ಗುಜರಾತ್ ವಿಧಾನಸಭಾ ಚುನಾವಣೆಗಳು ಅಚ್ಚರಿಯ ಫಲಿತಾಂಶಗಳನ್ನು ಚಿಮ್ಮಿಸುವ ಸಾಧ್ಯತೆ ವಿರಳ. ೨೭ ವರ್ಷಗಳಿಂದ ಸತತ ಗುಜರಾತನ್ನು ಆಳುತ್ತಿರುವ ಬಿಜೆಪಿ ಮತ್ತೊಂದು ಗೆಲುವಿನ ಹಾದಿಯಲ್ಲಿದೆ. ಮೂರನೆಯ ಆಟಗಾರ ಆಮ್ ಆದ್ಮಿ ಪಾರ್ಟಿಯ ರಂಗಪ್ರವೇಶದಿಂದ ಭಾರೀ ತಾರುಮಾರಿನ ಸೂಚನೆಗಳೇನೂ ತೋರುತ್ತಿಲ್ಲ. ಕೇಜ್ರಿವಾಲರ ಈ ಪಕ್ಷ ಸಾಧನೆಗಿಂತ ಹೆಚ್ಚು ಸದ್ದು ಮಾಡುತ್ತಿದೆ. ಎರಡೂ ಪಕ್ಷಗಳ ಮತಗಳನ್ನು ಸೆಳೆದುಕೊಳ್ಳುತ್ತಿದೆ.
ಈ ಚುನಾವಣೆಯ ಹೊಸ್ತಿಲಲ್ಲಿ ಹದಿನೇಳು ಮಂದಿ ಬಿಜೆಪಿ ಸೇರಿದ ನಂತರ ಕಾಂಗ್ರೆಸ್ ಶಾಸಕರ ಸಂಖ್ಯೆ ೭೭ರಿಂದ ೭೦ಕ್ಕೆ ಕುಸಿದಿತ್ತು. ಇದೇ ಎಂಟರ ಮತ ಎಣಿಕೆಯ ನಂತರ ಈ ಸಂಖ್ಯೆ ಐವತ್ತರ ಕೆಳಕ್ಕೆ ಕುಸಿಯುವ ಅಂದಾಜಿದೆ. ಈ ಮಾತನ್ನು ಖುದ್ದು ಕಾಂಗ್ರೆಸ್ ಪಕ್ಷವೇ ಒಪ್ಪಿಕೊಳ್ಳುತ್ತದೆ. ಬಿಜೆಪಿ ಶಾಸಕ ಬಲ ಈಗಿನ ೯೯ರಿಂದ ೧೦೫-೧೧೦ಕ್ಕೆ ಏರಲಿದೆ. ಆಮ್ ಆದ್ಮಿ ಪಾರ್ಟಿ ವೋಟು ಗಳಿಸಲಿದೆಯೇ ವಿನಾ ಸೀಟು ಗಳಿಸಲಾರದು ಎಂಬುದು ರಾಜಕೀಯ ವಿಶ್ಲೇಷಕರ ಅನಿಸಿಕೆ. ಹೆಚ್ಚೆಂದರೆ ಈ ಪಕ್ಷದ ಸೀಟು ಗಳಿಕೆ ಎರಡರಿಂದ ಐದು. ಖಾತೆಯನ್ನು ತೆರೆಯದಿದ್ದರೂ ಆಶ್ಚರ್ಯವಿಲ್ಲ ಎನ್ನುವವರಿದ್ದಾರೆ. ಬಿಜೆಪಿಯ ಹಿಂದುತ್ವವಾದದ ಪೇಲವ ನೆರಳಿನಂತೆ ಕಂಡು ಬಂದಿರುವ ಈ ಪಕ್ಷ ಗುಜರಾತಿಗಳ ನಂಬಿಕೆ ಗಳಿಸಲು ಇನ್ನೂ ದೂರದ ದಾರಿ ಸವೆಸಬೇಕಿದೆ.
ಗುಜರಾತೀ ಜನಮಾನಸ ಎಂಬುದು ಬೇರೆಯೇ ಆದ ಮತ್ತೊಂದು ಲೋಕ. ಗುಜರಾತಿನ ಹೊರಗಿನ ಪ್ರಜ್ಞಾವಂತ ಮನಸ್ಸುಗಳಿಗೆ ಸುಲಭಕ್ಕೆ ಅರ್ಥವಾಗದ ನಿಗೂಢ ಲೋಕ. ನರೇಂದ್ರ ಮೋದಿಯವರಿಗೆ ಅಂಟಬಹುದಾದ ಮಸಿ ಅಥವಾ ಕಳಂಕ ಈ ಲೋಕದಲ್ಲಿ ಇನ್ನೂ ಸೃಷ್ಟಿಯಾಗಿಲ್ಲ. ರಾಜ್ಯ ಬಿಜೆಪಿಯಿಂದ ಕೆಟ್ಟದ್ದೇನಾದರೂ ಆಗಿದ್ದರೆ ಅದರ ದೋಷವನ್ನು ಮಂತ್ರಿಗಳು, ಶಾಸಕರು, ಅಽಕಾರಿಗಳಿಗೆ ಅಂಟಿಸಲಾಗುತ್ತದೆಯೇ ವಿನಾ ಮೋದಿಯವರಿಗೆ ತಾಕಿಸಲೂ ತಯಾರಿಲ್ಲ ಗುಜರಾತಿಗಳು.
ಇಲ್ಲಿ ಮುಸ್ಲಿಂ ದ್ವೇಷ ಎಂಬುದು ಬಿಜೆಪಿ ಪಾಲಿನ ‘ಬ್ರಹ್ಮಾಸ್ತ್ರ’. ದಶಕಗಳೇ ಉರುಳಿದ್ದರೂ ಈ ಅಸ್ತ್ರದ ಶಕ್ತಿ ಅಳಿದಿಲ್ಲ. ಅಭಿವೃದ್ಧಿ ಮತ್ತು ಮುಸ್ಲಿಂ ದ್ವೇಷವನ್ನು ಹದ ಪ್ರಮಾಣದಲ್ಲಿ ಅರೆದು ಗುಜರಾತಿಗಳಿಗೆ ಕುಡಿಸಿರುವ ಮೋದಿ ಜನಪ್ರಿಯತೆ ಕರಗಿಲ್ಲ. ಮೇಲಿಂದ ಮೇಲೆ ಗುಜರಾತಿ ಅಸ್ಮಿತೆಯನ್ನು ಹೆಮ್ಮೆಯ ಭಾವವನ್ನೂ ಬಡಿದೆಬ್ಬಿಸುವುದನ್ನೂ ಮೋದಿ ಬಿಟ್ಟಿಲ್ಲ. ಅವರನ್ನು ಬಿಟ್ಟರೆ ಬೇರೆ ಚಹರೆಯನ್ನಾ ಗಲೀ, ಮತ್ತೊಂದು ಪಕ್ಷದ ಆಡಳಿತವನ್ನಾಗಲಿ ಹಾಲಿ ಗುಜರಾತಿ ಯುವ ಜನಾಂಗ ಕಂಡೇ ಇಲ್ಲ. ಕೈಗಾರಿಕೆ ಮತ್ತು ವ್ಯಾಪಾರ ವ್ಯವಹಾರದಲ್ಲಿ ಮೊದಲಿನಿಂದಲೂ ಮೊದಲ ಪಂಕ್ತಿಯಲ್ಲಿರುವ ಗುಜರಾತಿನಲ್ಲಿ ಪೇಟೆ ಪಟ್ಟಣ ಪ್ರದೇಶ ಹಿಗ್ಗುತ್ತ ಹಿಗ್ಗುತ್ತ ಶೇ.೫೦ರ ಪ್ರಮಾಣಕ್ಕೆ ಹಬ್ಬಿದೆ. ಮೋದಿಯವರನ್ನು ಭೇಷರತ್ ಆರಾಽಸುತ್ತಿರುವ ಸೀಮೆಯಿದು ಈ ಪೇಟೆ ಪಟ್ಟಣದ ಪ್ರಪಂಚದ ಮೇಲೆ ಬಿಜೆಪಿಯ ಬಲು ಬಿಗಿ ಹಿಡಿತ. ಉಳಿದ ಶೇ.೫೦ರ ಗ್ರಾಮೀಣ ಲೋಕದ ಮಾತಿಗೆ ಬಂದರೆ ಈ ಹಿಡಿತ ಸಡಿಲ ಸಡಿಲ.
ಹಾಲಿ ಚುನಾವಣೆಗಳಲ್ಲಿ ಬಿಜೆಪಿಯಲ್ಲಿರುವಷ್ಟು ಬಂಡಾಯ, ಅಸಂತೃಪ್ತಿ ಬೇರೆ ಪಕ್ಷಗಳಲ್ಲಿ ಇಲ್ಲ. ಆಡಳಿತ ವಿರೋಽ ಭಾವವೂ ತಲೆ ಎತ್ತತೊಡಗಿದೆ. ಈ ‘ಫಲವತ್ತು’ ನೆಲವನ್ನು ಹದಮಾಡಿ ಬಿತ್ತಿ ಬೆಳೆಯುವ ‘ಒಕ್ಕಲುತನ’ ಬಲ್ಲ ರೈತ ಇಲ್ಲಿಲ್ಲ. ಹೀಗಾಗಿ ಅಸಂತೃಪ್ತ ಮತದಾರರ ಕಣ್ಣ ಮುಂದೆ ಪರ್ಯಾಯ ರಾಜಕೀಯ ಶಕ್ತಿಯಿಲ್ಲ.
ದಿಕ್ಕೆಟ್ಟು ಚದುರಿ ಚೆಲ್ಲಾಪಿಲ್ಲಿಯಾಗಿರುವ ಕಾಂಗ್ರೆಸ್ ಮತ್ತಷ್ಟು ಜರ್ಜರಿತ. ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯ ಬಿಸಿ, ನಿರುದ್ಯೋಗದ ಬೆಂಕಿ, ನೋಟು ರದ್ದಿನ ಅನಾಹುತ, ಭ್ರಷ್ಟಾಚಾರ, ಅಭಿವೃದ್ಧಿಯ ಕುರಿತ ಹುಸಿ ಭರವಸೆಗಳು, ಸುಳ್ಳುಗಳ ಸಾಲು ಸರಣಿಗಳು ಯಾವುವೂ ಮೋದಿ ವರ್ಚಸ್ಸನ್ನು ಕುಂದಿಸಿಲ್ಲ. ಈ ವಿಲಕ್ಷಣ ವಿದ್ಯಮಾನದ ಹಿಂದೆ ಅವೇ ಅಂಶಗಳು ಕೆಲಸ ಮಾಡಿವೆ. ಮತದಾರರ ಕಣ್ಣ ಮುಂದೆ ಎಳೆಯಲಾಗಿರುವ ಭ್ರಮೆ ಮತ್ತು ಮುಸ್ಲಿಂ ಧ್ವೇಷದ ದಟ್ಟ ಗಟ್ಟಿ ಪರದೆ.
ಮೋದಿಯವರನ್ನು ಎದುರಿಸಬಲ್ಲ ಈ ಅಸ್ತ್ರಗಳು ಹೇರಳವಾಗಿ ಹರಡಿಕೊಂ ಡಿವೆ. ಅವುಗಳನ್ನು ಅವರ ವಿರುದ್ಧ ಹೂಡುವುದಿರಲಿ, ಕೈಗೆತ್ತಿಕೊಳ್ಳುವ ಕಸುವೂ ಪ್ರತಿಪಕ್ಷಗಳ ಕೈಗಳಲ್ಲಿ ಇಲ್ಲ.
ಶೇ.೯೯ರಷ್ಟು ಗುಜರಾತಿ ‘ಮೀಡಿಯಾ’ ಆಳುವ ಪಕ್ಷದ ಜೊತೆ ನಿಂತು ಬಹಳ ಕಾಲವಾಯಿತು. ಆತ್ಮಸಾಕ್ಷಿಯುಳ್ಳ ಪತ್ರಕರ್ತರು ಹೇಳುವ ಪ್ರಕಾರ ಎದುರಾಳಿಯ ಜೊತೆ ‘ಮೈಂಡ್ ಗೇಮ್’ ಆಡುವುದರಲ್ಲೂ ಮೋದಿ ಚಂಡ ಪ್ರಚಂಡರು. ಇವರನ್ನು ಸೋಲಿಸಬೇಕಿದ್ದರೆ, ಗುಜರಾತೀ ಜನಮಾನಸದ ಮೇಲೆ ಈತ ಬೀಸಿರುವ ಭ್ರಾಂತಿಯ ಬಲೆಯನ್ನು ಅರ್ಥ ಮಾಡಿಕೊಳ್ಳಬೇಕು. ಅರ್ಧಕ್ಕೂ ಹೆಚ್ಚು ಗುಜರಾತೀ ನೋಟಕ್ಕೆ ಕಟ್ಟಲಾಗಿರುವ ಪಾಖಂಡದ ಪೊರೆಯನ್ನೂ, ಸಾಮೂಹಿಕ ಉನ್ಮಾದವನ್ನೂ ಹರಿದೊಗೆಯಬೇಕು. ಅಂತಹ ಸತ್ಯ ನಿಷ್ಠತೆಯನ್ನು, ಆಳದ ತಿಳಿವಳಿಕೆಯನ್ನೂ, ಪ್ರತಿತಂತ್ರಗಾರಿಕೆಯನ್ನೂ ಕಾಂಗ್ರೆಸ್ಸು ಬೆಳೆಸಿಕೊಳ್ಳಬೇಕು. ಸಮರ್ಥ ನಾಯಕತ್ವವನ್ನು ಚಿಮ್ಮಿಸಬೇಕು. ಹತಾಶ ಸ್ಥಿತಿಯಿಂದ ಕಾಂಗ್ರೆಸ್ ಪಕ್ಷ ಮೈ ಕೊಡವಿಲ್ಲ. ಸದ್ಯಕ್ಕೆ ಅಂತಹುದು ಯಾವುದೂ ಕಾಂಗ್ರೆಸ್ ಬಳಿ ಸುಳಿದಿಲ್ಲ. ಗುಜರಾತ್ ಎಲ್ಲ ಗುಜರಾತಿಗರ ಪಾಲಿಗೆ ಅನುಕರಣೀಯ ಅಭಿವೃದ್ಧಿ ಮಾದರಿ ಆಗಿಲ್ಲ. ಗುಜರಾತಿನ ಮುಖ್ಯಮಂತ್ರಿಯಾಗಿ ನರೇಂದ್ರ ಮೋದಿಯವರು ತಮ್ಮ ರಾಜ್ಯವು ಅಭಿವೃದ್ಧಿಗೊಂದು ಮಾದರಿ ಎಂದು ಎದೆ ಉಬ್ಬಿಸಿ ಸಾರಿದ್ದರು. ಆದರೆ ಅವರು ಕೈಗೊಂಡ ಸಾರ್ವಜನಿಕ ನೀತಿ ನಿರ್ಧಾರಗಳು ಮತ್ತು ಅನುಸರಿಸಿದ ರಾಜಕಾರಣವು ಅಸಮಾನತೆಗಳನ್ನು ಇನ್ನಷ್ಟು ಮತ್ತಷ್ಟು ಹಿಗ್ಗಿಸಿದವೇ ವಿನಾ ಕುಗ್ಗಿಸಲಿಲ್ಲ. ಪ್ರಭುತ್ವವು ಕಾರ್ಪೊರೇಟ್ ವಲಯದೊಂದಿಗೆ ಶಾಮೀಲಾಗುವುದು ಗುಜರಾತಿನ ಹಳೆಯ ಪರಂಪರೆ. ಮೋದಿಯವರ ಹಯಾಮಿನಲ್ಲಿ ಈ ಪರಂಪರೆ ರಭಸಗತಿ ಗಳಿಸಿತು. ದೈಹಿಕ ಶ್ರಮ ಅಗ್ಗವಾಯಿತು, ಉದ್ಯಮಗಳಿಗೆ ಭೂ ಸ್ವಾಽನ ಸುಲಭ ದರಕ್ಕೆ ಸಲೀಸಾಗಿ ದಕ್ಕಿತು. ತೆರಿಗೆ ರಿಯಾಯಿತಿಗಳ ಮಳೆ ಸುರಿಯಿತು. ಇತರೆ ರಾಜ್ಯಗಳಿಗೆ ಹೋಲಿಸಿದರೆ ಶಿಕ್ಷಣ ಮತ್ತು ಸ್ವಾಸ್ಥ್ಯ ವಲಯಗಳಿಗೆ ಗುಜರಾತ್ ಸರ್ಕಾರ ಮಾಡಿದ ವೆಚ್ಚ ಕಡಿಮೆ. ಮೋದಿಯವರ ಈ ತೆರನಾದ ಆರ್ಥಿಕ-ರಾಜಕಾರಣದ ಲಾಭ ಪಡೆದದ್ದು ಗುಜರಾತಿನ ಮಧ್ಯಮ ಮತ್ತು ನವಮಧ್ಯಮ ವರ್ಗಗಳು. ಮೋದಿಯವರ ಗೆಲುವಿನ ಬೀಗದ ಕೈಗಳು ಈ ವರ್ಗಗಳು. ಶೇ.೩೦ರಷ್ಟಿರುವ ಮುಸಲ್ಮಾನರು, ದಲಿತರು, ಆದಿವಾಸಿಗಳು ಈ ಗುಜರಾತ್ ಮಾದರಿಯ ವಿಕಾಸದಿಂದ ಬಹುತೇಕ ಹೊರಗೆ ಉಳಿದರು. ವಿಕಾಸವಿಲ್ಲದ ಬೆಳವಣಿಗೆ ಮತ್ತು ಸಾಮಾಜಿಕ-ರಾಜಕೀಯ ಧೃವೀಕರಣವೇ ಗುಜರಾತ್ ಮಾದರಿ ಎನ್ನುತ್ತಾರೆ ಪ್ರಸಿದ್ಧ ರಾಜಕೀಯ-ಸಾಮಾಜಿಕ ವಿಶ್ಲೇಷಕ ಕ್ರಿಸ್ಟೋಫೆ ಜಫರ್ಲಟ್.
ಗುಜರಾತ್ ವಿಧಾನಸಭೆಯ ಸದಸ್ಯಬಲ ೧೮೨. ಸರಳ ಬಹುಮತ ಗಳಿಸಿ ಅಽಕಾರ ಹಿಡಿಯಲು ೯೨ ಸೀಟು ಗೆದ್ದರೆ ಸಾಕು. ಕಳೆದ ಸಲ ಕಾಂಗ್ರೆಸ್ ಚೇತರಿ ಕೆಯ ಅನಿರೀಕ್ಷಿತವು ಮತ ಎಣಿಕೆಯ ಹಂತದಲ್ಲಿ ಬಿಜೆಪಿಯನ್ನು ಕೆಲ ಕಾಲ ಆತಂಕಕ್ಕೆ ನೂಕಿತ್ತು. ೯೯ ಸ್ಥಾನಗಳನ್ನು ಗೆದ್ದು ನಿರಾಳವಾಗಿತ್ತು ಮೋಶಾ ಜೋಡಿ.
೭೭ ಸೀಟು ಗಳಿಸಿ ಅಚ್ಚರಿ ಮೂಡಿಸಿತ್ತು ಕಾಂಗ್ರೆಸ್ ಪಕ್ಷ. ಈ ಸಾಧನೆ ತನ್ನ ನೈತಿಕ ವಿಜಯ ಎಂದು ಬೆನ್ನು ತಟ್ಟಿಕೊಂಡಿತ್ತು. ಪ್ರಚಂಡ ಎದುರಾಳಿಯನ್ನು ನೂರರ ಒಳಗಿನ ಎರಡಂಕಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿತ್ತು. ಗೆಲುವನ್ನು ಸುಲಭದ ತುತ್ತಾಗಿ ಬಿಜೆಪಿಗೆ ಒಪ್ಪಿಸದೆ ಬೆವರಿಳಿಸಿದ್ದು ಕಾಂಗ್ರೆಸ್ಸಿನ ಸಾಧನೆಯೇ ಸರಿ ಎಂಬುದನ್ನು ಕೇಸರಿ ಪರಿವಾರದ ಅನೇಕ ತಲೆಯಾಳುಗಳು ಒಪ್ಪಿದ್ದರು.
ಈ ಸಲ ಕಾಂಗ್ರೆಸ್ ಪರಿಸ್ಥಿತಿ ಮತ್ತಷ್ಟು ಕೆಟ್ಟಿದೆ. ದಿಕ್ಕೆಟ್ಟಿರುವ ಈ ಪಕ್ಷವನ್ನು ಚುನಾವಣೆಗೆ ಮುನ್ನವೇ ಹಣಿದು ಹಾಕಿದೆ ಬಿಜೆಪಿ. ಹದಿನೇಳು ಮಂದಿ ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಬಿಜೆಪಿ ಸೇರಿದ್ದರು. ಇವರ ಪೈಕಿ ಹನ್ನೆರಡು ಮಂದಿ ಆದಿವಾಸಿಗಳಿಗೆ ಪುನಃ ಟಿಕೆಟ್ ನೀಡಿ ಕಾಂಗ್ರೆಸ್ ವಿರುದ್ಧ ಹೂಡಿದ್ದಾರೆ ಅಮಿತ್ ಶಾ. ಕಳೆದ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿ ವಿರುದ್ಧ ಹೊತ್ತಿದ್ದ ಪಾಟೀದಾರ ಮತ್ತು ಹಿಂದುಳಿದ ವರ್ಗಗಳ ಆಂದೋಲನಗಳ ಕಿಡಿಗಳು ಈ ಸಲ ನಂದಿ ಹೋಗಿವೆ. ಪಾಟೀದಾರ ವಜ್ರ ವ್ಯಾಪಾರಿಗಳ ಒಂದು ವರ್ಗ ಕಾಂಗ್ರೆಸ್ಸನ್ನು ತೊರೆದು ಆಮ್ ಆದ್ಮಿ ಪಾರ್ಟಿಯ ಜೊತೆ ನಿಂತಿದೆ.
ಬಿಜೆಪಿಯ ದೈತ್ಯ ಚುನಾವಣೆ ಯಂತ್ರ ಗೆಲುವಿನ ನಂತರ ಮಲಗುವುದಿಲ್ಲ. ನಿತ್ಯ ನಿರಂತರ ಹಗಲಿರುಳು ಕಾರ್ಯನಿರತ. ಎದುರಾಳಿಯ ಬಲ ದೌರ್ಬಲ್ಯಗಳನ್ನು ಅಳೆದು ತಂತ್ರ ಪ್ರತಿತಂತ್ರಗಳ ಹೆಣೆದು ಕೆಡವುವ ಕೆಲಸ ಒಂದು ಚುನಾವಣೆಯಿಂದ ಮತ್ತೊಂದು ಚುನಾವಣೆಯ ನಡುವೆ ನಿಲ್ಲದೆ ನಡೆಯುತ್ತಲೇ ಇರುತ್ತದೆ. ಹಿಂದು-ಮುಸಲ್ಮಾನ ಧೃವೀಕರಣವನ್ನು ಮಾತ್ರವೇ ನೆಚ್ಚಿ ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ. ಕಳೆದ ಬಾರಿ ಆದಿವಾಸಿ ಸೀಮೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಧನೆ ಉತ್ತಮವಾಗಿತ್ತು. ಈ ಸಾಧನೆಯು ಮರುಕಳಿಸದಂತೆ ಕಾಲು ಮುರಿಯುವ ತಂತ್ರಗಳನ್ನು ಹೆಣೆದಿದೆ ಬಿಜೆಪಿ. ಕಳೆದ ಚುನಾವಣೆಯಲ್ಲಿ ಆಕ್ರಮಣಕಾರಿಯಾಗಿ ಪ್ರಚಾರ ಮಾಡಿದ್ದರು ರಾಹುಲ್ ಗಾಂಽ. ಮೆದು ಹಿಂದುತ್ವ ತಂತ್ರವನ್ನು ಅನುಸರಿಸಿದ್ದರು ಕೂಡ. ದಲಿತ ನಾಯಕ ಜಿಗ್ನೇಶ್ ಮೇವಾನಿ, ಪಾಟೀದಾರರ ನಾಯಕ ಹಾರ್ದಿಕ್ ಪಟೇಲ್, ಹಿಂದುಳಿದವರ ನಾಯಕ ಅಲ್ಪೇಶ್ ಠಾಕೂರ್ ಅವರನ್ನು ಜೊತೆಗಿಟ್ಟುಕೊಂಡು ಪರ್ಯಾಯ ಶಕ್ತಿಯೊಂದನ್ನು ಕಟ್ಟಲು ಮುಂದಾಗಿದ್ದರು. ಈ ಸಲ ಭಾರತ್ ಜೋಡೋ ಯಾತ್ರಾ ನಿರತರು.
ಗುಜರಾತಿನ ಚುನಾವಣೆಗಳನ್ನು ಬಾರಿ ಬಾರಿ ಗೆಲ್ಲುವುದು ಬಿಜೆಪಿಯ ಮುಂದಿರುವ ಅನಿವಾರ್ಯ. ಸುದೀರ್ಘ ಆಡಳಿತದ ನಡುವೆ ಕಪಾಟಿನಲ್ಲಿ ಅಡಗಿರುವ ಅಸ್ಥಿಪಂಜರಗಳು ಹೊರ ಉರುಳುವ ಅಪಾಯ, ತವರಿನಲ್ಲೇ ಸೋಲಿನ ಮುಖಭಂಗವಾದರೆ ಆ ಅಪಮಾನ ಬೇರೆ ಸೀಮೆಗಳಿಗೆ ಹಬ್ಬೀತು ಎಂಬ ಆತಂಕಗಳು ಸತತ ಕಾಡುತ್ತಿರುತ್ತವೆ.
ಹೀಗಾಗಿಯೇ ಗೆಲುವು ಗೋಡೆಯ ಮೇಲಿನ ಬರೆಹ ಎಂದು ಬೀಗದೆ ಗುಜರಾತಿನಲ್ಲಿ ಇಲ್ಲಿಯ ತನಕ ೩೫ ಸಾರ್ವಜನಿಕ ಸಭೆಗಳು, ಆರು ರೋಡ್ ಶೋಗಳನ್ನು ನಡೆಸಿದ್ದಾರೆ ನರೇಂದ್ರ ಮೋದಿ. ಸರಣಿಗೆ ಸೇರಲಿರುವ ಮತ್ತೊಂದು ಸೋಲು ಕಾಂಗ್ರೆಸ್ ಪಕ್ಷವನ್ನು ಹೊಸ ಆಳಕ್ಕೆ ತುಳಿಯಲಿದೆ.
ಮಂಡ್ಯ : ಕೊಬ್ಬರಿ ಶೆಡ್ ಗೆ ಬೆಂಕಿ ಬಿದ್ದು ಲಕ್ಷಾಂತರ ರೂ. ಮೌಲ್ಯದ ಕೊಬ್ಬರಿ ನಾಶವಾಗಿರುವ ಘಟನೆ ತಾಲೂಕಿನ ಗುನ್ನಾಯಕನಹಳ್ಳಿಯಲ್ಲಿ…
ಹನೂರು : ತಾಲೂಕಿನ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯ ಅಲಗುಮೂಲೆ ಅರಣ್ಯ ಪ್ರದೇಶದಲ್ಲಿ ಬುಧವಾರ ರಾತ್ರಿ ಏಕಾಏಕಿ ಎರಡು ಮೂರು ಕಡೆ…
ಶ್ರೀರಂಗಪಟ್ಟಣ : ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳ ಸೇವನೆಯಿಂದ ಕ್ಯಾನ್ಸರ್, ಹೃದಯ, ಶ್ವಾಸಕೋಶ ಸಂಬಂಧಿತ ಮಾರಣಾಂತಿಕ ಕಾಯಿಲೆಗಳು ಬರುತ್ತವೆಂದು ಕ್ಷೇತ್ರ…
ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್‌ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ…
ಗುಂಡ್ಲುಪೇಟೆ : ಜಾನುವಾರು ಹಾಗೂ ಜಾನುವಾರು ಮೇಯಿಸುತ್ತಿದ್ದ ರೈತರೊಬ್ಬರ ಮೇಲೆ ಹುಲಿ ದಾಳಿ ನಡೆಸಿದೆ. ಪರಿಣಾಮ ರೈತ ಗಾಯಗೊಂಡಿದ್ದಾನೆ. ಘಟನೆ…
ಮೈಸೂರು : ರಾಜ್ಯದ ಪ್ರತಿಯೊಂದೂ ಜಿಲ್ಲೆಗಳ ವಿಶೇಷ ಉತ್ಪನ್ನಗಳ ಪರಿಚಯ, ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ನಿರ್ಮಿಸುತ್ತಿರುವ…