Film Industry Priorities Punctuality Drug Addiction and More
ಜನಪ್ರಿಯ ನಟ ಡಾ. ರಾಜಕುಮಾರ್ ಅಭಿನಯದ ಚಿತ್ರಗಳ ಗಳಿಕೆ ಕಡಿಮೆ ಆಗುತ್ತಿದೆ ಎನ್ನುವ ಮಾತು ಕೇಳುತ್ತಿದ್ದಂತೆ ಅವರದೇ ಹಂಚಿಕಾ ಸಂಸ್ಥೆ ಸ್ಥಾಪನೆ ಆಯಿತು. ರಾಜ್ ಚಿತ್ರಗಳಿಂದ ನಷ್ಟ ಎನ್ನುವ ಮಾತು ಕೇಳುತ್ತಲೇ, ನಿರ್ಮಾಣಕ್ಕೂ ಕಾಲಿಟ್ಟರು ಪಾರ್ವತಮ್ಮ ರಾಜಕುಮಾರ್. ಆ ಸಂಸ್ಥೆಯ ನಿರ್ಮಾಣದ ಚಿತ್ರಗಳು ಬಹುತೇಕ ಎಲ್ಲವೂ ಗೆದ್ದವು. ಚಿತ್ರಗಳ ಪೂರ್ವಸಿದ್ಧತೆ ಹಾಗಿತ್ತು.
ನಿರ್ದೇಶಕರಾದ ನಾರಾಯಣ್ ಅಭಿನಯದತ್ತ ತಿರುಗಿದ್ದು ಜನಪ್ರಿಯ ನಟರೊಬ್ಬರು ಕಾಲ್‌ಶೀಟ್ ನೀಡದೆ ಇದ್ದ ಕಾರಣದಿಂದ ಅದನ್ನು ಸವಾಲಾಗಿ ಸ್ವೀಕರಿಸಿ ತಾವೇ ನಟಿಸಿದ್ದಾಗಿ ಹೇಳಲಾಗುತ್ತಿದೆ. ರವಿಚಂದ್ರನ್ ನಿರ್ದೇಶಕರಾದದ್ದೂ ಇಂತಹದೇ ಸವಾಲಿನಿಂದ ಎನ್ನುವ ಮಾತಿದೆ. ಆಗುವುದೆಲ್ಲ ಒಳ್ಳೆಯದಕ್ಕೆ ಎನ್ನುವುದು ಇದನ್ನೇ ಇರಬೇಕು. ಕಾರ್ಯ ಕಾರಣ ಸಂಬಂಧವಿಲ್ಲದೆ ಏನೂ ಆಗುವುದಿಲ್ಲ ಎನ್ನುವ ಮಾತು ಮೊನ್ನೆ ರವಿಚಂದ್ರನ್ ಅವರ ಮಾತಲ್ಲೂ ಪ್ರತಿಧ್ವನಿಸಿತ್ತು. ಅದು ತಮ್ಮ ಮತ್ತು ಹಂಸಲೇಖ ಪರಿಚಯ, ಸ್ನೇಹ, ಜೊತೆಗಿನ ವೃತ್ತಿಜೀವನ, ನಂತರ ಬೇರೆಯಾದದ್ದು ಇತ್ಯಾದಿಗಳ ಮಾತು. ಜೊತೆಯಾಗಿ ಕೆಲಸ ಮಾಡದಿದ್ದರೂ, ಸ್ನೇಹಕ್ಕೆ ಕುಂದಿಲ್ಲದ ಭಾವ, ಮುಂದೆ ಇನ್ನೇನೋ ಇರಬಹುದೇನೋ ಎನ್ನುವ ನಿರೀಕ್ಷೆ ಹೀಗೆ, ಇದು ನೆನಪಾಗಲು ಕಾರಣ ಇಷ್ಟೇ. ಮೊನ್ನೆ ಬುಧವಾರ ಸತ್ಯಪ್ರಕಾಶ್ ನಿರ್ದೇಶನದ ‘ಎಕ್ಸ್ -ವೈ’ ಚಿತ್ರದ ಪ್ರದರ್ಶನವಿತ್ತು. ಸತ್ಯಪ್ರಕಾಶ್ ‘ರಾಮಾ ರಾಮ ರೇ’ ಮೂಲಕ ಚಿತ್ರರಸಿಕರಿಗೆ ಪರಿಚಯವಾದವರು. ‘ಒಂದಲ್ಲ, ಎರಡಲ್ಲ’, ‘ಮ್ಯಾನ್ ಆಫ್ ಮ್ಯಾಚ್’ಗಳ ಮೂಲಕ ತಾವು ಭಿನ್ನ ರೀತಿಯ ಕಥಾವಸ್ತು ನೀಡಬಲ್ಲೆ ಎನ್ನುವುದನ್ನು ಸಾಬೀತು ಮಾಡಿದವರು. ನಿರ್ದೇಶನದ ಜೊತೆಯಲ್ಲೇ ನಿರ್ಮಾಣ, ಹಂಚಿಕೆಗೂ ಕೈ ಹಾಕಿದರು. ಇದೀಗ ಅಭಿನಯಕ್ಕೂ.
ಮಾಮೂಲಿ ಜಾಡಿಗಿಂತ ಹೊರಗೆ ನಿಂತು ಚಿತ್ರ ನೀಡುವುದು ಕಷ್ಟ ಎನಿಸಿದ್ದರಿಂದ ಅವರು ನಿರ್ಮಾಣಕ್ಕೂ ಇಳಿದರು, ಹಂಚಿಕೆಯನ್ನೂ ಕೈಗೆತ್ತಿಕೊಂಡರು. ಗೆಳೆಯರ ಬಳಗ ಒತ್ತಾಸೆಯಾಗಿ ಅವರ ಬೆನ್ನ ಹಿಂದೆ ಇರುತ್ತದೆ. ಜನಪ್ರಿಯ, ತಾರಾವರ್ಚಸ್ಸಿನ ನಟರ ಚಿತ್ರಗಳ ಹೊರತಾಗಿ ಹೊಸಬರಿಗೆ, ಹೊಸ ಯೋಚನೆಗಳಿಗೆ ಕನ್ನಡ ಚಿತ್ರೋದ್ಯಮದಲ್ಲಿ ಉತ್ತೇಜನ ಕಡಿಮೆ. ಹಲವು ಪ್ರತಿಭೆಗಳು ಬಂಡವಾಳ ಹೂಡುವವರಿಗಾಗಿ ಕಾದಿವೆ.
ಒಂದು ವೇಳೆ ಬಂಡವಾಳ ಹೂಡುವ ನಿರ್ಮಾಪಕರು ಸಿಕ್ಕಿದರೂ, ವೃತ್ತಿಪರವಾಗಿ ನೆರವಾಗುವವರು ಕೆಲವರಿರಬಹುದು. ಉಳಿದವರಲ್ಲಿ ಹಲವರಿಗೆ ತಮ್ಮ ಶೋಕಿ, ಬಿಟ್ಟಿ ಪ್ರಚಾರಗಳತ್ತ ಹೆಚ್ಚಿನ ಗಮನ. ವೃತ್ತಿಪರ ನಿರ್ಮಾಪಕರಲ್ಲಿ ಸಾಕಷ್ಟು ಮಂದಿ ವಿದಾಯ ಹೇಳಿದ್ದಾರೆ.
ಹ್ಙಾಂ, ಮೊನ್ನೆ ಚಿತ್ರ ಪ್ರದರ್ಶನ ನಡೆದದ್ದು, ಬೆಂಗಳೂರಿನ ರಾಜಾಜಿನಗರದಲ್ಲಿನ ಜಿಟಿ ಮಾಲ್‌ನಲ್ಲಿ ಇರುವ ಮಲ್ಟಿಪ್ಲೆಕ್ಸ್‌ನಲ್ಲಿ. ಮಾಲ್‌ನ ಹೊರಗೆ ಕನ್ನಡ ಚಿತ್ರವೊಂದರ ಚಿತ್ರೀಕರಣ ನಡೆದಿತ್ತು. ಬೆಳಿಗ್ಗೆ ೯ ಗಂಟೆಗೇ ಆರಂಭವಾಗಿತ್ತು. ನಿರ್ಮಾಪಕ ಸೂರಪ್ಪ ಬಾಬು ಅವರಿಗಾಗಿ ನಾಗಣ್ಣ ನಿರ್ದೇಶಿಸುತ್ತಿರುವ ‘ಭಾರ್ಗವ’ ಚಿತ್ರದ ಚಿತ್ರೀಕರಣ. ಉಪೇಂದ್ರ ಶೀರ್ಷಿಕಾ ಪಾತ್ರಧಾರಿ. ಕಿರುತೆರೆಯಲ್ಲಿ ಹೆಸರಾಗಿ, ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೂಲಕ ಚಿತ್ರರಸಿಕರಿಗೆ ಪರಿಚಯವಾದ ಕನ್ನಡದ ಪ್ರತಿಭೆ ಅಂಕಿತಾ ಅಮರ್ ಅವರ ಜೋಡಿಯಾಗಿ ನಟಿಸುತ್ತಿದ್ದಾರೆ. ಮಾಲ್‌ಗಳಲ್ಲಿ ಚಿತ್ರೀಕರಣ ಸಾಮಾನ್ಯವಾಗಿ ಕಷ್ಟ, ದುಬಾರಿ ಕೂಡಾ. ಆದರೆ ಸೂರಪ್ಪ ಬಾಬು ಅವರ ಸ್ನೇಹವಲಯ ದೊಡ್ಡದೆನ್ನಿ. ಈ ದಿನಗಳಲ್ಲಿ ಪ್ರಚಾರದ ರೀತಿ ಬೇರೆ. ಹಾಗಾಗಿ ಇತರ ವಿವರಗಳು ಇಲ್ಲಿ ಬೇಡ.
ಉಪೇಂದ್ರ ಅವರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು. ಸಮಯಕ್ಕೆ ಸರಿಯಾಗಿ. ಹಾಗನ್ನಲು ಕಾರಣವಿದೆ. ಹಿಂದಿ ಚಿತ್ರರಂಗದಲ್ಲಿ ಜನಪ್ರಿಯ ನಟರು ಸೆಟ್ಟಿಗೆ ಬರುವುದೇ ೧೧ -೧೨ ಗಂಟೆಯ ಹೊತ್ತಿಗಂತೆ. ಬಂದು ಒಂದು ಚಿತ್ರದ ಚಿತ್ರೀಕರಣ ಆದರೆ ಆಯಿತು, ಆಗದಿದ್ದರೆ, ಊಟದ ನಂತರ. ಮೂರೂವರೆ ನಾಲ್ಕು ಗಂಟೆ ಆಗುತ್ತಿದ್ದಂತೆ ಹೊರಡುತ್ತಾರೆ ಇದು ಹಿಂದಿ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ನಿರ್ದೇಶಕರೊಬ್ಬರ ಅನುಭವ! ಅಷ್ಟೇ ಅಲ್ಲ ಅವರಲ್ಲಿ ಕೆಲವರು ಬರುವಾಗ ಮಾದಕ ದ್ರವ್ಯ ಸೇವಿಸಿ ಬರುತ್ತಾರೆ!
ನಿನ್ನೆ, ಜೂನ್ ೨೬ ಅಂತರರಾಷ್ಟ್ರೀಯ ಮಾದಕ ದ್ರವ್ಯ ವ್ಯಸನ ಮತ್ತು ಅಕ್ರಮ ಸಾಗಣೆ ವಿರೋಧಿ ದಿನ. ವಿಯೆನ್ನಾದಲ್ಲಿ ೧೯೮೭ರ ಡಿಸೆಂಬರ್ ೭ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾದಕ ವ್ಯಸನಿಗಳನ್ನು ಅದರಿಂದ ಮುಕ್ತರಾಗಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಚರ್ಚಿಸಿದ ನಂತರ ಈ ನಿರ್ಧಾರವನ್ನೂ ಮಾಡುತ್ತದೆ.
ಎಲ್ಲರಿಗಿಂತ ಮೊದಲು ಕಾರ್ಯೋನ್ಮುಖವಾಗುವ ಮಲಯಾಳ ಚಿತ್ರರಂಗ ನಿನ್ನೆ, ಜೂನ್ ೨೬ರಿಂದ ಒಂದು ನಿಯಮವನ್ನು ಜಾರಿಗೆ ತಂದಿದೆ. ಅದೆಂದರೆ, ಯಾವುದೇ ಚಿತ್ರದಲ್ಲಿ ಕೆಲಸ ಮಾಡುವ ಕಲಾವಿದರು, ತಂತ್ರಜ್ಞರು, ಕಾರ್ಮಿಕರು ‘ತಾವು ಮಾದಕ ವಸ್ತುಗಳನ್ನು ಸೇವನೆ ಮಾಡುವುದಿಲ್ಲ’ ಎನ್ನುವ ಪ್ರಮಾಣಪತ್ರವನ್ನು ಒಪ್ಪಂದದ ಜೊತೆ ನೀಡಬೇಕು. ಚಿತ್ರೀಕರಣದ ತಾಣದಲ್ಲಿ ಮಾತ್ರವಲ್ಲ, ಬೇರೆ ಜಾಗಗಳಲ್ಲಿ ವಾಸ್ತವ್ಯ ಹೂಡಲು ನಿರ್ಮಾಪಕರು ಒದಗಿಸುವ ಜಾಗಗಳಲ್ಲೂ ಕೂಡದು. ಇದು ಅಲ್ಲಿನ ನಿರ್ಮಾಪಕರ ಸಂಘ ತೆಗೆದುಕೊಂಡ ನಿರ್ಧಾರ. ಇದನ್ನು ತಮ್ಮ ಸದಸ್ಯರಿಗೆ ಮಾತ್ರವಲ್ಲದೆ, ಅಲ್ಲಿನ ಕಲಾವಿದರ ಸಂಘ ಮತ್ತು ಕಾರ್ಮಿಕರ ಒಕ್ಕೂಟಕ್ಕೆ ಪತ್ರ ಮುಖೇನ ತಿಳಿಸಿದೆ.
ಕೇರಳದಲ್ಲಿ ನಿರ್ಮಾಪಕರ ಸಂಘ ನಿರ್ಧಾರಗಳನ್ನು ತೆಗೆದುಕೊಳ್ಳುವುದರಲ್ಲಿ ಇತರ ಭಾಷೆಗಳಿಗೆ ಮಾದರಿ. ಅದು ಈಗ ಪ್ರತಿ ತಿಂಗಳು ಬಿಡುಗಡೆಯಾಗುವ ಮಲಯಾಳ ಚಿತ್ರಗಳ ಗಳಿಕೆಯ ವಿವರಗಳನ್ನು ತನ್ನ ಜಾಲತಾಣದಲ್ಲಿ ಹಾಕುತ್ತಿದೆ. ಇಲ್ಲಿನಂತೆ ಅಲ್ಲೂ ಚಿತ್ರಮಂದಿರಗಳಿಗೆ ಜನ ಬರುತ್ತಿಲ್ಲ, ಗಳಿಕೆ ಕಡಿಮೆ ಎನ್ನುವ ಮಾತುಗಳಿವೆ. ಒಂದು ವರ್ಗದ ನಿರ್ಮಾಪಕರು, ತಮ್ಮ ಗಳಿಕೆಯ ವಿವರ ಬಹಿರಂಗ ಆದರೆ ಬಂಡವಾಳ ಹೂಡುವವರು ಮುಂದೆ ಬರುವುದಿಲ್ಲ, ಹಾಗಾಗಿ ಇದು ಬೇಡ ಎನ್ನುತ್ತಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಇರುವ ಸಂಘಟನೆಗಳು ಈ ನಿಟ್ಟಿನಲ್ಲಿ ಸಾಕಷ್ಟು ಹಿಂದೆ ಇವೆ. ದೇಶದಲ್ಲೇ ತನ್ನದೇ ಆದ ಸ್ವಂತ ಕಟ್ಟಡ ಹೊಂದಿರುವುದು ಕರ್ನಾಟಕದ ನಿರ್ಮಾಪಕರ ಸಂಘ ಎನ್ನುವ ಹೆಗ್ಗಳಿಕೆ ಬಿಟ್ಟರೆ, ಅಲ್ಲಿ ಉದ್ಯಮಕ್ಕೆ ಸಂಬಂಧಪಟ್ಟ ಕೆಲಸಗಳು ಆಗುತ್ತಿರುವುದು ಕಡಿಮೆ. ಕಲಾವಿದರ ಸಂಘವೂ ಅಷ್ಟೇ ತನ್ನದೇ ಸ್ವಂತ ಕಟ್ಟಡ ಹೊಂದಿರುವ ದೇಶದ ಮೊದಲ ಕಲಾವಿದರ ಸಂಘ ಎನ್ನುವ ಗರಿಮೆ. ಕೇರಳದಲ್ಲಿ ಕಲಾವಿದರ ಸಂಘ ಸಕ್ರಿಯವಾಗಿದೆ.
ಸರ್ಕಾರವೂ ಉದ್ಯಮಕ್ಕೆ ಸಂಬಂಧಪಟ್ಟ ಎಲ್ಲ ಬೇಕು-ಬೇಡಗಳಿಗೂ ತಕ್ಷಣ ಸ್ಪಂದಿಸುತ್ತದೆ. ಚಿತ್ರರಂಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಅಲ್ಲಿ ಸಂಘಟಿತರಾಗಿ ತಮ್ಮ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತಂದಾಗ ಅದು ಹೇಮಾ ಕಮಿಶನ್ ನೇಮಕ ಮಾಡಿತು. ಅದರ ವರದಿ ಸಾಕಷ್ಟು ಅಲ್ಲೋಲ ಕಲ್ಲೋಲ ಮಾಡಿತೆನ್ನಿ. ಲೈಂಗಿಕ ಹಿಂಸೆಗೆ ಒಳಗಾದವರು ಗೌಪ್ಯವಾಗಿ ಅದನ್ನು ಕಮಿಷನ್ ಗಮನಕ್ಕೆ ತಂದಿದ್ದರು. ಆದರೆ ಈಗ ಅದರ ಮೇಲೆ ಕ್ರಮ ತೆಗೆದುಕೊಳ್ಳುವ ಹಂತದಲ್ಲಿ ಸಾಕಷ್ಟು ಮಂದಿ ಮುಂದೆ ಬರಲು ಹಿಂಜರಿಯುತ್ತಿದ್ದಾರೆ. ಇಲ್ಲಿ ಸರ್ಕಾರಕ್ಕೆ ಚಿತ್ರೋದ್ಯಮ ಆದ್ಯತೆ ಅಲ್ಲ. ಗ್ಯಾರಂಟಿಯಾಗಿ. ಗಮನಿಸಿ. ೨೦೧೯, ೨೦೨೦, ೨೦೨೧ರ ಸಾಲಿನ ಚಲನಚಿತ್ರ ಪ್ರಶಸ್ತಿ ಮತ್ತು ಸಹಾಯಧನ ನೀಡಲು ಚಿತ್ರಗಳ ವೀಕ್ಷಣೆ ಮುಗಿದಿದೆ.
ಪ್ರಶಸ್ತಿಗಳಲ್ಲಿ ಜೀವಮಾನ ಸಾಧನೆ, ಸಿನಿಮಾ ಕುರಿತ ಕೃತಿಗಳ ಆಯ್ಕೆ, ಕಿರು ಚಿತ್ರಗಳ ಆಯ್ಕೆಗೆ ಸಮಿತಿಗಳ ರಚನೆ ಆಗಿಲ್ಲ. ೨೦೧೮ರ ಸಾಲಿನ ಪ್ರಶಸ್ತಿ ಆಯ್ಕೆ ಆದರೂ ಅದರ ಪ್ರದಾನ ಆಗಿಲ್ಲ. ಮುಖ್ಯಮಂತ್ರಿಗಳೇ, ಸಿನಿಮಾ ಕ್ಷೇತ್ರವನ್ನೂ ಒಳಗೊಂಡ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರು. ಇಷ್ಟರಲ್ಲೇ ಪ್ರಶಸ್ತಿ ಪ್ರದಾನ ಸಮಾರಂಭ ಇದೆ ಎನ್ನುವ ಮಾತೂ ಕೇಳಿಬರುತ್ತಿದೆ. ಕಾದು ನೋಡೋಣ.
ಬಳ್ಳಾರಿ: ಹೊಸಪೇಟೆ ಹೊರವಲಯದಲ್ಲಿರುವ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಜಲಾಶಯದ ಮೇಲ್ಬಾಗದಲ್ಲಿ ಗೇಟ್ ಮುಂದೆ…
ಮೈಸೂರು: ಮದುವೆ ಆಗುವುದಾಗಿ ನಂಬಿಸಿ ಮಹಿಳಾ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ವಕೀಲ…
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನೊಟೀಸ್ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರತಿಕ್ರಿಯೆ…
ಎಚ್.ಡಿ.ಕೋಟೆ: ಬಸ್ ವ್ಯವಸ್ಥೆ ಇಲ್ಲದೇ ಶಾಲಾ ವಿದ್ಯಾರ್ಥಿಗಳು ಪರದಾಟ ನಡೆಸುತ್ತಿರುವ ಘಟನೆ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನಲ್ಲಿ ನಡೆದಿದೆ. ತಾಲ್ಲೂಕಿನ…
ಮಂಡ್ಯ: ವಿಸಿ ಫಾರ್ಮ್‌ನ ಕೃಷಿ ಮೇಳದ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶ್ರೀಗಳ ಸಮ್ಮುಖದಲ್ಲೇ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ.…
ಬೆಂಗಳೂರು: ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರದ ವೈಫಲ್ಯಗಳ ವಿರುದ್ಧ ಕಾಂಗ್ರೆಸ್ ಶಾಸಕರೇ ಅವಿಶ್ವಾಸ ನಿರ್ಣಯ ಮಂಡಿಸಿದರೂ ಅಚ್ಚರಿ ಇಲ್ಲ ಎಂದು…