲಾಸ್ವರ್ಗೂ ಓದ್ದಿ. ನನ್ಗೆ ಆವಾಗ ಅದ್ನಾಕ್ ವರ್ಸ. ಹುಡ್ಗಿ ಚೆಂದಾಗವ್ಳೆ ಅಂದ್ಬುಟ್ಟು ಬೆನಕನಹಳ್ಳಿಯೋರು ಮದುವೆ ಮಾಡ್ಕೊಡಿ ಅಂತ ಕೇಳುದ್ರು. ಅವ್ತ್ಯ್ರು ಬಡಸ್ತನದವ್ತ್ಯ್ರು. ಹುಲ್ಲು ಮನೆ. ನಮ್ಮಪ್ಪಂಗೆ ಓದುಸ್ಬೇಕು ಅಂತ ಆಸೆ. ಅಣ್ದಿರು ಬಡವರು ಆದ್ರೆ ಏನಾ ಒಳ್ಳೆ ಜನ ಲಗ್ನ ಮಾಡ್ಬುಡಿ ಅಂತ ನಮ್ಮಪ್ಪಂಗೆ ಒಪ್ಪುಸ್ಬುಟ್ರು. ಲಗ್ನ ಪಗ್ನ ನಂಗೆ ಗೊತ್ತಿಲ್ಲ. ಆಟಾ ಆಡ್ಕಂಡಿದ್ದಿ. ಹೆಣ್ಣೋಡಕೆ ಅಂತ ಒಂಜಿನ ಮದುವೆ ಆಗೋನ್ನು ಕರ್ಕಂಡು ನಮ್ಮಟ್ಟಿಗೆ ಬಂದ್ರು. ಕೂಸು ಸರ್ಬತ್ತಾ ಮಾಡ್ಕಂಡು ಬಾ ಅಂತ ನಮ್ಮಪ್ಪ ಹೇಳುದ್ರು. ನಂಗೆ ಸೀರೆ ಪಾರೆ ಗೊತ್ತಿರ್ನಿಲ್ಲ. ಲಂಗ ಹಾಕ್ಕಂಡು ಸರ್ಬತ್ತ ತಂದು ಕುಂತಿರೋರ್ ಮುಂದೆ ಇಟ್ಬುಟ್ಟು ಕ್ವಾಣೆಗೆ ಓಡ್ಬುಟ್ಟಿ.
ಇದಾದ್ ಸ್ವಲ್ಪ ಜಿನಕ್ಕಿಯೇ ಮದುವೆ ಮಾಡ್ಬುಟ್ರು. ಗಂಡನ್ ಮನೆ ಹುಲ್ಲುನ್ ಮನೆ ಅಂದ್ನಲ್ಲ. ಹಟ್ಟಿ ತುಂಬಾ ಜನ. ಮೈದುನ್ರು ನಾದ್ನಿರೆಲ್ಲರೂ ಇದ್ರು. ಹಾಲು ಅನ್ನ ತಿಂದು ಬೆಳ್ದಿರೋ ಕಂದ ಅಂದ್ಕಂಡು ಅತ್ತೆ ಮಾವ ನನ್ನ ಸೆಂದಾಗಿ ನೋಡ್ಕಂಡ್ರು. ಬಡಸ್ತನದ ಕಸ್ಟ ನಸ್ಟನೆಲ್ಲ ಈಸ್ದಿ. ಮೈದುನ್ರಿಗೆ ನಾದ್ನಿರ್ಗೆಲ್ಲ ಮದುವೆ ಮುಂಜಿ ಮಾಡ್ದಿ. ನಂಗೂವೆ ಭಗವಂತ ಒಂದ್ ಗಂಡು, ಒಂದ್ ಹೆಣ್ ಮಗೀನ ಕೊಟ್ಟ.
ಅವರ್ಗೂವೆ ಮದುವೆ ಮಾಡ್ದಿ. ಮೊಮ್ಮಕ್ಕಳವೆ. ಮದುವೆ ಮನೆಗೆ ಈಗ್ಲೂವೆ ಹಾಡಾಕೆ ಹೊಯ್ತಿನಿ. ಮೊದ್ ಮೊದ್ಲು ನಮ್ ಯಜಮಾನ್ರು ಹಾಡಕೆ ಕಳುಗುಸಾ ಇರ್ನಿಲ್ಲ. ನಿನ್ ಹೆಂಡ್ತಿ ಸರ ಚೆಂದಾಗದೆ ಯಾಕ್ ಹಾಡ್ಬೇಡ ಅಂದಯಿ ಅಂದ್ಕಂಡು ಊರೋರೆಲ್ಲ ಹೇಳಿದ್ ಮ್ಯಾಕೆ ಅವ್ರು ಬ್ಯಾರೆ ಕಡೆ ಹಾಡಕೋಗಕೆ ಒಪ್ಕಂಡ್ರು’ ಹೀಗೆ ಮನದೆರೆದು ತನ್ನ ಬದುಕಿನ ವೃತ್ತಾಂತವನ್ನೆಲ್ಲಾ ಸವಿವರವಾಗಿ ಮಾತನಾಡುತ್ತಲೇ, ‘ಬುದ್ಧಿ, ನನ್ ಸಂಗಡಗಾರ್ತಿರ ಜೊತೆ ಒಂದು ಪದ ಹಾಡ್ಲ್ಯಾ’ ಎಂದು ಹೇಳುತ್ತಾ ಮುಡುಕುತೊರೆ ಮಲ್ಲಯ್ಯನ ಕುರಿತು ಹಾಡಲು ಶುರುಮಾಡಿದರು.
ಅಂಬಿಗರ ಮಗಳಾದ ಗಂಗೆಯ ರೂಪ ಲಾವಣ್ಯಕ್ಕೆ ಮನಸೋತ ಶಿವ ಉರುಫ್ ಮಲ್ಲಯ್ಯ ಕೈಲಾಸವಾಸಿ ಪರಮಾತ್ಮನಾದರೂ ಲೌಕಿಕತೆಯ ಪರದಾಟದಿಂದ ಮುಕ್ತನಲ್ಲ ಎಂಬುದನ್ನು ಜನಪದ ಕಥಾನಕಗಳು ಸ್ಪಷ್ಟೀಕರಿಸುತ್ತವೆ. ಜಾತಿ ಶ್ರೇಣೀಕರಣದ ಸ್ಥಾಪಿತ ಮೌಲ್ಯಗಳನ್ನು ಮೀರುವ, ಭಂಜನಗೊಳಿಸುವ ಕ್ರಾಂತಿಕಾರಿ ಮತ್ತು ವೈಚಾರಿಕ ನಿಲುವುಗಳು ಇಂಥ ಪ್ರಸಂಗಗಳಿಂದ ಗೋಚರಿಸುತ್ತವೆ. ಸವತಿ ಮತ್ಸರದ ಸನ್ನಿವೇಶಗಳನ್ನು ಕಲಾತ್ಮಕತೆಯ ಮೂಲಕ ಸಾದರಪಡಿಸುತ್ತಲೇ ಸಂಬಂಧಗಳ ಸಾಂದ್ರಭಾವವನ್ನು ಸ್ಥಿರೀಕರಿಸುವ ಪ್ರಯತ್ನವನ್ನು ಜನಪದ ಕಾವ್ಯಗಳಲ್ಲಿ ಕಾಣಬಹುದು.
ಮೂಲಮಟ್ಟುಗಳನ್ನು ಬಿಟ್ಟುಕೊಡದ ಗಿರಿಜಮ್ಮ ಮಧುವಾಗಿ ಹಾಡಬಲ್ಲ ನೆಲದ ಇನಿದನಿ ಗಾಯಕಿ. ಬಿಡಿಗೀತೆಗಳಲ್ಲದೆ ಹತ್ತಾರು ಕಥನ ಗೀತೆಗಳನ್ನು ಹಾಡಬಲ್ಲವರಾಗಿದ್ದಾರೆ. ಯುವ ಸಮುದಾಯ ಇಂಥ ಗೀತೆಗಳನ್ನು ಕಲಿಯಬೇಕೆಂಬ ಹಂಬಲ ಇವರಿಗಿದೆ.
ಎಲ್ಲರೂ ಮೊಬೈಲು ಟಿವಿಗೆ ಅಂಟಿಕೊಂಡು ಬಿಟ್ಟಿದ್ದಾರಲ್ಲ ಎನ್ನುವ ವಿಷಾದವೂ ಇದೆ. ಸಾಂಸ್ಕೃತಿಕ ಆಕ್ರಮಣ ಕಾಲಘಟ್ಟದಲ್ಲೂ ಬದುಕಿನ ಬವಣೆಗಳನ್ನು ದಾಟಿ ಇನಿಸೊಲ್ಲುಗಳನ್ನು ಮುಂದಿನ ತಲೆಮಾರಿಗೆ ದಾಟಿಸುವ ವಾಂಛಲ್ಯವನ್ನಿಟ್ಟುಕೊಂಡಿರುವ ಗಿರಿಜಮ್ಮ ನಮ್ಮ ನಡುವಿನ ಅಪರೂಪದ ಜನಪದ ಪ್ರತಿಭೆ.
ಮೈಸೂರು : ಯುವ ಸಮುದಾಯಕ್ಕೆ ಹಾಗೂ ತಾಂತ್ರಿಕ ಕ್ಷೇತ್ರಕ್ಕೆ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡುವ ಮೂಲಕ ವಿಕಸಿತ…
ಮೈಸೂರು : ನಗರದ ಕೆಮಿಕಲ್ ಫ್ಯಾಕ್ಟರಿಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎನ್ನಲಾದ ವಸ್ತುಗಳಿಗೆ ಸಂಬಂಸಿದಂತೆ ಎನ್‌ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರವೇ ಬೇರೆ.…
ಹೊಸದಿಲ್ಲಿ: ಕಳೆದ 12 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಶಿಸ್ತುಬದ್ಧ ಆರ್ಥಿಕ ನಿರ್ವಹಣೆ ನಡೆಯುತ್ತಿರುವುದರಿಂದ ಭಾರತದ ಜಿಡಿಪಿ ದರ…
ಹೊಸದಿಲ್ಲಿ : ಕೇಂದ್ರ ಸರ್ಕಾರ 2026-27 ನೇ ಸಾಲಿಗೆ 17.2 ಲಕ್ಷ ಕೋಟಿ ರೂ. ಸಾಲ ಪಡೆಯಲಿದೆ ಎಂದು ಹಣಕಾಸು…
ಹೊಸದಿಲ್ಲಿ : ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಲಾಗುವುದು ಎಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಆಯವ್ಯಯದಲ್ಲಿ…
ಬೆಂಗಳೂರು : ಹಣಕಾಸು ತಜ್ಞೆ ಅಲ್ಲದ ಕೇಂದ್ರದ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ೯ನೇ ಕಳಪೆ ಬಜೆಟ್ ಇದಾಗಿದೆ.…