ಭಿಕ್ಷುಕರು ಕೈಯೊಡ್ಡಿ ಬೇಡುವುದು, ಜನ ಅವರಿಗೆ ಭಿಕ್ಷೆ ನೀಡುವುದು ಭಾರತದ ಮೂಲೆ ಮೂಲೆಗಳಲ್ಲೂ ಕಾಣಬರುವ ಒಂದು ಸಾಮಾನ್ಯ ದೃಶ್ಯ. ಭಾರತದಲ್ಲಿ ಸುಮಾರು ನಾಲ್ಕು ಲಕ್ಷದಷ್ಟಿರುವ ಭಿಕ್ಷುಕರು ಪ್ರತಿ ವರ್ಷ ಸುಮಾರು 34,000 ಕೋಟಿ ರೂಪಾಯಿಯ ಭಿಕ್ಷೆ ಪಡೆಯುತ್ತಾರೆ ಎಂದು ಒಂದು ಅಂಕಿಅಂಶ ಹೇಳುತ್ತದೆ. ಹೀಗೆ ಭಿಕ್ಷೆ ನೀಡುವಾಗ ತಾವು ನೀಡುವ ಭಿಕ್ಷೆ ಭಿಕ್ಷುಕರ ಬದುಕನ್ನು ಉತ್ತಮಗೊಳಿಸುವುದೇ? ಅವರನ್ನು ಭಿಕ್ಷಾಟನೆಯಂತಹ ದೈನೇಸಿ ಪರಿಸ್ಥಿತಿಯಿಂದ ಮೇಲೆತ್ತುವುದೇ? ಎಂದು ಆಲೋಚಿಸುವವರು ತೀರಾ ವಿರಳ. ಒಂದು ವೇಳೆ, ಭಿಕ್ಷುಕರಿಗೆ ಹೀಗೆ ಹಣ ನೀಡುವ ಬದಲಿಗೆ ಆ ಹಣವನ್ನು ಅದೇ ಭಿಕ್ಷುಕರ ಹೆಸರಲ್ಲಿ ಒಂದೆಡೆ ಹೂಡಿಕೆ ಮಾಡಲು ಸಾಧ್ಯವಾದರೆ ಅದರಿಂದ ಭಿಕ್ಷುಕರಿಗೆ ಹೆಚ್ಚಿನ ಸಹಾಯ ಸಾಧ್ಯವಲ್ಲವೇ?
ಈಗ ಸಾಮಾಜಿಕ ಕಾರ್ಯಕರ್ತರಾಗಿ ಬದಲಾಗಿರುವ ಒಡಿಶಾದ 59 ವರ್ಷ ಪ್ರಾಯದ ಚಂದ್ರ ಮಿಶ್ರಾ ಎಂಬ ಮಾಜಿ ಪತ್ರಕರ್ತರು ಇದೇ ಉದ್ದೇಶದಿಂದ ‘ ಬೆಗ್ಗರ‍್ಸ್ ಕಾರ್ಪೊರೇಷನ್’ ಎಂಬ ಒಂದು ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ. ಚಂದ್ರ ಮಿಶ್ರಾ ಪತ್ರಕರ್ತರಾಗಿದ್ದಾಗ ಮಾನವೀಯ ವಿಷಯಗಳು ಹಾಗೂ ಉದ್ಯೋಗ ವಿಷಯಗಳ ಬಗ್ಗೆ ಬರೆಯುತ್ತಿದ್ದರು. ಒಡಿಶಾ, ಬಿಹಾರ, ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳ ಸರ್ಕಾರಗಳೊಂದಿಗೆ ಔದ್ಯೋಗಿಕ ಪಾಲಿಸಿಗಳ ಬಗ್ಗೆ ಕೆಲಸ ಮಾಡಿದ ಅನುಭವವುಳ್ಳವರು. ಇವರು ಭಿಕ್ಷುಕರಿಗೆ ಸಹಾಯ ಮಾಡಲು ಇಚ್ಛಿಸುವವರು 10 ರೂಪಾಯಿಗಳಿಂದ 10000 ರೂಪಾಯಿಗಳ ತನಕ ಅದರಲ್ಲಿ ಹೂಡಿಕೆ ಮಾಡಬಹುದು. ‘ಬೆಗ್ಗರ‍್ಸ್ ಕಾರ್ಪೊರೇಷನ್’ ಸಂಸ್ಥೆಯನ್ನು ಹುಟ್ಟು ಹಾಕಿದ 16 ತಿಂಗಳೊಳಗೆ, ಅದರಲ್ಲಿ ಹೂಡಿಕೆ ಮಾಡಿದವರಿಗೆ ಅವರ ಮೂಲ ಹಣಕ್ಕೆ ಶೇ.16.5 ಲಾಭಾಂಶವನ್ನು ಸೇರಿಸಿ ಅವರಿಗೆ ವಾಪಸ್ ಮಾಡಿದ್ದಾರೆ! ‘ನಾವು ಹೂಡಿಕೆಯನ್ನು ನಿರೀಕ್ಷಿಸುತ್ತೇವೆಯೇ ವಿನಾ ಭಿಕ್ಷೆ ಅಥವಾ ದೇಣಿಗೆಯನ್ನಲ್ಲ’ ಎಂದು ಮಿಶ್ರಾ ನೇರವಾಗಿ ಹೇಳುತ್ತಾರೆ.
ಚಂದ್ರ ಮಿಶ್ರಾ ಯಾವುದೋ ಕಾರ್ಯನಿಮಿತ್ತ ಗುಜರಾತಿಗೆ ಹೋಗಿದ್ದಾಗ ಅಲ್ಲಿನ ದೇವಸ್ಥಾನಗಳ ಎದುರು ಸಾಲುಗಟ್ಟಿ ನಿಂತ ಭಿಕ್ಷುಕರನ್ನು ನೋಡಿ, ಇವರು ಹೀಗೆ ಬೇಡುವ ಬದಲು ಅವರಿಗೆ ತರಬೇತಿ ನೀಡಿ ಏನಾದರೂ ಉದ್ಯೋಗ ಮಾಡಲು ತಯಾರು ಮಾಡಿದರೆ ಅವರ ಈ ದೈನೇಸಿ ಸ್ಥಿತಿಯನ್ನು ಬದಲಾಯಿಸಬಹುದಲ್ಲವೆ ಎಂದು ಆಲೋಚಿಸಿ ಆ ನಿಟ್ಟಿನಲ್ಲಿ ಮುಂದುವರಿಯುತ್ತಾರೆ. ಚಂದ್ರ ಮಿಶ್ರಾ ಕೆಲವು ರಾಜ್ಯಗಳಲ್ಲಿ ಅಲ್ಲಿನ ಔದ್ಯೋಗಿಕ ಪಾಲಿಸಿಗಳನ್ನು ಅಧ್ಯಯನ ಮಾಡಿದ ಅನುಭವ ಉಳ್ಳವರು. ಅವರು 2020ರ ಡಿಸೆಂಬರ್ ತಿಂಗಳ 31ರಂದು ವಾರಣಾಸಿಗೆ ಹೋಗುತ್ತಾರೆ. ಅಲ್ಲಿ ಚಟುವಟಿಕೆ ನಡೆಸುತ್ತಿರುವ ‘ಜನಮಿತ್ರ ನ್ಯಾಸ್’ ಎಂಬ ಸ್ಥಳೀಯ ಸರ್ಕಾರೇತರ ಸಂಸ್ಥೆಯನ್ನು ಸಂಪರ್ಕಿಸಿ, ಭಿಕ್ಷುಕರಿಗೆ ಉದ್ಯೋಗ ಸೃಷ್ಟಿಸುವ ತನ್ನ ಆಲೋಚನೆಯನ್ನು ವಿವರಿಸುತ್ತಾರೆ. ವಾರಣಾಸಿಯ ಘಾಟ್‌ಗಳಲ್ಲಿ ಭಿಕ್ಷುಕರಿಗೇನೂ ಕೊರತೆ ಇಲ್ಲ. ಯಾವ ದೇವಸ್ಥಾನದೆದುರು ನೋಡಿದರೂ ಅಲ್ಲಿ ಉದ್ದನೆಯೆ ಭಿಕ್ಷುಕರ ಸಾಲು ನಿಂತಿರುತ್ತದೆ. ಚಂದ್ರ ಮಿಶ್ರಾ ಸ್ಥಳೀಯ ಭಿಕ್ಷುಕರ ನಿಕಟ ಸಂಪರ್ಕ ಗಳಿಸಿ, ಅವರ ಜೀವನ ಕ್ರಮವನ್ನು ಸೂಕ್ಷ ವಾಗಿ ಅಭ್ಯಸಿಸುತ್ತಾರೆ. ಹಾಗೂ, ತನ್ನ ಯೋಜನೆಯನ್ನು ಅವರಿಗೆ ಮನದಟ್ಟು ಮಾಡುತ್ತಾರೆ. ಆದರೆ, ಒಬ್ಬನೇ ಒಬ್ಬ ಭಿಕ್ಷುಕನಾಗಲೀ, ಭಿಕ್ಷುಕಿಯಾಗಲೀ ಮಿಶ್ರಾರೊಂದಿಗೆ ಕೆಲಸ ಮಾಡಲು ಮುಂದೆ ಬರುವುದಿಲ್ಲ.
2021ರಲ್ಲಿ, ಎರಡನೇ ಬಾರಿಗೆ ಕೋವಿಡ್ ಲಾಕ್‌ಡೌನ್ ಹೇರಲ್ಪಟ್ಟಾಗ ಅನೇಕ ಭಿಕ್ಷುಕರು ಸಹಾಯಕ್ಕಾಗಿ ಚಂದ್ರ ಮಿಶ್ರಾರನ್ನು ಸಂಪರ್ಕಿಸಿದರು. ಆಗ, ಚಂದ್ರ ಮಿಶ್ರಾ, ಬದ್ರಿನಾಥ್ ಮಿಶ್ರಾ ಮತ್ತು ದೇವೇಂದ್ರ ಥಾಪಾ ಎಂಬ ತಮ್ಮಿಬ್ಬರು ಸ್ನೇಹಿತರನ್ನು ಜೊತೆಗಿರಿಸಿಕೊಂಡು, 2021ರ ಆಗಸ್ಟ್ ತಿಂಗಳಲ್ಲಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ನ್ನು ಹುಟ್ಟು ಹಾಕಿದರು. ಅದನ್ನು ಅವರು ಒಂದು ‘ಪ್ರಾಫಿಟ್ ಮೇಕಿಂಗ್ ಕಂಪೆನಿ’ ಅಂತಲೇ ರಿಜಸ್ಟ್ರಿಗೊಳಿಸಿದ್ದಾರೆ. ಏಕೆಂದರೆ, ಲಾಭ ಮಾಡಿದರಷ್ಟೇ ಹಣ ಹೂಡಿದವರಿಗೆ ಲಾಭಾಂಶ ತಂದು ಕೊಡಲು ಸಾಧ್ಯ. ವಾರಣಾಸಿಯ ಘಾಟ್‌ನಲ್ಲಿ ತನ್ನ ಮಗುವಿನೊಂದಿಗೆ ಭಿಕ್ಷಾಟನೆ ನಡೆಸುತ್ತಿದ್ದ ಒಬ್ಬಳು ಭಿಕ್ಷುಕಿ ಮಿಶ್ರಾರ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಸೇರಿದ ಪ್ರಪ್ರಥಮಳು. ಅವಳ ಗಂಡ ಬೇರೊಬ್ಬಳನ್ನು ಮದುವೆಯಾಗಲು ಇವಳನ್ನು ಮನೆಯಿಂದ ಹೊರ ಹಾಕಿದ್ದ ಅವಳಿಗೆ ಬೇರಾವ ನೆಲೆಯೂ ಇರಲಿಲ್ಲವಾದ ಕಾರಣ ತನ್ನ 12 ವರ್ಷದ ಮಗನೊಂದಿಗೆ ಸಹಾಯ ಯಾಚಿಸಿ ಮಿಶ್ರಾರ ಬಳಿ ಬಂದಳು. ಮಿಶ್ರಾ ಅವಳಿಗೆ ಚೀಲ ತಯಾರಿಸುವ ತರಬೇತಿ ನೀಡಿ, ಅವಳನ್ನು ಸ್ವಂತ ಉದ್ಯೋಗಕ್ಕೆ ತಯಾರು ಮಾಡಿದರು. ಆಕೆ ತಯಾರಿಸಿದ ಚೀಲಗಳನ್ನು ಮಿಶ್ರಾ ವಿವಿಧೆಡೆಯಲ್ಲಿ ನಡೆಯುವ ಕಾನ್ಛರೆನ್ಸ್‌ಗಳಿಗೆ ಕೊಂಡೊಯ್ದು, ಮಾರಿ, ಆಕೆಗೆ ಸಂಪಾದನೆಗೆ ದಾರಿ ಮಾಡಿಕೊಟ್ಟರು. ಅದನ್ನು ನೋಡಿ ಇನ್ನು ಕೆಲವರು ಭಿಕ್ಷುಕರು ಮಿಶ್ರಾರ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಸೇರಿದರು. ಚಂದ್ರ ಮಿಶ್ರಾ ಈವರೆಗೆ 14 ಭಿಕ್ಷುಕ ಕುಟುಂಬಗಳನ್ನು ಹೀಗೆ ಸಣ್ಣ ಪ್ರಮಾಣದ ಉದ್ಯಮಿಗಳನ್ನಾಗಿ ಪರಿವರ್ತಿಸಿದ್ದಾರೆ. ಈಗ ಒಂದು ಡಜನ್ನಿಗೂ ಹೆಚ್ಚು ಭಿಕ್ಷುಕ ಕುಟುಂಬಗಳು ಅವರೊಂದಿಗೆ ಸೇರಿ, ಲ್ಯಾಪ್ಟಾಪ್ ಬ್ಯಾಗ್, ಶಾಪಿಂಗ್ ಬ್ಯಾಗ್, ಕಾನ್ಛರೆನ್ಸ್ ಬ್ಯಾಗ್ ಮೊದಲಾದ ಚೀಲಗಳನ್ನು ತಯಾರಿಸುವ ಉದ್ಯೋಗ ಮಾಡುತ್ತಿವೆ. ಚಂದ್ರ ಮಿಶ್ರಾ ಆ ಚೀಲಗಳನ್ನು ಹೋಟೆಲ್, ಬಹುರಾಷ್ಟ್ರೀಯ ಕಂಪೆನಿಗಳಿಗೆ ಮಾರುತ್ತಾರೆ. ಎರಡು ಭಿಕ್ಷುಕ ಕುಟುಂಬಗಳವರು ದೇವಸ್ಥಾನಗಳ ಬಳಿ ದೇವತಾಕಾರ್ಯಗಳಿಗೆ ಬೇಕಾಗುವ ಹೂ, ಹಣ್ಣು ಕಾಯಿ ಮೊದಲಾದ ವಸ್ತುಗಳನ್ನು ಮಾರುವ ಸ್ವಂತ ಅಂಗಡಿಗಳನ್ನು ನಡೆಸುತ್ತಿದ್ದಾರೆ.
ಚಂದ್ರ ಮಿಶ್ರಾ, ಕೇವಲ ಹತ್ತು ರೂಪಾಯಿಯಿಂದ ಹತ್ತು ಸಾವಿರ ರೂಪಾಯಿಗಳ ತನಕ ಎಷ್ಟು ಸಾಧ್ಯವೋ ಅಷ್ಟು ಮೊತ್ತವನ್ನು ‘ಬೆಗ್ಗರ‍್ಸ್ ಕಾರ್ಪೊರೇಷನ್’ನಲ್ಲಿ ಹೂಡಿಕೆ ಮಾಡುವಂತೆ ಜನರನ್ನು ಕೇಳಿಕೊಂಡ ಕಾರಣ ಪ್ರಾರಂಭದಲ್ಲಿ 57 ಜನ ವಿವಿಧ ಮೊತ್ತದ ಹೂಡಿಕೆ ಮಾಡಿದರು. ಮೊತ್ತ ಮೊದಲ ಹೂಡಿಕೆ ಬಂದುದು ಛತ್ತೀಸ್‌ಗಢದ ಒಬ್ಬ ಎಂಜಿನಿಯರಿಂದ. ಆ ಹಣವನ್ನು ಬಳಸಿ ಮಿಶ್ರಾ ಭಿಕ್ಷುಕರಿಗೆ ಔದ್ಯೋಗಿಕ ತರಬೇತಿ ನೀಡಿದರು. ಅವರ ಕಾರ್ಯವ್ಯಾಪ್ತಿ ವಿಸ್ತಾರಗೊಂಡಂತೆ, ಅವರ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಕಂಪೆನಿ 16 ಅಗ್ರಗಣ್ಯ ‘ಮೈಂಡ್‌ಫುಲ್’ ಸ್ಟಾರ್ಟ್ ಅಪ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆಯಿತು. ಅದು ಮಿಶ್ರಾರ ಕೆಲಸಕ್ಕೆ ಬಹಳ ದೊಡ್ಡ ಒತ್ತು ನೀಡಿತು. 2021-22ರಲ್ಲಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ನಲ್ಲಿ ಹೂಡಿಕೆಯಾದ ಒಟ್ಟು ಮೊತ್ತ 5.7 ಲಕ್ಷ ರೂಪಾಯಿ. 2022-23ರಲ್ಲಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ 57 ಲಕ್ಷ ರೂಪಾಯಿಯನ್ನು ಸಂಪಾದಿಸಿ, ಚಂದ್ರ ಮಿಶ್ರಾ ಹೂಡಿಕೆದಾರರಿಗೆ ಅವರ ಹಣವನ್ನು ಶೇ.16.5 ಬಡ್ಡಿಯೊಂದಿಗೆ ಹಿಂತಿರುಗಿಸಿದರು.
ಚಂದ್ರ ಮಿಶ್ರಾರ ಪ್ರಕಾರ, ಒಬ್ಬ ಭಿಕ್ಷುಕನಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಒಂದೂವರೆ ಲಕ್ಷ ರೂಪಾಯಿ ಸಾಕಾಗುತ್ತದೆ. ಇದರಲ್ಲಿ 50,000 ರೂಪಾಯಿ ಔದ್ಯೋಗಿಕ ತರಬೇತಿ ನೀಡಲು ಖರ್ಚಾದರೆ, ಉಳಿದ ಒಂದು ಲಕ್ಷ ಹೊಸ ಉದ್ಯೋಗ ಶುರು ಮಾಡಲು ತಗಲುತ್ತದೆ. ಚಂದ್ರ ಮಿಶ್ರಾ ವಯಸ್ಕ ಭಿಕ್ಷುಕರಿಗೆ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಶುರು ಮಾಡುವ ಜೊತೆಯಲ್ಲಿ ಭಿಕ್ಷುಕ ಮಕ್ಕಳಿಗಾಗಿ ‘ಸ್ಕೂಲ್ ಲೈಫ್’ನ್ನು ಹುಟ್ಟು ಹಾಕಿದ್ದಾರೆ. ಹರಿಯಾಣದ ಗುರುಗ್ರಾಮ್‌ನಲ್ಲಿ ‘ಚಾಯ್ ಓಮ್’ ಎಂಬ ಹೆಸರಿನ ಚಹಾ ಕಂಪೆನಿಯನ್ನು ನಡೆಸುತ್ತಿರುವ ಪಾಯಲ್ ಅಗವಾಲ್ ಎಂಬವರು ಚಂದ್ರ ಮಿಶ್ರಾರ ಜೊತೆ ಒಂದು ಬಿಸಿನೆಸ್ ಡೀಲ್ ಮಾಡಿಕೊಂಡು, ೫ ಲಕ್ಷ ರೂಪಾಯಿ ಹೂಡಿಕೆ ಮಾಡಿ, ಪರಿವರ್ತಿತ ಭಿಕ್ಷುಕರಿಗೆ ಉದ್ಯೋಗ ನೀಡಲು ಒಂದು ‘ಟೀ ಕೆಫೆ’ಯನ್ನು ಪ್ರಾರಂಭಿಸಿದ್ದಾರೆ. ತನ್ನ ವಿನೂತನ ಕೆಲಸಕ್ಕಾಗಿ ‘ಬೆಗ್ಗರ‍್ಸ್ ಕಾರ್ಪೊರೇಷನ್’ ಹಲವು ಪ್ರಶಸ್ತಿಗಳನ್ನು ಪಡೆದಿದೆ. ಅವುಗಳಲ್ಲಿ ‘ಬೆಸ್ಟ್ ಸೋಷಿಯಲ್ ಇಂಪ್ಯಾಕ್ಟ್ ಅವಾರ್ಡ್’ ಒಂದು.
ಕೊಪ್ಪಳ: ಐತಿಹಾಸಿಕ ಅಂಜನಾದ್ರಿಗೆ ಸಂಸದ ಯದುವೀರ್ ಒಡೆಯರ್ ಭೇಟಿ ನೀಡಿ ದೇವರ ದರ್ಶನ ಪಡೆದರು. ಹನುಮ ಹುಟ್ಟಿದ ನಾಡು ಎಂದು…
ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಬರೋಬ್ಬರಿ 7 ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 12ರಂದು ದೆಹಲಿಗೆ…
ಮೈಸೂರಿನ ಪ್ರಮುಖ ಜೀವವೈವಿಧ್ಯ ತಾಣ ಕುಕ್ಕರಹಳ್ಳಿ ಕೆರೆಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ವಾಯುವಿಹಾರಿಗಳು, ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ.…
ಬೆಂಗಳೂರಿನ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಪರಿಶೀಲಿಸುವ ವೇಳೆ ಅಪ್ರಾಪ್ತ ಮಕ್ಕಳಿಂದ ಕೆಲಸ…
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್ ಆಪ್ ಕಡ್ಡಾಯಗೊಳಿಸಿರುವುದು ತಾಂತ್ರಿಕವಾಗಿ ಉತ್ತಮ ಹೆಜ್ಜೆಯಾದರೂ, ವಾಸ್ತವದಲ್ಲಿ ಇದು ರೈತರಿಗೆ ಕಂಟಕವಾಗುತ್ತಿದೆ. ರಾಜ್ಯದಲ್ಲಿ ಶೇ.೮೦ಕ್ಕೂ…
ಡಾ. ಕೆ. ಪಿ. ಸಿದ್ಧಲಿಂಗಸ್ವಾಮಿ, ಸಂಶೋಧಕರು, ಸಿಎಸ್‌ಎಸ್‌ಐ, ಮಂಗಳೂರು ವಿಶ್ವವಿದ್ಯಾನಿಲಯ ಸೆಪ್ಟೆಂಬರ್ ೧೦ ವಿಶ್ವ ಆತ್ಮಹತ್ಯೆ ತಡೆ ದಿನ. ಇದು…