ಎಡಿಟೋರಿಯಲ್

ವಿದೇಶ ವಿಹಾರ : ಕದನ ವಿರಾಮ ಸಾಧ್ಯವೇ ?

ರಷ್ಯಾ-ಯುಕ್ರೇನ್‌ ಯುದ್ಧ ಎಲ್ಲರಿಗೂ ಬೇಕಿದೆ ಕದನ ವಿರಾಮ, ಶಾಂತಿ ಒಪ್ಪಂದ … ಆದರೆ ?

ರಷ್ಯಾ ಮತ್ತು ಯುಕ್ರೇನ್ ನಡುವಣ ಯುದ್ಧ ಮುಕ್ತಾಯವಾಗುವ ಯಾವುದೇ ಸೂಚನೆಗಳು ಸದ್ಯಕ್ಕೆ ಕಾಣಿಸುತ್ತಿಲ್ಲ. ರಷ್ಯಾ ಸತತವಾಗಿ ಯುಕ್ರೇನ್ ನಗರಗಳ ಮೇಲೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಯುದ್ಧ ಆರಂಭವಾಗಿ ಹತ್ತು ತಿಂಗಳು ಕಳೆದಿದೆ. ರಷ್ಯಾ ಎಷ್ಟೇ ದಾಳಿ ನಡೆಸಿದರೂ ಯುಕ್ರೇನ್ ಸೈನಿಕರ ಹೋರಾಟದ ಕಿಚ್ಚು ಆರಿಲ್ಲ. ರಷ್ಯಾ ಆಕ್ರಮಿಸಿಕೊಂಡ ಕೆಲವು ಪ್ರದೇಶಗಳನ್ನು ಯುಕ್ರೇನ್ ಸೈನಿಕರು ಮತ್ತೆ ವಶ ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಚಳಿಗಾಲ ಬಂದಿದ್ದು ಯುಕ್ರೇನ್ ಜನರು, ಸೈನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ರಷ್ಯಾ ಉದ್ದೇಶಪೂರ್ವಕವಾಗಿಯೇ ವಿದ್ಯುತ್ ಉತ್ಪಾದನಾ ಘಟಕಗಳ ಮೇಲೆ ಬಾಂಬ್ ದಾಳಿ ನಡೆಸುತ್ತಿದೆ. ಜನರು ಮತ್ತಷ್ಟು ಕಷ್ಟ ಅನುಭವಿಸಿ ಸಾಕಪ್ಪಾ ಸಾಕು ಎಂದು ಶರಣಾಗಲಿ ಎಂಬುದು ರಷ್ಯಾದ ಉದ್ದೇಶ ಇದ್ದಂತಿದೆ. ಆದರೆ ಯುಕ್ರೇನ್ ಜನರಾಗಲಿ ಮತ್ತು ಅವರ ನಾಯಕ ವ್ಲಾಡಮಿರ್ ಜೆಲೆನಸ್ಕಿಯಾಗಲೀ ರಷ್ಯಾ ದಾಳಿಗೆ ಹೆದರುತ್ತಿಲ್ಲ, ಶರಣಾಗುವ ಯಾವುದೇ ಸೂಚನೆ ನೀಡಿಲ್ಲ.

ರಷ್ಯಾ ದಾಳಿಯನ್ನು ಸಮರ್ಥವಾಗಿ ಎದುರಿಸಲು ಯುಕ್ರೇನ್‌ಗೆ ಯುದ್ಧಾಸ್ತ್ರಗಳು ಬೇಕು. ಯೂರೋಪ್ ಮತ್ತು ಅಮೆರಿಕ ಅಪಾರ ಪ್ರಮಾಣದಲ್ಲಿ ಯುದ್ಧಾಸ್ತ್ರಗಳನ್ನು ಉಕ್ರೇನ್‌ಗೆ ತಂದು ಸುರಿಯುತ್ತಿವೆ. ರಷ್ಯಾ ಆಧುನಿಕ ಯುದ್ಧಾಸ್ತ್ರಗಳನ್ನು ಬಳಸುತ್ತಿರುವುದರಿಂದ ಅದನ್ನು ಎದುರಿಸಲು ಯುಕ್ರೇನ್‌ಗೆ ಕೂಡ ಆಧುನಿಕ ಅಸ್ತ್ರಗಳು ಬೇಕು. ಯುಕ್ರೇನ್ ಅಧ್ಯಕ್ಷ ಝಲನ್ಸ್ಕಿ ಇದೀಗ ತಾನೆ ತುರ್ತಾಗಿ ಅಮೆರಿಕಕ್ಕೆ ಭೇಟಿ ನೀಡಿ ಅಧ್ಯಕ್ಷ ಜೋ ಬಿಡನ್ ಜೊತೆ ಮಾತುಕತೆ ನಡೆಸಿ ಬಂದಿದ್ದಾರೆ. ಕಾಂಗ್ರೆಸ್ ಉದ್ದೇಶಿಸಿ ಮಾತನಾಡಿ ಬೆಂಬಲ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಧುನಿಕ ಪೇಟ್ರ್ರಿಯಟ್ ಕ್ಷಿಪಣಿಗಳು ಸೇರಿದಂತೆ ೧.೮ ಬಿಲಿಯನ್ ಡಾಲರ್ ಮೌಲ್ಯದ ಯುದ್ಧಾಸ್ತ್ರಗಳನ್ನು ಕೊಡುವುದಾಗಿ ಅಮೆರಿಕದ ನಾಯಕರು ಭರವಸೆ ನೀಡಿದ್ದಾರೆ. ಇದರ ಜೊತೆಗೆ ೪೫ ಬಿಲಿಯನ್ ಡಾಲರ್ ಮೌಲ್ಯದ ಇತರ ನೆರವನ್ನೂ ಅಮೆರಿಕ ಘೋಷಿಸಿದೆ. ಇತ್ತೀಚಿನ ವರ್ಷಗಳಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮೆರಿಕ ಯಾವ ದೇಶಕ್ಕೂ ನೆರವಾಗಿದ್ದಿಲ್ಲ. ಪರೋಕ್ಷವಾಗಿ ರಷ್ಯಾ ವಿರುದ್ಧ ಅಮೆರಿಕ ಯುದ್ಧಕ್ಕೆ ಇಳಿದಂತಾಗಿದೆ. ಎರಡನೆಯ ಮಹಾಯುದ್ಧದ ನಂತರ ಶೀತಲ ಸಮರಕಾಲದಲ್ಲಿ ಅಮೆರಿಕ ಇಟ್ಟ ಹೆಜ್ಜೆಯಂತೆಯೇ ಇದೆ ಈ ಬೆಳವಣಿಗೆ.

ಯುಕ್ರೇನ್‌ಗೆ ಯುದ್ಧಾಸ್ತ್ರಗಳ ನೆರವು ನೀಡುವುದು ಎಂದರೆ ಯುದ್ಧ ಮುಂದುವರಿಸುವುದು ಎಂದೇ ಅರ್ಥ ಎಂದು ರಷ್ಯಾದ ಅಧ್ಯಕ್ಷ ವ್ಲಾಡಮಿರ್ ಪುಟಿನ್ ಪ್ರತಿಕ್ರಿಯೆ ನೀಡಿದ್ದಾರೆ. ಯುದ್ಧ ನಿಲ್ಲಬೇಕು, ಜನರ ಸಂಕಷ್ಟ ಅಂತ್ಯವಾಗಬೇಕು ಎಂದು ರಷ್ಯಾ ಬಯಸುತ್ತದೆ. ಶಾಂತಿ ನೆಲೆಸಲು ಎರಡೂ ದೇಶಗಳ ನಡುವೆ ಒಪ್ಪಂದವಾಗಬೇಕು. ರಷ್ಯಾ ಅಂಥ ಒಪ್ಪಂದವನ್ನು ಬಯಸುತ್ತದೆ ಎಂದು ಪುಟಿನ್ ಹೇಳಿದ್ದಾರೆ. ಹೌದು ಯುದ್ಧ ನಿಲ್ಲಬೇಕು ಎಂದು ತಾನೂ ಬಯಸುವುದಾಗಿ ಅಮೆರಿಕ ಹೇಳಿದೆ. ಪುಟಿನ್ ಬಯಸಿದರೆ ತಾವು ಮಾತುಕತೆಗೆ ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ಎಲ್ಲರಿಗೂ ಶಾಂತಿ ಬೇಕು. ಆದರೆ ಅದಕ್ಕಾಗಿ ಯಾರೂ ಪ್ರಯತ್ನಿಸುತ್ತಿಲ್ಲದಿರುವುದೇ ವಿಪರ್ಯಾಸ.

ಹಾಗೆ ನೋಡಿದರೆ ಯುದ್ಧ ಆರಂಭಕ್ಕೆ ಮೊದಲೇ ಅಂಥ ಪ್ರಯತ್ನಗಳು ನಡೆದಿದ್ದವು. ಟರ್ಕಿಯ ಅಧ್ಯಕ್ಷ ಎರ್ಡೋಗನ್ ಮಾತುಕತೆಯ ಅವಕಾಶವನ್ನು ಎರಡೂ ದೇಶಗಳ ಪ್ರತಿನಿಽಗಳಿಗೆ ಕಲ್ಪಿಸಿದ್ದರು. ಹಲವು ಸುತ್ತಿನ ಆರಂಭಿಕ ಮಾತುಕತೆಗಳು ನಡೆದು ಯಾರೊಬ್ಬರೂ ರಾಜಿಗೆ ಸಿದ್ಧವಾಗದೆ ಮಾತುಕತೆ ನಿಂತಿದ್ದವು. ಟರ್ಕಿ ತನ್ನ ಪ್ರಯತ್ನವನ್ನು ಮುಂದುವರಿಸಿದೆ. ಭಾರತವೂ ಈಗ ಅಂಥ ಪ್ರಯತ್ನಕ್ಕೆ ಈಗ ಕೈಹಾಕಿದೆ. ಆದರೆ ಎರಡೂ ಕಡೆಯವರು ತಮ್ಮ ನಿಲುವಿಗೇ ಅಂಟಿಕೊಂಡಿದ್ದಾರೆ. ತನ್ನ ವಶದಲ್ಲಿರುವ ಕ್ರೈಮಿಯಾಗೆ ಮಾನ್ಯತೆ ನೀಡಬೇಕು. ಲುಹನ್‌ಸಕ್ ಮತ್ತು ಡೊನ್ಸೆಕ್ ಪ್ರಾಂತ್ಯಗಳು ಸ್ವತಂತ್ರವಾಗಲು ಅವಕಾಶ ನೀಡಬೇಕು. ನವನಾಜಿಗಳ ಹಿಡಿತದಿಂದ ಯುಕ್ರೇನ್ ಹೊರಬರಬೇಕು ಮುಂತಾದ ಷರತ್ತುಗಳಗೆ ಒಪ್ಪಿದರೆ ಮಾತುಕತೆಗೆ ಸಿದ್ಧ ಎಂದು ರಷ್ಯಾ ಹೇಳುತ್ತ ಬಂದಿದೆ. ಅದೇ ರೀತಿ ಅಕ್ರಮವಾಗಿ ವಶಪಡಿಸಿಕೊಂಡಿರುವ ಪ್ರದೇಶಗಳಿಂದ ರಷ್ಯಾ ಸೇನೆ ಹೊರಹೋಗಬೇಕು. ಆ ಪ್ರದೇಶಗಳು ಮತ್ತೆ ತಮ್ಮ ದೇಶದ ಭಾಗವಾಗಲು ಅನುವುಮಾಡಿಕೊಡಬೇಕು ಎಂಬುದು ಯುಕ್ರೇನ್ ನಾಯಕರ ಪಟ್ಟು. ಅಮೆರಿಕ ಮತ್ತು ಯೂರೋಪ್ ನಾಯಕರೂ ಇದನ್ನೇ ಹೇಳುತ್ತಿದ್ದಾರೆ. ಹೀಗೆ ಮಾಡಿದ್ದೇ ಆದರೆ ರಷ್ಯಾ ಸೋತಂತೆಯೇ ಸರಿ. ಸೋಲನ್ನು ಒಪ್ಪಿಕೊಳ್ಳಲು ಪುಟಿನ್ ಸಿದ್ಧವಿಲ್ಲ. ಸೋಲ್ನು ಒಪ್ಪಿಕೊಂಡು ಒಪ್ಪಂದ ಮಾಡಿಕೊಳ್ಳದಿದ್ದರೆ ಯುದ್ಧ ಮುಂದುವರಿ ಸುವುದು ಅನಿವಾರ್ಯವಾಗುತ್ತದೆ.

ಯುಕ್ರೇನ್ ಕೂಡ ಇಂಥದೇ ಪರಿಸ್ಥಿತಿ ಎದುರಿಸುತ್ತಿದೆ. ರಷ್ಯಾದ ಷರತ್ತುಗಳನ್ನು ಒಪ್ಪಿಕೊಳ್ಳುವುದು ಎಂದರೆ ಸೋಲೊಪ್ಪಿಕೊಂಡಂತೆಯೇ. ಅಪಾರ ಪ್ರಮಾಣದ ಸಾವು, ನೋವು, ವಿನಾಶದ ಮಧ್ಯೆ ಯುದ್ಧ ಮಾಡಲಾಗುತ್ತಿದೆ. ರಷ್ಯಾದ ಷರತ್ತುಗಳನ್ನು ಒಪ್ಪಿಕೊಂಡರೆ ಕಳೆದ ೧೦ ತಿಂಗಳ ಹೋರಾಟ ನಿರುಪಯುಕ್ತ ಎಂದಾಗುತ್ತದೆ ಎಂದು ಯುಕ್ರೇನ್ ನಾಯಕ ಝಲೆನ್ಸ್ಕಿ ಹೇಳುತ್ತಾರೆ. ಯಾರೂ ಸೋಲಬಾರದು ಅಥವಾ ಗೆಲ್ಲಬಾರದು ಎಂದರೆ ಯುದ್ಧ ನಿಲ್ಲುವುದಾದರೂ ಹೇಗೆ?

ನಿಜ. ಎಲ್ಲ ಯುದ್ಧಗಳಲ್ಲೂ ಇಂಥದೇ ಸ್ಥಿತಿಯನ್ನು ಯುದ್ಧ ಮಾಡುವ ದೇಶಗಳು ಎದುರಿಸುತ್ತವೆ. ಈ ಪರಿಸ್ಥಿತಿಯ ನಡುವೆಯೇ ರಾಜಿ ಮಾಡಿಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ಯುದ್ಧಗಳು ಮುಂದುವರಿಯುತ್ತವೆ. ಯುದ್ಧ ಮುಂದುವರಿಯುವುದು ಬೇಡ ಎನ್ನುವವರು ರಾಜಿಗೆ ಸಿದ್ಧವಾಗಬೇಕು. ಸದ್ಯದ ಪರಿಸ್ಥಿತಿಯಲ್ಲಿ ರಷ್ಯಾ ಆಗಲಿ, ಯುಕ್ರೇನ್ ಆಗಲಿ ರಾಜಿಗೆ ಸಿದ್ಧವಿಲ್ಲ. ಇದೆ ಪರಿಸ್ಥಿತಿ ಮುಂದುವರಿದರೆ ರಷ್ಯಾ ಪರಮಾಣು ಅಸ್ತ್ರಗಳನ್ನು ಕೆಲವು ಮಿತಿಗಳಲ್ಲಿ ಬಳಸಲು ಮುಂದಾಗಬಹುದು. ಅವುಗಳನ್ನು ಬಳಸಿದರೆ ರಷ್ಯಾ ಇಡೀ ಜಗತ್ತನ್ನು ಎದುರುಹಾಕಿಕೊಳ್ಳಬೇಕಾಗುತ್ತದೆ. ಯುಕ್ರೇನ್ ನಾಶ ಮಾಡುವ ರಷ್ಯಾದ ಗುರಿ ಈಡೇರಬಹುದು. ಆದರೆ ಇದರಿಂದ ಗಳಿಸುವುದಕ್ಕಿಂತ ಹೆಚ್ಚಾಗಿ ಕಳೆದುಕೊಳ್ಳುವುದೇ ಹೆಚ್ಚು. ಯುಕ್ರೇನ್‌ನ ಪರಿಸ್ಥಿತಿ ಅಷ್ಟೇ ಕೆಟ್ಟದಾಗಿದೆ. ಪರರನ್ನು ಅವಲಂಬಿಸಿ ಎಷ್ಟು ಕಾಲ ಯುದ್ಧ ಮುಂದುವರಿಸಲು ಸಾಧ್ಯ. ಈಗಾಗಲೇ ಯುಕ್ರೇನ್ ನಾಶವಾಗಿದೆ. ಲಕ್ಷಾಂತರ ಕುಟುಂಬಗಳು ವಲಸೆಹೋಗಿವೆ. ಪಡಬಾರದ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ದೇಶದಲ್ಲಿಯೇ ಉಳಿದವರೂ ಆಹಾರ, ವಿದ್ಯುತ್, ಉದ್ಯೋಗ, ಸಂಪಾದನೆ ಇಲ್ಲದೆ ನರಕದ ನೋವನ್ನು ಅನುಭವಿಸಬೇಕಾಗುತ್ತದೆ. ಇದರಿಂದ ರಾಜಿಗೆ ಸಿದ್ಧವಾಗಿ ಬದುಕನ್ನು ಜನ ಮತ್ತೆ ಕಟ್ಟಿಕೊಳ್ಳಲು ಅನುವು ಮಾಡಿಕೊಡುವುದೇ ಸರಿಯೇನೋ? ಆದರೆ ರಷ್ಯಾದ ನೆರಳಿನಲ್ಲಿ, ಹಂಗಿನಲ್ಲಿ ಬದುಕಬೇಕಾಗಿ ಬರುವಂಥ ಭವಿಷ್ಯವನ್ನು ಯುಕ್ರೇನ್ ಜನ ಬಯಸಲಾರರು. ಬಿಡಿಸಲಾಗದ ಇಕ್ಕಟ್ಟಿನಲ್ಲಿ ಎರಡೂ ದೇಶಗಳು ಸಿಲುಕಿಕೊಂಡಿವೆ. ಯುದ್ಧ ಆರಂಭಕ್ಕೆ ಮೊದಲೇ ಇಂಥ ಅಪಾಯ ಬರಬಹುದು ಎಂಬುದನ್ನು ಊಹಿಸಿ ಒಂದು ಒಪ್ಪಂದಕ್ಕೆ ಬರಬೇಕಿತ್ತು. ಆದರೆ ಅಂಥ ದೂರಗಾಮಿ ದೃಷ್ಟಿಯಿರುವ ನಾಯಕತ್ವದ ಅಭಾವದಿಂದಾಗಿ ಇಂದು ಇಡೀ ಜಗತ್ತು ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ.

ರಷ್ಯಾ ಮತ್ತು ಯುಕ್ರೇನ್ ನಡುವಣ ಯುದ್ಧದಿಂದಾಗಿ ಇಡೀ ಯೂರೋಪ್ ಅನಿಲ ಮತ್ತು ತೈಲ, ಅಡುಗೆ ಎಣ್ಣೆ, ಬೇರೆ ಕಾಳುಗಳ ಅಭಾವಕ್ಕೆ ಸಿಲುಕಿದೆ. ರಷ್ಯಾದಿಂದ ಅನಿಲ ಮತ್ತು ತೈಲ ಪೂರೈಕೆ ಭಾಗಶಃ ಸ್ಥಗಿತಗೊಂಡಿದೆ. ರಷ್ಯಾವನ್ನೇ ಅವಲಂಬಿಸಿದ್ದ ಯೂರೋಪ್‌ನ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೀವನ ದುಬಾರಿಯಾಗಿದೆ. ಅದೇ ರೀತಿ ಆಫ್ರಿಕಾ ಮತ್ತಿತರ ಬಡದೇಶಗಳು ಬೇಳೆ, ಅಡುಗೆ ಎಣ್ಣೆಗಾಗಿ( ಮುಖ್ಯವಾಗಿ ಸನ್‌ಫ್ಲವರ್ ಎಣ್ಣೆ) ಯುಕ್ರೇನ್ ದೇಶವನ್ನೇ ಅವಲಂಬಿಸಿದ್ದವು. ಯುದ್ಧದಿಂದಾಗಿ ಪೂರೈಕೆ ಸ್ಥಗಿತಗೊಂಡಿತ್ತು. ಈಗ ರಷ್ಯಾ ಮತ್ತು ಯುಕ್ರೇನ್ ನಡುವೆ ಒಂದು ಒಪ್ಪಂದವಾಗಿದ್ದು ಬೇಳೆ ಕಾಳು ಮತ್ತು ಅಡುಗೆ ಎಣ್ಣೆಯನ್ನು ಹೊತ್ತ ಹಡಗುಗಳು ಯಾವುದೇ ಅಡ್ಡಿಯಿಲ್ಲದೆ ಗುರಿ ತಲುಪುತ್ತಿವೆ. ಇದರಿಂದ ಆ ದೇಶಗಳು ನಿಟ್ಟುಸಿರು ಬಿಟ್ಟಿವೆ. ಯುದ್ಧದಿಂದಾಗಿ ಮುಂದಿನ ವರ್ಷ ಬೆಳೆಯೇ ಇರುವುದಿಲ್ಲ. ಆಗ ಮತ್ತೆ ಇಂಥದ್ದೇ ಭಿನ್ನ ರೀತಿಯ ಸಮಸ್ಯೆ ಎದುರಾಗುತ್ತದೆ.

ಯುದ್ಧದಿಂದಾಗಿ ರಷ್ಯಾದ ಆದಾಯ ಕುಸಿದಿದೆ. ಹಣದುಬ್ಬರ ಜನರನ್ನು ಕಂಗೆಡಿಸಿದೆ. ಅಲ್ಲಿ ಪ್ರಜಾತಂತ್ರ ವ್ಯವಸ್ಥೆ ಇದ್ದಿದ್ದರೆ ಜನರು ರೊಚ್ಚಿಗೇಳುತ್ತಿದ್ದರು. ಪುಟಿನ್ ಕುರ್ಚಿ ಅಲುಗಾಡುತ್ತಿತ್ತು. ಸರ್ವಾಽಕಾರ ಇರುವುದರಿಂದ ಪುಟಿನ್ ಅಧಿಕಾರದಲ್ಲಿ ಉಳಿಯುವ ಸಾಧ್ಯತೆ ಇದೆ. ರಷ್ಯಾದ ಮಿಲಿಟರಿ ಸೋಲೊಪ್ಪಿಕೊಳ್ಳಲು ಸಿದ್ಧವಿಲ್ಲದಿರುವುದು ಪುಟಿನ್‌ಗೆ ಅನುಕೂಲಕರವಾಗಿದೆ.

ಯೂರೋಪಿನಲ್ಲಿ ಅಧಿಕಾರದಲ್ಲಿ ಇರುವವರ ಕುರ್ಚಿ ಅಲುಗಾಡುತ್ತಿದೆ. ಮೊದಲು ಅಮೆರಿಕ ಹೇಳಿದಂತೆ ಕುಣಿಯುವುದನ್ನು ಬಿಡಬೇಕು. ತಮಗೆ ಅನು ಕೂಲಕರವಾದ ನೀತಿಯನ್ನು ಅನುಸರಿಸಬೇಕು ಎಂದು ವಿರೋಧಪಕ್ಷಗಳು ಚಳವಳಿ ಆರಂಭಿಸಿವೆ. ಜನಾಭಿಪ್ರಾಯ ಮೂಡಿಸುತ್ತಿವೆ. ಮುಂಬರುವ ವರ್ಷಗಳಲ್ಲಿ ನಡೆಯುವ ಚುನಾವಣೆಗಳ ಮೇಲೆ ಈ ಪ್ರಯತ್ನ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿಯೇ ರಷ್ಯಾ-ಯುಕ್ರೇನ್ ಯುದ್ಧ ನಿಲುಗಡೆಗೆ ಜನರು ಒಲವು ತೋರುತ್ತಿದ್ದಾರೆ. ಆದರೆ ಯುದ್ಧ ನಿಲುಗಡೆ ಅಥವಾ ಒಂದು ಒಪ್ಪಂದ ಅಷ್ಟು ಸುಲಭವಾಗಿ ಆಗುವಂಥದ್ದಲ್ಲ ಎನ್ನುವುದೇ ದುರಂತ.  ಯಾರ ಪ್ರತಿಷ್ಠೆಗೂ ಭಂಗ ಬರದಂಥ ರಾಜಿ ಸೂತ್ರ ಸಿದ್ಧಪಡಿಸಿ ಮನವೊಲಿಸಬೇಕು. ರಷ್ಯಾ ಕನಿಷ್ಠ ಕ್ರೈಮಿಯಾವನ್ನು ಬಿಟ್ಟುಕೊಟ್ಟರೆ ಬಹುಶಃ ಯುಕ್ರೇನ್ ರಾಜಿಗೆ ಸಿದ್ಧವಾಗಬಹುದು. ಇದೇನೇ ಇರಲಿ ಅಮೆರಿಕ ಮತ್ತು ಯೂರೋಪ್ ಜಂಟಿಯಾಗಿ ಇಂಥ ಒಂದು ಪ್ರಯತ್ನ ಆರಂಭಿಸಿದರೆ ಬಹುಶಃ ಒಂದಲ್ಲ ಒಂದು ಪರಿಹಾರ ದೊರೆಯಬಹುದು.

andolanait

Recent Posts

ಇಶಾ ಫೌಂಡೇಶನ್‌ ವಿರುದ್ಧದ ಪ್ರಕರಣ ವಜಾಗೊಳಿಸಿದ ಸುಪ್ರೀಂಕೋರ್ಟ್‌

ಹೊಸದಿಲ್ಲಿ: ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಸದ್ಗುರು ಜಗ್ಗಿ ವಾಸುದೇವ್‌ ಅವರ ಆಶ್ರಮ ಸೇರಲು ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಬ್ರೈನ್‌ವಾಶ್‌ ಮಾಡಲಾಗಿದೆ ಎಂಬ…

1 hour ago

ಮಡಿಕೇರಿ: ಮಗನಿಂದಲೇ ತಂದೆಯ ಹತ್ಯೆ..

ಮಡಿಕೇರಿ: ಮಗನಿಂದಲೇ ತಂದೆ ಹತ್ಯೆಯಾದ ಘಟನೆ ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕಮಂಡೂರು ಗ್ರಾಮದಲ್ಲಿ ನಡೆದಿದೆ. ಸಿ ಎನ್ ನಾಣಯ್ಯ…

2 hours ago

ಮುಡಾ: ಇಡಿ ದಾಳಿಗೆ ರಾಜಕೀಯ ಕಾರಣವಲ್ಲ; ಅಶೋಕ್

ಜಾರಿ ನಿರ್ದೇಶನಾಲಯದ ದಾಳಿಗೆ ರಾಜಕೀಯ ಕಾರಣವಲ್ಲ, 3-4 ಸಾವಿರ ಕೋಟಿ ರೂ. ಅಕ್ರಮ ನಡೆದಿದೆ ಎಂದು ಹೇಳಿದ್ದೇ ಕಾಂಗ್ರೆಸ್‌ನವರು: ಪ್ರತಿಪಕ್ಷ…

2 hours ago

BJP ಟಿಕೆಟ್‌ ವಂಚನೆ: ಆರೋಪ ತಳ್ಳಿ ಹಾಕಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

ನವದೆಹಲಿ: ನನಗೆ ಸಹೋದರಿಯೇ ಇಲ್ಲ ಮತ್ತು ಗೋಪಾಲ್ ಜೋಶಿ ಮೇಲಿನ ಪ್ರಕರಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ…

2 hours ago

ಮಂಡ್ಯ ಟೂ ಇಂಡಿಯಾ: ಬೃಹತ್‌ ಉದ್ಯೋಗ ಮೇಳಕ್ಕೆ ಮೊದಲ ದಿನ ಅಭೂತಪೂರ್ವ ಸ್ಪಂದನೆ

ಮಂಡ್ಯ ಟೂ ಇಂಡಿಯಾ; ಸಕ್ಕರೆ ನಾಡಿನಲ್ಲಿ 2 ದಿನಗಳ ಬೃಹತ್ ಉದ್ಯೋಗ ಮೇಳ 150ಕ್ಕೂ ಹೆಚ್ಚು ಕಂಪನಿಗಳ ಭಾಗಿ, ಸಾವಿರಾರು…

3 hours ago

ಮುಡಾ ಮೇಲೆ ಇಡಿ ದಾಳಿ: ಸಿಬಿಐ ತನಿಖೆ ನಡೆಸುವರೆಗೂ ಹೋರಾಟ ಮುಂದುವರಿಕೆ: ಸ್ನೇಹಮಯಿ ಕೃಷ್ಣ

ಮೈಸೂರು: ಮುಡಾ ಮೇಲಿನ ಇಡಿ ಕಾರ್ಯಾಚರಣೆ ಕೇವಲ ಸಿಎಂ ಸಿದ್ದರಾಮಯ್ಯ ಅವರ ಕುಟುಂಬದವರ ಪ್ರಕರಣವಲ್ಲ. ಸಂಪೂರ್ಣ ಮುಡಾ ಅಕ್ರಮದ ಬಗ್ಗೆ…

3 hours ago