ಎಡಿಟೋರಿಯಲ್

ಸಂಪಾದಕೀಯ: ದೇವರು ಕೊಟ್ಟರೂ ಪೂಜಾರಿ ಕೊಟ್ಟಿಲ್ಲ ಎಂಬಂತಾದ ಕೊಡಗು ಸಂತ್ರಸ್ತರ ಬದುಕು!

ಕೊಡಗಿನಲ್ಲಿ ಕಳೆದ ನಾಲ್ಕು ವರ್ಷಗಳ ಹಿಂದೆ ಮಹಾಮಳೆಗೆ ಎಲ್ಲವನ್ನು ಕಳೆದುಕೊಂಡ ಸಂತ್ರಸ್ತರ ಬದುಕು ಈಗ ದೇವರು ಕೊಟ್ಟರೂ ಪೂಜಾರಿ ಕೊಟ್ಟಿಲ್ಲ ಎಂಬಂತಾಗಿದೆ. ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದರೂ ಉದ್ಘಾಟನೆ ಹೆಸರಿನಲ್ಲಿ ದಿನವನ್ನು ಮುಂದೂಡಲಾಗುತ್ತಿದೆ. ಅದು ಕೂಡ ಒಂದೆರೆಡು ದಿನವಲ್ಲ. ಕಳೆದ ಎರಡು ತಿಂಗಳಿಂದ ಮುಖ್ಯಮಂತ್ರಿ, ಹಿರಿಯ ಸಚಿವರು ಬರುವ ದಿನಕ್ಕಾಗಿ ಉದ್ಘಾಟನಾ ದಿನವನ್ನು ಮುಂದೂಡಲಾಗುತ್ತಿದ್ದು, ವಿಳಂಬ ಧೋರಣೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಕೊಡಗು ಜಿಲ್ಲೆಯಲ್ಲಿ ೨೦೧೮ರಿಂದ ಸತತ ಮೂರು ವರ್ಷಗಳ ಕಾಲ ಪ್ರಕೃತಿ ವಿಕೋಪ ಸಂಭವಿಸಿದೆ. ಪ್ರಾಕೃತಿಕ ವಿಕೋಪದಿಂದ ಸಾವಿರಾರು ಮಂದಿ ಸಂತ್ರಸ್ತರಾಗಿದ್ದಾರೆ. ಅದರಲ್ಲೂ ೨೦೧೮ರಲ್ಲಿ ಮಡಿಕೇರಿ ತಾಲ್ಲೂಕಿನ ಹೆಮ್ಮೆತ್ತಾಳು, ಮೇಘತ್ತಾಳು, ಮಕ್ಕಂದೂರು, ಹೆಬ್ಬೆಟ್ಟಗೇರಿ, ಸೂರ್ಲಬ್ಬಿ ವ್ಯಾಪಿಯಲ್ಲಿ ಭಾರೀ ಪ್ರಮಾಣದ ಭೂಕುಸಿತ ಉಂಟಾಗಿತ್ತು. ಇಲ್ಲಿನ ಎಲ್ಲಾ ಸಂತ್ರಸ್ತರಿಗೆ ಸೂರು ಕಲ್ಪಿಸಲು ಇನ್ನೂ ಸಾಧ್ಯವಾಗಿಲ್ಲ.

೨೦೧೮ರಲ್ಲಿ ಮನೆ ಕಳೆದುಕೊಂಡ ೮೪೦ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ಅಂದಿನ ಸರ್ಕಾರ ನಿರ್ಧರಿಸಿತ್ತು. ಅದರಂತೆ ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಲಾಗಿದ್ದು, ೪೬೩ ಮನೆಗಳನ್ನು ಹಸ್ತಾಂತರಿಸಲಾಗಿದೆ. ಮಾದಾಪುರ ಸಮೀಪದ ಜಂಬೂರು, ಮಡಿಕೇರಿ ಸಮೀಪದ ಕರ್ಣಂಗೇರಿ ಹಾಗೂ ಗೋಳಿಕಟ್ಟೆಯ ಮನೆಗಳು ಹಸ್ತಾಂತರವಾಗಿದ್ದು, ಸಂತ್ರಸ್ತರು ನೂತನ ಮನೆಗಳಲ್ಲಿ ವಾಸವಾಗಿದ್ದಾರೆ.
ಮಡಿಕೇರಿ ಸಮೀಪದ ಕೆ.ನಿಡುಗಣೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆರ್‌ಟಿಓ ಕಚೇರಿ ಬಳಿ ಸಂತ್ರಸ್ತರಿಗಾಗಿ ೭೦ ಮನೆಗಳ ನಿರ್ಮಿಸಲಾಗಿದೆ. ೬ ತಿಂಗಳ ಹಿಂದೆಯೇ ಲಾಟರಿ ಮೂಲಕ ಮನೆಗಳ ಹಂಚಿಕೆ ಕಾರ್ಯ ಕೂಡ ಮುಗಿದಿದೆ. ಆದರೆ, ಮನೆಗಳ ಹಸ್ತಾಂತರ ಕಾರ್ಯ ಆಗಿಲ್ಲ. ಅಧಿಕಾರಿಗಳು ಕಾಮಗಾರಿ ಮುಗಿದಿಲ್ಲ ಹೀಗಾಗಿ ಮನೆ ಹಸ್ತಾಂತರ ಮಾಡಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ, ಕಾಮಗಾರಿ ಪೂರ್ಣಗೊಂಡಿದೆ ಎಂದು ಇಲ್ಲಿ ಕೆಲಸ ನಿರ್ವಹಿಸುತ್ತಿರುವವರು ಹೇಳುತ್ತಿದ್ದಾರೆ ಎಂದು ಸಂತ್ರಸ್ತರು ಅಸಮಾಧಾನ ಹೊರಹಾಕಿದ್ದಾರೆ.

ಇಲ್ಲಿನ ಬಹುತೇಕ ಎಲ್ಲಾ ಸಂತ್ರಸ್ತರೂ ಬಡವರಾಗಿದ್ದು, ಕೂಲಿ ನಾಲಿ ಮಾಡಿ ಬದುಕುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಇರುವ ಮನೆಯನ್ನೂ ಕಳೆದುಕೊಂಡು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ದುಡಿದ ಅರ್ಧದಷ್ಟು ಹಣವನ್ನು ಮಡಿಕೇರಿ ನಗರದಲ್ಲಿ ಮಾಡಿಕೊಂಡಿರುವ ಬಾಡಿಗೆ ಮನೆಗಾಗಿ ವ್ಯಯಿಸಬೇಕಾಗಿದೆ. ಇಲ್ಲಿಯವರೆಗೆ ಮನೆ ನಿರ್ಮಾಣವಾಗಿಲ್ಲ ಎಂದು ಸಂಕಷ್ಟದಲ್ಲೇ ದಿನದೂಡುತ್ತಿದ್ದ ಸಂತ್ರಸ್ತರು, ಈಗ ಮನೆ ನಿರ್ಮಾಣಗೊಂಡಿದ್ದರೂ ಹಸ್ತಾಂತರ ಮಾಡದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಮನೆ ಉದ್ಘಾಟನಾ ಕಾರ್ಯಕ್ರಮಕ್ಕೆ ದಿನ ನಿಗಧಿಯಾಗಿಲ್ಲ. ಉದ್ಘಾಟನಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಅಥವಾ ಹಿರಿಯ ಸಚಿವರನ್ನು ಕರೆಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಸೂಕ್ತ ದಿನ ನಿಗದಿಯಾಗದಿರುವುದಕ್ಕೆ ಕಳೆದ ೨ ತಿಂಗಳಿನಿಂದ ಕಾಮಗಾರಿ ಪೂರ್ಣಗೊಂಡರೂ ತಮಗೆ ಇದೇ ಮನೆ ಎಂದು ತಿಳಿದಿದ್ದರೂ ಮನೆ ಸೇರಲು ಸಂತ್ರಸ್ತರಿಗೆ ಸಾಧ್ಯವಾಗುತ್ತಿಲ್ಲ. ದುಡಿದ ಹಣವನ್ನು ಬಾಡಿಗೆ ನೀಡುತ್ತಿರುವ ಸಂತ್ರಸ್ತರ ತಾಳ್ಮೆಯ ಕಟ್ಟೆ ಒಡೆಯಲಾರಂಭಿಸಿದ್ದು, ಶೀಘ್ರದಲ್ಲೇ ಮನೆ ಹಸ್ತಾಂತರ ಮಾಡದಿದ್ದಲ್ಲಿ ಉದ್ಘಾಟನೆಗೂ ಮುನ್ನ ನಮ್ಮ ಮನೆಗೆ ನಾವೇ ಸೇರುವುದಾಗಿ ಎಚ್ಚರಿಸಿದ್ದಾರೆ.

ಇದು ಆಡಳಿತ ವ್ಯವಸ್ಥೆಯೇ ತಲೆತಗ್ಗಿಸುವ ವಿಚಾರ ಎಂದರೂ ತಪ್ಪಾಗಲಾರದು. ತಾವು ಹುಟ್ಟಿ ಬೆಳೆದು ಬದುಕಿದ ಮನೆಯ ಜೊತೆಗೆ ದುಡಿದು ಕೂಡಿಟ್ಟ ಎಲ್ಲಾ ಸಾಮಾಗ್ರಿಗಳನ್ನು ಕಳೆದುಕೊಂಡರೂ ಮತ್ತೆ ಬದುಕಬೇಕೆಂಬ ಛಲದೊಂದಿಗೆ ಸಂತ್ರಸ್ತರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರಿಗೆ ಸೂಕ್ತ ಸೂರು ಕೊಡುವುದಾಗಿ ಹೇಳಿದ್ದ ಸರ್ಕಾರ ನಾಲ್ಕು ವರ್ಷ ಕಳೆದರೂ ಇನ್ನು ಮನೆ ನೀಡಿಲ್ಲ. ಸಿದ್ಧವಾದ ಮನೆ ನೀಡಲೂ ಮುಖ್ಯಮಂತ್ರಿ ಬರಬೇಕು, ಅಥವಾ ಹಿರಿಯ ಸಚಿವರೇ ಬರಬೇಕು, ಅಲ್ಲಿಯವರೆಗೆ ಮನೆ ನೀಡುವುದಿಲ್ಲ ಎನ್ನುವ ಆಡಳಿತವ ವ್ಯವಸ್ಥೆಯ ದೋರಣೆ ಎಷ್ಟರಮಟ್ಟಿಗೆ ಸರಿ?

ಸಂತ್ರಸ್ತರು ಕೂಡ ಸ್ವಾಭಿಮಾನಿಗಳು ಎಂಬುವುದನ್ನು ಸರ್ಕಾರ ಮರೆಯಬಾರದು. ಮನೆ ನೀಡಬೇಕಾಗಿರುವುದು ಸರ್ಕಾರದ ಕರ್ತವ್ಯವೂ ಹೌದು, ಮನೆ ಪಡೆಯಬೇಕಾಗಿರುವುದು ಸಂತ್ರಸ್ತರ ಹಕ್ಕು ಕೂಡ ಹೌದು. ಹೀಗಾಗಿ ಹೀಗಾಗಲೇ ಸಿದ್ಧವಾಗಿರುವ ಮನೆಗಳನ್ನು ಸಂತ್ರಸ್ತರಿಗೆ ಶೀಘ್ರದಲ್ಲೇ ಹಸ್ತಾಂತರ ಮಾಡುವ ಕೆಲಸವನ್ನು ಸರ್ಕಾರ ಮಾಡಬೇಕು. ಇಲ್ಲದಿದ್ದಲ್ಲಿ ಸೂರಿಗಾಗಿ ಕಾದು ಬಸವಳಿದು ಈಗ ತಾವಾಗಿಯೇ ತಮ್ಮ ಮನೆ ಸೇರಲು ನಿರ್ಧರಿಸಿರುವ ಸಂತ್ರಸ್ತರಿಗೆ ಅವಕಾಶ ಕಲ್ಪಿಸಬೇಕು. ಜನಪ್ರತಿನಿಧಿಗಳು ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾಡುವ ಉದ್ಘಾಟನಾ ಸಮಾರಂಭವನ್ನು ಯಾವಾಗ ಬೇಕಾದರೂ ಮಾಡಬಹುದು. ಅದಕ್ಕಾಗಿ ಈಗಾಗಲೇ ನೊಂದು ಬೆಂದಿರುವ ಸಂತ್ರಸ್ತರಿಗೆ ಮತ್ತೆ ನೋಯಿಸುವ ಕೆಲಸ ಮಾಡಬಾರದು.

andolana

Recent Posts

ಇಂದು ಮುನಿರತ್ನ ಜಾಮೀನು ಅರ್ಜಿ ಆದೇಶ

ಬೆಂಗಳೂರು: ಪರಿಶಿಷ್ಟ ಜಾತಿ ನಿಂದನೆ ಹಾಗೂ ಮಹಿಳೆಯರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ ಆರೋಪದಡಿ ನ್ಯಾಯಾಂಗ ಬಂಧನಲ್ಲಿರುವ ಬಿಜೆಪಿ ಶಾಸಕ ಮುನಿರತ್ನ…

3 mins ago

ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಗೆ ಸ್ವಾಗತ, ಮೋದಿಯವರ ಭಯದಿಂದ ಈ ಕ್ರಮ ವಿರೋಧಿಸುತ್ತಿರುವ ಕಾಂಗ್ರೆಸ್‌: ಆರ್‌.ಅಶೋಕ

ರಾಹುಲ್‌ ಗಾಂಧಿಯವರಿಗೆ ಪ್ರಬುದ್ಧತೆ ಇಲ್ಲ, ಮಕ್ಕಳಂತೆ ಆಟವಾಡುತ್ತಾರೆ ಬೆಂಗಳೂರು: ಒಂದು ದೇಶ, ಒಂದು ಚುನಾವಣೆ ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ…

7 hours ago

ರೀಲ್ಸ್‌ ಪ್ರಿಯರಿಗೆ ಭರ್ಜರಿ ಆಫರ್:‌ ರೀಲ್ಸ್ ಟ್ಯಾಗ್ ಮಾಡಿ ಬಹುಮಾನ ಗೆಲ್ಲಿ

ಮೈಸೂರು: ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಧ್ಯೇಯ ವಾಕ್ಯದೊಂದಿಗೆ ಸೆಪ್ಟೆಂಬರ್‌ ಸೆ. 27 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರು…

7 hours ago

ʻಕಾಟೇರʼನಿಗೆ ಕೋಳ ಬಿದ್ದು 100 ದಿನ: ಇಲ್ಲಿಯವರೆಗೆ ಏನೆಲ್ಲ ಆಯ್ತು? ಇಲ್ಲಿದೆ ಕಂಪ್ಲಿಟ್‌ ಡೀಟೆಲ್ಸ್…‌

ಮೈಸೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜೈಲು ಸೇರಿ ಇಂದಿಗೆ ಬರೊಬ್ಬರಿ 100 ದಿನ…

8 hours ago

ಕೃಷಿ ತಂತ್ರಜ್ಞಾನ ವರ್ಗಾವಣೆ ರಾಜ್ಯ ಸರ್ಕಾರದ ಆದ್ಯತೆ: ಎನ್ ಚಲುವರಾಯಸ್ವಾಮಿ

ಬೆಂಗಳೂರು: ಭೂಸಾರ ಹಾಗೂ ಇ ಸ್ಯಾಪ್ ಆ್ಯಪ್ ಗಳು ಕೃಷಿ ಉತ್ಪಾದನೆ ಹೆಚ್ಚಿಸುವಲ್ಲಿ ಪರಿಣಕಾರಿಯಾಗಿ ನೆರವಾಗಲಿವೆ .ಇದೇ ರೀತಿ ರೈತರಿಗೆ…

8 hours ago

ದಸರಾ ಚಲನಚಿತ್ರೋತ್ಸವ: ಕಿರುಚಿತ್ರ ಪ್ರದರ್ಶನ

ಮೈಸೂರು: ದಸರಾ ಚಲನಚಿತ್ರೋತ್ಸವ 2024 ರ ಅಂಗವಾಗಿ ಅಂತಿಮವಾಗಿ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳಲು ಕಿರುಚಿತ್ರ ಸ್ಪರ್ಧೆಯಲ್ಲಿ ಆಯ್ಕೆಯಾಗಿರುತ್ತವೆ. ಅಭಿಜಿತ್ ಪುರೋಹಿತ್ ನಿರ್ದೇಶನದ…

8 hours ago