ಹಕ್ಕಿಗಳು, ಮನುಷ್ಯರಿಲ್ಲದೆ ಬದುಕಬಲ್ಲವು ಆದರೆ, ಮನುಷ್ಯ ಹಕ್ಕಿಗಳಿಲ್ಲದೆ ಬದುಕಲಾರ ಎಂಬ ಕಟುಸತ್ಯವನ್ನು ಜಗತ್ತಿಗೆ ಸಾರಿದ್ದು ಭಾರತದ ಪಕ್ಷಿ ಪಿತಾಮಹ ಅಥವಾ ಹಕ್ಕಿ ಮನುಷ್ಯ ಸಲೀಂ ಅಲಿಯವರು. ಇವರು ಭಾರತ ಮತ್ತು ಅದರ ಉಪಖಂಡಗಳಲ್ಲಿ ಮಾಡಿದ ಹಕ್ಕಿಗಳ ಅಧ್ಯಯನ, ಅವುಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ಮಾಡಿದ ಕೊಡುಗೆ ಅಪಾರ.
ಸಲೀಂ ಅಲಿಯವರ ಮೂಲ ನಾಮ ಸಲೀಂ ಮೊಯಿಜಉದ್ದೀನ್ ಅಬ್ದುಲ್ ಅಲಿ. ಮುಂಬೈಯ ಮಧ್ಯಮ ವರ್ಗದ ಕುಟುಂಬದಲ್ಲಿ, ತಂದೆ ಮೊಯಿಜಉದ್ದೀನ್,ತಾಯಿ ಜೀನತ್ ಉನ್-ನ್ನಿಸಾ ಅವರ ೯ ನೆಯ ಹಾಗೂ ಕೊನೆಯ ಮಗುವಾಗಿ ನವೆಂಬರ್ ೧೨,೧೮೯೬ ರಂದು ಜನಿಸಿದರು. ಒಂದು ವರ್ಷದ ಎಳೆಯ ವಯಸಿನಲ್ಲಿ ತಂದೆಯನ್ನು, ಮೂರನೆಯ ವರ್ಷದಲ್ಲಿ ತಾಯಿಯನ್ನು ಕಳೆದುಕೊಂಡ ನತದೃಷ್ಟ ಸಲೀಂ ಅನಾಥರಾಗುತ್ತಾರೆ. ಹಾಗಾಗಿ, ತಬ್ಬಲಿ ಮಗುವಿನ ಲಾಲನೆ-ಪಾಲನೆಯ ಹೊಣೆ ಮಕ್ಕಳಿಲ್ಲದ ಸೋದರಮಾವ ಅಮರುದ್ದೀನ್ ತ್ಯಾಬ್ಜಿ ಮತ್ತು ಅತ್ತೆ ಹಮಿದ ಬೇಗಂ ವಹಿಸಿಕೊಳ್ಳುತ್ತಾರೆ.
ದಿನವುರುಳಿದಂತೆ, ಶಿಕಾರಿಯಲ್ಲಿ ಅಸಕ್ತಿಯಿದ್ದ ಇನ್ನೊಬ್ಬ ಸೋದರಮಾವನ ಜೊತೆಗೂಡಿ ಪುಟ್ಟ ಬಾಲಕ ಸಲೀಂ, ಶಿಕಾರಿಯನ್ನು ಆನಂದಿಸುತ್ತಾ ಶ್ರೇಷ್ಟ ಗುರಿಕಾರನಾಗಿದ್ದೂ ಉಂಟು. ಆದರೆ, ಬೇಟೆಯಾಡುವ ಮನಸ್ಸು ಪಕ್ಷಿಗಳ ಸಂರಕ್ಷಣೆಗೆ ಹೊರಳಿದ್ದು ಅತ್ಯಂತ ರೋಚಕ ಸಂಗತಿ.
ತುಂಟ ಪೋರ ಸಲೀಂ, ಹತ್ತು ವರ್ಷದವನಿದ್ದಾಗ ತನಗೆ ಸಿಕ್ಕ ಗಾಳಿ ಬಂದೂಕದಿಂದ ಗುಬ್ಬಚ್ಚಿ ಹೋಲುವ ಚಿಕ್ಕ ಹಕ್ಕಿಯನ್ನು ಹೊಡೆದುರುಳಿಸುತ್ತಾನೆ, ಮರು ಕ್ಷಣವೆ ಮನ ಕರಗಿ, ಸತ್ತ ಪಕ್ಷಿಯನ್ನು ತನ್ನ ಸೋದರಮಾವನ ಬಳಿ ಕೊಂಡೊಯುತ್ತಾನೆ. ಗುಬ್ಬಚ್ಚಿಯಂತೆ ಕಂಡರೂ ಹಳದಿ ಕೊರಳನ್ನು ಹೊಂದಿ ಕೊಂಚ ಬೇರೆ ರೀತಿಯ ಹಕ್ಕಿಯಂತೆ ಕಂಡದ್ದರಿಂದ ಸೋದರಮಾವ ಅದನ್ನು ಗುರುತಿಸಲಾಗದೆ, ಹಕ್ಕಿ ಮತ್ತು ಸಲಿಂ ರ ಜೊತೆ ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿಯ (ಬಿಎನ್‌ಎಚ್‌ಎಸ್ )ಸೆಕ್ರೆಟರಿ ಡಬ್ಲ್ಯೂ.ಎಸ್. ಮಲ್ಲಾರ್ಡ್‌ರ ಬಳಿ ಹೋಗುತ್ತಾರೆ. ಅದು, ಅಪರೂಪದ ಹಳದಿ ಕೊರಳಿನ ಗುಬ್ಬಚ್ಚಿ ಎಂದು ಗುರುತಿಸಿ, ಅತ್ಯಾನಂದದಿಂದ ನಿಬ್ಬೆರಗಾಗಿ ನಿಂತಿದ್ದ ಬಾಲಕ ಸಲೀಂನ ಕುತೂಹಲ ತಣಿಸಲು ವಸ್ತು ಸಂಗ್ರಹಾಲಯದಲ್ಲಿ ಇರುವ ಇತರ ಹಕ್ಕಿಗಳನ್ನು ತೋರಿಸುತ್ತಾರೆ. ಸತ್ತ ಹಕ್ಕಿಗಳಿಗೆ ಹುಲ್ಲು ತುಂಬಿಸಿ ಓರಣವಾಗಿ ಜೋಡಿಸಿಟ್ಟ ವೈವಿದ್ಯಮಯ ಪಕ್ಷಿಗಳಿಗೆ ಮಾರು ಹೋದ ಪುಟ್ಟ ಸಲೀಂ, ಅಂದಿನಿಂದ ಮತ್ತೆ-ಮತ್ತೆ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡಲು ಪ್ರಾರಂಭಿಸುವರು. ಇದು, ಬೇಟೆಗಾರ ಸಲೀಂ ಸಂರಕ್ಷಕನಾಗಿ ಪರಿವರ್ತನೆ ಹೊಂದಿದ ಸ್ವಾರಸ್ಯಕರ ಘಟನೆ.
ಯುವಕ ಸಲೀಂ ಅಲಿ ಮುಂದಿನ ವ್ಯಾಸಂಗ ಮಾಡಲು ಕಾಲೇಜಿಗೆ ದಾಖಲಾದರೂ ಕುಟುಂಬದ ಮರ-ಮುಟ್ಟು ವ್ಯಾಪಾರ ಮತ್ತು ಟಂಗಸ್ಟನ್ ಗಣಿಯ ವ್ಯವಹಾರದಲ್ಲಿ ನೆರವಾಗಲು ಬರ್ಮಾ ದೇಶಕ್ಕೆ ಹೋಗುವ ಸಂಧರ್ಭ ಒದಗಿಬರುತ್ತದೆ. ಆದರೆ ಅಲ್ಲಿಯೂ ಅವರ ಮನಸು, ಕೆಲಸ- ಕಾರ್ಯ ಗಳಿಗಿಂತ ಹೆಚ್ಚಾಗಿ ಅಲ್ಲಿನ ಕಾಡಿನಲ್ಲಿರುವ ಪಕ್ಷಿಗಳಿಗೆ ತುಡಿಯುತ್ತಿತ್ತು. ಮುಂಬೈಗೆ ವಾಪಸಾಗಿ ಪ್ರಾಣಿಶಾಸ್ತ್ರದಲ್ಲಿ ಪದವಿ ಪೂರೈಸುವ ಹೊತ್ತಿಗೆ ದೂರದ ಸಂಬಂದಿ ಜೇಮೀನ ಬೇಗಂ ಜೊತೆ ೧೯೧೮ ರಲ್ಲಿ ವಿವಾಹವಾಗುವುದು. ನಂತರ, Prince of Wales Museum, Mumbai (೧೯೨೬) ಬಿಎನ್‌ಎಚ್‌ಎಸ್ ವಸ್ತು ಸಂಗ್ರಹಾಲಯದಲ್ಲಿ ಗೈಡ್ ಕೆಲಸಕ್ಕೆ ಸೇರಿಕೊಂಡು ಅಲ್ಲಿ ಬರುವ ಸಂದರ್ಶಕರಿಗೆ, ಅಧ್ಯಯನಕಾರರಿಗೆ ಹುಲ್ಲು ತುಂಬಿಸಿದ, ಮೃತ ಹಕ್ಕಿಗಳ ವಿವರಣೆ ನೀಡುತ್ತಾ, ಅದರ ಸಂರಕ್ಷಣೆ ಮಾಡುವ ಕಾರ್ಯ ನಿರ್ವಹಿಸುತ್ತಾರೆ. ನೀಲಾಗಸದಲ್ಲಿ ಸ್ವಚ್ಚಂದವಾಗಿ ವಿಹರಿಸುವ ಬಾನಾಡಿಗಳ ಆಕರ್ಷಣೆ ಹೊಂದಿದ ಸಲೀಂರವರಿಗೆ ಈ ಕಾರ್ಯ ರುಚಿಸುವುದಿಲ್ಲ.
ಉನ್ನತ ವ್ಯಾಸಂಗದ ಅನಿವಾರ್ಯತೆಯ ಮನಗಂಡು ಸಲೀಂ ಅಲಿ ಜರ್ಮನಿ Berlin Natural History Museum ಹೋಗಿ ಪ್ರಖ್ಯಾತ ಪಕ್ಷಿ ತಜ್ಞ Prof Irwin Stressman ಬಳಿ ಅಧಿಕೃತವಾಗಿ ಪಕ್ಷಿಗಳ ಬಗ್ಗೆ ಆಳವಾದ ಅಧ್ಯಯನ ಮಾಡುತ್ತಾರೆ, ಮುಖ್ಯವಾಗಿ ವಲಸೆ ಹಕ್ಕಿಗಳ ಕಾಲಿಗೆ ಪಟ್ಟಿ(banding) ಕಟ್ಟುವ ಕಾರ್ಯದಲ್ಲಿ ನಿಷ್ಣಾತರಗುತ್ತಾರೆ. ಆದರೆ, ಇಷ್ಟು ವಿದ್ಯಾರ್ಹತೆ ಪಡೆದರೂ ಭಾರತಕ್ಕೆ ಮರಳಿ ಬಂದಾಗ ಮನ ಮೆಚ್ಚುವ ಕೆಲಸ ಸಿಗದೆ ನಿರಾಶರಾಗುವರು . ಜೀವನ ನಿರ್ವಹಣೆಗೆ ಬಿಎನ್‌ಎಚಎಸ್‌ನಲ್ಲಿ ಕೇವಲ ಗುಮಾಸ್ತನಾಗಿ ಕೆಲಸ ಪ್ರಾರಂಭಿಸುವರು ಹಾಗೆಯೇ ಅವರಿಗೆ ಸಿಕ್ಕ ಬಿಡುವಿನ ವೇಳೆಯಲ್ಲಿ ಮಡದಿಯ ಮುಂಬೈನ ಕಡಲ ತಡಿಯ ಊರಾದ ಕಿಹಿಮ್ ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಾ ಅಲ್ಲಿನ ಹಸಿರು, ಹಕ್ಕಿ, ಶಾಂತ ವಾತಾವರಣದಲ್ಲಿ ಕರಗಿಹೋಗುತ್ತಾರೆ. ಪಟ್ಟಣದ ಗದ್ದಲದಿಂದ ದೂರ ಪ್ರಶಾಂತ ಸ್ಥಳದಲ್ಲಿ ಪಕ್ಷಿಗಳನ್ನು ಗಮನಿಸುವಾಗ, ಗೀಜುಗನ ಹಕ್ಕಿಯ ಸಂತನಾಭಿವೃದ್ದಿ ಚಟುವಟಿಕೆ, ಸಂಗಾತಿಯ ಆಯ್ಕೆ ಇತ್ಯಾದಿಗಳ ಬಗ್ಗೆ ಆಳವಾಗಿ ಅಧ್ಯಯನ ಮಾಡಿ ತಮ್ಮ ಸಂಶೋಧನೆಯನ್ನು ವೈಜ್ಞಾನಿಕ ಪತ್ರಿಕೆಯಲ್ಲಿ ಪ್ರಕಟಿಸಿ ದೇಶದಲ್ಲೆಲ್ಲಾ ಮನ್ನಣೆ ಪಡೆಯುವರು. ಆನಂತರ ದೇಶದಲ್ಲೆಲ್ಲ ಸಂಚರಿಸಿ ಪಕ್ಷಿ ವೀಕ್ಷಣೆ ಮತ್ತು ಅಧ್ಯಯನ ನಡೆಸುತ್ತಾರೆ.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತವನ್ನು ಹಲವು ಪ್ರಾಂತ್ಯವಾರು ಆಳ್ವಿಕೆಗೆ ಒಳಪಟ್ಟಿದ್ದು ಅಲ್ಲಿನ ಪಕ್ಷಿ ಸಂಕುಲದ ಪಟ್ಟಿ ನಡೆದಿಲ್ಲ ಎಂಬುದನ್ನು ಅರಿತ ಸಲೀಂ ಅಲಿಯವರು ಬಿಎನ್‌ಎಚ್‌ಎಸ್ ವತಿಯಿಂದ ಅಲ್ಲಿನ ಹಕ್ಕಿಗಳ ಪಟ್ಟಿ ಮಾಡಲು ಪರವಾನಿಗೆ ಪಡೆಯುತ್ತಾರೆ. ದೇಶದ ಹಲವು ಪ್ರಾಂತ್ಯದಲ್ಲಿ ಅಲ್ಲಿನ ರಾಜರುಗಳ ಬಳಿ ಪಕ್ಷಿಗಳ ಅದ್ಯಯನ ನಡೆಸಲು ಅನುಮತಿ ಕೋರಿ ಬದಲಾಗಿ ವಸತಿ ಮತ್ತು ಸಾರಿಗೆ ವ್ಯವಸ್ಥೆ ಯನ್ನು ನೀಡಲು ವಿನಂತಿಸಿದರು. ಇದರ ಫಲವಾಗಿ ಎರಡು ದಶಕಗಳ ವರೆಗೆ ಹೈದರಾಬಾದ್, ಕೊಚ್ಚಿನ್, ತ್ರವನಕೋರ, ಇಂದೋರ್. ಗ್ವಾಲಿಯರ್, ಭೋಪಾಲ್, ಮೈಸೂರು ಮತ್ತು ಇತರ ರಾಜ್ಯದಲ್ಲಿ ಅಲೆಮಾರಿಯಂತೆ ದೇಶದ ಮೂಲೆ-ಮೂಲೆ ಅಡ್ಡಾಡಿ, ಎಲ್ಲ ಕಾಡು-ಮೇಡುಗಳ ಎಡತಾಕಿ ಹಕ್ಕಿಗಳ ಪಟ್ಟಿ ಸಿದ್ದಪಡಿಸಿದರು. ಮುಂಬೈಯಂತಹ ಪಟ್ಟಣದಲ್ಲಿ ಬೆಳೆದಂತಹ ಸಾಮಾನ್ಯರಿಗೆ ಈ ಪರ್ಯಟನೆ ದೊಡ್ಡ ಸವಾಲೇ ಆಗಿದ್ದರೂ ಇದು ಸಲೀಂ ಅಲಿಯವರ ಜೀವನದ ಅತ್ಯಂತ ಮಧುರ ಕ್ಷಣಗಳಾಗಿದ್ದವು.
ಸಲೀಂ ಅಲಿಯವರು ಕರ್ನಾಟಕ ಪಕ್ಷಿ ಸಂಕುಲಕ್ಕೆ ನೀಡಿದ ಕೊಡುಗೆ ಅಪರವಾದದ್ದು.
೧೯೩೯ ರಲ್ಲಿ ಮೈಸೂರಿನಲ್ಲಿ ಪಕ್ಷಿ ಸಮೀಕ್ಷೆ ನಡೆಸಿದ ಇವರು ಕಾವೇರಿ ತೀರದಲ್ಲಿ ಇರುವ ಪಕ್ಷಿ ವೈವಿಧ್ಯತೆ ಹಾಗೂ ನಡುಗಡ್ಡೆಗಳ ಪ್ರಾಮುಖ್ಯತೆ ಅರಿತರು. ನಂತರ ಮೈಸೂರಿನ ಒಡೆಯರ ಮನವೊಲಿಸಿ ಕಾವೇರಿ ನದಿಯಲ್ಲಿರುವ ಆರು ನಡುಗಡ್ಡೆಗಳನ್ನು ರಕ್ಷಿತ ಪ್ರದೇಶವೆಂದು ಘೋಷಿಸುವಲ್ಲಿ ಸಫಲರಾದರು. ೧೯೪೦ ರಲ್ಲಿ ರಂಗನತಿಟ್ಟು ಪ್ರದೇಶವನ್ನು ವನ್ಯಜೀವಿ ಸಂರಕ್ಷಿತ ಸ್ಥಳವೆಂದು ಗುರುತಿಸಲಾಯಿತು.
ಭಾರತದ ಪಕ್ಷಿ ವೈವಿಧ್ಯತೆ ಮತ್ತು ಅವುಗಳ ಆವಾಸ ಸ್ಥಾನದ ಅಧ್ಯಯನವನ್ನು ೧೯೪೧ ರಲ್ಲಿ The Book of Indian Birds ಎಂಬ ಪುಸ್ತಕ ರೂಪವಾಗಿ ಹೊರತಂದರು. ಇದು ಬಲು ಬೇಗ ಮಾರಾಟವಾಗಿ, ಹಲವು ವರ್ಷಗಳ ಕಾಲ ಅತ್ಯಂತ ಬೇಡಿಕೆಯಲ್ಲಿತ್ತು. ಇಂದಿಗೂ ಸಹ ಪಕ್ಷಿ ವೀಕ್ಷಣೆ ಆರಂಭಿಸುವವರೆಲ್ಲರಿಗೆ ಇದು ಉತ್ತಮ ಕೈಪಿಡಿ.
ತೆಳು ಕಾಯದ, ಹದ್ದಿನ ಕಣ್ಣು , ನೀಳ ಮೂಗಿನ, ಬೊಚ್ಚು ಬಾಯಿಯ, ನಿಷ್ಕಲ್ಮಶ ನಗುವಿನ ಸಲೀಂ ಅಲಿಯವರು ಎಷ್ಟೆಲ್ಲ ಕೀರ್ತಿ, ಗೌರವ, ಪ್ರಶಂಸೆಗೆ ಪಾತ್ರರಾದರೂ ಅವರ ಮನಸ್ಸು ಇನ್ನೂ ಹತ್ತು ವರ್ಷದ ಬಾಲಕನಷ್ಟೆ ಮುಗ್ಧವಾಗಿತ್ತು. ತಮ್ಮ ಇಳಿವಯಸ್ಸಿನಲ್ಲಿಯೂ ಅದೇ ಕುತೂಹಲ, ಉತ್ಸಾಹ, ಕಲಿಯುವ ತವಕ ಹೊರಸುತ್ತಿದ್ದರು, ಇವರ ಸಂಶೋಧನೆ ಕೇವಲ ಪಕ್ಷಿಸಂಕುಲಕ್ಕೆ ಮಾತ್ರ ಸೀಮಿತವಾಗದೆ ಪ್ರಕೃತಿಯನ್ನು ಸಂರಕ್ಷಿಸುವಲ್ಲಿಯೂ ಬಹುವಾಗಿ ಶ್ರಮಿಸುತ್ತಾರೆ. ಅವರ ಅತ್ಯಮೂಲ್ಯ ಕೊಡುಗೆಯ ಪ್ರತಿಫಲವಾಗಿ ಹಲವು ಅಂತರಾಷ್ಟ್ರೀಯ ಪುರಸ್ಕಾರಗಳು ಹರಿದುಬರುತ್ತವೆ. ಹಾಗೆಯೇ, ಭಾರತ ಸರ್ಕಾರ ಪದ್ಮ ಭೂಷಣ (೧೯೫೮) ಮತ್ತು ಪದ್ಮ ವಿಭೂಷಣ (೧೯೭೬) ದಂತಹ ಉತ್ಕೃಷ್ಟ ಪುರಸ್ಕರದೊಂದಿಗೆ ಸಲೀಂ ಅಲಿಯವರನ್ನು ಸಮ್ಮಾನಿಸುವುದು. ಒಮ್ಮೆ, ತಮಗೆ ಪ್ರಶಸ್ತಿಯಾಗಿ ದೊರೆತ ೫ ಲಕ್ಷ ರೂಪಾಯಿಗಳನ್ನು ಬಿಎನ್‌ಎಚ್‌ಎಸ್‌ಗೆ ಧಾರೆಯೆರೆಯುತ್ತಾರೆ ಎಂಬುದು ಉಲ್ಲೇಖನಿಯ.
ಪಕ್ಷಿ ಪ್ರಿಯರಿಗೆ ಅಪರಿಮಿತ ಉಡುಗೊರೆ ಕೊಟ್ಟು, ಮುಂದಿನ ಪೀಳಿಗೆಯವರಿಗೆ ಸ್ಪೂರ್ತಿ ನೀಡಿ ಆಶಾಕಿರಣವಾದ ಸರಳ, ಸಜ್ಜನಿಕೆಯ ಮೂರ್ತಿ ಸಲೀಂ ಅಲಿಯವರು ತಮ್ಮ ತೊಂಬತ್ತನೆಯ ಇಳಿ ವಯಸ್ಸಿನಲ್ಲಿ ಜೂನ್ ೨೦,೧೯೮೭ ರಂದು ಇಹಲೋಕದ ಯಾತ್ರೆ ಮುಗಿಸಿ ಅನಂತದಲ್ಲಿ ಲೀನವಾಗುತ್ತಾರೆ.
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ…
ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸಂತಾಪ ಸೂಚಿಸಿದ್ದು, ಕಂಬನಿ ಮಿಡಿದಿದ್ದಾರೆ. ಈ…
ಬೆಂಗಳೂರು: ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. ಈ ಬಗ್ಗೆ…
ಬೆಂಗಳೂರು: ತೀವ್ರ ಉಸಿರಾಟದ ಸಮಸ್ಯೆಯಿಂದ ವಿಧಿವಶರಾಗಿರುವ ಮಾಜಿ ಪ್ರಧಾನಿ ಮನ ಮೋಹನ್ ಸಿಂಗ್ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಂತಾಪ…
ಬೆಂಗಳೂರು: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ನಾಳೆ ರಾಜ್ಯಾದ್ಯಂತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಮಾಜಿ ಪ್ರಧಾನಿ…
ಬೆಂಗಳೂರು: ತೀವ್ರ ಉಸಿರಾಟದ ತೊಂದರೆಯಿಂದ ವಿಧಿವಶರಾಗಿರುವ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. ಈ…