ಜನಪ್ರತಿನಿಧಿಗಳು ಜನಹಿತ ಮರೆತರೆ ಏನಾಗುತ್ತದೆ ಎಂಬುದಕ್ಕೆ ಮೈಸೂರು- ಊಟಿ ರಸ್ತೆಯಲ್ಲಿ ಜೆಎಸ್‌ಎಸ್ ಕಾಲೇಜು ಮುಂಭಾಗ ನಿರ್ಮಿಸಲಾಗುತ್ತಿರುವ ಪ್ರಯಾಣಿಕರ ತಂಗುದಾಣದ ವಿವಾದ ಜ್ವಲಂತ ಸಾಕ್ಷಿಯಾಗಿದೆ. ತಂಗುದಾಣದ ಅಂಗಳಕ್ಕೆ ಧರ್ಮದ ಹಂಗು ಮೆತ್ತುವ ಪ್ರಯತ್ನ ನಡೆದಿರುವುದು ದುರದೃಷ್ಟಕರ ಬೆಳವಣಿಗೆ.
ವಾಸ್ತವವಾಗಿ ಸಮಸ್ಯೆ ಪ್ರಯಾಣಿಕರ ತಂಗುದಾಣದ್ದಲ್ಲ. ಪ್ರದೇಶದ ಸರ್ವಾಂಗೀಣ ಅಭಿವೃದ್ಧಿಯ ನೈತಿಕ ಹೊಣೆ ಹೊತ್ತ ಶಾಸಕರು ಮತ್ತು ಸಂಸದರ ನಡುವಿನ ಮುಸುಕಿನ ಗುದ್ದಾಟ ಮತ್ತು ಸ್ವಪ್ರತಿಷ್ಠೆಯೇ ಇಲ್ಲಿ ದೊಡ್ಡ ಸಮಸ್ಯೆಯಾಗಿದೆ. ಸಮಸ್ಯೆ ದೊಡ್ಡದು ಏಕೆಂದರೆ ಜಟಾಪಟಿಗೆ ಇಳಿದಿರುವ ಉಭಯ ನಾಯಕರು ಸ್ವಪಕ್ಷೀಯರೇ! ಅದೂ ಆಡಳಿತಾರೂಢ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ.
ದಿನಕ್ಕೊಂದು ರೂಪ ಪಡೆಯುತ್ತಿರುವ ಪ್ರಯಾಣಿಕರ ತಂಗುದಾಣದ ವಿವಾದವು ಮೈಸೂರಿನ ಸ್ಥಳೀಯ ರಾಜಕೀಯ ಸಾಗಿರುವ ದಿಕ್ಕಿನ ಸಂಕೇತವೂ ಆಗಿದೆ.
ಮೈಸೂರು ಎಲ್ಲರೂ ಅಂದುಕೊಂಡಷ್ಟು ಸುಭಿಕ್ಷವಾಗಿಲ್ಲ. ಸಮಸ್ಯೆಗಳನ್ನೇ ಹಾಸಿ ಹೊದ್ದು ಮಲಗಿದೆ. ಶಾಸಕರು- ಸಂಸದರು ಪ್ರಯತ್ನ ಪಟ್ಟರೆ ಈ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರಗಳನ್ನು, ದೀರ್ಘಕಾಲೀನ ಪರಿಹಾರಗಳನ್ನು ಕಂಡುಕೊಳ್ಳುವುದು ಕಷ್ಟವೇನೂ ಅಲ್ಲ. ಆದರೆ, ಅಂತಹ ಪ್ರಯತ್ನಗಳು ನಡೆಯುತ್ತಲೇ ಇಲ್ಲ. ಅವಕಾಶವಾದಾಗಲೆಲ್ಲ ವಿವಾದ ಹುಟ್ಟು ಹಾಕುವ, ಅದಕ್ಕೆ ಧರ್ಮದ ತಳುಕು ಹಾಕುವ ಪ್ರವೃತ್ತಿ ಯಾವತ್ತೂ ಅಭಿವೃದ್ಧಿಗೆ ಮಾರಕ.
ಈಗ ಭುಗಿಲೆದ್ದಿರುವ ಪ್ರಯಾಣಿಕರ ತಂಗುದಾಣದ ನಿರ್ಮಾಣ ವಿವಾದ ವಾಸ್ತವವಾಗಿ ಇಷ್ಟು ದೊಡ್ಡ ವಿವಾದವಾಗುವ ಸಂಗತಿಯೇ ಅಲ್ಲ. ತಂಗುದಾಣದ ಮೇಲಿನ ಗೋಪುರವು ಗುಂಬಜ್ ಮಾದರಿಯಲ್ಲಿದೆ ಎಂಬುದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಅವರ ತಕರಾರು. ಅದು ಗುಂಬಜ್ ಅಲ್ಲ, ಮೈಸೂರು ಅರಮನೆಗಳ ನಗರವಾಗಿರುವುದರಿಂದ ಅದರ ಪ್ರತಿರೂಪವಾಗಿ ಗೋಪುರಗಳನ್ನು ನಿರ್ಮಿಸಲಾಗಿದೆ ಎಂಬುದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ರಾಮದಾಸ್ ಅವರ ಸಮಜಾಯಿಷಿ.
ಇಬ್ಬರೂ ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಭಾರತೀಯ ಜನತಾ ಪಕ್ಷವನ್ನು ಪ್ರತಿನಿಧಿಸುತ್ತಿದ್ದಾರೆ. ಇಬ್ಬರೂ ಈ ಭಾಗದ ಜನರ ಮತಗಳನ್ನು ಪಡೆದೇ ತಮ್ಮ ಸ್ಥಾನಗಳನ್ನು ಗಳಿಸಿದ್ದಾರೆ. ಹೀಗಾಗಿ ಒಂದು ಕ್ಷಣ ಜನರ ಹಿತದ ಬಗ್ಗೆ ಚಿಂತಿಸಿದ್ದರೆ ಉಭಯ ನಾಯಕರು ಖುದ್ದು ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದಿತ್ತು. ವಿವಾದಗಳೆದ್ದ ಸಂದರ್ಭದಲ್ಲಿ ಮಾತುಕತೆಯ ಮೂಲಕವೇ ಸಮಸ್ಯೆ ಬಗೆಹರಿಸಿಕೊಳ್ಳಬೇಕಾದ್ದು ಅಪೇಕ್ಷಣೀಯ ಮತ್ತು ಜನಪ್ರತಿನಿಧಿಗಳ ನೈತಿಕ ಕರ್ತವ್ಯ ಕೂಡ.
ಸಂಸದರು ಗುಂಬಜ್ ಮಾದರಿಯಲ್ಲಿರುವುದರಿಂದ ಗೋಪುರ ತೆರವುಗೊಳಿಸದಿದ್ದರೆ ಹೊಡೆದು ಹಾಕುವುದಾಗಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ನೀಡುವ ಅಗತ್ಯವಿರಲಿಲ್ಲ. ಈ ಕ್ಷೇತ್ರದ ಜನಪ್ರತಿನಿಧಿಯಾಗಿ ಸಾರ್ವಜನಿಕ ಸ್ಥಳಗಳಲ್ಲಿನ ಕಟ್ಟಡಗಳ ರೂಪುರೇಷೆಗಳು ಹೇಗಿರಬೇಕೆಂಬ ಬಗ್ಗೆ ಸಂಸದರು ನಿಲುವು ನಿರ್ಧಾರ ಕೈಗೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಆದು ಅವರ ಕರ್ತವ್ಯವೂ ಹೌದು, ಹಕ್ಕೂ ಹೌದು. ಆದರೆ, ನಮ್ಮ ಕರ್ತವ್ಯ ಪಾಲಿಸಲು, ಹಕ್ಕುಗಳನ್ನು ಪ್ರತಿಪಾದಿಸಲು ನೀತಿ ನಿಯಮಗಳಿವೆ. ಕಾನೂನು ಕಟ್ಟಳೆಗಳಿವೆ. ಅವುಗಳಿಗೆ ಅನಗುಣವಾಗಿಯೇ ನಮ್ಮ ನಡೆ, ನುಡಿಗಳಿರಬೇಕು. ಅದರಲ್ಲೂ ಜನಪ್ರತಿನಿಧಿಗಳಾಗಿದ್ದಾಗ ನಡೆ- ನುಡಿಯಲ್ಲಿ ಹೆಚ್ಚೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ. ಹೊತ್ತಿಉರಿಯುವ ಮನೆಯಲ್ಲಿ ಗಳ ಇರಿಯುವ ಕೆಲಸ ಯಾರಿಗೂ ಶೋಭೆ ತರುವುದಿಲ್ಲ.
ಒಂದೇ ಪಕ್ಷದ ಸಂಸದರು ಮತ್ತು ಶಾಸಕರು ಒಂದೇ ಒಂದು ಬಾರಿ ಮಾತನಾಡಿಕೊಂಡಿದ್ದರೆ ವಿವಾದ ಈ ಮಟ್ಟಕ್ಕೆ ಭುಗಿಲೇಳುತ್ತಿರಲಿಲ್ಲ. ಶಾಸಕರು ಮತ್ತು ಸಂಸದರ ನಡುವೆ ಸಮನ್ವಯ, ಸಂವಹನ, ಸಂಪರ್ಕ ಈ ಯಾವುದೂ ಇಲ್ಲವೆಂಬುದು ಈ ಘಟನೆಯಿಂದ ದೃಢ ಪಟ್ಟಿದೆ. ಸಂಸದರು ಹಾಗೂ ಶಾಸಕರು ಬೇರೆ ಬೇರೆ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದರೆ ಅದು ಬೇರೆಯ ಮಾತಾಗುತ್ತಿತ್ತು.
ಸಂಸದರು- ಶಾಸಕರ ನಡುವೆ ಸಮನ್ವಯ- ಸಂವಹನ- ಸಂಪರ್ಕ ತೀರಾ ಅಗತ್ಯ ಮತ್ತು ಅನಿವಾರ್ಯ. ವೈಯಕ್ತಿಕವಾಗಿ ಸಂಸದರಿಗೆ ಮತ್ತು ಶಾಸಕರಿಗೆ ಇವುಗಳ ಅಗತ್ಯ ಮತ್ತು ಅನಿವಾರ್ಯತೆ ಇಲ್ಲದೇ ಇರಬಹುದು. ಆದರೆ, ಕ್ಷೇತ್ರ ಜನತೆಯ ಹಿತದೃಷ್ಟಿಯಿಂದ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ದೃಷ್ಟಿಯಿಂದ ಇರಲೇಬೇಕು.
ಈಗಲೂ ಕಾಲ ಮಿಂಚಿಲ್ಲ. ಸಂಸದರು ಮತ್ತು ಶಾಸಕರು ಸಾರ್ವಜನಿಕವಾಗಿ ಪರೋಕ್ಷವಾಗಿ ಟೀಕಿಸುವ, ಹಂಗಿಸುವ ಹೇಳಿಕೆಗಳನ್ನು ನೀಡುವ ಬದಲು ಒಟ್ಟಿಗೆ ಕುಳಿತು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡು ವಿವಾದಕ್ಕೆ ತೆರೆಎಳೆಯಬೇಕಿದೆ. ಹಾಗೆ ಮಾಡುವ ಮೂಲಕ ಸಾರ್ವಜನಿಕರ ದೃಷ್ಟಿಯಲ್ಲಿ, ಮಿಗಿಲಾಗಿ ಆಯ್ಕೆಮಾಡಿದ ಮತದಾರರ ದೃಷ್ಟಿಯಲ್ಲಿ ಮತ್ತಷ್ಟು ಕೆಳಮಟ್ಟಕ್ಕೆ ಇಳಿಯುವುದು ತಪ್ಪುತ್ತದೆ. ಜತೆಗೆ ನಮ್ಮ ಬದ್ಧತೆ ಸಾರ್ವಜನಿಕ ಹಿತಾಸಕ್ತಿಯೇ ಹೊರತು ವೈಯಕ್ತಿಕ ಪ್ರತಿಷ್ಠೆಯಲ್ಲ ಎಂಬುದನ್ನು ಜನತೆಗೆ ಮನದಟ್ಟು ಮಾಡಿಕೊಟ್ಟಂತಾಗುತ್ತದೆ.
ಚುನಾವಣೆ ಸಮೀಪಿಸುತ್ತಿರುವುದರಿಂದ ವಿವಾದಗಳನ್ನು ಹುಟ್ಟು ಹಾಕುವುದು, ಆ ವಿವಾದಗಳಿಂದಲೇ ‘ಮತ ಬೆಳೆ’ ತೆಗೆಯಲು ಮುಂದಾಗುವ ಇರಾದೆ ಯಾರಿಗಾದರೂ ಇದ್ದರೆ ಅದು ಅಕ್ಷಮ್ಯ. ಕ್ಷೇತ್ರದಲ್ಲಿ ಆದ ಅಭಿವೃದ್ಧಿ, ಕ್ಷೇತ್ರದಲ್ಲಿನ ಕಾನೂನು ಸುವ್ಯವಸ್ಥೆ, ಸಹಬಾಳ್ವೆ, ಸಹಿಷ್ಣುತೆಯ ಆಧಾರದ ಮೇಲೆ ಮತ ಯಾಚಿಸುವುದು ನ್ಯಾಯಸಮ್ಮತ, ಸರ್ವಒಪ್ಪಿತ.
`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…