ಎಡಿಟೋರಿಯಲ್

ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ

– ಪ್ರಸನ್ನ

ಪಾರ್ಕಿನ್ಸನ್ ಖಾಯಿಲೆಯಿಂದಾಗಿ, ಕಳೆದ ನಾಲ್ಕು ವರ್ಷಗಳಿಂದ ಬಳಲುತ್ತಿದ್ದ ಜಿ.ರಾಜಶೇಖರ ನಿನ್ನೆ ನಿಧನರಾದರು. ಕೆಲವೊಮ್ಮೆ ಸಾವೇ ಸಮಾಧಾನಕರವಂತೆ. ಕಡೆಗೂ ಅವರನ್ನು ಕೊಂಡೊಯ್ದು ಸಂಕಟದಿಂದ ಬಿಡುಗಡೆಗೊಳಿಸಿ, ಸಾವು ಸಮಾಧಾನಕರವಾಗಿಯೇ ನಡೆದುಕೊಂಡಿತು. ಅವರ ಸಂಕಟವನ್ನು ನೋಡುವುದು, ಕಡೆ ಕಡೆಗೆ, ನನ್ನಿಂದಾಗುತ್ತಿರಲಿಲ್ಲ. ಏನೋ ಹೇಳಬೇಕೆಂದು ಅವರು ಪ್ರಯಾಸ ಪಡುವುದು, ಅದನ್ನರಿಯಲೆಂದು ನಾವು ಪ್ರಯಾಸಪಡುವುದನ್ನು, ಇಬ್ಬರನ್ನೂ ಕೊಲ್ಲುತ್ತಿತ್ತು.

ಇತ್ತೀಚೆಗೆ ಉಡುಪಿಗೆ ಹೋದಾಗ ಸಹ ಅವರನ್ನು ಕಂಡು ಬರುವ ದೈರ್ಯವಾಗುತ್ತಿರಲಿಲ್ಲ ನನಗೆ.

ಪಾದರಸದಂತಹ ಮೆದುಳು, ಅದಕ್ಕೆ ತದ್ವಿರುದ್ಧವಾಗಿದ್ದ ಮೃದು ಹೃದಯ ರಾಜಶೇಖರದ್ದು. ಜೊತೆಗೆ, ನಾಚಿಕೆ ಸ್ವಭಾವ, ಹಿಂಜರಿಕೆ. ಆದರೆ, ಒಳ್ಳೆಯ ಪುಸ್ತಕಗಳು ಹಾಗೂ ಒಳಿತಿನ ವಿಚಾರಗಳು ಕನ್ನಡಕ್ಕೆ ತಲುಪುವ ಬಹಳ ಮುಂಚೆಯೇ, ಉಡುಪಿಯ ಮೂಲೆಯಲ್ಲಿದ್ದ, ಸಣ್ಣ ಮನೆಯೊಂದರಲ್ಲಿದ್ದ, ಕಾರಕೂನ ರಾಜಶೇಖರನ್ನು ತಲುಪಿಬಿಡುತ್ತಿತ್ತು.

ಅದು ಹೇಗೋ. ಹಲವು ಆಯಾಮಗಳ ವ್ಯಕ್ತಿತ್ವ ಅವರದ್ದು.

ಮಾರ್ಕ್ಸ್‌ವಾದಿ ರಾಜಶೇಖರ, ಟ್ರೇಡ್ ಯೂನಿಯನ್ ರಾಜಶೇಖರ, ಸಾಹಿತ್ಯ ವಿಮರ್ಶಕ ರಾಜಶೇಖರ, ಅಲ್ಪಸಂಖ್ಯಾತರ ಸಂಗಾತಿ ರಾಜಶೇಖರ… ಇತ್ಯಾದಿ. ಯಾವುದೂ ಇಂದಿನ ಕಾಲಮಾನದಲ್ಲಿ ಗೆಲ್ಲುವುದು ಸಾಧ್ಯವಿರಲಿಲ್ಲ. ಆದರೆ ಸೋಲುವ ಜಾಯಮಾನವಲ್ಲ ರಾಜಶೇಖರದ್ದು. ಸೋಲು ಗೆಲುವುಗಳಾಚೆ ನಡೆದಿದ್ದರು ಅವರು.

ಆತ ಬರೆದದ್ದು ಒಂದೇ ಒಂದು ಪುಸ್ತಕ ‘ಕಾಗೋಡು ಸತ್ಯಾಗ್ರಹ’. ವಿಟ್ಗೆನ್ ಸ್ಟೈನ್ ಎಂಬ ತತ್ತ್ವಜ್ಞಾನಿ ಹೀಗೆಯೇ ಇದ್ದನಂತೆ. ೩೮ ಪುಟಗಳ, ಟ್ರ್ಯಾಕ್ಟಟಸ್ ಎಂಬ ಹೆಸರಿನ ಒಂದು ಸಣ್ಣ ಪುಸ್ತಕ ಬರೆದ ಆತ. ಆದರೆ, ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅದನ್ನೇ ಥೀಸಿಸ್ ಎಂದು ಸ್ವೀಕರಿಸಿ ಡಾಕ್ಟರೇಟ್ ಪದವಿ ನೀಡಿತ್ತು. ವಿಟ್ಗೆನ್ ಸ್ಟೈನ್ ಜರ್ಮನಿಯ ಯೂಹೂದ್ಯನಾಗಿದ್ದ. ರಾಜಶೇಖರ ಮಾರ್ಕ್ಸ್ವಾದಿ ಬ್ರಾಹ್ಮಣನಾಗಿದ್ದ. ರಾಜಶೇಖರರೊಟ್ಟಿಗೆ ಒಡನಾಟವಿದ್ದವರಿಗೆ ಅಥವಾ ಬಿಡಿ ಲೇಖನ ಓದಿದವರಿಗಷ್ಟೆ ಗೊತ್ತಿತ್ತು. ಆತನ ಮೌಲ್ಯ.

ಈಗನ್ನಿಸುತ್ತಿದೆ, ರಾಜಶೇಖರ ಏನನ್ನೋ ಹೇಳಬೇಕೆಂದು ಪ್ರಯಾಸಪಡುತ್ತಿದ್ದದ್ದು, ಕೇಳುಗರು ಅದೇನೆಂದು ಅರ್ಥವಾಗದೆ ಪ್ರಯಾಸಪಡುತ್ತಿದ್ದದ್ದು, ಆತನಿಗೆ ಪಾರ್ಕಿನ್ಸನ್ ಖಾಯಿಲೆ ಬಂದ ನಂತರದ ಸಮಸ್ಯೆ ಮಾತ್ರವೇ ಅಲ್ಲ. ಮೊದಲು ಹೀಗೆಯೇ ಇತ್ತು. ಆತನ ಮೆದುಳು ಸಮಾಜವಾದದ ತತ್ವ ಮಿಡಿಯುತ್ತಿದ್ದರೆ, ಹೃದಯ ಕನ್ನಡದ ಹೃದಯವಂತಿಕೆ ಮಿಡಿಯುತ್ತಿತ್ತು. ಸಂವಹನ ಸಾಧಿಸಬೇಕೆಂದರೆ ಕೇಳುಗರ ಹೃದಯವೂ ಮಿಡಿಯಬೇಕು ತಾನೆ.

ಆದರೆ, ಈಚಿನ ದಿನಗಳಲ್ಲಿ ಮಾತು ಮೆದುಳಿಂದ ಕೆಳಕ್ಕಿಳಿಯುವುದೇ ಇಲ್ಲ. ಕಿಡಿ ಕಿಡಿಯಾಗಿ, ಕಿರಿ ಕಿರಿಯಾಗಿ, ಮೇಲು ಮೇಲೆ ಹಾರುತ್ತಿರುತ್ತದೆ. ಮೆದುಳುಗಳ ನಡುವೆ ಎಂದಾದರೂ ಸಂಬಂಧ ಸಾಧ್ಯವೇ? ಎಲ್ಲ ಹಿಂದೂಗಳು ಮೆದುಳು ನೆನಪಿಸಿದ್ದಷ್ಟನ್ನೇ ನುಡಿಯುತ್ತಿದ್ದಾರೆ, ಎಲ್ಲ ಮುಸಲನ್ಮಾರು, ಎಲ್ಲ ಪಕ್ಷಗಳು, ಎಲ್ಲ ನಾಯಕರು, ಅಷ್ಟನ್ನೆ ನುಡಿಯುತ್ತಿದ್ದಾರೆ. ಅವಸರದಲ್ಲಿದ್ದಾರೆ, ಯುದ್ಧೋನ್ಮಾದದಲ್ಲಿದ್ದಾರೆ. ಇಡೀ ಮನುಕುಲಕ್ಕೇ ಪಾರ್ಕಿನ್ಸನ್ ಎಂಬ ಹೆಸರಿನ ಅಭಿವ್ಯಕ್ತಿ ಹೀನತೆಯ ಖಾಯಿಲೆ ಬಡಿದಿದೆ. ಆದರೆ, ಈ ಖಾಯಿಲೆ ಬಲಿ ತೆಗೆದುಕೊಂಡ ಒಬ್ಬ ಹೃದಯವಂತ ವ್ಯಕ್ತಿ ಜಿ.ರಾಜಶೇಖರ.

andolana

Recent Posts

ಸಂವಿಧಾನ ಬದಲಾವಣೆ ಅಸಾಧ್ಯ : ಮುಖ್ಯಮಂತ್ರಿ ಚಂದ್ರು

ಮೈಸೂರು : ಕೆಲವರು ಸಂವಿಧಾನ ಬದಲಿಸುವ ಮಾತನಾಡುತ್ತಾರೆ, ಖಂಡಿತ ಇದು ಅಸಾಧ್ಯ. ಸಂವಿಧಾನಕ್ಕೆ ತಿದ್ದುಪಡಿ ಮಾಡಬಹುದೇ ಹೊರತು ಮೂಲ ತತ್ವಗಳನ್ನು…

23 mins ago

KSOU | ಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು : ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (KSOU) ಕುಲಪತಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ…

50 mins ago

ನಕ್ಸಲ್ ಮುಕ್ತ ಮಾಡಿದ ಮೊದಲ ರಾಜ್ಯ ಕರ್ನಾಟಕ : ಗೃಹ ಸಚಿವ ಡಾ.ಜಿ.ಪರಮೇಶ್ವರ್

ಬೆಂಗಳೂರು : ಬಹಳ ವರ್ಷಗಳ ಹಿಂದೆಯೇ ನಕ್ಸಲ್ ನಿಗ್ರಹ ಪಡೆ (ಎಎನ್‌ಎಫ್‌) ಸ್ಥಾಪಿಸುವ ಮೂಲಕ ದೇಶದಲ್ಲೇ ಮೊದಲು ಕರ್ನಾಟಕವನ್ನು ನಾವು…

2 hours ago

ಬಿ.ಆರ್.ಟಿ ವಲಯದಲ್ಲಿ ಮತ್ತೆ ಕಾಡ್ಗಿಚ್ಚು : 20 ಎಕರೆ ಅರಣ್ಯ ನಾಶ

ಹನೂರು : ತಾಲೂಕಿನ ಬಿ.ಆರ್.ಟಿ ಅರಣ್ಯ ಪ್ರದೇಶ ವ್ಯಾಪ್ತಿಯ ಲೊಕ್ಕನಹಳ್ಳಿ ಸಮೀಪದ ಗುಡ್ಡದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡು ಸುಮಾರು 20 ಎಕರೆಗೂ…

2 hours ago

ಇಂಡೋನೇಷ್ಯಾದಲ್ಲಿ ಪ್ರಬಲ ಭೂಕಂಪ ; ಓರ್ವ ಸಾವು ಹಲವರಿಗೆ ಗಾಯ

ಜಕಾರ್ತಾ : ಇಂಡೋನೇಷ್ಯಾದ ಉತ್ತರ ಮೊಲುಕ್ಕಾ ಸಮುದ್ರ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ 7.4ರಷ್ಟು…

3 hours ago

ಹನೂರು | ಕಾಡಾನೆದಾಳಿಗೆ 500ಕ್ಕೂ ಹೆಚ್ಚು ಬಾಳೆ ನಾಶ

ಹನೂರು : ಏಕ ಕಾಲದಲ್ಲಿ ಬುಧವಾರ ತಡರಾತ್ರಿ ಕಾಡಾನೆಗಳು ರೈತರ ಜಮೀನುಗಳಲ್ಲಿ ಬೆಳೆದಿದ್ದ ಬೆಳೆಗಳ ಮೇಲೆ ದಾಳಿ ನಡೆಸಿ ಸುಮಾರು…

3 hours ago