ಬಹುತ್ವ-ಅಸ್ಮಿತೆ-ಅಸ್ತಿತ್ವ -ಭಾರತದ ಘನತೆ ಉಳಿಸಲು ದಲಿತ ಸಂಘಟನೆಗಳ ಐಕ್ಯ ಹೋರಾಟ
ಗಿರೀಶ್ ಹುಣಸೂರು
ರಾಜಧಾನಿ ಬೆಂಗಳೂರು ಮಂಗಳವಾರ ಅಕ್ಷರಶಃ ನೀಲಿಮಯವಾಗುವ ಸಾಧ್ಯತೆ ಇದೆ. ನಾಡಿನ ಮೂಲೆ ಮೂಲೆಯಿಂದ ಬರುವ ಲಕ್ಷ-ಲಕ್ಷ ದಲಿತ, ಶೋಷಿತ ವರ್ಗ, ತಳ ಸಮುದಾಯದ ಜನರು ರಾಜಧಾನಿಯಲ್ಲಿ ದಲಿತರ ಸಾಂಸ್ಕೃತಿಕ ಪ್ರತಿರೋಧ ತೋರಲಿದ್ದಾರೆ.
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ರವರ ೬೬ನೇ ಪರಿನಿಬ್ಬಾಣ ದಿನದ ಅಂಗವಾಗಿ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಸಾಮಾಜಿಕ ನ್ಯಾಯ ಮತ್ತು ಮೀಸಲಾತಿಯ ಆಶಯಗಳನ್ನು ನಾಶ ಮಾಡುತ್ತಿರುವ ಆರ್‌ಎಸ್‌ಎಸ್-ಬಿಜೆಪಿ ದುರಾಡಳಿತದ ವಿರುದ್ಧ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶವನ್ನು ಡಿ.೬ರಂದು ಬೆಳಿಗ್ಗೆ ೧೧ಕ್ಕೆ ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದು, ನಾನಾ ಬಣಗಳಾಗಿ ಹರಿದು ಹಂಚಿಹೋಗಿರುವ ದಲಿತ ಸಂಘಟನೆಗಳೆಲ್ಲ ಈ ದುರಿತ ಕಾಲದಲ್ಲಿ ನಾವೆಲ್ಲ ಐಕ್ಯರಾಗುತ್ತಿದ್ದೇವೆ. ಇನ್ನು ಮುಂದೆ ಒಟ್ಟಾಗಿ ಹೋರಾಡುತ್ತೇವೆ ಎನ್ನುವ ಸಂದೇಶವನ್ನು ನಾಡಿಗೆ ನೀಡುವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿಯ ಸಂಚಾಲಕರಾದ ಇಂದೂಧರ ಹೊನ್ನಾಪುರ ಅವರು ದಲಿತರ ಸಾಂಸ್ಕೃತಿಕ ಪ್ರತಿರೋಧದ ಬಗ್ಗೆ ‘ಆಂದೋಲನ’ ದಿನಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
ದಲಿತ ಸಂಘಟನೆಗಳ ಐಕ್ಯತಾ ಸಮಾವೇಶದ ಸಿದ್ಧತೆ ಹೇಗಿದೆ?
ಹತ್ತು ದಲಿತ ಸಂಘಟನೆಗಳು ಒಟ್ಟಾಗಿ ಐಕ್ಯ ಹೋರಾಟ ಹಮ್ಮಿಕೊಂಡಿದ್ದು, ನ್ಯಾಷನಲ್ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ಎಲ್ಲ ಸಿದ್ಧತೆಗಳೂ ಪೂರ್ಣಗೊಂಡಿವೆ. ರಾಜ್ಯದ ಮೂಲೆ ಮೂಲೆಗಳಿಂದ ಒಂದು ಲಕ್ಷಕ್ಕೂ ಹೆಚ್ಚು ಜನರು ಜಿಲ್ಲೆ, ತಾಲ್ಲೂಕು, ಪಂಚಾಯಿತಿ ಮಟ್ಟದಿಂದಲೂ ಜನ ಸ್ವಯಂಪ್ರೇರಿತರಾಗಿ ಬೆಂಗಳೂರಿಗೆ ಬರಲಿದ್ದಾರೆ. ಉತ್ತರ ಕರ್ನಾಟಕ ಭಾಗದವರು ಈ ಸಮಾವೇಶಕ್ಕಾಗಿ ರೈಲಿನಲ್ಲಿ ವಿಶೇಷ ಬೋಗಿಗಳನ್ನೇ ಬುಕ್ ಮಾಡಿಕೊಂಡು ಬರುತ್ತಿದ್ದಾರೆ. ಹೀಗೆ ಬಂದವರು ರೈಲು ನಿಲ್ದಾಣದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಕಾಲ್ನಡಿಗೆಯಲ್ಲೇ ಬರಲಿದ್ದು, ಇಡೀ ವಾತಾವರಣವನ್ನು ನೀಲಿಮಯವಾಗಿಸಲಿದೆ.
ದಲಿತರ ಸಾಂಸ್ಕೃತಿಕ ಪ್ರತಿರೋಧ ಎಂದರೇನು?
ಬೌದ್ಧ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಸಮಾವೇಶವನ್ನು ರೂಪಿಸಲಾಗಿದೆ. ಬೌದ್ಧ ಬಿಕ್ಕುಗಳ ಬುದ್ಧವಂದನೆಯೊಂದಿಗೆ ಸಮಾವೇಶಕ್ಕೆ ಚಾಲನೆ ಸಿಗಲಿದ್ದು, ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಅಂಬೇಡ್ಕರ್ ಅವರು ಸಮಾವೇಶ ಉದ್ಘಾಟಿಸಲಿದ್ದು, ಸಂವಿಧಾನ ತಜ್ಞರಾದ ನ್ಯಾ.ನಾಗಮೋಹನ ದಾಸ್ ಹಾಗೂ ಪ್ರೊ.ರವಿವರ್ಮ ಕುಮಾರ್ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಭಾಷಣಕ್ಕಿಂತ ಹೆಚ್ಚಾಗಿ ತಳ ಸಮುದಾಯಗಳ ಸಾಂಸ್ಕೃತಿಕ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಲಾಗಿದೆ.
ಯಾತಕ್ಕಾಗಿ ಈ ಐಕ್ಯ ಹೋರಾಟ?
ನಮ್ಮನ್ನು ಆಳುತ್ತಿರುವ ಸರ್ಕಾರ ದಲಿತ-ತಳಸಮುದಾಯಗಳವರ ಎಲ್ಲ ಸವಲತ್ತುಗಳನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನದ ಆಶಯಗಳನ್ನೇ ತಿರುಚುವ ಕೆಲಸ ಮಾಡುತ್ತಿದೆ. ದೇಶದ ಉಳಿವಿಗಾಗಿ ದಲಿತ, ತಳ ಸಮುದಾಯಗಳು ಐಕ್ಯವಾಗಲೇಬೇಕಿದೆ. ಏಕ ಸಂಸ್ಕೃತಿ ಹೇರಿಕೆಯನ್ನು ವಿರೋಧಿಸುವ ಮೂಲಕ ಬಹುತ್ವ, ಸಮಾನತೆ, ಬಹು ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ನಮ್ಮ ಅಸ್ಮಿತೆ ಮತ್ತು ಅಸ್ತಿತ್ವದ ಜತೆಗೆ ಭಾರತದ ಘನತೆ ಉಳಿಸಿಕೊಳ್ಳಲು ಮುಂದಾಗುವ ಹೋರಾಟವಿದು.
ಸಮಾವೇಶಕ್ಕೆ ಯಾವ್ಯಾವ ಸಂಘಟನೆಗಳ ಸಹಭಾಗಿತ್ವ ಇದೆ?
ಪ್ರಾರಂಭಿಕವಾಗಿ ರಾಜ್ಯದ ಹತ್ತು ದಲಿತ ಸಂಘಟನೆಗಳು ಒಟ್ಟಾಗಿ ಈ ಸಮಾವೇಶವನ್ನು ಆಯೋಜಿಸಿದ್ದು, ರೈತ, ಕಾರ್ಮಿಕ, ಅಲೆಮಾರಿ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ಸಂಘಟನೆಗಳ ಮುಖಂಡರುಗಳೆಲ್ಲ ಈ ಸಮಾವೇಶಕ್ಕೆ ಕೈ ಜೋಡಿಸಿದ್ದಾರೆ. ಅಂಬೇಡ್ಕರ್ ವಿಚಾರಧಾರೆಯಡಿ ಕೆಲಸ ಮಾಡುತ್ತಿರುವ ಸಮಾನ ಮನಸ್ಕ ದಸಂಸ ಬಣಗಳನ್ನೆಲ್ಲ ಒಟ್ಟುಗೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ೨ ವರ್ಷಗಳ ಈ ಪ್ರಯತ್ನದಿಂದ ಪ್ರಾರಂಭಿಕವಾಗಿ
ಹತ್ತು ಸಂಘಟನೆಗಳು ಒಟ್ಟಾಗಲು ಸಾಧ್ಯವಾಗಿದೆ.
ರಾಜ್ಯದ ಉದ್ದಗಲಕ್ಕೂ ನೂರಾರು ದಸಂಸ ಬಣಗಳಿವೆ ಅವುಗಳೆಲ್ಲ ಒಗ್ಗೂಡುವುದು ಯಾವಾಗ?
ಸೈದ್ಧಾಂತಿಕವಾಗಿ ಅಂಬೇಡ್ಕರ್ ವಿಚಾರಧಾರೆಗಳನ್ನೇ ಪ್ರತಿಪಾದಿಸುವ ಹಲವು ದಸಂಸ ಬಣಗಳು ತಪ್ಪು ಕಲ್ಪನೆ, ಮನಸ್ತಾಪಗಳಿಂದಾಗಿ ದೂರವಿದ್ದಾರೆ. ಅಂಥವರನ್ನೆಲ್ಲ ಒಳಗೊಳ್ಳುವ ಪ್ರಕ್ರಿಯೆ ನಿರಂತರವಾಗಿ ನಡೆಯಲಿದೆ. ಆದರೆ, ರಾಜಕೀಯ ಕಾರಣಗಳಿಗಾಗಿ ಅಂಬೇಡ್ಕರ್ ಹೆಸರೇಳುತ್ತಾ ಸಂಘಪರಿವಾರದ ಜೊತೆ ಕೈಜೋಡಿಸುತ್ತಿರುವವರು ಕೋಮುವಾದಿ ವಿಚಾರಧಾರೆಗಳನ್ನು ಬಿಟ್ಟು ಬಂದರೆ ಜೊತೆ ಸೇರಿಸಿಕೊಳ್ಳಲು ಸಿದ್ಧರಿದ್ದೇವೆ.
ಹಾಗಿದ್ದರೆ ಅಭಿವೃದ್ಧಿ ಕಾರ್ಯಕ್ರಮಗಳೇ ನಡೆಯುತ್ತಿಲ್ಲವೇ?
ಸರ್ಕಾರ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಗಾಳಿ ತೂರುತ್ತಿರುವುದರಿಂದ ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ದಲಿತ ಸಮುದಾಯದ ಮಕ್ಕಳ ವಿದ್ಯಾರ್ಥಿವೇತನವನ್ನೇ ನಿಲ್ಲಿಸುವ ಮೂಲಕ ಅವರನ್ನು ಶಿಕ್ಷಣ ವಂಚಿತರನ್ನಾಗಿಸುವ ಹುನ್ನಾರ ನಡೀತಿದೆ. ರಾಮರಾಜ್ಯದ ಬಗ್ಗೆ ಮಾತನಾಡುವವರು ಕಲ್ಯಾಣ ಕಾರ್ಯಕ್ರಮಗಳನ್ನೇ ನಿಲ್ಲಿಸಿದರೆ, ರಾಮರಾಜ್ಯ ಹೇಗೆ ಸಾಧ್ಯವಾಗುತ್ತದೆ? ಹಂಚಿ ತಿನ್ನುವುದು ರಾಮರಾಜ್ಯ. ಕಿತ್ತುಕೊಂಡು ತಿನ್ನುವುದು ರಾಮರಾಜ್ಯವಲ್ಲ. ರಾಮರಾಜ್ಯವೆಂದರೆ ಕಲ್ಯಾಣ ರಾಜ್ಯ. ಗಾಂಧೀಜಿ ಪರಿಕಲ್ಪನೆಯ ರಾಮರಾಜ್ಯ ನಮಗೆ ಬೇಕು.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…