ಎಡಿಟೋರಿಯಲ್

ಡಾ. ಬಾಂಗ್ ದಂಪತಿಗಳೆಂಬ ಬುಡಕಟ್ಟು ಸಮುದಾಯದ ಡಾಕ್ಟರ್ ಜೋಡಿ ‌

೪೦ ವರ್ಷಗಳ ಹಿಂದೆ ಡಾ. ಅಭಯ್ ಬಾಂಗ್ ಮತ್ತು ಡಾ. ರಾಣಿ ಬಾಂಗ್ ಅಮೆರಿಕದ ಜಾನ್ಸ್ ಹಾಪ್ಕಿನ್ಸ್ ವೈದ್ಯಕೀಯ ಸಂಸ್ಥೆಯಲ್ಲಿ ಶಿಕ್ಷಣ ಮುಗಿಸಿ ಹೊರ ಬಂದಾಗ ಅವರೆದುರು ಹೇರಳ ಹಣ ಮಾಡುವ ಅವಕಾಶಗಳ ಒಂದು ಬೃಹತ್ ಸಮುದ್ರವೇ ನಿಂತಿತ್ತು. ಆದರೆ, ಬಾಂಗ್ ದಂಪತಿಗಳು ಆ ಅವಕಾಶಗಳನ್ನೆಲ್ಲ ಧಿಕ್ಕರಿಸಿ ನಡೆದದ್ದು ಮಹಾರಾಷ್ಟ್ರದ ಗಡ್ಚಿರೋಲಿ ಎಂಬ ಒಂದು ಬಡ ಬುಡಕಟ್ಟು ವಾಸಿಸುವ ಪ್ರದೇಶಕ್ಕೆ.

ಗಡ್ಚಿರೋಲಿ ಭಾರತದ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲೊಂದು. ತನ್ನ ಈ ಹಿಂದುಳಿದಿರುವಿಕೆಯ ಕಾರಣಕ್ಕಾಗಿಯೇ ಈ ಪ್ರದೇಶ ನಕ್ಸಲ್ ಚಳವಳಿಗೆ ಹೆಸರಾದುದು. ತಮ್ಮ ಶಿಕ್ಷಣ ಹಾಗೂ ಸಂಶೋಧನೆಗಳ ಫಲ ಸಿಗಬೇಕಾದುದು ತಮಗಿಂತಲೂ ಹೆಚ್ಚಾಗಿ ಇಂತಹ ಪ್ರದೇಶಗಳಲ್ಲಿ ವಾಸಿಸುವ ಬಡಪಾಯಿಗಳಿಗೆ ಎಂಬುದು ಡಾ. ಬಾಂಗ್ ದಂಪತಿಗಳ ಆ ನಿರ್ಧಾರದ ಹಿಂದಿನ ಕಾರಣವಾಗಿತ್ತು.

ಅಭಯ್ ಬಾಂಗ್ ಮಹಾರಾಷ್ಟ್ರದ ವಾರ್ಧಾ ಎಂಬಲ್ಲಿ ೧೯೫೦ರಲ್ಲಿ ಜನಿಸಿದರು. ಅವರ ತಂದೆ ಠಾಕೂರ್ ದಾಸ್ ಬಾಂಗ್ ಮತ್ತು ತಾಯಿ ಸುಮನಾ ಬಾಂಗ್. ಅವರಿಬ್ಬರೂ ಗಾಂಧಿಜಿಯ ಸರ್ವೋದಯ ಚಳವಳಿಯಿಂದ ಸ್ಛೂರ್ತಿಗೊಂಡವರು. ಠಾಕೂರ್ ದಾಸ್ ಯುವ ಆರ್ಥಿಕ ತಜ್ಞರಾಗಿದ್ದಾಗ ತನ್ನ ಪಿಎಚ್. ಡಿ. ಅಧ್ಯಯನಕ್ಕಾಗಿ ಅಮೆರಿಕಾಕ್ಕೆ ಹೋಗಲು ನಿರ್ಧರಿಸಿ, ಗಾಂಧಿಜಿಯ ಆಶೀರ್ವಾದ ಪಡೆಯಲು ಅವರ ಆಶ್ರಮಕ್ಕೆ ಹೋದರು. ಆಗ ಗಾಂಧಿಜಿ ನೀನು ನಿಜಕ್ಕೂ ಆರ್ಥಿಕತೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲು ಇಚ್ಛಿಸುವುದು ಹೌದೇ ಆದರೆ ಭಾರತದ ಹಳ್ಳಿಗಳಿಗೆ ಹೋಗು ಅಂದರು. ಆಗ ಠಾಕೂರ್ ದಾಸ್ ತನ್ನ ಅಮೆರಿಕ ಪ್ರಯಾಣ ರದ್ದು ಮಾಡಿ ಭಾರತದಲ್ಲೇ ಉಳಿದರು.

ಅಭಯ್ ಬಾಂಗ್ ಕೂಡ ತನ್ನ ಬಾಲ್ಯವನ್ನು ವಿವೋಬಾ ಭಾವೆ ಜೊತೆಯಲ್ಲಿ ವಾರ್ಧಾದ ಗಾಂಧಿ ಆಶ್ರಮದಲ್ಲೆ ಕಳೆದರು. ಒಂಬತ್ತನೇ ತರಗತಿ ತನಕ ಅವರು ‘ನಯ್ ತಾಲೀಮ್’ ಎಂಬ ಗಾಂಽ ರಚಿತ ಶಿಕ್ಷಣವನ್ನು ಪಡೆದು, ತನ್ನ ೧೩ನೇ ಪ್ರಾಯದಲ್ಲಿ ಹಳ್ಳಿಗರ ಆರೋಗ್ಯಕ್ಕಾಗಿ ಕೆಲಸ ಮಾಡಲು ನಿರ್ಧರಿಸಿದರು. ರಾಣಿ ಚಾರಿ ಮಹಾರಾಷ್ಟ್ರದ ಚಂದ್ರಾಪುರದಲ್ಲಿ ೧೯೫೧ರಲ್ಲಿ ಜನಿಸಿದರು. ಅವರದ್ದು ವೈದ್ಯಕೀಯ ಹಾಗೂ ಸಮಾಜ ಸೇವಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಒಂದು ಕುಟುಂಬವಾಗಿತ್ತು. ಡಾಕ್ಟರಾಗಿದ್ದ ಅವರ ಅಜ್ಜ ಚಂದ್ರಾಪುರ ಕ್ಷೇತ್ರದ ಲೋಕಸಭಾ ಕ್ಷೇತ್ರದ ಸದಸ್ಯರಾಗಿದ್ದರು.

ಅಭಯ್ ಮತ್ತು ರಾಣಿ ಇಬ್ಬರೂ ನಾಗಪುರದ ಗವರ್ನ್ಮೆಂಟ್ ಮೆಡಿಕಲ್ ಕಾಲೇಜಿನಲ್ಲಿ ೧೯೭೨ರಲ್ಲಿ ಎಂಬಿಬಿಎಸ್ ಪದವಿ ಗಳಿಸಿದರು. ಅಭಯ್ ಸಿಂಗ್ ಎಂಬಿಬಿಎಸ್ ಪರೀಕ್ಷೆಯಲ್ಲಿ ಮೊದಲಿಗರಾಗಿ ಬಂದು ಮೂರು ಚಿನ್ನದ ಪದಕಗಳನ್ನು ಗಳಿಸಿದರು. ಮುಂದೆ, ಎಂಡಿ ಪರೀಕ್ಷೆಯಲ್ಲೂ ಮೊದಲಿಗರಾಗಿ ಬಂದರು. ರಾಣಿ ಆಬ್ಸೆ ಟ್ರಿಕ್ಸ್ ಮತ್ತು ಗೈನಾಕಾಲಾಜಿಯಲ್ಲಿ ಚಿನ್ನದ ಪದಕದೊಂದಿಗೆ ಮೊದಲಿಗರಾಗಿ ಪಾಸು ಮಾಡಿದರು. ಮುಂದೆ, ಇಬ್ಬರೂ ಎಂಡಿ ಪದವಿ ಗಳಿಸಿ, ೧೯೭೭ರಲ್ಲಿ ಮದುವೆಯಾದರು. ನಂತರ, ಇಬ್ಬರೂ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಮಾಸ್ಟರ‍್ಸ್ ಮಾಡಿದರು.

ಮಾಡಿಯಾ ಎಂಬುದು ಗಡ್ಚಿರೋಲಿಯಲ್ಲಿ ವಾಸಿಸುವ ಒಂದು ಅತ್ಯಂತ ಹಿಂದುಳಿದ ಆದಿವಾಸಿ ಸಮುದಾಯ. ಈ ಸಮುದಾಯದಲ್ಲಿ ಮುಟ್ಟಾದ ಹೆಂಗಸರು ನಾಲ್ಕು ದಿನಗಳ ಕಾಲ ಮನೆಯಿಂದ ಹೊರಗೆ ಅವರಿಗಾಗಿಯೇ ರಚಿಸಲ್ಪಟ್ಟ ‘ಕುರ್ಮಾ ಘರ್’ ಎಂಬ ‘ಮುಟ್ಟಿನ ಮನೆ’ಗಳಲ್ಲಿ ವಾಸಿಸುವುದು ತಲೆತಲಾಂತರಗಳಿಂದ ನಡೆದು ಬಂದ ಸಂಪ್ರದಾಯ. ಈ ಕುರ್ಮಾ ಘರ್‌ಗಳು ಮಣ್ಣಿನ ಗೋಡೆ, ಬಿದಿರು ಹಾಗೂ ಸೋಗೆಗಳಿಂದ ಮಾಡಲ್ಪಟ್ಟ ಹರುಕು ಮುರುಕು ಗುಡಿಸಲುಗಳು. ಇವು ಮಳೆಯನ್ನಾಗಲೀ, ಚಳಿಯನ್ನಾಗಲೀ ತಡೆಯುವಷ್ಟು ಗಟ್ಟಿಯಾದುವಲ್ಲ. ಹಾವು, ಚೇಳು, ಹುಳ ಹಪ್ಪಟೆಗಳು ಮಾತ್ರವಲ್ಲ ನಾಯಿ, ಹಂದಿಗಳೂ ಸುಲಭದಲ್ಲಿ ಇವುಗಳೊಳಗೆ ನುಸುಳ ಬಲ್ಲವು. ಮುಟ್ಟಿನ ಸ್ರಾವ ತಡೆಯಲು ಆ ಮಹಿಳೆಯರು ಬಳಸುವ ವಸ್ತುಗಳು ಇನ್ನೂ ಗಾಬರಿ ಹುಟ್ಟಿಸುವಂತಹವು. ಕೆಲವರು ಚಿಂದಿ ಬಟ್ಟೆಗಳನ್ನು ಬಳಸಿದರೆ ಇನ್ನು ಕೆಲವರು ಕಾಡು ಗಿಡಗಳ ದೊಡ್ಡ ಗಾತ್ರದ ಎಲೆ, ಬೂದಿ, ಮಣ್ಣು ಮೊದಲಾದವುಗಳನ್ನು ಉಪಯೋಗಿಸುತ್ತಿದ್ದರು. ಇವುಗಳು ಮುಂದೆ ಏನೇನೋ ಸೋಂಕುಗಳಿಗೆ ದಾರಿ ಮಾಡಿ ಕೊಟ್ಟು ಮಹಿಳೆಯರ ಸಾವಿಗೂ ಕಾರಣವಾಗುವಂತಹ ಅಪಾಯಕಾರಿ ಕ್ರಮಗಳು.

ಮುಟ್ಟಾದ ಮಹಿಳೆ ೩-೪ ದಿನಗಳ ಕಾಲ ಈ ಕುರ್ಮಾ ಘರ್ ಒಳಗೇ ಇದ್ದು ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳಬೇಕು. ಇಲ್ಲ, ಮನೆಯ ಸದಸ್ಯರು ತಯಾರಿಸಿದ ಆಹಾರವನ್ನು ತಂದು ಗುಡಿಸಲ ಹೊರಗೆ ಇಟ್ಟು ಹೋಗಬೇಕು. ಮುಟ್ಟಿನ ಮೂರು-ನಾಲ್ಕು ದಿನಗಳ ಕಾಲ ಅವಳನ್ನು ಬೇರಾರೂ ಮುಟ್ಟುವಂತಿಲ್ಲ. ಹಾಗೇನಾದರೂ ಅವರನ್ನು ಯಾರಾದರೂ ಮುಟ್ಟಿದರೆ ಗ್ರಾಮ ದೇವತೆಯ ಮುನಿಸಿಗೆ ಗುರಿಯಾಗುತ್ತಾರೆ ಎಂಬುದು ಆ ಜನಗಳ ನಂಬಿಕೆ. ೧೯೮೫ರಲ್ಲಿ ಇಂತಹದೇ ಒಂದು ಕುರ್ಮಾ ಘರ್‌ನಲ್ಲಿ, ಹೊಸದಾಗಿ ಮದುವೆಯಾಗಿದ್ದ ೧೮ ವರ್ಷ ಪ್ರಾಯದ ಒಬ್ಬಳು ಮಹಿಳೆ ನಾಗರ ಹಾವು ಕಚ್ಚಿ ಸತ್ತ ಸುದ್ದಿ ಬಾಂಗ್ ದಂಪತಿಗಳಿಗೆ ತಿಳಿಯಿತು. ಅವರು ವಿಚಾರಿಸಿದಾಗ, ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಆಂಟಿ-ವೆನಮ್ ಇಂಜೆಕ್ಷನ್ ಲಭ್ಯವಿದ್ದರೂ ಆ ಮಹಿಳೆ ಮುಟ್ಟಾಗಿರುವುದರಿಂದ ಯಾರೂ ಅವಳನ್ನು ಮುಟ್ಟಲು ಧೈರ್ಯ ತೋರದ್ದರಿಂದ ಅವಳಿಗೆ ಸಕಾಲದಲ್ಲಿ ಆಂಟಿ-ವೆನಮ್ ಇಂಜೆಕ್ಷನ್ ಸಿಗದೆ ಅವಳ ಸಾವು ಸಂಭವಿಸಿತು ಎಂಬ ಆಘಾತಕಾರಿ ಸಂಗತಿ ತಿಳಿದು ಬಂದಿತು.

ಆದಿವಾಸಿ ಸಮುದಾಯಕ್ಕೆ ಸೇರಿದವರು ತಮ್ಮ ಧಾರ್ಮಿಕ ನಂಬಿಕೆಗಳನ್ನು ಎಷ್ಟು ಬಲವಾಗಿ ರಕ್ಷಿಸಿಕೊಳ್ಳುತ್ತಾರೆ ಎಂದು ತಿಳಿದಿದ್ದ ಬಾಂಗ್ ದಂಪತಿಗಳು ಕುರ್ಮಾ ಘರ್ ಪದ್ಧತಿಯ ನಿವಾರಣೆಗೆ ಮುಂದಾಗದೆ ಅವುಗಳನ್ನೇ ಆಧುನಿಕಗೊಳಿಸುವ ಯೋಜನೆ ಹಾಕಿದರು! ಅದರಂತೆ ಅವರು ಕುರ್ಮಾ ಘರ್ ರೀತಿಯಲ್ಲಿಯೇ ಚಿಕ್ಕ ಚಿಕ್ಕ ಗುಡಿಸಲುಗಳ ರೂಪದ ಕಟ್ಟಡಗಳನ್ನು ಕಟ್ಟಿಸಿ, ಅವುಗಳೆಲ್ಲವನ್ನು ಸೇರಿಸಿ ಆದಿವಾಸಿಗಳ ಕುಲದೇವತೆಯಾದ ದಾಂತೇಶ್ವರಿಯ ಹೆಸರಲ್ಲಿ ‘ಮಾ ದಾಂತೇಶ್ವರಿ ಆಸ್ಪತ್ರೆ’ ಎಂಬ ಒಂದು ಆಸ್ಪತ್ರೆಯನ್ನಾಗಿ ರೂಪಿಸಿದರು. ಆಸ್ಪತ್ರೆಯ ಎದುರು ಒಂದು ಮಾ ದಾಂತೇಶ್ವರಿ ದೇವಸ್ಥಾನವನ್ನು ಕಟ್ಟಿಸಿದರು. ಈ ಮೂಲಕ ಬಾಂಗ್ ದಂಪತಿಗಳು ಆದಿವಾಸಿಗಳ ವಿಶ್ವಾಸವನ್ನು ಪಡೆಯುವಲ್ಲಿ ಯಶಸ್ವಿಯಾದರು. ಒಮ್ಮೆ ಆದಿವಾಸಿಗಳ ವಿಶ್ವಾಸ ಪಡೆದ ನಂತರ ಅವರ ಯೋಜನೆಯ ಮುಂದಿನ ಕೆಲಸಗಳು ಹೆಚ್ಚೂ ಕಡಿಮೆ ಬಹು ಸುಲಭದಲ್ಲಿ ಕಾರ್ಯರೂಪಕ್ಕೆ ಬಂದವು.

ಡಾ. ಅಭಯ್ ಹಾಗೂ ಡಾ. ರಾಣಿ ಬಾಂಗ್ ದಂಪತಿಗಳ ಪ್ರಪ್ರಥಮ ಆದ್ಯತೆ ನವಜಾತ ಶಿಶುಗಳು, ಬಾಣಂತಿಯರು ಹಾಗೂ ಮುಟ್ಟಿನ ಮಹಿಳೆಯರ ಆರೋಗ್ಯ ರಕ್ಷಣೆಯಾಗಿತ್ತು. ಮೊದಲಿಗೆ, ಅವರು ಕೂರ್ಮಾ ಘರ್‌ಗಳಲ್ಲಿ ಒಬ್ಬ ಮುಟ್ಟಿನ ಮಹಿಳೆಗೆ ಬೇಕಾಗುವ ಸ್ಯಾನಿಟರಿ ಪ್ಯಾಡ್, ಬಿಸಿ ನೀರು, ಔಷಧಿ, ಸ್ವಚ್ಛ ಬಟ್ಟೆ, ಹಾಸಿಗೆ, ಚಾಪೆ ಮೊದಲಾದವುಗಳ ವ್ಯವಸ್ಥೆ ಮಾಡಿಸಿದರು. ಕುರ್ಮಾ ಘರ್‌ಗಳನ್ನು ಸ್ವಚ್ಛವಾಗಿರಿಸಿಕೊಳ್ಳುವ ಕ್ರಮವನ್ನು ಕಲಿಸಿದರು. ಗಡ್ಚಿರೋಲಿಯ ಪ್ರತಿ ಗ್ರಾಮದಿಂದ ಒಬ್ಬ ಪುರುಷ ಹಾಗೂ ಒಬ್ಬಳು ಮಹಿಳೆಯನ್ನು ‘ಆರೋಗ್ಯ ದೂತ’ರನ್ನಾಗಿ ಆಯ್ಕೆ ಮಾಡಿ, ಅವರಿಗೆ ಅನಾರೋಗ್ಯ ಪೀಡಿತ ಮಕ್ಕಳನ್ನು ಪರೀಕ್ಷಿಸುವುದು, ಕಾಯಿಲೆಯನ್ನು ಪತ್ತೆ ಹಚ್ಚುವುದು ಮತ್ತು ನ್ಯೂಮೋನಿಯಾದಂತಹ ಕಾಯಿಲೆಗಳಿದ್ದರೆ ಅವುಗಳಿಗೆ ಬಾಯಿ ಮೂಲಕ ಆಂಟಿ ಬಯೊಟಿಕ್ ಔಷಧಿಗಳನ್ನು ನೀಡುವ ತರಬೇತಿ ನೀಡಿದರು. ಈ ಕ್ರಮ ಶಿಶು ಮರಣಗಳ ಪ್ರಮಾಣವನ್ನು ಗಣನೀಯವಾಗಿ ಕುಗ್ಗಿಸಿತು. ಮುಂದೆ ಈ ಕ್ರಮ ಎಷ್ಟು ಜನಪ್ರಿಯವಾಯಿತೆಂದರೆ, ವಿಶ್ವ ಆರೋಗ್ಯ ಸಂಸ್ಥೆ ಇದೇ ಕ್ರಮವನ್ನು ಅನುಸರಿಸಲು ಪ್ರಾರಂಭಿಸಿ, ಹದಿನಾರು ದೇಶಗಳಲ್ಲಿ ಜಾರಿಗೆ ಬಂದಿತು.

ಅನಕ್ಷರಸ್ಥ ಸಮುದಾಯಗಳು ಗರ್ಭಪಾತ ಮಾಡಿಸಲು ಕೋಲನ್ನು ಗರ್ಭಾಶಯದೊಳಕ್ಕೆ ತೂರಿಸುವುದು, ಸ್ಥಳೀಯ ಔಷಧಿ ಗಿಡಗಳಿಂದ ತಯಾರಿಸಿದ ಗಿಡಮೂಲಿಕೆಗಳನ್ನು ತುಂಬಿಸುವುದು ಮೊದಲಾದ ತೀರಾ ಅಪಾಯಕಾರಿ ಕ್ರಮಗಳನ್ನು ಅನುಸರಿಸುತ್ತಿದ್ದವು. ಡಾ. ಬಾಂಗ್ ದಂಪತಿಗಳು ಹಳ್ಳಿಗಳಲ್ಲಿ ಸುರಕ್ಷಿತ ಗರ್ಭಪಾತದ ಬಗ್ಗೆ ಅರಿವು ಮೂಡಿಸಿದ್ದರಿಂದ, ಗರ್ಭಿಣಿ ಯರು ಇಂತಹ ಕ್ರಮಗಳಿಗೆ ಒಳಗಾಗಿ ಸೆಪ್ಸಿಸ್ ಎಂಬ ರಕ್ತದ ಸೋಂಕು ಹಾಗೂ ಇತರ ಆಂತರಿಕ ಸೋಂಕಿಗೆ ಒಳಗಾಗಿ ಪ್ರಾಣಾಪಾಯಕ್ಕೆ ಸಿಕ್ಕುವ ಸಂದರ್ಭಗಳು ಕಡಿಮೆಯಾದವು. ಡಾ. ಬಾಂಗ್ ದಂಪತಿಗಳು ಪ್ರತಿವರ್ಷ ಗಡ್ಚಿರೋಲಿಯ ಲಕ್ಕಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳ ಜನರಿಗೆ ವೈದ್ಯಕೀಯ ಆರೈಕೆ ನೀಡುವ ಮೂಲಕ ಅವರ ಸಮುದಾಯದವರೇ ಎಂಬಂತೆ ಅವರೊಂದಿಗೆ ಬೆರೆತು ಹೋಗಿದ್ದಾರೆ.

 

ಆಂದೋಲನ ಡೆಸ್ಕ್

Share
Published by
ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ | ತಂಗುದಾಣಕ್ಕೆ ಶೆಲ್ಟರ್ ನಿರ್ಮಿಸಿ

ಮೈಸೂರಿನ ಕುವೆಂಪುನಗರದ ಅಕ್ಷಯ ಭಂಡಾರ್ ಸಮೀಪದ ಬಸ್ ತಂಗುದಾಣಕ್ಕೆ ಶೆಲ್ಟರ್ ಇಲ್ಲದೆ ಪ್ರಯಾಣಿಕರು ಬಿಸಿಲು, ಮಳೆ ಎನ್ನದೆ ರಸ್ತೆ ಬದಿಯಲ್ಲಿಯೇ…

3 mins ago

ಓದುಗರ ಪತ್ರ | ಆಚರಣೆಗಷ್ಟೇ ಸೀಮಿತವಾಗದಿರಲಿ

ದೇಶದ ಬೆನ್ನೆಲುಬು ರೈತ. ಇಡೀ ನಾಡಿಗೆ ಅನ್ನ ಕೊಡುವ ರೈತರ ದಿನಾಚರಣೆಯನ್ನು ಸರ್ಕಾರ ಹೆಸರಿಗಷ್ಟೇ ಆಚರಣೆ ಮಾಡುತ್ತಿದೆಯೇ ವಿನಾ ರೈತರಿಗೆ…

5 mins ago

ಓದುಗರ ಪತ್ರ | ಬಸ್ ನಿಲ್ದಾಣದೊಳಗೆ ದ್ವಿಚಕ್ರ ವಾಹನಗಳನ್ನು ನಿಷೇಧಿಸಿ

ಗುಂಡ್ಲುಪೇಟೆ ತಾಲ್ಲೂಕಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದೊಳಗೆ ನಿತ್ಯ ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು, ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಸ್ ನಿಲ್ದಾಣಕ್ಕೆ ರಾಜ್ಯ…

8 mins ago

ಸೈಕ್ಲೋನ್‌ ಪರಿಣಾಮ ಜನವರಿಯಲ್ಲೂ ಜಲ ಸಮೃದ್ಧಿ

ಮಂಡ್ಯ ಜಿಲ್ಲೆಯ 968 ಕೆರೆಗಳ ಪೈಕಿ 550 ಕೆರೆಗಳು ಈಗಲೂ ಭರ್ತಿ ಹೇಮಂತ್‌ಕುಮಾರ್ ಮಂಡ್ಯ: ಜಿಲ್ಲೆಯಲ್ಲಿ ಕಳೆದ ಮೂರ‍್ನಾಲ್ಕು ತಿಂಗಳಿಂದ…

13 mins ago

ಒತ್ತಡವಿಲ್ಲದೆ ಬದುಕಲು ಕಲಿಯರಿ

ಕುಮಾರಸ್ವಾಮಿ ವಿರಕ್ತಮಠ, ಮೈಸೂರು ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಒಂದೊಂದು ವಿಶೇಷ ಸ್ಥಾನಮಾನವಿದೆ. ಕುವೆಂಪುರವರ ಮಾತಿನಂತೆ ಇಲ್ಲಿ ‘ಯಾರೂ ಮುಖ್ಯರಲ್ಲ, ಯಾರೂ…

52 mins ago

ಒಣ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ಸಿದ್ಧತೆ

ಕಸ ವಿಲೇವಾರಿಯಲ್ಲಿ ಸ್ವಾವಲಂಬನೆಯತ್ತ ಹೂಟಗಳ್ಳಿ ನಗರಸಭೆ ಕೆ. ಪಿ. ಮದನ್ ಮೈಸೂರು: ಮೂರು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದಿರುವ ಹೂಟಗಳ್ಳಿ…

1 hour ago